-ಶೀಲಾ ಶಿ ಗೌಡರ
ಬಾದಾಮಿಯ ವೈಶಿಷ್ಟ್ಯದ ಬಗ್ಗೆ ಇಂದು ಮಾತು. ಅದೇನು? ಚಾಲುಕ್ಯರ ಕುರಿತಾಗಿಯೋ? ಎಲ್ಲಿರಿಗೂ ಗೊತ್ತಿರುವುದೇ ಎಂದಿರಾ? ಅಲ್ಲಲ್ಲಾ! ವಾತಾಪಿಯ ವಾನರ ಸೈನ್ಯದ ಕುರಿತು! ಬಾದಾಮಿಯ ಬೃಹದಾಕಾರದ ಕೆಂಪು ಬಂಡೆಗಲ್ಲಿನ ಸೌಂದರ್ಯದ ವೈಭವಕ್ಕೆ ಸಚೇತನ ಆಭರಣಗಳು ಈ ಕೆಂಪುಮೂತಿಯ ಮಂಗಗಳು. ಈಗೀಗ ಇವುಗಳೊಟ್ಟಿಗೆ ಕಪ್ಪು ಮಂಗಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬಂಗಾರದೊಟ್ಟಿಗೆ ಪ್ಲಾಟಿನಮ್ ಇದ್ದಂತೆ! ಪ್ರವಾಸಕ್ಕೆ ಬಂದವರು ಗಾಡಿಗಳಿಂದ ಇಳಿಯುವ ಮೊದಲು ಡ್ರೈವರ್ಗಳು ಎಚ್ಚರಿಕೆ ಕೊಟ್ಟೇ ಪುರಪ್ರವೇಶ ಮಾಡುತ್ತಾರೆ, ”ಇಲ್ಲಿ ಮಂಗಗಳು ಜಾಸ್ತಿ. ಕಿಟಕಿ ಕ್ಲೋಸ್ ಮಾಡಿಬಿಡಿ. ಅಲ್ಲಿ ಇಳಿಯುವಾಗ ಯಾವುದೇ ಬ್ಯಾಗು ಕೈಯಲ್ಲಿ ಹಿಡಿಬೇಡಿ. ಹೆಣ್ಣ ಮಕ್ಳು ನಿಮ್ಮ ವೆನಿಟಿ ಬ್ಯಾಗು , ಪರ್ಸು ಹುಶಾರು” ಎಂದು ಹೇಳುತ್ತಲೇ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುತ್ತಾರೆ. ಮಕ್ಕಳಿಗೋ ಕುರಕುರೆ ಕೈತಪ್ಪಿ ತುಂಬಾ ಕಿರಿಕಿರಿ ಮಾಡುತ್ತಾರೆ. ನೀವು ನಿಮ್ಮ ಗಾಡಿ ನಿಲ್ಲಿಸಿ ಬಾದಾಮಿಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಂತೆ ನಿಮ್ಮ ಗಾಡಿಯ ಕ್ಯಾಬಿನ ಮೇಲೆ ಆಗಲೇ ಪ್ರತ್ಯಕ್ಷವಾಗಿ ಅತ್ತಿಂದಿತ್ತ ಓಡಾಡುತ್ತ ತನ್ನ ಅರಸುವ ಕಾರ್ಯಪ್ರಾರಂಭಿಸಿರುತ್ತವೆ! ಮಕ್ಕಳು , “ಮಂಗ…ಮಂಗ..!” ಎಂದು ಕೈಮಾಡುತ್ತಿರುವಾಗ ತಿಂಡಿ ಹುಡುಕುವ ಈ ತಿಂಡಿಪೋತಗಳು ಸಿಕ್ಕ ತಿಂಡಿಯ ಪೊಟ್ಟಣವನ್ನು ಕಸಿದು ಮಿಂಚಿ ಮಾಯವಾಗುತ್ತವೆ. ಇಲ್ಲದಿದ್ದರೆ ಪ್ರವಾಸಿಗರೊಂದಿಗೆ ಹಲ್ಲು ಮಸಿಯುತ್ತ ಅವರನ್ನು ಹೆದರಿಸುತ್ತ ಅವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತವೆ. ಅಷ್ಟರಲ್ಲೇ ಜೊತೆಗಾರರೂ ಹಾಜರೂ…! ಅಲ್ಲಿಂದ ಗುಹಾಂತರ ದೇವಾಲಯ, ಮ್ಯೂಸಿಯಂ, ಕಪ್ಪೆಆರ್ಭಟನ ಶಾಸನ, ರಂಗನಾಥ ಮಂದಿರ , ಭೂತನಾಥ ಟೆಂಪಲ್ ಎಂದೆಲ್ಲಾ ಬಂದ ಪ್ರವಾಸಿಗರ ಪ್ರಫುಲ್ಲ ಮನಸಿನಲ್ಲಿ ಈ ಕೋತಿಗಳು ಅವ್ಯಕ್ತ ಭಯವನ್ನಂತೂ ಹುಟ್ಟುಹಾಕಿಬಿಡುತ್ತವೆ. ಪ್ರತಿ ಹೆಜ್ಜೆ ಇಡುವ ಮುನ್ನ ಮೈಮರೆಯುವಂತಿಲ್ಲ! ಮೊದಲು ಮಂಗಗಳಿವೆಯೇ ಎಂದು ಪರಾಮರ್ಶಿಸಿಯೇ ವಾತಾಪಿಯ ಭವ್ಯತೆಯನ್ನು ಅನುಭವಿಸಬೇಕು. ಕೆಲವು ಮಕ್ಕಳಿಗೆ ಬಾಲಮಾತ್ರ ಇರುವುದಿಲ್ಲ! ಅವರಿಗಂತೂ ತುಂಟಾಟಕ್ಕೆ ಹೊಸಜೊತೆಗಾರರು ಸಿಕ್ಕಂತೆ. ಇವರ ತುಂಟಾಟದ ಮಧ್ಯೆ , ಕೋತಿಗಳೆಲ್ಲಿ ಮತ್ತೆ ದೊಡ್ಡ ಮಟ್ಟದ ತಂಟೆ ತೆಗೆಯುತ್ತವೋ ಎಂದು ದೊಡ್ಡವರಿಗೆ ಗೊಂದಲ.
ಇದು ಪ್ರವಾಸಿಗರ ಪಾಡಾದರೆ ಬಾದಾಮಿ ಪುರವಾಸಿಗಳ ಪಾಡೇನು? ಒಟ್ಟಿನಲ್ಲಿ ಬಾದಾಮಿ ಚಾಲುಕ್ಯರ ನಾಡು , ಮಂಗಗಳ ಬೀಡು ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ! ಬೆಳಗಾದರೆ ಸಾಕು, ಹಿಂಡು ಹಿಂಡು ಮಂಗಗಳು ಸಂಸಾರ ಸಮೇತ ವಾಕಿಂಗ ಹೊರಟು ಬಿಡುತ್ತವೆ. ಬಿಲ್ಡಿಂಗಗಳ ಟೆರೆಸ್ಗಳ ಮೇಲೆ ರಾಜಾರೋಷವಾಗಿ ಓಡಾಡುತ್ತ , ಒಂದು ಮಾಳಿಗೆಯಿಂದ ಮತ್ತೊಂದಕ್ಕೆ ಜಂಪ್ ಹೊಡೆಯುತ್ತ ಹೊಟ್ಟೆಯಲ್ಲಿ ಮರಿಗಳನ್ನು ಅವುಚಿಕೊಳ್ಳುತ್ತ , ಒಂದು ಅಡ್ಡ ರಸ್ತೆಯಿಂದ ಮತ್ತೊಂದು ಅಡ್ಡ ರಸ್ತೆಗೆ ಜಿಗಿಯುತ್ತ ಊರೆಲ್ಲ ಸುತ್ತುತ್ತವೆ. ಬೆಳಗಿನ ಕೆಲಸಗಳಲ್ಲಿ ತಲ್ಲೀನವಾದ ಗೃಹಿಣಿಯರ ಕಣ್ಣು ತಪ್ಪಿಸಿ, ಯಾವುದೋ ಮಾಯದಲ್ಲಿ ಅಡುಗೆ ಮನೆ ನುಗ್ಗಿ ಕ್ಷಣಾರ್ಧದಲ್ಲಿ ಹಣ್ಣು ಹಂಪಲಗಳನ್ನ, ರೊಟ್ಟಿಗಳನ್ನ, ಕೈಗೆ ಸಿಕ್ಕ ತಿನಿಸುಗಳನ್ನು ಹೊತ್ತು ಪರಾರಿಯಾಗುತ್ತವೆ. ಅವುಗಳು ಬೆಳಕಿನವೇಗದಲ್ಲಿ ನೇರವಾಗಿ ಅಡುಗೆಮನೆಯನ್ನೇ ಹೇಗೆ ಅರಸುತ್ತವೆ ಎಂಬುದು ನನಗೊಂದು ಯಕ್ಷಪ್ರಶ್ನೆ.“ಯೇ…! ಯೇ…! ಮಂಗ್ಯಾ ಒಳಗಹೊಕ್ತು. ಹೊಡಿರೀ ಅದನ್ನ!“ ಎಂದು ಅತ್ತೆ ಬಾಯಿಮಾಡುವುದರೊಳಗೆ ಸೊಸೆಯ, ಮಕ್ಕಳ ಚೀರಾಟ- ಹಾರಾಟ! ಹೊಸಬರೇನಾದರೂ ಓಣಿಗೆ ಬಂದಿದ್ದರೆ ಏನೋ ಆಯಿತು ಎಂದು ಹೌಹಾರುವುದೇ ಸರಿ. ಯಾವುದಕ್ಕೂ ಹೆದರದ ಮಂಗಗಳು ಎಷ್ಟೋ ಬಾರಿ ನನ್ನ ಮತ್ತು ಮಗಳ ಬಾಯಿಗೆ ಹೆದರಿ ಎದ್ದೆನೋ-ಬಿದ್ದೆನೋ ಎಂದು ದಿಕ್ಕಾಪಾಲಾಗಿ ಓಡಿದ್ದಿದೆ. ಏನೋ ಆಯಿತೆಂದು ತುಂಬಾ ಟೆನ್ಶನ್ ನಲ್ಲಿ ಉಟ್ಟ ಲುಂಗಿಯನ್ನು ಎತ್ತಿಕಟ್ಟುತ್ತ ವೀರಾವೇಶದಲ್ಲಿ ಬಂದ ತಂದೆಯನ್ನು ನೋಡಿ ಓಡಿಹೋದ ಮಂಗನನ್ನು ತೋರಿಸುತ್ತ ನಗುವವನು ಮಗ. “ ಮಮ್ಮಿ ಸುಮ್ನ ಸಣ್ಣ ಹುಡುಗರಂಗ ಇಷ್ಟ ಬಾಯಿ ಮಾಡಿ ಎಲ್ಲಾರ್ನೂ ಗಾಬರಿ ಮಾಡಿಬಿಡತಾಳ ನೋಡ ಪಪ್ಪಾ” ಎನ್ನುವ ಮಗನ ಜೊತೆ, “ ಯವ್ವಾ! ಮಮ್ಮಿ ಎಷ್ಟು ಜೋರ ಚೀರಿದಿ ಬೆ! ನಾನೂ ಏನ ಬಂತ ಅಂತ ಹೆದರಿ ನಿನಜೊತಿ ಚೀರಿ ಓಡಿದೆ . ನೋಡ ನನ್ನ ಕಾಲು ಇನ್ನೂ ನಡಗಾಕತ್ತಾವು”. ಎಂದು ಸೋ ಎನ್ನುವವಳು ಮಗಳು. ತಿನ್ನುವರಂತೆ ನೋಡುತ್ತಿರುವ ಪತಿಯನ್ನು ನೋಡಿ ನಗುತ್ತ, “ ಏನ್ಮಾಡ್ಲಿರೀ ಹೆದರಿಕಿ ಬಂತು” ಎಂದು ನಗುವಿಗೆ ಮತ್ತಷ್ಟು ಎಕ್ಸಲೇಟರ್ ಕೊಡುವವಳು ನಾನು. ಮದುವೆಯಾಗಿ ಬಂದ ಹೊಸತರಲ್ಲಿ ನನ್ನ ಚೀರುವ ಧ್ವನಿಗೆ ಹೆದರಿ ಅಕ್ಕ ಪಕ್ಕದವರೂ ಓಡಿ ಬಂದು ಬೆಪ್ಪಾದ ನಂತರ ಅವರಿಗೆಲ್ಲ ಈಗ ನನ್ನ ಚೀರುವಿಕೆ ಮಂಗಗಳು ಬರುವ ಅಲಾಮ್ ಗಂಟೆ ಶಬ್ದ ದಂತಾಗಿದೆಯೇನೋ! ಅವರು ಬಡಿಗೆ ಹಿಡಿದು “ ಇವು ಬೆಳಗಾಗೋದ ಕಾಯ್ತಿರತಾವು ನೋಡು. ಬಂದ ಬಿಡತಾವು ಹಿಂಡಕಟಗೊಂಡು. ಗಿಡದಾಗ ಒಂದ ಹೂವು ಉಳಿಯಂಗಿಲ್ಲ! ಹಣ್ಣ ಉಳಿಯಂಗಿಲ್ಲ.ತೆಂಗಿನಗಿಡದಾಗ ಎಳಗಾಯಿ ಸೈತ ಹೆಂಗ ಒಡಕೊಂಡ ಕುಡಿತಾವ ನೋಡ! ” ಎಂದು ಜೋರಾಗಿ ಶಬ್ದಮಾಡುತ್ತ , ತಮ್ಮ ಮಂಡಿನೋವನ್ನೂ ಲೆಕ್ಕಿಸದೇ ಓಡಿಬರುತ್ತಾರೆ, ಗಿಡಗಳ ರಕ್ಷಣೆಗೆ. ಆದರೂ ಮಂಗಗಳನ್ನು ಓಡಿಸುವ ನನ್ನ ಆಯುಧದ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತದೆ. ಈಗೀಗ ನಮ್ಮ ಮನೆಯ ಹಿಂದಿನ ಮನೆಗೆ ಬಂದಿರುವ ಹೊಸಸೊಸೆ ನನ್ನ ಚೀರುವ ಪ್ರಕ್ರಿಯೆಗೆ ಸಾತ್ ನೀಡುತ್ತಿದ್ದಾಳೆ! “ ಮಂಗ್ಯಾಕ್ಕ ಇಷ್ಟು ಹೆದರಿದರ ನಾಳೆ ಹುಲಿ ಬಂದರ ಹೆಂಗವಾ?” ಎನ್ನುವ ನನ್ನ ಅತ್ತೆಯ ಮಾತಿಗೆ, ಹರಿವ ಹಾವಿಗಂಜೆ,ಉರಿಯ ನಾಲಿಗೆಗಂಜೆ, ಸುರಿಗೆಯ ಮೊನೆಗಂಜೆ! ಆದರೊಂದಕ್ಕಂಜುವೆ- ಒಂದಕ್ಕಳಕುವೆ…. ಪರಧನ, ಪರಸ್ತ್ರೀ,ಪರದೈವದ ಜೊತೆಗೆ ….. ಕೂಡಲಸಂಗಮದೇವಾ! ಹೇಗೆ ಸಮರ್ಥಿಸಿಕೊಳ್ಳಲಿ ನನ್ನ ನಾ ಅತ್ತೆಯ ಎದುರಿಗೆ? “ಅಯ್ಯೋ ! ನಾ ಹುಲಿಗೆ-ಹಾವಿಗೆ ಅಂಜಗಿಲ್ಲರೀ! ಇವು ಮಂಗ್ಯಾ, ಇಲಿ… ಇಂತಾವು ನೋಡಿದ್ರ ಅಂಜತೇನಷ್ಟ!ಅದೂ ಅಂಜಂಗಿಲ್ಲ! ಅವು ಸುಮ್ ಸುಮ್ನ ಕಾಲಕಾಲಾಗ ಬರ್ತಾವು. ಅದಕ್ಕ ಇರಿಟೇಟ್ ಆಗತೇತಿ ಅಷ್ಟ” ಎಂದು ಮಾತಿನ ವರಸೆ ಬದಲಿಸುತ್ತೇನೆ. ಮೊದಮೊದಲು ಬೆಳ್ಳಂಬೆಳಿಗ್ಗೆ ಪಟಾಕಿಗಳ ಶಬ್ದ ಕೇಳಿದಾಗ ನಾ ಕಸಿವಿಸಿ ಗೊಳ್ಳುತ್ತಿದ್ದೆ. “ಇವತ್ತೇನು ಹಬ್ಬಿಲ್ಲ… ಹುಣವಿ ಇಲ್ಲಾ! ಪಟಾಕಿ ಯಾಕs?” ಎಂದು ಹೊರಬಂದು ನೋಡಿದರೆ ತಿಳಿಯತೊಡಗಿತು, ಇದು ಮಂಗಗಳನ್ನು ಓಡಿಸಲು ಮಾಡುತ್ತಿರುವ ಸಾಹಸವೆಂದು. ಮಂಗಗಳಿಂದ ರಕ್ಷಣೆಪಡೆಯಲು…ಅಲ್ಲಲ್ಲಾ, ನನ್ನ ಚೀರುವಿಕೆಗೆ ಕಡಿವಾಣಹಾಕಲು ಕ್ಯಾಟ್ ಬಿಲ್ ಮನೆಗೆ ಬಂದಾಗ ಅಚ್ಚರಿಗೊಂಡಿದ್ದೆ. ಉಪಯೋಗಿಸಿ ಸಂತಸ ಪಟ್ಟಿದ್ದೆ.!
ಬಾದಾಮಿಗೆ ಸೂರ್ಯನ ಕೃಪೆ ಸಾಕಷ್ಟಿದ್ದರೂ ನಮಗೆ ಸಂಡಿಗೆ ಭಾಗ್ಯವಿಲ್ಲ ನೋಡಿ. ಮಾಳಿಗೆಯ ಮೇಲೆ ಏನನ್ನಾದರೂ ಒಣಹಾಕಿದರೆ ಹತ್ತು ನಿಮಿಷದಲ್ಲಿ ಮಾಳಿಗೆ ತುಂಬ ಸೂರು ಮಾಡಿ ಕಂಗಾಲು ಮಾಡುವ ಮಂಗಗಳನ್ನು ಓಡಿಸಲೆಂದೇ ಬಡಿಗೆಗಳು ಖಾಯಂ. ಮಂಗಗಳೊಂದಿಗೆ ಯುದ್ಧಮಾಡಿ ಸಂಡಿಗೆ ಮಾಡುವ ಬದಲು ತವರಿಗೆ ಹೋದಾಗ ಸಂಡಿಗೆ ಮಾಡಿಕೊಂಡೇ ಬರುವುದು ಉತ್ತಮ ಎನ್ನುವುದು ಸೊಸೆಯಂದಿರ ಅಭಿಮತ. ತವರಿಗೆ ಹೋಗುವ ಮತ್ತೊಂದು ನೆವ ಸೊಸೆಗಾದರೆ, ಬಸ್ ಚಾರ್ಜ ಖರ್ಚಿಲ್ಲ ಬಿಡು ಎನ್ನುವುದು ಅತ್ತಿಯ ಲೆಕ್ಕ. “ಜಬ್ ಮಿಯಾ ಬೀಬಿ ರಾಜಿ, ಕ್ಯಾ ಕರೇಗಾ ಖಾಜಿ?” ಸಂಡಿಗೆ ಡಬ್ಬಿ ಹೊರುವ ಕೆಲಸ ಮಾತ್ರ ಭಾವ-ಮೈದುನರದು. ಸಂಡಿಗೆಯ ವಿಚಾರ ಬಿಡಿ, ಮನೆ ಬೀಗಹಾಕಿ ನೆಮ್ಮದಿಯಿಂದ ಹೊರಗೆ ಹೋಗುವಂತಿ್ಲ್ಲ, ನೆಮ್ಮದಿಯಿಂದ ಮಧ್ಯಾನ್ಹ ಮಲಗುವಂತಿಲ್ಲ. ಯಾವುದಾದರೂ ಮಾಯದಿಂದ ಸಡಿಲಗೊಂಡ ಕೊಂಡಿಯ ಕಿಟಿಕಿ ತೆಗೆದು, ಸೊಳ್ಳೆ ಪರದೆ ಕಿತ್ತು ಠಣ್ಣ! ಎಂದು ಒಳಗೆ ಜಿಗಿವ ಮರಿಕೋತಿಗಳ ಕೋತಿಯಾಟ ಮನೆಯನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಅಡುಗೆ ಮನೆಯ ಫ್ರಿಜ್ಜುಬಾಗಿಲು ತೆಗೆಯುವುದರಿಂದ ಹಿಡಿದು ಇಂಚಿಂಚನ್ನೂ ಶೋಧಿಸಿ , ಅರ್ಧ ತಿಂದು , ಅರ್ಧ ಚೆಲ್ಲಿ, ಬೆಡ್ ರೂಮಿನ ಬೆಡ್ ಮೇಲೆ ಲಾಗಾಹೊಡೆಯುತ್ತ ಗಲಾಟೆ ಎಬ್ಬಿಸಿದಾಗ ಪಕ್ಕದ ಮನೆಯಿಂದ ಎಚ್ಚರಿಕೆಯ ಕರೆಗಂಟೆ ಮೊಬೈಲ್ ಗೆ. ಈ ತಾಪತ್ರಯಗಳಿಂದ ತಪ್ಪಿಸಿಕೊಳ್ಳಲೆಂದು ಈಗೀಗ ಬಾದಾಮಿಯ ಎಲ್ಲ ಮನೆಗಳಿಗೂ ಕಬ್ಬಿಣದ ಪಂಜರದ ದಿಗ್ಬಂಧನ. ಮನೆಕಟ್ಟಿದ ಮೇಲೆ ಮಂಗಗಳಿಗಾಗಿಯೇ ಮತ್ತೆ ಎರಡು-ಮೂರು ಲಕ್ಷ ಹೂಡಿಕೆ! ಕಬ್ಬಿಣದ ವೆಲ್ದಿಂಗ್ ಶಾಪ್ ನವನಿಗಂತೂ ಮಂಗಗಳೇ ದೇವರು. ಮಂಗಗಳ ಸಂತತಿ ಮತ್ತಷ್ಟು ಹೆಚ್ಚಲಿ, ಅವು ಊರಕಡೆಗೆ ಮತ್ತಷ್ಟು ಬರಲಿ ಎಂದು ದಿನವೂ ಬೇಡುವನೋ ಏನೋ! ಮನೆಯ ಪಕ್ಕದ ಚಿಕ್ಕ ಕೈ ತೋಟದಲಿ ಅತ್ತೆ ಬೆಳೆಸಿದ ಅರಿಷಣ, ಕರಿಬೇವು, ನಿಂಬೆ, ಹೂವಿನ ಗಿಡಗಳು…. ಜೊತೆಗೆ ಪೇರಲ ನಳನಳಿಸುತ್ತಿದ್ದವು. ಮಂಗಗಳಿಗೆ ಅಂಜದೇ ಸದಾ ಬಡಿಗೆ ಹಿಡಿದು ಅವುಗಳನ್ನು ಹೆದರಿಸುವ ಅತ್ತೆ survival of fittest ತತ್ವದಲ್ಲಿ ಗೆದ್ದಿದ್ದರು. ಏಕೆಂದರೆ ಅವರು ಬಾದಾಮಿಯ ಸೊಸೆಯಾದರೂ ಚಿಕ್ಕಂದಿನಲ್ಲಿ ಇಲ್ಲಿಯೇ ಆಡಿ ಬೆಳೆದವರು. ಆದರೂ ಗಿಡದಲ್ಲಿ ಪೇರಲ ಹಣ್ಣುಗಳು ಮೂಡತೊಡಗಿದಾಗ ಮಂಗಗಳು ಅತ್ತೆಯ ಬಡಿಗೆಗೂ ಬಗ್ಗಲಿಲ್ಲ. ಮಾಡುವ ಕೆಲಸ, ನಿದ್ದೆ, ಊಟ ಬಿಟ್ಟು ಮಂಗಗಳೊಡನೆ ಸೆಣಸಾಡಿ ಪೇರಲಹಣ್ಣುಗಳ ರಕ್ಷಣೆಗೆ ನಿಂತ ಅತ್ತೆಯ ಆರೋಗ್ಯ ಎಲ್ಲಿ ಕೆಡುವುದೋ, ಎಲ್ಲಿ ಅವರು ಕಾಲು ಜಾರಿ ಬೀಳುವರೋ ಎಂದು ಪೇರಲಗಿಡವನ್ನೇ ನನ್ನ ನಾದಿನಿ ತೆಗೆಸಿಬಿಟ್ಟರು! ಪಾಪ! ಗಿಡಗಳನ್ನು ತುಂಬಾ ಪ್ರೀತಿಸುವ ಅತ್ತೆ ಸಿಕ್ಕಾಪಟ್ಟೆ ಮರುಗಿದರು. ಇಲ್ಲಿನ ಮಂಗಗಳೂ ತುಂಬಾ ಚುರುಕು. ಹೆದರುವವರನ್ನು ಕಂಡರೆ ಹೆದರಿಸುವವರು ಹೆಚ್ಚುತ್ತಾರೆ ಎಂಬ ಅನುಭವದ ನುಡಿ ಮಂಗಗಳಿಗೂ ಹೇಗೆ ತಿಳಿದಿದಿಯೋ. ಅವು ಮನುಷ್ಯರನ್ನು ನೋಡಿ ಕಾರ್ಯವೈಖರಿಯನ್ನು ಬದಲಿಸುತ್ತವೆ. ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಕಂಡರೆ ಕ್ಯಾರೇ ಎನ್ನದೇ ಮೈಮೇಲೆ ಎಗರಿ ಬ್ಯಾಗು ಕಸಿಯುವ ಮಂಗಗಳು ಗಂಡಸರ ಉಸಾಬರಿಗೇ ಹೋಗುವುದಿಲ್ಲ. ಮಕ್ಕಳಂತೂ ಪಾಪ ಅಂಗಡಿಗೆ ಹೋಗಿ ತಮಗೆ ಬೇಕಾದ ತಿನಿಸುಗಳನ್ನು ತರುವುದಕ್ಕೆ ಹೆದರುತ್ತವೆ. ಒಬ್ಬೊಬ್ಬರೆ ಶಾಲೆಗೆ ಹೋಗಲೂ…..! “ಮೊದಲೆಲ್ಲ ಇಷ್ಟು ಮಂಗ್ಯಾ ಇದ್ದಿದ್ದಿಲ್ಲವಾ. ಬ್ಯಾರೆಬ್ಯಾರೆ ಊರಾನವರು ಮಂಗ್ಯಾನ್ನ ತಂದು ಬಾದಾಮಿ ಗುಡ್ಡದಾಗ ಬಿಟ್ಟ ಹೋಗ್ಯಾರಂತ!” ಎಂದು ಕಟ್ಟೆ ಪುರಾಣಗಳಲ್ಲಿ ಮಂಗನ ಪಾತ್ರವೂ ಇದ್ದೇ ಇರುತ್ತದೆ. ಒಟ್ಟಿನಲ್ಲಿ ಮಂಗಗಳ ದಾಳಿಯಿಂದ ಸುರಕ್ಷಿತವಾಗಿರಲು 24*7 ಮನೆಯ ಬಾಗಿಲುಗಳು ಬಂದ ಆಗಿಯೇ ಇರುತ್ತವೆ. ಆದರೆ ಈಗೀಗ ಎಲ್ಲ ಮನೆಗಳಿಗೂ ಕಬ್ಬಿಣದ ಸರಳುಗಳ ದಿಗ್ಭಂಧನದಿಂದ , ಜೊತೆಗೆ ಎಲ್ಲರೂ ತುಂಬಾ ಹುಷಾರಾಗಿರುವುದರಿಂದ ಬಹಳ ಸಲ ಮಂಗಗಳ ದಾಳಿ ಸಫಲವಾಗುವುದಿಲ್ಲ. ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಅವು ಅಲೆದಾಡುವುದು ನೋಡಿದರೆ ಕರೆದು ,ಕೂಡ್ರಿಸಿ ಊಟಕ್ಕೆ ಕೊಡಬೇಕು ಎನಿಸುತ್ತದೆ. ಆದರೆ ಒಮ್ಮೆ ಕೊಟ್ಟರೆ ಪುನಃ ಪುನಃ ಅವುಗಳ ಕಾಟ ತಡೆಯುವುದು ಅಸಹನೀಯ. ಮಾರುಕಟ್ಟೆಗಳಲ್ಲಂತೂ ಅದೆಷ್ಟು ಹಣ್ಣುಗಳು ಮಂಗಗಳ ಪಾಲಾಗುತ್ತವೆಯೋ! ಆದರೆ ಯಾರೊಬ್ಬರೂ ಬೇಸರ ಪಡುವುದಿಲ್ಲ. ಚಿಕ್ಕ ಮಾರಾಟಗಾರರಾದರೂ “ಹನುಮಂತನ ಪಾಲೈತಿ ಬಿಡ್ರಿ” ಎಂದು ನಕ್ಕು ದೊಡ್ಡವರಾಗುತ್ತಾರೆ. ಒಟ್ಟಿನಲ್ಲಿ ವಾತಪಿಯ ಜನ ವಾನರ ಸೈನ್ಯದೊಡನೆ ತುಂಬಾ ಸುಂದರವಾದ ಸಹಜೀವನಕ್ಕೆ ಸಾಕ್ಷಿಯಾಗಿದ್ದಾರೆ.
ಬಾದಾಮಿ-ಮಹಾಕೂಟವನ್ನು ಸುತ್ತುವರೆಯುವ ದೊಡ್ಡ ಬಂಡೆಗಲ್ಲುಗಳ ಗುಡ್ಡವು ಮನುಷ್ಯರ ಚಟುವಟಿಕೆಗಳಿಂದ ದೂರವಿದ್ದು, ಬಂಡೆಗಲ್ಲುಗಳ ಕೊರಕಲುಗಳು ಮಂಗಗಳಿಗೆ ಮಳೆ, ಬಿಸಿಲು,ಚಳಿಗಳಿಂದ ರಕ್ಷಣೆ ಕೊಡುವ ನೈಸರ್ಗಿಕ ಆಲಯಗಳಾಗಿವೆ. ಸುತ್ತ ಹೊಲಗಳಲ್ಲಿ, ಕುರುಚಲು ಕಾಡುಗಳಲ್ಲಿ ಅವುಗಳ ಆಹಾರ ನೀರಿಗೇನೂ ಕೊರತೆ ಇಲ್ಲ. ಬಾದಾಮಿಯ ಬೆಟ್ಟದ ಮೇಲೆ ಮತ್ತೊಂದು ಬಾದಾಮಿಯನ್ನೇ ನಿರ್ಮಿಸಬಹುದಾದಷ್ಟು ಸಮತಟ್ಟು ಜಾಗವಿದೆ. ವಿವಿಧ ಭಂಗಿಳಲ್ಲಿ ನಿಂತ ಬಂಡೆಗಲ್ಲುಗಳು ನೈಸರ್ಗಿಕ ಶಿಲಾಬಾಲಕಿಯರೇ ಸರಿ. ಇದು ನಿಸರ್ಗ ನಿರ್ಮಿತ “ರಾಕ್ ಗಾರ್ಡನ್”. ‘ಕಾಂತಾರ’ ದ ಈಶ್ವರನ ಹೂದೋಟಕ್ಕೇನೂ ಕಡಿಮೆಯಿಲ್ಲ ನಮ್ಮ ಈಶ್ವರನ ಕಲ್ಲಿನತೋಟ. ಗುಡ್ಡದ ಮೇಲೆ ವಿವಿಧ ಗಿಡಗಳು, ನೀರಿನ ಹೊಂಡಗಳು, ಮಂಗಗಳ ಹಿಂಡುಗಳು ಮತ್ತೊಂದು ಲೋಕವನ್ನೇ ಅನಾವರಣ ಮಾಡುತ್ತವೆ. ಕರೋನಾದ ಭಯಾವರಿಸಿದ ಆ ದಿನಗಳಲ್ಲಿ ಮಾರುಕಟ್ಟೆಗಳು, ರಸ್ತೆಗಳು …ಅಷ್ಟೇ ಏಕೆ ಊರಿಗೆ ಊರಿಗೆ ಊರೇ ಕಲ್ಲಾದಾಗ ಬಾದಾಮಿಯ ಮಂಗಗಳು ಮಾತ್ರ ದಿಕ್ಕೆಟ್ಟಿರಬಹುದು. ಆಗ ಎಷ್ಟೋ ಜನ ಜೊತೆಗೆ ಸರ್ಕಾರವೂ ಮಂಗಗಳನ್ನೂ ಮರೆಯಲಿಲ್ಲ. ಮಂಗಗಳಿಗಾಗಿ ಬಾಳೆಹಣ್ಣುಗಳು, ಬಿಸ್ಕೆಟ್ ಗಳು ರವಾನೆಯಾಗಿದ್ದವು. ವಾತಾಪಿಯ ಮಂಗಗಳೆಂದರೆ ಅವು ಯಾರದೋ ಕೆಲವು ಮನೆಯ ಸಾಕು ಪ್ರಾಣಿಗಳಂತಲ್ಲ. ಅವು ಸಂಪೂರ್ಣ ಬಾದಾಮಿಯ ಮನೆಮಕ್ಕಳಂತೆ. ವಾರಸುದಾರರಂತೆ! ಅವು ಬರೀ ಮಂಗಗಳಲ್ಲೋ ಅಣ್ಣ! ವಾತಾಪಿಯ ಅಸ್ಮಿತೆಯಂತೆ! ಇತ್ತೀಚಿಗೆ ಇಲ್ಲಿ ಕಪ್ಪು ಮಂಗಗಳ ಸಂಖ್ಯೆಯೂ ಹೆಚ್ಚುತ್ತಿದೆ. ದೈಹಿಕವಾಗಿ ಕೆಂಪು ಮಂಗಗಳಿಗಿಂತ ಹೆ್ಚ್ಚು ಬಲಿಷ್ಟವಾಗಿರುವ ಇವು ಗಂಭೀರವಾಗಿದ್ದು ಆಕ್ರಮಣಕಾರಿ ಸ್ವಬಾವ ಹೊಂದಿವೆ. ಕೆಂಪು ಮಂಗಗಳು ತಮ್ಮ ತುಂಟುತನದಿಂದ ನಮಗೆ ಆತ್ಮೀಯವೆನಿಸಿದರೆ , ಕಪ್ಪು ಮಂಗಗಳು ಭಯಹುಟ್ಟಿಸುತ್ತವೆ. ಬಾದಾಮಿಯ ಕಪ್ಪು ಮಂಗಗಳಿಗೇಕೋ ಕೆಂಪು ಮಂಗಗಳ ಮೇಲೆ ಹೊಟ್ಟೆಕಿಚ್ಚಿರಲೂಬಹುದು. ಈ ವರ್ಣಬೇಧದಿಂದಾಗಿಯೇ ಬೇರೆ ಪ್ರದೇಶಗಳ ಕಪ್ಪು ಮಂಗಗಳಿಗಿಂತ ಇವು ಆಕ್ರಮಣಕಾರಿ ಇರಬಹುದೇನೋ! ಇಲ್ಲವೇ ಮಂಗಗಳ ಸಂಖ್ಯೆ ಹೆಚ್ಚಿದಂತೆ ಪೈಪೋಟಿ ಹೆಚ್ಚಾಗಿ ಇವು ಒರಟಾಗಿವೆ ಅನಿಸುತ್ತೆ. ಇವುಗಳಲ್ಲಿ ನಯ ನಾಜೂಕಿನ ಜೊತೆ, ಕೌಶಲ್ಯಗಳೂ ಕಡಿಮೆಯೇ ಬಿಡಿ.
ಮಂಗಗಳ ಮಂಗನಾಟವನ್ನು ನೋಡುವುದಂತೂ ಮಕ್ಕಳಿಗೆ ಬಲು ಪ್ರಿಯ. ರಜೆಯಲ್ಲಿ ಮೊಮ್ಮಕ್ಕಳು ಬಂಧುಗಳನ್ನು, ಅಜ್ಜ- ಅಜ್ಜಿಯರನ್ನು ಭೇಟಿಯಾಗಲು ಬರುವುದಕ್ಕಿಂತ ಮಂಗಗಳನ್ನು ನೋಡಿ ಖುಶಿಪಡಲು ಬರುತ್ತಾರೆ. ಬಹುತೇಕ ಅಂಶಗಳಲ್ಲಿ ಮನುಷ್ಯರನ್ನು ಹೋಲುವ ಅವುಗಳ ಮಕ್ಕಳೊಂದಿಗೆ ಆಟ, ಎತ್ತರದ ಬಿಲ್ಡಿಂಗ್ ಗಳನ್ನು ಏರಿ ಕಿಟಕಿಯ ಅಂಚುಗಳನ್ನು ಹಿಡಿದು ಬೀಳದೆ ದಾಟುವ ಸಾಹಸ, ಮರಿಗಳ ದೇಹದ ಹೇನುಹುಡುಕುವ ಕಲೆ , ವಾಹನಗಳ ಕನ್ನಡಿಯಲ್ಲಿ ಸೌಂದರ್ಯ ಸವಿಯುವ ಪರಿ, ಹಾಗೇ ವಾಹನಗಳ ಸೀಟಿನ ಕವರ ಕಿತ್ತು ಹಾಕಿ ಚಿನ್ನಾಟವಾಡುವ ಮಂಗಗಳು ಕೆಲವುಸಲ ಸಿಟ್ಟುಬರುವಂತೆ ಮಾಡಿದರೆ, ಕೆಲವೊಮ್ಮೆ ಅಚ್ಚರಿ. ವೈರ್ ಗಳಿಗೆ ಜೋತು ಬಿದ್ದು ಟ್ರಾಫಿಕನ್ ರಸ್ತೆಗಳನ್ನು ದಾಟುವ ಅವುಗಳ ಕೌಶಲ್ಯವನ್ನು ನಾನೇ ಎಷ್ಟೋ ಬಾರಿ ಬೆಕ್ಕಸಬೆರಗಾಗಿ ನೋಡುತ್ತ ನಿಂತದ್ದಿದೆ. ಬಹುಶಃ ಇವುಗಳ ಈ ಕೌಶಲ್ಯವೇ ದೊಡ್ಡ ದೊಡ್ಡ ಶಹರಗಳ ಫ್ಲೈ ಓವರ್ ನಿರ್ಮಾಣಕ್ಕೆ, ಗುಡ್ಡಗಾಡುಗಳ ದುರ್ಗಮ ತಾಣಗಳಲ್ಲಿ ರೋಪ್ ವೇ, ಕೇಬಲ್ ಕಾರ್ ಗಳ ನಿರ್ಮಾಣಕ್ಕೆ ಸ್ಫುರ್ತಿಯಾಗಿರಬಹುದು. ಬಾದಾಮಿಗೆ ಬೇಟಿಕೊಡುವ ವಿದೇಶೀಯರೂ ಮಂಗಗಳೊಂದಿಗೆ ಆತ್ಮೀಯತೆ ತೋರುತ್ತ, ತಿನಿಸುಗಳನ್ನು ಕೊಡುತ್ತ, ಅವುಗಳನ್ನು ಭಾವಚಿತ್ರದಲ್ಲಿ ಸೆರೆಹಿಡಿದು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ನಾವು ಎಂದೋ ಒಂದು ದಿನ ವಿಕಾಸದ ಹಾದಿಯಲ್ಲಿ ಈ ಅವಸ್ಥೆಯನ್ನು ದಾಟಿಯೇ ಬಂದಿದ್ದೀವಲ್ಲ! ಎಂಬ ಹೆಮ್ಮೆ.
ಕಬ್ಬಿಣದ ಸರಳುಗಳ ಹಿಂದಿನಿಂದ ಮಂಗಗಳ ಚಲನವಲನಗಳನ್ನು ಆನಂದಿಸುವ ನಾನು, ನನ್ನ ಮಗಳು ಟೋಪಿಮಾರುವವನ ಕತೆ, ಮರದ ಮೇಲೆ ಹೃದಯ ಬಿಟ್ಟುಬಂದ ಕೋತಿ ಮತ್ತು ಮೊಸಳೆಯ ಕತೆ, ಕೆಟ್ಟದ್ದನ್ನು ಕೇಳದ, ನೋಡದ, ಮಾತನಾಡದ ಮೂರು ಕೋತಿಗಳು, ಹಾಲು ಮಾರುವ ಮಂಗಮ್ಮನ ಕತೆಗಳ ಚಿತ್ರಗಳನ್ನು ಚಿತ್ತಭಿತ್ತಿಯಲ್ಲಿ ಕಲ್ಪಿಸುತ್ತಿರುತ್ತೇವೆ. ಆಡು ಮುಟ್ಟದ ಗಿಡವಿಲ್ಲ ಎಂಬಂತೆ ಬಾದಾಮಿಯಲ್ಲಿ ಮಂಗಗಳಿಲ್ಲದ ಜಾಗೆಗಳೇ ಇಲ್ಲ. ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲೂ ಪ್ರಯಾಣಿಕರ ತಿಂಡಿ ಚೀಲಗಳನ್ನು ಹಾರಿಹೊಡೆಯುವ ಹುನ್ನಾರದಲ್ಲಿ ಅವಿತುಕುಳಿತು, ದಿಡೀರ್ ಜಿಗಿದು ಓಡಿಹೋಗುವ ಮಂಗಳು ತಮ್ಮ ಚಲನಶೀಲತೆಗೆ ಪ್ರಸಿದ್ಧವಾಗಿವೆ. ಅದಕ್ಕಾಗಿಯೇ ಸುಲಭವಾಗಿ ಅಂಕೆಗೆ ಸಿಗದ ಮನಸ್ಸನ್ನು ಮರ್ಕಟಕ್ಕೆ ಹೋಲಿಸಿದ್ದು.
ಮನವೆಂಬ ಮರ್ಕಟವು ತನುವೆಂಬ ವೃಕ್ಷವನೇರಿ
ಇಂದ್ರಿಯಗಳೆಂಬ ಶಾಖೆ ಶಾಖೆಗೆ ಹಾರಿ
ವಿಷಯಗಳೆಂಬ ಹಣ್ಣು ಫಲಗಳ ಗ್ರಹಿಸಿ
ಭವದತ್ತ ಮುಖವಾಗಿ ಹೋಗುತಿದೆ.
ನೋಡಾ! ಈ ಮನವೆಂಬ ಮರ್ಕಟವ ನಿಮ್ಮ ನೆನಹೆಂಬ
ಪಾಶದಲಿ ಕಟ್ಟಿ, ಎನ್ನನುಳುಕೊಳ್ಳಯ್ಯಅಖಂಡೇಶ್ವರಾ||
ನಿಂತಲ್ಲಿ ನಿಲ್ಲದೇ, ಕುಂತಲ್ಲಿ ಕೂಡದೇ ಸದಾ ಜಿಗಿದಾಡುವ ಮಂಗಗಳು ಚಿತ್ತ ಚಾಂಚಲ್ಯಕ್ಕೆ ಹೇಳಿಮಾಡಿಸಿದ ಉಪಮೆ. ನಮ್ಮ ಶಾಲೆಯ ಮಕ್ಕಳ ಚೇಷ್ಟೆಗಳಿಗೂ ರೋಸಿಹೋಗಿ ಬಹಳಸಲ ಇದೇ ಉಪಮೆ ಬಳಸುತ್ತಿರುತ್ತೇನೆ. ಕಪಿಚೇಷ್ಟೆ ಮಾಡುವ ಮಕ್ಕಳಿಗೆ “ನಿಮಗ ಬಾಲ ಒಂದ ಇಲ್ಲನೋಡ್ರಿ! “ ಎಂದು ಬಹಳ ಸಾರಿ ನಾನೇ ಬಯ್ದದುಂಟು. “ಕಪಿಗೆ ಚಪಲತೆ ಸಹಜಂ” ಎಂದು ರನ್ನನಿಗೂ ಕೂಡ ಕಪಿಯ ಚಪಲತೆ ಕಾಡಿದ್ದುಂಟು. ಕಪಿಯು ಕೋಡಗನಾಗಿ ಶಿಶುನಾಳ ಶರೀಫರ ತತ್ವ ಪದದಲ್ಲಿ ಕೋಳಿಗೆ ಆಹುತಿಯಾಗುತ್ತದೆ. ಅಂದರೆ ಚಂಚಲ ಮನಸ್ಸು ಜ್ಙಾನೋದಯದಲ್ಲಿ ಕರಗಿಹೋಗುತ್ತದೆ. ಆದರೆ ಬಾದಾಮಿಯ ಜನ ಮಾತ್ರ “ಕೋಲ ತುದಿಯ ಕೋಡಗನಂತೆ, ನೇಣ ತುದಿಯ ಬೊಂಬೆಯಂತೆ , ಆಡಿದೆನಯ್ಯಾ ನೀನಾಡಿಸಿದಂತೆ” ಅಕ್ಕ ಮಹಾದೇವಿಯ ವಚನದ ಸಾಲುಗಳಂತೆ ದೇವರು ಆಡಿಸಿದಂತೆ ನಾವಾಡುವುದು ನಿಜವಾದರೂ, ಬಾದಾಮಿಯಲ್ಲಿ ಈ ಕೋಡಗಗಳು ಆಡಿಸಿದಂತೆ ನಾವು ಆಡುವಂತಾಗಿದೆ! ಎಲ್ಲರ ಮನೆಗಳ ಮಾಳಿಗೆಯ ನೀರಿನ ಸಿಂಟ್ಯಾಕ್ಸಗಳು , ಸೋಲಾರ ವಾಟರ್ ಹೀಟರ್ ಗಳು ಮುಳ್ಳಿನ ಮಾಲೆಯನ್ನು ಧರಿಸಿಕೊಂಡು ದೀಪಾವಳಿ ಆಚರಿಸಿಕೊಳ್ಳುತ್ತವೆಯೆಂದರೆ ಅತಿಶಯೋಕ್ತಿಯಲ್ಲ! ನಿಜ! ಇಲ್ಲದಿದ್ದರೆ ಅವರ ಸಿಂಟ್ಯಾಕ್ಸ ಮುಚ್ಚಳ ಇವರ ಮನೆಮೇಲೆ, ಅವರ ಸಿಂಟ್ಯಾಕ್ಸ ಮುಚ್ಚಳ ಇವರ ಮನೆಮೇಲೆ! ಸೋಲಾರ ಪಾನೆಲ್ ಗಳು, ಪೈಪುಗಳು ಚಿನ್ನಾಛಿದ್ರವಾಗಿ ಜೋಗಜಲಪಾತದ ಅವತರಣ. ಅಲ್ಲಮ ಪ್ರಭುಗಳ ವಚನದಲ್ಲೂ ಆಡಾಡುತ ಬರುವ ಕೋಡಗವು ಜಪವಮಾಡುವ ತಪಸ್ವಿಯನ್ನೇ ನುಂಗುತ್ತದೆ! ತನ್ನಾಟಗಳಿಂದ ಜನರನ್ನೇ ಮಂಗನನ್ನಾಗಿ ಮಾಡುವ ಈ ಮಂಗಗಳ ಮಂಗನಾಟ ಹಲವುಬಾರಿ ಅತಿರೇಕವಾಗಿಬಿಡುತ್ತದೆ. ಒಂಟಿಯಾಗಿ ಓಡಾಡುವ ಜನರನ್ನು ಕಚ್ಚುವ ಮೂಲಕ, ವಾಹನಗಳ ಮೇಲೆ ಜಿಗಿದು ಬೀಳಿಸುವ ಮೂಲಕ ಟಿ.ವಿ ಸುದ್ದಿಗಳಲ್ಲಿ ದೊಡ್ಡ ಸುದ್ದಿಕೂಡ ಮಾಡುತ್ತವೆ. ನಾ ಚಿಕ್ಕವಳಿದ್ದಾಗ ಮಂಗ, ಆನೆ, ನಾಯಿಗಳು ಪ್ರಮುಖಪಾತ್ರ ವಹಿಸುವ ಚಲನಚಿತ್ರಗಳನ್ನು ತುಂಬಾ ಇಷ್ಟ ಪಡುತ್ತಿದ್ದೆ. ಅದರಲ್ಲಿ ಸಾಕಿದ ಮಂಗಕ್ಕೆ ಚಂದ ಚಂದದ ಬಟ್ಟೆ ಹೊಲಿದು , ಬಣ್ಣದಅಂಗಿಗಳನ್ನು ಹಾಕಿ ಹಾಸ್ಯಭರಿತ ಚಲನಚಿತ್ರಗಳನ್ನು ಮಾಡಿ , ಅವುಗಳ ಜಾಣ್ಮೆ ,ಕೌಶಲ್ಯಗಳನ್ನು ಮನಮುಟ್ಟುವಂತೆ ತೋರಿಸುತ್ತಿದ್ದ ಸೀನುಗಳನ್ನು ಕಂಡು ಮಾಳಿಗೆ ಹಾರಿಹೋಗುವಂತೆ ನಗುತ್ತಿದ್ದೆವು. ಬೇಬಿ ಶ್ಯಾಮಿಲಿಯ ಚಲನಚಿತ್ರಗಳು, ಹಿಂದಿಯಲ್ಲಿ ಇಷ್ಕ…ಒಂದೇ-ಎರಡೇ! ಇವೆಲ್ಲ ಸಕಾರಾತ್ಮಕ ಬಾವನೆಗಳಿಂದ ಜೀವನಕ್ಕೆ ಉತ್ಸಾಹ ತುಂಬುವಂತವು. ಕ್ರೌರ್ಯವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಮಾಡುವ ಈಗಿನ ಚಿತ್ರಗಳು ಮನುಷ್ಯನ ಚಿತ್ತವಿಕಾರಕ್ಕೆ ಕಾರಣವಾಗುತ್ತಿವೆ. ಗ್ರಾಫಿಕ್ಸನ್ನು ಬಳಸಿ ಮಾಡುವ ಚಿತ್ರಗಳಲ್ಲಿ ನೈಜತೆಯ ಕೊರತೆ ಎದ್ದು ಕಾಣುತ್ತದೆ. ಆಗೆಲ್ಲ ಮಂಗಗಳನ್ನು ಸಾಕಿ, ಅವುಗಳಿಗೆ ವಿವಿಧ ಕೌಶಲ್ಯಗಳನ್ನು ಕಲಿಸಿ , ಲಾಗಾ ಹೊಡಿಯೋ ಮಂಗಣ್ಣ ಎನ್ನುತ್ತ ಮಂಗನನ್ನು ಆಡಿಸುವವರು ಬಂದರೆ ನಾವೆಲ್ಲ ಮಕ್ಕಳು-ದೊಡ್ಡವರು ಅದೆಷ್ಟು ಖುಶಿಪಡುತ್ತಿದ್ದೆವು. ವಿವಿಧ ಜರತಾರಿ ಅಂಗಿಗಳಲ್ಲಿ ಮಂಗಗಳೂ ಎಷ್ಟು ಸುಂದರವಾಗಿ ಕಾಣುತ್ತಿದ್ದವು. ಆದರೀಗ ಮಂಗಗಳನ್ನು ಆಡಿಸುವವರು ಇಲ್ಲವೇ ಇಲ್ಲ. ಬಾದಾಮಿಯಲ್ಲಿ ಪ್ರತಿದಿನ ಮಂಗಗಳೇ ನಮ್ಮನ್ನು ಆಡಿಸುತ್ತವೆ.
ರಾಮಾಯಣದಲ್ಲಿ ಮಂಗಗಳ ಪಾತ್ರ ಹಿರಿದಾಗಿದೆ. ಹನುಮಂತ, ಜಾಂಬವಂತ ಮತ್ತು ವಾನರ ಸೈನ್ಯದ ಸಾಹಸದಿಂದಾಗಿ ಸಮುದ್ರವನ್ನೇ ಹಾರಿ ರಾವಣನ ರಾಜ್ಯದಿಂದ ಸೀತೆಯನ್ನು ಕರೆತರಲು ಸಾಧ್ಯವಾಯಿತು. ಆದ್ದರಿಂದ ಹನುಮಂತನ ರೂಪದಲ್ಲಿ ಮಂಗಗಳು ಮಾನವರ ಹೃದಯದಲ್ಲಿ ದೈವದ ಸ್ಥಾನವನ್ನು ಪಡೆದುಕೊಂಡಿವೆ. ಕೆಲವೊಮ್ಮೆ ಆಕಸ್ಮಿಕ ಆಘಾತಗಳಿಂದ ಮಂಗಗಳು ಜನವಸತಿ ಪ್ರದೇಶದಲ್ಲೇ ತೀರಿಹೋದಾಗ , ಉಳಿದ ಮಂಗಗಳ ಪ್ರಲಾಪ ಮನುಷ್ಯರ ಮನಮಿಡಿಯುವಂತೆ ಮಾಡುತ್ತವೆ. ಸಾಕ್ಷಾತ್ ಹನುಮಂತನ ಅವತಾರವೆಂದು ನಂಬುವ ಜನ ಕೂಡ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸುತ್ತಾರೆ. ಮಾನವ ಮತ್ತು ಮಂಗಗಳ ಈ ಅವಿನಾವಭಾವ ಸಂಬಂಧಕ್ಕೆ ಬಾದಾಮಿ ತೀರಾ ಹತ್ತಿರವಾಗಿರುವುದು ಹೆಮ್ಮೆಎನಿಸುತ್ತದೆ. ಮನೆಯಲ್ಲಿ ಮಕ್ಕಳ ಕಿಡಿಗೇಡಿತನಕ್ಕೆ ರೋಸಿಹೋಗಿ ಗೊಣಗುವ ಹಿರಿಯರು ಅರೆಕ್ಷಣ ಮನೆಯಲ್ಲಿ ಮಕ್ಕಳು ಕಾಣದಿದ್ದರೆ ಚಡಪಡಿಸುವಂತೆ, ಮಂಗಗಳ ಮೆರವಣಿಗೆ ಒಂದು ಗಂಟೆ ತಡವಾದರೂ ಎಲ್ಲರ ಬಾಯಲ್ಲಿ, “ಯಾಕs ಇವತ್ತ ಮಂಗ್ಯಾ ಬರಲೇ ಇಲ್ಲಲ್ಲ!” ಎಂಬ ತಡಬಡಿಕೆ. ಜೋರಾಗಿ ಮಳೆ ಬಂದಾಗ, ಬಿಸಿಲಿನ ತಾಪ ಎಲ್ಲೆ ಮೀರಿದಾಗ, ಚಳಿಗೆ ಮೈ ನಡುಗಿದಾಗ , “ಪಾಪ! ಮಂಗ್ಯಾ ಎಲ್ಲೆದವಾನ? ಹೆಂಗ ತಡಕೊಂತಾವನ?” ಎಂಬ ಮಗಳ ಮಾತಿನ ಮುಗ್ಧತೆಯಲ್ಲಿ ಅವುಗಳೊಂದಿಗಿನ ಅವಿನಾಭಾವ ಸಂಬಂಧ ಅನಾವರಣವಾಗುತ್ತದೆ.
“ಮಮ್ಮಿ , ಮಂಗ್ಯಾ ಟೆರೆಸ ಮ್ಯಾಲೆ ಸೋಲಾರ್ ನೀರಿನ ಪೈಪ್ ಹಿಡಕೊಂಡ ಆಡಾಕತ್ತಾವಂತ . ಹೊಡಿಯೋಣ ಬಾ” ಮಗಳ ಕರೆ. ಮಂಗಗಳನ್ನು ಕಂಡರೆ ಮಾರುದ್ದ ಜಿಗಿಯುವ ನಾನು ಈಗ ಮಗನನ್ನು ಹುಡುಕಬೇಕು. ಬರಲಾ?






0 Comments