ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Exclusive: ವಿಜಯನಾಥ ಶೆಣೈ ಎಂಬ ಸ್ಥಾವರ ಕಂಬಗಳ ನಡುವಿನ ಜಂಗಮ

ಪೃಥ್ವಿರಾಜ ಕವತ್ತಾರು

ಚಿತ್ರಗಳು : ಯಜ್ಞ 

ಪಂಡಿತ್ ಭೀಮಸೇನ್ ಜೋಶಿಯವರ `ಶುದ್ಧ್ಕಲ್ಯಾಣ್` ಆಲಾಪನೆ. ಕರಾವಳಿಯ ನೆಲದಿಂದಲೇ ಅರಳಿದ ಸುಂದರವಾದ ಹೂವಿನಂತಿರುವ `ಹಸ್ತಶಿಲ್ಪ’ ಮನೆ.

`ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ’ ಈಶೋಪನಿಷದ್ವಾಕ್ಯ. `ಭೂಮಿಗತ’ದ ಗೋಪಾಲಕೃಷ್ಣ ಅಡಿಗರಂಥ ಕವಿ- ಲೇಖಕರ ಸಖ್ಯ.
ಬಿ. ವಿ. ಕಾರಂತರ ಪ್ರತಿಭೆಯ ಮುರಲಿ ಉಲಿದ `ಗೋಕುಲ ನಿರ್ಗಮನ’. ಸುರಾಲು ಮಣ್ಣಿನ ಅರಮನೆ ಕುಸಿದಾಗ ಯಾತನೆಪಡುವ ಮನ.
ಸುರಗಿಕಟ್ಟೆ ಹೆರಿಯ ಗಾಣಿಗರ ಬಯಲಾಟದ ಹೆಜ್ಜೆಗಳಲ್ಲಡಗಿದ ಕಲೆ. ರವಿವರ್ಮನ ಕಲಾಕೃತಿಗಳನ್ನು ನೆನಪಿಸಲೊಂದು ನೆಲೆ.
ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರರ ಕಡಲತಡಿಯ ನಿಸ್ವನ. ಪಯರ್ಾಯೋತ್ಸವದ ಸೃಷ್ಟಿಶೀಲ ಸ್ತಬ್ಧಚಿತ್ರಗಳ ಸಡಗರದ ಪಯಣ.
ದೇವರನ್ನೇ ತವ್ಮೊಳಗೆ ಅಡಗಿಸಿಕೊಂಡಂತಿರುವ ಕಲಾತ್ಮಕ ಕಂಬಗಳು. ಜಡದೊಳಗೆ ಚಲಿಸುವ ಇಲ್ಲಿದ್ದು ಎಲ್ಲೆಲ್ಲೂ ಹರಡಿಕೊಳ್ಳುವ ತೀವ್ರ ಹಂಬಲ.
…………………….
 
ಮೇಲ್ನೋಟಕ್ಕೆ ಅಸಂಗತವೆನ್ನಿಸುವ ಇಂಥ ಹಲವಾರು ವಾಕ್ಯಗಳನ್ನು ಹೊಸೆಯಬಹುದು.ಆದರೆ, ಸಂಗತವೆನ್ನಿಸಬೇಕಾದರೆ ಆ ವಾಕ್ಯಗಳನ್ನು ಮಣಿಪಾಲದ `ಹಸ್ತಶಿಲ್ಪ’ ವಿಜಯನಾಥ ಶೆಣೈಯವರ ಬದುಕಿನ ಹಿನ್ನೆಲೆಯಲ್ಲಿಟ್ಟು ಓದಬೇಕು.
ನೃತ್ಯ, ಶಿಲ್ಪ, ಸಂಗತ, ಸಂಸ್ಕೃತಿ, ಸಾಹಿತ್ಯ, ಅಧ್ಯಾತ್ಮ, ವಾಸ್ತುಶಿಲ್ಪ ಮುಂತಾದ ಹತ್ತುಹಲವು ಕ್ಷೇತ್ರಗಳ ಬಗೆಗೆ ತನ್ನ ಸುಪ್ತಪ್ರಜ್ಞೆಯಲ್ಲಿರುವ ಗುಪ್ತಗಾಮಿನಿಯ ಪ್ರವಹನಕ್ಕಾಗಿ ಸಮಷ್ಟಿ ಸಮಾಜವೇ ಮಹಾಪಾತ್ರವೊಂದನ್ನು ಆರಿಸಿಕೊಂಡಂತೆ ನಮ್ಮ ನಡುವೆ ಇರುವವರು ವಿಜಯನಾಥ ಶೆಣೈ.
ಹತ್ತಿಪ್ಪತ್ತು ಕಲಾತ್ಮಕ ಕಟ್ಟೋಣಗಳ `ಹೆರಿಟೇಜ್ ವಿಲೇಜ್’ನ ಚೌಕಿಮನೆಯ ವೊಗಸಾಲೆಯಲ್ಲಿ ಅವರೀಗ ಕುಳಿತಿದ್ದಾರೆಂದರೆ, ಅವರ ಮುಂದೆ ಕಾರ್ಯಕೌಶಲದ ಕ್ಯಾನ್ವಾಸ್ ಮಾಯೆಯಂತೆ ಜಗದಗಲ ಹರಡಿಕೊಂಡಿದೆಯೆಂದು ಬಲ್ಲವರು ಮಾತ್ರ ಬಲ್ಲರು. ಸಂಘಟನೆಯೆಂಬುದು ಅವರ ಮಟ್ಟಿಗೆ ಪರಿಚಾರಿಕೆಯಲ್ಲ, ಅದೊಂದು ಜೀವನ ಸಂಸ್ಕಾರ.
ವಿಜಯನಾಥ ಶೆಣೈಯವರು ತೀವ್ರ ಮೋಹದಿಂದ ತಾವು ಕಟ್ಟಿದ ಸಂಘ- ಸಂಸ್ಥೆ- ಸ್ಥಾವರ- ಸಮಾರಂಭಗಳನ್ನು ತ್ಯಜಿಸಿ ಇದ್ದಕ್ಕಿದ್ದಂತೆ ನಿರ್ಮೋಹದ ವೈರಾಗ್ಯವನ್ನಪ್ಪುತ್ತ ಬಂದವರು. ನಿರ್ಮೋಹ ಬೇಡವೆನ್ನಿಸಿದಾಗ ಮತ್ತೊಂದನ್ನು ಕಟ್ಟಿ ಅದರೊಳಗೇ ತನ್ಮಯರಾಗುತ್ತ ಬಂದವರು. ಮೋಹ- ನಿರ್ಮೋಹಗಳಲ್ಲಿ ಲೋಲುಪನಾಗದೆ ಮೋಹವನ್ನು ನಿರ್ಮೋಹದಿಂದಲೂ ನಿರ್ಮೋಹವನ್ನು ಮೋಹದಿಂದಲೂ ಜಯಿಸಿದವರು ವಿಜಯನಾಥ ಶೆಣೈ ; ಒಂದರ್ಥದಲ್ಲಿ ಶಿವರಾಮ ಕಾರಂತರಂತೆ.
ಈಗ ಶೆಣೈಯವರು ತಾವೇ ಕಟ್ಟಿದ `ಹೆರಿಟೇಜ್ ವಿಲೇಜ್’ ನೊಳಗೆ ಕಂಬಗಳ ನಡುವಿನ ಜಂಗಮನಂತೆ ನಡೆದಾಡುತ್ತಿದ್ದಾರೆಂದರೆ, ಅವರ ಕರ್ತೃತ್ವದ ಹೆಜ್ಜೆಗಳು ಎಲ್ಲಿಂದ ಆರಂಭವಾದವು ಎಂಬುದನ್ನು ಹುಡುಕುವುದು ಅಷ್ಟೊಂದು ಸುಲಭವಲ್ಲ.
 
ಸಂಸ್ಕೃತ ವಿದ್ವಾಂಸರೊಂದಿಗೂ ನವ್ಯ ಸಾಹಿತಿಗಳೊಂದಿಗೂ ಏಕಕಾಲದಲ್ಲಿ ನಿಕಟರಾಗಿದ್ದುಕೊಂಡು ಬಂದಿರುವ ವಿಜಯನಾಥ ಶೆಣೈಯವರಿಗೆ ದೇಶೀಯ ಮತ್ತು ಪಾಶ್ಚಾತ್ಯ ಶಾಸ್ತ್ರ- ಸಾಹಿತ್ಯದ ಅಪಾರ ಓದು ಇದ್ದರೂ ಸಂಸ್ಕೃತಿ `ಕಟ್ಟುವ’ ಕಾಯಕದಲ್ಲಿ ನಿರತರಾಗಿದ್ದವರಿಗೆ `ಕತೆ- ಕವಿತೆ’ ಕಟ್ಟಲು ಸಮಯವೇ ಸಿಕ್ಕಿರಲಿಲ್ಲ.
ಅವರ ಅಕ್ಷರ ಚಿಂತನಗಳೇನಾದರೂ ಸಿಗುವುದಿದ್ದರೆ ಪತ್ರಗಳಲ್ಲಿ ಮಾತ್ರ. ಸ್ಥಳೀಯ ಯಕ್ಷಗಾನ ಕಲಾವಿದನಿಂದ ಹಿಡಿದು ಇಂಗ್ಲೆಂಡಿನ ವಾಸ್ತುತಜ್ಞನವರೆಗೆ ಸಂವಾದ ನಡೆಸಿದ್ದಕ್ಕೆ ಸಾಕ್ಷಿಯಾಗಿರುವ ಪತ್ರಗಳನ್ನು ಅವರು ಆದಷ್ಟು ಜತನದಿಂದ ಕಾಯ್ದುಕೊಂಡಿದ್ದಾರೆ. ಅದು ಪತ್ರಗಳ ಮೇಲಿನ ವಾತ್ಸಲ್ಯದಿಂದ ಅಲ್ಲ, ಪತ್ರಗಳಲ್ಲಿ ಉಲ್ಲೇಖಗೊಂಡಿರುವ ಕಾಯಕವಿಚಾರಗಳ ಮೇಲಿನ ಪ್ರೀತಿಯಿಂದ. `ಅವೆಲ್ಲ ನನ್ನ ವೈಯಕ್ತಿಕ ನೆಲೆಯ ಪತ್ರ ಬರಹಗಳು. ಅವುಗಳನ್ನು ಪ್ರಕಟಿಸುವುದು ಬೇಡ’ ಎಂದು ಸ್ವಭಾವತಃ ಅಂತರ್ಮುಖಿಗಳಾಗಿರುವ ವಿಜಯನಾಥ ಶೆಣೈಯವರ ನಿಲುವು.
ಅವು ಉಭಯ ಕುಶಲೋಪರಿಗಳ ಸಾಂಪ್ರತಗಳಾಗಿರದೆ ಗತಕಾಲದ ಘಟನೆಗಳನ್ನು ಸ್ಮರಿಸುವ ಮತ್ತು ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಗಂಭೀರ ಸಂವಾದಬರಹಗಳೆಂದು ನಮಗನ್ನಿಸಿದ ಕಾರಣದಿಂದ ಅವುಗಳನ್ನು ಸಂಕಲನ ಮಾಡುವ ಬಗ್ಗೆ ಅನುಮತಿ ಪಡೆದುಕೊಂಡೆವು. `ಹೆರಿಟೇಜ್ ವಿಲೇಜ್’ಗೆ ಭೇಟಿಕೊಟ್ಟಿದ್ದ ಅಭಿನವ ಪ್ರಕಾಶನದ ರವಿಕುಮಾರರು ಶೆಣೈಯವರ ತ್ರಿವಿಕ್ರಮ ಕಾರ್ಯಸಾಧನೆಯ ಯಥಾಸಾಧ್ಯ ಸಣ್ಣ ಮಟ್ಟದ ಅಕ್ಷರ ದಾಖಲಾತಿಯಾದರೂ ತಮ್ಮಿಂದ ಆಗಬೇಕು ಎಂಬ ಅಭಿಮಾನದಲ್ಲಿ `ಪತ್ರ ವಾತ್ಸಲ್ಯ’ದ ಪ್ರಕಟಣೆಗೆ ಮುಂದಾಗಿದ್ದಾರೆ.
ವಿಜಯನಾಥ ಶೆಣೈಯವರ ಕೆಲವು ಪತ್ರಗಳು ಅವರದೇ `ನೆನಪಿನ ಶಿಲ್ಪಗಳು’ ಕೃತಿಯಲ್ಲಿ ಈಗಾಗಲೇ ಪ್ರಕಟವಾಗಿವೆ. ಆ ಎಲ್ಲ ಪತ್ರಗಳನ್ನು ಸೇರಿಸಿದರೂ `ಸಮಗ್ರ’ ಪತ್ರ ಸಂಪುಟವನ್ನು ಕಲ್ಪಿಸುವುದು ಸಾಧ್ಯವಾಗದು. ಏಕೆಂದರೆ, ನೂರಾರು ಫೈಲುಗಳ ನಡುವೆ ಹುಡುಕಿದರೆ ಇನ್ನೂ ಅನೇಕ ಪತ್ರಗಳು ಸಿಗಬಹುದು. ಕಳೆದು ಹೋಗಿರುವ ಪತ್ರಗಳೂ ಮತ್ತೊಂದಿಷ್ಟು ಇರಬಹುದು. ಆಯುವುದು ಬಲು ಕಷ್ಟದ ಕೆಲಸ. ವಿಷಯಕವಲ್ಲದ, ಕ್ಷೇಮ ಸಮಾಚಾರವನ್ನಷ್ಟೇ ವಿಚಾರಿಸಿದಂತಿರುವ ಪತ್ರಗಳನ್ನು ಪ್ರಕಟಿಸುವ ಬಗ್ಗೆ ಶೆಣೈಯವರಿಗೂ ಸಮ್ಮತವಿಲ್ಲ.
ಪತ್ರಬರಹಗಳಿಗೆ ಅವುಗಳದೇ ಆದ ಮಿತಿಗಳಿವೆ. ವ್ಯಕ್ತಿಸಂವಹನದ ಈ ಬರಹಗಳು ಮುಂದೊಂದು ದಿನ ಕೃತಿ ರೂಪದಲ್ಲಿ ಪ್ರಕಟಗೊಳ್ಳುತ್ತವೆ ಎಂದು ಅಂದು ಬರೆದವರು ಭಾವಿಸಿರಲಾರರು. ಹಾಗಾಗಿ, ಅನೌಪಚಾರಿಕವಾದ ಭಾವದಲ್ಲಿಯೇ ಇವುಗಳನ್ನು ಓದಬೇಕಾಗುತ್ತದೆ. ಅಲ್ಲದೆ, ಒಬ್ಬೊಬ್ಬರ ಪತ್ರಗಳನ್ನು ಒಂದೊಂದು ಪ್ರತ್ಯೇಕ ಗೊಂಚಲಾಗಿ ಇಲ್ಲಿ ಜೋಡಿಸಿರುವುದರಿಂದ `ಓಲೆ- ಮಾರೋಲೆ’ಗಳೆಂಬ ಸರದಿಯ ಶಿಸ್ತನ್ನು ಇಲ್ಲಿ ಪಾಲಿಸಿಲ್ಲ. ಹಾಗೆ ಜೋಡಿಸಲು ಸಾಧ್ಯವಾಗದಿರುವುದಕ್ಕೆ ಎಲ್ಲ ಪತ್ರಗಳು ಲಭ್ಯವಿಲ್ಲದಿರುವುದು ಒಂದು ಕಾರಣ. ವಾಚಕರು ಈ ಅಂಶವನ್ನು ಗಮನಿಸಬೇಕೆಂದು ವಿನಮ್ರ ಅರಿಕೆ.
ನಮ್ಮ ಅಭಿಮಾನದ ಸಂಸ್ಕೃತಿ ಚಿಂತಕರಾದ ಪ್ರೊ. ಯು. ಆರ್. ಅನಂತಮೂತರ್ಿಯವರಿಗೂ ವಿಜಯನಾಥ ಶೆಣೈಯವರಿಗೂ ನಿವ್ಯರ್ಾಜ ಪ್ರೀತ್ಯಾದರಗಳ ಸಂಬಂಧ. `ಸ್ಥಳೀಯ’ರಾಗಿದ್ದುಕೊಂಡೇ `ಜಾಗತಿಕ’ ರಾಗಿಯೂ ಇರಲು ಸಾಧ್ಯ ಎಂಬುದನ್ನು ಇವರಿಬ್ಬರೂ ತೋರಿಸಿಕೊಟ್ಟವರು. ಯು. ಆರ್. ಅನಂತಮೂತರ್ಿ ಗೌರವಮಾಲಿಕೆಯಲ್ಲಿ ವಿಜಯನಾಥ ಶೆಣೈಯವರ ಪತ್ರಸಂಪುಟ ಪ್ರಕಟವಾಗುತ್ತಿರುವುದು ಯುಕ್ತವಾಗಿಯೇ ಇದೆ. ಅನಂತಮೂರ್ತಿಯವರು `ಹಸ್ತಶಿಲ್ಪ’ವನ್ನು ವಕ್ಷಿಸಿ ಬರೆದ ಕವನ `ತಿರುಕನಾಗಿ ಕವಿ’, ಮಿಥುನ ಕವನ ಸಂಕಲನದಲ್ಲಿ ಪ್ರಕಟವಾಗಿದೆ. ಅದನ್ನು ಈ ಕೃತಿಯ ರಕ್ಷಾ ಪುಟದಲ್ಲಿ ಬಳಸಿಕೊಂಡಿದ್ದೇವೆ.
ನೂರಾರು ಫೈಲುಗಳನ್ನು ಎತ್ತಿಡಲು, ಪತ್ರಗಳನ್ನು ಜೋಡಿಸಲು ಕಾಳಜಿಯಿಂದ ಸಹಕರಿಸಿದ ಥಾಮಸ್, ರಕ್ಷಾಪುಟಗಳ ಫೋಟೊಗಳನ್ನು ಒದಗಿಸಿದ ಛಾಯಾಗ್ರಾಹಕ ಯಜ್ಞ ಮಂಗಳೂರು, ಓದಿ ಸಲಹೆ- ಸೂಚನೆಗಳನ್ನಿತ್ತ ಕಾಂತಾವರ ಜಯರಾಮ ಕಾರಂತ, ಟೈಪ್ ಮಾಡಿದ ಸರೋಜಿನಿ, ವಿನ್ಯಾಸದಲ್ಲಿ ಸಹಕರಿಸಿದ ಗಜೇಂದ್ರ ಇವರಿಗೆ ಆಭಾರಿ.
ಈಗಾಗಲೇ ಮಂಜೇಶ್ವರ ಗೋವಿಂದ ಪೈ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ ವೊದಲಾದವರ ಪತ್ರಗಳು ಸಂಕಲನ ರೂಪದಲ್ಲಿ ಪ್ರಕಟವಾಗಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ `ಪತ್ರ ಸಾಹಿತ್ಯ’ ಕ್ಕೆ ಘನತೆಯ ಸ್ಥಾನವನ್ನು ತಂದುಕೊಟ್ಟಿವೆ. ಲೇಖನಗಳಿಗಿಂತ ಭಿನ್ನವಾಗಿ ಪತ್ರಗಳಲ್ಲಿ ಸಹಜ ಶೈಲಿಯ ಹೃದಯ- ಸಂವಾದ ಇರುತ್ತದೆ. ಅದರಲ್ಲೂ ಹಸ್ತಾಕ್ಷರದ ಪತ್ರಗಳು ಗತಕ್ಷಣಗಳನ್ನು ನೆನಪಿಸುವ ಜೊತೆಗೆ ಇತಿಹಾಸವನ್ನು ಅರಿಯುವ ದಾಖಲೆಗಳಾಗಿಯೂ ಮಹತ್ವ ಪಡೆಯುತ್ತವೆ. ಈ ಕೃತಿಯೂ ಕನ್ನಡದ `ಪತ್ರ ಸಾಹಿತ್ಯ’ಕ್ಕೆ ಅರ್ಥಪೂರ್ಣ ಕೊಡುಗೆಯಾಗಬಲ್ಲದೆಂಬ ವಿಶ್ವಾಸವಿದೆ.

‍ಲೇಖಕರು G

9 March, 2013

2 Comments

  1. veda

    Nimma chokkavada lekhana, mattadara artha poorna sheershike odi thakshanve `ಪತ್ರ ವಾತ್ಸಲ್ಯ’odabekendenisuttide.Pusthaka bega prakatanegollalemba Shubha haraikegalondige.

  2. ನ.ರವಿಕುಮಾರ

    pustaka egaagale prakatavaagide bele 150 abhinava. ella pustakada angadigalalliyu labhya
    Ravi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading