ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಕೋಪ್ಸ್ ವಿಚಾರಣೆಯ ಪ್ರಮುಖ ಚರ್ಚೆ..

ಧರ್ಮ vs  ವಿಜ್ಞಾನ

-ಪಾಲಹಳ್ಳಿ ವಿಶ್ವನಾಥ್ 

ಅಮೆರಿಕದ ದಕ್ಷಿಣ ಪ್ರಾಂತ್ಯ ಟೆನೆಸಿಯ ಡೇಟನ್ ಎಂಬ  ಚಿಕ್ಕ (ಜನಸಂಖ್ಯೆ ~1500) ಊರಿನ ನ್ಯಾಯಾಲಯವೊಂದರಲ್ಲಿ ಡಾರ್ವಿನರ ವಿಕಾಸವಾದವನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದರ ಬಗ್ಗೆ 100 ವರ್ಷಗಳ (1925 ರಲ್ಲಿ) ಹಿಂದೆ ನಡೆದ ಖ್ಯಾತ ಸ್ಕೋಪ್ಸ್ ವಿಚಾರಣೆಯನ್ನು ಹಿಂದಿನ ಸಂಚಿಕೆಯಲ್ಲಿ ವಿವರಿಸಿತ್ತು. ಇದು ಮಹತ್ವದ ಹಾಗೂ ರೋಚಕ ವಿಷಯವಾದ್ದರಿಂದ ಇಡೀ  ದೇಶವನ್ನೇ ಆಕರ್ಷಿಸಿದ್ದು ವಿವಿಧ ಭಾಗಳಿಂದ ಅನೇಕ ಜನ ಈ ಚಿಕ್ಕ ಊರಿನ ಮೇಲೆ ಧಾಳಿ ನಡೆಸಿದ್ದರು. 

ಬೇಸಿಗೆಯ ಸಮಯ, ಚಿಕ್ಕ ಕೋರ್ಟಿನ ಕೋಣೆ ಮತ್ತು ಅನೇಕ ಜನ ! ಆದ್ದರಿಂದ ವಿಚಾರಣೆಯನ್ನು ಕೋರ್ಟಿನ ಹೊರ ಅಂಗಣದಲ್ಲಿ ನಡೆಸಲಾಯಿತು. ಎರಡೂ ಕಡೆ ವಾದಿಸಿದ ವಕೀಲರು ಘಟಾನುಘಟಿಗಳೇ ! ಇಬ್ಬರೂ ದೇಶದ ಗಣ್ಯ  ಮತ್ತು ಖ್ಯಾತ ವ್ಯಕ್ತಿಗಳಾಗಿದ್ದರು: ಸ್ಕೋಪ್ಸ ಪರ ವಾದಿಸಿದ ಕ್ಲಾರೆನ್ಸ್  ಡಾರೋ ಮತ್ತು ಸರ್ಕಾರದ ಪರ ಮಾತಾಡಿದ  ವಿಲಿಯಮ್ ಬ್ರಯಾನ್ ; ಧಾರ್ಮಿಕ ವಿಷಯಗಳಲ್ಲಿ ಬ್ರಯಾನ್ ಕಟ್ಟಾ ಆಸ್ತಿಕರು ಮತ್ತು ಡಾರೋ ಅಜ್ಞೇಯತಾವಾದಿ.

ಇಡೀ ವಿಚಾರಣೆಯ ಸ್ವಾರಸ್ಯದ ಭಾಗವು  ಏಳನೇ ದಿನದಂದು ನಡೆಯಿತು, ಡಾರೋ ಅವರು ಬೈಬಲ್ ತಜ್ಞರಾಗಿ ಬ್ರಿಯಾನ್ ಅವರನ್ನು ಸಾಕ್ಷಿ ಪೆಟ್ಟಿಗೆಗೆ ಕರೆದರು; ಆಗ ನಡೆದ ಅವರಿಬ್ಬರ ವಾದವಿವಾದಗಳು ಧರ್ಮ ಮತ್ತು ವಿಜ್ಞಾನದ ಮಧ್ಯೇಯ ಕಂದಕವನ್ನು’ ತೋರಿಸುತ್ತದೆ. ಆ ಅಡ್ಡ-ಪರೀಕ್ಷೆಯ ಮಹತ್ವದ (ಪ್ರಮುಖ ಆಯ್ದ ಭಾಗಗಳು) ಕೆಲವು ಸಂಭಾಷಣೆಗಳನ್ನು ಕೆಳಗೆ ಕೊಟ್ಟಿದೆ : (ಬ್ರಯಾನ್  ಅವರ ಮೂಲಭೂತ  ಆಸ್ತಿಕ ನಂಬಿಕೆಯನ್ನು ಸ್ಥಾಪಿಸುವ ಮೂಲಕ  ಡಾರೋ ಪ್ರಾರಂಭಿಸುತ್ತಾರೆ) 

————————–

ಡಾರೋ: ಈಗ ನನಗೆ ಹೇಳಿ, ಈ ಪುಸ್ತಕ ( ಬೈಬಲ್) ದಲ್ಲಿ ಬರೆದಿರುವ  ಪ್ರತಿಯೊಂದು ಪದವನ್ನು ಅಕ್ಷರಶಃ ತೆಗೆದುಕೊಳ್ಳಬೇಕು ಎಂದು ನೀವು ಭಾವಿಸುತ್ತೀರಾ? 

ಬ್ರಯಾನ್  : ಬೈಬಲ್‌ನಲ್ಲಿರುವ ಎಲ್ಲವನ್ನೂ ಅಲ್ಲಿ ನೀಡಲಾಗಿರುವಂತೆಯೇ ಸ್ವೀಕರಿಸಬೇಕು

(ಬೈಬಲಿನಲ್ಲಿ ಜೋನಾ ಎಂಬ ಪ್ರವಾದಿ ವಿಧಾತನ ಮಾತನ್ನು ಕೇಳದಿದ್ದರಿಂದ ಅವನನ್ನು ಒಂದು ತಿಮಿಂಗಲ ನುಂಗಿಬಿಡುತ್ತದೆ. ಬ್ರಯಾನ್ ಅವರ ನಂಬಿಕೆಯ ಆಳವನ್ನು ಅಳೆಯಲು ಆ ಪವಾಡದ ಬಗ್ಗೆ  ಡಾರೋ  ಕೇಳುತ್ತಾರೆ) 

ಡಾರೋ ಈಗ (ಬೈಬಲಿನಲ್ಲಿ ಬರುವ) ತಿಮಿಂಗಿಲವು ಜೋನಾನನ್ನು ನುಂಗುವ ವಿಷಯ  ತೆಗೆದುಕೊಳ್ಳಿ. ಅದು ನಿಜವಾಗಿಯೂ ಸಂಭವಿಸಿದೆ ಎಂದು ನೀವು ಭಾವಿಸುತ್ತೀರಾ? 

ಬ್ರಯಾನ್ ತಿಮಿಂಗಿಲವನ್ನು ಮತ್ತು ಮನುಷ್ಯನನ್ನು ಸೃಷ್ಟಿಸಿದ ದೇವರು ಏನು ಬೇಕಾದರೂ ಮಾಡಿಸಬಲ್ಲ ಎಂದು ನಾನು ನಂಬುತ್ತೇನೆ. (ಹೀಗೆ ಬ್ರಯಾನ್ ತಮ್ಮ ಮೂಲಭೂತವಾದಿ ಸ್ಥಾನವನ್ನು ಸ್ಪಷ್ಟೀಕರಿಸತ್ತಾರೆ)

(ಬೈಬಲಿನ ಮೊದಲನೇ ಅಧ್ಯಾಯವಾದ ಜೆನೆಸಿಸ್‌ನಲ್ಲಿ ವಿಧಾತ ಇಡೀ ವಿಶ್ವ (ಪ್ರಾಣಿ, ಪಕ್ಷಿ ಎಲ್ಲಾ ಸೇರಿ) ವನ್ನು 6 ದಿನಗಳಲ್ಲಿ ಸೃ ಷ್ಟಿಸಿದ್ದಾನೆ ಎಂದು ಹೇಳಿದೆ. ಅದರ ಬಗ್ಗೆ ಡಾರೋ ಬ್ರಯಾನ್ ರನ್ನು ಪ್ರಶ್ನಿಸುತ್ತಾರೆ)

 ಡಾರೋ: ಸೂರ್ಯ ಮತ್ತು ಚಂದ್ರರು ಎಷ್ಟು ಕಾಲದಿಂದ ಇದ್ದಾರೆ ಎಂದು ನಿಮಗೆ ತಿಳಿದಿದೆಯೇ?

 ಬ್ರಯಾನ್: ಇಲ್ಲ, ಆ ವಿಷಯದ ಬಗ್ಗೆ ನನ್ನ ಬಳಿ ಯಾವುದೇ ಪುರಾವೆಗಳಿವೆ ಇಲ್ಲ.

 ಡಾರೋ: ಸೂರ್ಯನನ್ನು ನಾಲ್ಕನೇ ದಿನದಲ್ಲಿ ಸೃಷ್ಟಿಸಲಾಗಿದೆ  ಎಂದು ನೀವು ನಂಬುತ್ತೀರಾ?

 ಬ್ರಯಾನ್: ಹೌದು.

 ಡಾರೋ: ಸೂರ್ಯನನ್ನು ಸೃಷ್ಟಿಸುವ ಹಿಂದೆ ವಿಶ್ವದ  ಮೊದಲ ಮೂರು ದಿನಗಳನ್ನು ದಿನಗಳಾಗಿ ಹೇಗೆ ವಿಂಗಡಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ?

 ಬ್ರಿಯಾನ್: ದಿನವು ಒಂದು ಅವಧಿಯಾಗಿತ್ತು ಎಂದು ನಾನು ನಂಬುತ್ತೇನೆ .

 ಡಾರೋ: ಒಂದು ಅವಧಿ?

 ಬ್ರಿಯಾನ್: ಹೌದು, ಬೈಬಲ್ ಹೇಳುವಂತೆ, “ಒಂದು ದಿನವು ಸಾವಿರ ವರ್ಷಗಳಂತೆ ಮತ್ತು ಸಾವಿರ ವರ್ಷಗಳು ಒಂದು ದಿನದಂತೆ.”

 ಡಾರೋ: ನಂತರ, ಬೈಬಲ್ “ಬೆಳಗ್ಗೆ ಮತ್ತು ಸಂಜೆ ಮೊದಲ ದಿನವಾಗಿತ್ತು” ಮತ್ತು “ಬೆಳಗ್ಗೆ ಮತ್ತು ಸಂಜೆ ಎರಡನೇ ದಿನವಾಗಿತ್ತು” ಎಂದು ಹೇಳಿದಾಗ, ಅದು ಒಂದು ಅವಧಿ, ಒಂದು ಅವಧಿಯನ್ನು ಅರ್ಥೈಸುತ್ತದೆ, ಅಲ್ಲವೇ?

 ಬ್ರಿಯಾನ್: ಹೌದು ಒಂದು ಅವಧಿಯನ್ನು ಅರ್ಥೈಸುತ್ತದೆ.

 ಡಾರೋ: ಅವು ಭೂವೈಜ್ಞಾನಿಕ ಅವಧಿಗಳೆಂದು ನೀವು ಭಾವಿಸುತ್ತೀರಾ?

 ಬ್ರಿಯಾನ್: ಭೂವಿಜ್ಞಾನದ ಅಂಗೀಕೃತ ಸಿದ್ಧಾಂತದ ಪ್ರಕಾರ ಅಲ್ಲ.

(ಸೃಷ್ಟಿಯ “ದಿನಗಳು” ದೀರ್ಘ ಅವಧಿಗಳಾಗಿದ್ದವು ಎಂದು ಬ್ರಯಾನ್ ಸೂಚಿಸಿದರೂ ಅವುಗಳನ್ನು ವಿಜ್ಞಾನದಿಂದ ಗುರುತಿಸಲ್ಪಟ್ಟ ಭೌಗೋಳಿಕ ಅವಧಿಗಳೊಂದಿಗೆ ಸಮೀಕರಿಸಲು ನಿರಾಕರಿಸುತ್ತಾರೆ. ಬೈಬಲ್‌ನ ಅಕ್ಷರಶಃ ವ್ಯಾಖ್ಯಾನವು ವೈಜ್ಞಾನಿಕ ತಿಳುವಳಿಕೆಯಿಂದ ಬೆಂಬಲಿತವಾಗಿಲ್ಲ ಎಂದು ತೋರಿಸುವುದು ಡಾರೋ ಅವರ ಉದ್ದೇಶವಾಗಿತ್ತು.)

 ಡಾರೋ: “ಭೂಮಿಗೆ ಎಷ್ಟು ವಯಸ್ಸಾಗಿದೆ ಎಂದು ನಿಮಗೆ ತಿಳಿದಿದೆಯೇ?”

ಬ್ರಯಾನ್ : ನಾನು ಭೂವಿಜ್ಞಾನವನ್ನು ಹೆಚ್ಚು ಅಧ್ಯಯನ ಮಾಡಿಲ್ಲ…. ಅದಕ್ಕಿಂತ ಹೆಚ್ಚು ಮಹತ್ವ ಎಂದು ನಾನು ಭಾವಿಸಿದ ವಿಷಯಗಳಲ್ಲಿ ನಾನು ತುಂಬಾ ಕಾರ್ಯನಿರತನಾಗಿದ್ದೆ.”

ಡಾರೋ: “ಹಗಲನ್ನು ಹೆಚ್ಚಿಸುವ ಉದ್ದೇಶದಿಂದ ಸೂರ್ಯನು ಸ್ಥಿರವಾಗಿ ನಿಲ್ಲಬೇಕೆಂದು ಜೋಶುವಾ ಆಜ್ಞಾಪಿಸಿದನೆಂದು ಬೈಬಲ್ ಹೇಳುತ್ತದೆ, ಅಲ್ಲವೇ, ಮತ್ತು ನೀವು ಅದನ್ನು ನಂಬುತ್ತೀರಿ.”

ಬ್ರಯಾನ್: ಹೌದು 

ಡಾರೋ: ” ಭೂಮಿ ಸ್ಥಿರವಾಗಿದ್ದರೆ ಏನಾಗುತ್ತಿತ್ತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?”

ಬ್ರಯಾನ್: ಇಲ್ಲ, ಏನಾದರೂ ಆದರೆ ದೇವರು ಅದನ್ನು ನೋಡಿಕೊಂಡಿರುತ್ತಾನೆ ಎಂದು ನನ್ನ ನಂಬಿಕೆ ಹೀಗೆ ವಾದ ವಿವಾದಗಳು ನಡೆಯುತ್ತಾ ಕಡೆಯಲ್ಲಿ “ಬ್ರಯಾನ್: “ಮಾನ್ಯರೇ, ನಾನು ಈ ಸಾಕ್ಷ್ಯವನ್ನು ಕೊನೆಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ. ಬೈಬಲ್ ಅನ್ನು ನಿಂದಿಸುವುದು  ಡಾರೋ ಅವರ ಏಕೈಕ ಉದ್ದೇಶವಾಗಿದೆ,.. ಈ ಮನುಷ್ಯ, ದೇವರು ಇಲ್ಲ ಎಂದು ನಂಬುವವನು, ಟೆನ್ನೆಸ್ಸೀಯಲ್ಲಿನ ನ್ಯಾಯಾಲಯವನ್ನು ಬಳಸಲು ಪ್ರಯತ್ನಿಸುತ್ತಿದ್ದಾನೆ.

“ಡಾರೋ: “ನಿಮ್ಮ ಹೇಳಿಕೆಗೆ ನಾನು ಆಕ್ಷೇಪಿಸುತ್ತೇನೆ.. ನಿಮ್ಮ ಮೂರ್ಖ ಕಲ್ಪನೆಗಳ ಬಗ್ಗೆ ಮಾತ್ರ ನಾನು ನಿಮ್ಮನ್ನು ಪರೀಕ್ಷಿಸುತ್ತಿದ್ದೇನೆ.” 

(ಬ್ರಯಾನ್ ಈ ವಿಚಾರಣೆಯನ್ನು ನೈತಿಕ ಯುದ್ಧ ಎಂದು ವರ್ಣಿಸಿದರು )

ಬ್ರಯಾನ್: “ಈ ಮೊಕದ್ದಮೆಯು ವಿಜ್ಞಾನದ ಅಪನಂಬಿಕೆ ಮತ್ತು ಕ್ರಿಶ್ಚಿಯನ್ ನಂಬಿಕೆಯ ನಡುವಿನ ಯುದ್ಧದ ಪ್ರಮಾಣವನ್ನು ಪಡೆದುಕೊಂಡಿದೆ. 

ಡಾರೋ: “ನೀವು ಇಂದು ವಿಕಾಸವಾದದಂತಹ ವಿಷಯವನ್ನು ತೆಗೆದುಕೊಂಡು ಅದನ್ನು ಸಾರ್ವಜನಿಕ ಶಾಲೆಗಳಲ್ಲಿ ಬೋಧಿಸುವುದನ್ನು ಅಪರಾಧವೆಂದು ಪರಿಗಣಿಸಿದರೆ, ನಾಳೆ ನೀವು ಅದನ್ನು ಖಾಸಗಿ ಶಾಲೆಗಳಲ್ಲಿ ಬೋಧಿಸುವುದನ್ನು ಅಪರಾಧವೆಂದು ಪರಿಗಣಿಸಬಹುದು, ಮತ್ತು ಮುಂದಿನ ವರ್ಷ ಸೂರ್ಯನ ಸುತ್ತ ಭೂಮಿ ಸುತ್ತುವ ಕೋಪರ್ನಿಕನ್ ಸಿದ್ಧಾಂತವನ್ನು ಬೋಧಿಸುವುದನ್ನು ನೀವು ನಿಷೇಧಿಸಬಹುದು, ಮತ್ತು ಹೀಗೆ ನೀವು ಅಂತಿಮವಾಗಿ ಇಡೀ ವೈಜ್ಞಾನಿಕ ಜ್ಞಾನವನ್ನು ಕಾನೂನಿನಿಂದ ಹೊರಗಿಡುತ್ತೀರಿ (ಈ ವಿಚಾರಣೆಯನ್ನು ಆಧರಿಸಿ  ರಚಿಸಿದ ‘ಇನಹೆ ರಿಟ ದ ವಿಂಡ್‘ ಎಂಬ ನಾಟಕ/ಸಿನೆಮಾ ಕೂಡ ಇದನ್ನೇ ಒತ್ತಿ ಹೇಳುತ್ತದೆ. ಅದರಲ್ಲಿ ಡಾರ್ವಿನರ ಪರ ವಾದಿಸಿದ ವಕೀಲರು “ ವಿಧಾತನಿಗೆ ಬೇಕಾದರೆ ಒಂದು ಕಲ್ಲನ್ನು ಕೂಡ ಯೋಚಿಸುವಂತೆ ಮಾಡಬಲ್ಲ ಎನ್ನುವ ನೀವು ಈ  ಶಿಕ್ಷಕನಿಗೂ ವಿಧಾತ ಅದೇ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನಲ್ಲವೇ” ಎಂದು ಪ್ರಶ್ನಿಸುತ್ತಾರೆ) 

ಡಾರೋ ಎಷ್ಟೇ ವಾದಿಸಿದರೂ ಧಾರ್ಮಿಕ ಪ್ರವೃತ್ತಿಯ ಆ ಸಮುದಾಯದ ವ್ಯಕ್ತಿಗಳು ಡಾರ್ವಿನ್ ವಿಕಾಸವಾದವನ್ನು ಬೋಧಿಸಿದ್ದ ಸ್ಕೋಪ್ಸ್ ರಿಗೆ ಜುಲ್ಮಾನೆ ವಿಧಿಸಿದರು. ಯಾವ ಧರ್ಮಗ್ರಂಥವನ್ನೂ ಅಕ್ಷರಶಃ: ನಂಬಬಾರದು ಮತ್ತು ವಿಜ್ಞಾನದ ಎಷ್ಟೋ ಪ್ರಶ್ನೆಗಳಿಗೆ ಆ ಗ್ರಂಥಗಳಲ್ಲಿ ಉತ್ತರವಿರುವುದಿಲ್ಲ ಎಂಬುದು ಡಾರೋರ ವಾದದ ಮುಖ್ಯಾಂಶ. (ಚಿತ್ರದಲ್ಲಿ ವಕೀಲರಾದ ಬ್ರಯಾನ್ ಮತ್ತು ಡಾರೋ ಅವರನ್ನು ತೋರಿಸಿದೆ) 

‍ಲೇಖಕರು Admin

9 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading