ಸೋನಾ ಸಹಾ ಹಾಗೇ..

ಜಿ ಎನ್‌ ಮೋಹನ್‌

ಮೊನ್ನೆ ಕಲಾವಿದ ದಂಪತಿಗಳಾದ ಎಂ ಜಿ ಕಜೆ ಹಾಗೂ ನಳಿನಿ ಕಜೆ ದಂಪತಿಗಳ ‘ಹಸೆಮನೆ’ಯ ಬಾಗಿಲು ತಟ್ಟಿದೆ. ಹಾಗೆ ಬಾಗಿಲು ತಟ್ಟಿದ್ದೇ ಕಳೆದ ಹಲವು ವರ್ಷಗಳಿಂದ ಆಡದೆ ಉಳಿದಿದ್ದ ಮಾತುಗಳನ್ನು ಹಂಚಿಕೊಳ್ಳಲು. 

ಹಾಗೆ ಮಾತನಾಡುತ್ತಿರುವಾಗ ಮೋಹನ್ ಸೋನಾಗೆ ಇತ್ತೀಚೆಗೆ ಆರೋಗ್ಯ ಏನೇನೂ ಸರಿ ಇಲ್ಲ ಎಂದರು. ನಾನು ಗಂಭೀರನಾದೆ. ಕಜೆ ದಂಪತಿಗಳೂ ನಿಟ್ಟುಸಿರಿಟ್ಟರು. ಏಕೆಂದರೆ ಸೋನಾ ನಮ್ಮ ಮೂವರನ್ನೂ ಆವರಿಸಿದ್ದ ಆತ್ಮೀಯ.

ಹಾಗೆ ಮಾತಾಡಿ ಬಂದು ಒಂದು ದಿನವೂ ಕಳೆದಿಲ್ಲ ‘ಮೋಹನ್ ಸೋನಾ ಇನ್ನಿಲ್ಲ’ ಎನ್ನುವ ಸುದ್ದಿ. 

‘ಮಾತು ಬೆಳ್ಳಿ ಮೌನ ಬಂಗಾರ’ ಅನ್ನುತ್ತಾರಲ್ಲ ಅಂತೆಯೇ ಅವರು ‘ಸೋನಾ’. ಬರೀ ಮುಗುಳ್ನಗುತ್ತಲೇ ಸಾಕಷ್ಟು ಹೇಳಿಬಿಡುತ್ತಿದ್ದ ವ್ಯಕ್ತಿ. ಕುಂಚ ಹಿಡಿದು ಕುಳಿತರಂತೂ ತದೇಕ ಧ್ಯಾನ. ಸೋನಾರದ್ದೇ ಎನ್ನುವ ಒಂದಷ್ಟು ಬಣ್ಣಗಳಿದ್ದವು. ಅದನ್ನು ಯಾರು ನೋಡಿದರೂ ಇದು ಸೋನಾರದ್ದೇ ಎಂದು ಹೇಳಿಬಿಡುವಷ್ಟು ಆ ಬಣ್ಣಗಳನ್ನು ಅವರು ಒಲಿಸಿಕೊಂಡಿದ್ದರು. ಅವರ ರೇಖೆ, ಅಕ್ಷರ ಶೈಲಿಯೂ ಅಷ್ಟೇ ಸೋನಾರ ಸಿಗ್ನೇಚರ್ ಟ್ಯೂನ್ ಇದ್ದ ಹಾಗಿತ್ತು.

ಪುತ್ತೂರಿನ ಬಾಲವನದಲ್ಲಿ ಶಿವರಾಮ ಕಾರಂತರ ಜೊತೆ ಮಾತನಾಡುತ್ತಾ ಕುಳಿತಿದ್ದಾಗ ಸಿಕ್ಕವರು ಸೋನಾ. ಹಾಗೆ ಅವರು ಸಿಗುವುದಕ್ಕೂ ಕಾರಣ ಇತ್ತು. ಕಾರಂತರು ಮಕ್ಕಳನ್ನೆಲ್ಲಾ ಗುಡ್ಡೆ ಹಾಕಿಕೊಂಡು ಮಾತನಾಡುತ್ತ ಕುಳಿತಿದ್ದರು. ಅವರ ಹಿಂದೆ ಆಳೆತ್ತರದಲ್ಲಿ ಒಂದು ಪೇಂಟಿಂಗ್. ಅದರಲ್ಲೂ ಅಜ್ಜ ಕಾರಂತ ಮಕ್ಕಳೊಂದಿಗೆ ಮಾತಿನಲ್ಲಿ ತಲ್ಲೀನರಾಗಿದ್ದರು. 

ಅದು ಎಷ್ಟು ಚೆನ್ನಾಗಿ ಕಾರಂತರ ಲೋಕವನ್ನು ಕಟ್ಟಿಕೊಟ್ಟಿತ್ತು ಎಂದರೆ ನಾನು ಕಾರಂತರನ್ನು ‘ಕನ್ನಡಿಯಲ್ಲಿ ನೋಡಿ ನೀವು ಚೆಂದ ಕಾಣಿಸುತ್ತೀರಿ’ ಎಂದಿದ್ದೆ. ಕಾರಂತರು ಹಿಂದಿರುಗಿ ನೋಡಿದಾಗ ಅಲ್ಲಿದ್ದದ್ದು ಪೇಂಟಿಂಗ್. ನಕ್ಕು ಮೋಹನ್ ಸೋನಾರನ್ನು ಕರೆದು ‘ಈತನೇ ಆ ಪೇಂಟಿಂಗ್ ಮಾಡಿದ್ದು’ ಎಂದು ಪರಿಚಯಿಸಿದರು.

ಅಂದು ಕೈಕುಲುಕಿದ ನಂತರ ನಮ್ಮಿಬ್ಬರ ಸ್ನೇಹಕ್ಕೆ ಮುಪ್ಪು ಬರಲೇ ಇಲ್ಲ. ಬಾಲವನದಲ್ಲಿ ಕುಳಿತೇ ಸೋನಾ ತಾವು ಹೇಗೆ ತಮ್ಮ ಇಡೀ ಗ್ರಾಮವನ್ನೇ ಒಂದು ಬಯಲು ಚಿತ್ರಾಲಯವಾಗಿಸಬೇಕೆಂದಿದ್ದೇನೆ ಎಂಬ ಕನಸನ್ನು ನನ್ನ ಮುಂದೆ ಹರಡಿದ್ದರು. ಅರೆ! ಒಂದು ಗ್ರಾಮವೇ ಪೇಂಟಿಂಗ್ ಆಗಿ ಬದಲಾಗುವುದು ಎಂದರೆ.. 

ನನ್ನ ಮಟ್ಟಿಗಂತೂ ಅದು ಆವರೆಗೆ ಕಂಡು ಕೇಳರಿಯದ ಸಂಗತಿ. ಹಾಗಾಗಿ ನಾನು ಎದ್ದು ನಿಂತೇಬಿಟ್ಟೆ. ‘ನಡೆಯಿರಿ ನಾನೂ ಸೇರುತ್ತೇನೆ ಅದೇನು ಬೇಕೋ ಮಾಡೇಬಿಡೋಣ’ ಎಂದೆ. ನನ್ನ ಸಹಾಯವೇನೂ ಅವರಿಗೆ ಬೇಕಾಗಿರಲಿಲ್ಲ. ಆ ವೇಳೆಗಾಗಲೇ ಅವರ ಜೊತೆ ದೊಡ್ಡ ದಂಡಿತ್ತು. ಯೋಜನೆಯೂ ಸ್ಪಷ್ಟವಿತ್ತು. ನಾಡಿನ ಎಲ್ಲೆಡೆಯಿಂದ ಬರಲು ಕಲಾವಿದರೂ ಸಜ್ಜಾಗಿದ್ದರು. 

ಇದ್ದ ಕೊರತೆಯೇ ಹಣದ್ದು. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಫೋನಾಯಿಸಿದೆ. ಒಂದು ಫೋನ್ ನಲ್ಲಿ ಯೋಜನೆ ಅರ್ಥ ಮಾಡಿಕೊಳ್ಳುವ ನಿರ್ದೇಶಕರು ಆಗ ಇದ್ದರು. ಹಾಗಾಗಿ ಸುಮಾರು 60 ಸಾವಿರ ರೂ ಮಂಜೂರಾಯಿತು. 

ಅಷ್ಟಕ್ಕೇ ಸಮಾಧಾನವಾಗಲಿಲ್ಲ. ನಾನು ಸೋನಾರಿಗೆ ಇದೇ ನೆಪದಲ್ಲಿ ದಿನಾ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮವಿದ್ದರೆ ಚೆನ್ನಾಗಿರುತ್ತದೆ ಅಲ್ಲವೇ ಎಂದೆ. ಅವರದ್ದು ಮೊದಲೇ ಮಿನುಗುವ ಕಣ್ಣುಗಳು. ಈ ಬಾರಿ ಹೆಚ್ಚೆ ಮಿನುಗಿತು. ನಾನು ಎಲ್ಲಾ ಅಕಾಡೆಮಿಗಳನ್ನು ಸಂಪರ್ಕಿಸಿದೆ. ಯಾರೂ ಇಲ್ಲ ಎನ್ನಲಿಲ್ಲ. 

ಆಗ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಪ್ಪಣ್ಣ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಗ ತಾನೇ ರೂಪುಗೊಂಡಿದ್ದ ಬಿ ಜಯಶ್ರೀ ನಿರ್ದೇಶನದ ‘ಲಕ್ಷಾಪತಿ ರಾಜನ ಕಥೆ’ಯನ್ನು ಕಳಿಸಿಕೊಟ್ಟರು. ಅದೊಂದು ಮರೆಯಲಾಗದ ಅನುಭವ ನನಗೂ, ಸೋನಾರಿಗೂ, ಸೋಣಂಗೇರಿಯ ಊರಿನವರಿಗೂ. 

ಸೋಣಂಗೇರಿಯ ಶಾಲೆಯ ಬಯಲಿನಲ್ಲಿ ನಾಟಕ ಪ್ರದರ್ಶನ. ಲಕ್ಷಾಪತಿ ರಾಜನ ಕಥೆಯಲ್ಲಿ ಮರವೇ ನಾಟಕದುದ್ದಕ್ಕೂ ಆವರಿಸಿಕೊಳ್ಳುತ್ತದೆ. ಜಯಶ್ರೀ ಅದುವರೆಗೂ ಬಳಸುತ್ತಿದ್ದ ಮರದ ತಂತ್ರವನ್ನು ಕೈಬಿಟ್ಟರು. ಬದಲಿಗೆ ಶಾಲೆಯ ಅಂಗಳದಲ್ಲಿ ಇದ್ದ ಮರವನ್ನೇ ನಾಟಕದ ಪಾತ್ರ ಮಾಡಿಬಿಟ್ಟರು. 

ಆಹಾ.. ಅದರಿಂದ ಹೊಮ್ಮಿದ ಪಾತ್ರಗಳೇನು.. ಮರವೇ ಅಭಿನಯಿಸುತ್ತಿದೆ ಎನ್ನುವಂತೆ ಎಲ್ಲರಿಗೂ ಅನಿಸಿದ್ದೇನು.. ಚಂದ ಅನುಭವ 

ಸೋಣಂಗೇರಿಯ ಮೋಹನ್ ಸೋನಾರ ಮನೆಯಂತೂ ನಮಗೆ ಅಡ್ಡೆಯಾಗಿ ಹೋಗಿತ್ತು. ಅವರ ಮನೆಯೇ ಒಂದು ಸುಂದರ ಅನುಭವ. ಹಳ್ಳ ಇಳಿದು ಮಚಾನ್ ದಾಟಿ ತೊರೆಗೆ ಅಡ್ಡವಾಗಿ ಕಟ್ಟಿದ್ದ ಸೇತುವೆ ದಾಟಿ ಮತ್ತೆ ನಾಲ್ಕು ಹೆಜ್ಜೆ ಹತ್ತಿ ಅವರ ಮನೆ ಸೇರಿಕೊಳ್ಳಬೇಕಿತ್ತು. ನಾನಂತೂ ಅವರ ಮಚಾನ್ ಹತ್ತಿ ಕೂತರೆ ಅಲ್ಲಿಯೇ ಊಟ, ಅಲ್ಲಿಯೇ ನಿದ್ದೆ ಎನ್ನುವಂತಾಗಿದ್ದೆ. 

ಸುಳ್ಯದ ಅನೇಕ ಸಾಹಿತಿಗಳು, ಕಲಾವಿದರು ನನ್ನ ಹೃದಯಕ್ಕೆ ಹತ್ತಿರವಾಗಿದ್ದು ಇವರ ಮನೆಯಂಗಳದಲ್ಲಿಯೇ. ಬಿ ವಿ ಕಾರಂತರ ಜೊತೆ ಇವರ ಅಂಗಳದಲ್ಲಿ ಗಂಟೆಗಟ್ಟಲೆ ಹರಟಿದ್ದೇನೆ. ಇದು ನನ್ನದೇ ಮನೆಯೆನ್ನುವಂತೆ ಸಂಭ್ರಮಿಸಲು ಅವರ ವಿಶಾಲ ಹೃದಯವೇ ಸಾಕ್ಷಿ .

ಮೋಹನ್ ಸೋನಾ ಮುಖಪುಟಗಳದ್ದೇ ಇನ್ನೊಂದು ರೀತಿಯ ಆಕರ್ಷಣೆ. ಪಾಚಿ ಹಸಿರು ಅವರಿಗಿಷ್ಟ. ಅವರ ಎಲ್ಲಾ ಕೃತಿಗಳಲ್ಲಿ ನೀವು ಅದರ ಛಾಯೆ ನೋಡಬಹುದು. ನಾನು ಎಕ್ಕುಂಡಿ ಅವರನ್ನು ಕುರಿತ ‘ಎಕ್ಕುಂಡಿ ನಮನ’ ತಂದಾಗ ಅವರದ್ದೇ ಮುಖಪುಟ. ಬಹುಷಃ ಹಸಿರಿಲ್ಲದ ಒಂದೇ ಕವರ್ ಅದಿರಬೇಕು. ಸೋನಾ ಸದ್ದಿಲ್ಲದೇ ಸಾಕಷ್ಟು ಸಾಧಿಸಿದವರು. ರಂಗಭೂಮಿ, ಕಲೆ, ಶಿಲ್ಪ, ಬರವಣಿಗೆ, ಸಂಘಟನೆ ಹೀಗೆ..

ಸೋನಾರಲ್ಲಿ ನಂಜೇ ಇರಲಿಲ್ಲ, ಹಾಗಾಗಿ ಸಂತೋಷವಾಗಿದ್ದರು. 

ಮೊನ್ನೆ ನಳಿನಿ ಕಜೆಗೆ ತಮಾಷೆ ಮಾಡುತ್ತಿದ್ದೆ. ನೀವು ದೇವರಿಗೆ ಒಂದು ಸೆಂಟಿ ಮೀಟರ್ ಅಷ್ಟೇ ಕಡಿಮೆ ಅಂತ 

ಸೋನಾ ಸಹಾ ಹಾಗೇ..

‍ಲೇಖಕರು Admin

October 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: