ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸೋತು ಗೆದ್ದವನ ಬದುಕಿನ ಪಥ' – ಭಾನುವಾರದ ಕಥೆ

– ತಿರುಪತಿ ಭಂಗಿ

ಅವ್ನ ಹಣೆಬರಹ ಇದ್ದಾಂಗ ಅಕೈತಿ, ಹುಟ್ಟಿಸಿದಾ ಶಿವಾ ಹುಲ್ಲಾ ಮೇಸಾಂಗಿಲ್ಲ. ನಿಂವ ಅವ್ನ ಮ್ಯಾಲ ಕೈ ಎತ್ತಾಕ ಹೋಗಬ್ಯಾಡ್ರೀ ನಿಮ್ಮ ಕೈ ಮುಗಿತೀನ. ಭಾಗೀರಥೀ ಬೊರಾಡಿ ಒಂದ ಸಮ್ನ ಗಂಡನ ಕಾಲ ಮ್ಯಾಲ ಬಿದ್ದ ಹೋಳ್ಯಾಡಾಕತ್ತಿದ್ಳು. ಸಿಟ್ಟ ನೆತ್ತಗೇರಿದಂಗಾಗಿ ಮಾರುದ್ದ ಲಕ್ಕಿ ಜಬರ ಕೈಯಾಗ ಹಿಡಕೊಂಡ ಗುರುಪಾದ ‘ಚಪ್ ಚಪ್’ ಬತ್ತಾ ತಳಸಿದಾಂಗ ಕಲ್ಲಾನ ಕುಂಡಿಮ್ಯಾಲ ದುಬ್ಬದಾಗ , ಅಂಗಾಲಗೆ ಸಂದನೋಡಿ ನೋಡಿ ಲಗಾಸ್ತಿದ್ದ. “ಸತ್ತ್ ನೋ ಯಪ್ಪಾ’ ಕಾಪಾಡ್ರೋ ಸಂಕಟಾ ತಡಿಲಾರ್ದಕ್ಕ ವಿಲಿ ವಿಲಿ ಒದ್ದಾಡಾಕತ್ತಿದ್ದ ಕಲ್ಲ. ಬಿಡ್ತಿರೋ ಅವ್ನ ಕೊಂದ ಬಿಡ್ತಿರೋ ನಿಮ್ಗ ಕರುಣ್ಯಾ ಗಿರುಣ್ಯಾ ಇಲ್ಲನ್ನ ಅಂತ ಬಾಗಿರಥಿ ಬಿಡಸಾಕ ಬಾಳ ಗುದ್ದಾಡಿತಿದ್ಳ . ಮಾಸ್ತರ ಜನಾನ ಹಿಂಗ ನಿಂವ. ನಿಮ್ಮ ಮಕ್ಕಳಿರ್ಲಿ ಮಂದಿಮಕ್ಕಳಿರ್ಲಿ ತೆಪ್ಪ ಮಾಡಿದ್ರ ಬಾಳ ಸಿಡಕ ಮಾಡ್ತಿರಿ. ಮಕ್ಕಳೆನ ತಪ್ಪಮಾಡ್ಯಾವು, ಯಾವ ತಪ್ಪಿಗೆ ಯಾವ ಶಿಕ್ಷಾ ಕೊಡಬೇಕು ಅನ್ನು ಜ್ಞಾನ ಇರಾಂಗಿಲ್ಲ. ಮಕ್ಕಳಿಗೆ ಇಂದ್ರೀಗಳ ಬಗ್ಗೆ ಪಾಠಾ ಹೇಳಿತಿರಿ, ಅವು ಬಾಳ ಸೂಕ್ಷ ಅಂತಾನೂ, ಅಲ್ಲಿಗೆ ಪೆಟ್ಟ ಬೀಳಬಾರ್ದು, ಒಂದವ್ಯಾಳೆ ಬಿತ್ತ ಅಂತ ಇಟ್ಟಗೋ ತೆಲ್ಯಾಗ ಇರೋ ಮೆದಳಿಗಿ ಪೆಟ್ಟ ಆಗಿ ಹುಚ್ಚಾಕ್ಕರ ಅಂತ ಇಡೀ ದಿನಾ ಕಲಸ್ತಿರಿ. ಆದ್ರ ಮತ್ತ ನಿಂವ ಬಡಿತಿರಿ.
‘ಬದನಿಕಾಯಿ ತಿನಬ್ಯಾಡ ಅಂತ ಪುರಾಣ ಹೇಳಿ’ ಪುರಾಣ ಮುಗದಮ್ಯಾಲ ಪಂಡಿತ ಮನಿಗಿ ಹ್ವಾದವ್ನ ಹೆಂತಿಗೆ ಬದನಿಕಾಯ್ ಪಲ್ಲ್ಯಾ ಯಾಕ ಮಾಡಿಲ್ಲ ಅಂತ ಕೇಳಿದಾಂಗ ಆತ ನಿಮ್ಮದೂ ಅನಕೋತ ಬಾಗಿರಥಿ ಮುಗಿನ್ಯಾಗಿನ ಸಿಂಬಳ ಜೋಡಿ ಏಕಾದ ಕಣ್ಣೀರ ಸೀರಿ ಸೆರ್ಗನಿಂದ ತೀಡ್ಕೊಂಡ, ಗಂಡನ ಕೈಯಾಗ ಇದ್ದ ಲಕ್ಕಿ ಜಬರ ಕಸದ ಒಗ್ಯಾಕ ಹಂಸಾಡ್ತಿದ್ದಳು. ಗುರಪಾದಗ ಮತ್ತ ಬಾಗಿರಥಿ ಮಾತ ಉರಿವು ಬೆಂಕ್ಯಾಗ ತುಪ್ಪಾ ಸುರದಂಗ ಆತು. ‘ಇನ್ನ ಅಂವನ ಮ್ಯಾಲ ಒಂದ ಹೆಟಾ ಹೊಡದ್ರ ನನ್ನಮ್ಯಾಲ ಆನಿ’ ಅಂದವ್ಳ ಬಾಗಿರಥಿ ಗಂಡನ ಕೈಯಾನ ಲಕ್ಕಿ ಜಬರ ಕಸದ ದೂರತ ವಗದ್ಳು. ಆನಿ ಹಾಕ್ಕೋಡಾಳಂತೋ ಬಡುದ ಸಾಕಾಗಿಯೋ ಗುರಪಾದ ಬಡೂದ ನಿಲ್ಲಿಸಿದ. ಬಾಗಿರಥಿ ಕಲ್ಲ್ಯಾನ ಮೈ ಮ್ಯಾಲೆಲ್ಲ ಕೈಯಾಡಿಸಿ ‘ಸುಮ್ಮಾಗ’ ಅಂತ ರಮಸಾಕ ಹ್ವಾದ್ರ. ‘ಅಯ್ಯೋ ಅವ್ವಾ, ಸತ್ನೋ ಯಪ್ಪಾ’ ಅಂತ ತಾಯಿ ಕೈ ತಡದ ಕೊಸಕೊಳ್ಳಾಕ ಯತ್ನಿಸಿದ. ಕಲ್ಲ್ಯಾನ ಮೈಯಾಗ ಬಾರ ಎದ್ದ ದೊಡ್ಡ ದೊಡ್ಡ ಗಾದರಿ ಯದ್ದಿದು. ಹೆಂತಿಂತಾ ಬಾರ ಮೂಡ್ಯಾವ ಅನಕೊತ ಕಣ್ಣೀರ ಹಾಕೊಂತ ಅಡಗಿ ಮನಿಗಿ ಹೋಗಿ ಅರಸನಾ ಗಾಂದೆಣ್ಣಿ ತಂದ ಮೈ ತುಂಬ ಮೆಲ್ಲಕ ಹಚ್ಚಿದಾಗ ಕಲ್ಲ್ಯಾಗ ಹ್ವಾದ ಉಸಲ ಮತ್ತ ಬಂದಾಂಗಾತ.
ನೀ ಕೊಟ್ಟ ಸಲಿಗೆಯಿಂದ, ಈ ಮಗಾ ಹಿಂಗಾಗ್ಯಾನ, ಮುದ್ದ ಮಾಡಾಕೊಂದ ಲಿಮಿಟ ಇರ್ತೈತಿ. ಮೊದಲ ನಿಂಗ ಬುದ್ದಿಲ್ಲ. ಎನ್ಮಾಡುದೈತಿ ಅಂತ ಗುರುಪಾದ ಹೆಂಡತಿ ಮ್ಯಾಲ ರೇಗಾಡಿದ. ‘ಅನ್ನರ್ರೀ ಅನ್ನೀ.. ನಿಂವ ಹೇಳಿದ್ದ ಕರೆ ಐತಿ’ . ನಾ ಕೊಟ್ಟ ಸಲಿಗಿನ ಅಂವ್ಗ . ಈಗಿನ ಮಕ್ಕಳ ಏನ ಶುದ್ದ ಇರ್ತಾರ ಸಾಲಿ ಕಲ್ಯಾಕ ಬೇಕ ಬ್ಯಾಡಾದ ಸೌಲತ್ತ ಇದ್ರೂ ಸರ್ಯಾಗಿ ಓದಾಂಗಿಲ್ಲ ಬರ್ಯಾಂಗಿಲ್ಲ. ತಂದಿ ತಾಯಿ ಹೇಳಿದ ಮಾತ ಕೇಳು ಮಕ್ಕಳ ಸಿಗೂದ ಬಾಳ ಅಪರೂಪ. ತಾವು ತಿನ್ನುದ ಬಿಟ್ಟ ಮಕ್ಕಳಿಗೆ ಇರ್ಲಿ ಅಂತ ದಿನಾ ಹೆನಗಾಡ್ತಾರ ಸಾಲಾಸೋಲಾ ಮಾಡಿ ಓದಸಬೇಕಂತ ದೊಡ್ಡ ಆಸೆ ಇಡತಾರ ಆದ್ರ ಈ ಮಕ್ಕಳಿಗೆ ಚಲ್ಲಾಟ ಅಕ್ಕೈತಿ. ಇರ್ಲಿ ಬಿಡ್ರಿ ನೀವು ತಿಳದಾರ, ಅಕ್ಷರ ಹೇಳಿಕೊಡು ಮಾಸ್ತರ. ನಿಮ್ಮುಂದ ನಾ ಏನ ಮಾತಾಡಿದ್ರೂ ಅದಕ್ಕ ಬೆಲೆನ ಇಲ್ಲ. ಅದರಾಗ ಇಂವಗೂ ನಾ ಕೊಟ್ಟ ಸಲಿಗೆಂತ ನನ್ನ ಮ್ಯಾಲ ನಿಂವ ರೆಗ್ಯಾಡ್ತಿರಿ. ಅನ್ನರಿ.. ಅನ್ನರಿ, ಯಾಕಂದ್ರ ನಿಮ್ಮ ಮಗನ್ಗೆ, ನಿಮ್ಗ ಮೂರ ಹೊತ್ತ ಬಿಸಿ ಬಿಸಿದ ಮಾಡಿ ಹಾಕಿನಲ್ಲ ಅದಕ್ಕ ನಂಗ ಬುದ್ದಿ ಕಡಿಮ್ಯಾಗೇತಿ, ಮನ್ಯಾಗಿದ್ದ ನುರೆಂಟ ಕೆಲಸಾ ಮಾಡಿ ಮಾಡಿ ನನ್ನ ಕೈ ಸಂವ್ದ ಹ್ವಾದ್ರು ನಿಂವ ನನ್ಗ ಯಾಕಂತ ಕೇಳ್ಬಾಡ್ರೀ , ಯಾಕಂದ್ರ ನಾ ನಿಮ್ಮ ಮನಿ ಜೀತದ ಆಳನೋಡ , ಅಂತ ದುಃಖ್ಖ ದುಃಖಿಸಿ ಬೊರ್ಯಾಡಿ ಅತ್ತ್ಳು. ಎಲ್ಲ ಈ ಮಗನಿಂದ, ಆದದ್ದು, ಚಲೋತಂಗ ಓದಿ ಪಾಸಾಗಿದ್ರ ಇದ್ಯಾಕ ಅಕ್ಕಿತ್ತು. ನನ್ನ ಹಣಿಬರಾ ಕೆಟ್ಟ ಐತಿ. ಆ ಹಾಟ್ಯಾನ ದೇವ್ರ, ನನ್ನ ಹಣಿಬರ್ದಾಗ ಇನ್ನ ಏನೇನ ಬರ್ದಾನೋ ಯಾರ್ಕಂಡಾರ ಅಂತ ಬಾಗಿರಥಿ ‘ಗಳಾಗಳಾ’ ಕಣ್ಣಿರ ಸುರಸ್ಕೋತ ಪಟಾಪಟಾ ಮಾತಾಡೂದ ಕಂಡ ಗುರುಪಾದ ಸುಮ್ನ ಹೆಂಡತಿ ಜೋಡಿ ತಗಲಿಗೆ ಬಿಳುದು ಯಾಕೊ ಸರಿ ಅನಿಸಲಿಲ್ಲ. ಒಂದು ಯಾಡು ಮಾತಡ್ದ ಕೈಯಾಗ ಒಂದ ಬ್ಯಾಗ ಹಿಡಕೊಂದ ನಪಾಸಾದ ಹುಡುಗ ಸಾಲಿಯಿಂದ ಮನಿಗಿ ಬರುವಂಗ ಇವರೂ ಕಾಲಾಗ ಹವಾಯ ಮೆಟಗೊಂದ ಸಾಲಿಗೆ ಹ್ವಾದ್ರು.
ಅಯ್ಯೋ….ಯಪ್ಪೋ, ಸತ್ನೋ ಅಂತ ಕಲ್ಲ ಒಂದ ಮೂಲ್ಯಾಗ ಕುಂತ ಅಳಾಕತ್ತಿದ್ದ. ಕಲ್ಲಾ ನೀ ಯಾಕ ನನ್ನ ಹೊಟ್ಟಿ ಉರಸ್ತಿ, ನಿನಗೇನ ದಾಡ್ಯಾಗಿತ್ತು ಪಾಸಾಗಾಕ, ಕೇಳಿದ್ದ ಕೇಳಿದ್ದ ಪಾಟಿ ಪುಸ್ತಾಕ ಕೊಡಸೈತಿ, ಹೊಸಾ ಹೊಸಾ ಬಟ್ಟಿ ತಂದ ಕೊಟೈತಿ ನಿನಗ ಹಳ್ಳಿ ಸಾಲಿ ಬ್ಯಾಡಂತ ಇಪತ್ತ ಸಾವಿರ ರೂಪಾಯಿ ಕರ್ಚ ಮಾಡಿ ಪ್ಯಾಟಿ ಸಾಲಿಗೆ ಹಾಕಿದ್ರೂ, ನೀ ಹಿಂಗ ಮಾಡ್ಕೊಂಡ ಕುಂತಿ. ಊರಾಗ ನಿಮ್ಮಪ್ಪ ತಲಿ ಎತ್ತಿ ಅಡ್ಡದಾಂಗ ಮಾಡಿಟ್ಟಿ. ಅದಕ್ಕ ಹೊಟ್ಟಿ ಉರದ ಅವ್ರ ನಿನ್ನ ಹಿಂಗ ಬಡಿಬೇಕಾತು. ತಂದಾಕುದು, ಬಂದಾಕುವ ನೂಂವ ನಿಮ್ಮಪ್ಪಗ ಇರೋದಲ್ಲ ಮತ್ತ , ನಿ ಹಿಂಗ ಬಿಡಾಡಿ ದನದ ಗತೆ ಅಡ್ಡಾಡಿ ಹಾಳಾಗಿ ಹೊಕ್ಕಿಯೋ. ಇನ್ನ ಮುಂದರ ಚಲೋ ತಂಗ ಓದಿ ಶ್ಯಾನ್ಯಾ ಅಕ್ಕೀಯೋ ನಿನ್ನ ಸಮಂದ ಮನ್ಯಾಗಿನ ನೆಮ್ಮದೀನ ಹಾಳಾಗಿ ಹೋಗೈತಿ ಕಲ್ಲ್ಯಾನ ಬಾಗೀರಥೀ ಮತ್ತೋಮ್ಮೆ ಮೆಲ್ಲಕ ತರಾಟೆಗೆ ತಗೊಂಡ್ಲು.

‘ ನಾ ಒಬ್ನ ಫೇಲಾಗಿಲ್ಲ ನನ್ನ ಜೋಡಿ ರಗಡ ಮಂದಿ ಪೇಲಾಗ್ಯಾರ’
ಪೆಲಾದ್ರೇನಾತ ಮತ್ತ ಪಾಸಾಗಾಕ ಬರೂದಿಲ್ಲೇನ ಅಪ್ಪಗರಾ ತೀಳಿಬೇಕಿತ್ತು. ಹಂಗ ದನಾ ಬಡದಂಗ ಬಡದ ಅಂತ ಕಲ್ಲ ಮಾತಾಡಿದ್ದು ಬಾಗಿರಥಿಗೆ ಮಗಾ ವ್ಯಂಗವಾಗಿ ತಂದಿಗೇ ಮಾತಾಡಿದಂಗ ಅನಿಸಿ, ಅಪ್ಪಗ ಹಿಂಗ ಅಂತೀ ಏನ ಲೇ ಅಂದವ್ಳ ಮತ್ತ ಯಾಡ ಏಟ ಕಲ್ಲ್ಯಾನ ಕಪಾಳಕ ಇಕ್ಕರ್ಸಿದ್ಳ. ಕೊಲ್ರಿ ಕೊಲ್ರಿ ನನ್ನ ಹುಟ್ಟಿಸಿರೆಲ್ಲ ಅದಕ್ಕ ಕೊಲ್ಲು ಹಕ್ಕುನು ನೀಮ್ಗ ಐತಿ, ಕಲ್ಯಾ ಅಂದ ಮಾತ ಬಾಗಿರಥಿ ಮನಸಿಗಿ ತಾಕ್ತಿ. ನನ್ನ ಸ್ಥಿತಿ ಅಡಕೊತನ್ಯಾಗ ಅಡಕಿ ಸಿಕ್ಕಾಂಗ ಆಗೇತಿ. ಇಂದ ನಿಮ್ಮ ಅಪ್ಪ ಹೊಡದದ್ದು ನಿನ್ನ ಒಳ್ಳೆದಕ್ಕ ನಾಳೆ ನಿ ಓದಿ ದೊಡ್ಡ ಸಾಹೇಬ ಆಗಬೇಕಂತ ಆಸ್ಯಾ ಅವನಕಿಂತ ನನಗ ಬಾಳ ಐತಿ. ಆದ್ರ, ನಿ ನಮ್ಮ ಆಸ್ಯಾನ ಈಗ ಮಣ್ಣಗೂಡ್ಸಿದಿ. ನೀ ಉದ್ದಾರ ಆಗೂದಿಲ್ಲ ಹಿಂಗ ಹಾಳಾಗಿ ಹೊಕ್ಕಿ ಅಂತ ಶಾಪಾ ಹಾಕಿದಳೋ ಬೈದಳೋ ಕಲ್ಲಗ ಅರ್ಥ ಆಗಲಿಲ್ಲ. ಆದ್ರ ಕಲ್ಲ ಮೌನವಾದ.
‘ಬಾಗಿರಥಿ ನಳಾ ಬಂದವ ನೀರ ತುಂಬ್ಕೋರಿ’
ಅಂತ ಮನಿ ಎದರಿರೂ ಮುದಿಕಿ ದನಿಮಾಡಿದಾಗ ಮನ್ಯಾ ಒಂದ ಮುಕ್ಕೂ ನೀರು ಇಲ್ಲದಿರೊದು ನೆನಪಾಗಿ ಕಲ್ಲ್ಯಾನ ಕಥಿ ಅಲ್ಲಿಗ್ಯ ಬಿಟ್ಟ ಅಂವಸ್ರಾಮಾಡಿ ಅಡಗಿ ಮನಿಗಿ ಹ್ವಾದಳ್ಳು. ಹಂಡೇಕ ಉಪ್ಪಾ ನಿಂಬಿ ಹಣ್ಣ ಹಚ್ಚಿ ಗಸಾಗಸಾ ತಿಕ್ಕಿದಳು. ಟಾಕೆದಾಗ ಒಂದ ಚರಗಿಯಷ್ಟ ಇದ್ದ ನೀರ ಚೆಲ್ಲಿ ಅದಕ್ಕೂ ಉಪ್ಪಾ ನಿಂಬಿ ಹಣ್ಣ ಹಚ್ಚಿ ತಿಕ್ಕಿ ಇಟ್ಟ. ಸ್ವಚ್ಚಂಗ ಕೈ ತಕ್ಕೊಂಡ ಕಾಲಿ ಇರೂ ಯರಡ ಪ್ಲಾಸ್ಟಿಕ್ಕ ಕ್ವಡಾ ಹಿಡಕೊಂಡ ನಳದ ಕಡಿ ಹೊಗುವಾಗ ಕಲ್ಲ್ಯಾನ ಕಡಿ ಸಹಜವಾಗಿ ನೋಡಿದ್ಳು. ಕಲ್ಲ ಯುದ್ಧದಲ್ಲಿ ಸೋತ ರಾಜಾನಂಗ ಕಂಬಕ್ಕ ಬೆನ್ನ ಹಚಗೊಂಡ ಕುಂತಿದ್ದ.
ನಳದ ಸುತ್ತಮುತ್ತ ಎಷ್ಟೋ ಕಾಲಿ ಕೊಡಗೊಳು ಬಾಯ್ ತೆರಕೊಂಡ ಕುಂತಿದ್ದು. ಗನಮಕ್ಕಳು, ಹೆನಮಕ್ಕಳು ,ನಾಕಾರ ಮುದಕ್ಯಾರೂ ನೀರಿಗಾಗಿ ಪಾಳೆ ಹಚ್ಚಿದ್ರು. ಬಗಲಾಗ ಮಗನ್ನ ಎತಗೊಂಡ ಕೆಲವಂದಿಷ್ಟ ಹೆಂಗಸುರ ಬಂದಿದ್ರು. ಬಗಲಾಗಲಿಗಿದ್ದ ಕೂಸಗೋಳು ಮಂದಿ ನೋಡಿ ಗಾಬರ್ಯಾಗಿ ರೊಂಯ್ ಅಂತ ಅಳತಿದ್ದು. ‘ಯವ್ವಾ ಮಗನ್ನ ಮನ್ಯಾಗ ಬಿಟ್ಟ ಬರಬಾರ್ದನ’ ಮಂದಿ ಕಣ್ಣ ಹತ್ತಿ ಅದ ಅಳಾಕತ್ತೆತಿ ನೋಡ, ಮನಿಗಿ ಹ್ವಾದಕೀನ ನಾಕ ಮೆನಸಿನ ಕಾಯಿ, ಎರಡ ಕಸಬರ್ಗಿ ಕಡ್ಡಿ ಒಂದೆಡ್ಡ ಉಪ್ಪಿನ ಹಳ್ಳ ತಗೊಂಡ ನೆದರ ತಗಿ. ಇಲ್ಲಂದ್ರ ಮಗು ಅಳುದ ನಿಲ್ಲಸುದಿಲ್ಲ’ ಹಿಂಗ ಒಬ್ಬಾಕಿ ಮುದುಕಿ ಮಗು ಎತಗೊಂಡ ಬಂದ ಹೆಂಗಸಗ ಅಂದಾಗ ನೀರಿಗಿ ಬಂದ ಮಂದಿ ಲಗೂನ ತುಂಬಕೊಂಡ ಹೋಗ ಬೆ ನೀ ಅಮತ ಪಾಳೆ ಬಿಟ್ಟ ಕೊಟ್ಟರು. ನಳದಾಗ ನೀರ ಸಣ್ಣಂಗ ಬರಾಕತ್ತಿದಾಗ ಸುತ್ತಮುತ್ತ ಇದ್ದ ಮಂದಿಗೆ ಗಾಬರಿ ಆತು. ನೀರ ಸಿಗತಾವೋ ಇಲ್ಲೋ ಅಂತ ಬಾಗಿರಥಿನೂ ಅನುಮಾನಿಸಿದ್ಳು. ಪುಣ್ಯಕ್ಕ ಒಬ್ಬ ಗನಮಗಾ ಗುರಪಾದ ಮಾಸ್ತರ ಮನಿಯಾರ ಬಂದಾರ ಪಾಪ ಮಾಸ್ತರ ಆಕಳಷ್ಟ ಸಂಬಾಯಿತರ ಅನಕೊಂಡ ಬಾಗಿರಥಿಗೆ ಪಾಳೆ ಬಿಟ್ಟ ಕೊಟ್ಟಾ ಗಂಡನ ಮ್ಯಾಲ ಜನರಿಗಿರೂ ಪ್ರೀತಿ ನೆನಸುವಷ್ಟಕ ಎರಡು ಕ್ವಡಾ ತುಂಬೀದೂ. ಏನ್ರೀ ಅಕ್ಕೋರ ನಿಮ್ಮ ಮಗಾ ಹತ್ತನೇತೆ ಪೆಲಾಗನಂತ, ಗುರಪಾದ ಮಾಸ್ತರ ಬಾಳ ಕಾಜಿ ತಗೊಂಡಿರ್ಲಿಲ್ಲೆನೋ ಅವನ ಮ್ಯಾಲ. ಅದಕ್ಕ ಹಿಂಗ ಆಗೇತಿ ನಿಮ್ಮಂತಾರ ಮಕ್ಕಳ ಹಿಂಗಾದ್ರ ಕೂಲಿ ನಾಲಿ ಮಾಡಿ ತಿನ್ನು ನಮ್ಮ ಮಕ್ಕಳ ಗತಿ ಹೆಂಗೋ ಎನೋ ಆ ದೇವ್ರ ಬಲ್ಲ ಅಂತ ಮಾರುತೆಪ್ಪ ಮುತ್ಯಾ ಬಾಗಿರಥಿನ ಮೆಲ್ಲಕ ಮಾತಾಡ್ಸಿದ.
ಬಾಗಿರಥಿ ಹಾಂ.. ಹೂಂ.. ಅನದ ತೆಲಿಮ್ಯಾಲೊಂದು ಬಗಲಾಗೊಂದು ಕ್ವಡಾ ಹೊತಗೊಂಡ ಹೊಟಳು ದಾರ್ಯಾ ಒಬ್ಬಾಕಿ ನಳಾ ಹ್ವಾದುವೋ ಅದಾವೋ ರೀ ಅಕ್ಕಾರ ಅಂತ ಕೇಳಿದಾಗ ಬಾಗಿರಥಿಗೆ ಅವಳ ಮಾತ ಕಿಂವಿಗೇ ಹಾಕ್ಕೋಲ್ದ ಹ್ವಾದಳು. ಐ ಅಕ್ಕಾರೂ ಮಾತಾಡ್ಸಿದ್ರೂ ಹಂಗ ಸುಮ್ನ ಹೊಂಟಾರಲ್ಲ ಪಾಪ! ಕ್ವಡಾ ವಜ್ಜಾಗಿರ್ಬೇಕ ಅಂತ ಅಂದಕೊಂಡಳು. ದಾರಿಗೂಂಟ ಕಲ್ಲ್ಯಾಂದ ಚಿಂತಿ. ಮನಿ ಬಾಗಲ ಮುಚಚಿತ್ತು. ಬಾಗಿರಥಿಗೆ ಮತ್ತಷ್ಟ ಗಾಬರ್ಯಾತು. ಕಲ್ಲ ಏನಾರಾ ಹೆಚ್ಚು ಕಡಮಿ ಮಾಡ್ಕೊಂಡನೋ ಏನೋ ಅಂತ ಅನುಮಾನಿಸಿ ಕ್ವಡಾ ನೆಲಕ್ಕ ಕುಕ್ಕರ್ಸಿ ಬಾಗಲಾ ಒತ್ತಿದ್ಲು. ಬಾಗಲಾ ನಿದಾನ್ಕ ತಕ್ಕೊಂತು. ಕಲ್ಲ ಕುಂತ ಜಾಗದಾಗ ನಿದ್ದಿ ಹೊಗಿದ್ದ. ಕಲ್ಲಾನ ಮೊತಿಗೆ ನೀರ ಚಿಮಕಿಸಿದ್ಳು . ಪೆಟ್ಟ ತಿಂದ ಕಲ್ಲಗ ದನೂ ಆದಾಂಗ ಆಗಿ ಒಂದ ನಿದ್ದಿ ಜಂಪ ಹತ್ತಿತ್ತ. ನೀರ ಮೊತಿಮ್ಯಾ ಬೀಳಾನಾ ತನಕ್ನ ಜಿಗದ, ಗಾಬರಿಗೊಂಡ ಮತ್ತ ಕಣ್ಣ ಮುಚ್ಚಿದಾ. ಆಗ ಬಾಗಿರಥಿಗೆ ಸಮಾಧಾನಾ ಆತು.
ಈಗೀನ ಕಲಿಯುಗಾ ಬಾಳ ಸೂಕ್ಷ್ಮ ಆಗೇತಿ ಮಕ್ಕಳ್ನ ಬಡದ್ರೂ ಒಂದ ತಪ್ಪ ಬಿಟ್ಟರೂ ಒಂದ ತಪ್ಪ. ಬಾಳ ಮುದ್ದ ಮಾಡಿದ್ರ ತೆಲಿಮ್ಯಾಲ ಬಂದ ಕುಂದರ್ತಾವ. ಬಾಳ ಗದರಿಸಿದ್ರ ಬಡದ್ರ ಜೀವಾ ಕಳಕ್ಕೊಳ್ಳಾಕ ನಿಲ್ಲತಾವ. ಟಿ.ವಿ. ಪೇಪರದಾಗ ದಿನ ಹಿಂತಾದ ಕೇಳೂದ ಆಗೇತಿ. ಮಗನ ಮ್ಯಾಲ ಒಂದಿನಾನೂ ಕೈ ಮಾಡದ ಪುಣ್ಯಾತ್ಮರು ಇಂದ ದಡೀರಂತ ಕಲ್ಲನ ಬಡದ್ರು ಅದನ ಮನಸ್ಸಿನ್ಯಾಗ ಇಟಗೊಂದ ಏನಾರಾ ಮಾಡಕೊಂಡ್ನೋ ಏನೋ ಅಂತ ಹಳಹಳಿ ಮಾಡಕೊಂಡಳು ಬಾಗಿರಥಿ. ನೀರ ತುಂಬಕೊಂಡ ಬರಾಕ ಹ್ವಾದಾಗ ಮಾರುತೆಪ್ಪ ಆಡಿದ ಮಾತು ಎಷ್ಟೋತನಾ ಬಾಗಿರಥಿ ಮನಸನ್ಯಾಗ ಕೊರ್ಯಾಕತ್ತಿತ್ತು. ಇಂವ ಪಾಸಾಗಿದ್ರ ಯಾರೂ ಯಾಕಂತಿರಲಿಲ್ಲ, ನೂರ ಮಕ್ಕಳಿಗೆ ಅಕ್ಷರ ಕಲಸೂ ದೆವ್ರ ಹಿಗ್ಗಾ ಮುಗ್ಗಾ ತಳಸಿದ. ಮಧಿಗೆ ಇಷ್ಟಮಾತಾಡೂದೇನ ದೊಡ್ಡದಲ್ಲ ಅಂದಕೊಂಡ ಮತ್ತ ಕ್ವಡಾ ತಗೊಂಡ ನಳದ ಕಡೆ ನಡದ್ಳು.
ಮನಿಯಿಂದ ಹ್ವಾದ ಗುರುಪಾದ ಸೀದ ಸಾಲಿಗೆ ಹೋಗಿದ್ದ. ಸಾಲಿ ಅಂಗಳಾದಾಗ ಮಕ್ಕಳು ಹಿಂಡ ಹಿಂಡಾಗಿ ಬಂದ ಜಮಾ ಆದ್ರು. ‘ಸರ್ ಪ್ರಾರ್ಥನಾ ಗಂಟಿ ಬಾರೆಸೇನ್ರಿ’ ಅಂತ ಎಳನೇ ತರಗತಿ ಹುಡುಗನೊಬ್ಬ ಕೇಳಿದ. ಇನ್ನ ಹತ್ತ ನಿಮಿಷ ಆದಮ್ಯಾಲ ಹೋಡಿ ಅಂದಾಗ ಹುಂ ನ್ರೀ ಸರ್ ಅಂತ ಹೇಳಿ ಹುಡುಗ ಹೋದ. ಆಗೂ ಗುರುಪಾದ ತನ್ನ ಮಗಂದ ಚಿಂತಿ ಬಾಲ ಕಾಡ್ತಿ ಮುಂದೇನ ಮಾಡೂದು ಅಂತ ಅದ ಯೊಚ್ನೇದಾಗ ಇದ್ದಾಗ ವಾಲಿಕಾರ ರಾಮಣ್ಣ ‘ನಮಸ್ಕಾರ್ರೀ ಸರ್’ ಅಂತ ವಿನಮ್ರವಾಗಿ ಗುರಪಾದ ಸರ್ಗೆ ಕೈ ಮುಗದಾಗ ಗುರಪಾದ ಸರ್ ಬಾ ರಾಮಾಣ್ಣ ಬಾ ಬಾಳ ಖುಷಿಯಾಗ ಅದಿಯಲ್ಲ ಏನ ಸುದ್ದಿ, ರಾಮಣ್ಣ ಹಂತೆಕ ಹೋಗಿ ಅವ್ನ ಮುಂಡಿಮ್ಯಾ ಕೈ ಹಾಕಿದ್ರು. ರಾಮಣ್ಣನ ಖುಷಿ ಮತ್ತಷ್ಟ ಇಮ್ಮಡಿಗೊಂಡು ಸರ್ ಗೆ ಏನ ಹೇಳಬೇಕೂ ಅನ್ನುದ ಕ್ಷೆಣಕಾಲ ಮರತ. ನಂತರ ತಡವರಿಸುತ್ತ ಕೈಯಾಗ ಇದ್ದ ಪುಡಕಾ ಬಿಚ್ಚಿ ತಗೋರಿ ದೇವ್ರ ಮೊದಲ ಪೆಡಾ ನಿಮಗ ಕೊಡಬೇಕಂತ ನನ್ನ ಮನಸ ನಿಮ್ಮಕಡೆ ಜಕ್ಕೊಂಡ ಬಂತ. ನಿಮ್ಮ ಶಿಷ್ಯಾ ಪಾಸ ಆಗ್ಯಾನ ರೀ ಅದೆನೋ ರಾಂಕನೂ ಬಂದಾನಂತ ಅಂವ ಹಿಂಗ ಮುಂದಬರಾಕ ನಿಮ್ದ ಪುಣ್ಯಾ ರೀ.
ನಾ ಸಾಲಿ ಬಿಡಿಸಿ ಜೀತಕ್ಕ ಇಟ್ಟಾ ನಿಂವ ನನ್ನ ಬಲ್ಲಾಂಗ ಬೈದ ಬುದ್ದಿ ಹೇಳಿ ಅವನ್ನೂ ನಿನ್ನಗತೆನ ಇನ್ನೊಬ್ಬರ ಕೈಯಾಗ ಕುರಿ ಕಟಕನ ಕೈಯಾಗ ಕೊಟ್ಟಂಗ ಕೊಡಬೇಕಂತ ಮಾಡಿಯನ ಅಂದ ನನಗ ಅಂದ ನಿಂವ ಉಗಳ್ಳಿ ಉಳಾಗಡ್ಡಿ ಕಟ್ಟದ್ದಿದ್ರ ನನ್ನ ಮಗಾ ಚೌಡ ಇಂದ ಯಾರ ಮನ್ಯಾಗರಾ ಸೇಗನಿ ಎತ್ತಬೇಕಾಕಿತ್ತು. ನಿಂವ ಅಂವಗ ದೇವ್ರ ಮುಂದನೂ ಅಂವನ ಕಲಸೂ ಜವಾಬ್ದಾರಿ ನಮ್ಮದ ರೀ ಅಂತ ವಾಲಿಕಾರ ರಾಮಣ ಸರ್ ಕಾಲ ಹಿಡ್ಯಾಕ ಹ್ವಾದ. ಏಯ್ ಏನ್ಮಾಡ್ತಿ ಅಂದವ್ರ ಸರ್ ರಾಮಣನ ತಡದ್ರು. ಅಂವ ಕೊಟ್ಟ ಪೆಡಾ ಇಸಕೊಂಡ ಶುಭ ಹಾರೈಸಿ ರಾಮಣನ ಕಳಸಿದ್ರು.
ಒಂದ ರೀತಿ ನೋಡಾಕ ನಿಂತ್ರ ಬಡೂರ ಮಕ್ಕಳ ಪಾಡ. ಯಾಕಂದ್ರ ಕಷ್ಟಪಟ್ಟ ದುಡಿತಾವು, ಇದ್ದಂತ ಬಟ್ಟಿ ಹಕ್ಕೊಂದ ಸಿಕ್ಕದ್ದ ತಿಂದ ಗುಂಡಕಲ್ಲ ತರಾ ಗಟ್ಟಿಯಾಗಿರತಾವ’. ಬಡೂರ ಮಕ್ಕಳೂ ಎಂದೂ ದಿಮಾಕಿಗೆ ಓದವ್ರ ಅಲ್ಲ. ಓದು ಅವಕಾಶ ಸಿಕ್ಕು, ಕಲಸು ಗುರುಗೋಳ ಸ್ವಲ್ಪ ಚಲೋತಂಗ ಇದ್ರ ಮುಗದ ಹೋತ ಅಂಬೇಡ್ಕರ್ನ ತರಾ ಆಗಿ ಬಿಡ್ತಾರ. ‘ದೌಳಾರ ಮಕ್ಕಳಿಗ್ಯಾಕ ಕಲಿಯು ಆಸಕ್ತಿ ಕಡಿಮಿ ಅಕ್ಕೈತಿ’, ಇದಕ್ಕ ಕಾರಣ ಗೋಳ ರಗಡ ಇದಾವ ಬೀಡ, ಅಂತ ಸಾಲಿ ಅಂಗಳದಾಗ ನಿಂತಗೊಂಡ ವಿಚಾರ ಮಾಡ್ತಿದ್ದ. ಆಗ ಕೆಲವು ಹುಡುಗುರು “ಗುಡ್ ಮಾರ್ನಿಂಗ್ ‘ ಸರ್ ಅಂತ ಸರ್ ಮುಂದ ತಲಿಬಾಗಿ ನಮಸ್ಕಾರ ಮಾಡಿ ಹೊಕ್ಕಿದ್ರು. ಆದ್ರ ಗುರುಪಾದ ಗುರುಗೊಳ ನಿರಾಸಕ್ತಿಯಿಂದ ಹುಡುಗುರ ಕಡೆ ಪ್ರತಿಕ್ರಿಯೆ ತೋರಸ್ತಿದ್ರು. ‘ನಮ್ಮ ಸರ್ ಹಿಂಗ್ಯಾಕ ಸಪ್ಗ್ ಆಗ್ಯಾರ ಇಂದ’ ಅಂತ ಕೆಲವು ಹುಡುಗ್ರು ತರ್ಕ ಮಾಡಿದ್ರ. ಸರ್ನ್ ಕೇಳು ದೈರ್ಯಾ ಇಲ್ಲಕ್ಕ ಸುಮ್ನಿದ್ರು.
ಡಣ್ ಡಣ್ ಗಂಟಿ ಬಾರಸ್ತಿ. ಹುಡಗೂರ ಸಾಲಾಗಿ ಬಂದ ನಿಂತಗೊಂಡರು, ಒಂದ ಹುಡುಗ ಸಾವದಾನ್ ವಿಸ್ರಾಮ್ ಅಂತ ಆಡರ್ ಕೊಟ್ಟ ಹುಡಗುರು ಹುರಪಿನಿಂದ ಯಸ್ ಅಂತಿದ್ರು. ಪ್ರಾರ್ಥನೆ ಮುಗಿಸಿ ತಮ್ಮ ಕೋಣಿಗಿ ಹ್ವಾದಾಗ ಭದ್ರಾವತಿ ಮೆಡಮ್ಮ ಗುರುಪಾದ ಸರ್ ಯಾಕೊ ಇಂದ ಡಲ್ ಅದಾರಲ್ಲಾ ಅಂತ ಅನುಮಾನಿಸಿ ಯಾಕ ರೀ ಸರ್ ಮನ್ಯಾಗ ಮೆಡಮ್ಮ ಇಂದೆನಾರೂ ಸ್ಟ್ರೈಕ್ ಮಾಡ್ಯಾರೆನ ಅಂದು ನಕ್ಕರು. ಹಾಗಿನಿಲ್ಲ ಅಂತ ಉತ್ತರಿಸಿದ್ರು . ಯಾಕೊ ಸರ್ ತುಂಬಾ ಟೆನ್ಶನ್ದಾಗದಾರಂತ ಅರಿತು ಮೆಡಮ್ ಹಾಜರಿ ಬುಕ್ಕ ಹಿಡಕೊಂಡ ಸೀದ ತಮ್ಮ ಕ್ಲಾಸಿಗೆ ನಡದ್ರು. ಅಂದ ಸಾಲಿನೇ ಮುಕಾಗಿತ್ತು. ಹುಡುಗುರು ತುಂಬಾ ತಿಳವಳಿಕೆ ಹೊಂದಿದವರಿದ್ರು. ಸರ್ಗೆ ಮೈಯಾಗ ಹುಷ್ಯಾರ ಇರಾಕಿಲ್ಲಾ ಅಂತ ತಿಳಕೊಂಡು ತಮ್ಮ ಪಾಡಿಗೆ ತಾಂವ ತಿಳದದ್ದ ಮಾಡಿದ್ರು . ಸಾಲಿ ಬಿಟ್ಟ ಮ್ಯಾಲ ಮನಿಕಡೆ ಬರುವಾಗ ಗುರುಪಾದ ಸರ್ಗೆ ಬಾಳ ಕೆಟ್ಟ ಆನಿಸ್ತಿ. ಮಗನ ಹಿಗ್ಗಾಮುಗ್ಗಾ ತಳಿಸಿದೆ, ಪಾಪ್ ಆ ಹೊಡತಾ ಹ್ಯಾಂಗ ತಡಕೊಂದ್ನೊ ಏನೋ, ಮಗನ ಜೋತೆ ಹೆಂಡ್ತಿನೂ ಅತ್ತದ್ದ ಕಣ್ಮುಂದ ಬಂದಾಗಾಗಿ ಮನಸ ಬಾರಾದಂಗಾತು.
ಮನಿ ಮುಂದ ಕಲ್ಲ್ಯಾ ಬ್ಯಾಟ ಹಿಡಕೊಂಡ ನಿಂತಿದ್ದ. ಒಂದ ಹುಡುಗ ಚಂಡ ತಗೂಂಡ ಎಸುವಷ್ಟ್ರಾಗ ಕಲ್ಲ್ಯಾಗ ದೂರದಾಗ ಅಪ್ಪ ಬರುದು, ಕಾಣಸ್ತೀ. ಸತ್ತ್ ನೋ ಕಟ್ಟೋ ಅಂತ ಮನಿ ಹೂಕ್ಕ, ಮನಿಯಾಗ ಟಿ.ವಿ ಒಂದ ಒದರಾಕ ಹತ್ತಿತ್ತು. ಅದನ್ನ ನೋಡಾವ್ರ ಯಾರೂ ಇರಲಿಲ್ಲ. ಪಟ್ನ್ ಟಿ.ವಿ ಬಂದ ಮಾಡಿ ಕೈಗೊಂದ ಸಿಕ್ಕ ಪುಸ್ತಾಕ ತಗೊಂಡ ಕಲ್ಲ್ಯಾ ಪೇಜ ಹೊಳಸ್ಕೋತ ಕುಂತಿದ್ದ. ಗುರುಪಾದಗ ಮಗನ್ನ ಮುಖ ನೋಡಿ ಮನಸಿಗೆ ಸ್ವಲ್ಪ ಹಗುರನಿಸ್ತಿ. ಮಗಗ ನಾ ಕೊಟ್ಟ ಶಿಕ್ಷೆ ಪೂರೈಸೈತಿ ಅಂತ ಒಳಗೊಳಗ ಹೆಮ್ಮೆ ಪಟಗೊಂದ. ಕೈಯ್ಯಾಗ ಪುಸ್ತಕ ಇದ್ದದ್ದ ನೋಡಿ ಓದಕೊಳ್ಳಿ ಅಂವ್ಗ ತೊಂದ್ರಿ ಕೊಡಬಾರ್ದ ಅಂತ ಗುರುಪಾದ ಶರ್ಟ ಪ್ಯಾಂಟ ಬಿಚ್ಚಿ ಲುಂಗಿ, ಅಂಗಿ ಹಾಕ್ಕೊಂಡ. ಕುರ್ಚಿ ಕಡೆ ಹೊಗಿ ಕುರ್ಚಿ ಮ್ಯಾಲ ಇದ್ದ ದೂಳಾ ಉಪ್ ಉಪ್ ಅಂತ ಊದಿ ಕುಂತ ಮುಂದ ಟೆಬಲ್ ಮ್ಯಾಲಿದ್ದ ವಿಜಯ ಕರ್ನಾಟಕ ಪತ್ರಿಕೆ ಕೈಗೆತಗೊಂಡ ಓದಕೊಂತ ಕುಂತರು. ಗಂಡ ಬಂದಿರಬೇಕು ಮುಂಜ್ಯಾನೆ ಏನೂ ತಿನ್ನದ ಬ್ಯಾರೆ ಹೋಗ್ಯಾರ ನಳಕ್ಕ-ನೀರ ತರಾಕ ಹ್ವಾದ ಬಾಗಿರಥಿ ದಡಬಡಸಿ ಬಂದು ಬಿಸಿ ಬಿಸಿ ಒಂದ ಕಪ್ ಕಾಫಿ ಮಾಡಿಕೊಟ್ಟ, ‘ನೋಡಲ್ಲಿ ನಿಮ್ಮ ಮಗಾ ಸ್ವಲ್ಪ ಹಾದಿಗೆ ಬಂದಾಂಗ ಆಗ್ಯಾನ’ ಅಂತ ಗಂಡನ ಕಡೆ ಕಣ್ಣ ಸನ್ನಿ ಮಾಡಿದ್ಳು. ತುಟಿ ಒಳಗ ಗುರುಪಾದ ನಕ್ಕ, ಅಂವಗೂ ಟೀ ಬಿಸ್ಕಿಟ ಕೊಡು ಅಂತ ಗುರುಪಾದ ಅಂದಾಗ ಅಪ್ಪನ ಕೋಪ ಇಳದೈತಿ ಅಂತ ಕಲ್ಲ್ಯಾ ಕಾತ್ರಿ ಮಡ್ಕೊಂಡ . ಕಲ್ಲ್ಯಾ ಹೋರಗಿನಿಂದ ಬಂದ ಅತಿಥಿ ನಾಚು ತರಾ ಮುಜಗರ ಪಟಗೊಂಡ. ಕುರ್ಚಿ ಮ್ಯಾಲ ಕುತ್ತ ಗುರುಗಳಿಗೆ ಮಗಾ ಸ್ಯಾನ್ಯಾ ಆಗಬಹುದು ಅಂತ ಬರವಸೆ ಬಂತು . ಆದ್ರ ಬಾಗಿರಥಿಗೆ ಕಲ್ಲ್ಯಾನ ಮ್ಯಾಲ ಅಳಕಿತ್ತು.
ಕಲ್ಲ್ಯಾ ಎಸ್. ಎಸ್. ಎಲ್. ಸಿ ಪೇಲಾದ ಮ್ಯಾಲ ತಂದೆ ತಾಯಿಯಿಂದ ತನ್ನ ಸಹಪಾಠಿಗಳಿಂದ, ಊರಮಂದಿಯಿಂದ ಬಾಳ ಛೀ.. ಥೂ.. ಉಗಸ್ಕೊಂಡಿದ್ದ. ಒಬ್ಬ ಊರಾಗಿರೋ ಹಿರಿಮನಸ್ಯಾ ಒಂದಿನ ‘ಲೇ ಹೆಂತವು ಹೂಟ್ಯಾಗ ಹೆಂತಂವ ಹುಟ್ಟಲೇ, ನಿಮ್ಮ ತಂದಿ , ನೂರಾರ ವಿದ್ಯಾರ್ಥಿಗಳಿಗೆ ಪಾಠಾ ಹೇಳಿ ಬೇಶ್! ಅನಸ್ಕೊಂಡಾರ, ಅವರ ಕೈಯಾಗ ಕಲಿತಾವ್ರ ಹೆಂತೆಂತಾ ದೊಡ್ಡ ದೊಡ್ಡ ಪೊಸ್ಟನ್ಯಾಗ ಆದಾರ, ನೀ ನೋಡಿದ್ರ ತೆಲ್ಯಾಗ ಒಂದಿಷ್ಟ ಕೂದ್ಲಾ ಬಿಟಗೊಂಡ ಕುದ್ಲಾ ಹಾರಾಸ್ಗೋತ ಪ್ಯಾಟಿಸಾಲಿಗೆ ಹೋಗಿ ಪೇಲಾಗಿ ನಿಮ್ಮ ಅಪ್ಪನ ಮರ್ಯಾದಿ ಕಳ್ದಿ ಇನ್ನರಾ ಓದಿ ಉದ್ದಾರಾಗ…. ನಿಮ್ಮ ತಂದಿಗೆ ತಕ್ಕ ಮಗಾ ಅನಸ್ಕೋ ಅಂತ ಕಲ್ಲ್ಯಾಗ ಉಗಳಿ ಉಳ್ಳಾಗಡ್ಡಿ ಕಟ್ಟಿದ್ದ.
ಕಲ್ಲ್ಯಾಗ ಎಲ್ಲಿ ಹೋದ್ರು ಬರೀ ಅವಮಾನ, ಒಂದ ಸಲ ತಮ್ಮ ತಾಯಿ ತವರೂರಿಗೆ ಹೋಗಿದ್ದ, ಅಲ್ಲಿ ಅವ್ರ ಅಜ್ಜಿ ನಿಂಗೆನ ಕಮ್ಮಿ ಮಾಡಿದ್ರಲೇ ಬೇಕಬ್ಯಾಡಾದ್ದ ಅಂಗಯ್ಯಾಗ ತಂದ ಕೊಡುವಂತಾ ನನ್ನ ಅಳಿಯಾ ಅಂವಗ ನೀ ಮೊಸಾಮಾಡಿದೇನ ಮೂಳಾ ಅಂತ ಬಾಯಾಗ ಹಲ್ಲ ಇಲ್ಲದ ಬಾಗಿರಥಿ ತಾಯಿ ಮೊಮ್ಮಗ ಬುದಿಮಾತ ಹೆಳಿದಳು. ಯಾರೆ ಬುದ್ದಿ ಮಾತ ಹೇಳಿದ್ರೂ ಅದು ಕಲ್ಲಗ ಬೈದಾಂಗ ಅನಸ್ತಿತ್ತು. ಇನ್ನೊಮ್ಮೆ ಈ ಊರ್ಗೆ ಕಾಲ ಇಡುದಿಲ್ಲ ಈ ಮುದಕಿ ಸತ್ತರೂ ಮುಖಾ ನೋಡೂದಿಲ್ಲ ಅಂತ ಮನಸನ್ಯಾಗ ಅನಕೋತ ‘ಯವ್ವಾ ದೌಡ ಊರಿಗೆ ಹೋಗೂನ ಬಾ’ ನೀ ಎಲ್ಲಿದ್ದರೆನ ಗೂಂಡರ ಗೂಳಿ ಸುಮ್ನ ಇರಲೇ, ಹೊಕ್ಕಿದ್ರ ನೀ ಹಾಳಾಗಿ ಹೋಗ ಅಂತ ಬಾಗಿರಥಿ ಬಿರಸಾಗಿ ಬೈದಾ ಕಲ್ಲ ಮಕಾ ವನಗಸಕೊಂಡ ನಿರ್ವ ಇಲ್ದ ಮನಿ ಮಾಳಿಮ್ಯಾಲ ಕುಂತ.
‘ಗೂಳಿ ಬಿದ್ದಾಗ ಆಳಿಗೊಂದ ಕಲ್ಲ’ ಅನ್ನುವಂಗ ಕಲ್ಲನ ಸ್ಥಿತಿ. ಜಗತ್ತನ್ಯಾಗ ಏಷ್ಟೋ ಮಕ್ಳು ಪೆಲಕ್ಕರಾ ಏಷ್ಟೋ ಮಕ್ಕಳು ಪಾಸಕ್ಕರಾ. ಪಾಸಾದಾವ್ರ ಯಲ್ಲಾರೂ ನೌಕರಿ ಮಾಡ್ತಾರಾ ಪೆಲಾದಾವ್ರ ಹಾಳಾಗಿ ಹೊಕ್ಕಾರಾ ಅಂತ ತಿಳಕೊಂಡಾಳ ನಮ್ಮ ಅವ್ವ. ಪಾಪ! ಅಕೀ ಓದು ಬರಹ ಗೊತ್ತಿರದ ಮುಗ್ದಿ ನನ್ನವ್ವ. ಅಕಿಗೂ ನನ್ನ ಮಗಾ ದೊಡ್ಡ ವ್ಯಕ್ತಿ ಆಗಬೇಕ ಅನ್ನು ಆಸೆ ಇರೂದು ತಪ್ಪಲ್ಲ. ಆದ್ರ ಅಪ್ಪ ವಿದ್ಯಾ ಹೇಳಿ ಕೊಡು ಗುರು. ಪೆಲು ಪಾಸು ಮಕ್ಕಳ ಯಾಕ ಅಕ್ಕಾವ ಅನ್ನೂದ ಬಲ್ಲ ಭಗವಂತ. ಭಗವಂತನೂ ನನ್ನ ಮ್ಯಾಲ ಮುನಿಸಿಕೊಂಡು ಜೀಂವ ಹೋಗುವಂಗ ತಳಸಿದ್ದು ನನಗ ಅಗಾದ ಆಗೇತಿ . ಇರ್ಲಿ ಅವ್ರ ನನಗ ಜನ್ಮಾ ಕೊಟ್ಟಾರ ಅಂದ ಮ್ಯಾಲ ಬಡಿವ ಹಕ್ಕ ಅವರಿಗೈತಿ ತನಗೆ ತಾನೇ ಸಮಾದಾ ಹೇಳುತ್ತಿದ್ದ. ಆಗ ಆಕಾಸದಲ್ಲಿ ಸೂರ್ಯ ತಾಯಿ ಹೊಟ್ಟಿ ಸೇರ್ತಿದ್ದ, ಬೆಳ್ಳಕ್ಕಿ ಸಾಲು ಸಾಲಾಗಿ ಹಾರಾಕೊತ ತಮ್ಮ ಗೂಡಕಡೆ ಹೊಂಟಿದ್ದು. ಅಜ್ಜಿ ಮನ್ಯಾಗಿದ್ದ ಸಣ್ಣ ತುಂಟರು ಮಾಳಿ ಮ್ಯಾಲ ನಿಂತ ಗಾಳಿ ಪಟಾ ಹಾರಸ್ತಿದ್ರು. ಕಲ್ಲು ಮಾಮಾ ನೀನೂ ಬಾ ಅಂತ ಒಂದ ಹುಡಗಾ ಕೂಗಿದ . ಕಲ್ಲ ಕಲ್ಲಿನಂತೆ ಕುಂತಲ್ಲೆ ಕುಂತಿದ್ದ.
ಗುರುಪಾದ ತನ್ನ ಮಗನ ಬಗ್ಗೆ ಪೆಲಾದ ದಿವಸ ಒಂದೇ ದಿನ ಮನಸಿಗೆ ಬಾಳ ನೋವನಿಸಿತ್ತು. ಮರುದಿನ ಮತ್ತೆಂದೂ ಅಂವ್ನ ಬಗ್ಗೆ ಯೋಚಸಲಿಲ್ಲ. ಬಡೂರ ಮಕ್ಕಳಿಗೆ ನಾಕ ಅಕ್ಷರ ಹೆಚ್ಚಿಗೆ ಕೆಲಸ್ಬೇಕು, ಅನ್ನುತತ್ವ ಗುರುಪಾದಪ್ಪಂದು. ಪಾಟಿ ಪುಸ್ತಕ ಇರದ ಮಕ್ಕಳಿಗೆ ಪಾಟಿ ಪುಸ್ತಕ ಕೊಡಸಿ, ಎಷ್ಟೋ ಬಡಮಕ್ಕಳಿಗೆ ಬಟ್ಟೆಕೂಡ ಕೊಟ್ಟಿದ್ದ. ಕೆಟ್ಟ ಕುಗ್ರಾಮ ಹಳ್ಳ್ಯಾಗ ಮಾಸ್ತರಾದ್ರೂ ಇಗಿನಾವ್ರ ಗತೆ ಬ್ಯಾಸರಾ ಮಾಡಕೊಂಡಿರಲಿಲ್ಲ. ಊರಾಗ ನೂರಾ ಜಾತಿ ಮಂದಿ ಇದ್ದರ. ಊರ ಇದ್ದ ಮ್ಯಾಲೆ ಕೆಟ್ಟದ್ದು ಚಲೋ ಎಲ್ಲಾ ಇರ್ತೈತಿ . ಒಬ್ಬರ ಚಲೋ ಅಂದ್ರ ನಾಕ ಮಂದಿ ಕೆಟ್ಟ ಅನ್ನುವಾರ ಇರ್ತಾರ, ಅನ್ನುದ ಪೂರ್ತಿ ತಿಳಕೊಂಡಿದ್ದ. ಹಿಂಗಾಗಿ ಗುರಪಾದ ‘ಸರ್’ ಅಂದ್ರ ಸಾಕು ಇಡೀ ಊರಮಂದಿಗೆ ಒಂದ ರೀತಿ ಭಕ್ತಿ. ಈಗೀನ ಗೌರಮೆಂಟ ಸಾಲಿ ಮಾಸ್ತರಗೊಳು ಹೆಸರಿಗೆ ನೌಕರಿ ಮಾಡಿ ಸಂಚ್ಯಾನ ಕುರ್ಚಿ ಮ್ಯಾಲ ಕಾಲಮ್ಯಾಲ ಕಾಲ ಹಕ್ಕೊಂಡ ಕುಂತ ಮಕ್ಕಳಿಗೆ ಒಂದ ಅಕ್ಷರ ಕಲಸ್ದ ಸರಕಾರ ಕಣ್ಣಿಗೆ ಮಣ್ಣ ಏರಚಿ ಪಗಾರ ತಗೊಂಡ ‘ಸರ್’ ಅನಸಗೊಂಡಾಂಗ ಗುರುಪಾದ ಅನಸ್ಕೊಳ್ಳು ಮಾತು ದೂರದ ಮಾತಾಗಿತ್ತ. ಎಸ. ಡಿ. ಎಮ್. ಸಿ. ಅದ್ಯಕ್ಷ ಕಿಷ್ಟಪ್ಪಗು ಗುರುಪಾದನ ಮ್ಯಾಲ ಭಕ್ತಿ, ಎರಡೂ ಕೈ ಮುಗದ ನಮಸ್ಕಾರ ಮಾಡ್ತಿದ್ದ, ಸಾಲಿಗೆ ಬೇಕಾದದ್ದು ಏನೇ ಇರ್ಲೀ ಓಡಾಡಿ ಕಿಷ್ಟಪ್ಪ ಮಾಡಿಕೊಡತಿದ್ದ. ಗುರುಪಾದ ಸರ್ ಹೆಚ್ಚು ಮಾತೋಡು ಮನುಷ್ಯಾ ಅಲ್ಲ ,ಮಾತಿಗಿಂತ ಅವರ ಕೆಲಸ ಹೆಚ್ಚು ಇರ್ತಿತು.
ಒಂದಿನ ಸಾಲ್ಯಾಗ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮ ಇತ್ತು. ಊರಿನ ಗಣ್ಯರು ಹಿರಿಯರು ಕೆಲವು ಶಿಕ್ಷಣ ಮೇಲಾಧಿಕಾರಿಗಳು ಕಾರ್ಯಕ್ರಮಕ ಬಂದಿದ್ರು. ಪರೂರಿಂದ ರಾಜಕಿಯ ವ್ಯಕ್ತಿ ಕಾರ್ಯಕ್ರಮಕ್ಕ ಮುಖ್ಯ ಅತಿಥಿಯಾಗಿ ಬಂದಿದ್ದ. ಈಗೀನ ಸಾಲ್ಯಾಗ ಏನೈತ್ರಿ ಮಣ್ಣ , ಎಲ್ಲ ಶಿಕ್ಷರ್ಕು ರಾಜಕೀಯ ಮಾಡಾಕ ಹತ್ಯಾರ , ಮಕ್ಕಳ್ ಗ ಅಕ್ಷರ ಕಲಸೋ ದೇವ್ರ. ಮಕ್ಕಳ ಬದುಕ ಕಟ್ಟಿಕೊಡ ಪರಮಾತ್ಮರು , ಹಿಂಗ ಮಾಡಿದ್ರ ದೇಶಾ, ಭಾಷೇ , ನಾಡು ಉದ್ದಾರ ಆಗಾಂದ್ರ , ಹ್ಯಾಂಗ ಆಕೈತ್ರಿ ಅಂತ ಬಂದ ಅತಿಥಿ ಸ್ಟಾಪರೂಮನ್ಯಾ ಕುತ್ತ ರಾಜಕೀಯ ಗತ್ತಿನ ಮಾತ ಸುರು ಮಾಡಿದ. ಸುತ್ತಮುತ್ತ ಕುಂತ ಗಣ್ಯರು ಗುರುಪಾದ ಸರ್ ಮಕಾ ನೊಡಿದರು. ಗುರಪಾದ ಸರ್ ಮಕದಲ್ಲಿ ಆಗ ನಿಂವ ಹೇಳಿದ್ದ ನಿಜಾ ಐತಿ ಅನ್ನುವ ಉತ್ತರ ಮೂಡಿತ್ತು. ಎಲ್ಲೊ ಒಂದಿಬ್ರು ಹಂಗದಾರಂತ ಎಲ್ಲರೂ ಹಂಗ ಆದಾರನ್ನೊದು ತಪ್ಪು ಅಂತ ಗುರಪಾದ ಮನವರಿಕೆ ಮಾಡಾಕ ಹ್ವಾದ್ರು. ನಿಂವ ನಿಮ್ಮಾರ್ನ ಹೆಂಗ ಬಿಟ್ಟ ಕೊಡ್ತಿರಿ ಹೇಳಿ ಅಂತ ರಾಜಕೀಯ ವ್ಯಕ್ತಿ ನಕ್ಕ. ಸರ್ ಮಕಾ ಆಗ ಬಾಡಿದಂಗ ಆತು. ಯಲ್ಲಾರು ಹಂಗ ಇರ್ತಾರ ಅಂದ್ರ ನಿಂವ ಮಾಡು ವಾದ ತಪ್ಪ ಅಕ್ಕೈತಿ ಅನಕೋತ ರಾಜಕೀಯ ವ್ಯಕ್ತಿ ಕಡೆ ಕೃತಕ ನಗೆ ನರ್ಕ್ಕು. ನೋಡ್ರೀ ಮಾಸ್ತರ ತಪ್ಪು ಒಪ್ಪು ಯಾವುದು ಎಂತಾ ಅಂತ ನಂಗೂ ಗೊತೈತಿ. ನಿಮ್ಮ ಮಾಸ್ತರ ಮಂದಿ ಅದಾರ ಅಲ್ಲ. ಬಾಳ ಹಲಕಟ್ಟ ಅದಾರ , ಮನ್ನೆ ಪೇಪರದಾಗಿ ಮುಖ ಪುಟಕ್ಕೆ ಬಂದಿತ್ತ ‘ಕಾಮುಕ ಮಾಸ್ತರ’ ಅಂತ ದೊಡ್ಡ ಅಕ್ಷರದಾಗ ಬರದಿದ್ರು. ನೀವ ಓದಿರೊ ಇಲ್ಲೊ, ನೀವೆಲ್ಲಿ ಓದಬೇಕ ಹಂತಾದೆಲ್ಲ, ಅ.ಆ,ಇ,ಈ ಕಲಸ್ಕೋತ ಕುಂದ್ರುದ ಹೇಚ್ಚಿಂದ ಆಗಿರ್ತೈತಿ, ರಾಜಕೀಯ ವ್ಯಕ್ತಿ ವ್ಯಂಗ್ಯವಾಗಿ ಮಾತಾಡುವ ಮಾತು ಬಿರಸಾದಾಗ ಊರ ಗಣ್ಯರು ಸುಮ್ಕಿರಿ ನಮ್ಮ ‘ಸರ್’ ಅಂತಾವ್ರ ಅಲ್ಲ ಅಂತ ರಾಜಕೀಯ ವ್ಯಕ್ತಿ ಬಾಯ್ ಮುಚ್ಚಸಾಕ ತಿನಕಾಡಿದ್ರು, ಆಗಲಿಲ್ಲ.
ಕೈಯ್ಯಾಗೊಂದ ಮೊಬೈಲು , ಅದರಾಗ ಬಟ್ಟಿ ಬರೆ ಹಾಕ್ಕೊಳ್ಳದೇ ಇರುವ ಚಿತ್ರದ ವಿಡಿಯೊ ಹಿಂತದ ನೋಡಿ ಮನಸ ಹೆಸಗಿ ಮಾಡಕೊಂಡ ಚಿಕ್ಕಮಕ್ಕಳ ಅತ್ಯಾಚಾರ ಮಾಡು ಹಲಕಟ್ಟ್ರು ಬಾಳ ಮಂದಿ ಮಾಸ್ತರ ಆಗ್ಯಾರಿ , “ನಿಮ್ದು ಮೊಬೈಲ್ ಐತೊ’ ಅಂತ ರಾಜಕೀಯ ವ್ಯಕ್ತಿ ಗಹಗಹಿಸಿ ನಕ್ಕಾಗ , ಗುರುಪಾದ ಗುರುಗಳು ಆಗ್ಲೂ ಸುಮ್ನ ಇದ್ರೂ.
ಎಸ್.ಡಿ.ಎಮ್.ಸಿ ಅದ್ಯಕ್ಷ ಕಿಷ್ಟಪ್ಪಗ ಸಿಟ್ಟ ತಾಳಲಿಲ್ಲ. ದೇವ್ರಂತಾ ಗುರಗಳ್ಗೆ ಬಾಸ್ಗಡಾ ಮಾತಾಡಿದ್ದ ಕೇಳಿ ಸಿಟ್ಟ ರಟ್ಟಿವರೆಗೂ ಬಂದ ಹೋತು. ಸಾಕ ಬಾಯ್ ಮುಚ್ಚರೀ ಇದೇನ ವಿಧಾನ ಸಭಾ ಅಲ್ಲ .ಅಲ್ಲಿ ಬರೀ ನಾಯಿಗೋಳ ಈರತಾವ ಕಚ್ಚ್ಯಾಡಾಕ ಅಲ್ಲಿ ಕಚ್ಚ್ಯಾಡ್ರೀ , ಇಲ್ಲಿ ಸಾಲಿ ಇಲ್ಲಿ ಮಕ್ಕಳ ಇರತಾವ. ನಾಲಗಿಮ್ಯಾಲ ಹಿಡತಿರ್ಲಿ ಅಂತ ಎಚ್ಚರಿಸಿದ ಕಿಷ್ಟಪ್ಪ. ಕಿಷ್ಟಪ್ಪ ಅಂದ್ರ ಹೆಂತಾಂವ ಅನ್ನೂದ ಗೊತ್ತದ್ದ ರಾಜಕೀಯ ದೇವ್ರು ನಂದ ಇಲ್ಲಿ ಎನೂ ನಡೂದಿಲ್ಲ ಅಂತ ಕಾತ್ರಿ ಮಾಡಕೊಂಡ ಹನಿಮ್ಯಾಲ ಬಂದ ಬೆವರಾ ಕರ್ಚಿಪಿಲೆ ವರಸ್ಕೋತ ಮುಂದ ಇದ್ದ ಚಾ ಕಪ್ಪ ಎತ್ತಗೊಂಡ ಬಾಯಿಗೆ ಹಚಗೊಂಡ. ಎಲ್ಲಾರೂ ಚಾ ಕುಡಿತಿದ್ರು. ಕುಡದವ್ರ ನಿದಾನ ಎಲ್ಲಾರು ಕಾರ್ಯಕ್ರಮ ನಡಿತಿದ್ದ ಕಟ್ಟಿಕಡೆ ಬಂದ್ರು. ಇವರು ಬರೂದ ಅಷ್ಟ ತಡಾ ಎಲ್ಲಾ ಹುಡಗೂರ ಜೋರಾಗಿ ಚಪ್ಪಾಳೆ ತಟ್ಟಿ ಸುಮ್ಕ ಕುಂತ್ರ, ನಿದಾನಕ ಕಾರ್ಯಕ್ರಮಾ ಚಲೂ ಮಾಡಿದ್ರು. ಪ್ರಾರ್ಥನೆಯೊಂದಿಗೆ ಇಂದಿನ ಕಾರ್ಯಕ್ರಮ ಪ್ರಾರಂಭವಾಗುವುದು ಅಂತ ಒಂದು ಹುಡುಗ ನಿರೂಪಣೆ ಮಾಡಿದ. ನಾಲ್ಕು ಹುಡುಗ್ಯಾರು ಬಂದು ಮೈಕ ಮುಂದ ನಿಂತ್ರು. ಮೊದಲಿಗೆ ನನೆದನಿ ಗನಪಾ ಹುದಲಿಗೆ ವಯ್ಯಬ್ಯಾಡೋ ಅಂತ ಪ್ರಾರ್ಥನ ಗೀತೆ ಹಾಡಿ ತಮ್ಮ ಜಗಾಕ ಹೋಗಿ ಕುಂತ್ರು. ಈಗ ಮುಖ್ಯ ಅತಿಥಿಗಳಿಂದ ಯರಡು ಮಾತು ಅಂತ ಹುಡುಗನ ದ್ವನಿ ಉಲುಮಾಡ್ತಿ. ನಿದಾನ ಮ್ಯಾಕ ಎದ್ದ ಮೈಕ ಕಡೆ ಬರ್ತಿದ್ದ ಬಿಳಿ ವಲ್ಲಿ ಬಿಳಿ ಅಂಗಿ ಹಾಕ್ಕೊಂಡ ರಾಜಕೀಯ ಪುಂಡನ ಸಾಲಿ ಮಕ್ಕಳು ಬೆರಗುಗಣ್ನಿಂದ ನೋಡ್ತದ್ರು. ನಾಳೆ ದೊಡ್ಡಂವ ಆದ ಮ್ಯಾಲ ಹಿಂಗ ನಾನೂ ಆಗಬೇಕಂತ ಕೆಲವು ಮಕ್ಕಳ ಮನಸನ್ಯಾಗ ವಿಚಾರ ಮೂಡ್ತಿ.
ಅಕ್ಕತಂಗಿಯರೇ ಅಣ್ಣ ತಮ್ಮಂದಿರೆ ನಾನು ಅರ್ಜಂಟ ಬೆಂಗಳುರಾಗವಂದ ಮಿಟಿಂಗ್ ಇತ್ತು ಇಲ್ಲಿಗೆ ಹೋಗುದ ಬಿಟ್ಟ ನಾ ಇಲ್ಲಿಗೆ ಬರಾಕ ಕಾರ್ನ ಬ್ಯಾರೆ ಯಾರೂ ಅಲ್ಲ ನಿಂವ. ಅಂದಾಗ ಹುಡಗುರು ಗೊಳ್ ಅಂತ ನಕ್ಕರು. ನಾ ಬರೀ ನಾಕನೇತ್ತೆ ಸಾಲಿ ಕಲತೀನಿ ನನಗ ಸಾಲಿ ಮ್ಯಾಲ ಈಗೀನ ಮಾಸ್ತರ ಮ್ಯಾಲ ಬಾಳ ನಂಬಕೀ ಇಲ್ಲ. ಹಿಂಗ ಅಂದಾ ಗುರಪಾದ ಸರ್ರೂ ಕಿಟ್ಟಪ್ಪ ಒಬ್ಬರ ಮಕಾ ಒಬ್ಬರ ನೋಡಿ ಊರಗೆ ಹೋಗು ಮಾರಿನ ಮನಿಗಿ ಕರಕೊಂಡಾಂಗಾತ ಅಂತ ಪೆಚಾಡಿದ್ರ. ರಾಜಕೀ ವ್ಯಕ್ತಿ ಮಾತ ಮುಂದ ವರಸಿದ್ದ. ಮಹಾ ಜನಗಳೆ ನೀವ ಕಲಿರಿ ಬ್ಯಾಡ ಅನ್ನಾಂಗಿಲ್ಲ ನಾ . ಈಗಿನ ಕಲಿಕೆ ನೋಡಿದ್ರ ತೆಲಿ ಚಿಟ್ಟ ಹಿಡಿತೈತಿ. ಮಾಸ್ತರ ಮಂದಿನೂ ವಗಾತೆಂಗ ಕಲಸುದಿಲ್ಲ. ಹಿಂಗಾದ್ರ ದೇಶ ಉದ್ದಾರಾಗಂದ್ರ ಹ್ಯಾಂಗ ಅಕೈತಿ ನೀವ ಇಚಾರ ಮಾಡ್ರೀ. ವರ್ಷಕ ಒಬ್ಬ ಗಾಂದಿ ಯಡ ವರ್ಷಕ ಒಬ್ಬ ಅಂಬೆಡ್ಕರಾ ನಾಕ ವರ್ಷಕ ಒಬ್ಬ ನೇತಾಜಿಯಮತಾ ವಿದ್ಯಾರ್ಥಿಗಳನ್ನ ತಯಾರ ಮಾಡೂದು ಶಿಕ್ಷಕರ ಆದ್ಯ ಕರ್ತವ್ಯ . ಈ ಮಾತ ಹೇಳಿದಾಗ ಎಲ್ಲಾ ಹುಡಗುರು ಗುರಪಾದ ಸರ್ ಮೊತಿ ನೋಡಿದು. ನೆಹರೂ ಮಕ್ಕಳ ಮ್ಯಾಲ ಬಾಳ ಪ್ರೀತಿ ಇದ್ದಾ. ಅದಕಾ ನಾ ಕೊನೆದಾಗಿ ನಿಮಗ ಹೇಳುದಂದ್ರ ನೀವು ಅವರಗತೆ ಆಗ್ರೀ ಆದ್ರ ಪೊಲಿಸಕ್ಕೀನಿ, ಪೋಜರಕ್ಕೀನಿ, ಲಾಯರ ಅಕ್ಕಿನಿ, ಶಿಕ್ಷಕ ಆಕ್ಕಿನಿ ಅನ್ನೂ ಇಚಾರ ಏನಾರ ಇದ್ರ ಈಗ ತಲಿಂದ ತಗದ ಹಾಕರಿ. ಅದರಾಗ ಬಾಳ ಸುಕಾ ಇಲ್ಲ. ನಿಂವ ರಾಜಕಾರ್ಣಿ ಆಗಿ ನೋಡ್ರಿ ವರ್ಷವಪ್ಪತ್ನ್ಯಾಗ ಕಾರ ಹತ್ತಿ ನನಗತೇ ಅಡ್ಡಾಡ್ತಿರಿ ಅಂತ ಹೇಳಿ ನನ್ನ ಬಾಸನಾ ಮುಗಸ್ಸಿನಿ. ಹಿಂಗ ಹೇಳಿ ಕುರ್ಚಿಮ್ಯಾಲ ಬಂದ ಕುಂತ ರಾಜಕಾರ್ಣಿ. ಕಿಟ್ಪಪ್ಪಗ ಇಂವನ ಯಾಕಾರ ಅತಿಥಿ ಮಾಡಿದಿವು ಅನ್ನುವ ಪ್ರಜ್ಞೆ ಕಾಡಿತು. ಈಗ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಗುರುಗಳಾದ ಗುರುಪಾದ ಗುರುಗಳು ವಿದ್ಯಾರ್ಥಿಗಳನ್ನು ಕುರಿತು ಮಾತಾಡಬೇಕೆಂದು ವಿನಂತಿ. ಅಂತ ಹುಡುಗ ಹೇಳಿದ.
ಗುರುಪಾದ ಗುರುಗಳು ಮೊದಲಿಗೆ ಮಕ್ಕಳಿಗೆ ವಂದಿಸಿದ್ರು ಆಗ ಜೋರಾಗಿ ಚಪ್ಪಾಳೆ ಕೇಳಿ ಬಂತು, ವೇದಿಕೆ ಮೇಲೆ ಕುಂತ ರಾಜಕಾರ್ಣಿ ಮಹಾಶಯ ಇರಸ ಮುರಸಾತು. ಭಾಷಣ ಮಾಡಿದ್ರ ಮೊದಲ ವೇದಿಕಿ ಮ್ಯಾಲ ಕುಂತಾರ್ಗೆ ಗೌರವ ಕೊಡ್ತಾರ ಆದ್ರ ಈ ಮಾಸ್ತರ ಸಣ್ಣಪುಟ್ಟ ಹುಡುಗರ್ಗೆ ಗೌರವ ಕೊಡ್ತಾನ , ಈ ಮಾಸ್ತರಗೋಳ ಬುದ್ದಿನ ಇಷ್ಟ ಅಂತ ವಟಗುಡಿದ ಅಂವ ವಟಗೂಡೂದ. ಯಾರೂ ಲಕ್ಷಿಸಲಿಲ್ಲ. ಎಲ್ಲರ ಚಿತ್ತ ಗುರುಪಾದರ ಕಡೆ ಇತ್ತು.
ಇಂದಿನ ಮಕ್ಕೇ ನಾಳಿನ ನಾಡಿನ ಸಮರ್ಥ ಪ್ರಜೆಗಳು , ಈ ದೇಶದ ಭವಿಷ್ಯ ರೂಪಿಸುವ ಜವಾಬ್ದಾರಿ ನಿಮ್ದಾಗಬೇಕು, ಏನಾದರೂ ಆಗು ಮೊದಲು ಮಾನವಾನಾಗು ಅನ್ನು ಹಾಗೆ ನಾವು ಎಲ್ಲೆ ಇರಲಿ ಯಾವುದೇ ಕಾರ್ಯ ಮಾಡಲಿ ಮೊದಲು ಮಾನವರಂತೆ ವರ್ತನೆ ಮಾಡುವುದನ್ನು ಕಲಿಬೇಕು , ಮನುಷ್ಯನಿಗೆ ದೇವ್ರು ತಿಳಿವಳಿಕೆ ಕೊಟ್ಟಾನು ಅದನ್ನ ಸರಿಯಾಗಿ ಉಪಯೊಗ ಮಾಡ್ಕೋಬೇಕು ಅದು ಸರಿಯಾಗಿ ಉಪಯೋಗವಾಗದಿದ್ದರೆ ಪಶುಗಳಂತೆ ಇರಬೇಕಾಗುತ್ತದೆ.
ಮಕ್ಕಾಳಾದವ್ರು ಗುರುಹಿರಿಯರಿಗೆ, ಹೆತ್ತ ತಂದೆ ತಾಯಿಗಳಿಗೆ, ನಾಡಿಗೆ, ದೇಶಕ್ಕೆ ಗೌರವ ಕೊಟ್ಟರೆ ಮಾತ್ರ ಅವರೊಬ್ಬ ಉತ್ತಮ ನಾಗರಿಕನಾಗಲು ಸಾದ್ಯ.
ವಿದ್ಯೆ ಕಲಿಸದ ತಂದೆ ಬುದ್ದಿ ಹೇಳದ ಗುರು
ಬಿದ್ದಿರಲು ಬಂದು ನೋಡದ ತಾಯಿ
ಶುದ್ದವೈರಿಗಳು ಸರ್ವಜ್ಞ
ಪಾಲಕರು ಕೂಡಾ ಅಷ್ಟೆ ಮಕ್ಕಳಿಗೆ ಶಾಲೆಗೆ ತಪ್ಪದೆ ಕಳಸಬೇಕು, ಕಳಿಸದಿದ್ರೆ ಸರ್ವಜ್ಞ ಹೇಳುವಂತೆ ಅವನ ಬಾಳಿಗೆ ವೈರಿಗಳಾಗುತ್ತಾರಿ ಏಂದು ಹೇಳಿದರು. ಆಗಂತು ಊರಿನ ಎಲ್ಲ ಪಾಲಕರಿಗೆ ಹಿಂತಾ ಗುರುಗೋಳು ಇರೋದು ನೂರಕ್ಕೋಬ್ರು ಅಂತ ಅಂದಕೊಂಡ್ರು.
ಮಕ್ಕಳ ಭವಿಷ್ಯ ಬರೆಯುವಲ್ಲಿ ಗುರುವಿನ ಪಾತ್ರ ಬಾಳ ಮುಖ್ಯ, ಇಂದಿನ ಅನೇಕ ಗುರುವೃಂದ ಕೇವಲ ಸಂಬಳಕ್ಕಾಗಿ ನೌಕರಿ ಮಾಡ್ತಿದ್ದಾರೆ, ಕೆಟ್ಟ ಕೆಟ್ಟ ಹವ್ಯಾಸಕ್ಕೆ ಅಂಟಿಕೊಂಡು ಹಾಳಾಗಿದ್ದಾರೆ. ಮಕ್ಕಳ ಎದುರಲ್ಲೆ ಬೀಡಿ , ಸಿಗರೇಟ, ಶೇರೆ, ಕುಡಿಯುದರಿಂದ ಗುರುಗಳ ಮೇಲಿ ಭಕ್ತಿ ಹಾಳಾಗಿ ಹೋಗಲು ಕಾರಣವಾಗುತ್ತದೆ.
ಮಕ್ಕಳೆ ನಾಳೆ ನೀವೆನಾದರೂ ಶಿಕ್ಷಕರಾದರೆ ದಯವಿಟ್ಟು ಹಿಂತ ಚಟಕ್ಕೆ ಅಂಟಿಕೊಳ್ಳ ಬೇಡಿ. ಆಗಲೇ ಸ್ಟಾಪ್ ರೂಮನಲ್ಲಿ ನಮ್ಮ ರಾಜಕಾರಣಿಗಳು ನಮ್ಮೊಂದಿಗೆ ಚರ್ಚೆ ಮಾಡಿದರೂ, ಇಡೀ ದೇಶದ ಶಿಕ್ಷಕರೆಲ್ಲರೂ ಕೆಟ್ಟು ಹೋಗಿದ್ದಾರೆ, ಅನೇಕ ಶಿಕ್ಷಕರೂ ಕೆಟ್ಟು ಹೋಗಿದ್ದಾರೆ, ಮೊಬೈಲನಲ್ಲಿ ಕೆಟ್ಟ ಚಿತ್ರ ನೋಡಿ ಮನಸು ಹಾಳು ಮಾಡಿಕೊಂಡಿದ್ದಾರೆ, ಅನೇಕ ಶಿಕ್ಷಕರು ಬಿಕಾರಿಯಂತೆ ರೋಡಲ್ಲಿ ಕೂಡಿದು ಅಡ್ಡಾಡುತ್ತಿದ್ದಾರೆ, ಹೀಗೆ ಅನೇಕ ಚರ್ಚೆಯನ್ನು ನಮ್ಮ ಇಂದಿನ ಅತಿಥಿಗಳು ನಮ್ಮೊಂದಿಗೆ ಮಾಡಿದರು. ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.
ಇಂದಿನ ರಾಜಕೀಯ, ರಾಜಕಾರಣ , ರಾಜವಾಳುವ ಮುಖಂಡರ ಚಾರಿತ್ರ್ಯ ನಿಮ್ಮೆದುರೆ ಇದೆ. ಅದರ ಬಗ್ಗೆ ಈ ಸಭೆಯಲ್ಲಿ ಮಾತಾಡುವುದು ಸೂಕ್ತವಲ್ಲ. ಇಷ್ಟು ಹೇಳಿ ನನ್ನ ಅಧ್ಯಕ್ಷಿಯ ಭಾಷಣ ಮುಗಿಸುತ್ತೇನೆ ಎಂದು ಗುರುಗಳು ಮಾತು ಮುಗಿಸಿದರು.
ಶಿಕ್ಷಕರಿಗೆ ಜೈವಾಗಲಿ. ರಾಜಕೀ ವ್ಯಕ್ತಿಗಳಿಗೆ ಧಿಕ್ಕಾರ . ಹೀಗೆ ಹಿಂದಿನಿಂದ ನಾಲ್ಕಾರು ಕಾಲೇಜು ಹುಡುಗರು ಕೂಗಾಡಿದರು. ಆಗ ರಾಜಕೀ ವ್ಯಕ್ತಿಯ ಅಂಗಿ ಒದ್ದೆಯಾಗಿತ್ತು. ಮೊತಿ ಮೇಲಿಂದ ಬೆವರು ಹರಿಯುತ್ತಿತ್ತು.
ಗುರುಪಾದ ಗುರುಗಳು ಮತ್ತೆ ಮೈಕ ಮುಂದೆ ಹೋಗಿ ” ದಯವಿಟ್ಟು ಶಾಂತರಾಗಿರಿ’ ಎಂದು ಆ ಗಲಾಟೆ ಹತ್ತಿಕ್ಕಿದರು. ರಾಜಕೀ ವ್ಯಕ್ತಿ ನಂದೊಂದು ಕೆಲಸವಿದೆ ಬರ್ತಿನಿ. ಅಂತ ಕಾರು ಹತ್ತಿ ಹೊರಟ ಅವನ ಕಾರಿನ ಹಿಂದ ಕೇ ಕೇ ಹಾಕುತ್ತ ಹುಡುಗರು ಓಡಿದರು.
***
ಕಲ್ಯಾಗ ಪೇಲಾದ ಅವಮಾನ ತಾಳಲಾರದೆ ಯಾರ ಜೊಡಿನೂ ಬೆರೆತಿರಲಿಲ್ಲ. ಗುರುಪಾದ ಗುರುಗಳು ಪೇಲಾದ ದಿನ ಅಷ್ಟ ಹೊಡದಿದ್ದರು, ಮತ್ತ ಮೊದಿಲಿನ ಗತೆನ ಮಗಗ ಜೀವ ಮಾಡತಿದ್ರು. ಬಾಗಿರಥಿ ವಿಪರಿತ ಕಲ್ಲಗ ಸಿಡಕ ಮಾಡುತ್ತಿದ್ದಳು. ಆಗ ಅವ್ವನ ಮ್ಯಾಲೆ ಕಲ್ಯಾ ಸಿಟ್ಟಿಗೆ ಎಳತ್ತಿದ್ದ. ಅಪ್ಪ ಬರಲಿ ಹೇಳತೀನಿ ಅಂದ್ರ ಸುಮ್ಮನ ಆಗ್ತಿದ್ದ.
ತನ್ನ ಜೋಡಿ ಇದ್ದ ಹುಡಗ್ಯಾರು. ಹುಡುಗುರು ಕಾಲೇಜ್ಕ ಹೊಂಟಾರ ಅಂತ ಚಿಂತಿ ಮಾಡಕೊಂಡ. ನಾನು ಒಂದೆಳೆ ಪಾಸ ಆಗಿದ್ರ ಇವ್ರ ಗತೇನ ಇರ್ತಿದ್ದೆ. ನಾನು ಜಮ್ಮ ಜುಮ್ಮ್ ನ್ನುವಂಗ ಡ್ರೆಸ್ ಮಾಡ್ಕೊಂಡು ಕಾಲೇಜಗ ಹೋಗ್ತಿದ್ದೆ. ಕಸ್ತೂರಿ ಮುಂದೆ ನನ್ನ ವರ್ಚಸ್ಸು ಹ್ಯಾಂಗ ಅಂತ ತೋರಿಸ್ತಿದೆ. ಆದ್ರ ಅದೆಲ್ಲ ಮುಗದ ಅದ್ಯಾಯಾ .ಅದು ಬರಿ ನೆನಪು, ಅದೊಂದು ದರಿದ್ರ ಗಳಿಗೆ, ನನ್ನ ಸೋಲಿನ  ಕ್ಷಣ, ಅವಮಾನದ ಆರಂಭ.
ಕಸ್ತೂರಿಗೂ ನಾ ಪೇಲಾಗಿದ್ದು ಸಹಿಸಾಕ ಆಗಲಿಲ್ಲ. ಅದಕ್ಕ ನನ್ನ ಮಾತಾಡ್ಸೋದು ಬಿಟ್ಟಾಳ. ಈ ಹುಡುಗ್ಯಾರ ಹಣೆಬರಾನ ಇಷ್ಟ. ಸೋತಾಗ ಮಟಾಮಾಯ್ ಆಗಿ ಗೆದ್ದಾಗ ಪ್ರತ್ಯಕ್ಷರಾಗೂ ಮಾಯಾದೇವತಿಗಳು. ಮಾಸ್ತರ ಮಗಾ ಅಂತ ಇಷ್ಟ ಪಟ್ಟಿದ್ದಳೋ ಎನೋ ನಾ ಆದ್ರ ಹಿಂಗ ಮಾಡ್ಕೊಂಡ ಕುಂತ್ಯಾ ಹಿಂಗಾದ್ರ ಹೆಂಗ. ಅಕ್ಯಾರ ನನ್ನ ಪ್ರೀತಿ ಮಾಡ್ಯಾಳೂ. ಇದು ನನ್ನ ಬದುಕಿನ ಅವಮಾನ. ನನ್ನ ಸೋಲು ಯಾರಿಗೂ ಬೇಡವಾಗಿತ್ತೋ ಏನೋ ಅದಕ್ಕೆ ನನಗಾರೂ ಸಮಾದಾನ ಮಾಡಲಿಲ್ಲ. ಅಪ್ಪನಂತ ಅಪ್ಪನೇ ಹಿಗ್ಗಾ ಮುಗ್ಗಾ ತಳಸಿದ. ಅವ್ವಗಾದ್ರೂ ಅನ್ನುದ ತಪ್ಪು. ಗೆಳೆಯರೂ ಊರಮಂದಿ, ಸಂಬಂದಿಕ್ರು, ಇವರಲ್ಲಿ ಯಾರಾದರೂ ಒಬ್ಬರು ನಂಗೆ ರಮಿಸಲಿಲ್ಲ. ನನ್ನ ತರಾ ಈ ಭೂಮಿ ಮ್ಯಾಲ ಅವಮಾನಕ್ಕ ವಳಗಾದವ್ರ ಎಷ್ಟ ಜೀವಗಳ ಅದಾವೋ ಯಾರ ಕಂಡಾರ ಅನ್ನುತ್ತ ಕಲ್ಲ ಟೆಬಲ್ಲ ಮ್ಯಾಲ ಇದ್ದ ದಿನ ಪತ್ರಿಕೆ ಕೈಗೆ ಎತಗೊಂಡ. ಪತ್ರಿಕೆಯ ತುದಿಯಿಂದ ಬಾಲದವರೆಗೆ ಓದಿ ಮುಗಿಸಿದಾಗ ಒಂದ ರೀತಿ ಖುಷಿ. ನೆಮ್ಮದಿ.  ಒಬ್ಬ ಲೇಖಕಕಾ ತುಂಬಾ ಚೆನ್ನಾಗಿ ಲೇಖನ ಬರದಿದ್ದ. ಲೇಖನದ ತೆಲೆಬರವೇ ಸೋತವರ ಸಮಾವೇಷ ಅಂತ ಇತ್ತು. ಭೂಮಿಮ್ಯಾಲಿರೋ ಪ್ರತಿ ಒಂದು ಜೀವಿಗೆ ತನ್ನದೆಯಾದ ಒಂದು ಬದುಕಿರುತ್ತೆ. ಆ ಬದುಕಿನಲ್ಲಿ ನೋವು- ನಲಿವು, ಸುಖ- ದುಃಖ, ಸೋಲು- ಗೆಲವು, ಹಗಲು ರಾತ್ರಿ ಬಂದು ಹೋದಂತೆ ಬರುತ್ತವೆ. ಗೆದ್ದಾಗ ನಕ್ಕು ಸೋತಾಗ ಅತ್ತು ನಿರಾಸೆ ಹೊಂದುವ ಮುಗ್ದ ಮನುಜರೆ. ಅದೇ ಸೋಲನ್ನೇ ನಿಮ್ಮ ಮುಂದಿನ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಿ ಆಗ ನಿಮ್ಮ ಬದುಕು ಬಂಗಾರವಾಗುವುದರಲ್ಲಿ ಎರಡು ಮಾತಿಲ್ಲ. ಹೀಗೆ ಸೋಲಿನ ಸುತ್ತಮುತ್ತಲಿನ ಬಾವನೆಯನ್ನು ಹಿಡಿದು ಲೇಖನ ಕಟ್ಟಿ ಕೊಡುವುರಲ್ಲಿ ಆ ಲೇಖಕಾ ಯಶಸ್ವಿಯಾಗಿದ್ದ. ಕಲ್ಲ ಈ ಲೇಖನ ಓದಿದ ಮೇಲೆ ಮಾನಸಿಕವಾಗಿ ಅವನಲ್ಲಿ ಏನೋ ಪರಿವರ್ತನೆ ಆದಂತೆ ಆತು. ಪತ್ರಿಕೆಯಲ್ಲಿರುವ ಆ ಲೇಖನವನ್ನು ಕತ್ತರಿ ತಗೊಂಡು ಕಟ್ಟ ಮಾಡಿ ಜೋಬಿಕೆ ಇಳಿಸಿಕೊಂಡು ಆಗಾಗ ಓದುತಿದ್ದ. ಆ ಲೇಖನ ಅಪ್ಪನ ಹೊಡೆತ, ಅಮ್ಮನ ಬೈಗುಳ, ಗೆಳೆಯರ ಚುಚ್ಚುಮಾತು, ಕಸ್ತೂರಿಯ ತಿರಸ್ಕಾರ ಎಲ್ಲವೂ ಮನಸಿನಿಂದ ಅಳಕಿ ಹಾಕಿ ಕಲ್ಲನ ಮನ ತಿಳಿಗೊಳಿಸಿತು. ಅಂದಿನಿಂದ ಕಲ್ಲ ದಿನಪತ್ರಿಕೆ ತಪ್ಪದೆ ಓದುವುದನ್ನು ರೂಡಿಸಿಕೊಂಡ. ಸಮಯ ಸಿಕ್ಕಾಗ ಊರಿನಲ್ಲಿರುವ ಚಿಕ್ಕ ಗ್ರಂಥಾಲಯ ಹೊಕ್ಕು ಹುಚ್ಚನಂತೆ ಅನೇಕ ಕಾದಂಬರಿ, ಕಥಾಸಂಲನ, ವೈಚಾರಿಕ ಗ್ರಂಥ, ವಿಮರ್ಶೆ  ಹೀಗೆ ಅನೇಕ ಸಿಕ್ಕ ಪುಸ್ತಕ ಫದಿ ಅರಗಿಸಿಕೊಂಡ.
ಅಂದು ಮುಂಜಾನೆ ಕಲ್ಲ ಪತ್ರಿಕೆ ಓದುತಿದ್ದ. ಅಕ್ಟೋಬರ ಚಾನ್ಸಗೆ ಪೇಲಾದವರ ಮರು ಪರೀಕ್ಷೆ ಅಂತ ಪೇಪರಾದಾಗ ಬಂದಿದ್ದ ನೋಡಿದ. ಅವ್ವನ ಮುಂದ ಬಂದ.

ನಾ ಇಂದ ಪ್ಯಾಟಿಗೆ ಹೋಗಬೇಕು. ಆರನೂರು ಕೊಡು ಅಂದ.
ಮೈಯಾಗ ದೆವ್ವ ಬಂದಂಗ ಮಾಡಿದಳು. ಕೊಡುದಿಲ್ಲಂದ್ರ ಕೊಡುದಿಲ್ಲ ಇಷ್ಟ ದಿನ ಸಾಲಿಗೆ ಹೊಕ್ಕಿದ್ದಿ ಕೊಡ್ತತಿದ್ಯಾ ಈಗೇನೈತಿ ಪೇಲಾಗಿ ಮನಿಯಾಗ ಕುಂತಿ. ರೊಕ್ಕದ ಬ್ಯಾನಿ ನೀನಗೇನ ಗೊತೈತಿ. ವರ್ಷಕ್ಕ 20 ಸಾವಿರ ನಿನ್ನ ಹೆಣಕ್ಕ ಬಡದ ಕುಂತಿವಿ. ಅಂತ ರೇಗಾಡಿದಳು ಬಾಗಿರಥಿ. ಕಲ್ಲಗ ತನ್ನ ಅವ್ವ ಮಾತಾಡಿದ ಮಾತು ಎದಿಗೆ ಚುಚ್ಚಿದಂಗಾಗಿ, ಕಣ್ಣ ಅಂಚಲ್ಲಿ ಮೂಡಿದ ಎರಡ ಹನಿ ಕಣ್ಣೀರ ಅಂಗೈಯಿಂದ ವರಸ್ಕೋತ ಬಾಗಲಾದಾಟಿ ಹೋರ ಹೋಗುವಾಗ ತನ್ನ ಮುಗ್ದ ತಾಯಿ ಮೋತಿ ಒಮ್ಮೆ ನೋಡಿ ಕಲ್ಲ ಅಂದು ಊರುಬಿಟ್ಟು ಹೋರಟೇ ಹೋದ.
ಗುರುಪಾದ ಸಾಲಿಯಿಂದ ಬಂದವ್ನ ಅರಬಿ ಬದಲಿಸಿ ಎಂದಿನಂತೆ ಬಾಗಿರಥಿ ತಂದ ಕೊಟ್ಟ ಬಿಸಿಬಿಸಿ ಚಾ ಕುಡಕೊತ ಕುಂತಗೊಂಡಾಗ ಕಲ್ಲ ಓದಿ ಪತ್ರಿಕೆಯಲ್ಲಿರೋ ಯರಡ ಸಾಲಗಳ ಕೇಳಗ ಕೆಂಪ ಮಸಿ ಇಂದ ಗೆರಿ ಹಾಕಿದ್ದ ಕಣ್ಣಿಗೆ ಬಿತ್ತು. ಓದಿ ಮುಗಿಸಿದ ಮ್ಯಾಲ ಎಲ್ಲಿ ಹೋಗ್ಯಾನ ಪಂಡಿತ ಕಾಣಸವಲ್ಲ ದಿನಾ ಇಲ್ಲೆ ಸುಳದಾಡ್ತಿದ್ದ. ಮತ್ತೆನರಾ ಆಟಕ್ಕ ಬಿದ್ದಾನೇನ?
ಮುಂಜ ಮುಂಜಾನೆ ಎದ್ದವ್ನ ಆರನೂರ ರುಪಾಯ ಕೇಳಿದ ಹಚ್ಚಿ ಕರಿಹರದ್ಯಾ ಅದಕ್ಕಾ ಬಿದಿ ಗೂಳಿ ಹಂಗ ಎಲ್ಲರಾ ಹರಗ್ಯಾಡಾಕ ಹೋಗಿರ್ಬೇಕು ಅನಕೊತ ಬಾಗಿರಥಿ ಬಾಂಡಿ ತಿಕ್ಕಾಕ ಹತ್ತಿದಳು. ಗುರಪಾದ ಸರ್ ನಾ ವಾಕಿಂಗ್ ಮಾಡಿ ಬರ್ತಿನಿ ಅಂತ ಹವಾಯ್ ಹಕ್ಕೊಂಡ ಹೊರಗ ಹ್ವಾದ.
 
ಯಾರಿಗೂ ಗೊತ್ತಾಗದಂಗ ಕಲ್ಲ ಐದು ದಿನ ಪಕ್ಕದ ಊರಿಗೆ ಕೂಲಿ ಕೆಲಸಕ್ಕೆ ಹೋದ. ಪಕ್ಕದೂರಿನ ರೈತನ ಹೊಲದಾಗ ತೋಟದ ಕೆಲಸ ಮಾಡಿದ. ರೈತಗ ಇಂವ ನಮ್ಮ ಗುರುಪಾದ ಮಾಸ್ತರ ಮಗನ ಗತೆ ಅದಾನಲ್ಲ ಅಂತ ಅನುಮಾನಿಸಿದ. ನೌಕರಿ ಮಾಡೊ ಮಂದಿ ಎಲ್ಲರ ಮಕ್ಕಳನ್ನ ಕೂಲಿ ಕಳಸ್ತಾರನ. ಅಂತ ತಿಳಿದು ಸುಮ್ಮನಾದ. ಆದರೂ ಅನುಮಾನ ರೈತಗ ಹೆಚ್ಚಾತು. ಕೇಳೆ ಬಿಟ್ಟ ‘ನೀ ಮಾಸ್ತರ ಮಗಾ ಇದ್ದಂಗ ಅದಿಯಲ್ಲಾ’ ಅಂದಾಗ ಕಲ್ಲ ನಕ್ಕಾ. ‘ಯಾಕ ತಮ್ಮಾ ನಗಾಕತ್ತೀ’ ಮತೇನ ರ್ರಿ ನಿಂವ ಕೇಳಿದ ಮಾತಿಗೆ ನಗು ಬಂತು ಅದಕ್ಕ ನಕ್ಯಾ ಅಂತ ಕಲ್ಲ ಒಂದು ಸುಳ್ಳಿನ ಬಾನಾ ಪ್ರೋಗಿಸಿದ ರೈತ ಆಗ ಮೌನ. ರೈತ ಕ್ಲನ ಮನಿ ಮಗನ ತರಾ ನೊಡಕೊಂಡ ಮೂರ ಹೊತ್ತ ಊಟಾ ಕೈತುಂಬ ಸಂಬಾಳಾ ಕೊಟ್ಟಾಗ ಕಲ್ಲ ಒಂದಿನಾ ನಮ್ಮೂರಿಗೆ ಹೋಗಿ ಬರ್ತಿನಿ ಅಂತ ಸುಳ್ಳ ನೆಪಾ ಹೇಳಿ ಪ್ಯಾಟಿಗೆ ಹೊದ.
ಪರೀಕ್ಷೆ ಫಾರ್ಮ ತುಂಬಿದ. ರೈತನ ಹತ್ರ ಮರಳಿ ಹೋಗೂದ ಬ್ಯಾಡ ಅನಸಿ ಪ್ಯಾಟ್ಯಾಗ ಒಂದ ಕಿರಾಣಿ ಅಂಗಡ್ಯಾ ದಿನಕ್ಕ ಮುವತ್ತ ರೂಪಾಯದಂಗ ಕೆಲಸಕ್ಕ ಸೇರಕೊಂಡು ಮಾಲಕಗ ಹುಡಗನ ಮ್ಯಾಲ ಬರವಸೆ ಬಂದದ್ಕ ಒಂದು ಪುಟ್ಟ ಕೋನಿ ಅಂಗ ಇರಾಕ ಕೊಟ್ಟ. ಆಗ ಕಲ್ಲ ಆಕಶದ ಕಡಗೊಮ್ಮೆ ನೋಡಿ ಕೈಮುಗಿದ ಆಕಾಶ ಪೂರ್ತಿ  ಕಾಲಿ ಇತ್ತು.
ಮಗಾ ಎಲ್ಲಿ ಹ್ವಾದೊ ಏನ್ಮಾಡಕೊಂಡೋ ಇರಾಂವ ನನಗ ಒಬ್ಬ ಮಗಾ ಹೆಂಗ ಮಾಡ್ಲಿ ಯವ್ವಾ, ಯಕ್ಕಾ ಅಂತ ಎದಿಬಾಯಿ ಬಡಕೊಳ್ಳಾಕ ಹತ್ತಿದಳು, ಸುತ್ತಮುತ್ತ ಮಂದಿ ಬಾಗಿರಥಿಗೆ ಸಮಾದಾನಾ ಹೇಳಾಕ ಗುದ್ದಾಡಿದ್ರು. ಆದ್ರ ಅಕಿ ಅಳು ನಿಲ್ಲಲಿಲ್ಲ. ಗುರಪಾದ ಸರ್ ಮಾತ ಬರದ ಮೂಖನಂಗ ಕುಂತ ಕಲ್ಲ ಸಣ್ಣಾಂವ ಇದ್ದಾಗಿಂದ ಇಲ್ಲಿವರಿಗೂ ಮಾಡಿದ ತುಂಟತನಾ, ಕಿರಕಿರಿ, ಹಟಮಾರಿತನಾ ಸಾಲಿ ಕಲಿಯುದರಲ್ಲಿ ಹಿಂದೆಟು ಹಾಕುವ ನೆನಪು. ಅದಕಿಂತ ಹೆಚ್ಚಾಗಿ ಹತ್ತನೇತೆ ಪೆಲಾದಗ ತವು ಹಿಗ್ಗು ಮುಗ್ಗಾ ಲಕ್ಕಿ ಜಬರಿಂದ ತಳಸಿದ ಆ ಕೆಟ್ಟ ಗಳಿಗೆ ನೆನಸಿಕೊಂಡಾಗ ಅವರ ಕಣ್ಣು ವದ್ದೆಯಾಗಿದ್ದವು.
ಎಲ್ಲಾ ಕಡೆ ಹುಡುಕಿ ಹುಡುಕಿ ಗುರುಪಾದ ಸರ್ ಹುಚ್ಚನಂತೆ ಅಲೆದರು. ಬಾಗಿರಥಿ ಅಯ್ಯೋ ನಾ ಚಂಡಾಳಿ ಅಂವ ಆರನೂರ ಕೋಡು ಅಂತ ಕೇಳಿದಾಗ ಕೊಟ್ಟಿದ್ರ ಹಿಂಗ ಅಕ್ಕಿರಲಿಲ್ಲ ಅಂತ ಮರಗಾಕತ್ತಿದು. ಕಲ್ಲನ ವಾರಗೆ ಗೆಳೆಯರು ಸಾಲಿಗೆ ಹೊಗುದ ನೋಡಿ ಮತ್ತಷ್ಟ ಹೆತ್ತ ಕರಳಿಗೆ ಸಂಕಟ ಅಕ್ಕಿತ್ತು. ಬುದ್ದಿ ಬರಲಿ ಅಂತ ತಂದಿ ತಾಯಿ ಆದವ್ರ ಮಕ್ಕಳಗೆ ಯರಡ ಮಾತ ಬೈಬಾರದು, ಬಡಿಬಾರದೂ ಅನ್ನು ಪಾಠ ಕಲ್ಲ ಮನಿ ಬಿಟ್ಟ ಹೋದಾಗ ಬಾಗಿರಥಿಗೆ ಅರ್ಥ ಆತು.
ಗುರುಪಾದ ಸರ್ ನಾಕಾರ ದಿನಾ ಹುಡುಕಾಡಿ ಕಲ್ಲ ಸಿಗದಂಗ ಆದಾಗ ಸಿದ ಪ್ಯಾಟಿಗೆ ಹೇಗಿ ಪೋಲಿಸ್ ಕಂಪ್ಲೇಟ್ ಕೊಟ್ಟ ಬಂದ್ರು. ಅದರಿಂದ ಏನೂ ಪೈದೆ ಆಗಲಿಲ್ಲ . ದಿನಪತ್ರಿಕೆ ಟಿ.ವಿ. ಯೊಳಗ ಜಾಹಿರಾತು ಕೊಟ್ಟು ಹದಿನಾರು ವರ್ಷದ ಮಗು ಕಾಣಿಯಾಗಿದ್ದಾನೆ ನೋಡಿದವರು ,ಕಂಡವರು, ಸಿಕ್ಕವರು ಈ ಸಂಖೆಗೆ ದಯವಿಟ್ಟು ಪೋನ ಮಾಡಿ ಎಂದು ಸರ್ ವಿನಂತಿ ಮಾಡಿಕೊಂಡಿದ್ದರು. ಎನಾದ್ರೂ ಕಲ್ಲನ ಸುಳಿವು ಸಿಗಲಿಲ್ಲ.
ದಿನಗಳು ಉರಳಿದವು, ಕಲ್ಲ ಕಿರಾಣಿ ಅಂಗಡಿಯಿಂದ ಮೊಬೈಲ ಅಂಗಡಿಗೆ, ಅಲ್ಲಿಂದ ಬಡ್ಡೆ ಅಂಗಡಿ ಹೀಗೆ ಬದಲಾಗುತಿದ್ದ ಅವನ ವೃತ್ತಿ ಜೀವನದ ಬದುಕು ಗಟ್ಟಿಗೊಂಡು ನೆಲೆ ನಿಂತದ್ದು ಸಣ್ಣದೊಂದು ದಿನ ಪತ್ರಿಕೆಯ ವರದಿಗಾರನಾದಾ. ಅವನ ಜೊತೆ ಕೆಲಸ ಮಾಡುವ ಒಂದು ಹುಡಗಿಯನ್ನು ಪ್ರೀತಿಸಿ ಕೈಸುಟ್ಟುಕೊಂಡು ಆ ಗಾಯ ಮಾಯಿವ ಹೊತ್ತಿಗೆ ಮತ್ತೊಂದು ಹೆಣ್ಣೆನ ಸಂಪರ್ಕ ಸಿಕ್ಕಿತ್ತು. ಅವನ ಬದುಕಿಗೆ, ಅವನ ಕನಸಿಗೆ, ಅವನ ನೋವಿಗೆ, ಆಸರೆಯಾಗಿ ನಿಂತು ಶುಭಕೋರಿದವಳು ಒಂದು ಕೋಟಿ ಆಸ್ತಿಗೆ ಒಡೆಯಳಾದ ಹೇಮಾ ಗೌಡ. ಹೇಮಾಗೌಡ ಸುಮ್ಮಸುಮ್ಮನೆ ಕಲ್ಲನ ಮೇಲೆ ಮನಸೋತಿರಲಿಲ್ಲ. ಅವಳು ಅವನಿಗೆ ಬೀಳೋಕೆ ಅವನ ರೂಪಾಕಾರನವಾಗಿರಲಿಲ್ಲ. ಅವನು ಬರೆಯುವ ಪುಟ್ಟ ಕವಿತೆ, ಕಥೆ, ನಗೆಬರಹ, ಅವಳ ಮನಸನ್ನು ಸೂರೆಗೊಂಡಿದ್ದವು. ಅಪ್ಪಾ ನಿಮ್ಮ ಆಫೀಸನಲ್ಲಿ ಕೆಲಸ ಮಾಡತಾರಲ್ಲ ಕಲ್ಯಾಣ ಅವರನ್ನ ನಾಪೀತಿಸ್ತಿದ್ದೀನಿ ಅಂತ ಹೇಮಾ ಹೇಳಿದಾಗ ಒಂದು ಕ್ಷಣ ದೀಪಕ್ ಪೆಚ್ಚಾಗಿಹೋದ. ಮಗಳ ಇಚ್ಚೆಗೆ ವಿರೋಧವಾಗದೆ. ಅವರ ಮದವೆ ಮಾಡಿ ಮುಗಿಸಿದ್ದ. ಅಂದಿನಿಂದ ಕಲ್ಲನ ಬುದುಕು ಗೆಲುವಿನತ್ತ ವಾಲಿಕೊಂಡಿತು. ಕಲ್ಲ ಬರೆದ ಕಥಾಸಂಕಲನಕ್ಕೆ ಅವಾರ್ಡ ಬಂದಿತ್ತು. ಆಗ ಹೇಮಾನ ಮನಸ್ಸು ನವಿಲಾಯಿತು. ದೀಪಕ್ ಅಳಿಯನ ಸಾಧನೆ ಮೆಚ್ಚಿ ಒಂದು ಕಾರ ಪ್ರಜಂಟ ಮಾಡಿದ. ಕಲ್ಲನಿಗೆ ರೆಕ್ಕೆ ಪುಕ್ಕ ಮೂಡಿದ ಬಾವ. ಪತ್ರಿಕೆ, ಟಿ.ವಿ ಮೊದಲಾದ ಕಡೆಗಳಲ್ಲಿ ಇವನ ಸಾಹಿತ್ಯದ್ದೆ ಮಾತು.
ಇಷ್ಟೆಲ್ಲ ಕಲ್ಲ ಬದಾಲಾದರೂ ತನ್ನ ತಂದೆ ತಾಯಿ ನೋಡುವ ಹಂಬಲ, ತಾಯಿಯ ಬೈಗುಳ, ಅಪ್ಪನ ಹೊಡೆತ, ಕಣ್ಣೆದುರಿಗೆ ಕಟ್ಟಿದಂತಾಗಿ. ಪಟ್ಟನ ಕಾರ ಚಲೂ ಮಾಡಿದಂವನ ತನ್ನ ಹಳ್ಳಿಕಡೆ ಅದರ ಮೊಕಾ ತಿರಗಿಸಿದ. ಪಕ್ಕದಲ್ಲಿ ಹೇಮಾ ಕುಂತುಕೋಡಿದ್ದಳು.
ಮನೆ ಅಂಗಳದಲ್ಲಿ ಕಾರು ಬಂದಿ ನಿಂತಾಗ ಗುರುಪಾದ ಸರ್ ಯಾರೋ ಸಾಹೀಬ್ರ ಇರಬೇಕಂತ ನಮಸ್ಕಾರ ಮಾಡಿದ ಅಷ್ಟೊತ್ತಿಗೆ ಕಲ್ಲನ ದುಃಖದ ಕಟ್ಟೆ ತುಂಬಿತ್ತು, ಬಾಗಿರಥಿ ತೆಲ್ಯಾಗಿನ ಕೂದಲಾ ಬೆಳ್ಳಗಾಗಿದ್ದು, ಮೊಕಾ ಎಲ್ಲಾ ಬಾಡಿತ್ತು. ಬದುಕಿನಲ್ಲಿ ಏನೋ ಕಳಿದು ಕೋಂಡವಳ ವೇಧನೆ ಎದ್ದು ಕಾಣುತಿತ್ತು. ಕಲ್ಲ ‘ಯವ್ವಾಬೇ’ ಅಂತ ತಾಯಿನ ಬಂದ ತಬ್ಬಿ ಕೊಂಡಾಗ ಗುರುಪಾದನಿಗೆ ಪರಮಾಶ್ಚರ್ಯ. ಬಾಗಿರಥಿ ಇದೆನು ಕನಸೋ ನನಸೋ ಎಂಬ ಕೌತುಕ. ಮತ್ತೊಂದು ಮಗನ್ನ ಹೆತ್ತ ಆನಂದ ಕಲ್ಲನ ಕೋಕಾ ನೋಡಿದಾಗ. ಮೊದಲಿಗೆ ಕೂನು ಸಿಗದಿದ್ದರು ಕಲ್ಲನ ದನಿ ಮ್ಯಾಲೆ ಹೆತ್ತ ಜೀವ ಕಾತ್ರಿ ಮಾಡಿಕೊಂಡು ವಾತ್ಸಲ್ಯ ತೋರಿದ್ದವು.
ಇಡೀ ಊರ ಮಂದಿ ಗುರಪಾದ ಸರ್ ಮನಿ ಮುಂದ ಜಮಾಯಿಸಿದ್ದರು. ಕಲ್ಲ ನೋಡಿ ಬಾಯ್ ಮ್ಯಾಲ ಕೈ ಇಟಗೊಂದರು. ‘ಯಲಾ ಇಂವನ ದೇಸಾವರಿ ಹೋದಾವ್ರ ಹೋಳ್ಳಿ ಬರೋದ ಕಮ್ಮಿ, ಅದರಾಗ ಇಂವ ಮತ್ತ ಬಂದಾನ ಅಂದ್ರ ದೊಡ್ಡ ಅಗಾದ’ ಅಂತ ಮಾರುತೆಪ್ಪ ಅಜ್ಜ ಕಡಾಮುಡಿ ಮಂದ್ಯಾಗ ಮಾತಾಡಿದ. ಇವನ ಸಾಧನೆ ಇವನಿಗೆ ಬಂದ ಅವಾರ್ಡ ಅರಿತ ಊರ ಮಂದಿ ದಂಗಾದ್ರು. ಅಂತೂ ನಿಮ್ಮ ಮಗಾ ನಿಮ್ಮ ಹೆಸರ ತಂದ ನೋಡ್ರೀ ಅ ಮತ ಹನಮಪ್ಪಜ್ಜ ಮಾತಾಡಿದಾಗ ಗುರಪಾದನ ಕಣ್ಣಾಗ ಆನಂದದ ಕಣ್ಣೀರ ಸುರದು. ಬಾಗಿರಥಿ ಆರತಿ ಬೆಳಗಿ ವಳಗ ಕರದಳು.
ಆಗ ಕಸ್ತೂರಿ ಬಗಲಾಗೊಂದ ಮಗನ ಎತ್ತಗೊಂಡ ಕಲ್ಲನ ಅಂಗಳದಾಗ ನಿಂತ ಬಿಳಿ ಕಾರ ನೋಡಕೋತ ಮರೆಯಾಗಿ ಹೋದಳು. ಕಲ್ಲ ಅವಳು ಮರೆಯಾಗುವರಗೂ ನೋಡುತ್ತಲೇ ನಿಂತಿದ್ದ.
 

‍ಲೇಖಕರು avadhi

4 May, 2014

1 Comment

  1. ಹನುಮಂತ ಹಾಲಿಗೇರಿ,

    ಕಥೆ ಕೊನೆವರೆಗೂ ಬಾಳ ಚಂದ ಓದಿಸಿಕೊಂಡು ಹೋಯ್ತು. ಆದ್ರ ಕೊನೆಯಲ್ಲಿ ಸಿನಿಮೀಯ ಅನಿಸ್ತು. ಬರಿತಾ ಇರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading