ಶಂಕರ್ ಸಿಹಿಮೊಗೆ
ನಾಟಕ ಕಲೆಯೆಂಬುದು ಮಾನವ ತತ್ತ್ವಜೀವನದಲ್ಲಿ ಒಂದು ಅಂಗವಾಗಿದೆ.ಮನುಷ್ಯನಲ್ಲದೇ ಪ್ರಾಣಿ, ಪಕ್ಷಿ, ಗಿಡ ಮರ, ಕ್ರೀಮಿ ಕೀಟಗಳಲ್ಲಿಯೂ ತಮ್ಮ ಆಹಾರಕ್ಕಾಗಿಯೋ ಅಥವಾ ಅಸ್ತಿತ್ವಕ್ಕಾಗಿಯೋ ನಡೆಸುವ ಹೋರಾಟವೂ ಕೂಡಾ ಒಂದು ನಾಟಕೀಯ ಸಂದರ್ಭವಾಗಿರುವುದನ್ನು ಗಮನಿಸಬಹುದು. ಆದರೆ ಜಪಾನ್, ಚೀನಾ, ಆಫ್ರಿಕಾದಂತಹ ರಂಗಭೂಮಿಗಳಲ್ಲಿ ಒಂದು ವೈವಿಧ್ಯಮಯವಾದ ಕಲೆ, ನಟನೆ, ಬೆರಗು, ಸಂಗೀತ ಸಾಹಿತ್ಯವೂ ಕೂಡಾ ಅದರದ್ದೇ ಆದ ಕಸುಬನ್ನು ಎಣೆದುಕೊಂಡಿರುವುದರಲ್ಲಿ ಸಂದೇಹವಿಲ್ಲ.
ಭಾರತೀಯ ನಾಟಕ ಪರಂಪರೆಯಲ್ಲಿ ಊರ್ಧ್ವಮುಖದ ಬೆಳವಣಿಗೆಯನ್ನು ಕಾಣಬಹುದು ಹಾಗೆ ಬಯಲಾಟ, ಸಣ್ಣಾಟ, ಯಕ್ಷಗಾನ ಮುಂತಾದ ತೆರೆವುಗಳಿಂದ ತನ್ನದೆ ಆದ ಕಕ್ಷೆಯನ್ನು ಗುರುತಿಸಿಕೊಂಡಿರುವ ರಂಗಭೂಮಿಯ ವೈಶಿಷ್ಟತೆಯನ್ನು ಗಮನಿಸಬಹುದು.

ಪ್ರಸಿದ್ಧ ಲೇಖಕ “ಜಾರ್ಜ್ ಆರ್ವೆಲ್”ನ ‘ಅನಿಮಲ್ ಫಾರ್ಮ್ ‘ ಕಾದಂಬರಿಯಾಧರಿತ ಕನ್ನಡ ನಾಟಕವನ್ನು ಸ್ವತಃ ರಚನೆ ಮಾಡಿ ರಂಗಪ್ರಯೋಗ ಮಾಡಿಸುವುದು ಒಂದು ದುಸ್ಸಾಹಸವೇ ಸರಿ! ಇಂತಾ ಸಾಹಸಗಳಿಗೆ ನಿರ್ದೇಶಕರಾದ ಸೂರ್ಯಕೀರ್ತಿ ಕೈ ಹಾಕಿರುವುದು ಹೆಮ್ಮೆಯ ವಿಷಯ. ಇಲ್ಲಿನ ಎಲ್ಲಾ ಪಾತ್ರಗಳು ಪ್ರಾಣಿಗಳ ಪಕ್ಷಿಗಳ ಹೋಲಿಕೆಯೊಂದಿಗೆ ಮನುಷ್ಯ ಪ್ರಭುತ್ವದ ಪ್ರಶ್ನೆಯಾಗಿದೆ. ಇಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಲೆನಿನ್, ಛೇ ಅಂತವರು ಕೂಡಾ ಪ್ರತಿಭಟಿಸುತ್ತಾರೆ. ಹಿಟ್ಲರ್ ನಂತಹ ರಾಜರು ಕೂಡಾ ಅಧಿಕಾರದ ಸಿಂಹಾಸನಕ್ಕೆ ಬರುತ್ತಾರೆ. ಡೆಮಾಕ್ರಸಿ ಎಂಬ ಅಧಿಕಾರದ ಆಡಳಿತವನ್ನ ಹೇಗೆ ದುರ್ಬಳಕೆ ಮಾಡಿಕೊಂಡರು ಎಂಬುದನ್ನು ಲೇಖಕ ತಾನು ಸೃಷ್ಟಿ ಮಾಡಿದ ಪಾತ್ರಗಳ ಮೂಲಕ ಸೂಕ್ಷ್ಮವಾಗಿಯೇ ಪ್ರತಿಭಟಿಸುತ್ತಾನೆ.
ಕ್ರಾಂತಿ, ಸ್ವಾತಂತ್ರ್ಯದ ಕಿಚ್ಚು, ಸಮಾನತೆ, ದಂಗೆಯ ಪರಿಣಾಮ, ಬದುಕುವ ಹಕ್ಕನ್ನು ಹೇಗೆ ಆಳುವ ವರ್ಗದವರಿಂದ ದಕ್ಕಿಸಿಕೊಳ್ಳಬೇಕು; ಒಂದು ದೇಶದಲ್ಲಿ ರಾಜಕೀಯ, ಜಾತೀಯತೆ, ಮತೀಯ ಧರ್ಮಾಂಧತೆ ಇವೆಲ್ಲವುಗಳ ನಡುವೆ ಜನಸಾಮಾನ್ಯರ ಜೀವನ ಮುಖ್ಯವಾದದ್ದು. ಇದನ್ನು ನಿರ್ಲಕ್ಷಿಸಿ ರಾಜ ಅಧಿಕಾರಕ್ಕೆ ಬಂದರೆ ಅಥವಾ ಸುಳ್ಳಿನ ಭರವಸೆಗಳನಿಟ್ಟು ಅಧಿಕಾರಕ್ಕೆ ಬಂದು ಸರ್ವಾಧಿಕಾರದ ನೆಲೆಯಲ್ಲಿ ನಿಂತು ಮಾತನಾಡುವ ರಾಜರು ಜಗತ್ತಿನಲ್ಲಿಯೇ ಈಗಾ ಆಡಳಿತ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಾರ್ಜ್ ಆರ್ವೆಲ್ ಅವರ ಅನಿಮಲ್ ಫಾರ್ಮ್ ಕಾದಂಬರಿ ವಾಸ್ತವದ ಇಂದಿನ ಸಂದರ್ಭವನ್ನು ಎತ್ತಿ ತೋರುತ್ತದೆ. ಕನ್ನಡ ನಾಟಕಕ್ಕೆ ಸೂಕ್ತವಾಗುವಂತೆ ರಚಿಸಿ ಬಳಸಿರುವ ರಂಗಗೀತೆಗಳು ಕೂಡ ನಾಟಕದ ಯಶಸ್ಸಿಗೆ ಕಾರಣವಾಗಿರುವುದನ್ನು ಇಲ್ಲಿ ನಾವು ಕಾಣಬಹುದು.

ಈ ಕಾದಂಬರಿಯನ್ನು ಕನ್ನಡ ರಂಗಪ್ರಯೋಗ ಮಾಡಿಸುವಾಗ ಅಲ್ಲಲ್ಲಿ ಕೆಲವು ಕೊರತೆಗಳಿದ್ದರೂ ಕೂಡಾ ಕವಿ, ನಿರ್ದೇಶಕರಾಗಿರುವ ‘ಸೂರ್ಯಕೀರ್ತಿ’ಯ ಸಾಹಸ ಮೆಚ್ಚುವಂತದ್ದು. ಆಯಾ ಪಾತ್ರಗಳಿಗೆ ಜೀವ ತುಂಬಿಸಿ, ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದವನ್ನು ಮಾಡಿಕೊಂಡು ಇಲ್ಲಿನ ವಾತಾವರಣಕ್ಕೆ ಹೊಂದಾಣಿಕೆಯಾಗುವಂತೆ ಭಾಷೆ ಬಳಸಿಕೊಂಡು ರಂಗಪ್ರಯೋಗದಲ್ಲಿ ವಿಶಿಷ್ಟತೆಯನ್ನು ತಂದಿದ್ದಾರೆ.
ಇವರು ಕುವೆಂಪು ರಚಿತ ‘ಜಲಗಾರ’ ಮತ್ತು ಹಿಂದಿ ಕತೆಗಾರರಾದ ಪ್ರೇಮಚಂದರ ‘ಹೆಣದ ಬಟ್ಟೆ’ ಕತೆಯನ್ನು ನಾಟಕ ರಚಿಸಿ ರಂಗಪ್ರಯೋಗ ಮಾಡಿ ನಿರ್ದೇಶನದ ಮೂಲಕ ಯಶಸ್ವಿಯಾಗಿರುವುದನ್ನು ಕಾಣಬಹುದು. ಆದರೆ ಈ ಅನಿಮಲ್ ಫಾರ್ಮ್ ಎಂಬ ಕಾದಂಬರಿಯಾಧರಿತ ರಂಗಪ್ರಯೋಗ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ವಿಶಿಷ್ಟ ಎನ್ನಬಹುದು. ಇದೇ ಕಾದಂಬರಿಯಾಧರಿತ ನಾಟಕವನ್ನು ಎನ್.ಎಸ್.ಡಿ. ಕೂಡಾ ಈ ಹಿಂದೆ ಪ್ರದರ್ಶನ ಕೊಟ್ಟಿದೆ ಆದರೆ ಹವ್ಯಾಸಿ ರಂಗಭೂಮಿಯ ನಟರು ಅಭಿನಯಿಸುವ ಕಾರ್ಯ ಕ್ಷೇತ್ರವೇ ಬೇರೆ; ಇಂತಹದ್ದನ್ನು ಚೈತ್ರಾಕ್ಷಿ ರಂಗಭೂಮಿ ಕೊಟ್ಟಿದ್ದು ಕನ್ನಡಕ್ಕೆ ಹೆಮ್ಮೆಯ ವಿಷಯವೆಂದು ಹೇಳಬಹುದು.






0 Comments