ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸೂರು' ಅನುಪಮಾ ಪ್ರಸಾದ್ ಬರೆದ ಸಣ್ಣಕಥೆ

ಅನುಪಮಾ ಪ್ರಸಾದ್.

ವೈಶಾಲಿ-ಗುರುಮೂರ್ತಿಯರು ಬೆಳಗಿನ ನಡಿಗೆ ಆರಂಭಿಸುವ ಹೊತ್ತಿಗೆ ನಸುಕು ಹರಿದಿರುವುದಿಲ್ಲ. ಅದು ಪಳ್ಳಿಯ ಬಾಂಕು, (ಯಾವುಯಾವುದೊ) ದೇವಸ್ಥಾನಗಳ ಸುಪ್ರಭಾತಗಳ ಧ್ವನಿವರ್ಧಕಗಳು ಇರುಳಿನ ಮೌನಕ್ಕೆ ವಿದಾಯ ಹೇಳುವ ಗುತ್ತಿಗೆಯನ್ನು ಜಾರಿಗೊಳಿಸುವ ಹೊತ್ತು. ಬೀದಿ ದೀಪಗಳು; ಮನೆಗಳ ಹೊರಭಾಗದ ಬಲ್ಬುಗಳು; ಆಕಾಶದ ಚುಕ್ಕಿಗಳು- ತಮ್ಮ ಶಿಫ್ಟಿನ ಕೊನೆಯ ಕ್ಷಣಗಳನ್ನೆಣಿಸುತ್ತ ಕಾರ್ಯ ನಿರ್ವಹಿಸುತ್ತಿರುವ ಹೊತ್ತು. ರಸ್ತೆಯ ಬಲಭಾಗವನ್ನು ಚತುಷ್ಪಥ ಕಾಮಗಾರಿಗಾಗಿ ಮುಚ್ಚಿದ್ದರಿಂದ ವಾಹನಗಳೆಲ್ಲ ಎಡಬದಿಯಲ್ಲೇ ಚಲಿಸಬೇಕು. ರಸ್ತೆ ಬದಿಯಲ್ಲಿ ನಡೆಯುವಾಗ, ರಸ್ತೆ ದಾಟುವಾಗ ಮೈ ತುಂಬ ಕಣ್ಣು-ಕಿವಿಗಳೇ ಇರಬೇಕು. ಗೇಟು ದಾಟಿ ನೂರು ಮೀಟರಿನಷ್ಟು ದೂರ ಬರುತ್ತಿದ್ದಂತೆ ಪ್ರೊಫೆಸರ್ ಅಮೃತೇಶ್ವರರ ಮನೆಯತ್ತ ಇಬ್ಬರ ಕಣ್ಣೂ ಹೊರಳಿತು. ವಾರದ ಹಿಂದಿನವರೆಗು ಆ ಹೊತ್ತಿಗೆ ಆ ಮನೆಯೊಳಗಿನ ಹಜಾರದಲ್ಲಿ ಚಲನೆ ಸುರುವಾಗುತ್ತಿತ್ತು. ಕಿಟಕಿಗೆದುರೇ ಇರುವ ಮೇಜಿನೆದುರಿನ ಕುರ್ಚಿಯಲ್ಲಿ ಕುಳಿತು ಅಧ್ಯಯನದಲ್ಲಿ ತೊಡಗುತ್ತಿದ್ದ ಅಮೃತರು ಹಾರುತ್ತಿದ್ದ ಕರ್ಟನ್ ನಿನೆಡೆಯಿಂದ ಕಾಣುತ್ತಿದ್ದರು. ಇವರು ಹಿಂತಿರುಗುವಾಗ ಅವರು ಗೇಟಿನೆದುರು ಬಂದಿರುತ್ತಿದ್ದರು. ಈಗ ನಾಲ್ಕು ದಿನಗಳಿಂದ ಆ ಜಾಗದಲ್ಲಿ ಎಷ್ಟೊ ವರ್ಷದ ಪಳೆಯುಳಿಕೆಯಂತೆ ಮುರಿದ ಎರಡು ಗೋಡೆಗಳು ಮಾತ್ರ. ಅದೊಂದೇ ಮನೆಯಲ್ಲ, ಅಲ್ಲಿದ್ದ ಸಾಲು ಸಾಲು ಮನೆಗಳು; ಅವುಗಳ ಹಿತ್ತಿಲುಗಳಲ್ಲಿದ್ದ ಮರಗಳು ಕುರುಹೂ ಇಲ್ಲದಂತೆ ಸರದಿಯಲ್ಲಿ ನೆಲದಡಿಗೆ ಸೇರಿ ಹೋಗಿ ಸಮತಟ್ಟಾಗಿದೆ. ಕರೆಗಾಳಿಗೆ ಈಗ ಆಟವಾಡಲು ತೆಂಗಿನ ಗರಿಗಳೂ ಇಲ್ಲ. ಬಹುಶಃ ಬರುವ ವಾರ ನಮ್ಮ ಸರದಿ. ಬಾಡಿಗೆ ಮನೆ ಹುಡುಕಾಟವಿನ್ನೂ ಮುಗಿದಿಲ್ಲ. ವೈಶಾಲಿ-ಗುರುಮೂರ್ತಿಯರ ಕಣ್ಣುಗಳು ಅರೆಕ್ಷಣ ಸಂಧಿಸಿ ಏನೂ ಇಲ್ಲವೆಂಬಂತೆ ಎದುರಿನ ದಾರಿಯತ್ತ ಹೊರಳಿದವು.
ವಾಕಿಂಗ್ ಮುಗಿಸಿ ಬಂದವರೇ ಸಿಟೌಟಿನಲ್ಲಿರುವ ಬೆತ್ತದ ಕುರ್ಚಿಗಳಲ್ಲಿ ಕುಳಿತು ತಮ್ಮ ಪುಟ್ಟ ಅಂಗಳದಲ್ಲಿರುವ ಗಿಡಗಳತ್ತ ಕಣ್ಣು ಹಾಯಿಸಿದರು. ಹಾಗೆ ಕುಳಿತು ಮಕ್ಕಳಂತೆ ಸಾಕಿದ ತಮ್ಮ ಗಿಡಗಳ ಬಾಲ್ಯದ ಬಗ್ಗೆ, ಕೆಲವೊಮ್ಮೆ ಕಾರಣ ತಿಳಿಯದೆ ಬಡವಾದ ಅವುಗಳನ್ನು ನಳನಳಿಸುವಂತೆ ಮಾಡಲು ಪರದಾಡಿದ ಬಗೆಗಳನ್ನು ಮೆಲುಕು ಹಾಕಿಯೇ ಅವರು ಮುಂದಿನ ಕೆಲಸಕ್ಕೆ ಏಳುತ್ತಿದ್ದುದು. ಒಂದು ಮೂಲೆಯಲ್ಲಿ ತೆಂಗು. ಗೇಟಿನ ಅಕ್ಕಪಕ್ಕದಲ್ಲಿ ಎರಡು ಮಾವಿನ ಮರಗಳು. ಈ ವರ್ಷ ಮಾವು ಹೂವು ತುಂಬಿ ತೊನೆಯುತ್ತಿತ್ತು. ಗೇಟಿನ ಬುಡದಲ್ಲಿ ನಿಂತರೆ ಅಮಲೇರಿಸುವಂತೆ ಮಾವಿನ ಹೂವಿನ ಪರಿಮಳ. ಕಂಪೌಂಡ್ ಒಳ ಭಾಗದಲ್ಲಿ ಒಂದು ಚಿಕ್ಕು, ದಾಳಿಂಬೆ, ಸೀತಾಫಲಗಳು. ಆರೇಳು ಚಟ್ಟಿಗಳಲ್ಲಿ ಹೂವಿನ ಗಿಡಗಳು. ಅವರ ಮಾತುಗಳು ಸಾಗುತ್ತಿದ್ದಂತೆಯೇ ಅಂಗಳದ ಅರ್ಧಭಾಗಕ್ಕೂ ನೆರಳು ನೀಡಲೆಂಬಂತೆ ಹರಡಿ ನಿಂತ ಚಿಕ್ಕು ಮರದಿಂದ ಕಾಯಿಯೊಂದು ಉದುರಿತು. ಹಿಂದೆಯೇ ಅಳಿಲುಗಳ ಕಿಚ್ಕಿಚ್. ಕೆಳಗೆ ಬಿದ್ದ ಕಾಯಿಯ ಗುರುತು ವೈಶಾಲಿಗಿತ್ತು. ಹಿಂದಿನ ದಿನವಷ್ಟೆ ಮೊಮ್ಮಗಳು ಪ್ರಗತಿಗೆ ಕಾಯಿ ತೋರಿಸಿ ಎರಡು ದಿನ ಬಿಟ್ಟು ಕೊಯ್ಯೋಣ ಮರಿ ಅಂದಿದ್ದರು.
ಈ ಅಳಿಲು-ಮುಂಗುಸಿಗಳ ಉಪದ್ರ ಜೋರಾಯ್ತು. ಕಾಯಿ ಬೆಳೆಯಲಿ ಅಂತ ಬಿಟ್ರೆ ಒಂದನ್ನೂ ಉಳಿಸುವುದಿಲ್ಲ. ಸಾಧಾರಣ ಬೆಳೆದದ್ದನ್ನೆಲ್ಲ್ಲ ಕೊಯ್ದು ಬಿಡ್ತೇನೆ. ಈ ಬೆಳೆಯೇ ಕೊನೆಯದು. ಧ್ವನಿಗೆ ನಿರ್ಭವುಕತೆಯ ಲೇಪ ಹಚ್ಚಿ ಹೇಳುತ್ತ ಅಂಗಳಕ್ಕಿಳಿದರು.
ನೀನೇನು ಮುದುಕಿ ಆಗ್ತಿದ್ದೀಯೋ ಅಲ್ಲ ಜವ್ವಂತಿಯೋ? ವಾಸು ಎದ್ದ ಮೇಲೆ ಕೊಯ್ ದರಾಯಿಯ್ತು. ಈಗ ನೀನು ಕಸರತ್ತು ಮಾಡ್ಬೇಡ ಕುಳಿತಲ್ಲಿಂದಲೇ ಗುರುಮೂರ್ತಿ ಗೊಣಗಿದರು.
ಆತ ಮಾತಿಗೆ ಹೇಳಿದ್ದಲ್ಲದೆ ಇಂತ ಮಾತಿಗೆ ವೈಶಾಲಿ ಕಿವಿಗೊಡುವುದಿಲ್ಲವೆಂದು ಗೊತ್ತು. ಆ ಗಿಡದಲ್ಲಿ ಕಾಯಿ ಬಿಡಲು ಶುರುವಾದಂದಿನಿಂದ ಆಕೆ ಮಾಡುತ್ತ ಬಂದ ಕೆಲಸವದು. ಅದಕ್ಕಾಗೇ ಒಂದು ಸಣ್ಣ ಕೊಕ್ಕೆಯೂ ಇತ್ತು. ಮರ ಹೆಚ್ಚು ಎತ್ತರ ಹೋಗದೆ ರೆಂಬೆ-ಕೊಂಬೆಗಳು ಅಗಲಕೆ ಹರಡಿಕೊಂಡಿದ್ದಿದ್ದರಿಂದ ನೆಲ ಮಟ್ಟದ ಕೆಳಗಿನ ಕೊಂಬೆ ಮೇಲೆ ನಿಂತು ಕೊಕ್ಕೆಯಿಂದ ಒಂದೊಂದೇ ಚಿಕ್ಕುಕಾಯಿಗಳನ್ನು ಎಳೆದು ಹಾಕಿ, ಅದನ್ನೆಲ್ಲ ಹೆಕ್ಕಿ ತೊಟ್ಟಿನ ಬುಡದ ಹಾಲಿನ ಅಂಟು ಇಳಿಯಲು ಸಾಲಾಗಿ ಜೋಡಿಸಿಡುವುದೆಂದರೆ ಹಬ್ಬದ ಸಂಭ್ರಮ ವೈಶಾಲಿಗೆ. ಒಂದು ಚಿಕ್ಕುಕಾಯಿಯನ್ನು ಕೊಯ್ದು ಹಾಕಿದ್ದಷ್ಟೆ. ಅಷ್ಟರಲ್ಲಿ ಚಿಕ್ಕುಗಿಡದ ತಲೆ ಮೇಲೆ ಹಾದು ಹೋದ ಪಾಗಾರದಂಚಿನಲ್ಲಿರುವ ಮಾವಿನ ಮರಕ್ಕೆ ತಾಗಿದಂತಿರುವ ಕರೆಂಟ್ ಕಂಬಕ್ಕೆ ಕಟ್ಟಿದ ಟೆಲಿಫೋನ್ ವಯರ್ ಜೋರಾಗಿ ಅಲುಗಾಡಿತು. ನೋಡಿದರೆ ಪರಿಸರದಲ್ಲಿ ಯಾವಾಗಲೂ ಕಾಣುವ ಪುಟ್ಟ ಹಕ್ಕಿಯೊಂದು ಕೊಕ್ಕಿನಲ್ಲಿ ಒಣಗಿದ ಹುಲ್ಲುಕಡ್ಡಿ ಕಚ್ಚಿಕೊಂಡು ಕುಳಿತಿತ್ತು.
ಓಹೋ! ಇಲ್ಲಿ ನೋಡಿ. ಮನೆಕಟ್ಟುವ ತಯಾರಿ ನಡಿತಿದೆ! ಸರಿಯಾದ ಜಾಗ ಹುಡುಕುತ್ತಿರಬೇಕು ಗಂಡನಿಗೆ ಕೇಳುವಂತೆ ಹೇಳಿ ಹಕ್ಕಿ ಸರಿಯಾಗಿ ಕಾಣುವಂತೆ ಮೆಟ್ಟಿಲ ಮೇಲೆ ಕುಳಿತರು. ಗುರುಮೂರ್ತಿಯೂ ಎದ್ದು ಬಂದು ಹೆಂಡತಿಯ ಪಕ್ಕವೇ ಕುಳಿತರು. ಇವರಿಗೆ ಕೊರಳೆತ್ತಿ ನೋಡಿ ನೋಡಿ ಸುಸ್ತಾದರೂ ಆ ಹಕ್ಕಿ ಮಾತ್ರ ಅತ್ತಿತ್ತ ಕೊರಳು ಕೊಂಕಿಸುತ್ತ ಕುಳಿತಲ್ಲೇ ಕುಳಿತಿತ್ತು.

ಯಾಕೊ ಇದಕ್ಕೆ ಮನೆ ಕಟ್ಟಲು ಯಾವ ಜಾಗವೂ ಆಯ್ಕೆಯಾಗುತ್ತಿಲ್ಲ. ನಾನು ಈ ಚಿಕ್ಕುಗಿಡದ ಹತ್ತಿರ ಬರದಿದ್ದರೆ ಅಲ್ಲೇ ಕೆಲಸ ಸುರು ಮಾಡುತ್ತಿತ್ತೇನೊ ವೈಶಾಲಿ ಸ್ವರ ತಗ್ಗಿಸಿ ಹೇಳುತ್ತಿದ್ದಾಗಲೇ ಗೇಟಿನ ಸಮೀಪದ ಕಂಬದಿಂದ ಹಕ್ಕಿಯೊಂದರ ದನಿ. ಆ ಧ್ವನಿ ಕೇಳಿದ್ದೇ ಹುಲ್ಲುಕಡ್ಡಿ ಕಚ್ಚಿಕೊಂಡಿದ್ದ ಹಕ್ಕಿ ಮತ್ತೆ ಎಡಬಲಕ್ಕೆ ಕತ್ತು ಕೊಂಕಿಸಿ ಹಾರಿ ಚಿಕ್ಕುಗಿಡದ ಮೇಲೆ ಕುಳಿತಿತು. ಮತ್ತೆ ಆ ಹಕ್ಕಿ ಎಳೆದೆಳೆದು ಕೂಗುತ್ತಿದ್ದಂತೆ ಅಲ್ಲಿಂದ ಹಾರಿ ಮಾವಿನ ಮರದ ರೆಂಬೆಯ ಮೇಲೆ ಕುಳಿತಿತು. ಗುರುಮೂರ್ತಿಗೆ ಬೆಳಗಿನ ಕೆಲಸ ಬಾಕಿಯಿದ್ದಿದ್ದರಿಂದ ಹೊಟ್ಟೆಯೊಳಗೆ ಸಂಚಲನ ಶುರುವಾಗಿ ಈಗ ಬಂದೆ ಮಾರಾಯ್ತಿ ಅನ್ನುತ್ತ ಒಳಗೆದ್ದು ನಡೆದರು. ವೈಶಾಲಿ ನೋಡನೋಡುತ್ತಿದ್ದಂತೆ ಕಡ್ಡಿ ಕಚ್ಚಿಕೊಂಡಿದ್ದ ಹಕ್ಕಿ ಎರಡು ರೆಂಬೆಗಳ ನಡುವಿನ ಸಣ್ಣ ಜಾಗದಲ್ಲಿ ಕಡ್ಡಿಯಿಟ್ಟು ಪುರ್ರನೆ ಹಾರಿ ಬಂದು ಒಂದು ಘಳಿಗೆ ಕೂಗುತ್ತಿದ್ದ ಹಕ್ಕಿಯ ಪಕ್ಕ ಕುಳಿತು ಅಲ್ಲಿಂದ ಹಾರಿ ಇನ್ನೊಂದು ಕಂಪೌಂಡಿನೊಳಗಿನ ತೆಂಗಿನ ಮರದ ತುದಿಯ ಒಣಗಿದ ಕಸಗಳೊಳಗೆ ತೂರಿಕೊಂಡಿತು. ಜೊತೆಯ ಹಕ್ಕಿ ಹಾರಿ ಹೋಗಿದ್ದೇ ಮತ್ತೊಂದು ಹಕ್ಕಿಯೂ ಮೊದಲು ಕುಳಿತಲ್ಲಿಂದ ಜಾಗ ಖಾಲಿ ಮಾಡಿ ಚಿಕ್ಕು ಗಿಡದ ಮೇಲೆ ಕುಳಿತಿತು. ಸ್ವಲ್ಪ ಹೊತ್ತಿನಲ್ಲೇ ತೆಂಗಿನ ಮರಕ್ಕೆ ಹೋದ ಹಕ್ಕಿ ಮತ್ತೊಂದು ಕಡ್ಡಿಯೊಂದಿಗೆ ಹಾಜರ್. ಈ ಬಾರಿ ಅದು ಕುಳಿತಿದ್ದು ಮೊದಲು ಈ ಹಕ್ಕಿ ಕುಳಿತ ಜಾಗದಲ್ಲಿ. ಮತ್ತದೇ ಕೊರಳು ಕೊಂಕಾಣ. ಚಿಕ್ಕು ಗಿಡದಲ್ಲಿ ಕುಳಿತು ಸುತ್ತಲಿನ ಚಲನವಲನದ ಮೇಲೆ ಕಣ್ಣಿಟ್ಟು ಕಾವಲು ಕಾಯುತ್ತಿದ್ದ ಜೊತೆಗಾರ ಹಕ್ಕಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ಮಾವಿನ ಟೊಂಗೆಗಳೆಡೆಗೆ ಈ ಮೇಸ್ತ್ರಿಯ ಪ್ರಯಾಣ. ಮೂರು ಬಾರಿ ಇದೇ ಕಸರತ್ತು ನಡೆದು ನಾಲ್ಕನೆಯ ಸುತ್ತಿಗಾಗುವಾಗ ನೋಡನೋಡುತ್ತಿದ್ದಂತೆ ಆ ಹಕ್ಕಿ ಬಾಯಿಯಲ್ಲಿದ್ದ ಕಡ್ಡಿ ಕೆಳಗೆ ಹಾಕಿ ಒಂದು ಧ್ವನಿ ಹೊರಡಿಸಿ ಸೀದಾ ಹಾರಿದ್ದು ತೆಂಗಿನ ಮರದತ್ತ. ತಮ್ಮ ಮನೆಯ ಗೋಡೆಗೆ ಕೂರಿಸಿದ ಒಂದೊಂದು ಕಲ್ಲನ್ನು ಅಳೆದು ಸುರಿದ ಅನುಭವವಿದ್ದ ವೈಶಾಲಿಗೆ ಹಕ್ಕಿಗಾದ ತೊಂದರೆ ಏನೆಂದು ಅರ್ಥವಾಗಿಬಿಟ್ಟಿತು. ಬಹುಶಃ ಆ ಕಡ್ಡಿಯ ಅಳತೆ, ಗುಣಮಟ್ಟ ಸರಿ ಬರಲಿಲ್ಲವೇನೊ ಅಂದುಕೊಂಡಳು.
ಗಾತ್ರದಲ್ಲಿ ಮನೆ ಸಣ್ಣದಿರಲಿ ದೊಡ್ಡದಿರಲಿ ಉಪಯೋಗಿಸುವ ಸಾಮಾನಿನ ಕ್ವಾಲಿಟಿಯಲ್ಲಿ ರಾಜಿಯಾಗಲು ಸಾಧ್ಯವೇ ಇಲ್ಲ. ಎಲಿಮೆಂಟ್ರಿ ಶಾಲೆಯ ಮಾಸ್ತರ ಮಗ ಗುರುಮೂರ್ತಿ ಹೈಸ್ಕೂಲು ಮಾಸ್ತರರಾಗಿದ್ದ ಕಾಲ ಈಗಿನಂತೆ ಐದಂಕಿ ಸಂಬಳದ ಕಾಲವಾಗಿರಲಿಲ್ಲ. ಗುರುಮೂರ್ತಿ ಹೆಚ್ಚಿನ ದುಡಿಮೆಗಾಗಿ ಎಲ್.ಐ.ಸಿ.ಏಜನ್ಸಿ, ಪಿಗ್ಮಿ ಕಲೆಕ್ಷನ್ ಗಳಂತಹ ವಹಿವಾಟು ಹಚ್ಚಿಕೊಂಡು ಅದೇ ದುಡ್ಡನ್ನೆಲ್ಲ ಸೇರಿಸಿಯೇ ಶಾಲೆಗೆ ಸಮೀಪದಲ್ಲೇ ಹೆದ್ದಾರಿ ಬದಿಯಲ್ಲಿ ಹತ್ತು ಸೆಂಟ್ಸ್ ಜಾಗ ಖರೀದಿಸಿದ್ದರು. ಸುತ್ತ ಇವರಂತೆ ಉದ್ಯೋಗಸ್ಥರ ಕೆಲವು ಮೆನೆಗಳಿದ್ದವು. ಯಾವ ಕಾಲಕ್ಕು ಸುರಕ್ಷಿತವಾಗಿರುತ್ತದೆ ಅನಿಸಿತ್ತು. ಬಂಧುಗಳು; ಪರಿಚಯಸ್ಥರು ಬಹಳ ಒಳ್ಳೆಯ ಜಾಗ ಎಂದು ಬೆನ್ನು ತಟ್ಟಿದ್ದರು. ಮನೆ ಕಟ್ಟಲು ಶುರು ಮಾಡಿದಾಗ ಅದರ ಹೆಚ್ಚಿನ ಉಸ್ತುವಾರಿಯಲ್ಲ ವೈಶಾಲಿಯದೇ. ಅವರಿದ್ದ ಬಾಡಿಗೆ ಮನೆಯಿಂದ ಸೈಟಿಗೆ ಹೋಗಲು ಹತ್ತು ನಿಮಿಷದ ದಾರಿ. ಗುರುಮೂರ್ತಿ ಕೆಲಸ ಮಾಡುವ ಶಾಲೆಗೂ ಸೈಟಿಗೂ ಎರಡು ಕಿಲೋಮೀಟರ್ ಅಂತರ. ಎಲ್ಲಿ ಕಡಿಮೆ ಬೆಲೆಗೆ ಒಳ್ಳೆಯ ಸಾಮಾನು ಸಿಗುತ್ತದೆಂದು ವಿಚಾರಿಸಿ ಕಟ್ಟಡ ಸಾಮಾಗ್ರಿಗಳನ್ನು ತಂದು ಹಾಕುವುದು ಗುರುಮೂರ್ತಿಯ ಕೆಲಸ. ಕೆಲಸಗಾರರಿಗೆ ಬೆಳಗಿನ ಚಾಯ-ತಿಂಡಿ ಮಧ್ಯಾಹ್ನದ ಊಟ ಕೊಟ್ಟರೆ ಕೂಲಿಯಲ್ಲಿ ಸ್ವಲ್ಪ ಉಳಿತಾಯ ಮಾಡಬಹುದೆಂದಾದಾಗ ಅದಕ್ಕೂ ಸಿದ್ಧವಾಗಿದ್ದಳು ವೈಶಾಲಿ.
ಬೆಳಗ್ಗೆ ಮಕ್ಕಳಿಬ್ಬರನ್ನೂ ಶಾಲೆಗೆ ಕಳುಹಿಸಿ ಚಹ-ತಿಂಡಿ ಸಿದ್ಧಪಡಿಸಿ ಸೈಟಿಗೆ ಕೊಂಡು ಹೋಗುವುದು; ಹನ್ನೊಂದು ಘಂಟೆವರೆಗೆ ಅಲ್ಲಿ ನಿಂತು ಮತ್ತೆ ಬಂದು ಅಡುಗೆ ಮಾಡಿ ಎರಡು ಘಂಟೆಗೆ ಊಟಕ್ಕೆ ಬರುವ ಕೆಲಸದವರಿಗೆ ಬಡಿಸುವುದು ಮತ್ತೆ ನಾಲ್ಕು ಗಂಟೆಯ ಚಹ ಕೊಂಡೊಯ್ಯುವುದು; ಸ್ವಲ್ಪ ಬಿಡುವಿದ್ದ ಹೊತ್ತಿಗೆ ಗುರುಮೂರ್ತಿ ಬಂದು ಹೋಗುತ್ತಿದ್ದರೂ ಅಡಿಪಾಯ ತೋಡಿದ್ದು; ಸೈಜುಗಲ್ಲುಗಳನ್ನು ಕೆತ್ತಿದ್ದು; ಗೋಡೆ ಕಟ್ಟಿದ್ದು ಎಲ್ಲ ಅವಳ ಕಣ್ಣಳತೆಯಲ್ಲೇ. ಹೆಚ್ಚು ಕಡಿಮೆ ಮನೆ ಕೆಲಸ ಮುಗಿಯುವಾಗ ವರ್ಷದ ಮೇಲೆ ತಿಂಗಳುರುಳಿತ್ತು. ರಾತ್ರಿ ಗುರುಮೂರ್ತಿಗೆ ಅಂದಿನ ವಿವರಗಳನ್ನೆಲ್ಲ ಹೇಳುತ್ತಿದ್ದಾಗಲೇ ಕಣ್ಣು ತೂಗಿ ನಾಲಿಗೆ ತೊದಲಲಾರಂಭಿಸುತ್ತಿತ್ತು. ಕೆಲವೊಮ್ಮೆ ಊಟವೂ ಮಾಡದೆ ಮಲಗಿಬಿಡುತ್ತಿದ್ದಳು. ನಿದ್ದೆ ಕಣ್ಣಿಗೆ ಹತ್ತುತ್ತಿದ್ದಂತೆ ಅಲ್ಲಿಯೂ ಕಾಣುತ್ತಿದ್ದುದು ಮನೆಯೇ. ಅದರಲ್ಲೂ ಬುತ್ತಿಚೀಲ ಹಿಡಿದುಕೊಂಡು ರಸ್ತೆ ದಾಟುವಾಗ ಯಾವುದೊ ವಾಹನ ಹೊಡೆದು ಎಲ್ಲಾ ಚಲ್ಲಾಪಿಲ್ಲಿಯಾದಂತ ಅನುಭವವಾಗಿ ಬೆಚ್ಚಿ ಬೀಳುತ್ತಿದ್ದಳು. ಊಟದ ಚೀಲ ಹಿಡಿದುಕೊಂಡು ರಸ್ತೆ ದಾಟುವಾಗ ಇನ್ನೇನು ಈಗ ಒಂದು ಅನಾಹುತವಾಗಿಯೇಬಿಡುತ್ತದೆ ಅನ್ನುವ ಭಯದಲ್ಲಿ ಪಾದಗಳು ಬೆವರುತ್ತಿದ್ದವು. ಇಂದಿಗೆ ಹೋಲಿಸಿದರೆ ಇಪ್ಪತ್ತು ವರ್ಷದ ಹಿಂದಿನ ಹೆದ್ದಾರಿಯ ವಾಹನ ದಟ್ಟಣೆ ಏನೇನೂ ಅಲ್ಲ. ಅಲ್ಲಾ.. ಮೊನ್ನೆ ಮೇಲಿನ ಪೇಟೆಯಲ್ಲಿ ಆ ಮಿಷನ್ನು ಹಾಗೆ ಒಂದೇ ಘಂಟೆಯಲ್ಲಿ ಇಡೀ ಮನೆಯನ್ನು ದೂಡಿ ಹಾಕಿ ಧೂಳೆಬ್ಬಿಸಿಬಿಟ್ಟಿತಲ್ಲ.
ಅಜ್ಜೀ..ಅಜ್ಜಿ.. ಹಕ್ಕಿ ಮನೆ ಎಲ್ಲಿದೆ? ನಂಗೆ ತೋರ್ಸಜ್ಜಿ ಪ್ರಶ್ನೆಯೊಂದಿಗೇ ಬಂದ ಪ್ರಗತಿ ದಡಕ್ಕನೆ ಬಂದು ವೈಶಾಲಿಯ ಮಡಿಲಲ್ಲಿ ಕುಳಿತಳು. ಬಹುಶಃ ಮಹರಾಯ ಪಾಯಿಖಾನೆಯೊಳಗಿರಬೇಕು. ಇದು ಹೋಗಿ ಉಚ್ಚೆ ಹೊಯ್ಯಬೇಕೆಂದು ಬಾಗಿಲು ಬಡಿದಿದೆ. ಅಲ್ಲಿಂದಲೇ ಕಿವಿ ಊದಿ ಇತ್ತ ಸಾಗಹಾಕಿದ್ದಾರೆ ಅಂದುಕೊಂಡ ವೈಶಾಲಿ ಮಾವಿನ ಮರದತ್ತ ಕೈ ತೋರಿಸಿ,
ನೀನು ಸದ್ದು ಮಾಡದೆ ಸುಮ್ಮನೆ ನೋಡಬೇಕು. ಗೌಜು ಮಾಡಿದ್ರೆ ಹಕ್ಕಿ ಮನೆ ಕಟ್ಟುವುದಿಲ್ಲ ಅಂದಳು. ಅದಾಗಲೇ ಕಡ್ಡಿ ಕಚ್ಚಿಕೊಂಡು ಹಕ್ಕಿ ಹಾಜರ್. ಸ್ವಲ್ಪ ಹೊತ್ತು ಹಕ್ಕಿಗಳನ್ನೇ ಗಮನಿಸುತ್ತಿದ್ದ ಪ್ರಗತಿ-, ಅಜ್ಜಿ, ಹಕ್ಕಿ ಮನೆ ಕಟ್ಟಿದ ಮೇಲೆ ಏನ್ಮಾಡ್ತದೆ?
ಮನೆಯೊಳಗೆ ಮೊಟ್ಟೆ ಇಡ್ತದೆ. ಕಾವು ಕೊಟ್ಟು ಮರಿ ಮಾಡ್ತದೆ. ಮತ್ತೆ ಮರಿಗಳಿಗೆ ಊಟ ತಂದು ಕೊಡ್ತದೆ.
ಬುದ್ಧಿ ಇಲ್ಲದ ಪೆದ್ದ ಹಕ್ಕಿ. ಅದಕ್ಕೆ ಈ ಮರದಲ್ಲಿ ಮನೆ ಕಟ್ಬಾರ್ದು ಅಂತ ಗೊತ್ತಿಲ್ಲವ ಅಜ್ಜಿ?
ಯಾಕೆ ಪುಟ್ಟಿ?
ಒಳ್ಳೆ ಅಜ್ಜಿ ನೀನು. ಮೇಲಿನ ಪೇಟೆಯಲ್ಲಿ ಬಂದು ನಿಂತಿದೆಯಲ್ಲ ದೊಡ್ಡ ದೊಡ್ಡ ಮಿಷನ್ನು. ಅದು ರಸ್ತೆಯ ಬದಿಯಲ್ಲಿರುವ ಈ ಮರಗಳನ್ನೆಲ್ಲ ಕೊಯ್ದು ಹಾಕಿ ನಮ್ಮ ಮನೆಗಳನ್ನೆಲ್ಲ ಬೀಳಿಸ್ತದೆ. ಮತ್ತೆ ನಮ್ಮ ಮನೆ ಇರುವ ಜಾಗವನ್ನೆಲ್ಲ ರಸ್ತೆ ಮಾಡ್ತಾರೆ ಅಂತ ನೀನೇ ಹೇಳಿದ್ದೆ. ಮರ ಬಿದ್ರೆ ಹಕ್ಕಿ ಮನೆಯೂ ಬೀಳುದಿಲ್ವಾ ಅಜ್ಜಿ? ಪಾಪದ ಮರಿಗಳು ಸಾಯುದಿಲ್ವಾ ಅಜ್ಜಿ? ಆ ಹಕ್ಕಿ ಇಲ್ಲಿ ಮನೆ ಕಟ್ಟುವುದು ಬೇಡ ಅಜ್ಜಿ. ಕಲ್ಲು ಹೊಡೆದು ಓಡಿಸಿಬಿಡುವಾ. ಅದು ಕಾಡಲ್ಲಿ ಮನೆ ಕಟ್ಲಿ ಅಜ್ಜಿ. ಪ್ರಗತಿ ಅಜ್ಜಿಯ ಮಡಿಲಿಂದ ಎದ್ದು ನಿಂತಳು.
ನಾವು ಇಲ್ಲಿ ಮನೆ ಕಟ್ಟಿದ್ದೇ ತಪ್ಪು. ಇವರು ಕೊಡುವ ದುಡ್ಡಲ್ಲಿ ನಮ್ಮಂತವರು ಮತ್ತೆ ಜಾಗ ಮಾಡಿ ಮನೆ ಕಟ್ಟುವುದು ಸಾಧ್ಯವಾ? ಕಾಡಿಗೆ ಹೋಗ್ಬೇಕಷ್ಟೆ. ಹೆದ್ದಾರಿ ಪ್ರಾಧಿಕಾರದಿಂದ ನೋಟೀಸು ಬಂದಾಗ ಮೀಟಿಂಗಿನಲ್ಲಿ ಅಲವತ್ತುಕೊಂಡಿದ್ದಳು ವೈಶಾಲಿ. ಬಿ.ಕಾಂ ಪಾಸು ಮಾಡಿದ್ದ ಮಗ ಎಲ್ಲೂ ಸರಿಯಾದ ಕೆಲಸವಾಗದೆ ಮನೆ ಗೇಟಿಗೆ ತಾಗಿಯೇ ಅಂಗಡಿ ತೆರೆದಿದ್ದ. ಅವನ ಬದುಕು ನೆನೆದು ಮತ್ತಷ್ಟು ಹತಾಶೆಯಾಗಿತ್ತು.
ಅಮೃತೇಶ್ವರರು ನಿರಾಸೆಯ ಧ್ವನಿಯಲ್ಲಿ; ಮುಖದ ಮೇಲೆ ವೈರಾಗ್ಯದ ನಗು ಹೊತ್ತು ಹೇಳಿದ್ದರು ಈಗ ಕಾಡಿನಲ್ಲಿರುವವರನ್ನೇ ಓಡಿಸ್ತಿದಾರಲ್ಲ ವಿಶಾಲಮ್ಮ. ಎಲ್ಲಿಯಾದ್ರೂ ಅಷ್ಟೆ. ಸೆಝ್ ವಲಯ ಅಂತ ಉಡುಪಿ ಹತ್ರ ಆ ಗ್ರೆಗರಿ ಸೋಜರ ಕಣ್ಣೆದುರೇ ಅವರ ಮನೆಗೆ ಜೆ.ಸಿ.ಬಿ. ನುಗ್ಗಿಸ್ಲಿಲ್ವಾ ಸರ್ಕಾರ? ಅವರ ಗದ್ದೆ-ತೋಟದೊಳಗೆಲ್ಲ ಆನೆ ನುಗ್ಗಿದ್ದಕ್ಕಿಂತ ಕಡೆಯಾಗಿ ಜೆ.ಸಿ.ಬಿ. ಸವಾರಿ ಮಾಡಿದ್ದಲ್ವಾ? ಅವರೇನು ರಸ್ತೆ ಬದಿ ಬಂದು ಬೇಸಾಯ ಮಾಡಿದ್ರಾ? ನಾವು ನೆಲದ ಕಾನೂನು ಬೇಡ ಅಂತ ಜನದ ಕಾನೂನು ಮಾಡಿಕೊಂಡು ಯಾವ ಕಾಲವಾಗಿದೆಯಲ್ಲ ವಿಶಾಲಮ್ಮ. ಹತ್ತು ಜನಕ್ಕೆ ತೊಂದ್ರೆ ಆದ್ರೂ ಸಾವಿರ ಜನಕ್ಕೆ ಒಳ್ಳೆಯದಾಗ್ತದಂದ್ರೆ ಹತ್ತು ಜನ ಬಿಟ್ಟುಕೊಡ್ಬೇಕು. ಈ ಸಾವಿರ ಜನ ಬಿಟ್ರೆ ಹತ್ತುಸಾವಿರ ಜನಕ್ಕೆ ಒಳ್ಳೆಯದಾಗ್ತದಂದ್ರೆ ಆ ಸಾವಿರ ಜನ ಬಿಡ್ಬೇಕು. ಯಾಕೇಂದ್ರೆ ಇದು ಜನದ ಕಾನೂನು. ಜನರಿಗಿರೋದು ವಿಶಾಲಮ್ಮ.
ಪ್ರಗತಿ ತನ್ನ ಪುಟ್ಟ ಕೈಗಳಿಂದ ಕಲ್ಲು ಹೆಕ್ಕಿ ಮಾವಿನ ಮರದತ್ತ ಬೀಸುತ್ತಿದ್ದಳು.
 

‍ಲೇಖಕರು avadhi

18 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading