ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ ಹಾರ್ದಳ್ಳಿ ಬರೆದ ಕಥೆ ’ಒಂದು ಮರಕ್ಕಾಗಿ’

ಒಂದು ಮರಕ್ಕಾಗಿ

– ಸೂರಿ ಹಾರ್ದಳ್ಳಿ


ಧರಣಿ ಮಂಡಳ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ ಕೊಡಗೆಂಬ ಜಿಲ್ಲೆಯಲ್ಲಿ ಪೊನ್ನಯ್ಯನೆಂಬ ಆರೂವಡಿ ಎತ್ತರದ, ಮಿಲಿಟರಿಯಿಂದ ನಿವೃತ್ತನಾದ ವ್ಯಕ್ತಿಯೊಬ್ಬ ತನ್ನ ಮಡದಿ ಕಾವೇರಮ್ಮನೊಂದಿಗೆ ಪಿತ್ರಾರ್ಜಿತವಾಗಿ ಬಂದ ದೊಡ್ಡ ಎಸ್ಟೇಟಿನಲ್ಲಿ ವಾಸವಾಗಿದ್ದನು ಎಂಬುದರೊಂದಿಗೆ ಈ ಕಥಾನಕ ಪ್ರಾರಂಭವಾಗುತ್ತದೆ. ಸುತ್ತ ನೂರಾರು ಎಕರೆ ಕಾಫಿ ತೋಟ, ಅವುಗಳು ಮೈಯೆಲ್ಲಾ ಬಿಳಿ ಬಿಳಿಯ ಹೂ ಬಿಟ್ಟುಕೊಂಡು, ಮಲ್ಲಿಗೆಯ ಸುವಾಸನೆ ಬೀರುವ ಅಥವಾ ಮೈ ತುಂಬಾ ಕೆಂಪು ಕೆಂಪು ಹಣ್ಣುಗಳಿರುವ ಮನಮೋಹಕ ದೃಶ್ಯ, ನಡುವೆ ತನ್ನ ಕಾಂಡದ ಸುತ್ತ ಕೆತ್ತಿಸಿಕೊಂಡು, ರಸಗಳ ಶೇಖರಣೆಗೆ ‘ಚರಟೆ’ಗಳಿಂದ ಸಿಂಗರಿಸಿಕೊಂಡು ನೋವಿನಿಂದ ನರಳುತ್ತಿರುವ ರಬ್ಬರ್ ಮರಗಳು, ಯಾವುದೋ ಮರವನ್ನು ತಬ್ಬಿ ಹಿಡಿದು ಮೇಲೆ ಸಾಗಿ ಹಸಿ ಹಸಿರು ಬೀಜಗಳ ತೆನೆಯನ್ನು ಹೊತ್ತ ಕಾಳು ಮೆಣಸಿನ ಬಳ್ಳಿಗಳು, ಹುಲ್ಲಿನಂತೆಯೇ ಬೆಳೆದು, ಬೇರುಳಲ್ಲಿಯೇ ಕಾಯಿ ಬಿಟ್ಟು, ತನ್ನ ಸುವಾಸನೆಯಿಂದ ಹಾವು-ಹಲ್ಲಿಗಳನ್ನು ಕರೆಯುವ ಏಲಕ್ಕಿ ಗಿಡಗಳು, ಮತ್ತೆ, ಪಪ್ಪಾಯಿ, ಹಲಸು, ಗಾಳಿ ಮರಗಳು, ಇವುಗಳ ನಡುವೆ ಹಾಡುತ್ತಾ ಹಾರುತ್ತಾ ಇರುವ ಪಕ್ಷಿಗಳು, ಇವುಗಳ ನಡುವೆ ಮೂವತ್ತು ಚದರಗಳ ದೊಡ್ಡ ಮನೆಯ ಮಾಲಿಕರಾದ ಪೊನ್ನಯ್ಯ ವಾಸಿಸುತ್ತಿದ್ದರು ಎಂದರೆ ಅವರ ಶ್ರೀಮಂತಿಕೆಯ ಅರ್ಥ ನಿಮಗಾಗುತ್ತದೆ. ಎಲ್ಲವೂ ಪೊನ್ನಯ್ಯನವರ ಸ್ವಂತ ಗಳಿಕೆಯಲ್ಲ.
ತಂದೆ ಮಾಡಿಟ್ಟುಹೋದುದನ್ನು ವೃದ್ಧಿಸಿ, ಇಡೀ ಕೊಡಗಿನಲ್ಲಿ ‘ಅಪ್ಪಂಥ’ವರಾಗಿದ್ದು ಸುಮಾರು ದಿನ ಊರಿನವರ ಬಾಯಿಯಲ್ಲಿ ಹಾದುಹೋಗಿದ್ದು ಚರಿತ್ರೆಯೇನಲ್ಲ. ಮೈಸೂರಿನಿಂದ ಮಡಿಕೇರಿಗೆ ಹೋಗುವ ಹೆದ್ಚಾರಿಯಲ್ಲಿ ಪೊನ್ನಯ್ಯ ಎಸ್ಟೇಟ್ ಎಂಬ ದೊಡ್ಡ ಬೋರ್ಡ್  ಗೇಟಿಗೆ ತಗುಲಿಹಾಕಿಕೊಂಡಿರುವುದನ್ನು ಪ್ರಯಾಣಿಕರು ನೋಡದೇ ಇರಲಾರರು. ಪ್ರತೀ ತಲ ಕಾವೇರಿಯಲ್ಲಿ ತೀರ್ಥೋದ್ಭವವಾಗುವಂದು, ಹುತ್ತರಿ ಹಬ್ಬ ಮತ್ತು ಇಗ್ಗುತಪ್ಪನ ಜಾತ್ರೆಯಂದು ಆ ಬೋರ್ಡ್ ಗೆ ಪೂಜೆ ಮಾಡಿ ಏರಿಸಿದ ಹೂಮಾಲೆ ಅಲ್ಲಿಯೇ ಬಿಸಲಲ್ಲಿ ಒಣಗಿ, ಮಳೆಯಲ್ಲಿ ನೆನೆದು ಕೊಳೆದು, ಬಿದ್ದು ಹೋಗುತ್ತದೆಯೇ ವಿನಃ ತೆಗೆಯುವವರಾರೂ ಇಲ್ಲ. ಬೀದಿ ಹಸುಗಳು ತಾವಾಗಿಯೇ ಅವುಗಳನ್ನು ಅಗಿದು ಸವಿಯುವುದಿದೆ. ವರ್ಷದ ಆರು ತಿಂಗಳ ಮಳೆಗಾಲ, ಆರು ತಿಂಗಳ ಚಳಿಗಾಲ ಇರುವ ಕೊಡಗಿನ ಸೌಂದರ್ಯವನ್ನು ನೀವು ನೋಡಿದರೆ ಕೆಲವರು ಇದನ್ನು ಕನರ್ಾಟಕ ಕಾಶ್ಮೀರ ಎಂದೂ, ಭಾರತದ ಸ್ವಿಜರ್ಲ್ಯಾಂಡ್ ಎಂದೂ ಕರೆದಿರುವುದರಲ್ಲಿ ಸುಳ್ಳಿಲ್ಲ ಎಂಬುದನ್ನು ಒಪ್ಪುತ್ತೀರಿ.
ಜಿಲ್ಲೆಯ ಸೋಮವಾರ ಪೇಟೆ, ಶನಿವಾರ ಸಂತೆ, ಕೊಡಲಿ ಪೇಟೆ ಮೊದಲಾದ ಕೆಲ ಬಿಸಿಲು ಬರುವ ತಾಲೂಕುಗಳನ್ನು ಬಿಟ್ಟರೆ ಇತರ ಜಾಗದವರು ವರ್ಷದ ಹನ್ನೆರಡು ತಿಂಗಳೂ ಎದೆಗೊಂದು ಸ್ವೆಟರ್, ತಲೆಗೊಂದು ಮಂಕಿ ಟೋಪಿ, ಕಾಲಿಗೊಂದು ರಬ್ಬರಿನ ಗಮ್ ಬೂಟುಗಳನ್ನು ತಮ್ಮ ದೇಹದ ಅಂಗವೆಂದೇ ಭಾವಿಸುವಂತೆ ಧರಿಸಿಕೊಂಡೇ ಇರುವಾಗ ಪೊನ್ನಯ್ಯ ಮಾತ್ರ ಕೊರೆಯುವ ಚಳಿ ಗಾಳಿಯಲ್ಲಿಯೂ ತಮ್ಮ ಮೂವತ್ತು ವರ್ಷಗಳಷ್ಟು ಹಳೆಯ ಮಹೀಂದ್ರಾ ಜೀಪನ್ನು ವೇಗವಾಗಿಯೇ ಚಾಲಿಸಿಕೊಂಡು ಹೋಗುವಾಗ ಇವನೇನು ಮನುಷ್ಯನೋ, ಮರವೋ, ದೇಹಕ್ಕೆ ಚಳಿ ತಾಗುವುದಿಲ್ಲ ಎಂದರೆ ಎಂದು ಅವರನ್ನು ಕಂಡ ಜನ ಆಡಿಕೊಳ್ಳುವುದಿದೆ. ಪೊನ್ನಯ್ಯ ತನ್ನ ದಪ್ಪದ ತೊಡೆ ತೋರಿಸಿಕೊಳ್ಳುವ ಖಾಕಿ ಬಣ್ಣದ ಚಡ್ಡಿ ತೊಟ್ಟುಕೊಂಡಿರುವುದಕ್ಕೆ ಕೆಲವರು ತಮ್ಮ ಷರಾ ಸೇರಿಸುತ್ತಾರೆ, ಮಿಲಿಟರಿಯಲ್ಲಿದ್ದವರು. ಹಿಮಾಲಯದ ಮೈನಸ್ ಡಿಗ್ರಿಯ ಹವಾಮಾನದಲ್ಲಿ ಬದುಕಿದವರು. ಅವರಿಗೆ ಈ ಕೊಡಗೆಂದರೆ ಬೇಸಿಗೆ ಹವಾದಂತೆ ಎಂದು ಕಮೆಂಟಿಸಿದರೆ ಇನ್ನು ಕೆಲವರು ಬೆಳ್ಳಂಬೆಳಗ್ಗೆಯೇ ನಾಲ್ಕು ಪೆಗ್ ರಮ್ ಏರಿಸಿ, ಕೇಜಿ ಪೋಕರ್್ ಕಬಳಿಸಿದೆರೆ ಚಳಿ ಇರಲಿ, ಅದರಪ್ಪ ಕೂಡಾ ಹತ್ತಿರ ಬರಲು ಹೆದರುತ್ತೆ, ಎಂದು ವ್ಯಂಗ್ಯವಾಡಿದ್ದೂ ಇದೆ. ಕುಡಿತ ಮತ್ತು ಮಾಂಸ ಭಕ್ಷಣೆ ಎಲ್ಲರ ಮನೆಯಲ್ಲಿಯೂ ಮಾಮೂಲು. ಪೊನ್ನಪ್ಪ ಅದನ್ನೆಲ್ಲಾ ಕೇಳಿಸಿಕೊಂಡರೂ ಒಳಗೊಳಗೇ ನಕ್ಕು ಸುಮ್ಮನಾಗುತ್ತಾರೆ. ಜನ ಏನೇ ಅನ್ನಲಿ, ಅವರಿಗೆ ಸಮಾಜದಲ್ಲಿ ಒಂದಿಷ್ಟು ಒಳ್ಳೆಯ ಹೆಸರಿದೆ. ಅವರ ತೋಟಗಳಲ್ಲಿ ಕೆಲಸ ಮಾಡುವುದಕ್ಕೆ ತುಳು ನಾಡಿನ, ಕೇರಳದ ಕೂಲಿಯವರು ಸಂತೋಷದಿಂದಲೇ ಬರುತ್ತಾರೆ. ಪೊನ್ನಯ್ಯನವರ ದೊಡ್ಡ ವಕ್ಷಸ್ಥಳ, ಬಲಿಷ್ಠ ಬಾಹುಗಳು, ಚಪ್ಪಟೆ ಹೊಟ್ಟೆ. ಲಿಂಬೆ ಹಣ್ಣು ಕೂರಿಸಬಹುದಾದಷ್ಟು ದೊಡ್ಡ ಮೀಸೆ, ಇವುಗಳನ್ನು ಕಂಡ ಹೆಂಗಸರು ತಮ್ಮ ಮನಸ್ಸಿನಲ್ಲಿ ಕಾಮನಬಿಲ್ಲು ಮೂಡಿಸಿಕೊಂಡರೂ, ಸುಮ್ಮಸುಮ್ಮನೆ ಪಿಸ ಪಿಸ ಎಂದು ನಕ್ಕು ಕಣ್ಣು ಹೊಡೆದರೂ ಪೊನ್ನಯ್ಯ ಕಚ್ಚೆ ಹರುಕರಾಗಬಹುದಿತ್ತು, ಆದರೆ ಆಗಲಿಲ್ಲ ಎಂಬುದು ದೊಡ್ಡದೇ ವಿಷಯ.
ಕೊಡಗಿನ ಕಾಡು-ಬೆಟ್ಟಗಳಲ್ಲಿ ಹೋಗಬೇಕಾದರೆ ಜೊತೆಯಲ್ಲಿರಬೇಕಾದುದು ನಶ್ಯದ ಪುಡಿ, ಹೊಗೆಸೊಪ್ಪಿನ ಚೂರುಗಳು, ಸುಣ್ಣ ಅಥವಾ ಬ್ಲೇಡುಗಳು. ಗೊತ್ತಾಗದಂತೆ ದೇಹವನ್ನೇರಿ, ಮೆತ್ತಗಿನ ಚರ್ಮವಿರುವ ದೇಹದ ಭಾಗದಲ್ಲಿ ತಮ್ಮ ಕೊಂಡಿಯೂರಿ ರಕ್ತ ಕುಡಿದು ಉಬ್ಬಿ ನಂತರ ಅಲ್ಲಿಂದು ಹೊರಬಂದ ಕೆಂಪು ಕೆಂಪು ರಕ್ತವನ್ನು ಕಂಡ ನಂತರವೇ ಜನರಿಗೆ ತಿಳಿಯುವುದು ಜಿಗಣೆ ಕಚ್ಚಿದೆ ಎಂದು. ಅವುಗಳಿಂದ ರಕ್ಷಿಸಿಕೊಳ್ಳಲು ಮೈಗೆ ಸುಣ್ಣ ಬಳಿದುಕೊಳ್ಳುವುದು, ಲಿಂಬು ಹಣ್ಣಿನ ರಸ ಹಚ್ಚಿಕೊಳ್ಳುವುದು, ಹೀಗೆ ಏನೇನು ಮಾಡಿದರೂ ಅದು ಹೇಗೋ ಅವು ತಮ್ಮ ಹೊಟ್ಟೆ ತುಂಬಿಸಿಕೊಂಡೇ ಬಿಡುತ್ತವೆ. ಕಚ್ಚಿದ ಅವುಗಳನ್ನು ಎಳೆದರೆ ಅವು ಬಿಡುವುದಿಲ್ಲ. ಬ್ಲೇಡಿನಿಂದ ಕೆರೆಯಬೇಕು, ಸುಣ್ಣ ಹಾಕಬೇಕು, ನಶ್ಯವಾದರೂ ನಡೆಯುತ್ತದೆ. ರಕ್ತ ಕಳೆದುಕೊಂಡ ಜನ ಅದನ್ನು ನೆಲಕ್ಕೆ ಎಸೆದು, ಕಾಲಿನಿಂದ ಹೊಸಕಿ ಹಾಕುತ್ತಾರೆ. ಆದರೆ ಪೊನ್ನಯ್ಯ ಮಾತ್ರ ಹಾಘೆ ಮಾಡುವುದಿಲ್ಲ. ‘ದೇವರು ಮನುಷ್ಯನನ್ನು ಹುಟ್ಟಿಸಿದ್ದೇ ಆ ಪ್ರಾಣಿಗಳಿಗೆ ಆಹಾರ ದೊರಕಿಸಲು. ಪಾಪ, ಅವಾದರೂ ಏನು ಸೇವಿಸುತ್ತವೆ?’ ಎಂದು ಹೇಳುತ್ತಿದ್ದರು. ಜನ ನಗುತ್ತಿದ್ದರಾದರೂ ಪೊನ್ನಯ್ಯನವರ ಪ್ರಕೃತಿ ಪ್ರೇಮ ಅನನ್ಯವಾದದ್ದು.
ಪೊನ್ನಯ್ಯ ಪ್ರಕೃತಿ ಪ್ರೇಮಿ ಮತ್ತು ಆರಾಧಕರು. ಅವರು ಗಿಡ-ಮರ-ಪಶು-ಪಕ್ಷಿಗಳೊಂದಿಗೆ ಸಂವಹಿಸಬಲ್ಲರು. ಅವರ ದನಿಗೆ ಜಗತ್ತು ಪ್ರತಿಕ್ರಿಯಿಸುತ್ತಿತ್ತು. ಅಂಕೆ ತಪ್ಪಿ, ಕಂಡಕಂಡಲ್ಲೆಲ್ಲಾ ನುಗ್ಗಿ ಯಾರು ಯಾರನ್ನೋ ಕೆಡವುತ್ತಾ ಬಂದ ಹೋರಿಯೊಂದು ಇವರ ಸಂತೈಕೆಯ ಮಾತಿನಿಂದ ತಲೆ ತಗ್ಗಿಸಿ ನಿಂತಿದ್ದು ಊರಿನವರಿಗೆ ಅಚ್ಚರಿ. ತೊಟ್ಟಿಲಿನಿಂದ ಚಟ್ಟದ ವರೆಗೂ ಮನುಷ್ಯನಿಗೆ ಮರಗಳು ಬೇಕು, ಆದರೆ ಮರಗಳಿಗೆ ಮಾನವನ ಅವಶ್ಯಕತೆ ಇಲ್ಲ. ಹಾಗಾಗಿ ಎಲ್ಲರೂ ಸಸ್ಯಸಂಪತ್ತನ್ನು ಗೌರವಿಸಬೇಕು ಎಂದು ಹೇಳುತ್ತಿದ್ದರು.
ಅವರಿಗೆ ಇಬ್ಬರು ಮಕ್ಕಳು, ಕರಣ ಮತ್ತು ಕಿರಣ. ಅವಳಿ ಜವಳಿ. ಎಳೆಯ ಮಕ್ಕಳನ್ನು ಕರೆದುಕೊಂಡು ಬೆಳ್ಳಂಬೆಳಗ್ಗೆಯೇ ಕಾಡಿನೊಳಗೆ ಹೋಗುತ್ತಾರೆ, ಅವರಾಕೆ ಕಾವೇರಿಯಮ್ಮ ಕೊಂಯ, ಕೊಸ್ಸ, ಎಂದು ಗೊಣಗಿದರೂ. ಅವಕ್ಕೆ ಕಾಯಿಲೆ-ಕಸಾಲೆ ಬಂದರೆ? ಇಲ್ಲ, ಬರುವುದಿಲ್ಲ. ಪ್ರಕೃತಿಯೊಡನೆ ಅದಕ್ಕನುಗುಣವಾಗಿ ಬದುಕಿದರೆ ಯಾವ ರೋಗವೂ ಸುಳಿಯದು, ಎಂದು ಹೇಳುತ್ತಾರೆ ಪೊನ್ನಯ್ಯ. ಎಳೆ ಬೆರಗು ಕಂಗಳ ದಾಹವನ್ನು ತಣಿಸುವಂತೆ ಪ್ರಕೃತಿಯ ವಿಸ್ಮಯವನ್ನು ಬಿಡಿಸಿ ಬಿಡಿಸಿ ಅವರೆದುರು ಅನಾವರಣಗೊಳಿಸುತ್ತಾರೆ ಪೊನ್ನಯ್ಯ. ಹೂಗಳು ಅರಳುವುದು ಹೇಗೆ, ವೃಕ್ಷಗಳು ಚಿಗುರೊಡೆಯುವ ಕ್ರಮ ಹೇಗೆ, ಪಶುಪಕ್ಷಿಗಳ ಧ್ವನಿ ಸಂಬೋಧನೆ ಹೇಗೆ, ಸೂರ್ಯಾಸ್ತ-ಸೂರ್ಯೋದಯಗಳಂದು ರವಿಯ ಎಳೆ ಬಿಸಿಲು ವಿಶ್ವದ ಮೇಲೆ ಹೇಗೆ ಹೊಂಬಣ್ಣದ ಚಾದರ ಹಾಕುತ್ತದೆ, ಮೋಡದ ನಡುವಿನಿಂದ ನುಸುಳುವ ಕಿರಣಗಳ ಕೋಲುಗಳು ಹೇಗೆ ಬಾನಿನಲ್ಲಿ ಚೆಲ್ಲಾಟವಾಡುತ್ತವೆ, ಎಂದೆಲ್ಲಾ ಮನನವಾಗುವಂತೆ ಅರ್ಥೈಸಿ ಅವರನ್ನು ಪ್ರಕೃತಿಯೊಂದಿಗೆ ಮಿಳನಗೊಳಿಸುತ್ತಾರೆ. ಪರಿಸರದ ಆಗುಹೋಗುಗಳಿಗೆ ತಮ್ಮ ಪಂಚೇಂದ್ರಿಯಗಳು ಜಾಗ್ರತವಾಗಬೇಕು ಎಂಬುದು ಅವರ ವಾದ.
ಈ ಸುಖ ನಗರಿಗರಿಗಿಲ್ಲ. ವಾಹನಗಳ ಹೊಗೆಯ ವಾಸನೆ, ಕೊಚ್ಚೆಯ-ಕಸದ ದುರ್ನಾತ, ದೂಳು, ಇವುಗಳನ್ನು ಮಾತ್ರ ಉಸಿರಾಡಿದ ಮೂಗುಗಳು, ಸದ್ದು, ಸಪ್ಪಳ, ಶಬ್ದ, ಹಾನರ್್ಗಳು, ಇವುಗಳಿಗೆ ಪಕ್ಕಾಗಿ ಕ್ರಮೇಣ ಮಂದವಾಗುತ್ತಿರುವ ಕಿವಿಗಳು, ಹೀಗೆ ಇದರ ಹೊರತಾಗಿ ಬೇರೆಯೊಂದಿದೆ ಎಂದು ತಿಳಿಯದ ನಗರದ ಮಕ್ಕಳ ಬಗ್ಗೆ ಅವರಿಗೆ ಅಯ್ಯೋ ಎನಿಸುತ್ತದೆ. ಅವರು ಹಕ್ಕಿಗಳ ಕಲವರ, ಗಾಳಿ ಹರಿದು ಮರಗಳ ಎಲೆಗಳಲ್ಲಿ ಬರುವ ದನಿಗಳು, ಹೂಗಳ ಸುಗಂಧ, ಇವುಗಳನ್ನು ಕಂಡಿಲ್ಲ, ಅನುಭವಿಸಿಲ್ಲ. ತಮ್ಮ ಮಕ್ಕಳು ಹಾಗಾಗಬಾರದು. ತಮ್ಮ ಸಂಸ್ಕೃತಿ, ತಮ್ಮ ಭಾಷೆ, ತಮ್ಮ ತಾಯಿ, ತಮ್ಮ ಸುತ್ತಲ ಜಗತ್ತು, ಇವುಗಳನ್ನು ಗೌರವಿಸಬೇಕು ಎಂದು ವಾದಿಸುತ್ತಿದ್ದರು ಮಾತ್ರವಲ್ಲ, ಅದನ್ನು ತಾವೇ ಪಾಲಿಸುತ್ತಿದ್ದರು.
ಪೊನ್ನಯ್ಯ ಕರಣ ಕಿರಣರು ಹುಟ್ಟಿದ ದಿನವನ್ನು ಸಂಭ್ರಮವಾಗಿ ಆಚರಿಸಿದ್ದು ವಿಶಿಷ್ಠ ರೀತಿಯಲ್ಲಿ, ವೈನಾಡಿನಿಂದ ತಂದ ಹಲಸಿನ ಬೀಜವನ್ನು ಮನೆಯೆದುರಿನ ಗದ್ದೆಗಳ ಅಂಚಿನಲ್ಲಿ ನೆಡುವ ಮೂಲಕ. ಚಿಕ್ಕ ಬೀಜದ, ದಪ್ಪ ತೊಳೆಯ, ಕೆಂಪು ಬಣ್ಣದ, ಜೇನಿನಷ್ಟೇ ಮಧುರವಾದ ವಾಸನೆಯುಳ್ಳ ಹಣ್ಣನ್ನು ತಿಂದು, ಮಾರುಹೋದ ಪೊನ್ನಯ್ಯ, ಒಂದು ಹಣ್ಣನ್ನು ಅಲ್ಲಿಂದ ಹೊತ್ತುಕೊಂಡು ತಮ್ಮೂರಿಗೆ ತಂದಿದ್ದರು. ಅದರ ರುಚಿ ಮತ್ತು ವಾಸನೆ ಎಷ್ಟು ಮೋಹಕವಾಗಿತ್ತೆಂದರೆ ಊರ ಜನ ಮೂಗು ಎಳೆದುಕೊಂಡು ಅವರಲ್ಲಿಗೆ ಬಂದು, ಹಣ್ಣನ್ನು ಸವಿದು ತಾವೂ ಬೀಜವನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಅದೇನು ವಿಶೇಷವೋ ಕಾಣೆ, ಪೊನ್ನಯ್ಯನವರು ತಮ್ಮ ಮಕ್ಕಳ ಜನ್ಮದಿನದಂದು ನೆಟ್ಟ ಗಿಡ ಮಾತ್ರ ಮೊಳಕೆಯೊಡೆದು, ಬೆಳೆಯಿತೇ ವಿನಃ ಬೇರೆ ಯಾವುದೂ ಹುಟ್ಟಲಿಲ್ಲ. ಅದಕ್ಕೇ ಇರಬೇಕು, ಪೊನ್ನಯ್ಯನವರಿಗೆ ಆ ಗಿಡದ ಮೇಲೆ ಅತೀವ ಪ್ರೀತಿ, ಅಕ್ಕರೆ. ಮಳೆ ನೀರಿನಿಂದ ಕೊಚ್ಚಿ ಹೋಗದಿರಲೆಂದು ಸುತ್ತ ಕಟ್ಟೆ ಕಟ್ಟಿದ್ದರು, ನೀರ ಸುರಿಯುವಿಕೆಯಿಂದ ಗಿಡ ಬೀಳದಿರಲೆಂದು ಕೋಲನ್ನು ಕಟ್ಟಿ ಆಧಾರ ನೀಡಿದ್ದರು, ಮೇಲೆ ಚಪ್ಪರ ಕಟ್ಟಿ ಅದನ್ನು ರಕ್ಷಿಸಿದ್ದರು. ಬೇಲಿ ಹಾಕಿ ಪ್ರಾಣಿಗಳಿಂದ ರಕ್ಷಿಸಿದ್ದರು. ಇಗ್ಗುತ್ತಪ್ಪನ ಸನ್ನಿಧಿಯಿಂದ ಪವಿತ್ರ ಮಣ್ಣನ್ನು ತಂದು ಗಿಡಕ್ಕೆ ಉಣಿಸಿದ್ದರು, ತಲಕಾವೇರಿಯಿಂದ ನೀರು ತಂದು ಅದರ ಜಾಗವನ್ನು ಪವಿತ್ರಗೊಳಿಸಿದ್ದರು. ಆ ಗಿಡ ಬೇಗಬೇಗನೇ ಹಚ್ಚ ಹಸಿರಾಗಿ ಬೆಳೆಯಿತು, ಸುತ್ತ ಹತ್ತಾರು ಮೀಟರ್ ರೆಂಬೆ ಹರಡಿ ನೆಲವಕ್ಕೆ ನೆರಳನ್ನು ಕರುಣಿಸಿತು. ಪೊನ್ನಯ್ಯನವರ ಮಕ್ಕಳು ಅದರ ಮೇಲೆ ಹತ್ತಿ, ಹಾರಿ, ಕುಣಿದು ಕುಪ್ಪಳಿಸಿದರೂ, ಕಾಂಡದ ಹಿಂದೆ ಅಡಗಿ ಕುಳಿತು ಕಣ್ಣಾ ಮುಚ್ಚಾಲೆ ಆಡಿದರೂ ಮರ ಸಹಿಸಿಕೊಂಡಿತು. ಈ ಮರ ಪೊನ್ನಯ್ಯನವರ ಮೂರನೆಯ ಸಂತತಿ ಎಂದು ಜನ ಆಡಿಕೊಂಡಿದ್ದನ್ನು ಸಂತೋಷದ ಕಿವಿಯಿಂದ ಕೇಳಿಸಿಕೊಂಡಿದ್ದರು ಪೊನ್ನಯ್ಯ. ಹೌದು, ಅದು ನಿಜ. ಇಲ್ಲವಾದರೆ ಅವರು ಆ ಗಿಡದ ಜೊತೆ ದಿನಾಲೂ ಮಾತನಾಡುತ್ತಿದ್ದರೇ? ಮರಕ್ಕೆ ಬಾಯಿಯಿಲ್ಲದಿರಬಹುದು, ಆದರೆ ಪೊನ್ನಯ್ಯನವರಿಗೆ ಬಾಯಿ ಇದೆ. ಆ ಮರ ಬಿಟ್ಟ ಮೊಟ್ಟ ಮೊದಲ ಇಗ್ಗುತಪ್ಪನಿಗೆ ಅಪರ್ಿಸಿದ್ದರು. ನಂತರ ಮರದ ಮೈ ತುಂಬಾ ಕಡಿಗೆ, ಕಾಯಿ, ಹಣ್ಣುಗಳು. ಪಶುಪಕ್ಷಿಗಳೂ ಅದರ ಪಾಲುದಾರರು.
ಕರಣ ಕಿರಣರು ಬೆಳೆದರು. ಮಡಿಕೇರಿಯ ಶಾಲೆ ಮುಗಿಸಿ, ಉಸಿರುಗಟ್ಟಿಸುವ ಬೆಂಗಳೂರಿಗೂ ಹೋಗಿ ಇಬ್ಬರೂ ಪದವಿ ಮುಗಿಸಿ ಮತ್ತೆ ಕೊಡಗಿಗೇ ಬಂದರು.
ಈ ಅವಳಿ ಜವಳಿಗಳ ವಿಷಯವನ್ನು ನಿಮಗೆ ಇಲ್ಲಿ ಹೇಳಲೇಬೇಕು. ರಾಮ ಲಕ್ಷ್ಮಣರ ಹಾಗೆ ಎಂದೆಲ್ಲಾ ಜನರಿಂದು ಉದ್ದರಿಸಿಕೊಂಡ ಇವರು ಒಂದೇ ಅಚ್ಚಿನಲ್ಲಿ ಹುಟ್ಟಿದವರಿಂತಿದ್ದರು. ನೋಡುವುದಕ್ಕೆ ಒಂದೇ ಥರ, ಬಟ್ಟೆ-ಬರೆ, ಷೂ-ಚಪ್ಪಲಿಗಳು, ಪೆನ್ನು, ಪುಸ್ತಕ, ಶಾಲೆಯ ಚೀಲ, ಎಲ್ಲಾ ಒಂದೇ ಥರ. ಒಮ್ಮೆಯೂ ಜಗಳವಾಡದ ಅವರು ಊಟಕ್ಕೆ ಕುಳಿತರೂ ಹಾಗೆ, ಒಬ್ಬ ಉಂಡಷ್ಟೇ ಇನ್ನೊಬ್ಬ ಉಣ್ಣುತ್ತಿದ್ದ. ಯಾರೇ ಏನೇ ತಿಂಡಿ ಕೊಟ್ಟರೂ ಇನ್ನೊಬ್ಬನಿಗೆ ಕೊಡದೇ ಒಬ್ಬನು ತಿನ್ನುತ್ತಿರಲಿಲ್ಲ. ಶಾಲೆಯಲ್ಲಿಯೂ ಅಷ್ಟೇ, ಪರಸ್ಪರ ಆಟ-ಭಾಷಣ ಮೊದಲಾದ ಸ್ಪಧರ್ೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಯಾಕೆಂದರೆ ಇನ್ನೊಬ್ಬ ಸೋಲುತ್ತಾನೆ ಎಂದು. ಒಬ್ಬನ ಚಪ್ಪಲಿ ಹರಿದರೆ ಅದೇ ರೀತಿ ಇನ್ನೊಬ್ಬನೂ ಚಪ್ಪಲಿ ಹರಿದುಕೊಂಡುಬಿಡುತ್ತಿದ್ದ, ರಿಪೇರಿ ಮಾಡಿದರೆ ಇಬ್ಬರದೂ ಮಾಡಬೇಕು, ಇಲ್ಲ ಇಬ್ಬರಿಗೂ ಹೊಸತನ್ನು ತರಬೇಕು. ತಂದೆ-ತಾಯಿಯರು ಅವರನ್ನು ಎಷ್ಟು ಅಕ್ಕರೆಯಿಂದ ಸಾಕಿದ್ದರೆಂದರೆ ಅವರು ಎಂದೂ ಒಂದೇ ಒಂದು ಬಾರಿಯೂ ಹೆತ್ತವರನ್ನು ನೋಯಿಸಿರಲಿಲ್ಲ.
ಅವರೂ ಬೆಳೆದರು, ಓದು ಮುಗಿಸಿ ಪುನಃ ಕೊಡಗಿಗೇ ಬಂದರು. ಕೆಲಸ ಎನ್ನುವುದು ಬಡವರಿಗೆ ಬೇಕು, ತಮಗಲ್ಲ. ತಾವೂ ಉದ್ಯೋಗಕ್ಕೆ ಹೋದರೆ ಅದರ ಅವಶ್ಯಕತೆ ಇರುವವರಿಗೆ ಮೋಸ ಮಾಡಿದಂತೆ ಎನ್ನುತ್ತಿದ್ದರು ಪೊನ್ನಯ್ಯ ಎಂಬುದು ಅವರ ಮನಸ್ಸಿನಿಂದ ಮಾಸಿರಲಿಲ್ಲ. ತಮಗೇನು ಕೊರತೆಯಾಗಿದೆ? ಭೂದೇವಿ ಬೇಕಷ್ಟು ಬೆಳೆಯನ್ನು ಕೊಡುತ್ತಾಳೆ, ಅದರಲ್ಲಿಯೇ ತೃಪ್ತಿ ಸಿಕ್ಕರೆ ಸಾಕು ಎಂಬುದು ಮಕ್ಕಳು ಅಭಿಪ್ರಾಯವೂ ಅಹುದು.
ಅವರಿಗೂ ಮದುವೆಯಾಯಿತು. ಕೊಡಗಿನವರೇ ಆದ ಇಬ್ಬರು ಹುಡುಗಿಯರು, ಕಮಲ ಮತ್ತು ವಿಮಲ. ಕಿರಣನ ಪತ್ನಿ ವಿಮಲ, ಕರಣನ ಪತ್ನಿ ಕಮಲ. ಒಳಗೊಳಗೇ ಏನೇ ಸಹಮತವಿಲ್ಲದಿದ್ದರೂ ಅದನ್ನು ಒಳಗೇ ಅದುಮಿಕೊಂಡಿದ್ದರು.
ಚಳಿ, ನೆಗಡಿ, ಕೆಮ್ಮಿನಂತಹ ಚಿಲ್ಲರೆ ಕಾಯಿಲೆಗಳೂ ಪೊನ್ನಯ್ಯನತ್ತ ಸುಳಿಯುವ ಧೈರ್ಯ ಮಾಡಿರಲಿಲ್ಲ. ಒಂದೇ ಒಂದು ಮಾತ್ರೆಯನ್ನೂ ತಿಂದವರಲ್ಲ ಅವರು. ತಲೆಮಾರಿನವರ ರೀತಿಯಲ್ಲಿ ದಿನಂಪ್ರತಿ ಎರಡು ಪೆಗ್ ರಂ ಬೇಕೇಬೇಕು, ದೇಹ ಬಿಸಿ ಮಾಡುವ ಅದು ದುರಭ್ಯಾಸ ಎಂದುಕೊಳ್ಳುವುದಿಲ್ಲ ಕೊಡಗಿನ ಚಳಿಗೆ ಬೇಕೇ ಬೇಕು. ಆದರೆ ಕಾಲ ಎಂದಿನಂತಿರುತ್ತದೆಯೇ? ಒಂದು ದಿನ ಪೊನ್ನಯ್ಯನವರ ಜ್ವರ ಏರಿ, ಏರಿ, ಇಳಿದು, ಚಳಿಯ ಹವೆಯಲ್ಲಿಯೂ ಮೈಯಿಂದ ಧಾರಾಕಾರವಾಗಿ ಬೆವರು ಸುರಿದು, ಹೂಂ.. ಹಾಂ.. ಎನ್ನುವಷ್ಟರಲ್ಲಿ ಪೊನ್ನಯ್ಯ ಅಂತಿಮ ಉಸಿರೆಳೆದರು. ಅಂದು ಕಾವೇರಿಯಮ್ಮ ಅತ್ತು ಕರೆದು ಗೋಳಾಡಿದ್ದು ನೋಡಿ ಯಾರಾದರೂ ಅಯ್ಯೋ ಪಾಪ ಅನ್ನಬೇಕು. ಅದಾದ ಮರುದಿನವೇ ಕಾವೇರಿಯಮ್ಮನವರಿಗೂ ಎದೆ ನೋವು ಕಾಣಿಸಿಕೊಂಡು, ಡಾಕ್ಟರ ತಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಬರುವುದರೊಳಗೇ ಗಂಡನ ದಾರಿ ತುಳಿದರು. ಅದು ಸಾರ್ಥಕ ದಾಂಪತ್ಯದ ಕುರುಕು, ಪ್ರೀತಿ ಎಂದರೆ ಇದು, ಎಂದೆಲ್ಲಾ ಊರ ಜನ ಅಂದುಕೊಂಡರು, ಕೆಲವು ದಿನ. ಮತ್ತೆ ಕಾಲಗರ್ಭದಲ್ಲಿ ನೆನಪುಗಳು ಹೂತುಹೋಗುತ್ತವೆ.
ಪೊನ್ನಯ್ಯ ದಿವಂಗತರಾದ ಮೂರನೆಯ ದಿನ ಲಾಯರು ಮನೆಗೆ ಬಂದರು, ಹಲಸಿನ ಮರದ ನೆರಳಿನಲ್ಲಿ ಇರಿಸಿದ ಕುರ್ಚಿಯಲ್ಲಿ ಕುಳಿತುಕೊಂಡರು. ಅವರೆದುರು ಕರಣ ಮತ್ತು ಕಿರಣ. ಸೋದರರ ಹಿಂದೆ ಹೆಂಡತಿಯರು, ಕಮಲ ಮತ್ತು ವಿಮಲ. ಮೂರು ವರ್ಷದ ಮಗ ಇದ್ದಾನಲ್ಲ, ಅವನು ಕರಣನ ಮಗ, ವಿಪುಲ್. ಎಲ್ಲರೂ ಒಂದೆಡೆ ಸೇರಿರುವ ಅಪೂರ್ವ ದೃಶ್ಯವದು.
ಲಾಯರ್ ಕೆಲ ವರ್ಷಗಳ ಹಿಂದೆ ಪೊನ್ನಯ್ಯನವರು ಬರೆದಿಟ್ಟ ವಿಲ್ ಅನ್ನು ಪ್ರಸ್ತುತಪಡಿಸಿದರು. ನಂತರ ಮುಖ್ಯ ಅಂಶಗಳನ್ನು ಹೇಳುತ್ತಾ, ‘ಇಬ್ಬರಿಗೂ ಸಮ ಸಮವಾಗಿ ಆಸ್ತಿಯನ್ನು ಹಂಚಿದ್ದಾರೆ ಪೊನ್ನಯ್ಯ. ಅರ್ಧ ಭಾಗ ಕರಣನದು, ಇನ್ನರ್ಧ ಕಿರಣನದು. ಮನೆಯ ಬಾಗಿಲಿನಿಂದ ಹಲಸಿನ ಮರದ ತನಕ ಗೆರೆ ಎಳೆದರೆ ಮೇಲ್ಭಾಗ ಕರಣನದು, ಕೆಳಭಾಗ ಕಿರಣನದು. ಮನೆ ಕೂಡಾ ಸರಿಯಾಗಿ ಅರ್ಧ ಭಾಗ ಮಾಡಿದ್ದಾರೆ. ಇಬ್ಬರಿಗೂ ತಮ್ಮ ಹಣದ ಸಮಪಾಲು ಬರುವಂತೆ ಬರೆದಿದ್ದಾರೆ. ಅದು ತಲಾ ಸುಮಾರು ಅರವತ್ತು ಲಕ್ಷಗಳಾಗುತ್ತವೆ.’
ಎಲ್ಲೂ ಯಾರೊಬ್ಬರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ, ಸರಿಯಾದ, ಸಮರ್ಪಕವಾದ ಪಾಲು ಎಂದುಕೊಂಡರು ಅಣ್ಣತಮ್ಮಂದಿರು
ಲಾಯರ್ ಮುಂದುವರಿಸಿದರು, ‘ಅವರ ಏಕೈಕ ಮೊಮ್ಮಗನಾದ ವಿಪುಲನಿಗೆ ವಿಶೇಷ ಪ್ರೀತಿಯಿಂದ ಐದು ಲಕ್ಷ ರೂಪಾಯಿಗಳನ್ನು ಅಧಿಕವಾಗಿ ಬರುವಂತೆ ಬರೆದಿದ್ದಾರೆ..’
ಕಿರಣನ ಹೆಂಡತಿ ವಿಮಲ ದುಸುಮುಸು ಎಂದಳು. ಅವಳಿಗೆ ಕೋಪ ಬಂದಿದೆ ಎಂಬುದು ಕಿರಣನಿಗೆ ತಿಳಿಯದಿರಲಿಲ್ಲ. ಹಿಂತಿರುಗಿ ನೋಡಿದ.
‘ಅಲ್ಲ, ನಮಗೆ ಮಕ್ಕಳಿಲ್ಲ ಎಂದು ಐದು ಲಕ್ಷ ರೂಪಾಯಿ ಮೋಸ ಮಾಡಿದರೆ ಹೇಗೆ? ನಾನೇನು ಬಂಜೆನೇ? ಈಗ ಮಕ್ಕಳು ಬೇಡ ಎಂದು ಮುಂದುಹಾಕಿದ್ದಕ್ಕೆ ಹೀಗಾ ಮಾಡೋದು? ಮಾವಂದು ಬರೀ ಮೋಸ…’ ಕೋಟಿ ಕೋಟಿ ರೂಪಾಯಿಗಳ ಮಾಲಿಕರು ತಾವಾಗಿದ್ದು ಅವಳಿಗೆ ಪ್ರಮುಖವಾಗಿರಲಿಲ್ಲ. ಬರೀ ಐದು ಲಕ್ಷ ರೂಪಾಯಿಗಳು ದೊಡ್ಡದಾದವು.
ಮತ್ತೆ ಲಾಯರ್ ಮುಂದುವರಿಸಿದರು, ‘ಅರ್ಥವಾಯಿತಲ್ಲ, ಈ ಪಾಲಿನಂತೆ ಗಿಫ್ಟ್ಡೀಡ್ ಮಾಡಿಡುತ್ತೇನೆ. ತಾವುಗಳು ರಿಜಿಸ್ಟ್ರಾರ್ ಕಚೇರಿಗೆ ಬಂದು ನಿಗದಿತ ಶುಲ್ಕವನ್ನು ಕಟ್ಟಿ ಸಹಿಹಾಕಿದರೆ ನನ್ನ ಕೆಲಸ ಮುಗಿಯಿತು,’ ಎಂದು ಏಳುವುದರಲ್ಲಿದ್ದರು.
‘ಅಂದರೆ ಈ ಹಲಸಿನ ಮರ ಯಾರಿಗೆ ಸೇರಬೇಕೆಂದು ಬರೆದಿಲ್ಲವಾ ಅವರು?’ ಕೇಳಿದಳು ಕಿರಣನ ಹೆಂಡತಿ.

‘ಇಲ್ಲ, ಇದರ ವಿಷಯ ಉಯಿಲಿನಲ್ಲಿ ಇಲ್ಲ. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಇಬ್ಬರೂ ಸಮನಾರಿ ಹಂಚಿಕೊಂಡರೆ ಆಯಿತು,’ ಲಾಯರ್ ಇದೇನೂ ದೊಡ್ಡ ವಿಷಯವಲ್ಲ ಎಂಬಂತೆ ಎಂದರು.
‘ಅದು ನಮಗೆ. ಸೇರುತ್ತೆ. ಕಾನೂನಿನ ಪ್ರಕಾರ ಅಂಚಿನಲ್ಲಿ ಬೆಳೆದಿರುವವ ಮರಗಳು ಭೂಮಿಯ ಮೇಲು ಭಾಗದವರ ಪಾಲು. ನಿಮಗೆ ಬೇಕಾದರೆ ಆವಾಗಾವಾಗ ಒಂದೆರಡು ಹಲಸಿನ ಹಣ್ಣನ್ನು ವಿಮಲಳಿಗೂ ಕೊಡ್ತೀವಿ,’ ಎಂದು ಮೂತಿ ತಿರುವಿದಳು ಕರಣನ ಹೆಂಡತಿ ಕಮಲ.
ಕಿರಣನ ಹೆಂಡತಿಗೆ ತಲೆ ಸಿಡಿದು ಹೋಗುವಷ್ಟು ಕೋಪ ಬಂತು. ‘ಆವಾಗಾವಾಗ ಅಂದರೆ? ನಾವೇನು ನಿಮ ಹತ್ತಿರ ಭಿಕ್ಷೆ ಬೇಡ್ತಿದ್ದೀವಾ? ಆ ಮರ ನಮ್ಮ ಪಾಲು, ನಮಗೇ ಸೇರಬೇಕಾದದ್ದು. ನಿನ್ನ ಮಗನಿಗೆ ಐದು ಲಕ್ಷ ರೂಪಾಯಿ ಬರೆದು ನಮಗೆ ಈಗಲೇ ಮೋಸ ಮಾಡಿದ್ದಾರೆ ಮಾವಯ್ಯ. ಈ ಗಯ್ಯಾಳಿ, ಮಾವನ ತಲೆ ಸವರಿ, ಅವರಿಗೆ ಮಂಕು ಬೂದಿ ಎರಚಿ ಬರೆಸಿಕೊಂಡಿದ್ದಾಳೆ. ಈಗ ಹಲಸಿನ ಮರವೂ ಬೇಕಂತೆ. ದುಬರ್ುದ್ಧಿ…’
ಲಾಯರಿಗೆ ಇದೇನೂ ವಿಶೇಷವಲ್ಲ, ಎಲ್ಲಾ ಕಡೆಯಲ್ಲೂ ಆಗುವುದೇ ಹೀಗೆ. ಹುಟ್ತಾ ಹುಟ್ತಾ ಅಣ್ಣತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು ಎಂಬ ಗಾದೆಯೇ ಇಲ್ಲವೇ?
ಇಲ್ಲಿ ತನಕ ಒಂದೇ ಒಂದು ಕೆಟ್ಟ ಮಾತನ್ನೂ ಆಡದೇ ಅನುಸರಿಸಿಕೊಂಡು ಹೋಗಿದ್ದ, ಇತರರಿಗೆ ಮಾದರಿಯಾಗಿದ್ದ ಅಣ್ಣ ಮತ್ತು ತಮ್ಮ ಪರಸ್ಪರರ ಮಖ ನೋಡಿಕೊಂಡರು. ಇಂತರ ಪರಿಸ್ಥಿತಿ ಬರುತ್ತೆ ಎಂದು ಅವರು ಎಂದೂ ಕಲ್ಪಿಸಿರಲಿಲ್ಲ.
‘ನೀವೇನು ಬಾಯಿ ಮುಚ್ಚಿಕೊಂಡು ಬೆರ್ಚಪ್ಪನ ಹಾಗೆ ಕುಳಿತಿದ್ದೀರಲ್ಲ. ಮಾತಾಡ್ರೀ… ನಾಲಿಗೆ ಬಿದ್ದುಹೋಯಿತೋ ಹೇಗೆ?’ ಮಾತಿನಿಂದಲೇ ಗಂಡನ ಮೂತಿ ತಿವಿದಳು ಕಿರಣನ ಹೆಂಡತಿ ವಿಮಲ.
ಕರಣನಿಗೆ ಇದು ಸರಿ ಬರಲಿಲ್ಲ. ಹೆಂಡತಿಯ ಮಾತನ್ನು ಕೋಲೆ ಬಸವನ ಹಾಗೆ ಕೇಳುತ್ತಾನಲ್ಲ ಕಿರಣ ಎಂದು ನೋವಾಯಿತು. ಅದು ಕೋಪವಾಗಿ ಮಾರ್ಪಟ್ಟಿತು ಕೂಡಾ. ‘ಲೋ, ನಿನ್ನ ಹೆಂಡತಿಯನ್ನು ಕಂಟ್ರೋಲಿನಲ್ಲಿ ಇಟ್ಟುಕೋ. ಅಪ್ಪ ಸತ್ತ ನಂತರ ಅವಳ ಮಾತಿನ ವರಸೆಯೇ ಬದಲಾಗಿದೆ. ಒಂದು ಹಲಸಿನ ಮರಕ್ಕೆ ನಾವುಗಳು ಕಚ್ಚಾಡಬೇಕಾ?’ ಎಂದು ಆಪಾದಿಸಿದ. ದನಿ ಏರಾಗಿಯೇ ಇತ್ತು.
ಕಿರಣನು ಏನು ಉತ್ತರಿಸಬೇಕೆಂದು ಯೋಚಿಸುವ ಮೊದಲೇ ಅವನ ಹೆಂಡತಿ ವಿಮಲಳು, ‘ಅವರನ್ನೇನು ಕೇಳೋದು? ನಾನೇನು ನಿಮ್ಮ ಹೆಂಡತಿಯ ಹಾಗೆ ಪೆದ್ದಲ್ಲ. ಕಾಲೇಜು ಓದಿ, ಕಾನೂನು ತಿಳಿದುಕೊಂಡು ಬಂದವಳು. ನನಗೆ ಮೋಸ ಮಾಡೋಕೆ ನಿಮ್ಮಿಂದ ಸಾಧ್ಯವಿಲ್ಲ.’
ಲಾಯರದು ದಿವ್ಯ ಮೌನ. ಕೇಳದೇ ಉಪದೇಶ ಕೊಡುವುದು ಸರಿಯಲ್ಲ ಎಂಬುದು ಅವರ ವೃತ್ತಿ ತಿಳಿಸಿದೆ ಅವರಿಗೆ.
ಕರಣನ ತಲೆ ಜ್ವಾಲಾಮುಖಿಯಾಯಿತು. ‘ಮುಂಡೆ, ನಿನ್ನನ್ನ ಯಾರೇ ಕೇಳಿದ್ದು? ನಾನು, ನಿನ್ನ ಗಂಡ ಇದನ್ನ ತೀರ್ಮಾನಿಸುತ್ತೇವೆ. ನನಗೆ ಗೊತ್ತಿಲ್ಲವಾ ನೀನು ಎಂಥವಳು ಎಂದು? ಅವಕಾಶ ಸಿಕ್ಕಾಗಲೆಲ್ಲಾ ನನ್ನ ಹೆಂಡತಿಯನ್ನು ಪೆದ್ದಿ, ಕುರೂಪಿ ಎಂದು ಹೇಳುತ್ತಿದ್ದದ್ದು? ನಿಮ್ಮ ಕಡೆಯವರು ಮನೆಗೆ ಬಂದರೆ ಅವರಿಗೆ ವಿಪರೀತ ಉಪಚಾರ, ಮಿಳ್ಳೆಗಟ್ಟಲೆ ತುಪ್ಪ ಸುರೀತಿರೋದು ನನಗೆ ತಿಳಿಯದೇ?’
‘ಹಾಂ, ಹಾಗೆ ಹೇಳಿ,’ ಎಂದು ಶರಾ ಸೇರಿಸಿದಳು ಕಮಲ. ಕರಣ ಮುಂದುವರಿಸಿದ, ‘ನಮ್ಮ ಮನೆಯಿಂದ ಕದ್ದು ಮುಚ್ಚಿ ನಿಮ್ಮ ಮನೆಗೆ ಕಾಫಿ ಬೀಜ, ಕಾಳು ಮೆಣಸು, ಮೊದಲಾದವುಗಳನ್ನು ಕಳುಹಿಸಿದ್ದು ನನಗೆ ತಿಳಿಯದೇ? ಅಪ್ಪ ಇದ್ದಾರೇಂತ, ಅವರೇ ನೋಡಿಕೊಳ್ಳುತ್ತಾರೆ ಎಂದು ಸುಮ್ಮನಿದ್ದೆ. ಇಲ್ಲದಿದ್ದರೆ ಯಾವತ್ತೋ ನಿನಗೆ ಗತಿಕಾಣಿಸುತ್ತಿದ್ದೆ.’
ಅದಾವ ದೆವ್ವ ಕಿರಣನನ್ನು ಮೆಟ್ಟಿಕೊಂಡಿತ್ತೋ ಕಾಣೆ. ಜ್ವಾಲಾಮಖಿ ಸ್ಫೋಟಿಸಿತು. ‘ನೀನು ನನಗೆ ಗತಿ ಕಾಣಿಸ್ತೀಯಾ? ಅದಕ್ಕಿಂತ ಮೊದಲೇ ನಾನು ನಿನ್ನ ಗತಿ ಕಾಣಿಸುತ್ತೇನೆ. ನೀನು ಗಂಡಸೇನೋ? ಷಂಡ ನೀನು. ಹೆಂಡತಿಯ ಕೈಗೊಂಬೆ,’ ಎಂದ ಅವನು ಅಲ್ಲಿಂದ ಎದ್ದು ಮನೆಯೊಳಗೆ ಹೋದ. ಗೋಡೆಗೆ ತೂಗುಹಾಕಿದ್ದ ಕೋವಿಯನ್ನು ತೆಗೆದುಕೊಂಡು ಬಂದ. ಏನಾಗುತ್ತಿದೆ ಎಂದು ಯೋಚಿಸುವ ಮೊದಲೇ ಕಿರಣನ ಕೋವಿಯು ಗುಂಡು ಉಗುಳಿ ಕರಣನ ಎದೆಯನ್ನು ಬಗೆದುಕೊಂಡು ಹೊರಸಾಗಿತು. ಕರಣ ಅಮ್ಮಾ ಎನ್ನುತ್ತಲೇ ನೆಲಕ್ಕೆ ಉರುಳಿದ, ಆಗಬಾರದ್ದು ಆಗಿಹೋಯಿತು. ಕರಣನ ಪ್ರಾಣ ಪಕ್ಷಿ ಹಾರಿಹೋಯಿತು.
ಮರುಕ್ಷಣ ಅಲ್ಲಿ ಭಯಂಕರ ಮೌನ ಆವರಿಸಿತು. ಆಡಲು ಮಾತುಗಳಾದರೂ ಎಲ್ಲಿವೆ? ಘಟನೆ ನಡೆದೇ ಹೋಯಿತಲ್ಲ!
ಪೊಲೀಸರು ಕಿರಣನನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋದರು. ಕರಣನ ಶವವನ್ನು ಆಸ್ಪತ್ರೆಗೆ ಪೊಸ್ಟ್ಮಾರ್ಟಂಗೆ ತೆಗೆದುಕೊಂಡು ಹೋಗಲಾಯಿತು. ಕೋವಿಯನ್ನು ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡರು.
ನಂದಗೋಕುಲ ಎಂದು ಕರೆಸಿಕೊಂಡ ಮನೆ ಸ್ಮಶಾನವಾಯಿತು. ಮಾತಿಲ್ಲ, ಕತೆಯಿಲ್ಲ. ಯಾರ ಮುಖದಲ್ಲಿಯೂ ಕಳೆಯಿಲ್ಲ, ಬದುಕಿನಲ್ಲಿ ಉತ್ಸಾಹ-ಉಲ್ಲಾಸಗಳಿಲ್ಲ. ಚಲಿಸುತ್ತಾರೆ, ಉಸಿರಾಡುತ್ತಾರೆ, ಏನೋ ಒಂದಿಷ್ಟು ತಿನ್ನುತ್ತಾರೆ ಎಂಬ ಕಾರಣ ಬದುಕಿದ್ದಾರೆ ಎನ್ನಬಹುದು. ಅಂಗಳದು ತುಂಬಾ ಕಸಕಡ್ಡಿ-ದರಲೆಗಳು, ಉಪಚರಿಸದ ಕಾರಣ ಬಾಡಿದ ಹೂಗಿಡಗಳು.
ಕಮಲ ಮತ್ತು ವಿಮಲರು ಮನೆಯೊಳಗೆ ಮತ್ತು ಮನೆಯ ಹೊರಗೆ ಒಂದು ಕಾಲ್ಪನಿಕ ಗೆರೆಯನ್ನು ಹಾಕಿಕೊಂಡು ಇಬ್ಬರ ಕುಟುಂಬ ಅದನ್ನು ಎಂದೂ ದಾಟಲಿಲ್ಲ. ಮಾತಿಲ್ಲ, ಕತೆಯಿಲ್ಲ. ಇದೆಲ್ಲಕ್ಕೂ ಹೇತುವಾದ ಮರವನ್ನು ಎಲ್ಲರೂ ನಿರ್ಲಕ್ಷಿಸಿದರು. ಅಂದ ಮೇಲೆ ಅದಾದರೂ ಯಾರಿಗಾಗಿ ಹಣ್ಣು ಬಿಡಬೇಕು? ಮರ ಫಲ ನೀಡುವುದನ್ನು ನಿಲ್ಲಿಸಿತು. ಕಾಲ ಮುಂದೊಂದು ದಿನ ಎಲ್ಲವನ್ನೂ ಮರೆಸುತ್ತದೆ, ಈ ಕುಟುಂಬಗಳಲ್ಲಿ ಜೀವನೋತ್ಸಾಹ ಮತ್ತೆ ಬರಬಹುದು.
 
 

‍ಲೇಖಕರು G

8 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading