ಟಿ ಎಸ್ ಶ್ರವಣ ಕುಮಾರಿ
ಹಿಂದೆ ನೈಮಿಷಾರಣ್ಯದಲ್ಲಿ ಸೂತ ಪುರಾಣಿಕರು ಶೌನಕಾದಿ ಮುನಿಗಳಿಗೆ ಹೇಳಿದ ಸೂತಪುರಾಣ ಇದಲ್ಲ. ಇದು ಸೂತಕ ಪುರಾಣ. ಜೀವ ವೃದ್ಧಿಯಾದಾಗ ಪುರುಡೆಂತಲೂ, ಜೀವ ನಷ್ಟವಾದಾಗ ಸೂತಕವೆಂತಲೂ ಹತ್ತು ದಿನಗಳ ಕಾಲ ಮಾಡುವ ಮೈಲಿಗೆಯ ಆಚರಣೆಯ ಪುರಾಣ.
ನನ್ನ ತಂಗಿ ಹುಟ್ಟಿದಾಗ ನನಗಿನ್ನೂ ಎರಡು ವರ್ಷ, ಹಾಗಾಗಿ ಆಗ ಆಚರಿಸಿದ್ದಿರಬಹುದಾದ ಪುರುಡಿನಂತ ವಿಚಾರ ನನ್ನ ತಲೆಯಲ್ಲಿ ದಾಖಲಾಗುವ ಸಂಭವವಿರಲಿಲ್ಲ. ನಂತರ ನನ್ನ ಮದುವೆಯಾಗುವವರೆಗೂ ನಮ್ಮ ಮನೆಯಲ್ಲಿ ಹುಟ್ಟು, ಸಾವು ಸಂಭವಿಸಲೇ ಇಲ್ಲ. ಹಾಗೆಂದು ಸಾವಿಲ್ಲದ ಮನೆಯ ಸಾಸಿವೆ ಕಾಳನ್ನು ಅರಸಿಕೊಂಡು ಯಾರೂ ನಮ್ಮನೆಗೆ ಬರಲಿಲ್ಲ ಬಿಡಿ!
ನನ್ನ ತಂದೆ ಒಬ್ಬರೇ ಮಗ, ನಮ್ಮ ತಾತನೂ ಒಬ್ಬರೇ ಮಗ. ಹಾಗಾಗಿ ಬೇರೆಯವರ ಕಾರಣದಿಂದ ನಮಗೆ ಪುರುಡಿನ, ಸೂತಕದ ಆಚರಣೆಯ ಸಂದರ್ಭಗಳು ಒದಗಲಿಲ್ಲ ಅಷ್ಟೇ. ನಮಗೆ ಸೂತಕವನ್ನು ದಯಪಾಲಿಸಬಹುದಾಗಿದ್ದ ಅಜ್ಜಿ, ತಾತ ಇಬ್ಬರೂ ನಮ್ಮ ತಂದೆ ಚಿಕ್ಕವರಾಗಿದ್ದಾಗಲೇ ಪಿತೃಲೋಕವನ್ನು ಸೇರಿ, ವರ್ಷದಲ್ಲೆರಡು ದಿನ, ಮೂರು ಪಿಂಡದ ರೂಪದಲ್ಲಿ ಬಂದು ನಮಸ್ಕಾರವನ್ನು ಮಾಡಿಸಿಕೊಳ್ಳುತ್ತಿದ್ದರು.
ʻಆ ಮೂರರಲ್ಲಿ ನಮ್ಮ ಅಜ್ಜಿ/ತಾತ ಯಾರು? ಅವರೇಕೆ ಉಂಡೆಯ ರೂಪದಲ್ಲಿದ್ದಾರೆ? ಫೋಟೋನಲ್ಲಿರುವ ಹಾಗೇಕಿಲ್ಲ?ʼ ಎನ್ನುವ ಹಲವು ಅನುಮಾನಗಳು ಕಾಡುತ್ತಿದ್ದರೂ ಆಗ ಕೇಳುವ ಧೈರ್ಯವಿರಲಿಲ್ಲ. ತಿಂಗಳ ಮುಂಚಿನಿಂದಲೇ ಕ್ರಮವಾಗಿ ಎಲ್ಲಾ ಏರ್ಪಾಟುಗಳನ್ನೂ ಮಾಡಿಕೊಂಡು, ಆ ದಿನ ಅತ್ಯಂತ ಶ್ರದ್ಧೆಯಿಂದ ಹನಿ ನೀರನ್ನೂ ಕುಡಿಯದೆ ನಿರಂತರವಾಗಿ ಐವತ್ತು ವರ್ಷಗಳು ನೆನಪಿನಲ್ಲಿಯೂ ಇದ್ದಿರದ ತಂದೆ ತಾಯಿಯರ ವೈದೀಕವನ್ನು ಮಾಡಿ ಧನ್ಯತಾ ಭಾವವನ್ನು ಹೊಂದುತ್ತಿದ್ದ ತಂದೆಯ ಬಳಿ ಅಂತಹ ತರಲೆ ಪ್ರಶ್ನೆಗಳನ್ನು ಕೇಳಬಹುದೇ?
ಅಲ್ಲಿ ಭಕ್ತಿ, ಶ್ರದ್ಧೆ ಮಾತ್ರವೆ; ಕುತೂಹಲಕ್ಕೆ, ತಲೆಹರಟೆಗೆ ಜಾಗವಿಲ್ಲ. ಅದೇನೇ ಇರಲಿ ನಾವು ಮಕ್ಕಳಂತೂ ಆದಿನ ಬಲು ಖುಷಿಯಲ್ಲಿರುತ್ತಿದ್ದೆವು. ಇನ್ನೆಂದೂ ತಪ್ಪಿಯೂ ಮಾಡದ ವಡೆ, ಸಜ್ಜಪ್ಪದಂತಹ ಅಪೂರ್ವ ಖಾದ್ಯಗಳು ಸಿಗುತ್ತಿದ್ದುದು ಅಂದು ಮಾತ್ರವೇ.
ಈಗ ಮುಖ್ಯ ವಿಷಯಕ್ಕೆ ಬರೋಣ. ನಾನು ಮದುವೆಯಾಗಿ ಬಂದ ಮನೆಯಲ್ಲಿ ಎಂಟು ಮಕ್ಕಳಲ್ಲಿ ಆರು ಗಂಡುಮಕ್ಕಳು. ನಮ್ಮ ಮಾವನವರ ಅಣ್ಣಂದಿರಿಗೆ ನಾಲ್ಕು-ಐದು ಮಕ್ಕಳು. ನಮ್ಮ ಮಾವನವರ ಹಿಂದಿನ ತಲೆಮಾರಿನ ಏಳೆಂಟು ಅಣ್ಣತಮ್ಮಂದಿರಿಗೆ ಒಬ್ಬೊಬ್ಬರಿಗೂ ಕನಿಷ್ಟವೆಂದರೆ ಐದಾರು ಮಕ್ಕಳು. ಹಾಗಾಗಿ ಪುರುಡು/ ಸೂತಕವೆರಡೂ ಆಗಾಗ ಸಂಭವಿಸುತ್ತಲೇ ಇರುವ ವಿದ್ಯಮಾನ.

ಧೃತರಾಷ್ಟ್ರನ ನೂರು ಮಕ್ಕಳ ಹೆಸರು ಹೇಗೆ ನೆನಪಿರಲು ಸಾಧ್ಯವಿಲ್ಲವೋ ಹಾಗೆಯೇ ನನಗಿಂದಿಗೂ ಎಲ್ಲರ ಲೆಕ್ಕವೂ ಸಿಕ್ಕಿಲ್ಲ/ಹೆಸರೂ ಗೊತ್ತಿಲ್ಲ ಬಿಡಿ. ಒಂದು ಬಾರಿ ನಮ್ಮ ದೊಡ್ಡತ್ತೆಯ ಅಧ್ಯಕ್ಷತೆಯಲ್ಲಿ ವಂಶವೃಕ್ಷ ಬರೆಯುವ ಸಾಹಸ ಮಾಡಿ ಇಡೀ ಹಾಳೆಯೂ ಸಾಕಾಗದೆ ಕೆಜಿ ಕಾರ್ಡ್‌ಬೋರ್ಡನ್ನೇ ತರಬೇಕೇನೋ ಅನ್ನಿಸಿತು. ನನಗೇ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲದ ಮೇಲೆ ಮುಂದಿನ ಪೀಳಿಗೆಯವರಿಗೆ ಬೇಕೆ? ಸುಮ್ಮನೆ ಶ್ರಮ ವ್ಯರ್ಥ ಎನ್ನುವ (ಸ)ಕಾರಣ ಕೊಟ್ಟು ಆ ಪ್ರಯತ್ನವನ್ನು ಅಲ್ಲಿಗೇ ಕೈಬಿಟ್ಟೆ.
ಮೊತ್ತಮೊದಲ ಬಾರಿಗೆ ಹೆಣ್ಣು ನೋಡುವುದಕ್ಕೆಂದು ಇವರ ಮನೆಯಲ್ಲಿ ಕಾಲಿಟ್ಟಿದ್ದು ದಸರೆಯ ದಿನಗಳಲ್ಲಿ. ಅಂದು ಅವರ ಮನೆಯಲ್ಲಿ ವರಮಹಾಲಕ್ಷ್ಮಿ ವ್ರತ ಎಂದರು. ನಮ್ಮ ಮುಖದಲ್ಲಿದ್ದ ಪ್ರಶ್ನೆಯನ್ನು ಕಂಡು “ಮೊಮ್ಮಗಳು ಹುಟ್ಟಿ ಪುರುಡಿತ್ತು, ನೀರಿನ ದಿನವೇ ವ್ರತವಿತ್ತು; ಹಾಗಾಗಿ ಇವತ್ತು ಮಾಡಿದೆವು” ಎಂದರು.
ʻಮೊಮ್ಮಗು ಹುಟ್ಟಿದರೆ ಮೈಲಿಗೆಯೇ? ಹಬ್ಬದ ದಿನ ಹೇಗೂ ಎರೆದುಕೊಂಡು ತಾನೆ ಮಾಡೋದು? ಅದಕ್ಕೇನು ಕಷ್ಟ?ʼ ಎನ್ನುವ ಅಚ್ಚರಿಯ ಪ್ರಶ್ನೆ ತಲೆಯಲ್ಲಿ ಬಂದರೂ “ಅಲ್ಲಿ ನಿನ್ನ ತಲೆಹರಟೆಯ ಪ್ರದರ್ಶನ ಬೇಡ. ಕೇಳಿದ್ದಕ್ಕಷ್ಟೇ ಉತ್ತರ ಕೊಡು” ಎಂದಿದ್ದ ಅಮ್ಮನ ಆಜ್ಞೆಯನ್ನು ಪಾಲಿಸಲು ತೆಪ್ಪಗೆ ಕುಳಿತೆ.
ಮದುವೆಯ ನಂತರವೇ ನನಗೆ ಗೊತ್ತಾಗಿದ್ದು ಈ ಪುರುಡು/ಸೂತಕದ ಮೈಲಿಗೆಯ ಗಂಭೀರತೆ! ತವರು ಮನೆಯಲ್ಲಿ ಈ ಪ್ರಸಂಗವನ್ನೇ ನೋಡಿರಲಿಲ್ಲ. ನೀರಿನ ದಿನ ಒಂದು ಸಣ್ಣ ಮದುವೆ ಮಾಡಬಹುದಾದಷ್ಟಿದ್ದ ಮನೆಯನ್ನೆಲ್ಲಾ ಗುಡಿಸಿ, ಸಾರಿಸಿ. ನೂರು ಜನರ ಅಡುಗೆಗಾಗುವಷ್ಟಿದ್ದ ಎಲ್ಲಾ ಪಾತ್ರೆ ಪಡಗಗಳನ್ನೂ ತೊಳೆದು, ಹಾಸಿಗೆಗಳನ್ನು ಬಿಸಿಲಿಗೆ ಹಾಕಿ, ಇದ್ದ ಬದ್ದ ಬಟ್ಟೆಗಳನ್ನೆಲ್ಲಾ ನೆನಸಿ ಹಿಂಡಿ ಒಣಹಾಕಿ, ಪುಣ್ಯಾಹ ಮಾಡಿಸಿದ ತೀರ್ಥವನ್ನು ಮನೆಯ ಮೂಲೆಮೂಲೆಗೂ ಪ್ರೋಕ್ಷಣೆ ಮಾಡಿದ ಮೇಲೆ ಶುದ್ಧಿ, ಆಮೇಲೆ ತಿಂಡಿ, ಅಡುಗೆ. ಸಾಕಪ್ಪಾ ಸಾಕಾಯ್ತು ಎನ್ನಿಸುವಷ್ಟು…
ಇಂತಹ ಆಚರಣೆಗಳು ವರ್ಷದಲ್ಲಿ ಏಳೆಂಟು ಬಾರಿಯಾದರೂ ಇರುತ್ತಿದ್ದವು. ಪುಣ್ಯಕ್ಕೆ ಅದು ಊರಲ್ಲಿ ಮಾತ್ರಾ, ನಾವು ಬೆಂಗಳೂರಿನಲ್ಲಿದ್ದೆವು, ಬಚಾವು.
ಇದರ ಬಗ್ಗೆ ಒಂದು ಸ್ವಾರಸ್ಯಕರ ಕತೆಯನ್ನು ನಮ್ಮತ್ತೆ ಒಮ್ಮೆ ಹೇಳಿದ್ದರು. ಹಿಂದೆಲ್ಲಾ ಸಾವಾದ ಮನೆಯಲ್ಲಿ ಒಲೆಹಚ್ಚುವಂತಿರಲಿಲ್ಲವಲ್ಲ; ಯಾರಾದರೂ ಅಕ್ಕಪಕ್ಕದವರು ಅಡುಗೆ ಮಾಡಿ ತಂದಿಡುವ ಪದ್ದತಿ. ಹೇಳಿ ಕೇಳಿ ನಮ್ಮದು ಸಂಖ್ಯೆಯ ಲೆಕ್ಕದಲ್ಲಿ ಕೌರವರ ಮನೆ! ʻನಮ್ಮಲ್ಲಿ ಯಾವುದಾದರೂ ಸಾವಾದರೆ ಊರಿನ ಯಾವ ಮನೆಯವರಿಗೆ ಈ ಪರಿವಾರಕ್ಕೆ ಅಡುಗೆ ಮಾಡಿ, ಊಟ ತಂದಿಟ್ಟು ಪೂರೈಸಲು ಸಾಧ್ಯ?
ನೆರೆಹೊರೆಯವರಿಗೆ ತೊಂದರೆಯಾಗುತ್ತದೆʼ ಎನ್ನುವ ದೂರಾಲೋಚನೆಯಿಂದ ನಮ್ಮ ಮಾವನವರ ಚಿಕ್ಕಪ್ಪನನ್ನು ಯಾರಿಗೋ ದತ್ತು ಕೊಟ್ಟ ಶಾಸ್ತ್ರ ಮಾಡಿ, ಅವರನ್ನು ಸೂತಕದ ಸಂಕಲೆಯಿಂದ ಬಿಡಿಸಿ ಊರವರನ್ನು ಕಾಪಾಡಿದ್ದರಂತೆ! ಹಾಗಾಗಿ ನಮ್ಮೆರಡು ಮನೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆ ಅರ್ಧವಾಗಿ ಯಾವುದೇ ಸಾವಾದಾಗ ಒಬ್ಬರಿಗೊಬ್ಬರು ಮಾಡಬಹುದು ಎನ್ನುವ ಏರ್ಪಾಟು. ಅಚ್ಚರಿಯಾದರೂ ನಿಜ. ಎರಡು ಕುಟುಂಬದಲ್ಲಿ ಪರಸ್ಪರ ಸೂತಕವಿಲ್ಲ.
ನನ್ನ ಮದುವೆಯಾದ ಎರಡು ವರ್ಷದ ನಂತರ ಸರತಿಯಲ್ಲಿ ಕಾದಿದ್ದವರಂತೆ ನನ್ನ ಮಾವ, ಅತ್ತೆ, ಸೋದರ ಮಾವ, ತಂದೆ ಹೀಗೆ ಒಬ್ಬೊಬ್ಬರಾಗಿ ಮನೆಯವರೇ ಕಾಲವಶರಾದರು. ಜೊತೆಜೊತೆಯಲ್ಲೇ ಅದೆಷ್ಟೋ ದಾಯಾದಿಗಳು, ಸಂಬಂಧಿಕರು… ಹೀಗೆ ಒಂದೆರಡು ವರ್ಷಗಳಲ್ಲಿ ಮೇಲಿಂದ ಮೇಲೆ ಸಾಕಷ್ಟು ಸಾವನ್ನು ನೋಡುವ ಸಂದರ್ಭ ಉಂಟಾಗಿ ನಮ್ಮೆಲ್ಲರಲ್ಲಿಯೂ ಒಂದು ರೀತಿಯ ನಿರ್ಲಿಪ್ತಿ ಮನೆಮಾಡತೊಡಗಿತು.

ಇದು ಎಷ್ಟರಮಟ್ಟಿಗಾಯಿತೆಂದರೆ ಯಾರೋ ಒಬ್ಬರ ದಹನಕ್ಕೆಂದು ಹರಿಶ್ಚಂದ್ರ ಘಾಟಿಗೆ ಹೋದಾಗ ಸ್ಮಶಾನದವನು ಕೆಲವು ಪರಿಕರಗಳನ್ನು ಕಂಡು ʻನೀವ್ಯಾಕೆ ತರಕ್ಕೆ ಹೋದ್ರಿ, ಅವೆಲ್ಲಾ ಇಲ್ಲೇ ಸಿಕ್ತಿತ್ತುʼ ಅಂದನಂತೆ. ನನ್ನವರ ದೊಡ್ಡಪ್ಪನ ಮಗ “ಇಷ್ಟರವರೆಗೆ ಹೋಗಿದ್ದ ಕಡೆ ಈ ವ್ಯವಸ್ಥೆ ಇರ್ಲಿಲ್ಲ. ಈಗ ಗೊತ್ತಾಯ್ತಲ್ಲ, ಮುಂದಿನ ಸಾರಿ ತರಲ್ಲ ಬಿಡಿ” ಎಂದರಂತೆ.
ಮನೆಗೆ ಬಂದ ತಕ್ಷಣ ಎಲ್ಲಾ ದೊಡ್ಡವರಿಂದ ಮಂಗಳಾರತಿ ʻಸ್ಮಶಾನದಲ್ಲಿ ಮುಂದಿನ್ಸಲ ತರಲ್ಲ ಅಂತ ಹೇಳ್ಬಂದಿದೀಯಲ್ಲ, ಬುದ್ಧಿಯಿದ್ಯಾʼ ಅಂತ. “ಸರ‍್ಹೋಯ್ತು, ನಾನ್ಹೇಳಿದ್ದಕ್ಕೆ ಯಾರೂ ಸಾಯಲ್ಲ, ಸಾಯೋವ್ರನ್ನ ನಾವು ಹಿಡಿದಿಟ್ಕೊಳಕ್ಕೂ ಆಗಲ್ಲ” ಎಂದು ಪಲುಕಿ ಮಿಂದು ಬಂದರು ಅವರು. ಎಷ್ಟು ದೊಡ್ಡ ಆಧ್ಯಾತ್ಮ! ಹೇಳಿದವರು ತಲೆಚಚ್ಚಿಕೊಂಡರಷ್ಟೆ.
ಈಗ ಸುಮಾರು ನಲವತ್ತು ವರ್ಷಗಳಲ್ಲಿ ಪಿತೃಲೋಕದಲ್ಲಿ ನಮ್ಮ ಕುಟುಂಬದವರ ಸಂಖ್ಯೆ ಹೆಚ್ಚುತ್ತಾ ಬಂದು ಆ ಲೋಕದಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿದ್ದು “ನಿಂದ್ಯಾವತ್ತಯ್ಯ ಭೂಲೋಕಕ್ಕೆ ಟ್ರಿಪ್ಪು? ಈ ಸಲ ಭಕ್ಷ್ಯ ಏನು ಮಾಡ್ಸಿದ್ರು? ಅಡುಗೆ ಚೆನ್ನಾಗಿತ್ತಾ?” ಅಂತ ಪರಸ್ಪರ ಮಾತಾಡಿಕೊಳ್ಳುತ್ತಾ ತಮಗೆ ಊಟ ಹಾಕುವ ದಿನಕ್ಕೆ ಕಾಯುತ್ತಾ ಕುಳಿತಿರುತ್ತಾರೇನೋ! ಇಲ್ಲೂ ವರ್ಷಕ್ಕೆ ಆರೋ ಎಂಟೋ ದಿನಗಳಲ್ಲಿ ಹಬ್ಬದಡುಗೆಯಾದರೆ, ಅದಕ್ಕಿಂತಲೂ ಹೆಚ್ಚು ತಿಥಿಯೂಟವೇ ಆಗಿರುತ್ತದೆ.
ನನ್ನವರು ಯಾವುದಾದರೂ ಫೋನಿನ ಕರೆ ಸ್ವೀಕರಿಸಿದ ತಕ್ಷಣ “ಹೌದಾ, ಯಾವಾಗಂತೆ? ಹೇಗಾಯ್ತು?” ಎಂದು ಸ್ವಲ್ಪ ಆತಂಕದಿಂದ ಕೇಳಿ ಮಿಕ್ಕಿದ್ದಕ್ಕೆಲ್ಲಾ ಹ್ಞೂಂಗುಟ್ಟುತ್ತಿದ್ದರೆ… ನನಗೆ ಗ್ಯಾರೆಂಟಿ ಮುಂದಿನ ಪ್ರಶ್ನೆ “ಎಷ್ಟೊತ್ತಿಗೆ ತೆಗೀತಾರೆ? ಎಲ್ಲಿ ಮಾಡ್ತಾರೆ” ಎನ್ನುವುದು. ಮಾತಾಡಿದವರು “ನಿಮ್ಮವರಿಗೆಲ್ಲಾ ತಿಳಿಸ್ಬಿಡಯ್ಯಾ” ಎಂದರೆ, ಅವರಿಗೆ ಕನಿಷ್ಟ ಒಂದು ಗಂಟೆಯ, ಹನ್ನೆರಡು ಕರೆಗಳ ಉಳಿತಾಯ; ಇವರಿಗೂ ಎಲ್ಲರಿಗೂ ಕರೆಮಾಡಿ ವಿಷಯ ತಿಳಿಸುತ್ತಾ ಒಂದೆರಡು ಗಂಟೆ ಕಾಲಕ್ಷೇಪ. ನಂತರ ಹೊರಡುವ ಸಿದ್ಧತೆ.
ಇದರ ಫಲಶೃತಿಯೇನಾಯಿತೆಂದರೆ, ಒಮ್ಮೆ ಇವರ ದೊಡ್ಡಪ್ಪನ ಮಗನ ಮನೆಗೆ ಹೋಗಿದ್ದೆವು. ಮಾತಿನ ಮಧ್ಯೆ ಅವರ ಹೆಂಡತಿ ನನ್ನವರಿಗೆ “ನಿಮ್ಮ ಫೋನ್ ಬಂದ್ರೇ ನಂಗೆ ಭಯವಾಗಿ ಕಾಲು ಥರಥರಗುಟ್ಟತ್ತೆ ಕಣ್ರೀ” ಅಂದರು. ನಾನು ಅಚ್ಚರಿಭರಿತಳಾಗಿ ʻಅದ್ಯಾಕೋʼ ಎಂದುಕೊಳ್ಳುತ್ತಿರುವಾಗಲೇ “ಯಾರ‍್ದೋ ಸಾವಿನ ಸುದ್ಧಿ ಹೇಳ್ತೀರಾ, ನಂಗೋ ಭಜನೆ ಕ್ಲಾಸಿಗೋ, ಮತ್ತೊಂದಕ್ಕೋ ಹತ್ತು ದಿನ ಚಕ್ಕರ್, ಮೈಲ್ಗೆ ಕಳೆದ್ಮೇಲೆ ಅಟ್ಟದ ಮೇಲೊಟ್ಟಿರೋ ಪಾತ್ರೇನೆಲ್ಲಾ ತೊಳ್ದು, ಬಟ್ಟೆನೆಲ್ಲಾ ನೆನ್ಸಿ, ಮನೆಯೆಲ್ಲಾ ತೊಳ್ದು ಬಳ್ದು ಮಾಡೋ ಹೊತ್ಗೆ ನನ್ನ ಹೆಣವೇ ಬಿದ್ದೋಗತ್ತೆ…”
ಇನ್ನೂ ಏನು ಹೇಳ್ತಿದ್ರೋ ನಾನು “ಆ ನೆಪದಲ್ಲಾದ್ರೂ ಮನೆಯೆಲ್ಲಾ ಒಂದ್ಸಲ ಕ್ಲೀನಾಗತ್ತೆ ಬಿಡಿ” ಅಂತ ತಮಾಶೆ ಮಾಡಿ “ನಾವಂತೂ ಸುದ್ದಿ ತಿಳಿದ್ಮೇಲೆ ಸ್ನಾನ ಮಾಡ್ತೀವಷ್ಟೇ” ಅಂದೆ. ಆದರೆ ಅವರು ಮಡಿ ಹುಡಿಯನ್ನೇ ಜೀವನದ ಪರಮಧರ್ಮವಾಗಿ ಸ್ವೀಕರಿಸಿದ್ದ ದೊಡ್ಡತ್ತೆಯ ಮೆಚ್ಚಿನ ಸೊಸೆ. “ಅದ್ಹೆಂಗೆ ಸಾಧ್ಯ? ಮನೆಗೆ ಅನಿಷ್ಟ ಬಡ್ಕೊಳತ್ತೆ ಅಂತಿದ್ರು ನಮ್ಮತ್ತೆ” ಅಂದರು. ವಾದ ಮಾಡುವುದು ಉಚಿತವಲ್ಲ ಎಂದು ಸುಮ್ಮನಾದೆ.

ಕೂಡು ಕುಟುಂಬ ವ್ಯವಸ್ಥೆಯಿದ್ದು ವೈದ್ಯಕೀಯ ಕ್ಷೇತ್ರ ಇಷ್ಟೊಂದು ಬೆಳೆದಿರದ ಕಾಲದಲ್ಲಿ ರೋಗ ರುಜಿನಗಳಿಂದ ಸತ್ತರೆ, ಮನೆಯಲ್ಲೇ ಹೆರಿಗೆಯಾದಾಗ ಬಾಣಂತಿ, ಮಗುವಿನ ಆರೋಗ್ಯದ ದೃಷ್ಟಿಯಿಂದ, ಕ್ರಿಮಿಗಳ ನಿವಾರಣೆಯ ಕಾರಣಕ್ಕೆ ಈ ಕ್ವಾರಂಟೇನ್ ಪದ್ದತಿ ಇತ್ತೇನೋ! ಯಾವ್ಯಾವುದೋ ಊರಿನಲ್ಲಿ ಹಂಚಿಹೋಗಿರುವಾಗ ಇದರ ಅಗತ್ಯವಿದೆಯೇ?
ನನ್ನ ತವರು ಮನೆಯಲ್ಲಿ ಸಾವಿನ ಬಗ್ಗೆ ಮಾತಾಡುವುದೂ ನಿಶಿದ್ಧ. ಅಸ್ತು ದೇವತೆಗಳ ಭಯ ಬೇರೆ. ಇತರ ದಿನಗಳಲ್ಲಿ ಆ ಬಗ್ಗೆ ಮಾತಾಡುವಾಗ ʻಹೆಚ್ಚುಗಟ್ಲೆ ದಿನಗಳಲ್ಲಿʼ ಎನ್ನುತ್ತಿದ್ದರೆ ಹೊರತು ಸಾವು/ತಿಥಿ/ವೈದೀಕ ಎನ್ನುವ ಶಬ್ದವೇ ವಾಮ. ಅಷ್ಟೇಕೆ, ಟೆಲಿಗ್ರಾಂ ಬಂದರೆ ಒಡೆಯುವ ಮುನ್ನ ದೇವರ ಮುಂದಿಟ್ಟು ತುಪ್ಪದ ದೀಪ ಹಚ್ಚಿ ʻಸಾವಿನ ಸುದ್ದಿ ಆಗಿರದಿರಲಿʼ ಎಂದು ಬೇಡಿಕೊಂಡು ನಂತರ ನೋಡುತ್ತಿದ್ದವರನ್ನು ನೋಡಿದ್ದೇನೆ..
ಏನೋ ಮಾತಿಗೆ ʻಹಬ್ಬ ಹರಿದಿನಾಂದ್ರೆ ಬೇಕಾಗತ್ತಲ್ಲʼ ಎನ್ನುತ್ತಿದ್ದರು. ಇಲ್ಲಿಗೆ ಬಂದಮೇಲೆ ಇಂಥದೇ ಸಾಂದರ್ಭಿಕ ಮಾತುಗಳಾಡುವಾಗ ʻತಿಥಿ, ಪಕ್ಷದ ದಿನಗಳಲ್ಲಿ ಬೇಕಾಗತ್ತಲ್ಲʼ ಎನ್ನುವುದು ಸಾಮಾನ್ಯವಾಗಿ ಸಲೀಸಾಗಿ ಕೇಳುತ್ತಿದ್ದ ಮಾತು.
ಹುಟ್ಟು, ಸಾವು ಎರಡೂ ಸತ್ಯವೇ. ಮೈಲಿಗೆಯೆನ್ನುವುದು ಮನಸ್ಸನ್ನು ಕಾಡಬಾರದಷ್ಟೇ. ಆಧ್ಯಾತ್ಮವೂ ಇದನ್ನೇ ಹೇಳುತ್ತದೆಯೇನೋ ಎನ್ನುವಲ್ಲಿಗೆ ಈ ಸೂತಕ ಪುರಾಣವು ಮುಗಿದುದು. ಕೇಳಿದವರಿಗೆ, ಓದಿದವರಿಗೆ ಶುಭವಾಗಲಿ.






ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಅವಧಿಗೆ, ಮೋಹನ್ ಸರ್ ಗೆ
ಬಹಳ ರಂಜಿಸಿತು, ನಿಮ್ಮ ಸೂತಕ ಪುರಾಣ, ಶ್ರವಣಕುಮಾರಿ. ಹೀಗೇ ಬರೆಯುತ್ತಿರಿ.