
ಕೆ ರಘುನಾಥ್
ತಮ್ಮನ್ನು ತಾವು ಕನ್ನಡ ಕನ್ನಡ ಕಥನ ಕಾವ್ಯ ಪರಂಪರೆಗೆ ಕೋಡು ಮೂಡಿಸಿದ ಕವಿಗಳಲ್ಲಿ ಸು. ರಂ. ಎಕ್ಕುಂಡಿಯವರೂ ಒಬ್ಬರು. ಉಳಿದವರು ಬೇರೆ ಕಾವ್ಯ ಪದ್ಧತಿಗಳಿಗೆ ಒಲಿದರೂ, ಎಕ್ಕುಂಡಿಯವರು ಅದಕ್ಕೇ ತಮ್ಮನ್ನು ಕೊಟ್ಟುಕೊಂಡರು. ಇದಕ್ಕೆ ಕಾರಣವೇನೆಂದು ಅವರನ್ನು ಕೇಳಿದರೆ, ಪಂಪ, ಹರಿಹರನಂತಹ ಕತೆಯನ್ನು ಹೇಳುವ ಕವಿಗಳು ತಮಗೆ ಪ್ರಿಯವೆಂದೂ ಅದಕ್ಕಾಗಿ ತಾವೂ ಅದೇ ಜಾಡನ್ನು ಹಿಡಿದೆನೆಂದೂ ಹೇಳುತ್ತಾರೆ. ಇದು ಅವರು ಪ್ರಾಚೀನ ಪರಂಪರೆಯೊಂದಿಗೆ ಗುರುತಿಸಿಕೊಳ್ಳುವ ಪರಿ. ಇದರೊಂದಿಗೆ ತಮ್ಮ ಕಾವ್ಯದ ಮೂರು ಮುಖ್ಯ ಆಯಾಮಗಳನ್ನು ಮಾತನಾಡುತ್ತಾ, ಪುರಾಣ, ಇತಿಹಾಸ ಮತ್ತು ಸಮಕಾಲೀನ ನೆಲೆಗಳು ತಮ್ಮ ಕಾವ್ಯವನ್ನು ರೂಪಿಸಿವೆ ಎಂದರು. ‘ಉಳಿದ ಕವಿಗಳು ಅದನ್ನು ಬಳಸಿಕೊಳ್ಳುವುದಕ್ಕೂ ನೀವು ಬಳಸಿಕೊಳ್ಳುವುದಕ್ಕೂ ಏನು ವ್ಯತ್ಯಾಸ?’ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಸ್ವಾರಸ್ಯಕರವಾದುದು ಮತ್ತು ಅಷ್ಟೇ ಮಾರ್ಮಿಕವಾದುದು. ಬ್ರಿಟಿಷರು ನಮ್ಮನ್ನು ಕಾಲೋನೈಸ್

ಮಾಡಿದ್ದರಿಂದ ಮತ್ತು ಈಗಿನ ಉದಾರೀಕರಣ, ಜಾಗೀಕರಣಗಳು ನಮ್ಮನ್ನು ನಮ್ಮ ಪರಂಪರೆಯಿಂದ ವಂಚಿತರನ್ನಾಗಿ ಮಾಡುವುದರಿಂದ ನಮ್ಮ ಪರಂಪರೆಯ ಅರಿವು ನಮಗಾಗುವಂತೆ ಮಾಡುವುದುಕ್ಕಾಗಿ, ಆ ಮೂಲಕ ಅವುಗಳಿಗೆ ತಡೆಗೋಡೆಯನ್ನು ಒಡ್ಡುವಂತೆ ಮತ್ತು ಅವುಗಳಿಂದ ಸ್ಪೂರ್ತಿ ಪಡೆಯುವಂತೆ ತಮ್ಮ ಕಾವ್ಯದಲ್ಲಿ ಅವುಗಳನ್ನು ಬಳಸುತ್ತಿರುವುದಾಗಿ ಹೇಳಿದರು. ಇದು ಕೂಡ ನಮ್ಮ ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನಮ್ಮ ಲೇಖಕರು ನಮ್ಮ ವೇದ, ಪುರಾಣ, ಇತಿಹಾಸ, ಜಾನಪದಗಳ ಮೊರೆಹೊಕ್ಕಿದ್ದು ಇದೇ ಕಾರಣಕ್ಕಾಗಿ. ನಮ್ಮ ಸದ್ಯದ ಸ್ಥಿತಿಯನ್ನು ಮರೆಯಲು,-ಹಿಂದಿನದರಿಂದ ಸ್ಪೂರ್ತಿಯನ್ನು ಪಡೆಯಲು. ಆದೆ ಇದು ಕೆಲಮಟ್ಟಿಗೆ ವೈಭವೀಕರಣಕ್ಕೆ ಕಾರಣವಾಯಿತು ಎಂಬುದನ್ನು ಮರೆಯುವಂತಿಲ್ಲ.
ಈ ಹಿನ್ನೆಲೆಯಲ್ಲಿ ಅವರ ಕಾವ್ಯವನ್ನು ಅದರಲ್ಲೂ ಅವರ ‘ಬಕುಳದ ಹೂಗಳನ್ನು ಅರ್ಥಮಾಡಿಕೊಳ್ಳುವುದು, ಅದರಲ್ಲಿ ಅವರು ಸಮಕಾಲೀನತೆಯನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಕ್ರಮವನ್ನು ವಿಶ್ಲೇಷಣೆಗೆ ಒಳಪಡಿಸುವುದು ಈ ಟಿಪ್ಪಣಿಯ ಉದ್ದೇಶವಾಗಿದೆ. ಅದಕ್ಕೆ ಅವರ ಮೂರು ಮುಖ್ಯ ಕವಿತೆಗಳನ್ನು ಇಲ್ಲಿ ಆರಿಸಿಕೊಳ್ಳಲಾಗಿದೆ.
ಭಾಗ-2
ರೊಟ್ಟಿ ಮತ್ತು ಕೋವಿ
ಇಲ್ಲಿ ಹಸಿದ ಹಾವುಗಳಂತೆ ಎರಡು ಕೈಗಳು ಎಂಜಲಿನ ಎಲೆಯಲ್ಲಿನ ಹುಡುಕಾಟ ನಡೆಸುವುದರೊಂದಿಗೆ ಈ ಕವಿತೆ ಪ್ರಾರಂಅದರಭವಾಗುತ್ತದೆ. ‘ಎಲೆಯನ್ನೆಲ್ಲಾ ಬಳಿದಾಗ ಏನೋ ಸಿಕ್ಕಿತು ತಣ್ಣಗಾತು ಹೊಟ್ಟೆ ಎನ್ನುತ್ತಾರೆ. ಅವರಿಗೆ ಸಿಕ್ಕಿದ್ದಾದರೂ ಏನು? ‘ಎರಡು ಬ್ರೆಡ್ಡಿನ ತುಂಡು, ಚೆಲ್ಲಿದ ಹುಳಿಯನ್ನ, ಸಿಪ್ಪೆ, ಉಪ್ಪಿನ ಕಾಯಿ’ ಇದನ್ನೆಲ್ಲಾ ನೋಡುತ್ತಿದ್ದ ಕವಿಗೆ, ‘ಎಲ್ಲಿಯೋ ಕಂಡಿದ್ದೇನಲ್ಲಾ ಈ ಕೈಗಳನ್ನು’ ಎಂದು ಅನ್ನಿಸುತ್ತದೆ. ಆಗ ಒಂದೊಂದೇ ಪ್ರಸಂಗವನ್ನು ನೆನೆಪಿಸಿಕೊಳ್ಳುತ್ತಾರೆ. ‘ಇವೇ ಕೈಗಳು -ನೆಲವನ್ನು ನೇಗಿಲಿನಿಂದ ಉತ್ತು ಬೆಳೆಯನ್ನು ಬೆಳೆದವು, ಇವೇ ಕೈಗಳು ಗಚ್ಚುಗಾರೆಗಳನ್ನು ಹಗಲಿರುಳು ಹೊತ್ತು ಉಪ್ಪರಿಗೆಗೆಳನ್ನು ನಿಲ್ಲಿಸಿದವು, ಇವೇ ಕೈಗಳು ಯಾವ್ಯಾವುದೋ ವಾದ್ಯಗಳನ್ನು ನುಡಿಸಿದವು, ಆದರೆ ಇಂದೇಕೆ ಇವುಗಳು ಎಂಜಿಲೆಲೆಯಲ್ಲಿ ಹುಡುಕಾಟಕ್ಕೆ ತೊಡಗಿವೆ?’ ಎನ್ನುವ ಪ್ರಶ್ನೆ ಕವಿಯನ್ನು ಕಾಡುತ್ತದೆ. ತಮ್ಮ ಹಸಿವೆಯನ್ನು ತುಂಬಲೆಂದು ‘ಎದೆ ಎದೆಯ ಕದವನ್ನು ತಟ್ಟಿದರೂ ಅವು ಮಾತ್ರ ಗಟ್ಟಿಯಾಗಿ ಮುಚ್ಚಿಕೊಂಡಿವೆ’ ಅಂದ ಮೇಲೆ ಇವರು ನೇಣುಗಂಬದ ಹೆದರಿಕೆಯನ್ನು ಧಿಕ್ಕರಿಸಿ ಕೋವಿ ಗುಂಡುಗಳನ್ನು ತೆಗೆದುಕೊಳ್ಳಬೇಕಲ್ಲವೇ?’ ಯಾಕೆಂದರೆ ಸಾವಿಗಿಂತ ಬದುಕು ಮುಖ್ಯ ಎನ್ನುವ ಇತ್ಯಾತ್ಮಕ ನಿಲುವಿನ ಕಡೆ ಕವಿಯ ದೃಷ್ಟಿ ಹೊರಳುತ್ತದೆ. ಆದರೆ ರೊಟ್ಟಿಯನ್ನು ಪಡೆಯಲು ಕೋವಿಯೇ ಉತ್ತರವೇ? ಇಲ್ಲದಿದ್ದರೆ ಬೇರೆ ಯಾವುದು? ಎಂಬ ಪ್ರಶ್ನೆಗಳ ಕಡೆಗೆ ಕವಿತೆ ಮುಖಮಾಡುತ್ತದೆ. ಇದಕ್ಕೆ ಪ್ರತಿಯೊಬ್ಬ ಓದುಗ ತನ್ನಂತರಂಗದಲ್ಲಿ ಉತ್ತರವನ್ನು ಕಂಡುಕೊಳ್ಳಬೇಕಾದ್ದು ಅವಶ್ಯ. ಅದರಲ್ಲಿಯೇ ಕವಿತೆಯ ಸಾರ್ಥಕತೆ ಅಡಗಿದೆ.
ಇಬ್ಬರು ರೈತರು
ಈ ಕವಿತೆ ರೈತ ಮತ್ತು ಕಾಳಿದಾಸನ ನಡುವಿನ ಮುಖಾಮುಖಿ. ಅವರು ಕಾಳಿದಾಸನ ಕೀರ್ತಿಯನ್ನು ಕೇಳಿ ಅವನ ಮನೆಯ ಕದವನ್ನು ತಟ್ಟಿ ಬಾಗಿಲಿನಲ್ಲಿ ಕೈಮುಗಿದು ಕಾಯುತ್ತಾರೆ. ಅದು ಕವಿ ಇರುವಂತಹ ಸ್ಥಳ ಎನ್ನುವ ವಾತಾವರಣವನ್ನು ಕವಿ ತಮ್ಮ ಚಿತ್ರಕ ಶಕ್ತಿಯಿಂದ ನಿರ್ಮಿಸುತ್ತಾರೆ. ಆಗ ಕಾಳಿದಾಸ ಬರುತ್ತಾನೆ. ‘ಹೆಗಲಲ್ಲಿ ಶಾಲು, ಮುಖದಲ್ಲಿ ನಗೆ, ಎನ್ನುವ ಸುಂದರ ಉಪಮೆಯ ಮೂಲಕ ಕಾಳಿದಾಸನ ಬರವನ್ನು ಚಿತ್ರಿಸಿದ್ದಾರೆ. ಕಾಳಿದಾಸನನ್ನು ಕಂಡ ಅವರು,

ಅವನ ಕಾವ್ಯದ ಮಹತ್ವವನ್ನು ಹೊಗಳುತ್ತಾರೆ. ಇದರಿಂದ ಅವನಿಗೆ ಮುಜುಗರವಾಗುತ್ತದೆ. ಇಲ್ಲಿ ರೈತರಿಗೆ ಕಾಳಿದಾಸ ಕಾವ್ಯಗಳ ಪಾಠವಾಗಿತ್ತೇ ಎಂಬ ಪ್ರಶ್ನೆ ಓದುಗರನ್ನು ಕಾಡುತ್ತದೆ. ಅವರು ‘ಮೇಘದೂತ’ವನ್ನು ಓದಿಕೊಂಡವರು. ಕಾಳಿದಾಸ ಏನಾದರೂ ‘ಕೆಲಸವಿತ್ತೇ’ ಎಂದು ಅವರನ್ನು ಕೇಳಿದಾಗ ‘ರಾಮಗಿರಿಯಿಂದ ಅಲಕೆಗೆ ಕಳಿಸಿದ ಮೋಡದ ಬಗ್ಗೆ ಮಾತನಾಡಬೇಕಿತ್ತೆಂದು ಅವರು ಹೇಳುತ್ತಾರೆ. ಅದನ್ನು ‘ತಮ್ಮ ಬಾಯಾರಿ ಒಣಗಿನಿಂತ ಪೈರಿಗೆ ದಾರಿಯಲ್ಲಿ ನೀರು ಸುರಿಸು’ ಎಂದು ಕೇಳಬೇಕಂತೆ.
ಇಲ್ಲಿ ಕವಿತೆ ತಟ್ಟನೆ ನಿಂತು ಬಿಡುತ್ತದೆ. ಅವರ ಪ್ರಶ್ನೆಗೆ ಕಾಳಿದಾಸನ ಉತ್ತರವೇನೆಂದು ಕವಿ ಹೇಳುವುದಿಲ್ಲ. ಅದನ್ನು ಅವರು ನಮ್ಮ ಊಹೆಗೆ ಬಿಟ್ಟಿದ್ದಾರೆ. ಮೋಡದ ಮೂಲಕ ವಿರಹಿಗಳ ಸಂದೇಶವನ್ನು ಸಾರುವುದು ಕಾಳಿದಾಸನಿಗೆ ಮುಖ್ಯವಾದರೆ, ಬಾಯಾರಿ ಹನಿ ನೀರಿಲ್ಲದೇ ಒಣಗಿ ನಿಂತ ಪೈರಿಗೆ ಮೋಡ ನೀರು ಸುರಿಸುವುದು ರೈತರಿಗೆ ಮುಖ್ಯ. ಒಬ್ಬರ ಸಮಸ್ಯೆ ಇನ್ನೊಬ್ಬರ ಸಮಸ್ಯೆ ಅಲ್ಲ. ಆದರೆ ಕವಿ ಇಬ್ಬರನ್ನು ಮುಖಾಮುಖಿಯಾಗಿಸುವುದರ ಮೂಲಕ ಪರಸ್ಪರ ಎರಡು ವಿರುದ್ಧ ಸಂಗತಿಗಳನ್ನು ಒಟ್ಟಿಗೇ ತರುತ್ತಾರೆ. ಬದುಕಿನ ಮೂಲಭೂತ ಅಗತ್ಯಗಳು ಹಾಗೂ ಸೌಂದರ್ಯ ಅವುಗಳೆರಡಕ್ಕೂ ಬದುಕಿನಲ್ಲಿ ತಮ್ಮದೇ ಆದ ಸ್ಥಾನವಿದೆ ಎಂಬುದನ್ನು ಗುರುತಿಸುತ್ತಾರೆ. ಆದ್ದರಿಂದ ಈ ಕವಿತೆ ತನ್ನ ಧ್ವನಿಶಕ್ತಿಯಿಂದ ಮುಖ್ಯವಾಗುತ್ತದೆ.
ಹಿಟ್ಟು ಮತ್ತು ಮಲ್ಲಿಗೆ
ಇಲ್ಲಿಯೂ ಕೂಡ ಮೇಲಿನದೇ ಸಮಸ್ಯೆಯ ಇನ್ನೊಂದು ಆಯಾಮವನ್ನು ಕಟ್ಟಿಕೊಡುತ್ತಾರೆ. ಇಲ್ಲಿ ಬರುವ ಕತೆ ಮೂಲದಲ್ಲಿ ಕುಚೇಲ ಕೃಷ್ಣರ ಕತೆಯಂತೆ ಕಾಣುತ್ತದೆ. ಆದರೆ ಅಲ್ಲಿಲ್ಲದ ಮಲ್ಲಿಗೆಯನ್ನು ಇಲ್ಲಿ ತರುವುದರ ಮೂಲಕ ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಆರೋಪಿಸಿದ್ದಾರೆ. ಹಿಟ್ಟಿಗೂ ಗತಿಯಿಲ್ಲದ ಸಂಸಾರವೊಂದು ಪಡಿಪಾಟಲು ಪಡುತ್ತಿರುವ ದಾರುಣ ಚಿತ್ರವನ್ನು ಕವಿತೆಯ ಮೊದಲ ಭಾಗ ಅನನ್ಯವಾಗಿ ಚಿತ್ರಿಸುತ್ತದೆ. ಒಲೆ ಹತ್ತಿಸಿ ಯಾವುದೋ ಯುಗವಾದ ಮನೆಯೊಡತಿ ಒಡೆಯನನ್ನು ಏನಾದರೂ ತರುವಂತೆ ಒತ್ತಾಯಿಸುತ್ತಾಳೆ. ಆಗ ಬೇರೆ ದಾರಿಯಿಲ್ಲದ ಅವನು ಮನೆಯಂಗಳದಲ್ಲಿ ಅರಳಿದ ಮಲ್ಲಿಗೆ ಹೂವೊಂದನ್ನು ತಂದು ಅರ್ಪಿಸಿ ಕೈಮುಗಿಯುತ್ತಾನೆ. ತನ್ನ ಚೀಲದಲ್ಲಿನ ಕಾಸೊಂದನ್ನು ತೆಗೆದುಕೊಡುತ್ತಾನೆ. ಮನೆಗ ಬರುವಷ್ಟರಲ್ಲೇ ‘ಮನೆ ತುಂಬಿ ತುಳುಕಿತ್ತು ನಿನ್ನ ಕೊಡುಗೆ’ ಎನ್ನುತ್ತಾ, ಅವನ ಅನಂತ ಕೃಪೆಯನ್ನು ಕೊಂಡಾಡುತ್ತಾರೆ.
ಕವಿತೆ ನಮ್ಮಲ್ಲಿ ಹುಟ್ಟಿಸುವ ಪ್ರಶ್ನೆಗಳು ಅಸಂಖ್ಯ. ಮಲ್ಲಿಗೆಯನ್ನು ಸೌಂದರ್ಯದ ದ್ಯೋತಕವೆಂದು ತೆಗೆದು ಕೊಂಡರೆ ಅದಕ್ಕೆ ಬದಲಿಗೆ ಸಂಪತ್ತನ್ನು ಕೊಡುವ ಇನ್ನೊಂದು ಶಕ್ತಿ ಇದೆ ಎನ್ನುವ ವಿಶ್ವಾಸ ಕಂಡು ಬರುತ್ತದೆ.
ಆದರೆ ಇದು ಓದುಗರಲ್ಲಿ ವಿಶ್ವಾಸವನ್ನು ಮೂಡಿಸುವುದು ಕಷ್ಟ. ನಮ್ಮ ಹಳ್ಳಿಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹಸಿವು ಎಂಬ ಒಂದು ಗಾದೆ ಇದೆ. ಇದು ಬಡ ಜನರಲ್ಲಿನ ಒಣ ಪ್ರತಿಷ್ಠೆಯನ್ನು ಸೂಚಿಸುತ್ತದೆ. ಹೊಟ್ಟೆ ಹಸಿದವನಿಗೆ ಸೌಂದರ್ಯದಿಂದ ಹಸಿವು ಮಾಯವಾಗುವುದಿಲ್ಲ, ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಆದ್ದರಿಂದ ಬದುಕಿನ ಸಾರ್ಥಕತೆಗೆ ಹಸಿದವನ ಹೊಟ್ಟೆ ತುಂಬಿಸುವುದು, ನಂತರ ಅವನಲ್ಲಿ ಮಲ್ಲಿಗೆಯ ರಸಾಸ್ವಾದನೆಯನ್ನು ಉಂಟುಮಾಡುವುದು ಎರಡೂ ಪೂರಕ. ಯಾವುದು ಪ್ರಾಥಮಿಕ ಯಾವುದು ನಂತರ ಎನ್ನುವ ಪ್ರಶ್ನೆಗೆ ಮೊದಲನೆಯದೇ ಎನ್ನುವುದರಲ್ಲಿ ಅನುಮಾನವಿಲ್ಲ. ಅಡಿಗರು ಹೇಳುವಂತೆ ‘ಕೊಡು ಮೊದಲು ಅನ್ನವನು ಹಸಿದ ಹೊಟ್ಟೆಗೆ, ನಂತರ ಕವಿಯಾಗಿ, ವೇದಾಂತಿಯಾಗಿ ಬಾ’ ಎನ್ನುತ್ತಾರೆ. ಇಲ್ಲಿ ಕವಿಯ ವಿಶ್ವಾಸವನ್ನು ನಾನು ಪ್ರಶ್ನಿಸುವುದಿಲ್ಲವಾದರೂ ಅದು ಜನರ ಮೇಲೆ ಬೀರುವ ಪರಿಣಾಮದ ದೃಷ್ಟಿಯಿಂದ ಕವಿತೆಯ ಕೊನೆಯಲ್ಲಿ ಕವಿ ತಳೆಯುವ ನಿಲುವು ಸಂದಿಗ್ಧ ಅರ್ಥಕ್ಕೆ ಕಾರಣವಾಗುತ್ತದೆ. ಯಾಕೆಂದರೆ ಕವಿಯೂ ಈ ಸಮಾಜದ ಭಾಗ ತಾನೇ? ಅವರೇ ಹೇಳುವಂತೆ ಕಾವ್ಯ ಸ್ವಯಂಭೂ ಅಲ್ಲ ಅಲ್ಲವೇ?




0 Comments