ಸುಮತೀಂದ್ರ ನಾಡಿಗರ ದಾಂಪತ್ಯಯೋಗದಲ್ಲಿ ಅರಳಿದ ಕಾವ್ಯ

ದಾಂಪತ್ಯಯೋಗದಲ್ಲಿ ಅರಳಿದ ಕಾವ್ಯ.
(ಸುಮತೀಂದ್ರ ನಾಡಿಗರ ದಾಂಪತ್ಯ ಗೀತೆಗಳು)

ಗಿರಿಜಾಶಾಸ್ತ್ರಿ

ಮುಂಬಯಿಯಲ್ಲಿ ಗುರುನಾರಾಯಣ ಪ್ರಶಸ್ತಿಯನ್ನು ಸ್ವೀಕರಿಸಿದ ವಸಂತ ದಿವಾಣಜಿಯವರೊಡನೆ ವ್ಯಾನಿನಲ್ಲಿ ಮರಳಿ ಬರುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಅವರು “ಕನ್ನಡ ಸಾಹಿತ್ಯದೊಳಗಾ..ಪ್ರೇಮಕಾವ್ಯ ಅನ್ನೂದು ಇಲ್ಲೇಇಲ್ಲ. ಇರೂದೆಲ್ಲಾ ಬರೀ soliloques’ ಎಂದಿದ್ದರು.

ಗಾಬರಿಯಾದ ನಾನು, ಅದು ಹ್ಯಾಂಗ… ಕಾಕಾ, ಕೆ.ಎಸ್.ನ….. ಪ್ರೇಮ ಕವಿ ಎಂದೆಲ್ಲಾ ನಾನು ರಾಗ ಎಳೆದು ತಡಬಡಿಸಹತ್ತಿದಾಗ, ‘ಮತ್ತಿನ್ನೇನು ಬರೀ ಅವನಾ ಮಾತಾಡ್ತಾನ…..ಅವಳ್ಗ್ ಏನನಸ್ತದಾ ಅದ್ನೂ ಅವ್ನಾ ಮತಾಡ್ತಾನ. ಒಬ್ನಾ ಮಾತಾಡ್ತಾನಾ…ಹಂಗ್ ಅಂದ್ ಮ್ಯಾಲ ಅದು ಪ್ರೇಮ ಕಾವ್ಯ ಹೆಂಗಾತೂ…” ಎಂದಿದ್ದರು.

“ನೀನು ಸಾಹಿತಿಯಾಗಿ complete ಆಗಬೇಕಾದರೆ ನಾಟಕಗಳನ್ನು ಬರೆಯಬೇಕು. ಅದನ್ನು ಬರೆಯದಿದ್ದರೆ ನೀನು ಎಷ್ಟು ಬರೆದರೂ ಅಪೂರ್ಣಾನೇ..” ಎಂದು ಪು.ತಿ.ನ ಅವರು ಎಚ್.ಎಸ್.ವಿ. ಯವರಿಗೆ ಹೇಳಿದ್ದರಂತೆ. ಆನಂತರವೇ ತಾವು ನಾಟಕ ಬರೆಯಲು ಪ್ರಾರಂಭಿಸಿದುದಾಗಿ ಈಗ್ಗೆ ಕೆಲ ವರ್ಷಗಳ ಹಿಂದೆ ಮುಂಬಯಿಯ ಸೆಮಿನಾರಿಗೆಂದು ಬಂದಿದ್ದ ಎಚ್.ಎಸ್. ವೆಂಕಟೇಶ್‍ಮೂರ್ತಿಯವರು ಹೇಳಿದ್ದರು.

ಮೇಲೆ ಹೇಳಿದ ದಿವಾಣಜಿಯವರ ಮಾತಿಗೂ ಪು.ತಿ.ನ. ಅವರ ಮಾತಿಗೂ ಸಂಬಂಧವಿದೆ. ಒಮ್ಮುಖವಾದದ್ದು, ಪಾರಸ್ಪರಿಕವಲ್ಲದ್ದು ಪ್ರೇಮವಾಗುವುದಾದರೂ ಹೇಗೆ? ಅದು ಕೇವಲ one way ಆದದ್ದು. ಮನುಷ್ಯಸಂಬಂಧಗಳ ಪರಿಕಲ್ಪನೆಯಲ್ಲಿಯೇ ಪಾರಸ್ಪರಿಕತೆಯೆನ್ನುವುದು ಅಡಗಿದೆ. ಪರಸ್ಪರವಲ್ಲದ್ದು ಸಂಬಂಧವಾಗಲಿಕ್ಕೆ ಸಾಧ್ಯವಿಲ್ಲ. ಪ್ರೇಮವಿಲ್ಲದ ಸಂಬಂಧ ಪೂರ್ಣವಾಗುವುದಕ್ಕೂ ಸಾಧ್ಯವಿಲ್ಲ. ಪೂರ್ಣವಾಗುವುದೆಂದರೆ ಒಂದಕ್ಕೊಂದು ಪೂರಕವಾಗುವುದು. ಪೂರ್ಣತೆಯ ಎರಡೂ ಅಂಗಗಳು ಪ್ರಸ್ತುತಕ್ಕೆ ಬರುವುದು.

ಹಾಗೆ ನೋಡಿದರೆ ನಮ್ಮ ಕುಟುಂಬ/ದಾಂಪತ್ಯ ವ್ಯವಸ್ಥೆ ಎನ್ನುವುದು ಕೂಡ ಒಂದು ರೀತಿಯ ‘soliloquy’ಯೇ. ಇನ್ನು ಇಲ್ಲಿ ಸಹಜವಾದ ಪ್ರೇಮ ಅರಳುವುದಾದರೂ ಹೇಗೆ. ಕುಟುಂಬವನ್ನು ಭೌತಿಕವಾಗಿ ಪ್ರೇಷಿಸುವ ವರ್ಗಕ್ಕೆ ಮಾತ್ರ ಅದನ್ನು ರೂಪಿಸುವ, ನಿರ್ಧರಿಸುವ ಹಕ್ಕಿದೆ. ಆದರೆ ಅದನ್ನು ಭಾವನಾತ್ಮಕವಾಗಿ ಬೆಸೆಯಬಲ್ಲ ವರ್ಗಕ್ಕೆ ಮಾತ್ರ ಇಲ್ಲ. ಹೆಚ್ಚಿನ ಕೌಟುಂಬಿಕ ಮೌಲ್ಯಗಳು ಈ ವರ್ಗಕ್ಕೆ ಸಹಕಾರಿಯಾಗಿಲ್ಲ. ಹಾಗೆ ನೋಡಿದರೆ ವಾಸ್ತವವಾಗಿ ಈ ಎರಡರ ನಡುವೆ ಎದ್ದಿರುವ /ಬಿದ್ದಿರುವ ಕಂದರವೇ ದಾಂಪತ್ಯ.

ಸಂಸಾರವನ್ನು ಒಂದು ಬಂಡಿಗೂ ಅದರ ಎರಡು ಚಕ್ರಗಳನ್ನು ಗಂಡು ಹೆಣ್ಣಿಗೂ ಹೋಲಿಸುವ ಚರ್ವಿತ ಚರ್ವಣ ಮಾತುಗಳು ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬರುತ್ತಿವೆ. ಇದರ ಹಿಂದಿರುವ ತಾತ್ವಿಕ ನಂಬಿಕೆ ಬಹಳ ಸೊಗಸಾಗಿದೆ. ಆದರೆ ಇಲ್ಲಿ ನಿಜವಾಗಿ ಬಂಡಿಯನ್ನು ನಡೆಸುವುದಲ್ಲ. ಎಳೆಯುವುದಾಗಿದೆ. ಎಳೆಯುವುದಕ್ಕೂ, ನಡೆಸುವುದಕ್ಕೂ ಬಹಳ ಅಂತರವಿದೆ. ‘ಎಳೆ’ಯೆನ್ನುವಲ್ಲಿ ಹಿಂಸೆ ಬಲಾತ್ಕಾರಗಳು ಇದ್ದರೆ, ‘ನಡೆಸು’ ಎನ್ನುವಲ್ಲಿ ಸಾಮರಸ್ಯ, ಪ್ರೀತಿ ಇದೆ. ಶಕ್ತಿಶಾಲಿಯಾಗಿರುವುದು (ಮಾಂಸಲವಾಗಿ) ಎಳೆದರೆ, ಮಾಂಸಬಲವಿಲ್ಲದ್ದು ಅಂದರೆ ಬಲಹೀನವಾಗಿರುವುದು ಎಳೆಯಲ್ಪಡುತ್ತದೆ. ನಮ್ಮ ಸಮಾಜದಲ್ಲಿ ಬಂಡಿಯನ್ನು ಎಳೆದು ಕೊಂಡು ಹೋಗಬೇಕಾಗಿರುವುದು ಮುಖ್ಯವಷ್ಟೆ. ಅಥವ ಬೇಕಾಗಿರುವುದೂ ಅದೇ. ಒಟ್ಟಿನಲ್ಲಿ ಎಳೆಯುವ ಕಾರ್ಯ ನಿಲ್ಲಬಾರದು.

ಶ್ರೀನಿವಾಸ ಹಾವನೂರರು ಮರಾಠಿಯ ಛಾಯಾ ದಾತಾರ್ ಅವರ ಪ್ರಸಿದ್ಧ ಕೃತಿ ‘ಸ್ತ್ರೀಪುರುಷ್’ ಇದರ ಕನ್ನಡ ಅನುವಾದ (ಅನು: ಸರಸ್ವತಿ ರಿಸಬೂಡ)ಕ್ಕೆ ಮುನ್ನುಡಿ ಬರೆಯುತ್ತಾ ಬಹಳ ಅದ್ಭುತವಾದ ಮಾತೊಂದನ್ನು ಹೇಳುತ್ತಾರೆ. “ಸ್ತ್ರೀಯ ಸ್ಥಾನಮಾನ ಪುರುಷರಿಗೆ ಸಮಾನವಾದದ್ದಿರಬೇಕು ಎನ್ನುವುದಕ್ಕಿಂತ ಅದು ಸಮಾನಾಂತರವಾಗಿ (equal –parallel) ಇರಬೇಕು. ಅವರಿಬ್ಬರ ಜೀವನ ಕೂಡಿ ಎನ್ನುವುದಕ್ಕಿಂತ ಜೊತೆ ಜೊತೆಯಾಗಿ ಸಾಗಬೇಕು. ಸಂಸಾರ ರಥಕ್ಕೆ ಗಂಡು ಹೆಣ್ಣು ಎರಡು ಗಾಲಿಗಳಿದ್ದಂತೆ ಎಂದು ಮಾಮೂಲಿಯಾಗಿ ಹೇಳುವುದುಂಟು. ಈ ಗಾಲಿಗಳು ಜೊತೆಜೊತೆಯಾಗಿ ಆದರೆ ಪ್ರತ್ಯೇಕ ಕೆಲಸಮಾಡುತ್ತವೆ. ಹಾಗೆಯೇ ಸ್ತ್ರೀಪುರುಷರ ಬಾಳುವೆ” ಎಂದು ಹೇಳುತ್ತಾರೆ.

ಇಲ್ಲಿ ಸಮಾನಾಂತರವಾಗಿ ‘ಇರಬೇಕು’ ಎಂದು ಹೇಳುವಾಗ ಅದು ವಾಸ್ತವವಾಗಿ ‘ಇಲ್ಲ’ ಎನ್ನುವುದನ್ನೇ ಧ್ವನಿಸುತ್ತದೆ. ಇರುವ ಮತ್ತು ಇರಬೇಕಾದುದರ ನಡುವಿನ ಕಂದರದ ಕಡೆಗೆ ಇದು ಬೆಳಕು ಚೆಲ್ಲುತ್ತದೆ. ಇಂತಹ ಸಮಾನಾಂತರತೆಗೆ ಹತ್ತಿರವಿದ್ದ ಒಂದು ಸ್ಥಿತಿ ಪ್ರಾಚೀನ ಭಾರತದಲ್ಲಿದ್ದಿತೆಂದು (ಋಗ್ವೇದ ಕಾಲ) ಅಳ್ತೇಕರ್ ಮುಂತಾದ ಅನೇಕ ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ.

ನಮಗೆ ಇದ್ದುದರ ಬಗ್ಗೆ ಯಾವ ತಕರಾರೂ ಇಲ್ಲ. ಪ್ರಶ್ನೆ ಇರುವುದೆಲ್ಲಾ ಇರುವುದರ ಬಗೆಗೆ, ಇರಬೇಕಾದುದರ ಬಗೆಗೆ.
ಗಾಡಿಗೆ ಕಟ್ಟಿರುವ ಎತ್ತುಗಳು ಎಂದಾಗ ಆ ಎರಡೂ ಎತ್ತುಗಳ ಗುರಿ, ದಾರಿ, ನೋಟ ಎಲ್ಲಾ ಒಂದೇ ಆಗಿದ್ದಾಗ ಮಾತ್ರ ಪ್ರಯಾಣ ಸುಲಭ. ಆದರೆ ಇಲ್ಲಿ ಹಾಗಿಲ್ಲ. ದಾರಿ, ಗುರಿ, ನೋಟವೆಲ್ಲ ಒಂದು ಎತ್ತಿನದು. ಇನ್ನೊಂದು ಎತ್ತಿಗೆ ಉಳಿದಿರುವ ಎರಡೇ ಪರ್ಯಾಯಗಳೆಂದರೆ, ಒಂದೋ ಈಗಾಗಲೇ ಮೊದಲನೆಯ ಎತ್ತು ನಿರ್ಧರಿಸಿದ ದಾರಿಯಲ್ಲಿ ಸುಮ್ಮನೆ ಕಣ್ಣುಮುಚ್ಚಿಕೊಂಡು ಸಾಗಬೇಕು ಇಲ್ಲ, ವಿರುದ್ಧ ದಿಕ್ಕಿನಲ್ಲಿ ಬಂಡಿ ಎಳೆಯುವ ನೋವಿಗೆ ಗುರಿಯಾಗಬೇಕು. ಸಂಘರ್ಷಕ್ಕೆ ಸಿಲುಕಿ ಹಾಕಿಕೊಳ್ಳಬೆಕು.

ಇದನ್ನೇ ಶಶಿ ದೇಶಪಾಂಡೆಯವರು ಯಾವ ಎತ್ತು ತಾನೆ ತಾನಾಗಿಯೇ ವಿರುದ್ಧ ದಿಕ್ಕಿನಲ್ಲಿ ಬಂಡಿ ಎಳೆದು ನೋವಿಗೆ ಗುರಿಯಾಗಲು ಬಯಸುತ್ತದೆ. ಎಂದು ತಮ್ಮ That long Silence ಕಾದಂಬರಿಯಲ್ಲಿ ದಾಖಲಿಸಿದ್ದಾರೆ.

ಸುಮತೀಂದ್ರ ನಾಡಿಗ ಅವರ ‘ದಾಂಪತ್ಯಗೀತೆಗಳನ್ನು ಓದಿ ಮುಗಿಸುವಾಗ ಮೇಲೆ ಹೇಳಿದ ಎಲ್ಲ ಓದುಗಳೂ ನನ್ನ ಜ್ಞಾಪಕಕ್ಕೆ ಬಂದವು.

ಇದನ್ನು ಅವರು ‘ದಾಂಪತ್ಯಗೀತೆ’ ಎನ್ನುತ್ತಾರೆ. ‘ದಂಪತಿ’ ಎನ್ನುವ ಶಬ್ದಕ್ಕೆ ಅವರೇ ಹೇಳುವಂತೆ ಇಬ್ಬರು ಒಡೆಯರು. ನಾಯಕರು. ಅಂದರೆ ಕುಟುಂಬವೊಂದಕ್ಕೆ ಒಬ್ಬನೇ ಪತಿಯಲ್ಲ ಇಬ್ಬರು. ಇಬ್ಬರೂ ನಾಯಕರಾಗಿ ಇರಬೇಕು ಎನ್ನುವದೇ ಕವಿಯ ಆಶಯ, ಆದರ್ಶ ಎಲ್ಲ. ಆದರೆ ಅದು ಒಮ್ಮೊಮ್ಮೆ ಹಾಗಿಲ್ಲದೇ ಹೋದುದರ ವಿಷಾದ ಈ ಗೀತಗಳ ಮೂಲಕ ವ್ಯಕ್ತವಾಗುತ್ತದೆ. ಇದೊಂದು ರೀತಿಯ ಆತ್ಮನಿವೇದನ ಕಾವ್ಯ. ಇದು Soliloquy ಯೇ ಆಗಿದ್ದರು ಅದರೊಳಗೆ ಆತ್ಮಪರಿವೀಕ್ಷಣೆ ಸಾಧ್ಯವಾಗಿದೆ. ಈ ಅತ್ಮಪರಿವೀಕ್ಷಣೆಯಲ್ಲಿ ಪುರುಷ ವ್ಯವಸ್ಥೆಯ ಸಾಂಸ್ಕೃತಿಕ ತಪ್ಪುಗಳು ಬೆಳಕಿಗೆ ಬಂದಿವೆ. ನನ್ನ ಮಟ್ಟಿಗಂತೂ ಇದು ಆಕರ್ಷಣೀಯವೆನಿಸುವುದು ಈ ಕಾರಣದಿಂದಾಗಿಯೇ.

“ದಾಂಪತ್ಯವೆಂಬುದು ಜೊತೆಗೆ ಮಾಗುವ ದಿವ್ಯ
ಮಾಗುವವರಿಗೆ ಬೆಂಕಿ ಸುಡುವುದಿಲ್ಲ,
ತ್ಯಾಗವಿಲ್ಲದ ಸಖ್ಯ, ಅವರಿವರ ವಿಶೇಷ
ಉಳಿಸಿ ಬೆಳಸದ ಸಖ್ಯ ಸಖ್ಯವಲ್ಲ.”

ಇಡೀ ದಾಂಪತ್ಯಗೀತೆಗಳ ಸಂಕಲನಕ್ಕೆ ಬರೆದ ಒಂದು ವ್ಯಾಖ್ಯೆಯಂತಿದೆ ಮೇಲಿನ ಸಾಲುಗಳು. “ಬಾಳುವುದರ ಬಗ್ಗೆ, ಬೆಳೆಯುವುದರ ಬಗ್ಗೆ, ಬೆಳೆಯುತ್ತ ಮಾಗುವುದರ ಬಗ್ಗೆ ಕನ್ನಡದ ಒಂದು ಒಳ್ಳೆಯ ಪದ್ಯ ಸುಮತೀಂದ್ರ ನಾಡಿಗರ ದಾಂಪತ್ಯ ಗೀತೆ ಎಂದು ಯು.ಆರ್. ಅನಂತಮೂರ್ತಿಯವರು ಬೆನ್ನುಡಿಯಲ್ಲಿ ಗುರುತಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

‘ಇಲ್ಲಿ ಕಾವ್ಯ ಧರ್ಮ ಮತ್ತು ಜೀವನ ಧರ್ಮ ಎರಡೂ ಒಟ್ಟಿಗೆ ಸಾಗುತ್ತವೆ. ಕಾವ್ಯ ಮತ್ತು ಸಖಿ ಎರಡೂ ಪರಿಕಲ್ಪನೆಗಳು ಒಂದೇ ಪರಿಕಲ್ಪನೆಯಿಂದ ಒಡಮೂಡಿವೆ. ನಾಯಕ ಕವಿಯಾಗಿ ಕಾವ್ಯಕ್ಕೆ ಕಾದಿರುವಂತೆಯೇ, ಸಖಿಗೂ ಕಾದಿದ್ದಾನೆ. ಹಸಿದಿದ್ದಾನೆ. ಇದು ಕೇವಲ ದೈಹಿಕ ಹಸಿವಲ್ಲ. ಈ ಹಸಿವೆನ್ನುವುದು ಕಾಣ್ಕೆಯ ಹಿಂದಿರುವ ತಹತಹ. ಹಾಗಾಗದಿದ್ದರೆ ದಾಂಪತ್ಯವೆನ್ನುವುದು ಮುರಿದುಬೀಳುತ್ತದೆ, ಕಾವ್ಯ ಕಾವು ಕೂರುವುದೇ ಇಲ್ಲ. ಇದು ಆತ್ಮ ಸಾಂಗತ್ಯದ ಹಸಿವು. ಇಂತಹ ಹಸಿವೊಂದನ್ನು ಭಾರತೀಯ ನೆಲೆಯಲ್ಲಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಇದು ಅವಳ ‘ಅಂಗಾಂಗಗಳ ಸ್ಫುಟತೆಯಾಚೆಗೆ ಇರುವ ಲಾವಣ್ಯ’ ಭೌತಿಕ ಅಸ್ತಿತ್ವಕ್ಕೆ ಮೀರಿದ್ದು. ಕಾವ್ಯ ಮತ್ತು ಕವಿಯ ನಡುವೆ ಇರುವ ಸಂಬಂಧದಂತೆಯೇ ಗಂಡು ಹೆಣ್ಣಿನ ಸಂಬಂಧವೂ ಆಧ್ಯಾತ್ಮಿಕವಾದುದು. ಹಾಗೆ ಆದಾಗ ಮಾತ್ರ ಗಂಡು ಹೆಣ್ಣಿನ ಯೋಗದ ಅರಿವಾಗುವುದು.

ಸಂಸಾರವೆನ್ನುವುದು ಶಬ್ದಪಾಕ ಅರ್ಥಪಾಕ’ ಅದನ್ನು ಗಂಡ ತನ್ನ ಹೆಂಡತಿಗೆ ರುಚಿಸುವಂತೆ ಪರಿವರ್ತಿಸಿದ್ದಾನೆ. ರುಚಿ ನೋಡಿ ಪ್ರಮಾಣ ಪತ್ರವನ್ನು ಕೊಡಬೇಕಾಗಿರುವವಳು ಹೆಂಡತಿಯೇ ಆಗಿದ್ದಾಳೆ. ಹಾಗೆಯೇ ಕಾವ್ಯ ಕೂಡ. ಹದವಾಗಿ ಪಾಕವಾಗದೇ ಇದ್ದಲ್ಲಿ ಎರಡೂ ವಿಫಲವೇ.

“ಅಧಿಕಾರ ನನ್ನದು, ನಿನ್ನ ಸ್ವಾಮ್ಯ,
ಕಾವ್ಯ ಕರ್ಮನು ನಾನು ಅರ್ಧಾಂಗನಾದರೂ ಪೂರ್ತಿಮಾಡುವ ನೀನು ಪೂರ್ಣಪ್ರಾಕಾಮ್ಯ”-

ಶಿವನಾದರೂ ಶಿವೆಯಿಲ್ಲದೆ ಶವನಾಗಿಬಿಡುವ. ದಾಂಪತ್ಯ ಆದರ್ಶದ ತುರೀಯ ಕಲ್ಪನೆ ಅರ್ಧನಾರೀಶ್ವರ ಕಲ್ಪನೆಯಲ್ಲಿ ಅಡಗಿರುವುದನ್ನು ಈ ಸಾಲುಗಳು ಧ್ವನಿಸುತ್ತವೆ. ಯಾಕೆಂದರೆ ಮನುಷ್ಯ ಕಟ್ಟಿಕೊಂಡ ಲೋಕದಲ್ಲಿ ಹೆಣ್ಣಿಗೆ ಬೇಕಾದಂತೆ ಯಾವ ಅನುಭವ ಲೋಕಗಳೂ ರೂಪುಗೊಂಡಿಲ್ಲ ಅಥವ ರೂಪುಗೊಳ್ಳುವುದಿಲ್ಲ ಎನ್ನುವಾಗ ಕವಿಯ ಆಶಯ ಇಲ್ಲಿ ಎಷ್ಟು ಘನವಾದದ್ದು ಎಂಬುದು ವೇದ್ಯವಾಗುತ್ತದೆ.

ಇಲ್ಲಿ ‘ನಡೆಯುವ’ ಮತ್ತು ‘ನಡೆಸುವ’ ಎರಡು ಕ್ರಿಯಾ ಪದಗಳಿವೆ. ನಡೆಯುವವ ಕವಿಯಾದರೆ ನಡೆಸುವ ಕೆಲಸ ಸ್ಫುರಣೆಯದೇ. ಸ್ಫುರಣೆಯೇ ಸಖಿ. ಅವಳೇ ಸ್ಫೂರ್ತಿ, ಅವಳೇ ಮಾದರಿ. ಸಂಸಾರದ ರಸ ಮತ್ತು ಕಾವ್ಯದ ರಸ ಎರಡೂ ಒಂದೇ. ಅಥವಾ ಕಾವ್ಯವೇ ಸಂಸಾರ. ಸಂಸಾರ ಇಲ್ಲದಿದ್ದರೆ ಕಾವ್ಯ ಹುಟ್ಟುವುದಾದರೂ ಹೇಗೆ. ಪಾಡು ಹಾಡಾಗುವುದು ಹೇಗೆ. ‘ಅನುಭವ ವಿಶೇಷಕ್ಕಾಗಿ, ಸ್ವೀಕೃತಿಗಾಗಿ, ಕರುಣೆಗಾಗಿ ಸ್ಫುರಣೆಗಾಗಿ, ಕಾರಯತ್ರಿಗಾಗಿ ಕರೆದು ಹಂಬಲಿಸುತ್ತಾನೆ ಗಂಡು. ಪ್ರತಿಭೆಯ ಎಲ್ಲ ಪರಿಕರಗಳೂ ಇಲ್ಲಿ ಹೆಣ್ಣಾಗಿಯೇ ಇರುವುದು ಅದಕ್ಕಾಗಿ ಗಂಡು ಹಂಬಲಿಸುವುದು ಮೇಲೆ ಹೇಳಿದಂತೆ ಪೂರ್ಣಪ್ರಾಕಾಮ್ಯದ ಯೋಗದ ಸ್ವರೂಪವನ್ನೇ ವ್ಯಕ್ತಪಡಿಸುತ್ತದೆ.

ಕವಿ ಬೆಳಕಿಗೆ ಬರಲು ಪ್ರತಿಭೆಯಿಂದ ಮಾತ್ರ ಸಾಧ್ಯ. ಹಾಗೆಯೇ ದಾಂಪತ್ಯದೊಳಗೆ ಹೆಣ್ಣಿನಿಂದ ಗಂಡು. ಬೇಂದ್ರೆ ಅಡಿಗರ ದೃಷ್ಟಿ ಕೃಪೆಯಿಂದ ನಡೆದ ಈ ಕವಿಯ ಕಾವ್ಯ ಎಷ್ಟೋ ಸಲ ಮುಗ್ಗರಿಸಿದ್ದಿದೆ, ದಾಂಪತ್ಯದ ಹಾಗೆಯೇ. ಅಡಿಗರ ಟೀಕೆ ಕೂಡ ಅವರ ಕಾವ್ಯ ಕೃಷಿಗೆ ವರವಾದಂತೆ ದಾಂಪತ್ಯದಲ್ಲಿನ ವಿರಸ ಕೂಡ ಅದರ ಬಂಧವನ್ನು ಗಟ್ಟಿಗೊಳಿಸಿದೆ. ಕಾವ್ಯ ಧರ್ಮವನ್ನು ಹೀಗೆ ಜೀವನ ಧರ್ಮಕ್ಕೆ ಸಂವಾದಿಯಾಗಿ ನೋಡುವಾಗ ಗಂಡು ಹೆಣ್ಣಿನ ನಡುವಿನ ಪಾರಸ್ಪರಿಕತೆಯ ಜೊತೆಗೆ ಅವುಗಳ ಸಾಮಾಜಿಕ ಸ್ಥಾನಕ್ಕೆ ಒದಗಬೇಕಾಗಿರುವ ನೈಸರ್ಗಿಕ ಸಾಮ್ಮ್ಯತೆಯ (equity) ಮಹತ್ವ ಕೂಡ ಅರಿವಾಗುತ್ತದೆ.

ಈ ಕವಿತೆಗಳು ಇಬ್ಬರು ನಾಯಕರು (ಗಂಡ ಹೆಂಡತಿ) ಸಂಸಾರವನ್ನು ತೂಗಿಸಿಕೊಂಡುಹೋಗುವಲ್ಲಿ ಇರಬೇಕಾದ ಪರಸ್ಪರ ಗ್ರಹಿಕೆ, ವೈಚಾರಿಕತೆ, ಪ್ರೀತಿ ಅನುನಯ, ಅಂತಃಕರಣಕದ ಕಡೆಗೆ ಗಮನ ಸೆಳೆಯುತ್ತವೆ. ಆದರೆ ಪಿತೃಪ್ರದಾನ ವ್ಯವಸ್ಥೆಯ ಪ್ರತಿನಿಧಿಯಾಗಿ ಅಂತಹ ಒಂದು ಪಾರಸ್ಪರಿಕತೆಗೆ ಎರವಾದ ಪಾಪಪ್ರಜ್ಞೆ ಕವಿಗೆ ಕಾಡಿರುವುದು ಬಹಳ ಮಹತ್ವದ ಸಂಗತಿ. ಇಡೀ ಮಾನವ ಸಂಸ್ಕೃತಿ ಹೆಣ್ಣಿನ ಮೇಲೆ ಎಸಗಿರುವ ಪಾಪಕ್ಕೆ ತನ್ನನ್ನು ಹೊಣೆ ಮಾಡಿಕೊಳ್ಳತ್ತಾರೆ.

“ನನ್ನ ಮಾರ್ಗವೆ ನಿನ್ನ ಮಾರ್ಗವಾಗಲಿ ಎಂದು ನನ್ನಹಂಕಾರವನೆ ಮೆರೆದೆನಲ್ಲ”….
”ನಾನೇಕೆ ಗಂಡಾದೆ ಗಂಡಾಂತರ”,
“ವ್ಯಕ್ತಿತ್ವ ಇಬ್ಬರಿಗು ಬೇರೆ ಬೇರೆಯೆ ಎಂದು ತಿಳಿವುದಕ್ಕೆಷ್ಟು ದಿನ ತೆಗೆದುಕೊಂಡೆ.
ಈಗಲೂ ಒಮ್ಮೊಮ್ಮೆ ತಿಳಿವುದಿಲ್ಲ ಎನ್ನಿಸಲು
ಕೆರೆದುಕೊಳ್ಳುತ್ತೇನೆ ನನ್ನ ಮಂಡೆ”…
”ನನಗೆ ಬೇಕೆನ್ನಿಸುವ ನನ್ನರ್ಧವೆನ್ನಿಸುವ ನನ್ನ ಪಾಲಿಗೆ ಸಿಕ್ಕ ಸ್ವರ್ಗ ನೀನು
ಒಬ್ಬರಿನ್ನೊಬ್ಬರಿಗೆ ನರಕವೆನ್ನಿಸಿದಾಗ ನಾನು ಪರಿವರ್ತಿಸಿದ ನರಕ ನೀನು”,
“ನಿಮ್ಮ ಮಾತಿಗೆ ನಾನು ಒಮ್ಮೆ ಮರುಳಾಗಿದ್ದೆ
ಇಂಥ ಮಾತುಗಳನ್ನು ಸಾಕು ಎಂದೆ”, –

ಈ ಎಲ್ಲ ಸಾಲುಗಳ ಮೂಲಕ ಕವಿ ಹೆಣ್ಣಿನ ಬಗೆಗಿನ ಸಾಂಸ್ಕೃತಿಕ ಅಪಮೌಲ್ಯಕ್ಕೆ ಕಾರಣವಾದುದರ ಜವಾಬ್ದಾರಿಯನ್ನು ತನ್ನ ಮೇಲೆ ಎಳೆದು ಕೊಳ್ಳುತ್ತಾರೆ. ಇನ್ನೊಂದು ಕಡೆ ದಾಂಪತ್ಯವನ್ನು ಕಂಪಾಸಿಗೆ ಹೋಲಿಸಿ (ಕೈವಾರ)

“ ಪ್ರೇಮಿ ಪ್ರೇಯಸಿ ಸೇರಿ ಕಂಪಾಸು….
ನೀನು ಊರಿದ ಕಾಲು ನಾನು ತಿರುಗುವ ಕಾಲು”.

ಇಲ್ಲಿ ಪ್ರೇಯಸಿಯೇ ಕೇಂದ್ರ, ಅವಳೆಂದರೆ, ಸ್ಥಾಯೀಭಾವ, ಇವನೆಂದರೆ ಸಂಚಾರಿ. ವ್ಯಭಿಚಾರಿ….ಹೆಣ್ಣು ಮತ್ತು ಗಂಡುಗಳ ನಡುವಿರುವ ಎರಡು ಲೋಕಗಳ ಪರಿಚಯವನ್ನು ಅದರ ವಿಸ್ತಾರ ಹಾಗೂ ಅಗಾಧ ಅಂತರವನ್ನು ಈ ಸಾಲುಗಳು ಪರಿಚಯಮಾಡಿಸುತ್ತವೆ. ಕೇಂದ್ರವಿಲ್ಲದಿದ್ದರೆ ವೃತ್ತದ ಚಲನೆ ಸಾಧ್ಯವಿಲ್ಲ, ಎನ್ನುವ ನಿಯಂತ್ರಕ ಶಕ್ತಿಯೇ ಹೆಣ್ಣಾಗಿರುವುದರ ಬಗ್ಗೆ ಕವಿಗೆ ಹೆಮ್ಮೆ ಇದೆ.

ಆದರೆ ಅದನ್ನು ಇನ್ನೊಂದು ನೆಲೆಯಲ್ಲಿ ಗ್ರಹಿಸಿದರೆ ಅವಳು ಕೇಂದ್ರವೊಂದಕ್ಕೇ ಬಂಧಿತಳಾಗಬೇಕಾಗಿರುವ ವಿಷಾದವನ್ನೂ ಇದು ಹೇಳುವುದಿಲ್ಲವೇ? ಅಂದರೆ ಕುಟುಂಬ, ಮದುವೆ ಎನ್ನುವ ವ್ಯವಸ್ಥೆಗಳಿಗೆ ಬದ್ಧಳಾಗಬೇಕಾಗಿರುವವಳು ಹೆಣ್ಣು ಮಾತ್ರ ಗಂಡಿಗೆ ಈ ಯಾವ ನಿಯಮಗಳೂ ಲಾಗೂ ಆಗುವುದಿಲ್ಲ. ಎಂಬುದನ್ನೂ ಈ “ಊರಿದ ಕಾಲು” ಹೇಳುತ್ತದೆ. ಇಲ್ಲಿ ಅವಳಿಗೆ ಚಲನೆ ಇಲ್ಲ. ಚಲನೆ ಇರುವುದೆಲ್ಲ ಅವನಿಗೆ ಮಾತ್ರ.. ಮುಂದೆ “ನಮ್ಮೆರೆಡು ದೃಷ್ಟಿಗಳು ಕೂಡಲಿಲ್ಲ” ಎನ್ನುವಾಗ ಕವಿ ಮೇಲಿನ ಊರಿದ ಕಾಲು ತಿರುಗುವ ಕಾಲಿನ ಅಂತರಕ್ಕೆ ಕಾರಣ ಕೊಡುವುದಿಲ್ಲವಾದರೂ, ಕಂದರ ಉಂಟಾದುದರ ವಿಷಾದವನ್ನಂತೂ ವ್ಯಕ್ತಪಡಿಸುತ್ತಾರೆ. ಆದರೆ ನಿಜವಾದ ಕಾರಣ ಬಹುಷಃ ಈ ಎರಡೂ ಕಾಲುಗಳ ಚಲನೆಗಳ ಸ್ವರೂಪಲ್ಲಿಯೇ ಅಡಗಿದೆ. ಇದಕ್ಕಾಗಿ ಕವಿ ಹೆಮ್ಮೆ ಪಡುವುದು ಸ್ವಲ್ಪ ಇರಸುಮುರುಸಾಗುತ್ತದೆ. ಬಹುಷಃ ಕಂಪಾಸಿನ ಪರಿಕಲ್ಪನೆಯನ್ನು ಈ ನೆಲೆಯಿಂದ ನೋಡಿದಾಗ ನನ್ನ ತರ್ಕವನ್ನು ಅವರೂ ಒಪ್ಪಿಯಾರೆಂದು ನಾನು ಭಾವಿಸುತ್ತೇನೆ.

ಈ ದಾಂಪತ್ಯ ಗೀತೆಗಳು ಸುಮತೀಂದ್ರನಾಡಿಗರ ಆತ್ಮ ಚರಿತ್ರೆಯಿರಬಹುದು. ಆದರೆ ಚರಿತ್ರೆಗೆ ರಿವರ್ಸ್ ಗೇರುಗಳಿಲ್ಲ. ಆದರೆ ಆತ್ಮಪರಿವೀಕ್ಷಣೆ ಮಾಡಿಕೊಳ್ಳಲು ಮಾತ್ರ ಸಾಧ್ಯವಿದೆ. ಹೀಗೆ ಆತ್ಮಪರಿವೀಕ್ಷಣೆ ಮಾಡಿಕೊಳ್ಳುವಾಗ ಕವಿ ತಾನು ಗಂಡೆನ್ನುವ ದೇಹಭಾವವನ್ನು ಮೀರಿರುವುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಭವಿಷ್ಯದ ಮುನ್ನೋಟವಿದು. ಆಕ್ರಮಣ, ಒತ್ತುವರಿ ವಿಸ್ತರಣೆ, ಯುದ್ಧ ಇವು ಗಂಡು ಕ್ಷೇತ್ರದ ಪರಿಭಾಷೆಗಳಿವು. ಅವನ ಭಾಷೆಯೆಂದರೆ ಸೋಲರಿಯದ ಭಾಷೆ. ಆದರೆ ಇಲ್ಲಿ

“ಭಾಷೆ ಹಾಲಿಗೆ ನಾನು ಹುಳಿಯನ್ನು ಹಿಂಡಿದ್ದೆ
ಮೊಸರನ್ನು ಮಾಡುವ ವಿದ್ಯೆ ಹೊಳೆಯಲಿಲ್ಲ.”,

“ತಲೆ ಕೊಯ್ದಿಟ್ಟರೂ ಸೋರೆ ಬುರುಡೆ ಇದೆಂದು ನೀನದನು ನೂಕಿಬಿಟ್ಟೆ
ರುಂಡ ಉರುಳುತಿತ್ತು ನಿನ್ನ ಕಾಲಡಿಯಲ್ಲಿ
ಮುಂಡ ನಿಂತೇ ಇತ್ತು ಪ್ರತಿಮೆಯಂತೆ”

“ನೀನು ತಾಯಿ ಆದೆ
ನಾನು ಹುಟ್ಟಿದೆ ಪುತ್ರ ರೂಪದಿಂದೆ”-

ಇಂತಹ ಸೋತು ಗೆಲ್ಲುವ ಸಾಲುಗಳು ಗಂಡಿನ ಶಬ್ದಕೋಶಕ್ಕೆ ಅಪರೂಪವಾದವುಗಳು. ಹಾಗೆ ನೋಡಿದರೆ ಇಲ್ಲಿ ಹೆಂಡತಿಗೇ ಹೆಚ್ಚು ಅಂಕಗಳು. ಈ ದಾಂಪತ್ಯಗೀತೆಗಳಲ್ಲಿ ಹೆಂಡತಿಯನ್ನೇ ಹೆಚ್ಚು ಶಕ್ತಿಯುತಳನ್ನಾಗಿ ಮಾಡಲಾಗಿದೆ. ಅವನಾದರೋ ಅನೇಕ ದೌರ್ಬಲ್ಯಗಳ ಮೊಟ್ಟೆ. ದಾಂಪತ್ಯದ ಮಹತ್ವದ ಅರಿವಿದ್ದೂ ಇಲ್ಲಿಯ ನಾಯಕ ಅನೇಕ ಹೆಣ್ಣುಗಳ ಜೊತೆ ಚೆಲ್ಲಾಟವಾಡಿದ್ದಾನೆ. ಪರದೇಶದಲ್ಲಿ ದೂರದ ಹೆಂಡತಿಯನ್ನು ಮರೆಯುತ್ತಾನೆ.

ಆದರೆ ಹೆಂಡತಿ ಮಾತ್ರ , ಹೆಣ್ಣಿನ ಶಕ್ತಿ ಮತ್ತು ಮಿತಿ ಎರಡನ್ನೂ ಏಕಕಾಲಕ್ಕೆ ತೆರೆದು ತೋರಿಸುವ ಅದೇ ಕಂಪಾಸಿನ ಊರಿದ ಕಾಲಿನ ಹಾಗೆ ಒಂದೇ ಕೇಂದ್ರಕ್ಕೆ ನಿಷ್ಠುರವಾಗಿ ಬದ್ಧಳಾಗಿದ್ದಾಳೆ. ಸೋಜಿಗದ ಸಂಗತಿಯೆಂದರೆ ನಾಯಕನಿಗೆ ಇದರ ಅರಿವು ಉಂಟಾಗಿರುವುದು, ಮತ್ತು ಅದನ್ನೆಲ್ಲಾ ಹೆಂಡತಿಯೊಂದಿಗೆ ತೋಡಿಕೊಳ್ಳಲು (ಕನ್‍ಫೆಸ್) ಸಾಧ್ಯವಾಗಿರುವುದು. ಆಗ ಅವಳು ‘ಮುನಿದ ಮುನ್ನೀರೆ, ಮಾರಿ”, ಅವಳ ಮುಂದೆ “ಹೆಡೆಬಿಚ್ಚಿದ ನಾಗರ” ದಂತಹ ಪತಿ ಹೆಡೆಮುದುರಿ ಹಿಮ್ಮೆಟ್ಟುತ್ತಾನೆ. ತನ್ನ ಸೋಲನ್ನು ಒಪ್ಪಿಕೊಂಡು ‘ಸಖ್ಯ ಚಿಗುರಿಸಿ’ಕೊಳ್ಳುತ್ತಾನೆ. ಸಖ್ಯದ ಆಖ್ಯಾನ ಮುಂದುವರೆಯುತ್ತದೆ.

ಸುಮತೀಂದ್ರ ನಾಡಿಗರ ಈ ಕವಿತೆಗಳನ್ನು ದಾಂಪತ್ಯ ದೀಪಿಕೆ ಎಂದೂ ಕರೆಯಬಹುದೇನೋ. ಈ ಲೇಖನದ ಹಿಂದೆ ದಾಂಪತ್ಯ ಗೀತೆಗಳ ಹಿಂದಿನ ಆಶಯವನ್ನು ಮಾತ್ರ ಗಮನದಲ್ಲಿರಿಸಿಕೊಳ್ಳಲಾಗಿದೆ. ಇದೊಂದು content analysis ಮಾತ್ರ.. ಈ ಕವಿತೆಗಳು ಬಯಲಾಗಿಸುವ ಸಾಮಾಜಿಕ ಸ್ವರೂಪ ಮುಖ್ಯವೆನಿಸಿದ್ದರಿಂದ ಕಾವ್ಯ ಸ್ವರೂಪದ ತಾತ್ವಿಕ ಜಿಜ್ಞಾಸೆಯ ಕಡೆಗೆ ಗಮನ ಕೊಡಲಾಗಿಲ್ಲ. ಸುಮತೀಂದ್ರ ನಾಡಿಗರ ದಾಂಪತ್ಯ ಗೀತೆಗಳ ಓದಿನಿಂದ ಹುಟ್ಟಿಕೊಂಡ ಇವು ಕೇವಲ ನನ್ನ ಅನಿಸಿಕೆಗಳಷ್ಟೆ.

‍ಲೇಖಕರು avadhi

August 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: