ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಭಾಷ್ ಪಾಳೇಕಾರ್ ಗೆ ಬಹಿರಂಗ ಪತ್ರ

ಸಾವಯವ ಕೃಷಿ ಇಂದು ವಿವಾದದ ತೊಟ್ಟಿಲಾಗಿದೆ. ಸಹಜ ಕೃಷಿ ಪ್ರತಿಪಾದಿಸುವ, ರಾಷ್ಟ್ರಪತಿ ಪದಕ ಪುರಸ್ಕೃತರೂ ಆದ ಸುಭಾಷ್ ಪಾಳೇಕಾರ್ ಅವರು ‘ಟೈಮ್ಸ್ ಆಫ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ‘ಸಾವಯವ ಕೃಷಿ ಆಂಟಂ ಬಾಂಬ್‌ಗಿಂತಲೂ ಕೆಟ್ಟದ್ದು’ ಎನ್ನುವ ಹೇಳಿಕೆ ನೀಡಿದ್ದಾರೆ. 

ಈ ಹೇಳಿಕೆಯ ಬಗ್ಗೆ ಸಾವಯವ ಕೃಷಿ ಲೋಕ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಅವರಿಗೆ ಬಹಿರಂಗ ಪತ್ರ ಬರೆದು ಸ್ಪಷ್ಟನೆಯನ್ನು ಕೇಳಿದೆ. 

ಇದು’ ಜುಗಾರಿ ಕ್ರಾಸ್’. ಚರ್ಚೆಗೆ ಮುಕ್ತವಾಗಿರುವ ವೇದಿಕೆ

ನೀವು ನಿಮ್ಮ ಅಭಿಪ್ರಾಯವನ್ನೂ ಕಳಿಸಬಹುದು. ನಿಮ್ಮ ಅಭಿಪ್ರಾಯವನ್ನು avadhimag@gmail ಗೆ ಮೇಲ್ ಮಾಡಿ 

ಬಹಿರಂಗ ಪತ್ರ

೨೮ನೇ ಜುಲೈ, ೨೦೧೮

ಈ ಕೆಳಗೆ ಸಹಿ ಮಾಡಿರುವ ನಮ್ಮಲ್ಲಿ ಕೆಲವರು ಬಹುಕಾಲದಿಂದ ಸ್ವತಃ ಸಾವಯವ/ಸಹಜ ಮತ್ತು ವಿವಿಧ ರೀತಿಯ ಪರಿಸರ-ಮಾನವ ಸ್ನೇಹಿ ಕೃಷಿಯನ್ನು ಮಾಡುತ್ತಿದ್ದೇವೆ, ಇನ್ನು ಕೆಲವರು ಅಂತಹ ಕೃಷಿಯನ್ನು ನಮ್ಮಿಂದಾಗುವ ಎಲ್ಲಾ ರೀತಿಯಲ್ಲೂ ಉತ್ತೇಜಿಸುತ್ತಾ ಬಂದಿದ್ದೇವೆ.

ಮೊಟ್ಟಮೊದಲಿಗೆ, ನೈಸರ್ಗಿಕ ಕೃಷಿಯ ವಿಚಾರಗಳನ್ನು ರೈತರಿಗೆ, ಸರ್ಕಾರಗಳಿಗೆ, ಮಾಧ್ಯಮಗಳಿಗೆ ಮತ್ತು ಇತರರಿಗೆ ತಲುಪಿಸುವಲ್ಲಿ ಮತ್ತು ರಾಸಾಯನಿಕ ಮುಕ್ತ ಕೃಷಿಯನ್ನು ಹರಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ತಮ್ಮನ್ನು ಅಭಿನಂದಿಸುತ್ತಿದ್ದೇವೆ. ಆದಾಗ್ಯೂ, ದಿನಾಂಕ.೨೨.೭.೨೦೧೯ರ ‘ಟೈಂಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿನ ‘ಸಾವಯವ ಕೃಷಿ ಆಂಟಂ ಬಾಂಬ್‌ಗಿಂತಲೂ ಕೆಟ್ಟದ್ದು’ ಎನ್ನುವ ನಿಮ್ಮ ಹೇಳಿಕೆ ನೋಡಿ ದಂಗಾಗಿ ಹೋಗಿದ್ದೇವೆ. ನೀವು ಇಂತಹ ಹೇಳಿಕೆ ಕೊಡುತ್ತೀರೆಂಬುದನ್ನು ನಂಬಬೇಕೋ ಬಿಡಬೇಕೋ ತಿಳಿಯದಾಗಿದೆ.

ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿಗಳ ಮೇಲೆ ೧೯೪೫ರಲ್ಲಿ ಹಾಕಲಾದ ಆಟಂಬಾಂಬ್ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳದಲ್ಲೆಲ್ಲೇ ಕೊಂದಿತು ಮತ್ತು ನಂತರದಲ್ಲಿ ಲೆಕ್ಕವಿಲ್ಲದಷ್ಟು ಜನ ಸುಟ್ಟ ಗಾಯಗಳಿಂದ, ರೇಡಿಯೋ ವಿಕಿರಣದ ಪರಿಣಾಮದಿಂದ ಸಾವನ್ನಪ್ಪಿದರು. ಇವತ್ತಿನ ಆಧುನಿಕ ಯುಗದ ಆಟಂಬಾಂಬ್‌ಗಳು ಇದಕ್ಕಿಂತಲೂ ವಿನಾಶಕಾರಿಯಾಗಿವೆ. ಇಂತಿರುವಾಗ ‘ಸಾವಯವ ಕೃಷಿ ಆಟಂಬಾಂಬ್‌ಗಿಂತಲೂ ಅಪಾಯಕಾರಿ’ ಹೇಗೆ ಎನ್ನುವುದನ್ನು ದಯಮಾಡಿ ವಿವರಿಸುವಿರಾ?

ಭಾರತದ ಕೃಷಿಗೆ ೧೦,೦೦೦ ವರ್ಷಗಳ ಚರಿತ್ರೆ ಇದೆ. ಕೃಷಿಯಲ್ಲಿ ರಾಸಾಯನಿಕವನ್ನು ಅಳವಡಿಸುವ ಮುನ್ನ, ಅಂದರೆ ಸುಮಾರು ೯,೯೦೦ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮ ಕೃಷಿ ರಾಸಾಯನಿಕ ರಹಿತವಾಗಿತ್ತು. ತನ್ನಷ್ಟಕ್ಕೇ ಸಹಜ ಸಾವಯವ ಕೃಷಿಯಾಗಿತ್ತು. ಸರ್ ಆಲ್ಬರ್ಟ್ ಹೋವರ್ಡ್ ಅವರು ೧೯೪೦ರಲ್ಲಿ ‘An Agricultural Testament’ ಎನ್ನುವ ಪುಸ್ತಕದ ಮೂಲಕ ಪಾಶ್ಚಿಮಾತ್ಯ ಮತ್ತು ಇಂಗ್ಲಿಷ್ ಮಾತನಾಡುವ ದೇಶಗಳಿಗೆ ಭಾರತೀಯ ಕೃಷಿ ಹೇಗೆ ಸ್ಪೂರ್ತಿದಾಯಕ ಮತ್ತು ಮಾರ್ಗದರ್ಶಕವಾಗಬಲ್ಲುದು ಎಂದು ತೋರಿಸಿಕೊಟ್ಟರು. ಭಾರತದಲ್ಲಿ ಬಹಳಷ್ಟು ವರ್ಷಗಳನ್ನು ಕಳೆದ ನಂತರ ಆಲ್ಬರ್ಟ್ ಹೋವರ್ಡ್ ಅವರು, ಭಾರತೀಯ ರೈತರನ್ನು ತನ್ನ ಗುರುಗಳಾಗಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿರುವುದಾಗಿ ಹೇಳಿಕೊಂಡರು. ಇದು ತಮಗೆ ತಿಳಿಯದ ವಿಚಾರವೇನೂ ಅಲ್ಲ.
ನಮ್ಮ ಸಾವಯವ ಕೃಷಿಯ ಪರಂಪರೆ ಹೀಗಿರುವಾಗ ನಿಮ್ಮ ಹೇಳಿಕೆಗೆ ಏನಾದರೂ ಅರ್ಥವಿದೆಯೇ? ನಿಮ್ಮ ಆಕ್ಷೇಪಣೆ ಇರುವುದು, ಹೊರಗಿನಿಂದ ತಂದ ಒಳಸುರಿಗಳನ್ನು ಬಳಸಿ ಸಾವಯವ ಕೃಷಿ ಮಾಡುವುದು, ನಮ್ಮ ನೆಲಕ್ಕೆ ಹೊಂದಿಕೊಳ್ಳದಂತಹ ವಿದೇಶಿ ತಳಿಯ ದನಗಳು/ ಪ್ರಾಣಿಗಳು/ಎರೆಹುಳುಗಳು/ಸಸ್ಯಗಳು/ಸೂಕ್ಷ್ಮ ಜೀವಿಗಳು ಇತ್ಯಾದಿಗಳ ವಿಚಾರದಲ್ಲಿ ಮಾತ್ರವಾಗಿದ್ದರೆ ದಯವಿಟ್ಟು ಹಾಗೆಂದು ಸ್ಪಷ್ಟಪಡಿಸಿ.

ಇನ್ನು ಪ್ರಪಂಚದಾದ್ಯಂತ ಅಧಿಕೃತವಾಗಿ ಒಪ್ಪಿತವಾಗಿರುವ ಸಾವಯವ ಕೃಷಿಯ ವ್ಯಾಖ್ಯೆಯನ್ನು ಗಮನಿಸೋಣ: “ಸಾವಯವ ಕೃಷಿ ಆಹಾರ ಉತ್ಪಾದನೆಯ ಒಂದು ಸಮಗ್ರ ನಿರ್ವಹಣಾ ವ್ಯವಸ್ಥೆಯಾಗಿದೆ. ಜೀವ ವೈವಿಧ್ಯತೆ, ಜೀವಚಕ್ರಗಳು ಮತ್ತು ಮಣ್ಣಿನ ಜೈವಿಕ ಚಟುವಟಿಕೆಗಳೂ ಸೇರಿದಂತೆ ಕೃಷಿ-ಪರಿಸರ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡುವಂಥದ್ದಾಗಿದೆ. ಹೊರಗಿನಿಂದ ತಂದ ಒಳಸುರಿಗಳ ಬಳಕೆ ಮಾಡುವ ಬದಲು ಪ್ರಾದೇಶಿಕ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವಂತಹ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅದು ಮಹತ್ವ ಕೊಡುತ್ತದೆ. ಕೃಷಿ ವ್ಯವಸ್ಥೆಯಲ್ಲಿನ ವಿವಿಧ ಚಟುವಟಿಕೆಗಳಿಗೆ ಪೂರಕವಾಗುವಂತಹ ಸಹಜ ಜೈವಿಕ ಕ್ರಿಯೆಗಳನ್ನು ಉದ್ದೀಪಿಸಲು ಇದು ಒತ್ತುಕೊಡುತ್ತದೆಯೇ ಹೊರತು ಕೃತಕ ರಾಸಾಯನಿಕಗಳ ಬಳಕೆಗಲ್ಲ”.

ವಿಶ್ವ ಆರೋಗ್ಯ ಸಂಸ್ಥೆ, ಕೋಡೆಕ್ಸ್ ಅಲಿಮೆಂಟೆರಿಯಸ್ ಕಮಿಷನ್, ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ, ವಿಶ್ವ ಬ್ಯಾಂಕ್, ಯುಎನ್‌ಡಿಪಿ, ಯುಎನ್‌ಇಪಿ ಮತ್ತು ಭಾರತವೂ ಸೇರಿದಂತೆ ೬೦ ದೇಶಗಳು ಮತ್ತು ಅಲ್ಲಿನ ೪೦೦ ಕೃಷಿ ತಜ್ಞರು ಮತ್ತು ೧,೦೦೦ ವಿವಿಧ ವಿಷಯಗಳ ತಜ್ಞರು ಸೇರಿ ಹೊರತಂದ ವಿಶ್ವ ಕೃಷಿ ವರದಿ (IAASTD) ಯು ರಾಸಾಯನಿಕಯುಕ್ತ, ಆಧುನಿಕ ಕೈಗಾರೀಕೃತ ಮಾದರಿಯ ಕೃಷಿಗೆ ಖಂಡಿತವಾಗಿಯೂ ಭವಿಷ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಸಣ್ಣ ರೈತರು ಮತ್ತು ಪರಿಸರಾಧಾರಿತ/ಸಾವಯವ/ಸಹಜ ಕೃಷಿ ವಿಧಾನಗಳೇ ಮುಂದಿನ ದಾರಿದೀಪ ಮತ್ತು ಇಲ್ಲಿ ನೆಲಮೂಲದ/ರೈತರ ಜ್ಞಾನವೇ ಪ್ರಧಾನವಾಗಿರುತ್ತದೆ ಎಂದು ಶಿಫಾರಸ್ಸು ಮಾಡಿದೆ. ಹಸಿವು, ಬಡತನ ಅಥವಾ ಹವಾಮಾನ ಬದಲಾವಣೆಗೆ ಕುಲಾಂತರಿ ಬೆಳೆಗಳು ಖಂಡಿತಾ ಉತ್ತರವಲ್ಲ ಎಂದು ಈ ವರದಿ ಸ್ಪಷ್ಟವಾಗಿ ಹೇಳುತ್ತದೆ. ಸಾವಯವ ಕೃಷಿಗೆ ಇಷ್ಟು ವಿವರಣೆ ಸಾಕಲ್ಲವೇ?

ಈಗ ಕುಲಾಂತರಿಯ ವಿಚಾರಕ್ಕೆ ಬರೋಣ.

೧. ಕುಲಾಂತರಿ ಬೆಳೆÉಗಳು/ಬೀಜಗಳು ಮೂಲತಃ ಬೃಹತ್ ಬಹುರಾಷ್ಟಿçÃಯ ಕಂಪನಿಗಳು ಪ್ರಯೋಗಾಲಯದಲ್ಲಿ ತಯಾರಿಸಿದಂಥವಾಗಿದ್ದು, ಈ ಕಂಪನಿಗಳು ಕುಲಾಂತರಿ ಬೀಜಗಳ ಜೊತೆಗೆ ತೀವ್ರ ವಿಷಕಾರೀ ಕೀಟನಾಶಕ ಮತ್ತು ಕಳೆನಾಶಕಗಳನ್ನು ಮಾರಾಟಮಾಡುತ್ತವೆ. ಇಂತಹ ಬೀಜಗಳು ಸಹಜವೂ ಅಲ್ಲ, ಅವುಗಳ ಅಗತ್ಯವೂ ಇಲ್ಲ. ಮಾರುಕಟ್ಟೆ ಮೇಲಿನ ಅವಲಂಭನೆಯನ್ನು ಹೆಚ್ಚಿಸುವ ಇಂತಹ ಬೀಜಗಳನ್ನು ‘ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ’ ಸಾರಾಸಗಟಾಗಿ ವಿರೋಧಿಸಬೇಕು.

೨. ಕುಲಾಂತರಿ ಬೆಳೆಗಳು/ಬೀಜಗಳು ಕೃಷಿ-ಪರಿಸರ ವ್ಯವಸ್ಥೆ ಮತ್ತು ಮಾನವ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟುಮಾಡುತ್ತವೆ. ಮತ್ತು ರೈತರ ಬೀಜಸ್ವಾವಲಂಬನೆಯನ್ನು ನಾಶಪಡಿಸುತ್ತವೆ.

೩. ಕುಲಾಂತರಿ ಬೀಜಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುವುದರಿಂದ, ಕುಲಾಂತರಿ ಬೆಳೆಗಳನ್ನು ಬೆಳೆಯುವುದರಿಂದ ಉಂಟಾದ ಅಪಾಯವನ್ನು ಹಿಮ್ಮೊಗಗೊಳಿಸುವುದಾಗಲೀ, ಸರಿಪಡಿಸುವುದಾಗಲೀ ಸಾಧ್ಯವಿಲ್ಲ. ಒಮ್ಮೆ ಪರಿಸರದಲ್ಲಿ ಸೇರಿಬಿಟ್ಟಮೇಲೆ ಅದನ್ನು ವಾಪಸ್ಸು ಪಡೆಯುವುದಾಗಲೀ, ಅದು ಎಗ್ಗಿಲ್ಲದೆ ಹರಡುವುದನ್ನಾಗಲೀ ತಡೆಯಲು ಸಾಧ್ಯವೇ ಇಲ್ಲ. ಕುಲಾಂತರಿ ಬೆಳೆಗಳು ಪರಕೀಯ ಪರಾಗಸ್ಪರ್ಶ ಮಾಡುವ ಮೂಲಕ ನಮ್ಮ ಸ್ಥಳೀಯ ಬೀಜಗಳ ಶ್ರೀಮಂತ ಜೀವ ವೈವಿಧ್ಯತೆಯನ್ನು ಸಂಪೂರ್ಣ ಕುಲಗೆಡಿಸುತ್ತವೆ.

೪. ಸುಮಾರು ೯೦%ಕ್ಕೂ ಹೆಚ್ಚು ಕುಲಾಂತರಿ ಬೆಳೆ/ಬೀಜಗಳು ಬಿಟಿ (ಬ್ಯಾಸಿಲಸ್ ತುರಿಂಜೆಂನ್ಸಿಸ್) ಬ್ಯಾಕ್ಟೀರಿಯಾದ ವಂಶವಾಹಿಯನ್ನು ಹೊಂದಿರುತ್ತವೆ ಇಲ್ಲವೇ ಎಚ್‌ಟಿ(ಕಳೆನಾಶಕ ಸಹಿಷ್ಣು) ಗುಣವನ್ನು ಹೊಂದಿರುತ್ತವೆ. ಕುಲಾಂತರಿ ಬಿಟಿ ಸಸ್ಯಗಳು ತಮ್ಮ ಕಾಂಡದ ತಿರುಳಿನಲ್ಲಿಯೇ ವಿಷವನ್ನು ಉತ್ಪತ್ತಿಮಾಡುತ್ತವೆ. ಇನ್ನು ಕಳೆನಾಶಕ ಸಹಿಷ್ಣು ಬೆಳೆಗಳಿಗೆ ರೈತರು ತೀವ್ರ ವಿಷಕಾರಕ, ಕ್ಯಾನ್ಸರ್ ಕಾರಕ ಕಳೆನಾಶಕಗಳನ್ನು ಹೊಡೆಯಬೇಕು. ಪ್ರಪಂಚದಲ್ಲಿ ಇಂತಹ ಬೆಳೆಗಳನ್ನು ಬೆಳೆಯುತ್ತಿರುವಲ್ಲೆಲ್ಲಾ ವರ್ಷದಿಂದ ವರ್ಷಕ್ಕೆ ವಿಷಚಕ್ರ ತೀವ್ರಗೊಳ್ಳುತ್ತಲೇ ಇದೆ. ಅಧ್ಯಯನಗಳಿಂದ ಕಂಡುಬಂದಿರುವಂತೆ, ಬಿಟಿ ಕುಲಾಂತರಿ ಬೆಳೆಗಳನ್ನು ಯಾವ ಕೀಟಗಳನ್ನು ದೂರವಿಡಲು ಅಭಿವೃದ್ಧಿಪಡಿಸಲಾಗಿದೆಯೋ ಆ ಕೀಟಗಳು ಬಲುಬೇಗ ಪ್ರತಿರೋಧ ಬೆಳೆಸಿಕೊಂಡು ‘ಸೂಪರ್ ಕೀಟ’ಗಳಂತೆ ವರ್ತಿಸಲು ಪ್ರಾರಂಭಿಸುತ್ತವೆ. ಜೊತೆಗೆ ಇತರ ಕೀಟಗಳ ಬಾಧೆ ಹೆಚ್ಚಾಗುವುದರಿಂದ ರೈತ ಮತ್ತೂ ಹೆಚ್ಚು ಕೀಟನಾಶಕಗಳನ್ನು ಹೊಡೆಯಬೇಕಾಗುತ್ತದೆ. ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿನ ರೈತರ ಅನುಭವ ಇದೇ ಆಗಿದೆ. ಕಳೆನಾಶಕ ಸಹಿಷ್ಣು ಎಚ್‌ಟಿ ಬೆಳೆಗಳಲ್ಲಿ ‘ದೈತ್ಯ ಕಳೆಗಳು’ ನಿಯಂತ್ರಣ ತಪ್ಪಿ ಹರಡುವುದು ಅರ್ಜೆಂಟೈನಾ, ಬ್ರೆಜಿಲ್, ಕೆನಡಾ ಮತ್ತು ಅಮೆರಿಕಗಳಲ್ಲಿ ದಾಖಲಿಸಲಾಗಿದೆ. ಮಾನವರ, ಪಶುಗಳ ಮತ್ತು ಸಸ್ಯಗಳ ಆರೋಗ್ಯದ ಮೇಲೆ ಇದು ಉಂಟುಮಾಡುವ ದುಷ್ಪರಿಣಾಮವನ್ನು ಕೂಡ ದಾಖಲಿಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ತೀವ್ರ ಒತ್ತಡದ ನಡುವೆಯೂ ಭಾರತದಲ್ಲಿ ಇದಕ್ಕೆ ಇನ್ನೂ ಅನುಮತಿ ದೊರೆತಿಲ್ಲ ಎನ್ನುವುದು ಬೇರೆ ಮಾತು.

ಈ ಹಿನ್ನೆಲೆಯಲ್ಲಿ ದಯಮಾಡಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಂತೆ ತಮ್ಮನ್ನು ಕೇಳಿಕೊಳ್ಳುತ್ತಿದ್ದೇವೆ.

‘ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ’ ‘ಅಥವಾ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ’ ಯಾವ ರೀತಿಯಲ್ಲಿ ಮೇಲೆ ಹೇಳಿದ ಸಾವಯವ ಕೃಷಿಯ ವ್ಯಾಖ್ಯೆಗಿಂತ ಭಿನ್ನವಾಗಿದೆ? ಶೂನ್ಯ ಬಂಡವಾಳ/ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿಯು ನಮ್ಮ ಪರಂಪರಾಗತ ಕೃಷಿಯ/ ಸಾವಯವ ಕೃಷಿಯ ಅನೇಕ ತತ್ವಗಳನ್ನು ಅಳವಡಿಸಿಕೊಂಡಿರುವಾಗ, ತತ್ವಗಳು/ಆಚರಣೆಗಳಿಗಿಂತ ಹೆಸರೇ ಮುಖ್ಯ ಎಂದು ನಿಮಗೆ ಅನ್ನಿಸಲು ಕಾರಣವೇನು? ತಮ್ಮದೇ ರೀತಿಯಲ್ಲಿ ವಿಷಮುಕ್ತ ಕೃಷಿ ಮಾಡುವ ಎಲ್ಲಾ ರೈತರನ್ನು ಒಗ್ಗೂಡಿಸುವ ಪ್ರಯತ್ನದ ಬದಲು, ಬೇರೆ ಬೇರೆ ಹೆಸರಿನಲ್ಲಿ ಅವರನ್ನು ಅವಹೇಳನ ಮಾಡುತ್ತಾ ರೈತ-ರೈತರ ನಡುವೆ ಒಡಕು ತರುವ ಪ್ರಯತ್ನವನ್ನೇಕೆ ಮಾಡುತ್ತಿದ್ದೀರಿ?

ಅಸ್ವಾಭಾವಿಕವೂ, ತೀವ್ರ ಅಪಾಯಕಾರಿಯೂ ಅನಗತ್ಯವೂ ಮತ್ತು ಸರಿಪಡಿಸಲು ಸಾಧ್ಯವೇ ಇಲ್ಲದಂತಹ ಘಾಸಿಯನ್ನು ಪರಿಸರಕ್ಕೆ ಉಂಟುಮಾಡುವ ಕುಲಾಂತರಿ ಬೆಳೆ/ಬೀಜಗಳನ್ನು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಒಪ್ಪಿಕೊಳ್ಳುವುದಾದರೂ ಹೇಗೆ? ಭಾರತದ ಶ್ರೀಮಂತ ಜೀವವೈವಿಧ್ಯತೆಯನ್ನು ನಾಶಪಡಿಸಿ ರೈತರ ಬದುಕನ್ನು ಕಿತ್ತುಕೊಳ್ಳುವ ಬಹುರಾಷ್ಟ್ರೀಯ ಕಂಪನಿಗಳ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ ಇದು ಎನ್ನುವುದು ನಿಮಗೆ ಅರ್ಥವಾಗಿಲ್ಲವೇ? ನಮ್ಮ ಭಾರತ ದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದು ಬಂದಿರುವ ಸಾವಿರಾರು ಅದ್ಭುತ ಸ್ಥಳೀಯ ತಳಿ ಬೀಜಗಳು ನೈಸರ್ಗಿಕ ಕೃಷಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದು ನಿಮಗೆ ತಿಳಿದಿಲ್ಲವೇ? ಸ್ಥಳೀಯವಾಗಿ ಹೊಂದಾಣಿಕೆಯಾಗಿರುವ ಸಾವಯವ ಅಥವಾ ಸಹಜ ಕೃಷಿ (ಹೆಸರು ಏನೇ ಇರಲಿ) ಪದ್ಧತಿಯು ಕೃಷಿ-ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುತ್ತದೆಯಾದರೆ ಅದಕ್ಕೆ ನಿಮ್ಮ ತಕರಾರಾದರೂ ಏನು? ಸುರಕ್ಷಿತ ಆಹಾರವನ್ನು ಕೊಡುವ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವ ಸಾವಯವ ಕೃಷಿಕರ ಇಡೀ ಪರಿವಾರದ ಮೇಲೆ ಸಾರಾಸಗಟಾಗಿ ಏಕೆ ‘ಬಾಂಬ್’ ಪ್ರಯೋಗ ಮಾಡುತ್ತಿದ್ದೀರಿ? ಸಾವಯವ ಕೃಷಿಯನ್ನು ಆಂಟಂಬಾಂಬಿಗೆ ಹೋಲಿಸುವ ನೀವು, ಭಾರತೀಯ ರೈತರಿಗೆ, ಪ್ರಕೃತಿಗೆ ಮತ್ತು ವಿಷದ ಆಹಾರವನ್ನು ಉಣ್ಣುವ ಎಲ್ಲ ಜೀವಿಗಳಿಗೆ ಮಾರಕವಾಗಿರುವ ದೈತ್ಯ ಕುಲಾಂತರಿ ಕೈಗಾರಿಕೆ ಮತ್ತು ಅವುಗಳಿಗೆ ಹೆಗಲಾಗಿರುವ ಬೃಹತ್ ರಾಸಾಯನಿಕ ಕೈಗಾರಿಕೆಗಳನ್ನು ಯಾವುದಕ್ಕೆ ಹೋಲಿಸುತ್ತೀರಿ?

ನೀವು ನಿಮ್ಮ ಗುರು ಎಂದು ಹೇಳಿಕೊಳ್ಳುವ ಮತ್ತು ನಮ್ಮಂಥ ಲೆಕ್ಕವಿಲ್ಲದಷ್ಟು ಜನರನ್ನು ಕಳೆದ ೩-೪ ದಶಕಗಳಿಂದ ಪ್ರಭಾವಿಸಿದ ಧೀಮಂತ ನೈಸರ್ಗಿಕ ಕೃಷಿಕ ಮಾನ್ಯ ಭಾಸ್ಕರ್ ಸಾವೆಯವರು, ಒಂದು ಕೃಷಿ ಪದ್ಧತಿಯನ್ನು ಇನ್ನೊಂದಕ್ಕಿಂತ ಶೇಷ್ಠ ಅಥವಾ ತುಚ್ಛ ಎಂದು ಯಾವತ್ತೂ ಭಾವಿಸಿರಲಿಲ್ಲ. ಜೀವನವಿಡೀ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಾ, ಪ್ರಕೃತಿಯನ್ನು ಸೂಕ್ಷ÷್ಮವಾಗಿ ಗಮನಿಸುತ್ತಾ, ಜೀವನದುದ್ದಕ್ಕೂ ಕಲಿಯುತ್ತಲೇ ಇದ್ದರು. ಅವರ ಈ ವಿನಯವೇ ಪರಿಸರ ಸ್ನೇಹಿ ಕೃಷಿಯಲ್ಲಿ ವಿವಿಧ ದಾರಿಗಳನ್ನು ಮತ್ತು ತಂತ್ರಗಳನ್ನು ಒಪ್ಪಿಕೊಳ್ಳುವ ಮನೋಭಾವವನ್ನು ನಮ್ಮಗಳಲ್ಲಿ ಬೆಳೆಸಿತು.

ಶೂನ್ಯ ಬಂಡವಾಳ/ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಅಡಿಯಲ್ಲಿ ನೀವು ಉತ್ತೇಜಿಸುತ್ತಿರುವ ಹಲವಾರು ಕೃಷಿ ತಂತ್ರಗಳು ನಮ್ಮ ಪರಂಪರಾಗತ ಕೃಷಿಯಲ್ಲಿ ಇದ್ದಂತವೇ ಆಗಿವೆ. ಮತ್ತು ನಮ್ಮಲ್ಲಿನ ಅಸಾಧಾರಣ ರೈತರು ಸಾವಯವ/ಸಹಜ/ಪರಿಸರಸ್ನೇಹಿ ಕೃಷಿಯಲ್ಲಿ ಮಾಡಿದ ಅನುಶೋಧನೆಗಳೇ ಆಗಿವೆ ಎಂಬುದು ಜನಜನಿತವಾಗಿರುವ ವಿಚಾರ. ಬಹುರಾಷ್ಟ್ರೀಯ ಕಂಪನಿಗಳು ಉತ್ತೇಜಿಸುವ ವಿನಾಶಕಾರಿ ಕೃಷಿ-ತಂತ್ರಜ್ಞಾನಗಳನ್ನು ವಿರೋಧಿಸುವ ನೀವು ವಿಜ್ಞಾನವನ್ನು ಅಥವಾ ತಾರ್ಕಿಕ ಸತ್ಯವನ್ನು ಧಿಕ್ಕರಿಸಲಾರಿರಿ ಎಂದು ಭಾವಿಸುತ್ತೇವೆ.

ಈ ಎಲ್ಲಾ ಹಿನ್ನೆಲೆಯಲ್ಲಿ, ‘ಸಾವಯವ ಕೃಷಿ ಆಟಂಬಾಂಬ್‌ಗಿಂತಲೂ ಕೆಟ್ಟದ್ದು’ ಎಂಬ ನಿಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಮತ್ತು ಶೂನ್ಯ ಬಂಡವಾಳ/ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿಯಲ್ಲಿ ಕುಲಾಂತರಿ ಬೀಜಗಳ ಬಳಕೆಗೆ ಒಪ್ಪಿಗೆ ನೀಡಿರುವುದನ್ನು ಹಿಂತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಈ ವಿಚಾರದಲ್ಲಿ ತಮ್ಮನ್ನು ಸಾರ್ವಜನಿಕ ಮುಕ್ತ ಮಾತುಕತೆಗೆ ಆಹ್ವಾನಿಸುತ್ತಿದ್ದೆದ್ದೇವೆ. ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ ಸಾರ್ವಜನಿಕ ಸಂವಾದದಲ್ಲಿ ತೊಡಗಿಕೊಳ್ಳಲು ತಾವು ಹಿಂಜರಿಯಲಾರಿರಿ ಎಂದು ನಂಬುತ್ತೇವೆ.

ತಮ್ಮ ಶೀಘ್ರ ಉತ್ತರಕ್ಕೆ ಕಾದಿರುವ ತಮ್ಮ ವಿಶ್ವಾಸಿಗಳು

೧) ಭಾಸ್ಕರ್ ಸಾವೆ ನೈಸರ್ಗಿಕ ಕೃಷಿ ಕಲಿಕಾ ಕೇಂದ್ರ ( ಕಲ್ಪವೃಕ್ಷ)
೨) ನರೇಶ್ ಸಾವೆ ಮತ್ತು ಸುರೇಶ್ ಸಾವೆ ( ಮಾನ್ಯ ಭಾಸ್ಕರ್ ಸಾವೆ ಅವರ ಪುತ್ರರು ಮತ್ತು ಸಾವಯವ/ಸಹಜ ಕೃಷಿಯಲ್ಲಿ ಅನೇಕ ದಶಕಗಳ ಅನುಭವ ಹೊಂದಿರುವವರು)
೩) ಧೀರೇಂದ್ರ ಮತ್ತು ಸ್ಮಿತ ಸೋನಾಜಿ (ಸಾವಯವ/ಸಹಜ ಕೃಷಿಯಲ್ಲಿ ಅನೇಕ ದಶಕಗಳ ಅನುಭವ ಹೊಂದಿರುವವರು)
೪) ವಸಂತ್ ಮತ್ತು ಕರುಣಾ ಫುತಾನೆ (ಸಾವಯವ/ಸಹಜ ಕೃಷಿಯಲ್ಲಿ ಅನೇಕ ದಶಕಗಳ ಅನುಭವ ಹೊಂದಿರುವವರು)
೫)ಸುಭಾಷ್ ಶರ್ಮ (ಸಾವಯವ/ಸಹಜ ಕೃಷಿಯಲ್ಲಿ ಅನೇಕ ದಶಕಗಳ ಅನುಭವ ಹೊಂದಿರುವವರು)
೬)ಪ್ರೊ. ಸುಲ್ತಾನ್ ಇಸ್ಮಾಯಿಲ್ ( ಹಿರಿಯ ವಿಜ್ಞಾನಿಗಳು, ಸಂಶೋಧಕರು ಮತ್ತು ಅನೇಕ ದಶಗಳಿಂದ ಮಣ್ಣು ಜೀವಶಾಶ್ತçದ ಪ್ರಾಧ್ಯಾಪಕರು)
೭) ಕಪಿಲ್ ಷಾ ( ಕಳೆದ ಮೂರು ದಶಕಗಳಿಂದ ಸಹಜ/ಸಾವಯವ ಕೃಷಿಯ ಲೇಖಕರು, ಶಿಕ್ಷಕರು ಮತ್ತು ಪ್ರಚಾರಾಂದೋಲನದಲ್ಲಿ ತೊಡಗಿರುವವರು)
೮) ಅರ್ಧೇಂದು ಚಟರ್ಜಿ ( ಕಳೆದ ಮೂರು ದಶಕಗಳಿಂದ ಪರ್ಮಾಕಲ್ಚರ್ ತರಬೇತಿದಾರರು, ಕೃಷಿಕರು ಮತ್ತು ಸಂಶೋಧಕರು)
೯) ಜೇಕಬ್ ನೆಲ್ಲಿನಾಥನ್ ( ಕಳೆದ ೩೫ ವರ್ಷಗಳಿಂದ ಪರಿಸರಾಧಾರಿತ ಕೃಷಿಯ ಸಂಶೋಧಕರು, ತರಬೇತಿದಾರರು ಮತ್ತು ಬೀಜ ತಳಿ ಸಂರಕ್ಷಣೆಯ ಕಾರ್ಯಕರ್ತರು)
೧೦) ಪಿ. ಬಾಬು ( ಇಕ್ರಾ-ಕರ್ನಾಟಕದ ಜೊತೆ ಕಳೆದ ಮೂರು ದಶಕಗಳಿಂದ ಸಣ್ಣ ಮಳೆಯಾಶ್ರಿತ ರೈತರ ಜೊತೆ ಕೆಲಸ ಮಾಡುತ್ತಿರುವ ಪರಿಸರಾಧಾರಿತ ಕೃಷಿ ಕಾರ್ಯಕರ್ತರು, ಸಂಶೋಧಕರು, ತರಬೇತುದಾರರು)
೧೧) ಭರತ್ ಮನ್ಸತ (ಕಳೆದ ಮೂರು ದಶಕಗಳಿಂದ ಪರಿಸರಾಧಾರಿತ ಕೃಷಿ ಸಂಶೋಧಕರು-ಲೇಖಕರು, ಕಾರ್ಯಕರ್ತರು; ಭಾಸ್ಕರ್ ಸಾವೆ ಅವರ ಬದುಕು-ಬೇಸಾಯ ಕುರಿತ ‘The Vision of Natural Farming’ ಪುಸ್ತಕದ ಲೇಖಕರು
೧೨) ಸೌಮಿಕ್ ಬ್ಯಾನರ್ಜಿ (ಕಳೆದ ೧೫ ವರ್ಷಗಳಿಂದ ಬೀಜ ಸಂರಕ್ಷರು ಮತ್ತು ಪರಿಸರಾಧಾರಿತ ಕೃಷಿ ಸಂಶೋಧಕರು, ಪ್ರಚಾರಾಂದೋಲನದಲ್ಲಿ ತೊಡಗಿರುವವರು)

‍ಲೇಖಕರು avadhi

19 August, 2019

1 Comment

  1. V Gayathri

    ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಅವಧಿಗೆ.
    ವಿ.ಗಾಯತ್ರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading