-ಶ್ಯಾಮಲಾ ಮಾಧವ
ಅನುವಾದ – ಸಾಹಿತ್ಯದ ಅನುಸೃಷ್ಟಿ
ಚೆಂಬೂರ್ ಕರ್ನಾಟಕ ಸಂಘ ಹೈಸ್ಕೂಲಿನ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಸುಬ್ಬಯ್ಯ ಶೆಟ್ಟಿ ದತ್ತಿನಿಧಿ ಉಪನ್ಯಾಸ ಇಲ್ಲಿದೆ.
ಬಹುಭಾಷಾ ಭಾರತಿ ಎಂದೇ ಕರೆಯಲ್ಪಡುವ ನಮ್ಮ ದೇಶದ ಈ ಮುಂಬೈ ಮರಾಠಿ ನೆಲದಲ್ಲಿ ನಾವು ಕನ್ನಡಿಗರು ಇಂದಿಲ್ಲಿ ಸಾಹಿತ್ಯ ಸಹವಾಸವೆಂದು ಒಗ್ಗೂಡಿದ್ದೇವೆ. ವಿಶ್ವಭಾರತಿಗೆ ಕನ್ನಡದಾರತಿ ಎಂದು ಬರೆದು ಹಾಡಿದರು, ನಮ್ಮ ರಾಷ್ಟ್ರಕವಿ ಕುವೆಂಪು ಅವರು. ವಿಶ್ವಾದ್ಯಂತದ ಅನ್ಯ ಭಾಷೆಗಳಲ್ಲಿರುವ ಮೌಲಿಕ ಕೃತಿಗಳ ಅನುಸೃಷ್ಟಿ ಕನ್ನಡ ಸಾಹಿತ್ಯ ಭಂಡಾರದ ಸಿರಿಯನ್ನು ವೃಧ್ಧಿಸುವಂತಹುದು. ಈ ಯೋಜನೆಯಲ್ಲಿ ತೊಡಗಿರುವ ನಮ್ಮ ಕರ್ನಾಟಕ ಅನುವಾದ ಸಾಹಿತ್ಯ ಅಕಡೆಮಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಘೋಷವಾಕ್ಯವೂ ಕೂಡಾ. ವಿಶ್ವಭಾರತಿಗೆ ಕನ್ನಡದಾರತಿ ಎಂಬುದೇ ಆಗಿದೆ.ಸಾಹಿತ್ಯವೆಂದರೆ ಹಿತವನ್ನುಂಟು ಮಾಡುವುದು, ಸಮಷ್ಟಿಯ ಹಿತವನ್ನು ಸಾಧಿಸುವುದೇ ಸಾಹಿತ್ಯ. ಪುಸ್ತಕಗಳ ನಂಟು ಹಾಗೂ ಸಾಹಿತ್ಯ ಸಹವಾಸಕ್ಕಿಂತ ಮಿಗಿಲಾದ ನಿಧಿ ಬೇರೆ ಇಲ್ಲ. ಬುಕ್ಸ್ ಆರ್ ಅವರ್ ಬೆಸ್ಟ್ ಫ್ರೆಂಡ್ಸ್ ಎಂದೇ ಬಾಲ್ಯದಿಂದಲೂ ನಂಬಿ ಬೆಳೆದವಳು, ನಾನು. ಇಂದು ನಾನೋರ್ವ ಲೇಖಕಿಯಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಕಾರಣ, ಬಾಲ್ಯದಲ್ಲಿ ನನಗೊದಗಿದ ಪುಸ್ತಕ ಸಂಪತ್ತು. ಮನೆಯಲ್ಲೇ ಕೈಗೆಟುಕಿದ ನಮ್ಮ ತಂದೆಯವರ ಪುಸ್ತಕ ಭಂಡಾರದಿಂದ, ಶಾಲೆಯೇ ಮನೆಯಾಗಿದ್ದ ನಮ್ಮ ಮಂಗಳೂರ ಬೆಸೆಂಟ್ ಶಾಲಾ ಲೈಬ್ರೆರಿಯಿಂದ ಮನೆಯೆದುರಿನ ಕಾರ್ನಾಡ್ ಸದಾಶಿವರಾವ್ ಲೈಬ್ರೆರಿ ಹಾಗೂ ಲೈಟ್ ಹೌಸ್ ಹಿಲ್ ಲೈಬ್ರೆರಿಯಿಂದ ಪುಸ್ತಕಗಳನ್ನು ನನ್ನದಾಗಿಸಿಕೊಂಡು, ಓದಿ ಮೆಚ್ಚಿದುದನ್ನು ಹೃದಯದಲ್ಲಿ ಸ್ಥಾಯಿಯಾಗಿಸಿಕೊಂಡು ಬೆಳೆದವಳು ನಾನು. ಲೈಬ್ರರಿ ಪೀರಿಯಡ್ ಆಗ ಶಾಲಾ ಮಕ್ಕಳಿಗೆ ವರದಾನವಾಗಿತ್ತು. ಇಂದಿನ ಶಾಲೆಗಳಲ್ಲೂ ಲೈಬ್ರೆರಿ ಪೀರಿಯಡ್ ಇರಬೇಕು, ಓದುವ ಹವ್ಯಾಸ, ಪುಸ್ತಕ ಪ್ರೀತಿ ಮಕ್ಕಳಲ್ಲಿ ಬೆಳೆಯಬೇಕು ಎಂಬ ಮಾತನ್ನು ನಾನು ಹೇಳುತ್ತಾ ಬಂದಿದ್ದೇನೆ. ಸಾಹಿತ್ಯ ಸಹವಾಸವನ್ನು ಆಯೋಜಿಸುವ ಈ ವಿದ್ಯಾಮಂದಿರದಲ್ಲಿ ಸಾಹಿತ್ಯದ ಸವಿ ವಿದ್ಯಾರ್ಥಿಗಳ ಪಾಲಿಗೆ ಲಭ್ಯವಿದೆಯೆಂದು ಭಾವಿಸಿದ್ದೇನೆ.
೨೦೨೫ ಕನ್ನಡ, ಕನ್ನಡಿಗರೆಲ್ಲರ ಪಾಲಿಗೆ ಹೆಮ್ಮೆ, ಅಭಿಮಾನದ ವರ್ಷ! ಕನ್ನಡ ಕೃತಿಯೊಂದರ ಇಂಗ್ಲಿಷ್ ಅನುವಾದ ಪ್ರತಿಷ್ಠಿತ ಬುಕರ್ ಪ್ರಶಸ್ತಿಗೆ ಪಾತ್ರವಾಗಿದೆ. ನಮ್ಮೆಲ್ಲರ ಹೆಮ್ಮೆಯ ಬಾನು ಮುಷ್ತಾಕ್ ಅವರ ʻಎದೆಯ ಹಣತೆʼ ಕಥಾ ಸಂಕಲನ, ನಮ್ಮವರೇ ಆದ ದೀಪಾ ಭಸ್ತಿ ಅವರಿಂದ ಇಂಗ್ಲಿಷ್‌ಗೆ ಅನುವಾದಿಸಲ್ಪಟ್ಟುದು ಹಾರ್ಟ್ ಲ್ಯಾಂಪ್ ಎಂಬ ಶೀರ್ಷಿಕೆಯಲ್ಲಿ ಬುಕರ್ ಪ್ರಶಸ್ತಿಗೆ ಪಾತ್ರವಾಗಿ ಜಗದಾದ್ಯಂತ ವಿದ್ವತ್ ವಲಯದಲ್ಲಿ ಗುರುತಿಸಲ್ಪಟ್ಟಿದೆ. ಬಾನು ಮುಷ್ತಾಕ್ ಅವರ ʻಎದೆಯ ಹಣತೆ’ಯ ಗೆಲುವು, ಮಾನವೀಯ ಅಂತಃಕರಣಕ್ಕೂ, ನಾಗರಿಕ ವಿವೇಕಕ್ಕೂ ಸಂದ ಗೆಲುವು ಎಂದು ಖ್ಯಾತ ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ನುಡಿದಿದ್ದಾರೆ.
ಎರಡುಸಾವಿರದ ಹದಿನೆಂಟರಲ್ಲಿ ನಮ್ಮವರೇ ಆದ ಜಯಂತ್ ಕಾಯ್ಕಿಣಿ ಅವರ ʻನೋ ಪ್ರೆಸೆಂಟ್ಸ್ ಪ್ಲೀಸ್ʼ ಕಥಾ ಸಂಕಲನ, ತೇಜಸ್ವಿ ನಿರಂಜನರ
ಅನುವಾದದೊಂದಿಗೆ ಇಂಟರ್‌ನ್ಯಾಶನಲ್ ಸೌತ್ ಏಷ್ಯನ್ ಲಿಟರರಿ ಅವಾರ್ಡ್‌ನಿಂದ ಸಮ್ಮಾನಿತವಾಗಿತ್ತು.
ಕಾರಂತ, ನಿರಂಜನ, ಅನಕೃ, ತರಾಸು, ಬಲ್ಲಾಳರಂತಹ ಉದ್ದಾಮ ಸಾಹಿತಿಗಳ ಕನ್ನಡ ಕೃತಿಗಳೊಡನೆ ನನ್ನ ಬಾಲ್ಯವನ್ನು ಬೆಳಗಿದ್ದು, ಕನ್ನಡದಲ್ಲಿ ಪಡಿಮೂಡಿದ ಅನ್ಯಭಾಷಾ ಸಾಹಿತ್ಯವೂ ಕೂಡಾ. ಬಾಲ್ಯದಲ್ಲಿ ಕೇಳಿ, ಓದಿ ಸಂಭ್ರಮಿಸಿದ ಸಿಂಡ್ರೆಲಾ, ನಾವಿಕ ಸಿಂದಬಾದ್, ಅರೇಬಿಯನ್ ನೈಟ್ಸ್, ಗಲಿವರ್ಸ್ ಟ್ರಾವೆಲ್ಸ್‌ನಂತಹ ಬಾಲ ಸಾಹಿತ್ಯ;. ಬೆಳೆದಂತೆ ನಿರಂಜನರ ಅನುವಾದದ ಮ್ಯಾಕ್ಸಿಂ ಗಾರ್ಕಿಯ ತಾಯಿ, ಸಾನೆ ಗುರೂಜಿಯ ಶ್ಯಾಮನ ತಾಯಿ, ಠಾಗೋರರ ಮತ್ತು ಶರಶ್ಚಂದ್ರರ ಕಾದಂಬರಿಗಳಂತೆಯೇ, ಕೆ.ಎಮ್. ಮುನ್ಶಿ ಅವರ ಕೃಷ್ಣಾವತಾರ, ಕೃಷ್ಣಾ ಹಠೀ ಸಿಂಗ್ ಅವರ ʻವಿತ್ ನೋ ರಿಗ್ರೆಟ್ಸ್ ನʼ ಅನುವಾದ ʻನೆನಪು ಕಹಿಯಲ್ಲʼ ನನಗೆ ಬಲು ಪ್ರಿಯವಾಗಿದ್ದುವು. ಜೊತೆಗೆ ಹ್ಯಾರಿಯೆಟ್ ಬೀಚರ್ ಸ್ಟೋ ರಚಿಸಿದ ʻಅಂಕ್ಲ್ ಟಾಮ್ಸ್ ಕ್ಯಾಬಿನ್ʼ, ಚಾರ್ಲ್ಸ್ ಡಿಕ್ಕನ್ಸ್‌ನ ʻಡೇವಿಡ್ ಕಾಪರ್‌ಫೀಲ್ಡ್ʼ , ಪರ್ಲ್ ಬಕ್ ಅವರ ʻದ ಗುಡ್ ಅರ್ಥ್ʼನಂತಹ ಆಂಗ್ಲ ಭಾಷಾ ಕೃತಿಗಳೂ ನನ್ನನ್ನು ಆಕರ್ಷಿಸಿದ್ದುವು.
ರಫಿಯಾ ಮಂಜೂರುಲ್ ಅಮೀನ್ ಅವರ ಉರ್ದೂ ಮೂಲದ ಕೃತಿ ಆಲಂಪನಾವನ್ನು ಹಿಂದಿಗೆ ತಂದವರು, ಪತಿ ಮಂಜೂರುಲ್ ಅಮೀನ್ ಅವರು. ಆ ಹಿಂದೀ ಅನುವಾದದ ಭಾಷೆ ಹಾಗೂ ಸಾಹಿತ್ಯದ ಸೊಗಸಿಗೆ ಮಾರುಹೋಗಿ ಅದನ್ನು ಕನ್ನಡಕ್ಕಿಳಿಸಿದ ನನ್ನ ಪ್ರಥಮ ಪ್ರಕಟಿತ ಕೃತಿಯೇ ʻಆಲಂಪನಾʼ. ಬಳಿಕ ಮೆಚ್ಚಿ ಕೈಗೊಂಡ ಉದ್ದಾಮ ಹಿಂದೀ ಸಾಹಿತಿ ಶಿವಾನಿ ಅವರ ಹಿಂದೀ ಕಥೆಗಳ ಅನುವಾದ, ರಡ್ಯಾರ್ಡ್ ಕಿಪ್ಲಿಂಗ್ ಹಾಗೂ ಮಾರ್ಕ್ವಿಜ್‌ನ ಇಂಗ್ಲಿಷ್ ಕಥೆಗಳ ಅನುವಾದ ಪತ್ರಿಕೆಗಳಲ್ಲಿ ಪ್ರಕಟವಾದವು. ಮತ್ತೆ ನಾನು ಆಯ್ದುಕೊಂಡುದೆಲ್ಲ ಇಂಗ್ಲಿಷ್ ವಿಶ್ವಸಾಹಿತ್ಯ ಕೃತಿಗಳು. ಓದಿ ಮೆಚ್ಚಿ ನನ್ನಂತರ್ಯದಲ್ಲಿ ಸ್ಥಾಯಿಯಾಗಿಸಿಕೊಂಡಿದ್ದ ವಿಶ್ವವಿಖ್ಯಾತ ಕೃತಿಗಳವು. ಆ ಕೃತಿಗಳ ಬಗೆಗಿನ ಪ್ರೀತಿ, ಹಾಗೂ ನಾನು ಮೆಚ್ಚಿದ ಆ ಕೃತಿಗಳು ನನ್ನ ಕನ್ನಡ ಓದುಗರಿಗೂ ಓದಲು ಸಿಗುವಂತಾಗಲಿ, ಕನ್ನಡ ಸಾಹಿತ್ಯಸಿರಿ ವೃಧ್ಧಿಸಲಿ ಎಂಬ ಆಶಯವೇ ನನ್ನೀ ಅನುವಾದದ ಹಿಂದಿನ ಪ್ರೇರಣೆ.
ಡಾ. ಸಿ.ಕೆ. ವೆಂಕಟರಾಮಯ್ಯನವರ ಕಾಳಿದಾಸ ಮಹಾಕವಿ ಉದ್ಗ್ರಂಥವನ್ನು ನನ್ನ ಕಾಲೇಜ್ ದಿನಗಳಲ್ಲಿ ಓದುವಂತೆ ಸೂಚಿಸಿದವರು ನನ್ನ ವಾತ್ಸಲ್ಯಗುರು ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರು ಸಂಸ್ಕೃತದಿಂದ .ಕನ್ನಡಾವತರಣವಾದ ಈ ಕೃತಿರತ್ನದ ಉತ್ಕೃಷ್ಟ ಭಾಷಾ ಸೊಗಸೇ ನನ್ನ ಭಾಷೆಗೂ ಇನಿತಾದರೂ ಮಾಧುರ್ಯವನ್ನಿತ್ತಿರ ಬಹುದು. ಆ ಪದಗುಂಫನ, ಶಬ್ದ ಮಾಧುರ್ಯ, ಪದಲಾಲಿತ್ಯ – ಭಾಷಾ ಭಂಡಾರದ ಅನುಪಮ ಸಿರಿಯದು!.
ಕಾಳಿದಾಸನ ʻಋತುಸಂಹಾರʼದ ಸಿರಿಯನ್ನು ಮತ್ತೆ ಸ್ಮರಿಸುವಂತಾದುದು, ಮರಾಠಿ ಭಾಷೆಯ ಶ್ರೇಷ್ಠ ಸಾಹಿತಿ ದುರ್ಗಾ ಭಾಗವತ್ ಅವರ ʻಋತುಚಕ್ರʼ ದ ಕನ್ನಡ ಅನುವಾದವನ್ನೋದಿದಾಗ. ಮುಂಬೈಯವರೇ ಆದ ಅನುವಾದಕ ಗಣಪತಿ ಪೈ ಅವರನ್ನು ಬಲ್ಲವರಾರೂ ನನಗೆ ಈ ಮುಂಬೈಯಲ್ಲಿ ಸಿಗಲಿಲ್ಲ. ಅಂತಹ ಉತ್ತಮ ಅನುವಾದಕ ಹೀಗೆ ಅಜ್ಞಾತರಾಗಿ ಹೋದ ವಿಷಾದ ನನ್ನದು. ʻಋತುಚಕ್ರ ʼಕೈ ಸೇರಿದಾಗ ಮೂಲಕೃತಿಯನ್ನು ರಚಿಸಿದ ಉತ್ಕೃಷ್ಟ ಸಾಹಿತಿ ದುರ್ಗಾ ಭಾಗವತ್ ಅವರೂ ಇಲ್ಲವಾಗಿದ್ದರು.
ಲಾರಾ ಇಂಗಲ್ಸ್ ವೈಲ್ಡರ್ ಬರೆದ ʻಅ ಲಿಟ್‌ಲ್ ಹೌಸ್ ಇನ್ ದ ಬಿಗ್ ವುಡ್ಸ್ʼ ಸರಣಿಯನ್ನು ʻದೊಡ್ಡ ಕಾಡಿನಲ್ಲಿ ಪುಟ್ಟ ಮನೆʼ ಎಂಬ ಶೀರ್ಷಿಕೆಯಲ್ಲಿ ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದವರು, ಬೆಂಗಳೂರಿನ ಎಸ್ ಅನಂತನಾರಾಯಣ ಅವರು. ಪ್ರತಿ ಮನೆಯಲ್ಲೂ, ಗ್ರಂಥಾಲಯದಲ್ಲೂ ಇರಲೇ ಬೇಕಾದ ಒಂಬತ್ತು ಭಾಗಗಳ ಕೃತಿಯಿದು. ಅಮೆರಿಕಾದ ಕಾಡಿನಿಂದ ನಾಡಿನತ್ತ ವಲಸೆ ಬಂದು, ಎಲ್ಲ ಪ್ರತಿಕೂಲ ಪ್ರಕೃತಿ ವೈಪರೀತ್ಯದಲ್ಲೂ ಮತ್ತೆ ಮತ್ತೆ ಕೃಷಿ, ವಿದ್ಯೆ, ಉದ್ಯಮವನ್ನರಸಿ ನೆಲೆಯಾದ ಚಿಕ್ಕ ಕುಟುಂಬದ ಪುಟ್ಟ ಬಾಲೆ ಲಾರಾಳ ಕಥೆಯದು!
ʻಗಾನ್ ವಿತ್ ದ ವಿಂಡ್ʼ ನಂತಹ ನನ್ನ ಆಂಗ್ಲ ಭಾಷಾ ಮೂಲದ ಕೃತಿಗಳ ಬಗ್ಗೆ, ಪರಕೀಯ ಜನಾಂಗ, ಪರ ಪ್ರದೇಶದ ಕಥನ ಕನ್ನಡದ ಓದಿಗೆ ಹೇಗೆ ಹೊಂದುವುದೆಂದು ಕೇಳಿದವರಿದ್ದರು. ಪರ ಪ್ರದೇಶವಿರಲಿ, ಸ್ವದೇಶವಿರಲಿ, ಜನರ ಸ್ವಭಾವ ಎಲ್ಲೆಡೆ ಒಂದೇ ಆಗಿರುತ್ತದೆ. ನಮ್ಮಂತೇ ಪ್ರೀತಿ, ದ್ವೇಷ, ಕರುಣೆ, ಕ್ರೋಧ, ಮದ, ಮತ್ಸರವಿರುವ ಜನರು. ವಿಭಿನ್ನ ಪ್ರದೇಶದ ವಿಭಿನ್ನ ಜನರು, ಅವರ ಸಂಸ್ಕೃತಿ, ಅಲ್ಲಿನ ಪ್ರಕೃತಿ, ಪರಿಸರ, ಜನರ ನಡೆನುಡಿ, ಆಗುಹೋಗುಗಳು, ಪ್ರೀತಿ, ಪ್ರೇಮ, ವಿರಹ, ಮಿಲನ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು, ಯುದ್ಧ, ಪತನ, ಪುನರುಜ್ಜೀವನ – ನಮ್ಮ ಅರಿವನ್ನು ವಿಕಸಿಸುವಂತಹ ಜ್ಞಾನದಾಗರ ಪರಭಾಷಾ ಪುಸ್ತಕಗಳು!.
ಕೃತಿಯೊಂದರ ಅನುಸೃಷ್ಟಿ- ಅದೊಂದು ಕಲೆ. ಅನುವಾದದ ಭಾಷೆ ಅದೊಂದು ಅನುವಾದವೇ ಅಲ್ಲವೇನೋ, ಸಂಪೂರ್ಣ ಕನ್ನಡದ್ದೇ ಕೃತಿಯೇನೋ ಎಂಬಂತಿರುವುದೇ ಈ ಅನುಸೃಷ್ಟಿಯ ಸಾಫಲ್ಯದ ಗುರುತು. ಡಾ,ಜಿ.ಎಸ್.ಶಿವರುದ್ರಪ್ಪನವರು ನನ್ನ ʻಗಾನ್ ವಿತ್ ದ ವಿಂಡ್ʼ ಅನುವಾದವನ್ನೋದಿ ಮೆಚ್ಚಿ ಏಈ ಮಾತು ಬರೆದಾಗ ಸಾರ್ತಕ್ಯದ ಭಾವದಿಂದ ಪುನೀತಳಾಗಿದ್ದೆ. ನನ್ನ ʻಜೇನ್ ಏರ್ʼ ಅನುವಾದ ಕೃತಿಗೆ ಬೆನ್ನುಡಿ ಬರೆಯುತ್ತಾ, ಜಯಂತ್ ಕಾಯ್ಕಿಣಿ ಅವರು, “ಮೂಲಕೃತಿಯ ಮೇಲಿನ ಅವರ ತೀವ್ರವಾದ ಪ್ರೀತಿ ಹಾಗೂ ಕೃತಿಯೊಂದಿಗಿನ ತಾದಾತ್ಮ್ಯವೇ ಶ್ಯಾಮಲಅ ಅವರ ಅನುವಾದದ ಜೀವಾಳವಾಗಿದೆ”, ಎಂದು ಬರೆದಾಗ, ಧನ್ಯತಾ ಭಾವ ಹೃದಯವನ್ನು ತುಂಬಿತ್ತು. ಅನುವಾದವು ಯಾವಾಗಲೂ ಮೂಲಕೃತಿಗೆ ನಿಷ್ಠವಾಗಿದ್ದು, ಅದರ ಸಾರಸರ್ವಸ್ವಕ್ಕೆ, ಸೌಂದರ್ಯಕ್ಕೆ, ಶ್ರೇಷ್ಟತೆಗೆ ಕುಂದು ಬರದಂತಿರಬೇಕು. ಮೂಲಕ್ಕೆ ಸಂಪೂರ್ಣ ನ್ಯಾಯವನ್ನು ಒದಗಿಸಿರಬೇಕು.
ಗಾನ್ ವಿತ್ ದ ವಿಂಡ್‌ನ ಕಥಾನಾಯಕಿ ಸ್ಕಾರ್ಲೆಟ್, ಇಚ್ಛೆ ಹಾಗೂ ಪ್ರಾಪ್ತಿ ಎರಡು ಭಿನ್ನ ವಿಷಯಗಳೆಂಬುದನ್ನೇ ಅರಿಯದ, ಬಯಸಿದ್ದನ್ನು ಪಡೆದೇ ತೀರುವ ಛಲದ ಹದಿಹರೆಯದ, ಮನಸ್ವಿನಿ ಚೆಲುವೆ. ಸತ್ಯ, ನ್ಯಾಯ, ಪ್ರೀತಿ, ಕರುಣೆ, ಸೇವಾನಿಷ್ಠೆಯ ತಾಯಿ ಎಲೆನ್‌ಳಲ್ಲಿ ಮಾತೆ ಮೇರಿಯನ್ನು ಕಂಡರೂ, ಅವಳಂತಾಗ ಬಯಸಿದರೂ, ಹಾಗಿರುವುದರಿಂದ ಜೀವನದಲ್ಲಿ ಎಲ್ಲ ಮೋಜನ್ನೂ ಕಳಕೊಳ್ಳ ಬೇಕಾಗುವುದೆಂದು, ಮುಂದೆಂದಾದರೂ ಪ್ರಾಯ ಸಂದಾಗ ತಾಯಿಯಂತೆ ಒಳ್ಳೆಯವಳಾಗುವೆನೆಂದು ಅಂದುಕೊಳ್ಳುವವಳು. ಹಿಡಿಮಣ್ಣನ್ನೆತ್ತಿ ಹಿಡಿದು ಮತ್ತೆಂದೂ ಹಸಿದಿರಲಾರೆನೆಂದು ಶಪಥ ಗೈದವಳು. ಸೋಲು ಕಣ್ಣಲ್ಲೇ ಕಣ್ಣಿಟ್ಟು ದಿಟ್ಟಿಸಿದರೂ ಸೋಲದ ತನ್ನ ಜನರ ಛಲದಿಂದ, ಮತ್ತೆ ತಲೆಯೆತ್ತಿ ನಿಂತವಳು. ಇತ್ತ ಜೇನ್ ಏರ್‌ನ ಕಥಾನಾಯಕಿ ಜೇನ್, ಬುಧ್ಧಿ – ಭಾವಗಳ ಸಂಘರ್ಷದಲ್ಲಿ ಬುಧ್ಧಿಯೇ ಮೇಲ್ಗೈ ಆಗುವ, ಅಸೀಮ ಆತ್ಮಬಲದ, ಪ್ರೀತಿ, ಬಾಂಧವ್ಯಕ್ಕಾಗಿ ತುಡಿದರೂ, ಹೃದಯದ ಕರೆಗೆ ಓಗೊಡದೆ .ಕಾದಿದ್ದ ಪ್ರೇಮಲೋಕವನ್ನು ತೊರೆದು, ತಾನು ಅತಿಯಾಗಿ ಪ್ರೀತಿಸುವ ಜೀವಕ್ಕೆ ಕೆಡುಕಿನ ಸಾಧನವಾಗುವ ಭಯದಿಂದ ತಾನೇ ದೂರವಾದವಳು. ಈ ವಿಭಿನ್ನ ವ್ಯಕ್ತಿತ್ವದ ಕಥಾನಾಯಕಿಯರಿಬ್ಬರನ್ನೂ ನಾನು ನನ್ನವರಾಗಿಸಿಕೊಂಡು ಹೃದಯದಲ್ಲಿ ಕಾಪಿಡಲು ಕಾರಣ, ಲೇಖಕಿಯರಾದ ಮಾರ್ಗರೆಟ್ ಮಿಶೆಲ್ ಹಾಗೂ ಶಾಲೆಟ್ ಬ್ರಾಂಟೆ ಚಿತ್ರಿಸಿದ ಅತ್ಯಂತ ಪ್ರಭಾವಪೂರ್ಣ ಪಾತ್ರಚಿತ್ರಣ; ಹೆಣೆದ ಅಮೋಘ, ಚಿತ್ತಾಕರ್ಷಕ ಸಂಭಾಷಣೆ. ಸಾರ್ವಕಾಲಿಕವಾಗುಳಿವ ಅನನ್ಯ ಕಥಾನಕ! ಮೇರಿ ಶೆಲ್ಲಿ ಹಾಗೂ ಎಮಿಲಿ ಬ್ರಾಂಟೆಯರ ʻಫ್ರಾಂಕೆನ್‌ಸ್ಟೈನ್ʼ ಹಾಗೂ ʻವದರಿಂಗ್ ಹೈಟ್ಸ್ʼನಂತಹ ಗಾಥಿಕ್ ಶೈಲಿಯ ಕೃತಿಗಳ ನನ್ನ ಅನುವಾದಕ್ಕೂ ಇದೇ ಮಾತು ಅನ್ವಯಿಸುತ್ತದೆ.
ಅನುವಾದ ಅಕಡೆಮಿ ನನಗೊಪ್ಪಿಸಿದ ʻದ ಸ್ಟೋರಿ ಆಫ್ ಸಿವಿಲಿಸೇಶನ್ʼ ಹಾಗೂ ʻಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳುʼ ಉದ್ಹ್ರಂಥಗಳ ಭಾಗಶಃ ಅನುವಾದ ಕಾರ್ಯವೂ ನನ್ನನ್ನು ಬೆಳೆಸಿದೆ. ಅಂತೆಯೇ ʻಅಸಾಮಾನ್ಯ ಶ್ರೀಸಾಮಾನ್ಯ ಎಂ.ಆರ್. ಪೈʼ ಆಗಲೀ, ಮಂಜೇಶ್ವರದ ಪುಟ್ಟ ಬಾಲೆ ಅಮ್ಮಣುವಿನ ಕಣ್ಗಳು ಕಂಡ ಅಂದಿನ ಮಂಗಳೂರು, ಮಂಜೇಶ್ವರದ ಸಾರಸ್ವತ ಕೂಡುಕುಟುಂಬದ ಚಿತ್ರಣವುಳ್ಳ, ʻಬಾಲ್ಯಕಾಲ ಮಾಯಾಜಾಲʼವಾಗಲೀ ನನ್ನ ಓದು, ಬರಹದ ಹಸಿವನ್ನು ಹೆಚ್ಚಿಸುತ್ತಲೇ ಬಂದಿವೆ.
ಕೆಲ ಸಣ್ಣ ಕಥೆಗಳನ್ನು ಹಾಗೂ ಅಮೆರಿಕನ್ನಡದ ನಾಗಲಕ್ಷ್ಮಿ ಹರಿಹರೇಶ್ವರ ಅವರ ಆತ್ಮಕಥನ ʻಯಾತ್ರಿʼಯನ್ನೂ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ ಸಂತಸವೂ ನನ್ನದು.
ಕುವೆಂಪು ಅವರ ಮಹತ್ಕೃತಿ ʻಮಲೆಗಳಲ್ಲಿ ಮದುಮಗಳುʼ, ವನಮಾಲಾ ವಿಶ್ವನಾಥ್ ಅವರಿಂದ ಇಂಗ್ಲಿಷ್‌ಗೆ ಅನುವಾದಿಸಲ್ಪಟ್ಟು, ʻಬ್ರೈಡ್ ಇನ್ ದ ಹಿಲ್ಸ್ʼ ಎಂಬ ಶೀರ್ಷಿಕೆಯಲ್ಲಿ ಪೆಂಗ್ವಿನ್ ಬುಕ್ಸ್‌ನಿಂದ ಪ್ರಕಟಿಸಲ್ಪಟ್ಟಿದೆ.
ಕಾಳಿದಾಸ ಮಹಾಕವಿಯ ʻಶಾಕುಂತಲʼ ನಾಟಕವು ೧೮೭೦ ರಲ್ಲಿ ಚುರುಮುರಿ ಶೇ಼ಷಗಿರಿರಾಯರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟು, ಮುಂಬಯಿ ಎಜುಕೇಶನಲ್ ಸೊಸೈಟಿಯಿಂದ ಪ್ರಕಟಿಸಲ್ಪಟ್ಟು, ಶಾಕುಂತಲದ ಪ್ರಥಮ ಕನ್ನಡಾನುವಾದವೆಂದು ಗಣಿಸಲ್ಪಟ್ಟಿತು. ತದನಂತರ ಬಂದುದೇ ಮೈಸೂರು ಆಸ್ಥಾನ ಕವಿ ಬಸವಪ್ಪ ಶಾಸ್ತ್ರಿಗಳ ಅನುಪಮ ಅನುವಾದ, ʻಅಭಿಜ್ಞಾನ ಶಾಕುಂತಲʼ.
ಮುಂಬೈಯ ನಮ್ಮ ಕನ್ನಡದ ಮುಂದಾಳು ವಿದ್ವಾನ್ ರಾಮಚಂದ್ರ ಉಚ್ಚಿಲರು ಎಮ್.ವಿ. ಕಾಮತ್ ಅವರ ʻಪುನರಪಿ ಜನನಂʼ ಕಾದಂಬರಿಯನ್ನು ಸೊಗಸಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ್ದರು. ನಮ್ಮ ಸೃಜನಾ ಬಳಗದ ಅಕ್ಷತಾ ದೇಶಪಾಂಡೆ ಹಾಗೂ ಜಿ.ಪಿ.ಕುಸುಮ ಅವರು ಮರಾಠಿಯಿಂದ ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಶಿಮುಂಜೆ ಪೆರಾರಿ ಅವರು ಗುಜರಾಥಿಯಿಂದ, ರತ್ನಾಕರ ಶೆಟ್ಟಿ ಹಾಗೂ ಮಮತಾ ರಾವ್ ಅವರು ಮರಾಠಿಯಂದ ಕನ್ನಡಾನುವಾದ ಕೈಗೊಂಡಿದ್ದಾರೆ. ಅಲಮೇಲು ಅಯ್ಯರ್ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಅದ ಕೃಷಿ ಕೈಗೊಂಡವರು. ತೀರ ಇತ್ತೀಚೆಗೆ ನಮ್ಮ ಕಥನ ಶಿಲ್ಪಿ ಮಿತ್ರಾ ವೆಂಕಟ್ರಾಜ್ ಅಮಿತಾವ್ ಘೋಷ್ ಅವರ ʻಇನ್ ಅನ್ ಆಂಟಿಕ್ ಲ್ಯಾಂಡ್ʼ ಕೃತಿಯನ್ನು ʻಒಂದು ಪುರಾತನ ನೆಲದಲ್ಲಿʼ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಕುಂದಾಪುರದ ಪಾರ್ವತಿ ಐತಾಳ್, ʻದ ಗುಡ್ ಅರ್ಥ್ʼ ಕೃತಿಯನ್ನು ಇಂಗ್ಲಿಷ್‌ನಿಂದ ಅನುವಾದಿಸಿದಂತೇ, ಮಲೆಯಾಳದ ಅನೇಕ ಉತ್ತಮ ಕೃತಿಗಳನ್ನು ಕನ್ನಡದಲ್ಲಿ ಮರುಸೃಷ್ಟಿಸುವಲ್ಲಿ, ಸಫಲರಾಗಿದ್ದಾರೆ. ಬೆಂಗಳೂರಿನ ಎಂ.ಆರ್.ಕಮಲಾ ಅವರು, ದೆಹಲಿಯ ಪ್ರಸಾದ್ ನಾಯಕ್ ಅವರು ಆಫ್ರಿಕನ್ ಲೇಖಕರ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಡಾ. ಸಿಧ್ಧಲಿಂಗ ಪಟ್ಟಣಶೆಟ್ಟಿ, ಎನ್.ಎಮ್. ಭಟ್, ಮೈತ್ರೇಯಿ ಕರ್ಣೂರ್, ಓ ಎಲ್. ನಾಗಭೂಷಣ ಸ್ವಾಮಿ, ಎಲ್. ಸಿ. ಸುಮಿತ್ರಾ, ನಲ್ಲ ತಂಬಿ, ಸಂಧ್ಯಾರಾಣಿ, ರೇಣುಕಾ ನಿಡಗುಂದಿ, ರಾಹು, ರಾಜಾರಾಮ್ ತಲ್ಲೂರು, ರಾಜಣ್ಣ ತಗ್ಗಿ, ಡಾ. ವಿಜಯಾ ಸುಬ್ಬರಾಜ್, ಕೆ. ಗಂಗಾಧರಯ್ಯ, ಜಯಪ್ರಕಾಶ್ ನಾರಾಯಣ್, ದಾದಾಪೀರ್ ಜೈಮನ್ ಹೀಗೆ ಉತ್ತಮ ಅನುವಾದಕರ ಹೆಸರುಗಳ ಪಟ್ಟಿ ಇನ್ನೂ ಸಾಕಷ್ಟು ದೊಡ್ಡದಿದೆ. ತಾಯಿ ಸರಸ್ವತಿಯ ಉದ್ಯಾನದಲ್ಲಿ ಕೃತಿಗಳ ಆದಾನ, ಪ್ರದಾನ ಭರದಿಂದ ನಡೆದಿದೆ.
ಅನ್ಯ ಭಾಷೆಯ ಕೃತಿಯೊಂದನ್ನು ಓದಿ ಮೆಚ್ಚಿ ಅನುಭವಿಸುವ ಸಂತಸದಂತೇ ಆ ಕೃತಿಯನ್ನು ನಮ್ಮ ಚೆಲುಕನ್ನಡ ನುಡಿಯಲ್ಲಿ ಅನುಸೃಷ್ಟಿಸಿ ಕನ್ನಡ ಓದುಗರೊಡನೆ ಆ ಸಿರಿಯನ್ನು ಹಂಚಿಕೊಳ್ಳುವ ಸಂತೃಪ್ತಿ, ಎಣೆಯಿಲ್ಲದ್ದು. ಈ ಅನುಸೃಷ್ಟಿಗೆ ಓದುಗರಿಂದ ಬರುವ ಪ್ರತಿಸ್ಪಂದನ ಕೊಡುವ ಸಾರ್ಥಕ್ಯದ ಭಾವ ಯಾವುದೇ ಸಿರಿ ಸಂಪತ್ತಿಗೂ ಮಿಗಿಲಾದದ್ದು.
ಪ್ರಕಟಣೆಯ ಹಾದಿಯಲ್ಲಿರುವ ನನ್ನ ಸುದೀರ್ಘ ಹೊಸ ಅನುವಾದ ಕೃತಿ, ʻʻದ ಫಾರ್ ಪೆವಿಲಿಯನ್ಸ್ʼ, ಅಪರಿಚಿತರನ್ನು ಪರಕೀಯರೆಂದು ಗಣಿಸದೆ ನಮ್ಮವರೆಂದೇ ಸ್ವೀಕರಿಸುವ ಕಲ್ಪನೆಯ ಸಾಮ್ರಾಜ್ಯವನ್ನೂ, ತಾಯಿ ಸೀತೆ ತಮ್ಮ ಮನೆಯಿಹುದೆಂದು ತೋರಿದ ಹಿಮಾಲಯ ಶಿಖರದ ತಾರಾಕಲಶವನ್ನೂ ಕಥಾನಾಯಕ ಆಶ್, ತನ್ನ ಪ್ರಿಯತಮೆ ಜೂಲಿಯೊಡನೆ ಅರಸುತ್ತಾ ಸಾಗುವಲ್ಲಿ ಕೊನೆಗೊಳ್ಳುತ್ತದೆ.
ನಮ್ಮವರು, ಪರರು ಎಂಬ ಭೇದಭಾವಗಳೆಲ್ಲ ಅಳಿದು, ಸುವಿಚಾರ ಜಲ ಹರಿದು, ಮಾನವೀಯ ಮೌಲ್ಯಗಳು ವೃಧ್ಧಿಸುವ ಸಾಹಿತ್ಯದ ಬೆಳಕು ನಮ್ಮೆಲ್ಲರ ಬಾಳನ್ನು ಬೆಳಗಲಿ ಎಂಬುದೇ ಹೃದಯದ ಹಾರೈಕೆ.






0 Comments