ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಬ್ಬಣ್ಣ ಒಬ್ಬ ಭಾವಜೀವಿ…

ಕೃಷ್ಣ ಮಾಸಡಿ

ಸುಬ್ರಹ್ಮಣ್ಯ ಅಥವಾ ಶಿವಮೊಗ್ಗ ಸುಬ್ಬಣ್ಣ ನನಗೆ ದಶಕಗಳಿಂದ ಗೊತ್ತಿದ್ದ ಹಿರಿಯರು. ಲಾಯರ್ ಕೆ ಮಾಡುತ್ತಲೇ ಲೂನಾದ ಮೇಲೆ ಕೈ ಆಡಿಸುತ್ತಾ ತಮ್ಮ ಸಂಗೀತವನ್ನು ಶಿವಮೊಗ್ಗದ ದುರ್ಗಿಗುಡಿ, ನೆಹರು ರಸ್ತೆ ಮತ್ತು ಆಗ ಇದ್ದ ಗೋಪಿ ಹೋಟೆಲ್ ಗಳಲ್ಲಿ ಕಂಡಿದ್ದೇನೆ ಮತ್ತು ಅನುಭವಿಸಿದ್ದೇನೆ.

ಆನಂದಮಯ – ಹಾಡನ್ನು ಅವರೆಷ್ಟು ತನ್ಮಯರಾಗಿ ಕಣ್ಣುಮುಚ್ಚಿಕೊಂಡು ಹಾಡುತ್ತಿದ್ದರೆಂದರೆ… ಒಹ್ ಅದೊಂದು ಅನುಭವ. ಲಂಕೇಶ್ ಪತ್ರಿಕೆ ಆರಂಭದ ಒಂದು ದಿನ ಮೇಷ್ಟ್ರು ನಾನು ಗೋವಿಂದಪ್ಪ ರಸ್ತೆಯ ಮನೆ ಕಂ ಕಛೇರಿಯ ಮೆಟ್ಟಿಲು ಇಳಿದು ಹೊರಗೆ ಹೊರಡುತ್ತಿರುವಾಗ ಸುಬ್ಬಣ್ಣ ಬರುವುದಕ್ಕೂ ಸರಿಯಾಯ್ತು.

ಏನ್ ಸುಬ್ಬಣ್ಣ ಕುವೆಂಪು ಎದುರಿಗೆ ಹಾಡಿದರಂತೆ.. ಅವರೇ ಎಲ್ಲಾ ಕಡೆ ಹೇಳ್ಕೋತಾ ಇದಾರೆ ಎಂದು ಲಂಕೇಶ್ ಹೇಳಿದ್ದೇ ತಡ ಸುಬ್ಬಣ್ಣ ಸಣ್ಣಹುಡಗರ ತರಹ ಬುರುಬರು ಹಿಗ್ಗಿದರು. ನಾವು ಹಾಡು ಕೇಳಬೇಕಿತ್ತಲ್ಲಾ.. ಅನ್ನುತ್ತಿದ್ದಂತೆ ಗೇಟ್ ಹೊರಗಡೆಯಿಂದಲೇ ” ಸೂರ್ಯೋದಯ ಚಂದ್ರೋದಯ ಎನ್ನುತ್ತಾ ಶುರು ಮಾಡಿಯೇ ಬಿಟ್ಟರು. ನಾವು ಹೊರಗೆ ಹೋಗುವುದು ಬಿಟ್ಟು ಸುಬ್ಬಣ್ಣ ನ ಸಂಗೀತ ಕೇಳತ್ತಾ ಮತ್ತೆ ಮೆಟ್ಟಿಲು ಹತ್ತಿದೆವು.
ಸುಬ್ಬಣ್ಣ ಒಬ್ಬ ಭಾವಜೀವಿ.

ಕುವೆಂಪು ಸುಬ್ಬಣ್ಣಗೆ ಬರೆದ ಅಂಚೆಪತ್ರವನ್ನು ತೋರಿಸುತ್ತಾ ನನಗಿದು ಭಾರತರತ್ನ ಪಡೆದಿದ್ದಕ್ಕಿಂತಲೂ ಹೆಚ್ಚು ಎಂದು ಸಂಭ್ರಮಿಸುತ್ತಿದ್ದರು.

ನಾನು ಸದಾ ಅವರಿಗೆ ” ಸಾರ್ ಹೀಗೆ ಎಲ್ಲಂದರಲ್ಲಿ ಕಣ್ಣುಮುಚ್ಚಿ ಹಾಡಬೇಡಿ” ಎಂದು ಕಿಚಾಯುಸುತ್ತಿದ್ದೆ. ಈಚೆಗೆ ವಿಧ್ಯಾರ್ಥಿ ಭವನದಲ್ಲಿ ಸಿಕ್ಕು ಜೊತೆಗೆ ತಿಂಡಿ ತಿನ್ನುವಾಗ ಮತ್ತೆ ನಾನು ಎಲ್ಲೆಂದರಲ್ಲಿ ಕಣ್ಣುಮುಚ್ಚಿ ಹಾಡುವ ಅವರ ಗುಣ ಕೀಟಲೆ ಮಾಡಿದಾಗ ನಗುತ್ತಾ – ಬೇಕಿದ್ರೆ ಇಲ್ಲಿಯೇ ಹಾಡಿಬಿಡ್ತೇನೆ ಎಂದು ನಗಿಸಿದ್ದರು.

ಕುವೆಂಪು ಅವರಂತೆ ಜಿಎಸ್ಎಸ್ ಅವರ ಕವನಗಳಿಗೆ ಸಂಗೀತ ಕೊಟ್ಟ ಸುಬ್ಬಣ್ಣ ಅದೆಷ್ಟು ಚಂದ ಹಾಡುತ್ತಿದ್ದರು. ನಾನು ಜಿಎಸ್ಎಸ್ ಅವರ ಸಾಕ್ಷ್ಯಚಿತ್ರ ಮಾಡುತ್ತಿದ್ದಾಗ ಒಮ್ಮೆ ನಾವು ಮೂವರು ಕುಳಿತು ದಿನವೆಲ್ಲಾ ಕಳೆದ ದಿನಗಳು ನೆನಪಾಗುತ್ತವೆ. ಜಿಎಸ್ಎಸ್ ಅವರ ಕವನ — ಯಾವ ಹಾಡ ಹಾಡಲಿ? ಯಾವ ಹಾಡಿನಿಂದ.. ಎನ್ನುವ ಕವನ ಸುಬ್ಬಣ್ಣ ರ ಧ್ವನಿ ಯಲ್ಲಿ ಕೇಳಿ ನಾನು ಮೈ ಮೆರೆಯುತ್ತಿದ್ದ ದು ನೆನಪುಗಳಾಗುತ್ತಿವೆ.
ಸುಬ್ಬಣ್ಣ ನಿಮಗೆ ನನ್ನ ನಮನ.

‍ಲೇಖಕರು Admin

12 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading