ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರ ಕವಿ ಬೆಂಜಮಿನ್ ಮೊಲಾಯಿಸ್ ನನ್ನು ವೃಥಾ ಆರೋಪ ಹೊರಿಸಿ ಗಲ್ಲಿಗೇರಿಸಿತು ಈ ವಿಷಯ ಮತ್ತೆ ನೆನಪಿಗೆ ಬಂದದ್ದು ಫೇಸ್ ಬುಕ್ ನಲ್ಲಿ ಮೇಟಿ ಕೊಟ್ರಪ್ಪ ಅವರ ಫೋಟೋವನ್ನು ಪಂಪಾರೆದ್ದಿ ಹರಳಹಳ್ಳಿ ಅವರು ಪ್ರಕಟಿಸಿದಾಗ. ಅವರು ಆಗಲೇ ಬೆಂಜಮಿನ್ ಕವಿತೆ ಬರೆದಿದ್ದರು. ಅವರು ಕವಿತೆ ಬರೆದಿದ್ದರು ಎಂದು ಅದೇ ಪುಟದಲ್ಲಿ ನಲ್ಲಿ ನಾನು ನೆನಪಿಸಿದೆ.
ಇದು ಸುಧಾ ಚಿದಾನಂದ ಗೌಡ ಅವರು ತಮ್ಮ ಕಡತ ತೆಗೆಯಲು. ಕಾರಣವಾಯಿತು. ಬೆಂಜಮಿನ್ ಮೊಲಾಯಿಸ್ ಬಗ್ಗೆ ನಾವೆಲ್ಲರೂ ಕವಿತೆ ಬರೆಯುತ್ತಿರುವ ಹೊತ್ತಿನಲ್ಲಿ ಸುಧಾ ಕಥೆ ಬರೆದಿದ್ದರು. ಅದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಗ ಅದನ್ನೆಲ್ಲಾ ನೆನಪಿಸಿಕೊಂಡು ಅವರು ಈ ಕಥೆಯನ್ನು ಮತ್ತೆ ಪ್ರಕಟಣೆಗೆ ಕಳಿಸಿಕೊಟ್ಟಿದ್ದಾರೆ. ಅದು ಇಲ್ಲಿದೆ.
ಸುಧಾ ಅವರಂತೆ ನಾನೂ ನನ್ನ ಕಡತ ಹರಡಿಕೊಂಡು ಕುಳಿತಿದ್ದೇನೆ. ಬೆಂಜಮಿನ್ ಮೊಲಾಯಿಸ್ ಬಗ್ಗೆ ನಾನು ಬರೆದ ಕವಿತೆಯೂ ಸಿಕ್ಕಿದೆ. ‘ದೋಣಿಗಳು ತೀರಗಳ ಸೇರಬೇಕು’ ಎನ್ನುವ ಈ ಕವನ ಚಂಪಾ ಅವರು ಒಂದು ಕಾಲಕ್ಕೆ ಮಾಡಿದ ವಾರಪತ್ರಿಕೆ ಪ್ರಯೋಗದ ಮೊದಲ ಸಂಚಿಕೆಯಲ್ಲಿಯೇ ಪ್ರಕಟವಾಗಿತ್ತು. ಅದನ್ನು ಸಧ್ಯದಲ್ಲೇ ಪ್ರಕಟಿಸುತ್ತೇನೆ
ಕೊಲೆ
ಸುಧಾ ಚಿದಾನಂದಗೌಡ

1
ಕ್ರಿ.ಶ.1982ನೇ ಇಸ್ವಿ, ಮಳೆಗಾಲ
ಮೇಮ್ಲೋದಿ ಗ್ರಾಮ
ಪ್ರಿಟೋರಿಯ (ದ.ಆಫ್ರಿಕಾ)
ಈ ದಿನ ಕವಿಗೋಷ್ಠಿ ಏಪರ್ಾಡಾಗಿದೆ.
ಮೇಮ್ಲೋದಿಯ ಬುದ್ಧಿಜೀವಿಗಳಿಗೆ ಸಡಗರ. ಜೊತೆಗೆ ಆತಂಕ. ಕೆಲವರಲ್ಲಿ ಭಯ ಕೂಡ. ಬೆಳಿಗ್ಗೆಯಿಂದಲೇ ಬಿಳಿಯ ಪೊಲೀಸರ ಓಡಾಟ ಹೆಚ್ಚಾಗಿದ್ದುದನ್ನು ವೇದಿಕೆಯ ಸುತ್ತಮುತ್ತ ಇದ್ದವರು ಗಮನಿಸಿದ್ದರು. ಸ್ವಲ್ಪ ಹೆದರಿದ್ದರೂ ಯಾರೂ ತೋರಿಸಿಕೊಂಡಿರಲಿಲ್ಲ. ಹೆದರುವುದು ಹೇಡಿಗಳ ಕೆಲಸ ಎಂದು ಜೈಲೊಳಗಿಂದಲೇ ಗಜರ್ಿಸಿದ್ದರಲ್ಲ ಮಂಡೇಲಾ! ಅದು ಎಲ್ಲರ ಮನಸ್ಸಿನಲ್ಲಿ, ಗಟ್ಟಿ ಹಿಡಿದು ಕೂತಿತ್ತು. ಪೊಲೀಸರನ್ನು ಅಲಕ್ಷಿಸಿ ಕವಿ ಗೋಷ್ಠಿಯ ಏಪರ್ಾಡುಗಳು ಮುಂದುವರಿದಿದ್ದವು. ಯುವಕರು ಉದ್ವಗ್ನತೆಯಿಂದ ಮಾತಾಡುತ್ತಿದ್ದರು.
ಅವರು…. ಬರ್ತಾರೆ ತಾನೇ? ಕಿರಿಯನೊಬ್ಬನ ಪ್ರಶ್ನೆ.
ಯಾರಯ್ಯ? ಹಿರಿಯನ ಸಿಡಿಮಿಡಿಯ ಮರುಪ್ರಶ್ನೆ.
ಅದೇ…. ಅವರು ಬೆಂಜಮಿನ್….. ಉಗುಳು ನುಂಗಿದ ಕಿರಿಯ.
ಬೆಂಜಮಿನ್ ಮೊಲಾಯಿಸ್….? ಖಂಡಿತ ಬರ್ತಾರೆ. ತಪ್ಪಿಸೋದಿಲ್ಲ
ಆ ಮಾತು ಹೇಳುವಾಗ ಹಿರಿಯನ ಮುಖದಲ್ಲಿ ಪ್ರಸನ್ನತೆ, ಹೆಮ್ಮೆ.
ಅನುಮಾನವೇ ಇಟ್ಟುಕೋಬೇಡಯ್ಯಾ ಬೆಂಜಮಿನ್ ಬಂದೇ ಬರ್ತಾರೆ. ಕವನ ಬರೆಯುವ ದಿಟ್ಟನಿಗೆ ಇವರೆಲ್ಲ ಲೆಕ್ಕವಾ?
ಎಂದು ಮಾತು ಮುಗಿಸಿ, ಬಿಳಿಯ ಪೊಲೀಸರತ್ತ ತಿರಸ್ಕಾರದ ನೋಟ ಹರಿಸಿದ ಹಿರಿಯ. ವೇದಿಕೆಯ ಬಳಿಗೆ ಹೆಜ್ಜೆ ಹಾ…ಕುವಷ್ಟರಲ್ಲಿ ಯಾರೋ ಮೆಲ್ಲಗೆ ಕೂಗಿದರು
ಬಂದ್ರೂ…. ಬಂದ್ರೂ…
ಸುಮಾರು ಸಾವಿರಕ್ಕಿಂತ ಹೆಚ್ಚಿನ ಜನ ಸೇರಿದ್ದ ಸಭೆ ನಿಶ್ಯಬ್ಧವಾಗಿ ಎದ್ದು ನಿಂತಿತ್ತು. ಮೆಲುದನಿಯಲ್ಲಿ ಪಕ್ಕದಲ್ಲಿದ್ದವರೊಡನೆ ಸುಭಾಷಿಸುತ್ತ ನಡೆದುಬಂದ ಬೆಂಜಮಿನ್ ಮೊಲಾಯಿಸ್ ಅತ್ತಿತ್ತ ನೋಡದೆ ವೇದಿಕೆಯೇರಿ ಸುಮ್ಮನೆ ನಿಂತ.
ಸಮೂಹ ಗೀತೆಯಿಲ್ಲ. ಸ್ವಾಗತವಿಲ್ಲ, ನಿರೂಪಣೆಯಿಲ್ಲ. ಪರಿಚಯ ಭಾಷಣವೂ ಇಲ್ಲ. ಆದರೆ ಎಲ್ಲರಿಗೆ ಗೊತ್ತಾಗಿತ್ತು ಆತನೇ ಬೆಂಜಮಿನ್ ಮೊಲಾಯಿಸ್. ತಮ್ಮಂತೆಯೇ ಅಪ್ಪಟ ಕಪ್ಪುವರ್ಣದ ಗುಂಗುರು ಕೂದಲು, ದಪ್ಪ ತುಟಿ, ಸಣ್ಣ ಕಣ್ಣುಗಳ, ಸರಳವಾದ ಸೂಟ್ನಲ್ಲಿದ್ದ ವ್ಯಕ್ತಿ. ಆದರೆ, ಆತನ ಸೆಟೆದ ಎದೆ, ಮಿಂಚಿನ ದೃಷ್ಟಿ, ಮುಖದಲ್ಲಿನ ಅಲಕ್ಷ್ಯ…. ಪೂತರ್ಿ ಭಿನ್ನವೆನಿಸಿದವು. ಎಲ್ಲ ಔಪಚಾರಿಕತೆಗಳನ್ನು ತೆಗೆದೊಗೆದವರಂತೆ ಬೆಂಜಮಿನ್ ಪ್ರಾಸ್ತಾವಿಕವಾಗಿ ಏನನ್ನೂ ಹೇಳದೆ ಮೌನವಾಗಿ ಜೇಬಿನಿಂದ ಕಾಗದವನ್ನು ತೆಗೆದು, ಬಿಡಿಸಿ, ಕವನ ಓದತೊಡಗಿ,
ನಾವು ಗೂಬೆಗಳಲ್ಲ.
ಕತ್ತಲ ಗುಹೆ ನಮ್ಮ ಮನೆಯಲ್ಲ.
ಮಲೆತ ನಿಂತು ನೀರು
ಸೂರ್ಯನಿಲ್ಲದ ನೆಲ ನಾವೊಲ್ಲೆವು.
ಈ ಕ್ಷಣ ಉಸಿರು ನಿಂತರೆ ಭಯವಿಲ್ಲ.
ನಮ್ಮದಾದ ನೆಲಕ್ಕೆ ರಕ್ತ ಹರಿಸುತ್ತೇವೆ.
ಒಳಗನ್ನು ಫಲಗೊಳಿಸುತ್ತೇವೆ.
ಸ್ವಚ್ಛ ಗಾಳಿ, ಬೆಳಕಿಲ್ಲದ ಪ್ರಪಂಚ
ಸ್ವಾತಂತ್ರ್ಯ ರವಿಯಿಲ್ಲದ ಆಕಾಶ
ನಾವೊಲ್ಲೆವು….
ಇನ್ನೂ ಆರಂಭವಾಗಿತ್ತಷ್ಟೇ, ಅಷ್ಟರಲ್ಲೇ ಬೂಟುಗಳ ಟಕಟಕ ಶಬ್ಧ ಕಿವಿ ಬಿರಿಯುವಂತೆ ಕೇಳಿಸಿತು. ಅತ್ತ ಲಕ್ಷ್ಯ ಕೊಡದೆ ಮುಂದುವರಿಸಿದ ಬೆಂಜಮಿನ್, ಆದರೆ ಪೊಲೀಸರಲ್ಲೊಬ್ಬ ಮೈಕನ್ನೂ ಕಾಗದವನ್ನೂ ಒಟ್ಟಿಗೆ ಕಿತ್ತುಕೊಂಡ. ಇಡೀ ಸಭೆ ದಿಗ್ಗನೆ ಎದ್ದು ನಿಂತಿತ್ತು. ಎಲ್ಲರ ಕಣ್ಣುಗಳೂ ಕೆಂಡಗಳಾದವು. ಬೆಂಜಮಿನ್ ಮೊಲಾಯಿಸ್ ಶಾಂತನಾಗಿ ಕೈಗಳೆರಡನ್ನೂ ಮೇಲೆತ್ತಿ ಸುಮ್ಮನಿರುವಂತೆ ಸೂಚಿಸಿದ. ಆನಂತರ ಏನೆಂಬಂತೆ ಪೊಲೀಸರತ್ತ ನೋಡಿದ.
‘ನಡಿ’ ಎಂದು ಒರಟಾಗಿ ನುಡಿದ ಪೊಲೀಸ್ ಮುಖ್ಯಸ್ಥ.
‘ಯಾಕೆ?’ ಎಂದ ಬೆಂಜಮಿನ್ ಅಚ್ಚರಿಯಿಂದ.
‘ಠಾಣೆಗೆ ನಡಿ.’
‘ಅದೇ…. ಯಾಕೇಂತ’?
‘ಅದನ್ನ ಅಲ್ಲೇ ಹೇಳ್ತೇವೆ.’
‘ನನ್ನನ್ನು ಅರೆಸ್ಟ್ ಮಾಡ್ತಿದೀರಾ?’
‘ಒಂದು ರೀತಿಯಲ್ಲಿ ….. ಹೌದು.’
‘ವಾರೆಂಟ್ ಇದೆಯೇ?’
‘ಅದೆಲ್ಲ ಪದ್ದತಿ ನಿಮಗೆ ಅನ್ವಯಿಸುವುದಿಲ್ಲ.’
‘ನಮಗೆ ಅಂದರೆ….. ಕರಿಯರಿಗೆ?’
‘ಸುಮ್ಮನೆ ನಡಿ. ಹೆಚ್ಚು ಪ್ರಶ್ನಿಸಬೇಡ.’
ರಟ್ಟೆಗೆ ಕೈ ಹಾಕಿದ ಮುಖ್ಯಸ್ಥ. ಮೃದುವಾಗಿಯೇ ಬಿಡಿಸಿಕೊಂಡ ಬೆಂಜಮಿನ್ ‘ಠಾಣೆಗೆ ಬರಲು ಅಭ್ಯಂತರವೇನಿಲ್ಲ ನನಗೆ. ಆದರೆ ಕಾರಣ ಹೇಳಿ’
ಅದನ್ನು ಅಲ್ಲಿಯೇ ಹೇಳ್ತೇವೆ ನಡಿ. ಇಲ್ದಿದ್ರೆ ಇಲ್ಲಿ ನಡೆಯೋ ರಕ್ತಪಾತಕ್ಕೆ ನೀನೇ ಜವಾಬ್ದಾರನಾಗ್ತೀಯ
ಎಂದು ಜನರತ್ತ ಗೃಧ್ರದೃಷ್ಠಿ ಬೀರಿದ ಮುಖ್ಯಸ್ಥ. ಆಗಲೇ ಪೊಲೀಸರ ಬಂದೂಕುಗಳು ಹಸಿದವರಂತೆ ಬಾಯ್ತೆರೆದಿದ್ದವು. ಜನರ ಗುಂಪಿನಲ್ಲಿ ಗೊಂದಲ ಗುಜುಗುಜು. ಒಂದು ಕ್ಷಣ ಯೋಚಿಸಿ ಬೆಂಜಮಿನ್, ಜನರೆಡೆಗೆ ತಿರುಗಿ ಗಟ್ಟಿಯಾಗಿ ಹೇಳಿದ.
ಶಾಂತಿಯಿಂದಿರಿ. ಮತ್ತೆ ಭೇಟಿಯಾಗೋಣ.
ಅನಂತರ ‘ನಡೆಯಿರಿ’ ಎಂದು ಪೊಲೀಸ್ ಮುಖ್ಯಸ್ಥನೊಂದಿಗೆ ಹೆಜ್ಜೆ ಹಾಕಿದ. ಮಳೆ ಜಟಿಜಟಿ ಹನಿಯತೊಡಗಿತ್ತು. ಗಂಭೀರವಾಗಿ ನಡೆಯುತ್ತಿದ್ದ ಆತನನ್ನು ನೋಡುತ್ತ ಮತ್ತೆ ಎಂದು ಬರುತ್ತಾರೋ ಈ ಕವಿ’ ಎಂದುಕೊಂಡ ಮುಗ್ಧ ಜನರಿಗೆ ಆತನ ಭೇಟಿ ಅದೇ ಕೊನೆಯದೆಂದು ತಿಳಿಯಲಿಲ್ಲ.

2
ಕ್ರಿ.ಶ.1984 ಜೂನ್ ತಿಂಗಳು
ಕೇಂದ್ರ ಕಾರಾಗೃಹ
ಪ್ರಿಟೋರಿಯಾ,
ಆ ಕೊಠಡಿಯ ಸಂಖ್ಯೆ ಎಷ್ಟೆಂಬುದು ಬೆಂಜಮಿನ್ಗೆ ತಿಳಿದಿರಲಿಲ್ಲ. ಅಷ್ಟೇಕೆ, ಹಗಲು ರಾತ್ರಿಗಳ ವ್ಯತ್ಯಾಸವೂ ಗೊತ್ತಾಗುತ್ತಿರಲಿಲ್ಲ. ಒಳಗೆ ಯಾವಾಗಲೂ, ನಸುಗತ್ತಲಿನ ಮಬ್ಬು ಬೆಳಕು, ತಾಜಾ ಹವಾ, ಒಳ್ಳೆಯ ನೀರು ಕುಡಿದು ಎಷ್ಟು ದಿನಗಳಾಗಿರಬಹುದು? ಲೆಕ್ಕ ಹಾಕಲು ಯತ್ನಿಸಿದ, ಒಂದು ವರ್ಷ…..? ಊಹೂಂ…. ಒಂದೂವರೆ…….? ಅಲ್ಲ, ಎರಡು ವರ್ಷಗಳ ಮೇಲಾಗಿರಬಹುದೇ? ಸರಿಯಾಗಿ ಎಣಿಸಲಾಗದು. ಮಿದುಳು ಹಿಂದಿನಂತೆ ಚುರುಕಾಗಿ ಕೆಲಸ ಮಾಡುತ್ತಿಲ್ಲ. ಕೈ, ಕಾಲು, ಕೀಲುಸಂದಿಗಳ ಭಯಂಕರ ನೋವು ಬೇರೆ ಕಾಡುತ್ತದೆ. ಈ ಕೊಠಡಿಯಲ್ಲೋ ಒಂದು ಸಣ್ಣ ಗಾಯವೂ ಸೆಪ್ಟಿಕ್ ಆಗಿ, ಇನ್ಫೆಕ್ಷನ್ ತಗುಲಿಕೊಳ್ಳಲು ಪ್ರಶಸ್ತವಾಗಿದೆ. ಮನೆಯಲ್ಲಿದ್ದಾಗ ತನ್ನ ಕೊಠಡಿ, ಬಟ್ಟೆ ಪುಸ್ತಕ, ಮೇಜು, ಕುಚರ್ಿ, ಹಾಸಿಗೆ, ಮಂಚ ಎಲ್ಲ ಎಷ್ಟು ನೀಟಾಗಿಡುತ್ತಿದ್ದೆ. ಅಮ್ಮ ಅತ್ತಿಗೆಯರೇ ಮೆಚ್ಚುಗೆ ಸೂಚಿಸುತ್ತಿದ್ದರು. ಈಗ ಅವರೆಲ್ಲ ಏನು ಮಾಡುತ್ತಿರಬಹುದು? ಪಾಪ, ಅಮ್ಮ ಅತ್ತು, ಅತ್ತು ಕಣ್ಣೀರು ಬತ್ತಿಸಿಕೊಂಡಿರಬಹುದು. ಅಪ್ಪ-ಮಾಮೂಲಿನಂತೆ ಕುಚರ್ಿಯ ಮೇಲೊರಗಿ
ಬೆಂಜಮಿನ್ ಕವನ ಬರೆಯಲು ಆರಂಭಿಸಿದೊಡನೆ, ಪೆನ್ ಕಿತ್ತು ಬಿಸಾಡಬೇಕಾಗಿತ್ತು. ಆಗ ಜೈಲು, ಗೀಲು ಏನೂ ತಂಟೆಯಿರುತ್ತಿರಲಿಲ್ಲ ಎಂದು ಚಿಂತಿಸುತ್ತಿರಬಹುದು. ಹುಷ್, ಕೆಳಹೊಟ್ಟೆಯ ನೀರನ್ನು ಖಾಲಿ ಮಾಡಬೇಕೆನ್ನಿಸುತ್ತಿದೆ. ದಿನಕ್ಕೆ ಒಂದೇ ಬಾರಿ ಪಾಯಿಖಾನೆಗೆ ಹೋಗುವ ರಾಜಭೋಗ! ಉಳಿದ ಸಮಯದಲ್ಲಿ ಏನು ಮಾಡಬೇಕೆನಿಸಿದರೂ ಈ ಸೆಲ್ನ ಮೂಲೆಯಲ್ಲೇ ಮಾಡಿಕೋಬೇಕು. ಎಷ್ಟೋ ಸಲ ಆ ವಾಸನೆಗೆ ಹೊಟ್ಟೆ ತೊಳಸಿ, ವಾಂತಿ ಮಾಡಿಕೊಂಡಿದ್ದುಂಟು. ಬರುಬರುತ್ತಾ ವಾಸನೆ, ಮಬ್ಬುಗತ್ತಲು, ಒಂಟಿತನ, ಮೌನ ಎಲ್ಲ ಅಭ್ಯಾಸವಾದವು.
ಕಿರನೆ ಬಾಗಿಲು ತೆರೆದುಕೊಂಡಾಗ ಅತ್ತ ನೋಡುವ ಗೋಜಿಗೆ ಹೋಗಲಿಲ್ಲ ಬೆಂಜಮಿನ್. ಗೊತ್ತಿತ್ತು ಬಂದವನು ಪೊಲೀಸರ ಮುಖ್ಯಸ್ಥ. ಏನು ಹರ್ಕೊತಾನೋ ಹರ್ಕೊಳ್ಳಿ. ನನ್ನ ಮುಗುಳ್ನಗೆ ಮಾತ್ರ ಮುಖದ ಮೇಲಿದ್ದೇ ಇರುತ್ತೆ. ಅವನನ್ನು ಇನ್ನಷ್ಟು ರೇಗಿಸಲು!
ಒರಟಾಗಿ ಭುಜವನ್ನಿಡಿದು ತಿರುಗಿಸಿದ ಮುಖ್ಯಸ್ಥ. ಕೂದಲು ಹಿಡಿದು ತಲೆ ಹಿಂದಕ್ಕೆ ಜಗ್ಗಿದ. ನೋವಿನಿಂದ ಚೀರಬೇಕೆನಿಸಿದರೂ ನುಂಗಿಕೊಂಡು ಮೆಲ್ಲಗೆ ನಕ್ಕ ಬೆಂಜಮಿನ್. ರಪ್ಪನೆ ರಾಚಿತು ಮುಖ್ಯಸ್ಥನ ಪಳಗಿದ ಕೈ! ಉಪ್ಪುಪ್ಪಾಗಿ ನಾಲಿಗೆಗೆ ಅಂಟಿದ ರಕ್ತ ಹಲ್ಲು ಉದುರಿರಬಹುದು ಎಂದು ಹೇಳಿತು. ಕಾಲು ತೊಡರಿ ಕುಸಿಯುತ್ತಿದ್ದವನನ್ನು ಗೋಡೆಗೆ ಅದುಮಿ ಹಿಡಿದು ಹೇಳಿದ ಮುಖ್ಯಸ್ಥ.
ಏಳು, ನ್ಯಾಯಾಲಯಕ್ಕೆ ಹೋಗ್ಬೇಕು
ಎಷ್ಟು ಸಲ ಹೋಗೋದು ನಿಮ್ಮ ಅನ್ಯಾಯಾಲಯಕ್ಕೆ?
ಸಿಟ್ಟು ಬೇಡಬೇಡವೆಂದರೂ ಒತ್ತಿ ಬಂದಿತ್ತು ಬೆಂಜಮಿನ್ಗೆ. ಆ ಮುಖ್ಯಸ್ಥನಾದರೂ ಎಷ್ಟೆಂದು ಹೊಡೆದಾನು? ಎರಡು ವರ್ಷಗಳಲ್ಲಿ ಹೊಡೆದೂ, ಹೊಡೆದೂ ಆತನೇ ಸುಸ್ತಾಗಿದ್ದ. ಸುಮ್ಮನೆ ಎಳೆದು, ಕೊಂಡೊಯ್ದು ವಾಹನದಲ್ಲಿ ಸರಕು ತುಂಬುವಂತೆ ತುರುಕಿದ.
ಪುನಃ ಅದೇ ದಾರಿ. ಪ್ರಿಟೋರಿಯದ ರಸ್ತೆಗಳು, ಸಾಲುಮನೆಗಳು, ಬೀದಿಯಲ್ಲಿ ಓಡಾಡುವ ಜನ, ಯಾರಿಗೂ ಒಳಗಿರುವವರ ಗುರುತು ಹತ್ತದಂತೆ ಗಾಜು ಏರಿಸಿದ ವಾಹನ…..
ಮತ್ತದೇ ಕೋಟರ್ು, ಲಕಲಕಿಸುವ ಟೇಬಲ್, ಛೇರ್, ಫ್ಯಾನ್, ಹೂ ಕುಂಡಗಳು, ಮೇಜಿನ ಆಚೀಚೆ ಒಂದಿಬ್ಬರು ಬಿಳಿಯ ವಕೀಲರುಗಳು, ಅಷ್ಟೆತ್ತರದ ಕುಚರ್ಿಯಲ್ಲಿ ಕುಳಿತ ಬಿಳಿಯ ಜಡ್ಜ್ನ ಅಹಂಕಾರದ ಮೋರೆ, ಕಣ್ಣುಗಳಲ್ಲಿನ ತಿರಸ್ಕಾರ, ಅವನ ತಲೆಯ ಮೇಲೆ ನಿರಂಕುಶ ಜನರಲ್ ಬೋಥಾನ ಚಿತ್ರ ಎಲ್ಲ ಬೇಸರ ಹುಟ್ಟಿಸುವ ಪುನರಾವರ್ತನೆ.
ಬಿಳಿಯ ವಕೀಲ, ದಪ್ಪ ಕನ್ನಡಕ ಸರಿಪಡಿಸಿಕೊಳ್ಳುತ್ತ ಪ್ರಶ್ನಿಸಿದ-
ಏನು ಯೋಚನೆ ಮಾಡಿದೆ?
ಯಾವುದರ ಬಗ್ಗೆ? ಬೆಂಜಮಿನ್ ಮುಗುಳ್ನಗುತ್ತ ಕೇಳಿದ….. ವಕೀಲ ಹುಬ್ಬು ಗಂಟಿಕ್ಕಿದ.
ಕೋಟರ್ಿನೊಂದಿಗೆ ಹುಡುಗಾಟ ಆಡಬೇಡ. ಕವನ ಬರೆದಷ್ಟು ಸುಲಭವಲ್ಲ ಕಾನೂನಿನಿಂದ ತಪ್ಪಿಸಿಕೊಳ್ಳೋದು.
ಕಾನೂನಿಗೆ ವಿರುದ್ದವಾದುದ್ದೇನನ್ನೂ ನಾನು ಮಾಡಿಲ್ಲವಲ್ಲ?
ಹಾಗಾದರೆ ಫಿಲಿಪ್ಸ್ ಸೆಲಿಪೆ ನಿನಗ್ಗೊತ್ತಿಲ್ಲ?
ಇಲ್ಲ!
ಗೆಳೆಯನಂತೆ ನಟಿಸಿ ಕೊನೆಗೆ ಅವನನ್ನು ಕೊಂದು ಹಾಕಲಿಲ್ಲ
ಖಂಡಿತಾ ಇಲ್ಲ.
ನೀನು ಸುಳ್ಳು ಹೆಳ್ತಿದೀ. ಸಕರ್ಾರದ ನಿಷ್ಠಾವಂತ ಪೊಲೀಸರನ್ನು ಕೊಲ್ಲುವುದೇ ನಿನ್ನ ಕೆಲಸ.
ಅಲ್ಲ. ನನ್ನ ಕೆಲಸ ಕವನ ಬರೆಯುವುದು ಮಾತ್ರ.
ನೀನೇನು ದೊಡ್ಡ ಕವಿ, ವಿದ್ವಾಂಸನೋ?
ಅಲ್ವೇ ಅಲ್ಲ. ನಾನೇನೂ ದೊಡ್ಡ ಕಾವ್ಯ ಬರೆದಿಲ್ಲ. ಒಮದಿಷ್ಟು ಕವಿತೆಗಳನ್ನು ಬರೆದಿದ್ದೇನಷ್ಟೇ.
ನೀನು ಬರೆದ ಕವಿತೆಗಳು ಆಡಳಿತಕ್ಕೆ ವಿರುದ್ಧವಾಗೇ ಇವೆಯಲ್ಲ?
ಅದಕ್ಕೆ ನಾನು ಜವಾಬ್ದಾರನಲ್ಲ. ನಾನು ನನ್ನ ಜನರ ಪರವಾಗಿ ಬರೆಯುತ್ತೇನಷ್ಟೇ.
ಇಂಥ ಮಾತುಗಳಿಂದ ನ್ಯಾಯಾಲಯ ಮೋಸ ಹೋಗಲಾರದು.
ಮೋಸ ಮಾಡುವ ಉದ್ದೇಶ ನನಗಿಲ್ಲ. ಫಿಲಿಪ್ಸ್ ಸೆಲಿಪೆ ಎಂಬ ಪೊಲೀಸ್ ಸಹಜವಾಗಿ ಸತ್ತನೆಂಬುದು ಎಲ್ಲರಿಗೂ ಗೊತ್ತಿದೆ. ನೀವದನ್ನು ಕೊಲೆ ಎಂದು ಕರೆದು, ಆಪಾದನೆ ನನ್ನ ಮೇಲೆ ಹೊರಿಸಿದರೆ, ನಾಳೆ ಪ್ರಪಂಚ ನಿಮ್ಮನ್ನೂ, ನಿಮ್ಮ ನ್ಯಾಯಾಲಯವನ್ನೂ ನೋಡಿ ನಗುತ್ತದೆ.
ನಗುತ್ತ ಹೇಳಿ ಸುಮ್ಮನಾದ ಬೆಂಜಮಿನ್. ಈ ಬಾರಿ ಜಡ್ಜ್ ಮಾತಾಡಿದ.
ನಿನ್ನ ಮಾತು ಅತಿಯಾಯ್ತು ಬೆಂಜಮಿನ್. ದೇಶದ್ರೋಹದ ಸಾಹಿತ್ಯ ಸೃಷ್ಟಿಸಿದ್ದಲ್ಲದೆ, ಕಾನೂನನ್ನೇ ಅಪಹಾಸ್ಯ ಮಾಡ್ತಿದೀ. ನಿನ್ನ ಅಪರಾಧವನ್ನು ಒಪ್ಪಿಕೊಂಡರೆ ನಿನಗೇ ಒಳಿತು.
ನಾನು ಯಾವ ಅಪರಾಧವನ್ನು ಮಾಡಿಲ್ಲ.
ಅಪರಾಧ ಸಾಬೀತಾಗಿದೆ. ನಿನಗೆ ಮರಣ ದಂಡನೆಯನ್ನು ಕೂಡ ವಿಧಿಸಬಹುದು. ಗೊತ್ತೇ?
ನನ್ನ ಉತ್ತರದಲ್ಲಿ ಬದಲಾವಣೆಯೇನೂ ಇಲ್ಲ
ಇಡೀ ಕೋಟರ್ು ಸಿಟ್ಟಿನಿಂದ ಉರಿಯುತ್ತಿರುವಂತಿತ್ತು. ಬೆಂಜಮಿನ್ ಮುಗುಳ್ನಗುತ್ತಲೇ ಇದ್ದ.
ಯಥಾಪ್ರಕಾರ ಮಬ್ಬುಗತ್ತಲಿನ ಸೆರೆಮನೆಯ ಕೊಠಡಿಗೆ ವಾಪಸ್.. .. ದಿನಗಳು ಕಳೆಯುತ್ತಿದ್ದವು. ಆದರೆ ಲೆಕ್ಕ ಸಿಗುತ್ತಿರಲಿಲ್ಲ.

3
1985, ಅಕ್ಟೋಬರ್ 18.
ಕೊಠಡಿಯ ಬಾಗಿಲು ತೆರೆದುಕೊಂಡಿತು. ಈ ಬಾರಿ ಪೊಲೀಸರ ಗುಂಪೇ ಒಳಬಂದಿತು. ಮುಖ್ಯಸ್ಥ ಸನ್ನೆ ಮಾಡಿದೊಡನೆ, ಒಬ್ಬ ಮುಂದೆ ಬಂದು, ಬೂದಿ ಬಣ್ಣದ ಕಾಗದವನ್ನು ಎದುರಿಗೆ ಹಿಡಿದುಕೊಂಡು ಗಟ್ಟಿಯಾಗಿ ಓದಿದ.
ಬೆಂಜಮಿನ್ ಮೊಲಾಯಿಸ್ ಎಂಬ ಹೆಸರಿನ ದೇಶದ್ರೋಹಿ ಬಂಡಾಯವೇಳುವಂತೆ ಜನರನ್ನು ಕವನಗಳ ಮೂಲಕ ಪ್ರಚೋದಿಸಿದ್ದಲ್ಲದೆ, ಆಡಳಿತದ ನಿಷ್ಠಾವಂತ ಪೊಲೀಸ್ ಪಿಲಿಪ್ಸ್ ಸೆಲಿಪೆಯನ್ನು ಕೊಂದು ಹಾಕಿರುವುದು ಸಾಬೀತಾಗಿ, ಬೆಂಜಮಿನ್ ಮೊಲಾಯಿಸ್ನಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಊಜ ಠಣಟಜ ಛಜ ಚಿಟಿರಜಜ ಣಟಟ ಜಜಚಿಣ. ಪರಮಾಧಿಕಾರಿ ಬೋಥಾರ ಸಹಿಯೊಂದಿಗೆ ಈ ಆಜ್ಞೆ ಹೊರಡಿಸಲಾಗಿದೆ.
ಬೆಂಜಮಿನ್ ಮೊಲಾಯಿಸ್ ಒಂದು ಕ್ಷಣ ಸ್ತಬ್ದನಾದ. ಅನಂತರ ಮುಗುಳ್ನಗುತ್ತ ಎದ್ದುನಿಂತ. ಅಷ್ಟೂ ಜನ ಅಂಗರಕ್ಷಕರಂತೆ ಹಿಂಬಾಲಿಸಿದರು. ಸುಮಾರು ಅರ್ಧಗಂಟೆ ನಡೆದ ನಂತರ ಕಬ್ಬಿಣದ ಸರಳುಗಳಿದ್ದ ಬಾಗಿಲು ಎದುರಾಯ್ತು. ಅದರಾಚಿಗಿರೋದೇ ನೇಣುಗಂಬದ ಕೋಣೆ! ಬೆಂಜಮಿನ್ ನಿಂತಲ್ಲೇ ನಿಂತು ತಲೆಯೆತ್ತಿ ಸೂರನ್ನು ದಿಟ್ಟಿಸಿ, ಕಣ್ಮುಚ್ಚಿಕೊಂಡು ಪ್ರಾಥರ್ಿಸಿದ-
ನಾನು ಮತ್ತೆ ಆಫ್ರಿಕಾದ ನೀಗ್ರೋನಾಗಿಯೇ ಹುಟ್ಟಬಯಸುತ್ತೇನೆ. ದೇವರೇ ಆಗ ಈ ನೆಲ ಸ್ವತಂತ್ರವಾಗಿರಲಿ. ನನ್ನ ಜನರ ಕೈಯಲ್ಲಿ ಅಡಳಿತವಿರಲಿ. ಅವರೆಲ್ಲ ಮನುಷ್ಯರಂತೆ ಬದುಕಲಿ.
ಅನಂತರ ಮುಗುಳ್ನಗೆಯನ್ನು ಮುಖಕ್ಕೆ ತಂದುಕೊಂಡು ಆ ಕೋಣೆಯೊಳಕ್ಕೆ ಕಾಲಿಟ್ಟ.
ಹೊರಗೆ, ನಸುಕಿನ ಸೂರ್ಯ ಮೆಲ್ಲಗೆ ಮೇಲೇರುತ್ತಿದ್ದ.
(ದಕ್ಷಿಣ ಆಫ್ರಿಕಾದ ಕಪ್ಪುಕವಿ ಬೆಂಜಮಿನ್ ಮೊಲಾಯಿಸ್ನನ್ನು ಬಿಳಿಯ ಪೊಲೀಸನನ್ನು ಕೊಂದ ಸುಳ್ಳು
ಆಪಾದನೆಯ ಮೇಲೆ 1995, ಅಕ್ಟೋಬರ್ 18ಕ್ಕೆ ಗಲ್ಲಿಗೇರಿಸಿದರು.)






ಬೆಂಜಮಿನ್ ಮೊಲಾಯಿಸ್ ನನ್ನು ದಕ್ಷಿಣ ಆಫ್ರಿಕದ ವರ್ಣ ಬೇಧದ ಸರ್ಕಾರ ಕೊಲೆ ಮಾಡಿದಾಗ ಕರ್ನಾಟಕದ ಸಾಹಿತಿಗಳು ಪ್ರತಿಕ್ರಿಯಿಸಿದ ಬಗೆ ಕರ್ನಾಟಕದ ಸಾಹಿತ್ಯ ಚರಿತ್ರೆಯಲ್ಲೇ ಅಪೂರ್ವ ಸಂಗತಿ.ಕೆಲವೇ ದಿನಗಳಲ್ಲಿ ಒಂದು ಕವನ ಸಂಕಲನವೇ ಹೊರಬಂದಿತು. ದೂರದೂರಿನ ೀ ಕವಿಯ ಬಗ್ಗೆ ಕನ್ನಡದ ಕವಿಗಳು ವ್ಯಕ್ತಪಡಿಸಿದ ಆಪ್ತ ಭಾವನೆಗಳು ಇಡೀ ಜಗತ್ತಿನ ‘ಮಾನವ ಕುಲಂ ತಾನೊಂದೇ ವಲಂ’ ಎಂದು ಸಾರಿತು. ಅಂದೇ ಸುಧಾ ಬರೆದ ಕಥೆ ಜಗತ್ತಿನೆಲ್ಲಾ ದಬ್ಬಾಳಿಕೆಗಳ ವಿರುದ್ಧದ ದನಿಯಾಗಿದೆ. ಆ ಕೊಲೆಯ ವಿವರಗಳನ್ನು ಕಲೆಹಾಕಿ ಕಥೆ ಬರೆಯುವುದು ಎಂಬುದು ಕವನ ಬರೆಯುವುದಕ್ಕಿಂತ ಹೆಚ್ಚಿನ ಶ್ರಮ ಆಸಕ್ತಿ ಬೇಡುತ್ತದೆ.
ವರ್ಣದ್ವೇಷ, ಜನಾಂಗದ್ವೇಷ, ಪ್ರತ್ಯೇಕತಾನೀತಿಯ ವಿರುದ್ದ ಹೋರಾಡಿದ ದಿಟ್ಟ ಬೆಂಜಮಿನ ನೆನಪಿಸಿದ್ದಕ್ಕೆ ಧನ್ಯವಾದಗಳು. ಆದರೆ ನನಗೆ ನೆನೆಪಿದ್ದಂತೆ ಆತನ ಮೇಲಿದ್ದ ಆರೋಪ ಕಪ್ಪು ಪೋಲಿಸನೊಬ್ಬನನ್ನು ಕೊಂದದ್ದು.
ಕೊನೆಯಲ್ಲಿ ಇರುವ ‘1995, ಅಕ್ಟೋಬರ್ 18’, ಲೇಖನದಲ್ಲಿ ಇರುವಂತೆ ೧೯೮೫ ಆಗಬೇಕಲ್ಲವೆ?
-ಅನಿಲ ತಾಳಿಕೋಟಿ
Benjamin Molaisis is the last black freedom fighter hanged by white people govt is south africa. I remember reading about him in Sudha magazine
@ Anil Talikoti- 1985 ಬೆಂಜಮಿನ್ ಗಲ್ಲಿಗೇರಿದ ವರ್ಷ. 1995 ನಾನು ಕಥೆ ಬರೆದ ವರ್ಷ. ಕೊನೆ ವಾಕ್ಯ “ಗಲ್ಲಿಗೇರಿಸಿ 10 ವರ್ಷಗಳಾದವು” ಎಂಬುದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದಾಗ ನಾನು ಬರೆದ ಅಡಿಟಿಪ್ಪಣಿ. ಇಲ್ಲಿ ಮಿಸ್ಸಾಗಿರುವುದಕ್ಕೆ ಕ್ಷಮೆಯಿರಲಿ.
@g.n. nagaraj- ಕವನಸಂಕಲನ 1986 ರಲ್ಲಿ ಹೊರಬಂದಿತ್ತು. ಅದು “ಕಪ್ಪುನಾಡಿನ ಕೆಂಪುಸೂರ್ಯ”. ನಮ್ಮೂರು ಹಗರಿಬೊಮ್ಮನಹಳ್ಳಿಯಿಂದಲೇ ಹೊರಬಂದಿದ್ದು. ನಾಡಿನ ಬಹುತೇಕ ವಿಚಾರವಂತರ ಕವಿತೆಗಳು ಈ ಸಂಕಲನದಲ್ಲಿವೆ. ಅದರ ಪ್ರಭಾವ ನನ್ನ ಮೇಲೆ ತುಂಬಾ ಇದೆ/ಇರುತ್ತೆ..