ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಖ ಪಡೋದೆ ಮನಶ್ಯಾನ ಗುರಿ ಆದರ ಹಿಂಗ ಆಗೂದು …

ಹನಮಂತ ಹಾಲಿಗೇರಿ

ಅಪ್ಪನನ್ನು ಕರೆಸಿಕೊಂಡು ಕಾರವಾರದ ಮೀನು ತಿನ್ನಿಸಬೇಕೆಂದು ಬಹಳ ಸಲ ಅನಿಸಿತ್ತು. ಫೋನ್‍ ಮಾಡಿದಾಗೆಲ್ಲ ಹೇಳುತ್ತಲೇ ಇದ್ದೆ. ಏನಾದರೂ ನೆಪ ಹೇಳಿ ತಪ್ಪಿಸುತ್ತಿದ್ದ ಅಪ್ಪ ಈ ಸಲ ಸೋದರಮಾವನನ್ನು ಜೊತೆ ಮಾಡಿಕೊಂಡು ಮೊನ್ನೆ ಶನಿವಾರ ಬಂದೆ ಬಿಟ್ಟಿದ್ದ.ಹಗಲು ರಾತ್ರಿ ಮಸಾರಿ ಮಣ್ಣಲ್ಲಿ ದುಡಿವ ಜೀವಗಳವು. ಓದು ಬರಹ ಗೊತ್ತಿಲ್ಲದ ಈ ಇಬ್ಬರು ಎಲ್ಲೆಲ್ಲೋ ಹತ್ತಿ ಎಲ್ಲೆಲ್ಲೋ ಇಳಿದು 6 ತಾಸಿನ ದಾರಿಯನ್ನು ಅನಾಮತ್ತಾಗಿ 8 ತಾಸು ತೆಗೆದುಕೊಂಡಿದ್ದರು. ಮರುದಿನ ಅಪ್ಪ “ಇಲ್ಲೆಲ್ಲೋ ಕಾಜು (ಪೆನ್ನಿ) ಸಿಗತೈತಂತಲ್ಲೋ” ಅಂತ ಅಂಜಜುತ್ತಲೇ ಕೇಳಿದ್ದ. ನಾನು ಕಾಜು ಕುಡಿಸಿದಂಗೂ ಆತು ಬೀಚ್‍ ತೋರಿಸಿಕೊಂಡು ಬಂದಂಗೂ ಆತು ಅಂತ ಗೋವಾ ಪೊಲೆಲಂ ಬೀಚಿಗೆ ಕರೆದುಕೊಂಡು ಹೋಗಿದ್ದೆ.

ಬೀಚಿನಲ್ಲಿನ ಅರೆನಗ್ನ ವಿದೇಶಿಯರನ್ನು ಎಂದು ನೋಡಿರದ ಅಪ್ಪ ಮತ್ತು ಮಾವ ಅಲ್ಲಿನ ಹೊಸಲೋಕವನ್ನು ನೋಡಿ ಮೊದಲೆಲ್ಲ ದಂಗಾಗಿ ಮೂಕರಾದರು. ಒಂದಿಷ್ಟು ಪ್ರಶ್ನೆಗಳು, ಅವರು ಯಾರು, ಯಾಕೆ ಬಂದಿದ್ದಾರೆ, ಅವರ ಬದುಕು ಇತ್ಯಾದಿತ್ಯಾದಿ, ಆಮೇಲೆ ತನ್ನೊಳಗೆ ಅನ್ನುವಂತೆ ಅವರನ್ನಷ್ಟು ನನ್ನಷ್ಟು ಬೈಯ್ದ, ಸುಖ ಪಡೋದೆ ಮನಶ್ಯಾನ ಗುರಿ ಆದರ ಹಿಂಗ ಆಗೂದು, ದನಕ್ಕೂ ಇವರಿಗೂ ಏನು ಫರಕ್ಕಿಲ್ಲ. ನೀ ಜಲ್ದಿ ಬೇರೆ ಕರೆ ವರ್ಗ ಮಾಡಿಸಿಕೊಂಡು ಇಂಥವರನ್ನು ನೋಡಿ ನೀನು ಹಿಂಗ ಆದಿ ಅಂತ ನನಗೂ ಒಂದಿಷ್ಟು ಉಗುಳಿದ,

ನಾನು ಸುಮ್ಮನಿರದೆ ನಿನ್ನ ಮಾತು ಅವರು ಕೇಳಿಸಿಕೊಂಡ್ರೆ ನಿನ್ನನ್ನು ಅವರು ಹಿಂಗೆ ಬೈಯ್ಯೋದು. ಎನು ಹಗಲಿ ರಾತ್ರಿ ಗಾಣದೆತ್ತಿನ(ದನದಂಗ) ದುಡಿತಾವು ಸುಖ ಪಡೋದೆ ಗೊತ್ತಿಲ್ಲ ಅಂತ. ಅವರು ಬದುಕುವ ರೀತಿನೆ ಹಂಗೆ ಅಂತ ನಿರುತ್ತರನಾದ ಅಪ್ಪ ಗೊಂದಲದಲ್ಲೆ ಉಳಿದ…ನನ್ನಲ್ಲೆ ಗೊಂದಲ ಹಾಗೆ ಮುಂದುವರೆದಿದೆ..
 

‍ಲೇಖಕರು G

30 October, 2013

2 Comments

  1. Anil Talikoti

    ಗೊತ್ತಿರೊದಕ್ಕಿಂತ ಗೊತ್ತಿಲ್ಲದ್ರೊಳಗ ಖುಶಿ ಜಾಸ್ತಿ ಅನಸ್ತೈತಿ -ಎಲ್ಲಾ ಅವರವರ ಭಾವಕ್ಕೆ- ಛೊಲೊ ಬರದಿರಿ
    -ಅನಿಲ ತಾಳಿಕೋಟಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading