ಸುಕ್ರಿ ಗೌಡ ಎಂಬ ಸಂಭ್ರಮವೂ
ರಾಹುಲ ಡ್ರಾವಿಡ ಎಂಬ ಸಜ್ಜನನೂ

ರಾಜೀವ ನಾರಾಯಣ ನಾಯಕ
ಪ್ರಶಸ್ತಿಯ ಪುರಸ್ಕಾರ ಮತ್ತು ಪ್ರಶಸ್ತಿಯ ನಕಾರ- ಪರಸ್ಪರ ವಿರುದ್ಧದ ಈ ಎರಡು ಕಾರಣಗಳಿಂದ ವ್ಯಕ್ತಿಗಳಿಬ್ಬರು ಮೊನ್ನೆ ನನ್ನಂಥ ಅಭಿಮಾನಿಗಳ ಹೃದಯದೊಳಗೆ ಶಾಶ್ವತ ಸ್ಥಾನ ಪಡೆದುಕೊಂಡರು.
ಒಬ್ಬರು ಅರಸಿಬಂದ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕರಿಸಿ ಅದಕ್ಕೆ ಗೌರವ ತಂದರೆ, ಇನ್ನೊಬ್ಬರು ಅರಸಿಬಂದ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿ ಅದಕ್ಕೆ ಘನತೆ ನೀಡಿದರು!
ಒಬ್ಬಳು ಅಂಕೋಲೆ ಬಡಗೇರಿಯ ಜಾನಪದ ಹಾಡುಗಾರ್ತಿ, ನಮ್ಮ ಪ್ರೀತಿಯ ಸುಕ್ರಜ್ಜಿ. ಇನ್ನೊಬ್ಬರು ಸಾವಿರಾರು ಜನರ ನೆಚ್ಚಿನ ಕ್ರಿಕೆಟರ್ ರಾಹುಲ್ ದ್ರಾವಿಡ್.

ಫೋಟೋ : ದೀಪಕ್ ರೇವಣಕರ್
ಸುಕ್ರಜ್ಜಿಗೆ ಪದ್ಮಶ್ರೀ ಪ್ರಶಸ್ತಿ ತಾನಾಗಿ ಒಲಿದು ಅವಳ ಹಾಡಿನ ಕಣಜದಿಂದ ಪ್ರಶಸ್ತಿಯನ್ನೇ ಸಿಂಗರಿಸಿದ್ದಾಳೆ. ರಾಹುಲ್ ದ್ರಾವಿಡ್ ಬೆಂಗಳೂರಿನ ವಿಶ್ವವಿದ್ಯಾಲಯವು ನೀಡಲು ಬಯಸಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ಸೌಜನ್ಯದಿಂದ ನಿರಾಕರಿಸಿ ಆ ಮೂಲಕ ಅಕಾಡೆಮಿಕ್ ಶಿಸ್ತು ಮತ್ತು ಸಾಧನೆಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ. ಗೌರವ ಪದವಿ ಪಡೆಯುವ ಬದಲು ಕ್ರೀಡಾರಂಗದಲ್ಲಿ ಶೈಕ್ಷಣಿಕವಾಗಿ ಸಂಶೋಧನೆ ಮಾಡುವ ಮೂಲಕ ಡಾಕ್ಟರೇಟ್ ಪದವಿಯನ್ನು ಗಳಿಸಲು ಪ್ರಯತ್ನಿಸುವುದಾಗಿ ಕುಲಪತಿಗಳಿಗೆ ತಿಳಿಸಿದ್ದಾರೆ. ಅವರೇ ಕ್ರಿಕೆಟ್ಟಿನ ವಿಶ್ವವಿದ್ಯಾಲಯವಾಗಿರುವಾಗಲೂ ಇಂಥ ನುಡಿಗಳಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.
ಇಬ್ಬರಿಗೂ ಮನ:ಪೂರ್ವಕ ಅಭಿನಂದನೆಗಳು!
ಹಿಂದೆಲ್ಲ ಪದ್ಮ ಪ್ರಶಸ್ತಿಗಳು ದೂರದ ಗಣ್ಯರಿಗೆ ಸಾಧಕರಿಗೆ ದೊರೆತಾಗ ಅವು ನಮ್ಮ ಜನರಲ್ ನಾಲೇಜ್ ಹೆಚ್ಚಿಸಿಕೊಳ್ಳಲು ಬುದ್ಧಿಕೋಶಗಳಲ್ಲಿ ನೆನಪಿಡಬೇಕಾದ ಸಂಗತಿಗಳಾಗಿ ಮಾತ್ರ ಅಚ್ಚಾಗುತ್ತಿದ್ದವು. ಆದರೆ ಅಂಥ ಪ್ರಶಸ್ತಿಯೊಂದು ಯಕ್ಷಗಾನದಲ್ಲಿಯ ಸಾಧನೆಗಾಗಿ ನಮ್ಮೆಲ್ಲರ ಅಭಿಮಾನದ ಚಿಟ್ಟಾಣಿಯವರನ್ನು ಅರಸಿ ಬಂದಾಗ ಮೊದಲ ಬಾರಿಗೆ ನಮ್ಮ ಭಾವಕೋಶವನ್ನು ಬೆಚ್ಚಗಾಗಿಸಿತ್ತು!
ಸಹಸ್ರಾರು ಯಕ್ಷಪ್ರೇಮಿಗಳು ಚಿಟ್ಟಾಣಿಯವರಿಗೆ ದೊರೆತ ಆ ಸನ್ಮಾನವನ್ನು ತಮ್ಮ ಕಿರೀಟಕ್ಕೇರಿಸಿಕೊಂಡು ಖುಶಿಪಟ್ಟಿದ್ದರು. ಇದೀಗ ಪದ್ಮಶ್ರೀ ಪ್ರಶಸ್ತಿ ನಮ್ಮ ಅಂಕೋಲೆಯ ಸುಕ್ರಜ್ಜಿ ಮನೆ ಬಾಗಿಲಿಗೇ ಬಂದು ಇಡೀ ಜಿಲ್ಲೆಯೇ ಸಂಭ್ರಮ ಪಡುವಂತಾಗಿದೆ. ಪ್ರಶಸ್ತಿಯೆಂಬುದು ಶಾಲು ಫಲಕ ಮಾಲೆಯ ರೂಪಕಗಳಲ್ಲಿ ಜಡಾವಸ್ಥೆಗೆ ಜಾರುತ್ತಿರುವ ಸಂದರ್ಭದಲ್ಲಿ ಚಿಟ್ಟಾಣಿ ಸುಕ್ರಜ್ಜಿಯಂಥವರಿಗೆ ದಕ್ಕಿರುವುದರಿಂದ ಪದ್ಮಶ್ರೀಯಂಥ ಪ್ರಶಸ್ತಿಗೆ ಒಂದು ಜೀವದ ಉಸಿರು ಇರುವಂತೆ ಭಾಸವಾಗುತ್ತಿದೆ.
ಸುಕ್ರಜ್ಜಿಗೆ ದೊರೆತ ಪ್ರಶಸ್ತಿಯನ್ನು ಆಕೆಯನ್ನು ನೋಡದ, ಆಕೆಯ ಹಾಡುಗಳನ್ನು ಈವರೆಗೂ ಕೇಳದ ಜನರೂ ಸಂಭ್ರಮಿಸುತ್ತಿರುವುದಕ್ಕೆ ಕಾರಣವೇನಿರಬಹುದು?
ಪ್ರಶಸ್ತಿಗಳನ್ನು ಲಾಬಿ ಮಾಡಿ ಪಡೆಯುವುದು ಮಾಮೂಲಾಗಿರುವ ಇಂದಿನ ಸನ್ನಿವೇಶದಲ್ಲಿ ಪ್ರಶಸ್ತಿಯೇ ಸುಕ್ರಜ್ಜಿಯನ್ನು ಅರಸಿ ಬಂದಿರುವುದು ಅದಕ್ಕೆ ಕಾರಣವೆ? ಒಂದು ಜನಾಂಗದ ಬದುಕನ್ನು ಕಾವ್ಯಧಾರೆಗಳಲ್ಲಿ ಸಂಗ್ರಾಹ್ಯವಾಗಿ ನಿವೇದಿಸುವ ಆಕೆಯ ಸಮೃದ್ಧ ಹಾಡುಗಳೆ? ಸರಳತೆ ಸಹಜತೆಯನ್ನು ನುಂಗಿ ನೀರು ಕುಡಿದಿರುವ ಆಧುನಿಕತೆಯ ಅಬ್ಬರದ ನಡುವೆಯೂ ಜೀವಂತವಾಗಿರುವ ಸುಕ್ರಜ್ಜಿಯ ಮುಗ್ಧತೆಯೇ? ಎಳೆಯ ವಯಸಿನಲ್ಲಿ ಗಂಡನನ್ನೂ ನಂತರ ಸಾಕು ಮಗನನ್ನೂ ಕಳೆದುಕೊಂಡರೂ ಬದುಕಿಗೆ ವಿಮುಖಳಾಗದ ಅವಳ ಧೀಮಂತಿಕೆಯೇ?
ಬದುಕಿನ ಅನುಭವಗಳಿಂದ ಸುಕ್ಕುಗಟ್ಟಿರುವ ಸುಕ್ರಜ್ಜಿಯ ಮುಖವನ್ನೊಮ್ಮೆ ಗಮನಿಸಿ. ಒಂದೊಂದು ನೆರಿಗೆಯಲ್ಲೂ ನೂರು ಹಾಡುಗಳ ಸೊಲ್ಲಿದೆ; ಕಷ್ಟಗಳನ್ನು ಮೀರಿ ಜಿನುಗುವ ಜೀವನ ಪ್ರೀತಿಯಿದೆ. ಎಂಟಿ-ಏಜಿಂಗ್ ಕ್ರೀಮುಗಳನ್ನು ನಿವಾಳಿಸಿ ಎಸೆಯಬಲ್ಲ ಸೌಂದರ್ಯವಿದೆ.

ಇದು ಹೆಚ್ಚಿನ ಹಾಲಕ್ಕಿ ಮಹಿಳೆಯರಲ್ಲಿ ಕಾಣುವ ಅಂಶ. ಪರಿಶ್ರಮಿಗಳಾದ ಹಾಲಕ್ಕಿ ಮಹಿಳೆಯರು ಅಪಾರ ಜೀವನ ಪ್ರೀತಿಯುಳ್ಳವರು. ಬೆಟ್ಟ ಹತ್ತಿ ಸೌದೆ ಹೊತ್ತು ಪೇಟೆಯಲ್ಲಿ ಮಾರಿ ನಾಲ್ಕು ಕಾಸು ಮಾಡಿಕೊಂಡು ಸ್ವಾಭಿಮಾನದಿಂದ ಸಂಸಾರ ನಡೆಸುವ ಅದೆಷ್ಟೋ ಜನರನ್ನು ನಮ್ಮ ಸುತ್ತಲೂ ನೋಡಿದ್ದೇವೆ. ಗದ್ದೆ ಅಗೆದು ಹದಮಾಡಿ ತಾವೇ ಬೆಳೆದ ತರಕಾರಿಗಳನ್ನು, ಹಣ್ಣು ಹಂಪಲಗಳನ್ನು ಮೋಸವಿಲ್ಲದೇ ಮಾರುವ ಹಾಲಕ್ಕಿಗಳನ್ನು ಕಂಡಿದ್ದೇವೆ. ಅಂಥವವರ ನಿಷ್ಕಪಟ ಮನಸ್ಸಿನ ಪಸೆಯೊಂದು ನಮ್ಮ ಭಾವತೀರದಲ್ಲಿ ಸುಪ್ತವಾಗಿರುವುದರಿಂದಲೇ ಸುಕ್ರಜ್ಜಿಗೆ ಪ್ರಶಸ್ತಿ ಘೋಷಿತವಾದಾಗ ಇಡೀ ಜಿಲ್ಲೆ ಸಂಭ್ರಮ ಪಟ್ಟಿತು ಎಂದು ನನ್ನ ಭಾವನೆ.
ಒಲಿದಂತೆ ಹಾಡುವ ಅಥವಾ ನುಡಿದದ್ದೆಲ್ಲ ಹಾಡಾಗುವ ಸುಕ್ರಜ್ಜಿ ಮೇಲೆ ಗೌರವ ಹೆಚ್ಚಾಗಲು ಕಾರಣ ಆಕೆ ತನ್ನ ಹಾಡಿನಿಂದ ಗಳಿಸಿದ ಪ್ರಸಿದ್ಧಿಯನ್ನು ಸಮಾಜದ ಏಳಿಗೆಯತ್ತ ಬಳಸಿಕೊಳ್ಳುತ್ತಿರುವುದು. ವಿಶೇಷವಾಗಿ ಸಾರಾಯಿ ವಿರೋಧಿ ಆಂದೋಲದಲ್ಲಿ ಅವಳು ಸಕ್ರಿಯವಾಗಿರುವುದು ಅವಳ ಸಮಾಜಮುಖಿ ಒಲವಿಗೆ ಸಾಕ್ಷಿಯಾಗಿದೆ. ಈ ಸಾರಾಯಿ ಚಟ ಒಂದು ತಲೆಮಾರಿನ ಅಂತ:ಸತ್ವವನ್ನೇ ನಾಶಗೊಳಿಸಿದೆ. ಬಡವರ ನೆಮ್ಮದಿಯನ್ನು ಕೆಡಿಸುತ್ತಿರುವ ಸಾರಾಯಿ ಎನ್ನುವ ಮಾರಿಯನ್ನು ಶಾಶ್ವತವಾಗಿ ಹೊರಗಟ್ಟಲು ಸುಕ್ರಜ್ಜಿಯಂಥ ಸಾತ್ವಿಕರ ನಿರಂತರ ಸಾರಥ್ಯದ ಅಗತ್ಯವಿದೆ.
ಸಾಂಸ್ಕೃತಿಕವಾಗಿ ಸಮೃದ್ಧರಾದ ಹಾಲಕ್ಕಿಗಳಿಗೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಲ್ಲಬೇಕಾದ ತಮ್ಮ ಪಾಲನ್ನು ಪಡೆಯುವುದು ಇನ್ನೂ ಸಾಧ್ಯವಾಗಿಲ್ಲ. ಸುಕ್ರಜ್ಜಿಗೆ ಸಂದ ಪದ್ಮಶ್ರೀ ಗೌರವವು ಇಂದಿನ ಪೀಳಿಗೆಯವರಿಗೆ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಲು ಮತ್ತು ಶೈಕ್ಷಣಿಕ ಸಾಮಾಜಿಕ ಪ್ರಗತಿ ಸಾಧಿಸಲು ಸ್ಪೂರ್ತಿ ತುಂಬಲಿ.
ಇನ್ನು ಮೊನ್ನೆ ಡಾಕ್ಟರೇಟ್ ಪದವಿಯನ್ನು ವಿನಯದಿಂದ ನಿರಾಕರಿಸಿದ ರಾಹುಲ್ ಡ್ರಾವಿಡ್ ಬಗ್ಗೆ ಒಂದು ಮಾತು:
ಕ್ರಿಕೆಟ್ ಆಟದಿಂದ ರಾಹುಲ್ ನಿವೃತ್ತನಾದರೂ ಇನ್ನೂ ಸಹಸ್ರಾರು ಅಭಿಮಾನಿಗಳ ಹೃದಯದಲ್ಲಿ ಉಳಿದಿದ್ದಾರೆ. ರಾಹುಲ್ ಕವರ್ ಡ್ರೈವ್, ಸ್ಕ್ವೇರ್ ಕಟ್, ಡಿಫೆನ್ಸಿವ್ ಶಾಟ್ಸ್, ಸುಮ್ಮನೇ ಬಾಲ್ ಬಿಟ್ಟುಬಿಡುವುದು- ಇದರಲೆಲ್ಲ ಪರಿಪೂರ್ಣತೆಯನ್ನು ಸಾಧಿಸಿದ ವ್ಯಕ್ತಿ. ಆ ಪರಿಪೂರ್ಣತೆ ಅವರ ಆಟದಲ್ಲಿ ಮಾತ್ರವಲ್ಲ ವ್ಯಕ್ತಿತ್ವದ ಭಾಗವೂ ಆಗಿತ್ತು.
ಕ್ರಿಕೆಟ್ಟಿನಲ್ಲಿ ತಾಂತ್ರಿಕ ನೈಪುಣ್ಯತೆಯನ್ನು ಗಳಿಸಿದ್ದ ದ್ರಾವಿಡ್ ಪಿಚ್ ನಡುವಿದ್ದರೆ ಸ್ಥಿರತೆಯ ಭಾವ ಮೂಡುತ್ತಿತ್ತು. ಎಷ್ಟೋ ಸಲ ರೋಮಾಂಚಕ ಬ್ಯಾಟ್ಸಮನ್ನರ ಆಟ ನೋಡುವಾಗ ಒಂದು ರೀತಿಯ ಉನ್ಮಾದದ ಸ್ಥಿತಿಯಲ್ಲಿರುವುದರಿಂದ ನಾವು ಅಸಲಿ ಕ್ರಿಕೆಟನ್ನು ನೋಡಿರುವುದಿಲ್ಲ. ಆದರೆ ದ್ರಾವಿಡನ ಆಟ ನೋಡುವಾಗ ಕ್ರಿಕೆಟ್ ಆಟದ ಚಂದವು ಕಾಣುತ್ತಿತ್ತು.
ಬ್ಯಾಟಿಂಗಿನಲ್ಲಿ ಜಿಗುಟಾಗಿದ್ದ ರಾಹುಲ್ ವ್ಯಕ್ತಿಯಾಗಿ ಜಂಟಲಮನ್.
ಗೆಲುವಿನಲ್ಲಾಗಲಿ ಸೋಲಿನಲ್ಲಾಗಲಿ ಎಂದೂ ಭಾವನೆಗಳ ಅತಿರೇಕದ ಅಭಿವ್ಯಕ್ತಿ ಮಾಡದ ದ್ರಾವಿಡ್ ತುಂಬಿದ ಕೊಡ. ಆಧುನಿಕ ಮನುಷ್ಯ ಕೂಡ ಸರಳತೆ ಮತ್ತು ಸಹಜತೆಯ ಸಂಸ್ಕಾರ ಪಡೆಯಬಹುದು ಎಂಬುದನ್ನು ದ್ರಾವಿಡ್ ನೋಡಿದಾಗ ಅನಿಸುತ್ತದೆ. ಒಂದು ರೀತಿಯಲ್ಲಿ ದ್ರಾವಿಡಗೂ ಸುಕ್ರಜ್ಜಿಗೂ ವ್ಯತ್ಯಾಸವಿಲ್ಲ. ಇಬ್ಬರೂ ಬದುಕಿಗೆ ವ್ಯಕ್ತಿತ್ವಕ್ಕೆ ಘನತೆ ಮತ್ತು ಪ್ರೀತಿಯನ್ನು ತಂದವರು!
ಸುಕ್ರಿ ಗೌಡ ಮತ್ತು ರಾಹುಲ ದ್ರಾವಿಡ ಇಬ್ಬರಿಗೂ ಪ್ರೀತಿಯ ಸಲಾಂ!





ಸುಕ್ರಜ್ಜಿಗೆ ಪ್ರೀತಿಯ ಅಭಿನಂದನೆಗಳು. ಅಂತೆಯೇ ದ್ರಾವಿಡ್ ಅವ್ರ ಘನತೆಗೆ ಹೃದಯ ತುಂಬಿದ ಪ್ರಣಾಮಗಳು.ಇಂತಹ ಅಪರೂಪದ ನಡೆ ಕನಿಷ್ಠ ಎಳೆಯ ತಲೆಮಾರಿಗಾದರೂ ಮಾದರಿಯಾಗಿರಲಿ ಎಂದು ಹಾರೈಸುತ್ತೇನೆ.