– ಬಿ ವಿ ರಾಮ ಪ್ರಸಾದ್

ಕತೆ ಬರೆಯೋದು ತುಂಬಾ ಮುಜುಗರದ ಕೆಲಸ. ಬರದ್ರೆ ನಮ್ಮ ಬಗ್ಗೆ, ನಮ್ಮ ಅಪ್ಪ ಅಮ್ಮನ ಬಗ್ಗೆ, ಹೆಂಡ್ತಿ ಬಗ್ಗೆ ಮಕ್ಕಳ ಬಗ್ಗೆ ಬರೀಬೇಕು. ಇಲ್ಲಾ ಸ್ನೇಹಿತರ ಬಗ್ಗೆ, ಅಕ್ಕ ಪಕ್ಕದೋರ ಬಗ್ಗೆ ಬರೀಬೇಕು. ಅವರ್ಯಾರಾದ್ರೂ ನಾನು ಬರಿದಿದ್ದು ಓದಿ ಬೇಜಾರು ಮಾಡ್ಕೊಂಡ್ರೆ? ಅದಿರಲಿ, ಹೀಗೆ ಬೇರೋರ ಬಗ್ಗೆ ಪಬ್ಲಿಕ್ಕಾಗಿ ಮಾತೋಡೋ ಹಕ್ಕು ನನಗೆ ಕೊಟ್ಟಿರೋರ್ಯಾರು? ಯಾರ ಬಗ್ಗೆ ಬರೆದರೂ ಹೆಂಗೋ ಯಾರೋ ಒಬ್ರಿಗೆ ಇದು ತನ್ನದೇ ಕತೆ ಅಂತ ಅನಿಸಿ, ಅವರು ನನ್ನ ಮೇಲೆ ಸಿಟ್ಟಾಗಿ, ಇಲ್ಲಾ ಅವರ ಜೀವನದ ಮೇಲೆ ಏನೋ ಪರಿಣಾಮ ಆಗಿ…ಹೀಗಾಗಿ ಕತೆಗಿತೆ ಸುದ್ದಿಗೇ ಹೋಗಬಾರದು ಅಂತ ಅಂದ್ಕೊಡಿದ್ದೆ.
ಆದರೆ ಈ ಕತೆ ಬೇರೆ ತರ. ಇದು ಒಬ್ಬ ಕೊಲೆಗಾರನ ಬಗ್ಗೆ. ಅವನು ಈ ಕತೆ ಓದೋ ಚಾನ್ಸೇ ಇಲ್ಲ. ಇನ್ನು ಅವನು ಹೇಳಿ ಕೇಳಿ ಕೊಲೆಗಾರ. ಅವನ ಪ್ರ್ಯೆವಸಿ ಬಗ್ಗೆ ತಲೆ ಕೆಡಿಸ್ಕೊಬೇಕಾ? ಗೊತ್ತಿಲ್ಲ. ಇರಲಿ, ಕತೆ ಹೇಳೋದು ಹೇಳಿಬಿಡ್ತೀನಿ. ಆಮೇಲೆ ಇದನೆಲ್ಲಾ ಯೋಚಿಸೋಣ. ಆದರೂ ನಾನು ಹೆಸರು, ಊರು ಇತ್ಯಾದಿ ಬಗ್ಗೆ ಹುಶಾರಾಗೆ ಇರ್ತೀನಿ. ಅವನು ಅಕಸ್ಮಾತ್ ಓದಿದರೂ, ನಾನೇನು ನಿನ್ನ ಹೆಸರು ಹೇಳಿಲ್ಲ ಬಿಡು ಅನ್ಬೋದು. ಇದು ನಿನ್ನದೇ ಕತೆ ಅಂತ ಯಾರಿಗೂ ಗೊತ್ತಾಗಲ್ಲ ಬಿಡು ಅಂತ ಸಮಾದಾನ ಮಾಡ್ಬೋದು. ಹಿಂಗೆಲ್ಲಾ ದೈರ್ಯ ತೊಗೊಂಡು ಈ ಕತೆ ಬರ್ದೇಬಿಟ್ತೀನಿ. ಏನಾಗೊತ್ತೊ ಆಗಲಿ.
ಇದು ಶುರುವಾಗೋದು ಹೀಗೆ. ಮೊನ್ನೆ ನಮ್ಮ ಮನೆ ಎದುರಗಡೆ ಇರೋ ದೇವಸ್ಥಾನದಲ್ಲಿ ಒಂದು ಫಂಕ್ಷನ್. ನಮ್ಮನೇ ಎದುರುಗಡೇ ಇರೋ ಒಬ್ಬ ಅಡುಗೆ ಭಟ್ಟರ ಮದುವೆ ಸಿಲ್ವರ್ ಜ್ಯುಬಿಲಿ. ವಯಸ್ಸಾದ ಹೆಂಡ್ತಿ ನಾಚ್ಕೊಳೋದು, ಜನ ಚುಡಾಯಿಸೋದು, ಭಟ್ಟರು ನಗೋದು, ಎಲ್ಲಾ ನೆಡೆದಿತ್ತು. ಇವೆಲ್ಲಾ ಎಷ್ಟು ನಾಟಕಾ, ಮದುವೆ ಅನ್ನೋ ಸಿಸ್ಟಮ್ನ ಒಳಗಿರೋ ಹುಳುಕನ್ನೆಲ್ಲಾ ಮುಚ್ಚಿ ಹಾಕಿ, ಸುಳ್ಳು ಸುಳ್ಳೇ ಖುಷಿ ಪಡೋ ಸ್ಟಂಟ್ ಅಂತ ಅನ್ಕೋತಾ ಮೂಲೇಲಿ ನಿಂತಿದ್ದೆ. ನನ್ನ ಹೆಂಡ್ತಿ ಆ ಕಡೆ ಎಲ್ಲೋ ನಿಂತಿದ್ಲು. ಆದಷ್ಟು ಬೇಗ ಊಟ ಮುಗಿಸಿಕೊಂಡು ಎಸ್ಕೇಪ್ ಆಗ್ಬೇಕು ಅಂತ ಸ್ಕೆಚ್ ಹಾಕೊಳ್ತಿದ್ದಾಗ, ಪಕ್ಕದಲ್ಲೇ ಒಬ್ಬ ‘ಅಣ್ಣಾ…’ ಅಂದ.
ಕುಳ್ಳಗೆ, ತೆಳ್ಳಗೇ, ಮೈಮೇಲೆಲ್ಲೂ ಮಾಂಸ ಇಲ್ಲ, ಸಣ್ಣ ಮುಖ, ತೆಳು ಮೀಸೆ, ಆಚೆ ಈಚೆ ನೋಡೋ ಕಣ್ಣುಗಳು…. ನೋಡಿದ ತಕ್ಷಣ ಗೊತ್ತಾಯ್ತು.. ಅರೆ, ಪ್ರಿನ್ಸ್ಸ್ (ಹೆಸರು ಬದಲಿಸಲಾಗಿದೆ) ಅಂದೆ. ಹಾಗೆ ನೋಡಿದರೆ ಎದೆ ಝಲ್ ಅನ್ಬೇಕಿತ್ತು. ಹಣೇ ಮೇಲೆ ಬೆವರು ಹನಿ ಕೂಡ್ಬೇಕಾಗಿತ್ತು. ಯಾಕೆಂದರೆ, ಟೀ.ವಿ. ಕ್ರೈಮ್ ಪ್ರೋಗ್ರಾಮ್ನಲ್ಲಿ ಹೇಳ್ತಾರಲ್ಲ ಹಾಗೆ, ಈ ಪ್ರಿನ್ಸ್ನ ಚರಿತ್ರೇನೇ ಹಾಗಿತ್ತು…. ನನಗೆ ಅಂತದ್ದೇನು ಆಗ್ಲಿಲ್ಲ. ಅಯ್ಯೋ ಇವನ, ಇಲ್ಲ್ಯಾಕೆ ಬಂದ್ನಪ್ಪ.. ಅನ್ನುಸ್ತು ಅಷ್ಟೇ… ನಾನು ಕತೆಕವನ ಬರಿದೇ ಇರೋಕ್ಕೆ ಇದೂ ಒಂದು ಕಾರಣ. ಸಾಮಾನ್ಯವಾಗಿ ಕೌತುಕ, ಗಾಭರಿ, ನಡುಕ, ಅಗೋ ಕಡೆ ನನಗೆ ಅಮ್ಯೂಸ್ಮೆಂಟ್ ಮಾತ್ರ ಆಗತ್ತೆ. ಎದೆ ಝಲ್ ಅಂತ ಅನಿಸೋದೆ ಇಲ್ಲದೇ ಇರೋನು, (ಒಂದು ಕಾಲದಲ್ಲಿ ಅನಿಸೋದು) ಕತೆ, ಸಾಹಿತ್ಯ ಬರಿಯಕ್ಕೆ, ಹೆಂಗೆ ಆಗುತ್ತೆ ಹೇಳಿ? ಇರಲಿ, ಈಗ ಒಂದು ಫ್ಲ್ಯಾಶ್ಬ್ಯಾಕ್ಗೆ ಹೋಗಿ ಬರೋಣ…
ಈ ಪ್ರಿನ್ಸ್ನ್ನ ಮೊದಲು ನಾನು ನೋಡಿದ್ದು ನಾನು ಕಾಲೇಜ್ ಓದೋ ದಿನದಲ್ಲಿ. (ಕಾಲೇಜ್ ಹೆಸರು, ಊರ ಹೆಸರು ಬೇಡ: ಇದೆಂತಾ ಕತೆಯಪ್ಪ, ಊರ ಹೆಸರು ಇಲ್ಲ, ಪಾತ್ರಗಳ ಹೆಸರು ಇಲ್ಲ ಅಂತ್ಕೋತ್ತೀರ: ಆದರೆ ನನಗೆ ನನ್ನದೇ ಕಾರಣಗಳಿವೆ, ಎಥಿಕ್ಸ್ ಇದೆ. ಇರೋರ್ವ್ರುದ್ದೆಲ್ಲಾ ಹೆಸರು, ಪೋಸ್ಟಲ್ ಅಡ್ರೆಸ್ ಬರೆದು ಕತೆ ಬರಿಯೋದು ಸರಿ ಅಲ್ಲ.) ಇವನ ಬಗ್ಗೆ ಮೊದಲು ನೆನಪು ಬರೋದು ಅಂದ್ರೆ ನಮ್ಮ ಕಾಲೇಜಿನ ಯಾನ್ಯುಯಲ್ ಡೇ ಫಂಕ್ಷನ್ ದಿನದ ಘಟನೆಗಳು. ಅವತ್ತು ಕಾಲೇಜಲ್ಲಿ ನನ್ನ ಫ್ರೆಂಡ್ ಒಬ್ಬ ಒಂದು ಹುಡುಗಿ ಹೆಗಲ ಮೇಲೆ ಕೈ ಹಾಕೋಂಡು ನಿಂತಿದ್ದ. ಇದೇನಪ್ಪಾ ಇಷ್ಟು ಖುಲ್ಲಂಖುಲ್ಲಾ ಅಂತ ನೋಡಿದ್ರೆ ಅದು ಹುಡುಗಿ ಅಲ್ಲ. ಚೂಡಿದಾರ ಹಾಕೋಂಡು ಬಂದಿರೋ ಪ್ರಿನ್ಸ್! ಒಂದು ವಿಗ್ ಬೇರೆ ಹಾಕ್ಕೋಂಡು ಬಂದಿದ್ದಾನೆ! ಅವನಿಗೆ ಒಂದು ಪೃಯಜ್ ಕೂಡ ಬಂದಿತ್ತು. ಅದನ್ನ ತೊಗೋಳಕ್ಕೂ ಸ್ಟೇಜ್ ಮೇಲೆ ಹಾಗೇ ಹೋದ. ವೇದಿಕೆಯ ಮೇಲಿನ ಗಣ್ಯ ವ್ಯಕ್ತಿಗಳಿಗೆಲ್ಲಾ ಕಂನ್ಪ್ಯೂಸೋ ಕಂನ್ಪ್ಯುಸು… ಹುಡುಗರೆಲ್ಲಾ ಗೊಳ್ಳೆ ಹೊಡೆದು ನಕ್ಕಿದ್ದೋ ನಕ್ಕಿದ್ದು. ನಾಲ್ಕು ಜನ ನೋಡಿ ನಗಲಿ ಅಂತ ತೀರಾ ಹುಡುಗಿ ಡ್ರೆಸ್ ಹಾಕೊಂಡು ಬರೋದಾ! ಈ ನನ್ನ ಮಗನಲ್ಲಿ ಏನೂ ಸ್ಪೆಷಲ್ ಅನ್ನೋದು ಇಲ್ಲ, ಹಾಗಾಗಿ ತೀರ ಬಫೂನ್ ತರ ಆಡ್ತಾನೆ ಅಂತ ನಾವು ಫ್ರೆಂಡ್ಸ್ ಮಾತಾಡ್ಕೊಂಡ್ವಿ.
ಆದರೆ ಇಂತ ಪ್ರಿನ್ಸ್ ಮತ್ತೆ ಎದುರಿಗೆ ಬಂದಿದ್ದು ಟೀವೀನಲ್ಲಿ: ನಾನು ಕಾಲೇಜು ಮುಗುಸಿ ಕೆಲಸಕ್ಕೆ ಸೇರಾದ ಮೇಲೆ. ಕೃಯಮ್ ಡ್ಯೆರಿನೋ, ಕೃಯಮ್ ನ್ಯೂಸೋ ಯಾವುದೋ ಸುಡುಗಾಡು ಪ್ರೋಗ್ರಾಮ್ನಲ್ಲಿ. ಅದು ಒಂದು ಕೊಲೆಯ ಕತೆ. ಬರೀ ಒಂದು ಕೊಲೆಯಲ್ಲ, ಸೀರಿಯಲ್ ಕೊಲೆಗಳ ಕತೆ. ಈ ಕೊಲೆಗಾರರು ಒಬ್ಬಳೇ ಹೆಂಗಸು ಇದ್ದ ಮನೇಗೆ ನೀರು ಕೇಳಲು ಹೋಗೋದು, ನೀರು ತರಕ್ಕೆ ಒಳಗೆ ಹೋದಾಗ ನುಗ್ಗಿ ಕೊಲೆ ಮಾಡೋದು. ಕೊಲೆ ಮಾಡೋಕ್ಕೆ ಮುಂಚೆ ಹೆಂಗಸಿನ ಬಟ್ಟೆ ಎಲ್ಲಾ ಬಿಚ್ಚಿಸಿ ಬಿಡೋದು. ಈ ಗುಂಪಿನಲ್ಲಿ ಈ ನಮ್ಮ ಪ್ರಿನ್ಸ್. (ನಮ್ಮ ಅಂದರೆ ನಮ್ಮ ಅಲ್ಲ: ಮಾತಿಗೆ ಹೇಳೋದು, ಅಷ್ಟೆ.) ನಮ್ಮ ದೇಶದ ಹೆಂಗಸರು ಜೀವ ಹೋದ್ರೂ ಬೆತ್ತಲೆ ಹೊರಗೆ ಬರೋಲ್ಲ ಅಂತ ಕಾಲೇಜಲ್ಲಿ ಹುಡುಗಿ ಡ್ರೆಸ್ ಹಾಕಿದ್ದ ಪ್ರಿನ್ಸ್ಗೆ ಗೊತ್ತಿತ್ತು. ಟೀವೀನಲ್ಲಿ ಖುದ್ದು ಪ್ರಿನ್ಸ್ ಪೋಲಿಸರ ಜೊತೆ ನಿಂತಿದ್ದ. ಅವನ ಜೊತೆಗೆ ಒಂದು ನಾಲ್ಕು ಜನ ಇಲ್ಲೇ ಕೊಲೆ ಮಾಡಿದ್ದು, ಇದೇ ಬೀರು ವೊಡೆದಿದ್ದು, ಅಂತ ಕ್ಯಾಮರಾ ಮುಂದೆ ಹೇಳ್ತಿದ್ರು. ಪೋಲಿಸರು ಅವಾಗವಾಗ ಆವಾಜ್ ಹಾಕ್ತಿದ್ರು. ಇವರು ಸಿಕ್ಕಿಹಾಕೊಳೋ ಮುಂಚೆ, ಒಂದು ಕೋಲೇಲಿ ಸತ್ತೋಳ ಗಂಡನ್ನೇ ಹಿಡಿದು ಜೈಲಿಗೆ ಹಾಕಿದ್ರು. ಪಾಪ, ಆಮೇಲೆ ಅವ್ನು ರಿಲೀಸಾದ, ಇವರು ಜ್ಯೆಲಿಗೆ ಹೋದ್ರು.
ಇದರ ಬಗ್ಗೆ ನಮ್ಮ ಎರಿಯಾದಲ್ಲಿ ನಾವು ಹುಡುಗರು ಬಾಳಾ ಡಿಸ್ಕಸ್ ಮಾಡಿದ್ವಿ. ಪ್ರಿನ್ಸ್ ಸ್ವಲ್ಪ ತರಲೆ ನಿಜ, ಆದರೆ ಕೊಲೆ ಮಾಡೋ ಲೆವೆಲ್ನಲ್ಲಿ ಇದಾನೆ ಅಂತ ಯಾರಿಗೂ ಗೊತ್ತಿರಲಿಲ್ಲ. ಅವನು ತೀರ ಇತ್ತೀಚೆಗೆ ತನ್ನ ತಮ್ಮಂದು, ತಂಗೀದು ಮದುವೆ ಮಾಡಿದ್ದ. ಸಿಕ್ಕಾಗ ನಮ್ಮ ಜೊತೆಗೆ ಕಾಫಿ ಕುಡಿದು ಸಿಗರೇಟ್ ಸೇದ್ತಿದ್ದ. ಹೀಗೆ ನಮ್ಮ ಜೊತೆ ಓಡಾಡುತಿದ್ದ ಮಾಮೂಲು ವ್ಯಕ್ತಿ ಒಬ್ಬ ಸೀರಿಯಲ್ ಕಿಲ್ಲರ್ ಅನ್ನೋದು ಬಹಳ ಮಜವಾದ ವಿಷಯ ಅನ್ನೋ ಹಾಗೆ ಮಾತಾಡ್ತಿದ್ವಿ. ಮೊನ್ನೆ ಮೊನ್ನೆ ಸಿಕ್ಕಿದ್ದ ಕಣೋ, ಅಯ್ಯೊ, ನಮ್ಮನೆಗೆ ಬಂದಿದ್ನಲ್ಲೋ, ಇಲ್ಲೆ ಮಾರ್ಕೆಟ್ನಲ್ಲಿ ಟೀ ಕುಡಿದ್ವಿ ಮಾರಾಯ, ಏನು ಖತರ್ನಾಕ್ ಬಡ್ಡಿಮಗ ನೋಡು, ಅಂತೆಲ್ಲಾ ಮಾತಾಡಿದ್ವಿ. ಆಗ ನಾವೆಲ್ಲಾ ಇನ್ನೂ ಯುವಕರು. ಎಲ್ಲಾ ವಿಷಯ ತಮಾಷೆಯಾಗೆ ಕಾಣುಸ್ತಿದ್ವು. ಸತ್ತೋರ ಬಗ್ಗೆ, ಅವರ ಸಂಸಾರದ ಬಗ್ಗೆ ಚಿಂತೆ ಮಾಡೋರು ನಾವಾಗಿರಲಿಲ್ಲ. ಹೆಂಗಸರ ಬಟ್ಟೆ ಬಿಚ್ಚಿಸಿದ್ದ ವಿಷಯಾನಾ ಏನು ಕಿಲಾಡಿ ನನ್ಮಕ್ಕಳು ಅಂತ ಹೊಗುಳ್ತಿದ್ವಿ. ನಮ್ಮಲ್ಲೂ ಸೂಕ್ಷತೆ ಅಂತ ಏನು ಇರಲ್ಲಿಲ್ಲ ಬಿಡಿ. ಹಾಗೆ ನೋಡಿದರೆ ಈಗಲೂ ಸೂಕ್ಷತೆ ಇದಿಯೋ ಇಲ್ಲೋ: ಇದ್ದಿದ್ದರೆ, ಈ ಕತೆ ಬರಿಬೇಕಿತ್ತಾ? ಹಾಳಾಗಿ ಹೋಗ್ಲಿ ಬಿಡು ಅಂತ ನನ್ನ ಹೆಂಡ್ತಿ ಮಕ್ಕಳ ಹತ್ರ ಹೇಳಿಕೊಂಡು ಸುಮ್ಮನಿರಬಹುದಿತ್ತು. ಏನೋ ಈ ಟೀವೀ ಇಂಟನರ್ೆಟ್ ನೋಡಿ ನೋಡಿ, ಎಲ್ಲಾ ಮಜಾನೇ, ಎಲ್ಲಾದು ಹಂಚಿಕೊಳ್ಳೋದೆ ಅಂತ ಆಗಿದೆಯೇನೋ ಯಾರಿಗೆ ಗೊತ್ತು. ಇದೆಲ್ಲಾ ನಡೆದಾಗ ಇಂಟನರ್ೆಟ್ ಇರಲಿಲ್ಲ ಬಿಡಿ, ಸುಮ್ನೆ ಅದನ್ಯಾಕೆ ಬ್ಯೆಯ್ಯೋದು. ಇರಲಿ ಈಗ ಕತೆಗೆ ವಾಪಾಸು ಬರೋಣ.
ಇದೆಲ್ಲಾ ಆಗಿ ಒಂದು ಇಪ್ಪತ್ತು ವರ್ಷ ಆಯ್ತು. ಈಗ ಮತ್ತೆ ಒಂದು ಹದಿನೈದು ವರ್ಷದ ಹಿಂದೆ ಹೀಗೆ ನಾನು ಕೆಲಸ ಮಾಡೋ ಊರಿಂದ ಬಸ್ಸಲ್ಲಿ ನಮ್ಮ ಊರಿಗೆ ಹೊರಟಿದ್ದೆ. (ಊರಿನ ಹೆಸರು ಕೇಳ್ಬೇಡಿ). ಚಳಿಗಾಲದ ದಿನ. ಕಿಟಕಿ ಪಕ್ಕ ಕೊತುಕೊಂಡು ಹೊರಗೆ ನೋಡೋ ಮಜ ಎಂಜಾಯ್ ಮಾಡ್ಕೊಂಡು ಬೆಚ್ಚಗೆ ಕೂತೆ. ಯಾರೂ ಪರಿಚಯದವರು ಸಿಗೋದು ಬೇಡ, ಸಿಕ್ಕರೆ ಈ ಏಕಾಂತಕ್ಕೆ ಬಂಗ ಬರತ್ತೆ ಅಂತ ಅನ್ನ್ಕೊತಾ ಇದ್ದೆ, ಅಣ್ಣ, ಇಲ್ಲಿ ಬಾ ಅಂತ ದ್ವನಿ ಕೇಳಿಸ್ತು. ನೋಡಿದರೆ ಇವನೇ ಪ್ರಿನ್ಸ್! ತತ್ತ್ ಇದರಾ, ಯಾಕಾದರೂ ಸಿಕ್ಕನೋ ಅಂತ ಏನು ಗುರು ಅಂತ ಪಕ್ಕ ಹೋಗಿ ಕೂತೆ. ಕೂತ ಮೇಲೆ ನನಗೆ ಇವನ ಕೇಸ್ ನೆನಪಾಯ್ತು. ಅಯ್ಯೋ ದೇವರೆ, ಇವನು ಯಾಕೆ ಹೊರಗಿದ್ದಾನೆ, ಇಂತ ಸೀರಿಯಲ್ ಕಿಲ್ಲರ್ ಎಲ್ಲರ ತರ ಬಸ್ಸಲ್ಲಿ ಕೂತು, ಫ್ರೆಂಡ್ಸ್ ಸಿಕ್ಕಿದರೆ ಕರದು ಮಾತಾಡ್ಸಿ, ಮಾಮೂಲು ಜನರ ತರಾನೆ ಇದಾನಲ್ಲ ಅಂತ ಅನ್ನಿಸ್ತು. ಆಮೇಲೇ ಅವ್ನೇ ವಿಷಯ ಎತ್ದಾ. ನೋಡು ಗುರು, ಸುಮ್ಸುಮ್ನೆ ಕೇಸ್ ಹಾಕಿದಾರೆ ಪೋಲಿಸರು, ನಾವೇನು ಮಾಡೇ ಇಲ್ಲಾ, ಇನ್ನೇನ್ ರೀಲೀಸ್ ಆಗ್ತೀವಿ ಅಂದ. ಆಮೇಲೆ ಮಾಮೂಲಾಗೆ ಹಳೇ ಸ್ನೇಹಿತರು ಅಪರೂಪಕ್ಕೆ ಸಿಕ್ಕಾಗ ಏನೇನು ಮಾತಾಡ್ತಾರೋ ಅದನ್ನೆಲ್ಲಾ ಮಾತಾಡಿದ್ವಿ. ಅವನು ಸಿಕ್ಕಿದ್ನಾ, ಇವನು ಅಲ್ಲಿದಾನೆ, ತಂಗಿ ಮದುವೆ ಆಯ್ತು, ತಮ್ಮಗೆ ಕೆಲಸ ಸಿಕ್ತು, ಮನೆ ಕಟ್ಟಿಸಿದ್ಯಾ, ಸೈಟ್ ತೊಗೊಂಡ್ಯಾ,… ಇತ್ಯಾದಿ. ಮನೆ ಎಲ್ಲಿ ಅಂತ ಕೇಳ್ದ: ಇಲ್ಲೇ ಆ ಕಡೆ ಬರುತ್ತೆ ಅಂದು ಮಾತು ಬದಲಿಸಿದೆ.

ಇದಾದ ಮೇಲೆ ಪ್ರಿನ್ಸ್ ಅನ್ನ ನಾನು ಮರತೇ ಬಿಟ್ಟಿದ್ದೆ. ಯಾವಾಗ್ಲೋ ಒಂದು ಸಲ ಹೆಂಡ್ತಿಗೆ ಈ ತರದ ಫ್ರೆಂಡ್ಸೂ ನನಗೆ ಇದ್ದಾರೆ ಅಂತ ತೋರಿಸಿಕೊಳಕ್ಕೆ ಇವನ ವಿಷ್ಯ ಹೇಳಿದ್ದೆ. ಹೋಗ್ರಿ ಸುಳ್ಳು ಹೇಳ್ತಿದ್ದೀರ ಅಂದ್ಲು. ಈ ತರದೋರು ಎಲ್ಲೊ ಪೇಪರ್ ಅಲ್ಲಿ, ಟೀವೀಲ್ಲಿ ಇರತಾರೇ ಹೊರತು ಅಕ್ಕ ಪಕ್ಕ ಇರೋಲ್ಲ, ಅದರಲ್ಲೂ ನನ್ನ ಗಂಡನಂತೋವ್ನ ಫ್ರೆಂಡ್ ಆಗಿರೋಲ್ಲ ಅಂತ ನನ್ನ ಹೆಂಡ್ತಿ ನಂಬುಗೆ. ಅಂತ ಪ್ರಿನ್ಸ್ ಈಗ ಎದುರಿಗೆ ನಿಂತಿದ್ದಾನೆ. ಎಲ್ಲರ ತರ ಫಂಕ್ಷನ್ಗೆ ಬಂದಿದ್ದಾನೆ. ಏನು ಹೇಳೊದು ಅಂತ ಗೊತ್ತಾಗದೆ, ಏನು ಗುರು, ಕಂಡೆ ಇಲ್ಲಾ ಅಂದೆ. ಯೇ, ನಾನು ಅಲ್ಲಿ ಇದ್ನಪ್ಪ (ಮತ್ತೆ ಊರ ಹೆಸರು ಬೇಡ) ಅಂದ. ಬಿಡು, ಮಗನೆ ಎಲ್ಲಿದ್ದಿ ಅಂತ ಗೊತ್ತು ಅಂತ ಮನಸಲ್ಲೇ ಅಂದ್ಕೊಂಡು, ಏನು ಇಲ್ಲಿ ಅಂದೆ. ಯೇ, ಭಟ್ಟರು ಫ್ಯಾಮಿಲಿ ಫ್ರೆಂಡ್ ಮಾರಾಯ: ನಮ್ಮಪ್ಪಂಗೆ ಕ್ಲೋಸ್ ಇದ್ದರು ಅಂದ. ಅಷ್ಟೊತ್ತಿಗೆ ಭಟ್ಟರು, ಏ ಪ್ರಿನ್ಸ್, ಬಾರೋ: ಅಲ್ಲ್ಯಾಕೆ ನಿಂತಿದ್ದೀಯ ಅಂತ ಹೆಗಲ ಮೇಲೆ ಕೈ ಹಾಕಿ ಅವನನ್ನ ಕರಕೊಂಡು ಹೋಗಿ ಫೋಟೋಕ್ಕೆ ನಿಲ್ಲಿಸಿಕೊಂಡ್ರು. ಜೊತೆಗೆ ಒಂದು ಹುಡಿಗೀನ್ನು ಕರೆದ್ರು. ಆ ಹುಡುಗಿ ಚೆನ್ನಾಗಿ ಅಲಂಕಾರ ಮಾಡ್ಕೊಂಡ್ ಬಂದಿತ್ತು. ಮಕ್ಕಳೆಲ್ಲಿ ಅಂತ ಯಾರೋ ಕೇಳ್ದಾಗ, ಹೊಸ ಬಟ್ಟೆ ಹಾಕೊಂಡಿರೋ ಒಬ್ಬ ಸಣ್ಣ ಹುಡುಗ, ಒಂದು ಸಣ್ಣ ಹುಡುಗಿ ಬಂದ್ವು. ಹುಡುಗಿಗಂತೂ ಚೆನ್ನಾಗಿ ಸಿಂಗಾರ ಮಾಡಿದ್ರು. ಪ್ರಿನ್ಸ್ ಹೆಂಡ್ತಿ ಮಕ್ಕಳು! ಇವನಿಗೆ ಮದುವೆ ಆಗಿದೆ, ಹೆಂಡ್ತಿ ಮಕ್ಕಳ ಜೊತೆ ಫಂಕ್ಷನ್ಗೆ ಬಂದಿದ್ದಾನೆ! ಇವನ್ಯಾವಾಗ ಮದುವೆ ಆದ, ಮಕ್ಕಳನ್ನ ನೋಡಿದ್ರೆ ಕೇಸು ನೆಡೀತಿರಬೇಕಾದ್ರೆ ಮದುವೆ ಆಗಿದೆ! ಹಾಗಿದ್ರೆ ಇವನು ಜೈಲಿಗೆ ಹೋಗಲಿಲ್ವಾ? ಇಲ್ಲಾ ಇವನು ಹೇಳ್ದಂಗೆ ಇವನು ಇನ್ನೊಸೆಂಟಾ! ಹಾಗಾದ್ರೆ ಟೀವೀನಲ್ಲಿ ಬಂದಿದ್ದು ಎಲ್ಲಾ ಸುಳ್ಳಾ? ನನ್ನ ನೆನಪೇ ನನಗೆ ಕೈ ಕೊಡ್ತಾ ಇದ್ಯಾ? ಛೇ, ಯಾರ ಬಗ್ಗೆ ಆದರೂ ಹೀಗೇ ಅಂತ ಜಡ್ಜ್ಮೆಂಟ್ ಮಾಡಬಾರ್ದು. ಆದರೆ ತೀರ ಇಡೀ ಜಗತ್ತಿಗೆ ಟೀವೀಲ್ಲಿ ತೋರಿಸಿರೋದು, ಪೇಪರಲ್ಲಿ ಫೋಟೋ ಸಮೇತ ಬಂದಿರೋದು, ಎಲ್ಲಾ ತೀರಾ ಸುಳ್ಳ? ಇಲ್ಲಿ ಇವನ ಸಂಸಾರ ಖುಷಿಯಿಂದ ಫೋಟೋಗೆ ಫೋಸ್ ಕೋಡೋದು ನೋಡಿದ್ರೆ ಏನು ಅಂದ್ಕೋಬೇಕು ಅಂತಾನೆ ಗೋತ್ತಾಗಲಿಲ್ಲ. ನಿಜ, ಎಷ್ಟೋ ಜನ ಕೆಟ್ಟವರು ನಮ್ಮ ನಿಮ್ಮ ನಡುವೇನೇ ಇರ್ತಾರೆ, ಏನೂ ಮಾಡೇ ಇಲ್ವೇನೋ ಅನ್ನೋ ಹಾಗೆ ಇರ್ತಾರೆ. ಅದರೆ ತೀರ ಈ ತರದ ಸೀರಿಯಲ್ಲ್ ಕಿಲ್ಲರ್ ನಾರ್ಮಲ್ಲಾಗಿ ಇರೋದು ಸಾದ್ಯಾನಾ! ಸಂಸಾರ ಮಾಡ್ಕೊಂಡು, ಫಂಕ್ಷನ್ಗೆ ಬಂದು, ಇಲ್ಲ: ಇವನು ಹೇಳಿದ್ದಾಗೆ ಪೋಲಿಸರೆ ಇವನನ್ನ ಫಿಕ್ಸ್ ಮಾಡಿರಬೇಕು. ಹೀಗೆ ನನ್ನ ಮನಸಿನಲ್ಲಿ ಗೊಂದಲಗಳು ಉಂಟಾಗಕ್ಕೆ ಸುರುವಾದ್ವು.
ಮತ್ತೆ ಪ್ರಿನ್ಸ್ ನನ್ನ ಹತ್ರಾನೇ ಬಂದು ನಿಂತ. ಅವನ ಮಕ್ಕಳನ್ನು ಕರೆದು ತೋರಿಸ್ದ. ನಿನಗೆ ಮಕ್ಕಳು? ಅಂದ. ಮಗನ ತೋರಿಸ್ದೆ. ಒಂದೇನಾ, ಇನ್ನೊಂದು ಮಾಡ್ಕೊ ಅಂತ ಸಲಹೆ ಕೊಟ್ಟ. ಯಾವ ಸ್ಕೂಲು ಅಂದು ಯೆಜುಕೇಷನ್ ಬಾಳಾ ಇಂಪಾಟರ್ೆಂಟ್ ಮಾರಾಯಾ, ಇಗ್ನೋರ್ ಮಾಡಬಾರ್ದು ಅಂದ. ಅವನ ಹೆಂಡ್ತಿನ್ನ ಕರೆದು ಪರಿಚಯ ಮಾಡಿಸ್ದ. ನನ್ನ ಕ್ಲೋಸ್ ಫ್ರೆಂಡು, ನಾವೆಲ್ಲ ಒಂದೇ ಗುಂಪು ಅಂದ. ಅವನ ಹೆಂಡ್ತಿ ನಮಸ್ಕಾರ ಅಂದ್ಲು. ಬಾಳ ಸಂಭ್ರಮದಿಂದ ಇದ್ಲು. ಬನ್ನಿ ಮನೆಗೆ ಅಂದ್ಲು. ನಿಮ್ಮ ಮನೆಯೆಲ್ಲಿ ಅಂದ್ಲು. ಎದುರಗಡೆನೆ ಅಂತ ಅನ್ನಲೇ ಬೇಕಾಯ್ತು. ಮಿಸೆಸ್ ಬಂದಿಲ್ವ ಅಂದ್ಲು. ಕರೆದು ಪರಿಚಯ ಮಾಡಿಸ್ದೆ. ಮತ್ತೆ ಪ್ರಿನ್ಸ್ ನಾವೆಲ್ಲಾ ಒಂದೇ ಗುಂಪು ಅಂದ. ಆಮೇಲೆ ಅವನ ಹೆಂಡ್ತಿ ಆ ಕಡೆ ಹೋದಳು. ನನ್ನ ಹೆಂಡ್ತೀನು ವಾಪಾಸ್ ಹೋದ ಮೇಲೆ ಮತ್ತೆ ಮಾತು ಸುರು ಮಾಡ್ದ, ಅವನು ಎಲ್ಲಿ, ಇವನು ಎಲ್ಲಿ ಅಂತ. ನಮ್ಮ ಫ್ರೆಂಡ್ಸ್ ಗುಂಪಲ್ಲಿ ಇನ್ನೊಬ್ಬ ಖತರನಾಕ್ ವ್ಯಕ್ತಿ ಇದ್ದ. ಅವನೇನು ಕೊಲೆಗಿಲೆ ಮಾಡಿಲ್ಲ, ಆದರೆ ಸಣ್ಣ ಪುಟ್ಟ ಗಲಾಟೆ ಮಾಡ್ಕೊಂಡು ಜೈಲು ಸುತ್ತ್ಕೊಂಡು ಇರತಿದ್ದ. ಇದೋಳ್ಳೆ ಗ್ರಾಚಾರ, ಕೆಲವರು ನನ್ನ ಫ್ರೆಂಡ್ ಅಮೇರಿಕಾದಲ್ಲಿದಾನೆ, ವಾಷಿಂಗ್ಟನ್ನಲ್ಲಿ ಇದಾನೆ, ಪೂನಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ ಅನ್ನೋ ಪುಣ್ಯ ಪಡೆದಿರುತ್ತಾರೆ: ನಾನು ಇಲ್ಲಿ ಒಬ್ಬ ಜೈಲಿಗೆ ಹೋಗಿ ಬಂದಿರೋನ ಜೊತೆ, ಇನ್ನೊಬ್ಬ ಮೊನ್ನೆ ತಾನೆ ಬಳ್ಳಾರಿ ಜೈಲಿಂದ ಬಂದಿರೋನ ಬಗ್ಗೆ ಮಾತಾಡ್ತಿದ್ದೀನಿ. ಅವನ ಜೊತೆ ಹುಷಾರು ಮಾರಾಯ, ಮಾತಾಡಿಸ್ಬೇಡ, ಡೇಂಜರಸ್ ವ್ಯಕ್ತಿ ಅವನು, ನಾನಂತು ಅವನು ಸಿಕ್ಕರೆ ಮುಖ ತಿರುಗುಸ್ಕೊಂಡು ಬಿಡ್ತೀನಿ ಅಂತ ಪ್ರಿನ್ಸ್ ನನಗೇ ಸಲಹೆ ಕೊಟ್ಟ! ಇದೊಳ್ಳೆ ಮಜ ಆಯ್ತು ಅಂತ ಅಂದ್ಕೊಂಡೆ. ಅಷ್ಡು ಹೊತ್ತಿಗೆ ಊಟಕ್ಕೆ ಕರೆದರು. ಊಟ ಮುಗಿಸಿ ಬರ್ತೀನಿ ಅಂತ ಹೇಳಿ ಹೊರಟೆ. ಅಪ್ಪಿ ತಪ್ಪಿನೂ ಮನೆಗೆ ಬಾ ಅಂತ ಅವನನ್ನು ಕರೀಲಿಲ್ಲ.
ಮನೆಗೆ ಹೋದ ತಕ್ಷಣ ಹೆಂಡ್ತಿ ತಿಳಿ ಸಾರ್ ಸಕತ್ತಾಗಿತ್ತಲೇನ್ರಿ ಅಂದ್ಲು. ನಿನ್ನ ತಿಳಿ ಸಾರ್ ಮನೆ ಹಾಳಾಗ, ಅಲ್ಲಿ ಪರಿಚಯ ಮಾಡಿಸ್ದ್ನಲ್ಲ, ಅವನು ಯಾರು ಅಂತ ಗೊತ್ತ ಅಂದು ಅವನ ಕತೆ ಹೇಳ್ದೆ. ರಾತ್ರಿ ನನ್ನ ಮಗಂಗೆ ಸಾಮಾನ್ಯವಾಗಿ ಯಾವುದಾದ್ರು ಕತೆ ಹೇಳ್ತಿನಿ. ಕೆಲುವು ಸಾರಿ ಶೆಲರ್ಾಕ್ ಹೋಮ್ಸ್ ಕತೇನು ಹೇಳೊದುಂಟು. ಅವನನ್ನೂ ಮಲಗಿಸಿಕೊಂಡು ನಿಜವಾದ ಕ್ರ್ಯೆಮ್ ಕತೆ ಹೇಳ್ತೀನೀ ಬಾ ಅಂದು ಈ ಪ್ರಿನ್ಸ್ ಬಗ್ಗೆ ಹೇಳ್ದೆ. ಇಬ್ಬರೂ ಕತೆ ಕೇಳಿ ಸ್ವಲ್ಪ ಹೊತ್ತು ಸೈಲೆಂಟ್ ಆದ್ರು. ಮಗ ಅಪ್ಪ ಬಾಗಿಲು ಹಾಕಿದ್ಯ ನೋಡು ಅಂದ. ನನ್ನ ಹೆಂಡ್ತಿ ಮುಖ ಕಪ್ಪಿಟ್ಟು ಹೋಗಿತ್ತು. ಒಬ್ಬ ಕೊಲೆಗಾರನ್ನ ನಿಜವಾಗ್ಲು ಎದುರಿಗೇ ನೋಡಿ ಮಾತಾಡಿಸಿದ್ದು ಅವರಿಬ್ಬರಿಗೂ ಹೆದರಿಕೆ ಆಗಿತ್ತು. ರಾತ್ರಿ ಇಡೀ ಅವರಿಬ್ಬರಿಗೂ ಅರ್ದಂಬರ್ದ ನಿದ್ದೆ. ಮತ್ತೆ ಬೆಳಿಗ್ಗೆ ಎದ್ದ ತಕ್ಷಣ ನಿಜಾನ ನಿನ್ನೆ ಹೇಳಿದ್ದು ಅಂತ ಶುರು ಹಚ್ಕೊಂಡ್ರು. ಈ ವಿಷಯಾನೆಲ್ಲಾ ಹೇಳಲೇಬಾರದಿತ್ತು ಅನಿಸ್ತು. ನಾನೇನೋ ಇದೊಂದು ಮಜದ ವಿಷ್ಯ ಅನ್ನೋ ತರ ಇದನ್ನೆಲ್ಲಾ ಟ್ರೀಟ್ ಮಾಡ್ತಿದ್ದಿನೇನೋ, ಇಂತದನೆಲ್ಲಾ ಇನ್ನೂ ಅಜ್ಜಿ ಕತೆ ಕೇಳೋ ಮಗನಿಗೆಲ್ಲಾ ಹೇಳಬಾರದಿತ್ತು ಅನ್ನಿಸಿ ನನ್ನ ಬಗ್ಗೆ ನನಗೇ ಬೇಜಾರಾಯ್ತು. ಇದನ್ನೆಲ್ಲಾ ಎಂಟಟರ್ೇನ್ಮೆಂಟ್ ಅನ್ನೋ ಹಾಗೆ ಹೇಳ್ತಿರಲ್ಲಾ ಅಂತ ಬೈಸಿಕೊಂಡಿದ್ದೂ ಆಯ್ತು. ಮತ್ತೆ ನಿಜ ಏನ್ರಿ ಇದೆಲ್ಲಾ ಅಂತ ಇವಳು ಕೇಳಿದ್ಲು.
ನನಗೂ ನಿಜವಾಗ್ಲೂ ಪ್ರಿನ್ಸ್ ಕೊಲೆ ಮಾಡಿದ್ದಾನಾ ಅಂತ ಅನ್ನಿಸೋಕೆ ಸುರುವಾಯ್ತು. ಕೊಲೆ, ಅದರಲ್ಲೂ ಈ ರೀತಿಯ ಸೀರಿಯಲ್ ಕೊಲೆ ಮಾಡಿರೋರು ಮದುವೆ ಆಗಿ ಹೆಂಡ್ತಿ ಮಕ್ಕಳ ಜೊತೆ ಎಲ್ಲರ ತರಾ ಸಂಸಾರ ಮಾಡೋಕ್ಕೆ ಸಾದ್ಯಾನಾ? ಆದರೆ ಇದಾದ ಮೇಲೇ ಇನ್ನೊಬ್ಬ ಫ್ರೆಂಡ್ ಸಿಕ್ಕಾಗ ಇದರ ಬಗ್ಗೆ ಮಾತಾಡ್ದೆ. ಅವನೆಲ್ಲಿ ಸಿಕ್ಕಿದ್ನೋ, ಯಾಕೆ ಮಾತಾಡಿಸ್ದಿ, ನನಗೆ ಮೊನ್ನೆ ಕಾಣಿಸಿದಾ, ಮುಖ ತಿರುಗಿಸಿಕೊಂಡು ಹೋಗಿಬಿಟ್ಟೆ, ಮೊನ್ನೆ ರಿಲೀಸಾಗಿ ಬಂದಿದಾನೆ, ಎಂಟು ವರ್ಷ ವೊಳಗಿದ್ದ, ನಿನಗೇನು ತಲೆಗಿಲೆ ಕೆಟ್ಟಿದ್ಯ, ಅವನನ್ನ ಮಾತಾಡಿಸಿದ್ಯಲ್ಲ, ಮನೆ ಬೇರೆ ತೋರಿಸಿದ್ಯ, ಹೆಂಡ್ತಿ ಮಕ್ಕಳನ್ನ ಪರಿಚಯ ಮಾಡಿಸಿದ್ಯಾ, ಹುಶಾರಾಗಿರು ಮಾರಾಯ ಅಂತ ಫುಲ್ ಟೆನ್ಶನ್ ಆಗಿ ಉಪದೇಶ ಕೊಟ್ಟ. ಅಲ್ಲಿ ತನಕ ನನ್ನ ಮನಸಲ್ಲಿ ಇದ್ದಿದ್ದು ಇವನು ಕೊಲೆ ಮಾಡಿದ್ದು ನಿಜಾನೋ ಸುಳ್ಳೊ ಅನ್ನೋ ಅನುಮಾನ ಮಾತ್ರ. ಈಗ ಹೆದರುಕೋಳ್ಳ್ಬೇಕಾಗಿ ಇದೆ ಅಂತ ಈ ಫ್ರೆಂಡ್ ಹೇಳ್ತಿದ್ದಾನೆ!
ಇದಾದ ಮೇಲೆ ನನಗೆ ಇಲ್ಲೀವರೆಗೂ ಪ್ರಿನ್ಸ್ ಸಿಕ್ಕಿಲ್ಲ. ಸಿಕ್ಕರೆ ಮಾತಾಡಿಸ್ತಿನೋ ಇಲ್ಲೋ ಗೊತ್ತಿಲ್ಲ. ಆದರೆ ಒಂದೊಂದು ಸಲಿ ರಾತ್ರಿ ಪಕ್ಕದಲ್ಲಿ ಹೆಂಡ್ತಿ ಮಗ ನಿದ್ದೆ ಮಾಡಿರುವಾಗ ಅವನ ಬಗ್ಗೆ ಯೋಚ್ನೆ ಮಾಡ್ತೀನಿ. ನನ್ನ ಬಲಗ್ಯೆ ತೋಳಿನ ಮೇಲೆ ಹೆಂಡ್ತಿ, ಎಡಗ್ಯೆ ತೋಳಿನ ಮೇಲೆ ಮಗ ನೆಮ್ಮದಿಯಾಗಿ ಮಲಗಿರ್ತಾರೆ. ಇಡೀ ಜಗತ್ತಿನ ಕಷ್ಟಗಳೆಲ್ಲಾ ಬಂದರೂ ನಾನು ಕಾಪಾಡ್ತೀನಿ ಅನ್ನೋ ನಂಬಿಗೆ ಅವರಿಬ್ಬರ ನಿದ್ದೆ ಮಾಡಿದ ಮುಖಗಳ ಮೇಲೆ ಕಾಣಿಸ್ತಾ ಇರತ್ತೆ. ಅವನ ಹೆಂಡ್ತಿ ಹೀಗೇ ನೆಮ್ಮದಿಯಾಗಿ ಗಂಡನ ಜೊತೆ ಮಲಗ್ತಾಳಾ? ಕ್ಷೇಮ ಅನ್ನಿಸೋತ್ತಾ? ಇದಕ್ಕಿತ್ತಾ ಹೆಚ್ಚಾಗಿ ನನ್ನನ್ನ ಕಾಡೋದು, ಈ ಕತೆ ಬರಿಬೋದ, ಬೇಡ್ವಾ? ಅವನು ಕೆಟ್ಟೋನೋ, ಒಳ್ಳೆಯವ್ನೋ, ಅವನು ನನ್ನ ಹತ್ರ ಮಾತಾಡಿದೆಲ್ಲ ಕತೆ ಬರಿದ್ರೆ ಅನವನಿಗೆ ಅನ್ಯಾಯ ಮಾಡದಾಗಾಗೋಲ್ವ? ಇನ್ಯಾರೋ ನನ್ನ ಹತ್ರ ಮಾತಾಡಬೇಕಾದ್ರೆ ಇವನೆಲ್ಲಿ ಇದನ್ನ ಕತೆ ಮಾಡಿಬಿಡ್ತಾನೊ ಅನ್ನೋ ಹೆದರಿಕೆಯಿಟ್ಟಿಕೊಂಡ್ರೆ? ನಿಜ, ಈಗಂತು ಜನ ಟೀವೀ ಪ್ರೋಗ್ರಾಮಲ್ಲೇ ತಮ್ಮ ತಮ್ಮ ಜಗಳನ್ನೇಲ್ಲಾ ಹೇಳ್ಕೋತ್ತಾರೆ. ಆದರೆ ಹೀಗೆ ಗೊತ್ತಿರೋರ ಬಗ್ಗೆಯೆಲ್ಲಾ ಕತೆ ಬರಿದ್ರೆ, ನಾನು ಮಾಡೂದು ಅದೇ ಟೀವೀ ಪ್ರೋಗ್ರಾಮ್ ತರನೇ ಅಗೋಲ್ವ? ನನಗೆ ತುಂಬಾ ಕಾಡ್ತಾ ಇರೋದಂದ್ರೆ, ಅಕಸ್ಮಾತ್ ಪ್ರಿನ್ಸ್ ಇದನ್ನ ಒದಿದ್ರೆ, ಮನಸಿಗ್ಗೆ ನೋವು ಮಾಡ್ಕೋತ್ತಾನಲ್ವ ಅನ್ನೋದು. ಅದಕ್ಕೆ ಈ ಕತೇಲಿ ಹೆಸರು ಕುಲ ಗೋತ್ರ ಏನೂ ಇಲ್ಲ. ಇದೇ ದೈರ್ಯದಲ್ಲಿ ಕತೆ ಬರೆದಿದ್ದೀನಿ. ಯಾರಿಗೂ ಏನೂ ನೋವು ಮಾಡ್ದೆ ಏನೂ ಬರೆಯಕ್ಕಾಗಲ್ಲ ಅಲ್ವ? ಒದಿ ನೋಡಿ, ತಪ್ಪು ಅಂತ ಅನ್ನಿಸಿದ್ರೆ ಹೇಳಿ: ಮತ್ತೆ ಕತೆಗಿತೆ ಬರೆಯೋಲ್ಲ.





ಕತೆ ತುಂಬಾ ಸೂಪರ್ರಾಗಿದೆ. ಹೊಸತನದ ಬರವಣಿಗೆಯೇ ಪ್ಲಸ್ಪಾಯಿಂಟು.