ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೀನಿಯರ್ ಕವಿಗಳಿಗೊಂದು ನಮೂನಿ ಮಾತ್ರೆ…

ಚಂದ್ರಕಾಂತ ವಡ್ಡು

ಕವಿವರ್ಯರೇ, ನಿಮ್ಮ
ಕಿವಿಗೇ ಹೇಳಬೇಕಂತಿದ್ದೆ ಕೆಲ
ಕಿವಿ ಮಾತುಗಳ- ಅದು ಕಾರ್ಯನಿರ್ವಹಿಸುತಿದ್ರ, ಅದಕ
ಮಾತ್ರೆ ಕೊಡಾಕತ್ತೀನಿ, ಕ್ಷಮಿಸಿ.

ನಿಮ್ಮ ಹೆಂಡ್ತಿ, ನೀವು
ಹೊರಗ ಹೊಂಟಾಗ
ಹಲ್ಲು ಸೆಟ್ಟು ಜ್ಞಾಪ್ಸಿ
ಕಣ್ಣಿಗೆ ಕನ್ನಡಕ ಕುಕ್ಕಿ
ಕೈಗೆ ಸ್ಟಿಕ್ಕು ಇಕ್ಕಿ
ಹತ್ತಾರು ಬಾರಿ ಹುಶಾರಿ ಮಾತಾಡಿ…
ಹೀಗೆಲ್ಲಾ ಶುರು ಮಾಡಿ ಎಷ್ಟು ದಿನ ಆತ್ರಿ?
ನಿಮ್ಮ ಮೀಸಿ, ದಾಡಿಗೆ ಬಿಳಿ ಮೂಡಿ
ರೇಜರ್ ಮರೆತದ್ದು
ಮೊನ್ನೆ ಮೊನ್ನೆ ಇರಬೇಕಲ್ಲಾ?

ಸೀರಿ ಸುತ್ತಿದ ಮೈ ಇನ್ನು
ಮೈಗೆ ಜುಂ ಅನಿಸಲ್ಲ,
ನಿಮ್ಮ ಗಲ್ಲ ಬೆಚ್ಚಗ ಮಾಡಿ
ಕಿವ್ಯಾಗ ಗುಂಯ್ ಗುಂಯ್ ಅಂದು
ಎದ್ಯಾಗ ಪಟಾಕಿ ಹಾರಿಸಲ್ಲ,
ನಿಮ್ಮ ಕಂಡ್ರ ಕೆಂಪಾಗುತ್ತಿದ್ದ
ಶ್ರೀಮತಿ ಕೆನ್ನೆ, ಸ್ಫೂರ್ತಿಯ ಸೆಲೆ
ಸುಕ್ಕುಗಟ್ಟೇತಿ.
ಬಿಳೀ ಹಾಳಿ ಮ್ಯಾಲ ಮಣಗಟ್ಟಲೇ
ಮುತ್ತಿನಂತ ಅಕ್ಷರ
ಮೂಡಿಸುತ್ತಿದ್ದ ಲೇಖನಿ, ಇವತ್ತು
ಓಡುವ ಬಸ್ಸಿನಂಗೆ ಓಲಾಡ್ ತೈತಿ
ಅಲ್ಲ?
ಹೌದೌದೌದು ಅಂದ್ರ
ಕವಿತಾ ಯಾಕ ಬರೀತೀರಿ
ಆರಾಮ್ ತೊಗೋ ವಯಸ್ಸಿನಾಗ ಆರಾಮ್ ತೊಗೋಬೇಕ್ರೆಪಾ

ಹೋಗ್ರಿ ಹೋಗ್ರಿ
ಪ್ರಕಾಶಕರ ಹುಡುಕ್ರಿ
ಹಳೇ ಬಾಕೀ ಇದ್ರ ವಸೂಲ್ ಮಾಡ್ರಿ
ಮಂತ್ರಿಗಳ ಕಾಣ್ರಿ, ಹಲ್ ಕಿಸ್ರಿ
ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ಕೇಳ್ರಿ
ಲೇಖನಿ, ಹಾಳೆಗಳ ಹಾಕ್ರಿ ಅತ್ತ ಎತ್ತಿ
ಆಡಿಸಿರಿನ್ನ ಮೊಮ್ಮಕ್ಕಳ
ಬಿಟ್ಟು ಹೂವಿನ ಕೊಳ್ಳಿ ಆಡಿಸೋದ!
ಆಮ್ಯಾಲ ಬೇಕಾರ ನಂ ಕವಿತಾ ಓದಿಸಿಕೊಳ್ರಿ
ಹಿರೇರು, ಅಂದ್ರ ನೀವೇ ಹೇಳಿಲ್ಲೇನು ಮತ್ತ?
ಮಲೀ ಬಿಟ್ಟು ಮಲೀ ಹಿಡಿದ ಮ್ಯಾಲ
ಕವಿತಾ ಬರೀಬೇಕು, ಹಂಗೆ,
ಡಿಟ್ಟೊ ಬಿಟ್ಟು ಡಿಟ್ಟೊ ಹಿಡಿದ್- ಬಿಟ್ಟಮ್ಯಾಲ
ಕವಿತಾ ಬರೀ ಬೇಕೇನು?

(ಚಂಪಾ ಅವರ ‘ಜೂನಿಯರ್ ಕವಿಗಳಿಗೊಂದು ಕಿವಿಮಾತು’ ಕವಿತೆಗೆ ಟಾಂಗ್ ಕೊಡುವ ರೀತಿಯಲ್ಲಿ ನಾನು ಬರೆದ ಈ ಕವಿತೆಯನ್ನು ಅವರು 1986ರ ಸಂಕ್ರಮಣ ವಿಶೇಷಾಂಕದಲ್ಲಿ ಮುಜುಗರವಿಲ್ಲದೇ ಪ್ರಕಟಿಸಿದ್ದರು. ನಾನಾಗ ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ, ಜೂನಿಯರ್ ಕವಿ! ಇದೀಗ ಮೂವತ್ತೈದು ವರ್ಷಗಳ ನಂತರ ನಾನೂ ಸಾಕಷ್ಟು ಸೀನಿಯರ್ ಆಗಿರುವುದರಿಂದ ಈ ಕವಿತೆಯ ಅಣಕು ನನಗೂ ತಾಗುತ್ತದೇನೋ…! ಸದ್ಯ ನಾನು ಕವಿಯಾಗಿ ಉಳಿದಿಲ್ಲ ಎಂಬುದಷ್ಟೇ ಸಮಾಧಾನದ ಸಂಗತಿ!)

‍ಲೇಖಕರು Admin

10 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading