ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸೀತೆ ಮಂಡೋದರಿಯ ಮಗಳಂತೆ!’

 

ಸಂಗೀತ ರವಿರಾಜ್

ಮೂಲ ರಾಮಾಯಣದ ಪರಿಕಲ್ಪನೆಯೊಂದಿಗೆ ತಾನು ಕಂಡಂತಹ ಮತ್ತು ಕೇಳಿದಂತಹ ಕಥೆಗಳಿಂದ ಆಯ್ದು ಹೊಸತನದೊಂದಿಗೆ ರಚಿತವಾಗಿರುವ ಡಾ. ಪ್ರಭಾಕರ ಶಿಶಿಲರ ರಾಮಾಯಣ ಆಧಾರಿತ ’ಮೂಗು’ ಕಾದಂಬರಿ ಮನೋಜ್ಞವಾಗಿ ಮೂಡಿ ಬಂದಿದೆ. ಇತಿಹಾಸವನ್ನು ಇಂದಿನ ಕಾಲಗತ್ತಕ್ಕೆ ತಕ್ಕುದಾಗಿ ತುಲನೆ ಮಾಡಿ ಪ್ರಸ್ತುತಪಡಿಸಿದ ರೀತಿ ಓದುಗರನ್ನು ಹಿಡಿದಿತ್ತುಕೊಳ್ಳುತ್ತದೆ. ನಾವೆಲ್ಲ ಹುಟ್ಟಿನಿಂದಲೇ ರಾಮಾಯಣದ ಕತೆಗಳನ್ನು ಅಜ್ಜ ಅಜ್ಜಿಯರಿಂದ, ತಂದೆ ತಾಯಿಗಳಿಂದ, ಗುರುಗಳಿಂದ ಒಂದೊಂದು ತೆರನಾದ ರೀತಿಯಲ್ಲಿ ಕೇಳುತ್ತಾ ಬಂದಿದ್ದೇವೆ. ಅಜ್ಜಿ ಹೇಳಿದ ರಾಮಾಯಣದ ಕತೆಗಿಂತ ಗುರುಗಳು ಹೇಳಿದ್ದು ಭಿನ್ನವಾಗಿರಿತ್ತಿತ್ತು. ನಾವೆಲ್ಲಾ ಶ್ರೀರಾಮರ ಮಕ್ಕಳನ್ನು ಲವ ಕುಶ ಎಂದು ಸಂಬೋದಿಸುವಾಗ ಲವ ಹಿರಿಯವನಿರಬೇಕು ಎಂದೇ ಭಾವಿಸುತ್ತೇವೆ. ಆದರೆ ವಾಸ್ತವವಾಗಿ ಕುಶ ಹಿರಿಯವನು. ಇಂತಹ ಹಲವಾರು ರಾಮಾಯಣದ ಸೂಕ್ಮ ವಿಚಾರಗಳನ್ನು ಲೇಖಕರು ತಮ್ಮ ಕಾದಂಬರಿಯಲ್ಲಿ ಬಿಂಬಿಸಿದ್ದಾರೆ.ಬೇರೆ ಬೇರೆ ಕ್ಷೇತ್ರದಿಂದ ಕಥೆಗಳನ್ನು ಆಲಿಸಿದ ಲೇಖಕರು ರಾಮಾಯಣಕ್ಕೊಂದು ಹೊಸ ಆಯಾಮವನ್ನು ಮತ್ತು ತನ್ನದೆ ಆದ ರೂಪು ರೇಷೆಯನ್ನು ಈ ಕಾದಂಬರಿಯಲ್ಲಿ ನೀಡಿದ್ದಾರೆ.

ರಾವಣ ಮತ್ತು ಮಂಡೋದರಿಯ ಮಗಳು ಸೀತೆ ಎಂಬುದನ್ನು ತಾವು ಬಾಲ್ಯದಲ್ಲಿ ಕೇಳಿದ ಜನಪದ ಕಥೆಯೊಂದರ ಮೂಲದಿಂದ ಆಯ್ದು ಅದು ಸತ್ಯ ಎಂಬುದಾಗಿ ಕಾದಂಬರಿಯಲ್ಲಿ ನಿರೂಪಣೆಯಿದೆ. ಶೂರ್ಪನಖೆಗೆ ಸೀತೆಯ ಜನ್ಮರಹಸ್ಯ ತಿಳಿದಿದ್ದರು, ರಾಮನ ಹೆಂಡತಿಯಾಗಿ ಸೀತೆಯ ಪೂರ್ವಾಪರ ತಿಳಿದಿರಲಿಲ್ಲ. ಲಕ್ಷ್ಮಣನು ವಾಲ್ಮೀಕಿ ಮಹರ್ಷಿಗಳ ಆಶ್ರಮದಿಂದ ಸೀತೆಯನ್ನು ಮತ್ತು ಆಕೆಯ ಮಕ್ಕಳನ್ನು ಕರೆತರಲು ಬಂದಾಗ ನಡೆದ ಮಾತುಕತೆಯಿಂದ ಸೀತೆಯ ಜನ್ಮರಹಸ್ಯ ಬಯಲಾಯಿತು. ನಾನು ಮಿಥಿಲೆಯ ಜನಕರಾಜನಿಗೆ ಹೊಲದಲ್ಲಿ ಸಿಕ್ಕ ಶಿಶು. ಬೆಳ್ಳಿಯ ತೊಟ್ಟಿಲಲ್ಲಿ ಚಿನ್ನಾಭರಣ ಸಹಿತ ನಾನು ದೊರಕ್ಕಿದೆಂದು ಸ್ವಯಂ ಜನಕರಾಜನೆ ಎಳವೆಯಲ್ಲಿ ನನ್ನೊಂದಿಗೆ ಹೇಳುತ್ತಿದ್ದರು ಎಂದು ಸೀತೆ ಹೇಳಿದಳು. ಆಗ ಶೂರ್ಪನಖೆಗೆ ಏನೋ ಹೊಳೆದಂತಾಗಿ ಬೆಳ್ಳಿಯ ತೊಟ್ಟಿಲಲ್ಲಿ ಚಿನ್ನಾಭರಣ ಸಹಿತ ತೊರೆದವಳು ನೀನಾ ಎಂದು ಆಶ್ಚರ್ಯದಿಂದ ಕೇಳಿದಳು. ನಂತರ ನಿನ್ನ ಎಡತೊಡೆಯಲ್ಲಿ ಮತ್ಸ್ಯಲಾಂಛನವಿದೆಯೆ ಎಂದು ಕೇಳಿದಳು.
ಹೌದು ಎಂಬುದಾಗಿ ಸೀತೆ ಒಪ್ಪಿಕೊಂಡಳು. ವಾಲ್ಮೀಕಿ ಮಹರ್ಷಿಗಳಿಂದಾದಿಯಾಗಿ ಅಲ್ಲಿದ್ದವರೆಲ್ಲಾ ಆಶ್ಚರ್ಯದಿಂದ ಸೀತೆ ಯಾರೆಂದು ಕೇಳತೊಡಗಿದರು. ವಿಧಿ ವಿಲಾಸವನ್ನು ಶೂರ್ಪನಖೆ ಹೇಳತೊಡಗಿದಳು. ಸಂಬಂಧದಲ್ಲಿ ಸೀತೆಗೆ ನಾನು ಅತ್ತೆಯಾಗಬೇಕು. ರಾವಣನ ಪಟ್ಟದ ರಾಣಿ ಮಂಡೋದರಿ ಮೊದಲ ಬಾರಿಗೆ ಹೆತ್ತದ್ದು ಸುಂದರ ಹೆಣ್ಣು ಶಿಶುವನ್ನು. ಜಾತಕದಲ್ಲಿ ಅಪ್ಪನಿಗೆ ಆಪತ್ತಿದೆ ಎಂದು ಪುರೋಹಿತರು ಅರುಹಿದ್ದರಿಂದ ಕೋಪಗೊಂಡ ರಾವಣ ಈ ಶಿಶುವನ್ನು ದೂರದ ಆರ್ಯಾವರ್ತದಲ್ಲಿ ತ್ಯಜಿಸಿ ಎಂದು ಆಜ್ಞಾಪಿಸಿದನು. ಅದೇ ಶಿಶು ಇವಳು ಎಂಬುದಾಗಿ ಶೂರ್ಪನಖೆ ನಿಖರವಾಗಿ ಹೇಳಿದಳು. ಅಷ್ತು ನಿಖರವಾಗಿ ಹೇಗೆ ಹೇಳುವೆ ಎಂದು ವಾಲ್ಮೀಕಿ ಮಹರ್ಷಿಗಳು ಕೇಳಿದಾಗ ಎಡತೊಡೆಯಲ್ಲಿ ಮತ್ಸ್ಯಲಾಂಛನವಿರುವುದೆ ಪಿತೃವಿಗೆ ದೋಷವೆಂದದನ್ನು ಸ್ಪಷ್ಟವಾಗಿ ನೆನಪಿಸಿಕಂಡಳು. ಮಂಡೋದರಿಯ ಪ್ರತಿಭಟನೆಗೆ ಅಂದು ಬೆಲೆಯೆ ಇರಲಿಲ್ಲ ಎಂದಳು. ಆಗಲೆ ಸೀತೆಗು ಕೂಡ ತನ್ನ ಜನ್ಮರಹಸ್ಯ ಅರಿವಾದದ್ದು ಮತ್ತು ಆಕೆಗೆ ರಾವಣೇಶ್ವರನನ್ನು ಕಂಡಾಗ ಪಿತೃಭಾವನೆ ಮೂಡುತ್ತಿದ್ದರ ಅರಿವು ಏನೆಂಬುದು ಈಗ ಅರ್ಥವಾಯಿತು.
ಮೂಲರಾಮಾಯಣದಲ್ಲಿ ಎಲ್ಲಿಯು ಸೀತೆ, ರಾವಣ ಮತ್ತು ಮಂಡೋದರಿಯ ಮಗಳೆಂಬ ಉಲ್ಲೇಖವಿಲ್ಲ. ಇಲ್ಲಿರುವ ಕಥೆಯಲ್ಲಿ ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿಗಳ ಎದುರಿಗೆ ಸೀತೆ ಮಂಡೋದರಿಯ ಮಗಳು ಎಂಬುದಾಗಿ ಶೂರ್ಪನಖೆ ಸ್ಪಷ್ಟವಾಗಿ ಹೇಳುತ್ತಾಳೆ. ಇದು ನಿಜವಾಗಿದ್ದಲ್ಲಿ ವಾಲ್ಮೀಕಿ ಮಹರ್ಷಿಗಳು ಈ ವಿಚಾರವನ್ನು ರಾಮಾಯಣದಲ್ಲಿ ಯಾಕೆ ಸೇರಿಸಲಿಲ್ಲ ಎಂಬ ಜಿಜ್ಞಾಸೆ ಮೂಡುತ್ತದೆ. ಸೀತೆಯಂತಹ ಭೂಮಿ ತೂಕದ ಹೆಣ್ಣುಮಗಳು ರಾವಣನ ಮಗಳೆಂಬ ವಿಷಯವನ್ನು ಜಗಜ್ಜಾಹಿರು ಮಾಡುವುದು ಬೇಡ ಎಂಬ ನಿರ್ಧಾರವನ್ನು ವಾಲ್ಮೀಕಿ ಮಹರ್ಷಿಗಳು ತೆಗೆದುಕೊಂಡಿರಬಹುದೆ ಎಂಬ ತರ್ಕವು ಕಾಡುತ್ತದೆ. ಒತ್ತಿನಲ್ಲಿ ಎಲ್ಲರಿಗು ಸಮ್ಮತವಾಗುವ ರೀತಿಯಲ್ಲಿ ಪ್ರತ್ಯೇಕತೆಯನ್ನು ಸಾಧಿಸುವ ಈ ಕಥೆ ರಾಮಾಯಣಕ್ಕೆ ಹೊಸ ತಿರುವು.
ನಾವು ಮೂಲ ರಾಮಾಯಣದಲ್ಲಿ ಶೂರ್ಪನಖೆಯ ನಾಸ್ಸ (ಮೂಗು) ಮತ್ತು ಕಿವಿ ಛೇದದ ಬಗ್ಗೆ ತಿಳಿಯುತ್ತೇವೆ ಆದರೆ ಕಾದಂಬರಿಯಲ್ಲಿ ನಾಸ್ಸ ಮತ್ತು ಕುಚಛೇದದ ವಿಚಾರವನ್ನು ಹೇಳುತ್ತಾರೆ. ಯಕ್ಷಗಾನಗಳಲ್ಲಿ ಅಳವಡಿಸಿಕೊಳ್ಳುವ ರಾಮಾಯಣದ ಪ್ರಸಂಗಗಳಲ್ಲಿ ಕುಚಛೇದದ ಉಲ್ಲೇಖ ಬರುತ್ತದ. ವಿಧವೆ ಶೂರ್ಪನಖೆಯ ಮಗ ಶಂಭುಕನನ್ನು ರಾಮ ಕೊಂದ ನಂತರದ ಬೆಳವಣಿಗೆಯಲ್ಲಿ ಶೂರ್ಪನಖೆ ರಾಮನನ್ನು ಮದುವೆಯಾಗುವಂತೆ ಕೇಳಿಕೊಂಡಳು. ಆಗ ರಾಮನು ಆಕೆಯ ನಾಸ್ಸ ಮತ್ತು ಕುಚ ಛೇದನ ಮಾಡುವಂತೆ ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. ಇದು ಶೂರ್ಪನಖೆಗೆ ಪರಮ ಅನ್ಯಾಯವಾಗಿ ಕಂಡಿತು. ಏಕಪತ್ನಿವ್ರತವೆಂಬ ಜೀವನ ಮೌಲ್ಯವಿದ್ದಿದ್ದರೆ ಅದನ್ನು ನೇರವಾಗಿ ಹೇಳಿ ಹಿತವಚನ ನುಡಿದಿದ್ದರೆ ನಾನು ಹಿಂದಿರುಗುತ್ತಿರಲಿಲ್ಲವೇ ಎಂಬುದು ಶೂರ್ಪನಖೆಯ ಪ್ರಶ್ನೆ. ಸೀತೆಯ ಎಲ್ಲಾ ದುರಂತಗಳಿಗೆ ಕಾರಣ ಮೂಗಿಲ್ಲದಂತೆ ಮಾಡಿದ ಶ್ರೀರಾಮನ ವಿರುದ್ಧ ಪ್ರತೀಕಾರವನ್ನು ಮಾಡಿದ್ದಾಗಿ ಕಾದಂಬರಿಯಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಶ್ರೀರಾಮನ ಜೀವನದ ಮೌಲ್ಯವೆಂದರೆ ಪಿತ್ರವಾಕ್ಯಪರಿಪಾಲನೆ ಮತ್ತು ಏಕಪತ್ನಿವ್ರತ. ಪಿತನು ನೇರವಾಗಿ ಹೇಳದಿದ್ದರು ಕೈಕೇಯಿಯ ಮನದಿಂಗಿತ ಅರ್ಥೈಸಿಕೊಂಡು ಕಾಡಿಗೆ ಹೊರಟವನು ಶ್ರೀರಾಮ. ಏಕಪತ್ನಿ ವ್ರತಕ್ಕೆ ಬದ್ಧನಾಗಿ ಶೂರ್ಪನಖೆಗೆ ಅತ್ಯಂತ ಕ್ರೂರವಾದ ಶಿಕ್ಷೆಯನ್ನು ನೀಡಿದನು. ರಾಮನ ಈ ಗುಣವನ್ನು ಲೇಖಕರು ಮೌಲ್ಯ ದೊಡ್ಡದೋ ಅಥವ ಮಾನವೀಯತೆಯೋ ಎಂಬುದಾಗಿ ವಿಶ್ಲೇಷಿಸುತ್ತಾರೆ. ಶ್ರೀರಾಮನ ರಕ್ಷಾಯಾಗಕ್ಕೆ ರಾವಣೇಶ್ವರ ಪುರೋಹಿತನಾಗಿ ಬಂದನಲ್ಲಾ ಅದಕ್ಕಿಂತ ದೊಡ್ಡ ಮಾನವೀಯತೆ ಏನಿದೆ ಎಂಬುದಾಗಿ ಕೇಳುತ್ತಾರೆ. ಶ್ರೀರಾಮ ಏಕಪತ್ನಿವ್ರತಸ್ಥನೆಂದು ಶೂರ್ಪನಖಿಗೆ ಶಿಕ್ಷೆ ವಿಧಿಸಿದ್ದು ಮಾನವೀಯತೆಯು ಅಲ್ಲ, ಮೌಲ್ಯವು ಅಲ್ಲ. ಪಿತೃವಾಕ್ಯ ಪರಿಪಾಲನೆ ಎಂದು ಅರಣ್ಯವಾಸಕ್ಕೆ ಹೋದದ್ದು ವಾಸ್ತವವಾಗಿ ದೊಡ್ಡ ಮೌಲ್ಯವೆ ಆಗಿದೆ. ಆದರೆ ಸಮಷ್ತಿಯಾಗಿ ನೋಡಿದರೆ ಅದು ಮೌಲ್ಯವಲ್ಲ. ಇದರಿಂದ ಮಂಥರೆ ಮತ್ತು ಕೈಕೇಯಿಗೆ ತಾತ್ಕಾಲಿಕ ಸಂತೋಷ ಬಿತ್ತರೆ ಉಳಿದದ್ದೆಲ್ಲಾ ದುರಂತಗಳು. ಪ್ರಜೆಗಳು ಚಕ್ರವರ್ತಿಯ ಬಗ್ಗೆ ಏನು ಹೇಳುತ್ತಾರೆಂದು ಗೂಡಾಚಾರ ನಡೆಸುವವರು ಹೇಳಿದ ಮಾತು “ಗಂಡನನ್ನು ಬಿಟ್ಟುಹೋದ ಹೆಂಡತಿಯನ್ನು ಸ್ವೀಕರಿಸಲು ನಾನೇನು ಶ್ರೀರಾಮನೆ? ಎಂಬ ಮಾತಿಗೆ ತುಂಬು ಗರ್ಭಿಣಿ ಮಡದಿಯನ್ನು ಕಾಡುಪಾಲು ಮಾಡಿದ್ದು ಮೌಲ್ಯವೆಂದು ಅಥವ ಮಾನವೀಯತೆಯೆಂದು ಹೇಳಲಾಗುವುದಿಲ್ಲ. ಧೃಢ ಮನಸ್ಸು ಇಲ್ಲದಿರುವುದು ಇದಕ್ಕೆ ಕಾರಣ. ಉಳಿದದೆಲ್ಲವು ಕೇವಲ ನಿಮಿತ್ತಗಳು ಎಂಬುದು ಲೇಖಕರ ವಾದ.
ವಿಶ್ವಾಮಿತ್ರರ ಮಾತಿಗೆ ಬೆಲೆ ನೀಡಿ ತಾಟಾಕಾ ಮತ್ತು ಆಕೆಯ ಮಕ್ಕಳಾದ ಸುಬಾಹು ಮತ್ತು ಮಾರೀಚರನ್ನು ಶ್ರೀರಾಮನು ಕೊಂದನು. ತನ್ನ ಜೀವನದುದ್ದಕ್ಕು ಇನ್ನೊಬ್ಬರ ಮಾತಿಗೆ ಬೆಲೆ ನೀಡಿದನೆ ವಿನಹ ಇದರಿಂದ ಆಗುವ ಅನಾಹುತಗಳನ್ನು ಗಮನಿಸಲೇ ಇಲ್ಲ. ತಾಟಕಾ ಮತ್ತು ಆಕೆಯ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಚಿತ್ರಕೂತದ ಮುನಿಗಳು ದಸ್ಯು( ದಲಿತ)ಗಳಿಗೆ ಜ್ಙಾನಾರ್ಜನೆಯ ಹಕ್ಕಿಲ್ಲವೆಂದೂ, ಶಂಭುಕನೆಂಬುವನು ಕಲಿಯುತ್ತಿದ್ದಾನೆಂದು ದೂರಿತ್ತಾಗ ವರ್ಣದ ಅಹಂನಿಂದ ಶ್ರೀರಾಮನು ಶಂಭುಕನನ್ನು ಕೊಂದು ಹಾಕಿದನು. ಹಾಗಾದರೆ ರಾಮರಾಜ್ಯವೆಂಬ ಕಲ್ಪನೆಯೊಂದಿಗೆ ವರ್ಣದ್ವೇಷ ನಿನ್ನ ಆದರ್ಶ ರಾಜ್ಯದ ಅಡಿಗಲ್ಲೆ ಎಂದು ಕಾದಂಬರಿಯಲ್ಲಿ ಕೇಳುತ್ತಾರೆ. ವರ್ಣವನ್ನು ಚಾಲನಾರಹಿತ್ಯ ವ್ಯವಸ್ಥೆಯನ್ನಾಗಿ ಮಾಡಿದರೆ ಪ್ರತಿಭೆಗಳಿಗೆ ಎಷ್ತು ಅನ್ಯಾಯವಾಗುತ್ತದೆ ಎಂಬುದನ್ನು ವಿಶ್ಲೇಷಿಸುತ್ತಾರೆ. ವಾಲಿಯನ್ನು ಶ್ರೀರಾಮ ಮೋಸದಿಂದ ಮರೆಯಲ್ಲಿ ನಿಂತು ಬಾಣಬಿತ್ತು ಕೊಂದದೊ ಕ್ಷತ್ರಿಯನಾದವನಿಗೆ ಉಚಿತವಲ್ಲ. ಸುಗ್ರೀವನ ಪಕ್ಷಪಾತಿಯಾಗಿ ವಾಲಿಯನ್ನು ಕೊಲ್ಲುವ ಬದಲಾಗಿ ನೇರವಾಗಿ ಅಣ್ಣ ತಮ್ಮಂದಿರ ಜಗಳವನ್ನು ಇತ್ಯರ್ಥ ಮಾಡಬಹುದಿತ್ತು. ಇಂತಹ ಕಾರಣಗಳಿಂದ ಶ್ರೀರಾಮ ತನ್ನ ಜೀವನವನ್ನು ದುರಂತಮಯವಾಗಿಸಿಕೊಂಡ ಎಂಬುದಾಗಿ ಲೇಖಕರು ಹೇಳುತ್ತಾರೆ.
ಶಿಶಿಲರ ಮೂಗು ಕಾದಂಬರಿಯಲ್ಲಿ ರಾಮಾಯಣದ ಹೆಚ್ಚಿನ ಘಟನೆಗಳೆಲ್ಲಾ ಸಂಕ್ಷಿಪ್ತವಾಗಿ ಹಾದು ಹೋಗಿವೆ. ಈಗಿನ ಜಮಾನದವರಿಗೆ ರಾಮಾಯಣದ ತಿರುಳು ತಿಳಿದಿರುವುದು ಬಲು ಅಪರೂಪ. ಹೀಗಿರುವಾಗ ಇಂತಹ ಕಾದಂಬರಿಗಳು ಯುವಜನಾಂಗಕ್ಕೆ ಹೆಚ್ಚಿನ ಉಪಯುಕ್ತವಾಗಬಲ್ಲುದು. ಮಾನವೀಯತೆ ಮತ್ತು ಮೌಲ್ಯಗಳ ನಡುವಿನ ಒಳತೋಟಿಗಳನ್ನು ಮಾರ್ಮಿಕವಾಗಿ ಚಿತ್ರಿಸಿರುವ ಈ ಕಾದಂಬರಿಯಲ್ಲಿ ಮುಖ್ಯವಾಗಿ ಸೃಜನಶೀಲತೆಯಿದೆ.
 

‍ಲೇಖಕರು G

4 September, 2014

4 Comments

  1. Maluru Venkataswamy

    ರಾಮಾಯಣಕ್ಕೆ ಹಲವು ರೂಪಗಳಿವೆ,ವಿವಿಧ ವ್ಯಾಖ್ಯಾನಗಳಿವೆ. ರಾಮಾಯಣದ ಕಾದಂಬರಿ ರೂಪವಾಡಾ ಶಿಶಿಲರ ‘ಮೂಗು’ ಕೃತಿಯನ್ನು ಸಂಗೀತ ರವಿರಾಜ್ ಚೆನ್ನಾಗಿ ಪರಿಚಯಿಸಿದ್ದಾರೆ. ಕಾದಂಬರಿಯನ್ನು ಓದಬೇಕೆಂಬ ಕುತೂಹಲ ಮೂಡುವಂತೆ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು.

  2. Palahalli Vishwanath

    ಪುಸ್ತಕದ ಪರಿಚಯಕ್ಕೆ ಧನ್ಯವಾದಗಳು. ರಾಮಯಣ ಮತ್ತು ಮಹಾಭಾರತದ ಕಥೆ ಮತ್ತು ಉಪಕಥೆಗಳನ್ನು ವಿವಿಧ ರೀತಿಯಲ್ಲಿ ನೋದಬಹುದು. ಈ ಮಹಾಕವ್ಯಗಳ ಹೆಚ್ಚಳಿಕೆ ಅದು. ಆದರೆ ಈ ಪರ್ಯಾಯ ಪ್ರಯತ್ನ್ಗಳನ್ನು ಸಮಾಜ ಅರ್ಥಮಾಡಿಕೊಳ್ಳುವುದಿಲ್ಲ. ಎ.ಕೆ.ರಾಮನುಜನ್ ರ ಸಾವಿರ್ ರಾಮಯಣಗಳು ಪ್ರಬ೦ಧವನ್ನು ಪುಸ್ತಕಗಳಿ೦ದ ತೆಗೆಉಹಾಕಲಯಿತು. ಇವುಗಳನ್ನು ರಾಮನ ಮೇಲೋ ಕೃಷ್ಣನ ಮೇಲೋ ಕೆಸರು ಎ೦ದು ತಿಳಿದು ಅವಾ೦ತರ ಮಾಡುತ್ತಾರೆ

  3. smitha Amrithraj

    chennagi vishleshiruve sangeetha

  4. sangeetha raviraj

    Pratikrayisida aelrigu dhanyavadagalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading