ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೀಡಿಯ ಚೀಲದೊಳಗೊಂದು ಮುಜಂಟಿ…

ಚಂದ್ರ ಸೌಗಂಧಿಕ

ಲಾಕ್ ಡೌನ್ ಮುಗಿದ ಮೇಲೆ ಒ೦ದು ಮುಂಜಾನೆ ಪೈಲೂರು ರವರ ಸಂದೇಶ ಬಂತು ‘ನಾಳೆ ನಿಮ್ಮಲ್ಲಿಗೆ ಬರುತ್ತೇನೆ’ ಎಂದು. ನಾನು ಸಂದೇಶದಲ್ಲಿ ‘ಥಮ್ಸ್ ಅಪ್’ ಕಳುಹಿಸಿದೆ. ಮುಂಜಾನೆ 9ಗಂಟೆಗೆ ವಾಲಿ ಬಾಲ್ ಗಾತ್ರದ ಅಷ್ಟೇ ದುಂಡಗಿನ ಹಲಸಿನ ಹಣ್ಣು ಮತ್ತು ಕೃಷಿ ಮಾಧ್ಯಮ ಕೇಂದ್ರದ ಎಲ್ಲ ಪುಸ್ತಕಗಳನ್ನು ಸುಂದರವಾದ ಕವಚದೊಳಗಿಟ್ಟು ನನಗಿತ್ತರು.

ಹಸಿರು ಗಿಡ ಮರ ಬಳ್ಳಿಗಳ ಕುರಿತು ಮಾತುಕತೆ ಮುಗಿಸಿ ಹಸಿರು ಚಹಾ ಸೇವಿಸಿ ಹೊರಟು ನಿಂತಾಗ ಮುಜಂಟಿ ಗೂಡಿನ ಕುರಿತು ಪ್ರಸ್ತಾಪಿಸಿದೆ. ‘ಚುಚ್ಚದ ಜೇನು’ ಓದಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರವಿದೆ ಎಂದರು. ಅದೇ ದಿನ ರಾತ್ರಿ ಆ ಪುಸ್ತಕವನ್ನು ಓದಿದೆ. ಮರು ದಿವಸ ನನ್ನ ಕೆಲಸ ಹೊಸತೊಂದು ಜೇನುಗೂಡಿಗಾಗಿ ಹುಡುಕಾಟ.

ನಮ್ಮ ಹಿತ್ತಲ ಹೊರಗೆ ಹಳೆಯದೊಂದು ‘ಅಣಾವು’ ಮರದ ಬೊಡ್ಡೆ ಬಿದ್ದಿರುವುದನ್ನು ಮತ್ತು ಅದರೊಳಗೆ ಒಂದೆರಡು ಬಾರಿ ಮುಜಂಟಿ ಹೋಗುವುದನ್ನು ಗಮನಿಸಿದ್ದೆ. ತಡ ಮಾಡುವುದೇಕೆ? ಬೊಡ್ಡೆಯನ್ನು ಮಗುಚಿ ಹಾಕಿದ್ದಾಯಿತು. ನಡುವೆ ಡಾಂಬರನ್ನು ಎರಕ ಹೊಯ್ದಂತೆ ಸ್ವಲ್ಪ ಮೇಣದ ಅಂಶ ಕಾಣಿಸಿತು. ಅದನ್ನು ಭಾಗಮಾಡಿ ತೆರೆದು ನೋಡಿದಾಗ ಪುಟ್ಟ ಮುಜಂಟಿಯ ಸಂಸಾರ ಅದರೊಳಗೆ ಇತ್ತು. ಅದನ್ನು ಅಲ್ಲಿಂದ ಹಾಗೆಯೇ ಬೇರ್ಪಡಿಸಿ ನಾನು ಕೇರಳದಿಂದ ತಂದಿದ್ದ ಮಣ್ಣಿನ ಸಿಲಿಂಡರ್ ಹೂಜಿಯ ಒಳಗಿರಿಸಿದೆ.

ಮೇಲ್ಭಾಗದಿಂದ ಹಳೆಯ ಮಣ್ಣಿನ ಮಡಕೆಯೊಂದನ್ನು ಕವುಚಿ ಹಾಕಿದೆ. ಅದನ್ನು ಹಾಗೆಯೇ ಎತ್ತಿ ತಂದು ನನ್ನ ಗ್ಯಾಲರಿಯ ಸನ್ ಶೇಡ್ ನ ಬದಿಯಲ್ಲಿ ಇರಿಸಿದೆ. ಸುಮಾರು ಒಂದೆರಡು ತಿಂಗಳು ಅದರೊಳಗಿನಿಂದ ಮುಜಂಟಿಗಳು ಹೊರಬಂದದ್ದೇ ನನಗೆ ಕಾಣಿಸಲಿಲ್ಲ. ಒ೦ದು ದಿನ ಕುತೂಹಲ ತಡೆಯಲಾರದೆ ಮೇಲ್ಭಾಗದಲ್ಲಿ ಮುಚ್ಚಿದ ಮಣ್ಣಿನ ಮಡಕೆಯನ್ನು ತೆರೆದು ನೋಡಿದೆ. ಆಶ್ಚರ್ಯ ಕಾದಿತ್ತು. ಈ ಮುಜಂಟಿಗಳು ಸಿಲಿಂಡರ್ ಕುಂಡದ ಅರ್ಧಭಾಗವನ್ನು ಆಶ್ರಯಿಸಿಕೊಂಡು ತೆಳುವಾದ ಪರದೆಯನ್ನು ನಿರ್ಮಾಣ ಮಾಡಿದ್ದವು ಮೇಣದಿಂದ. ಬಟ್ಟೆಯಷ್ಟೇ ತೆಳುವಾದ ಆ ಪರದೆಯ ಆಚೆಗೆ ಅವುಗಳ ಸಾಮ್ರಾಜ್ಯ. ಹೂಜಿಯ ಮೇಲ್ಭಾಗವನ್ನು ಸ್ವಲ್ಪವೂ ಆಕ್ರಮಿಸಿಕೊಳ್ಳಲಿಲ್ಲ. ಅಂದರೆ ನನ್ನದಲ್ಲದರ ಅಗತ್ಯ ನನಗಿಲ್ಲ ಎಂದಾಯಿತು.

ಇದು ಹೊಸದೊಂದು ಅರಿವು. ನಂತರ ಕೆಲ ದಿವಸಗಳ ಬಳಿಕ ಅದರೊಳಗಿಂದ ಅತ್ಯಂತ ತುರ್ತಾಗಿ ಸಾಲುಸಾಲಾಗಿ ಮುಜಂಟಿ ನೊಣಗಳು ಹಾರಲಾರಂಭಿಸಿದವು. ಈಗ ಮುಂಜಾನೆಯಿಂದ ಸಂಜೆವರೆಗೆ ಬಿಡುವಿಲ್ಲದ ಕೆಲಸ. ಸುತ್ತಲೂ ಅರಳಿದ ಹೂವುಗಳ ಪರಾಗವನ್ನು ಉಂಡೆಕಟ್ಟಿ ಹೊರುವುದೇ ಕಾಯಕ. ಬಹುಶಃ ಅವುಗಳು ಒಂದೆರಡು ತಿಂಗಳು ಒಳ ಮನೆಯ ವಿನ್ಯಾಸವನ್ನು ಸಿದ್ಧಪಡಿಸಿ ಕೊಂಡಿರಬಹುದು. ಪುಟ್ಟ ಪುಸ್ತಕದೊಳಗೆ ಅನೇಕ ಮಾಹಿತಿಗಳು. ಸಮೃದ್ಧವಾದ ವಿಚಾರಗಳು. ಬದುಕಿಗೆ ಸೂಕ್ತಿ ಯಾಗಬಲ್ಲ ಸಂಗತಿಗಳನ್ನೊಳಗೊಂಡ ಬುತ್ತಿಯ ಗಂಟು ಗಳು. ಪೈಲೂರು ರವರ ಹೊತ್ತಿಗೆಗಳು.

ಈ ಹೂಜಿಯೊಳಗಿನ ಜೇನು ಸಂಸಾರ ಗಟ್ಟಿಯಾಗುತ್ತಿದ್ದಂತೆಯೇ ಶಿವರಾಂ ಪೈಲೂರು ರವರ ಮತ್ತು ಎಂ ಜಿ ಕಜೆ ಯವರ ಛಾಯಾಚಿತ್ರಗಳ ಪ್ರದರ್ಶನವು ಸೌಗಂಧಿಕಾ ಗ್ಯಾಲರಿಯಲ್ಲಿ ನಡೆಯಿತು.. ಬೆಟ್ಟಾದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ..

ಮುಂದೆ ಸೀಡಿ(CD )ಯ ಚೀಲದೊಳಗೊಂದು ಮುಜಂಟಿ.. ಮೀಟರ್ ನೊಳಗೊಂದು ಸುತ್ತು.

‍ಲೇಖಕರು Avadhi

26 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading