ಮಹಿಪಾಲರೆಡ್ಡಿ ಮುನ್ನೂರು
ಅವನೊಬ್ಬ ಚಿತ್ರ ನಿರ್ದೇಶಕ. ಶ್ರೀಮಂತ ಕುಟುಂಬವೊಂದರ ಹೆಣ್ಣಿನೊಂದಿಗೆ ಅವನ ವಿವಾಹ ಆಗಿರುತ್ತದೆ. ಆದರೆ, ಆ ಮನೆಯವರು ಇವನ ನಿರ್ದೇಶಕ ವೃತ್ತಿಯನ್ನು ಇಷ್ಟಪಟ್ಟಿರುವುದಿಲ್ಲ. ಹೀಗಾಗಿ ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ. ಒಂದು ಮಳೆಗಾಲದ ರಾತ್ರಿ ಶಾಂತಿ ಎಂಬಾಕೆಯನ್ನು ನಿರ್ದೇಶಕ ಸಂಧಿಸುತ್ತಾನೆ. ಅವಳಿಗೆ ತನ್ನ ಕೋಟ್ ಕೊಡುತ್ತಾನೆ. ಅದನ್ನು ಹಿಂದಿರುಗಿಸಲು ಆಕೆ ಅವನು ಚಿತ್ರೀಕರಿಸುತ್ತಿದ್ದ ಸ್ಟುಡಿಯೋಗೆ ಬರುತ್ತಾಳೆ. ಅಲ್ಲಿ ಸ್ಪಾಟ್ ಲೈಟ್ ಬಿಟ್ಟು ಉಳಿದೆಲ್ಲ ಕಡೆ ಕತ್ತಲು. ನಿರ್ದೇಶಕ ತಾನು ತೆಗೆದ ಚಿತ್ರದ ರಷಸ್ ನೋಡುತ್ತಿರುತ್ತಾನೆ. ಇಲ್ಲಿ ಚಿತ್ರೀಕರಣ ನಡೆಯುತ್ತಿದೆ ಎನ್ನುವುದರ ಪರಿವೇ ಇಲ್ಲದೇ ಶಾಂತಿ ಮೆಲ್ಲಗೆ ಕೋಟ್ನೊಂದಿಗೆ ಕ್ಯಾಮೆರಾಗೆ ಇದಿರಾಗಿ ಬರುತ್ತಾಳೆ. ಆಗ ಹಿನ್ನೆಲೆಯಲ್ಲಿ `ವಕ್ತ್ ನೇ ಕಿಯಾ’ ಹಾಡು ಕೇಳಿ ಬರುತ್ತದೆ. ಕೇಳುವುದಕ್ಕೆ ತೀರಾ ಮಾಮೂಲಿ ಎನ್ನುವಂತಿರುವ ಈ ಸನ್ನಿವೇಶವನ್ನು ಮನೋಜ್ಞವಾಗಿ ಚಿತ್ರೀಕರಿಸಿದ್ದು ವಿ.ಕೆ.ಮೂರ್ತಿ ಅವರು. ಹಿಂದಿ ಸಿನೆಮಾವೊಂದರ ಚಿತ್ರೀಕರಣದ ಸಂದರ್ಭದ ಈ ಸಂಗತಿಯನ್ನು ಹೇಳುವಾಗ ಆ ಕಾಲಕ್ಕೆ ಹೋಗುತ್ತಿದ್ದರು. ನೆನಪಿನ ಸುರುಳಿಯನ್ನು ಬಿಚ್ಚುವಾಗ ಅಷ್ಟೇನೂ ಕಷ್ಟ ಪಡುತ್ತಿರಲಿಲ್ಲ. ಸರಳವಾಗಿ ಕಥನವನ್ನು ಕಟ್ಟಿಕೊಡುತ್ತಿದ್ದರು.
`ಸಮಯ’ ನ್ಯೂಸ್ ಚಾನೆಲ್ನಲ್ಲಿ ಡಿಸ್ಟ್ರಿಕ್ಟ್ ನ್ಯೂಸ್ ಕೋ ಆರ್ಡಿನೇಟರ್ ಆಗಿ ಕಾರ್ಯ ನಿರ್ವಹಿಸುವಾಗ ನಾನು `ನಾಡ ಕಣ್ಮಣಿ’ ಎನ್ನುವ ಕಾರ್ಯಕ್ರಮವನ್ನು ಮಾಡುತ್ತಿದ್ದೆ. ಅರ್ಧ ತಾಸಿನ ಈ ಡಾಕ್ಯುಮೆಂಟ್ಗೆ ಸಮಯ ಚಾನೆಲ್ನಲ್ಲಿ ಒಳ್ಳೆಯ ಟಿಆರ್ಪಿ ಇತ್ತು. ಇಂತಹ ಸಂದರ್ಭದಲ್ಲಿ ವಿ.ಕೆ.ಮೂರ್ತಿ ಅವರ ಬಗ್ಗೆ `ನಾಡ ಕಣ್ಮಣಿ’ ಮಾಡುವಂತೆ ಸಲಹೆ ಕೊಟ್ಟವರು ಕ್ಯಾಮೆರಾ ವಿಭಾಗದ ಚೀಫ್ ಆಗಿದ್ದ ಅಶ್ವತಪ್ಪ ಅವರು. ಅದ್ಭುತ ಛಾಯಾಗ್ರಾಹಣಕ್ಕಾಗಿಯೇ ಇಳಿವಯಸ್ಸಿನಲ್ಲಿ ದಾದಾ ಸಾಹೇಬ ಫಾಲ್ಕೆ ಆವಾರ್ಡ್ ನ್ನು ಪಡೆದುಕೊಂಡಿದ್ದ ಮೂರ್ತಿ ಅವರನ್ನು ನಾಡ ಕಣ್ಮಣಿ ಗಾಗಿ ಮೂರ್ನಾಲ್ಕು ವರ್ಷಗಳ ಹಿಂದೆ.. ಅದೊಂದು ದಿನ ಬೆಳಿಗ್ಗೆ ನಾನು ವಿ.ಕೆ.ಮೂರ್ತಿ ಅವರ ಮನೆಗೆ ಹೋಗಿದ್ದೆ. ಆವತ್ತು ನನ್ನ ಜೊತೆಗೆ ಚೀಫ್ ಅಶ್ವತಪ್ಪ ಇದ್ದರು. ಅಶ್ವತಪ್ಪ ಅವರ ಕ್ಯಾಮೆರಾ ಬದುಕಿನ ಗುರುಗಳಾಗಿದ್ದ ಮೂರ್ತಿ ಅವರ ಮನೆಯ ಮುಂದೆ ನಿಂತು ಬಾಗಿಲ ಬಳಿಯಿದ್ದ ಕಾಲಿಂಗ್ ಬೆಲ್ ಒತ್ತಿದೆವು. ಒಳಗೆ ಹೋದ ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡ ವಿ.ಕೆ.ಮೂರ್ತಿ ಅವರು ತಮ್ಮ ಇಡೀ ವೃತ್ತಾಂತವನ್ನು ಬಿಚ್ಚಿಡುತ್ತಿದ್ದರು.

`ವಕ್ತ್ ನೇ ಕಿಯಾ ಕ್ಯಾ ಹಸೀನ್ ಸಿತಮ್ ತುಮ್ ರಹೇ ನ ತುಮ್ ಹಮ್ ರಹೇ ನ ಹಮ್..’ ಇದು ಗುರುದತ್ ನಿರ್ದೇಶನದ `ಕಾಗಜ್ ಕೇ ಫೂಲ್’ ಸಿನಿಮಾದ ಪ್ರಖ್ಯಾತ ಹಾಡು. ಕೈಫಿ ಆಜ್ಮಿ ಅವರ ಗೀತೆ. ಎಸ್.ಡಿ.ಬರ್ಮನ್ ಅವರ ಸಂಗೀತ. ಗೀತಾ ದತ್ ಅವರ ಕಂಠದಲ್ಲಿ ಮೂಡಿ ಬಂದ ಹೃದಯ ಕಲುಕುವಂಥ ಈ ಗೀತೆಗೆ ಅಷ್ಟೇ ಪರಿಣಾಮಕಾರಿಯಾಗಿ ಮತ್ತು ಮನೋಜ್ಞವಾಗಿ, ಅರ್ಥಗರ್ಭಿ ತವಾಗಿ ಛಾಯಾಗ್ರಹಣ ಮಾಡಿದ ಕೀರ್ತಿ ವಿ.ಕೆ.ಮೂರ್ತಿ ಅವರಿಗೆ ಸಲ್ಲುತ್ತದೆ. 1959ರಲ್ಲಿ ತೆರೆ ಕಂಡ `ಕಾಗಜ್ ಕೇ ಫೂಲ್’ ಭಾರತದಲ್ಲೆ ಮೊದಲ ಬಾರಿಗೆ ಕಪ್ಪು ಬಿಳುಪಿನಲ್ಲಿ ತಯ್ಯಾರಾದ 75 ಎಂ ಎಂ ಸಿನಿಮಾ ಸ್ಕೋಪ್ ಚಿತ್ರ. ಆದರೂ ಆಗ ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಇನ್ನಿಲ್ಲದಂತೆ ನೆಲ ಕಚ್ಚಿತ್ತು. ಆದರೆ, ಅದೇ ಚಿತ್ರ 1984 ರಲ್ಲಿ ಮರು ತೆರೆ ಕಂಡಾಗ ಅದನ್ನೊಂದು ಕ್ಲಾಸಿಕ್ ಚಿತ್ರವೆಂದು ಚಿತ್ರ ಪ್ರಪಂಚ ಹಾಡಿ ಹೊಗಳಿತ್ತು. ಸರ್ವ ಕಾಲಕ್ಕೂ ಸಲ್ಲುವ ಶ್ರೇಷ್ಠ ಚಿತ್ರ ಎನ್ನುವ ಹೆಗ್ಗಳಿಕೆಗೆ `ಕಾಗಜ್ ಕೇ ಫೂಲ್’ ಪಾತ್ರವಾಯಿತು. 2002 ರಲ್ಲಿ ಸೈಟ್ ಅಂಡ್ ಸೌಂಡ್ ನಡೆಸಿದ ಕ್ರಿಟಿಕ್ಸ್ ಅಂಡ್ ಡೈರೆಕ್ಟರ್ಸ್ ಪೋಲ್ನಲ್ಲಿ `ಕಾಗಜ್ ಕೇ ಫೂಲ್ 160 ನೇ ಸ್ಥಾನವನ್ನು ಪಡೆದುಕೊಂಡಿತು. ಹಿಂದಿಯ ಶ್ರೇಷ್ಠ ಹತ್ತು ಸಿನಿಮಾಗಳ `ಕಾಗಜ್ ಕೇ ಫೂಲ್’ ಶಾಶ್ವತವಾದ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಇದಕ್ಕೆ ಪ್ರಮುಖ ಕಾರಣ ವಿ.ಕೆ.ಮೂರ್ತಿ ಅವರ ಕ್ಯಾಮೆರಾ ಕೈ ಚಳಕ ಎಂಬುದು ಚಿತ್ರ ವಿದ್ವಾಂಸರೆಲ್ಲರ ಅಭಿಪ್ರಾಯ.
ಗುರುದತ್ ಅವರ ಬಹುತೇಕ ಸಿನೆಮಾಗಳಿಗೆ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ ಮೂರ್ತಿ ಅವರದ್ದು ಅಸಾಧಾರಣ ಪ್ರತಿಭೆ. `ಪ್ಯಾಸಾ’ ಸಿನಿಮಾದಲ್ಲಿ ಹಿರೋ ಹತಾಶೆಯಿಂದ ಬಾಗಿಲಿಗೆ ಕೈಯೊಡ್ಡಿ ನಿಲ್ಲುವ ಒಂದು ಅಪೂರ್ವ ದೃಶ್ಯವಿದೆ. ಆ ದೃಶ್ಯವನ್ನು ಮೂರ್ತಿ ಅವರು ತೆಗೆದಿರುವ ರೀತಿ ಅನನ್ಯ. ಆ ಸಂದರ್ಭದಲ್ಲೂ ಒಂದು ದುಃಖದ ಗೀತೆ ಕೇಳಿ ಬರುತ್ತದೆ. `ಎ ದುನಿಯಾ ಅಗರ್ ಮಿಲ್ ಭಿ ಜಾಯೇ ತೋ ಕ್ಯಾ ಹೇ’ ಮಹ್ಮದ್ ರಫಿ ಅವರ ಕಂಠದಲ್ಲಿ ಮೂಡಿ ಬಂದ ಈ ಗೀತೆಯೂ ಕೂಡ ಬರಹಗಾರನೊಬ್ಬನ ಬದುಕಿನ ಹೃದಯ ವಿದ್ರಾವಕ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. 1957 ರಲ್ಲಿ ಕಪ್ಪು ಬಿಳುಪಿನಲ್ಲಿ ತಯಾರಾದ ಈ ಸಿನಿಮಾದಲ್ಲಿಯೂ ಕ್ಯಾಮೆರಾ ಕೈ ಚಳಕವೇ ಪ್ರಧಾನ ಭೂಮಿಕೆಯನ್ನು ಪಡೆದುಕೊಂಡಿದೆ. ಗುರುದತ್ ಅವರ ಸಿನಿಮಾಗಳಿಗೆ ಕಲಾತ್ಮಕತೆ, ಕಾವ್ಯ ಗುಣ ಲಭ್ಯವಾಗುವಲ್ಲಿ ಮೂರ್ತಿಯವರ ಕೊಡುಗೆ ಅನುಪಮ. ಮೂರ್ತಿ ಅವರು ಉಳಿದೆಲ್ಲ ಕ್ಯಾಮೆರಾಮನ್ಗಳಿಗಿಂತ ಭಿನ್ನವಾಗಿ ಕಾಣುವುದಕ್ಕೆ ಪ್ರಮುಖ ಕಾರಣ ಅವರು ದೃಶ್ಯವನ್ನು ಚಿತ್ರೀಕರಿಸುವಲ್ಲಿ ಹೊರಹೊಮ್ಮಿಸಿದ ಪ್ರತಿಭಾವಂತಿಕೆ. ದೂರದರ್ಶನದಲ್ಲಿ ಮೂಡಿ ಬರುತ್ತಿದ್ದ

`ತಮಸ್’ ಧಾರಾವಾಹಿಯನ್ನು ನೋಡಿದವರಿಗೆ ಇದು ಮತ್ತಷ್ಟು ಮನದಟ್ಟಾಗುತ್ತದೆ. ಮಸೀದಿಯ ಪ್ರವೇಶ ದ್ವಾರದಲ್ಲಿ ಯಾರೋ ಕಿಡಿಗೇಡಿಗಳು ಹಂದಿಯ ಮಾಂಸ್ ತುಂಡನ್ನು ಎಸೆದಿರುತ್ತಾರೆ. ಅದನ್ನು ನೋಡಿದ ವ್ಯಕ್ತಿ ಥರ ಥರ ನಡುಗಿ ಹೋಗುತ್ತಾನೆ. ಈ ಎರಡನ್ನೂ ಎಷ್ಟು ಪರಿಣಾಮಕಾರಿಯಾಗಿ ಮೂರ್ತಿಯವರು ಚಿತ್ರಿಸಿದ್ದಾರೆಂದರೆ, ನೋಡುಗನ ಮನಸ್ಸಿನ ಮೇಲೆ ಮುಂದಿನ ಘಟನೆಯ ಚಿತ್ರ ಅನಾವರಣಗೊಳ್ಳಬೇಕು. ಆ ರೀತಿಯ ಅನನ್ಯತೆ ಅವರ ಛಾಯಾಗ್ರಹಣದಲ್ಲಿದೆ. ಅಂದಿನ ದಿನಗಳಲ್ಲಿ ಕಲಾವಿದರು ಅದರಲ್ಲೂ ಸಿನಿಮಾ ನಟಿಯರು ವಿ.ಕೆ.ಮೂರ್ತಿಯವರು ತಮ್ಮ ಚಿತ್ರದ ಛಾಯಾಗ್ರಹಣ ಮಾಡಿದರೆ ತಮ್ಮ ಅದೃಷ್ಟವೆಂದು ಭಾವಿಸುತ್ತಿದ್ದರಂತೆ. ಅವರ ಚಿತ್ರಗಳಲ್ಲಿ ನೆರಳು ಬೆಳಕಿನ ಸಂಯೋಜನೆಯಿಂದ ಅವರು ಕಲಾವಿದರನ್ನು ಸುಂದರವಾಗಿ ಬಿಂಬಿಸುತ್ತಿದ್ದ ರೀತಿ ಈ ಮಾತನ್ನು ಸಾಕಷ್ಟು ಪುಷ್ಟೀಕರಿಸುತ್ತದೆ. ಅವರ ಸಿನಿಮಾಗಳಲ್ಲಿ ಮಧುಬಾಲ, ವಹೀದಾ ರೆಹಮಾನ್ ಅಂತಹವರು ಸುಂದರವಾಗಿ ಮೂಡಿಬಂದ ರೀತಿ ಅತ್ಯಂತ ಪ್ರಸಿದ್ದಿ ಪಡೆದಿತ್ತು. ಇಂತಹ ಮಹಾನ್ ತಂತ್ರಜ್ಞನಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು ಆ ಪ್ರಶಸ್ತಿಗೆ ಕೂಡ ವಿಶಾಲ ವ್ಯಾಪ್ತಿ ಮತ್ತು ಹಿರಿಮೆಯನ್ನು ತಂದಿದೆ ಎಂಬುದು ಬಹುತೇಕರ ಅಭಿಪ್ರಾಯ.
ಭಾರತದ ಪ್ರಪ್ರಥಮ ಸಿನಿಮಾಸ್ಕೋಪ್ ಸಿನಿಮಾ `ಕಾಗಜ್ ಕಾ ಪೂಲ್’ ಮತ್ತು `ಸಾಹಿಬ್, ಬೀಬಿ ಔರ್ ಗುಲಾಂ’ ಚಿತ್ರದ ಛಾಯಾಗ್ರಹಣಕ್ಕಾಗಿ ಮೂರ್ತಿ ಅವರು ಫಿಲ್ಮಫೇರ್ ಪ್ರಶಸ್ತಿ ಪಡೆದಿದ್ದರು. ಅತ್ಯಂತ ಸೂಕ್ಷ್ಮ ವಿಧಾನಗಳ ಮೂಲಕ ಛಾಯಾಗ್ರಹಣಕ್ಕೆ ಶ್ರೀಮಂತ ಹಾಗೂ ಕಲಾತ್ಮಕ ಮೆರುಗನ್ನು ತಂದುಕೊಟ್ಟ ಹಿರಿಮೆ ವಿ.ಕೆ.ಮೂರ್ತಿ ಅವರದ್ದು. `ಚಾದ್ವಿನ್ ಕಾ ಚಾಂದ್’ , `ಬಾಜಿ’ `ಪ್ಯಾಸಾ’, `12 ಓ ಬ್ಲಾಕ್’, `ಜಿದ್ದಿ’, `ಲವ್ ಇನ್ ಟೋಕಿಯೋ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮೂಡಿಬಂದ ದೃಶ್ಯ ಕಾವ್ಯಗಳು ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿವೆ. ಮಹಾನ್ ಕಲಾವಿದ ಮತ್ತು ನಿರ್ದೇಶಕ ಗುರುದತ್ ಅವರು ಜೀವಿಸಿರುವವರೆಗೆ ಅವರ ಎಲ್ಲಾ ಸಿನಿಮಾಗಳಿಗೂ ಕಣ್ಣಾಗಿದ್ದ ಮೂರ್ತಿಯವರು ಅವರ ನಿಧನದ ನಂತರದಲ್ಲಿ ಇತರ ಪ್ರಮುಖ ನಿರ್ದೇಶಕರ ಜೊತೆಯಲ್ಲಿ ಕೂಡ ಕೆಲಸ ಮಾಡಿದರು. ಸಿನಿಮಾಗಳಲ್ಲದೆ ಶ್ಯಾಂ ಬೆನಗಲ್ ಅವರ `ಭಾರತ್ ಏಕ್ ಖೋಜ್’ ಮತ್ತು ಗೋವಿಂದ ನಿಹಲಾನಿ ಅವರ `ತಮಸ್’ ಧಾರಾವಾಹಿಗಳಿಗೂ ಪ್ರಧಾನ ಛಾಯಾಗ್ರಾಹಕರಾಗಿ ದುಡಿದ ಮೂರ್ತಿಯವರ ಕೆಲಸ ಬಹುಕಾಲ ನೆನಪಿನಲ್ಲಿ ಉಳಿಯುವಂತಾದ್ದಾಗಿದೆ. ವಿಶ್ವಖ್ಯಾತಿಯ ಈ ಕನ್ನಡಿಗರು ಕನ್ನಡದಲ್ಲಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ `ಹೂವು ಹಣ್ಣು’ ಸಿನಿಮಾದಲ್ಲಿ ಕೂಡ ಛಾಯಾಗ್ರಹಣ ಮಾಡಿದ್ದಾರೆ. ಮೂರ್ತಿ ಅವರು ಪ್ರಾರಂಭದ ದಿನಗಳಿಂದ ಸಿನಿಮಾದ ಸಹೋದ್ಯೋಗಿಗಳಿಂದ ಅತ್ಯಂತ ಸೌಹಾರ್ದಯುತ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಗುರುದತ್ ಮತ್ತು ಅವರ ಒಡನಾಡಿತನ ನಿರಂತರವಾಗಿತ್ತು. ಅನೇಕ ಬಾರಿ ನಿರ್ಮಾಪಕರು, ನಿರ್ದೇಶಕರು ತಮಗೆ ಕಲಾವಿದರಿಂದ ಹೆಚ್ಚಿನ ಸಮಯದ ಕೆಲಸ ಬೇಕಿದ್ದರೆ ಅದನ್ನು ಮೂರ್ತಿಯವರ ಮೂಲಕ ಪಡೆಯುತ್ತಿದ್ದರಂತೆ. `ಮಧುಬಾಲಾ’ ಅತ್ಯಂತ ಕಟ್ಟು ನಿಟ್ಟಿನ ವ್ಯಕ್ತಿ. ಸಮಯ ಅಂದರೆ ಸಮಯ. ನಂತರದ ವೇಳೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಒಮ್ಮೆ ನಿರ್ದೇಶಕರು ಇವತ್ತು ಇವತ್ತು ಇನ್ನಷ್ಟು ಕೆಲಸ ಮುಗಿಸಿಬಿಟ್ಟಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಭಾವಿಸಿದರು. ಆದರೆ ನಾಯಕ ನಟಿ ಒಪ್ಪಬೇಕಲ್ಲ. ನಮ್ಮ ಮೂರ್ತಿಯವರ ಆಸರೆ ಕೇಳಿದರು. ಮೂರ್ತಿ ಅವರು `ಮಧುಬಾಲ’ ಅವರ ಬಳಿ ನೀವು ಇವತ್ತು ಇನ್ನೆರಡು ಗಂಟೆಗಳ ಕೆಲಸ ಮಾಡುವುದಾದರೆ ನನಗೆ ತುಂಬಾ ಸಹಾಯವಾಗುತ್ತೆ ಎಂದು ಕೇಳಿದರಂತೆ. `ಸರಿ’ ನಾನು ಮನೆಗೆ ಹೋಗಿ ಇನ್ನೊಂದು ತಾಸಿನಲ್ಲಿ ವಾಪಾಸು ಬರುತ್ತೇನೆ ಎಂದು ಹೇಳಿ, ಹಲವು ತಾಸುಗಳವರೆಗೆ ಕೆಲಸ ಮಾಡಿದರಂತೆ. ಇದನ್ನು ಕಂಡು ಯಾರೋ ಏನಿವತ್ತು ಎಂದು ಅಚ್ಚರಿಯಾಗಿ ಕೇಳಿದರಂತೆ, ಅದಕ್ಕೆ ಆ ನಟಿ, ನಾನು ಮೂರ್ತಿ ಅವರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದಳಂತೆ. ಸಿನಿಮಾ ರಂಗದಲ್ಲಿ ಹಲವು ಪ್ರೇಮಿಗಳ ಸಮಸ್ಯೆಗಳು ಕೂಡ ಮೂರ್ತಿಯವರ ಸಮ್ಮುಖಕ್ಕೆ ಪರಿಹಾರಕ್ಕೋಸ್ಕರ ಬರುತ್ತಿದ್ದವಂತೆ. ಅಷ್ಟೊಂದು ಗೌರವಯುತ ಸ್ಥಾನ ಪಡೆದಿದ್ದವರು ಮೂರ್ತಿಗಳು.
ಇತ್ತೀಚೆಗೆ ಅಮಿತಾಬ್ ಬಚ್ಚನ್ ಅವರು ಹೇಳಿದ ಮಾತು, `ಮೂರ್ತಿ ಸಾಬ್ ಅವರ ವ್ಯಕ್ತಿತ್ವ ಮತ್ತು ಪ್ರತಿಭೆ ಅಸಾಧಾರಣ’. ಮುಂಬೈನ್ ಮೈಸೂರು ಅಸೋಸಿಯೇಷನ್ ಮೂರ್ತಿಯವರಿಗೆ ನೀಡಿದ ಸನ್ಮಾನದಲ್ಲಿ ಶ್ಯಾಂ ಬೆನಗಲ್, ಗೋವಿಂದ ನಿಹಲಾನಿ, ಆಶಾ ಪರೇಖ್ ಮುಂತಾದ ಮಹಾನ್ ಗಣ್ಯರ ಸಾಲು ಸಾಲೇ ನೆರೆದಿತ್ತು. ಇಂತಹ ಮೂರ್ತಿ ಅಪ್ಪಟ ಕನ್ನಡಿಗರು. ಹಿಂದಿ ಸಿನಿಮಾ ಜಗತ್ತಿನಲ್ಲಿ ಬಹುದೊಡ್ಡ ಹೆಸರನ್ನು ಪಡೆದ ವೆಂಕಟರಾಮ ಪಂಡಿತ ಕೃಷ್ಣಮೂರ್ತಿ 1902ರ ನವೆಂಬರ್ 26ರಂದು ಮೈಸೂರಿನಲ್ಲಿ ಜನಿಸಿದ್ದರು. ತಂದೆ ವೆಂಕಟರಾಮ ಪಂಡಿತರು ಆಯುರ್ವೇದ ನಿಷ್ಣಾತರು. ಮೈಸೂರಿನ ಅರಮನೆಯಲ್ಲಿ ಆಯುರ್ವೇದ ಪಂಡಿತರೆಂದು ಗುರುತಿಸಲ್ಪಟ್ಟು, ಸ್ವಲ್ಪ ನಿವೃತ್ತಿ ವೇತನ ಗಳಿಸುತ್ತಿದ್ದರು. ಅವರ 60 ರೂ. ವೇತನದಲ್ಲಿ ಸಂಸಾರ ನಡೆಯಬೇಕಿತ್ತು. ತಾಯಿ ಹೆಸರು ನಾಗಮ್ಮ. ಈ ದಂಪತಿಗೆ 5 ಜನ ಮಕ್ಕಳು. ಮೂರ್ತಿ ಎಂಟೊಂಬತ್ತು ವರ್ಷದವರಿದ್ದಾಗ ತಾಯಿ ನಿಧನರಾಗಿದ್ದರು. ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನ ಛಾಯಾಗ್ರಹಣ ವಿಭಾಗದ ಮೊದಲ ತಂಡದ (1943-46) ವಿದ್ಯಾರ್ಥಿಗಳಲ್ಲಿ ಒಬ್ಬರು. ಮುಂದೆ ಮುಂಬೈಗೆ ಬಂದಿಳಿದ ಮೂರ್ತಿಯವರಿಗೆ ಅಲ್ಲಿನ ಮೈಸೂರು ಅಸೋಸಿಯೇಷನ್ ತುಂಬಾ ಪ್ರಿಯವಾಗಿತ್ತು. ಅಲ್ಲಿ ಒಂದು ನಾಟಕಕಾರರ ಗುಂಪನ್ನು ಕಟ್ಟಿ, ಅನೇಕ ನಾಟಕಗಳನ್ನು ನಿರ್ದೇಶಿಸಿ ರಂಗಪ್ರದರ್ಶನ ಮಾಡಿದ್ದರು. ಮೂರ್ತಿಯವರಿಗೆ ಪಿಟೀಲು ವಾದನದಲ್ಲಿ ಕೂಡ ಉತ್ತಮ ಪರಿಶ್ರಮವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರು 1943 ರ ವರ್ಷದಲ್ಲಿ ಸೆರೆವಾಸ ಅನುಭವಿಸಿದ್ದರು. ತಮ್ಮ ಅದ್ಭುತ ಛಾಯಾಗ್ರಹಣಕ್ಕೆ 1959ರಲ್ಲಿ ಕಾಗಜ್ ಕೇ ಫೂಲ್ ಮತ್ತು 1962 ರಲ್ಲಿ ಸಾಹಿಬ್ ಬೀಬಿ ಔರ್ ಗುಲಾಂ ಸಿನಿಮಾಗಳಿಗೆ ಫಿಲ್ಮಫೇರ್ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ, 2005 ರಲ್ಲಿ ಆಂಸ್ಟರ್ಡ್ಯಾಮ್- ಜೀವಮಾನ ಸಾಧನೆ ಪ್ರಶಸ್ತಿ ಮತ್ತು 2008 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದುಕೊಂಡಿದ್ದರು. ವಿ.ಕೆ.ಮೂರ್ತಿ ಅವರು ಛಾಯಾಗ್ರಹಣ ಮಾಡಿದ ಕೆಲವು ಸಿನಿಮಾಗಳೆಂದರೆ, ಬಾಜೀ, ಜಾಲ್, ಆರ್ ಪಾರ್, ಮಿಸ್ಟರ್ ಆಂಡ್ ಮಿಸ್ಸೆಸ್ 55, ಸಿ ಐ ಡಿ, ಪ್ಯಾಸಾ, 12 ಓ ಕ್ಲಾಕ್, ಕಾಗಜ್ ಕೇ ಫೂಲ್, ಚೌದ್ವಿ ಕಾ ಚಾಂದ್, ಸಾಹಿಬ್ ಬೀವಿ ಔರ್ ಗುಲಾಂ, ಜಿದ್ದಿ, ಸೂರಜ್, ಲವ್ ಇನ್ ಟೋಕಿಯೋ, ನಯಾ ಜಮಾನಾ, ಜುಗ್ನು, ಅಂತರ್ನಾದ್, ದೀದಾರ್, ಖುಲೇ ಆಮ್. ಕನ್ನಡದಲ್ಲಿ ಹೂವು ಹಣ್ಣು ಸಿನಿಮಾ. ಇಂತಹ ಮೂರ್ತಿ ಅವರ ಬಗ್ಗೆ ಶ್ರೀಮತಿ ಉಮಾರಾವ್ ಅವರು 2005 ರಲ್ಲಿ `ಬಿಸಿಲುಕೋಲು’ ಎಂಬ ಬಯೋಗ್ರಾಫಿ ಬರೆದಿದ್ದಾರೆ.
ಸಿನಿಮಾ ಕತೆಗೆ ಡಿಫರೆಂಟ್ ಫ್ರೇಮ್ ಕೊಡುವ ಅದ್ಭುತ ಛಾಯಾಗ್ರಹಕ ವಿ.ಕೆ.ಮೂರ್ತಿ ಅವರು ನಮ್ಮನ್ನು ಅಗಲಿದರೂ, ಅವರ ಕಲಾ ಪ್ರೌಢಿಮೆಗೆ ಸಾಕ್ಷಿಯಾಗಿರುವ ಸಿನಿಮಾಗಳಿವೆ. ಮೂರ್ತಿ ಅವರು ತಮ್ಮ ಸಿನಿಮಾ ಜಗತ್ತಿನ ಇಡೀ ಕಥನವನ್ನು ಮೂರು ದಿವಸ ನಮ್ಮೊಂದಿಗೆ ಹಂಚಿಕೊಂಡರು. ನಾವು ಅದನ್ನು ಶೂಟ್ ಮಾಡಿಕೊಂಡೆವು. ಇವತ್ತು ಅವರಿಲ್ಲ ಎಂಬ ಬ್ರೇಕಿಂಗ್ ಸುದ್ದಿ ಬಂದಾಗ, ಇದೆಲ್ಲಾ ನೆನಪಾಯಿತು. ಆವತ್ತು ನಾಡ ಕಣ್ಮಣಿಯಲ್ಲಿ ವಿ.ಕೆ.ಮೂರ್ತಿ ಅವರ ಬದುಕನ್ನು ಕಟ್ಟಿಕೊಡುವಂತೆ ಅಶ್ವತಪ್ಪ ಹೇಳಿದ್ದರು. ಮೂರ್ತಿ ಅವರು ಅಶ್ವತಪ್ಪ ಅವರ ಗುರುಗಳು. ಅವರಿಂದಾಗಿಯೇ ಒಬ್ಬ ಅಸಾಧಾರಣ ವ್ಯಕ್ತಿತ್ವದ ಮತ್ತು ಮೇರು ವ್ಯಕ್ತಿತ್ವದ ಮೂರ್ತಿ ಅವರನ್ನು ಸಮೀಪದಿಂದ ನೋಡಿದ್ದು, ಅವರನ್ನು ಮಾತಾಡಿಸಿದ್ದು, ಅವರ ಕಥನವನ್ನು ಅವರಿಂದಲೇ ಕೇಳಿ ತಿಳಿದುಕೊಂಡಿದ್ದು ನಿಜಕ್ಕೂ ವರ್ಣಿಸಲಸದಳ.






ತೀರಿದ ಮೂರ್ತಿಯವರ ಬಗ್ಗೆ “ಅವಧಿ”ಯಲ್ಲಿ ಎಷ್ಟೊಂದು ಹೊಸಪೀಳಿಗೆಯ ದನಿಗಳು ಎಷ್ಟೊಂದು ಅಭಿಮಾನಪೂರ್ವಕವಾಗಿ ಬರೆದಿದ್ದಾರೆ! ಓದಲೊಂದು ಖುಷಿ, ವಿಷಾದದ ನಡುವೆಯೂ.
ಓಹ್! ತುಂಬಾ ಸುಂದರವಾದ ಲೇಖನ.ಮೂರ್ತಿಯವರನ್ನು ಮೂರ್ತಗೊಳಿಸಿದ್ದೀರಿ.
murti photo clicking munnur sir,
nice.
ಧನ್ಯವಾದಗಳು ಎಲ್ಲರಿಗೂ
Tumba chennagi bandide.