
ಮ ಶ್ರೀ ಮುರಳಿ ಕೃಷ್ಣ
ತತ್ವಶಾಸ್ತ್ರದಲ್ಲಿನ ಭೌತವಾದಿ ಎಳೆ ನನಗೆ ಆಕರ್ಷಣೀಯ ವಿಷಯ. ಪೌರ್ವಾತ್ಯ ಇರಬಹುದು ಅಥವಾ ಪಾಶ್ಚಿಮಾತ್ಯ ಇರಬಹುದು, ಭೌತವಾದಿ ಚಿಂತನೆಗಳ ಉಗಮ, ಬೆಳವಣಿಗೆ ಇತ್ಯಾದಿಗಳ ಅಧ್ಯಯನದ ಹಾದಿಯ ಪಯಣ ಚೇತೋಹಾರಿ ಅನುಭವವನ್ನು ನೀಡುತ್ತದೆ. ಹೀಗೆಂದಾಕ್ಷಣ, ಭಾವನವಾದಿ ತತ್ವಶಾಸ್ತ್ರವನ್ನು ಅಸಡ್ಡೆ ಮಾಡುವುದಿಲ್ಲ.
ನಮ್ಮಲ್ಲಿ ದೇವರು-ದಿಂಡರು, ಮತಧರ್ಮಗಳು ಇತ್ಯಾದಿ ಭಾವನಾವಾದಿ ತತ್ವಶಾಸ್ತ್ರದ ಅಂಶಗಳು ಆಳವಾಗಿ ಬೇರೂರಿವೆ; ಸಾಂಸ್ಥಿಕ ರೂಪವನ್ನು ಪಡೆದಿವೆ; ಅಸಂಖ್ಯಾತ ಜನರನ್ನು ಪ್ರಭಾವಿಸುತ್ತಲೇ ಬಂದಿವೆ. ಇವು ಆಯಾ ಸ್ತರದಲ್ಲಿ ಹೇಗೆ ಒಂದು social unifying force ಆಗಿ ಪರಿಣಮಿಸಿವೆ ಎಂಬುದು ಕೌತುಕದ ವಿಷಯವೇ ಸರಿ. ಜಾತಿ ವ್ಯವಸ್ಥೆಯ ವಿಚಾರವೂ ಇದೇ ಬಗೆಯ ಪಾತ್ರವನ್ನು ವಹಿಸುತ್ತ ಬಂದಿದೆ. ಆದರೆ ಜಾತಿವ್ಯವಸ್ಥೆಯ ನಕಾರಾತ್ಮಕ ಆಯಾಮವನ್ನು ಪರಿಗಣಿಸಲೇ ಬೇಕು. ಇರಲಿ… ಈ ವಿಷಯವನ್ನು ಚರ್ಚಿಸುವಾಗ ಆಳುವ ವರ್ಗಗಳು, ಸ್ಥಾಪಿತ ಹಿತಾಸಕ್ತಿಗಳು ಇಂತಹ ವಿಷಯಗಳನ್ನು ಹೇಗೆ ಋಣಾತ್ಮಕವಾಗಿ ಬಳಸುತ್ತ ಬಂದಿವೆ ಎಂಬ ಅರಿವೂ ಇರಬೇಕು.
ಅಧ್ಯಾತ್ಮದ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಮಹಾನುಭಾವರು ಆಗಿಹೋಗಿದ್ದಾರೆ. ಬುದ್ಧ, ಮಹಾವೀರ( ಬೌದ್ಧ ಮತ್ತು ಜಿನ ಮತಗಳು ಪ್ರಾರಂಭದಲ್ಲಿ ಭೌತವಾದಿ ಪಂಥಗಳಾಗಿದ್ದರೂ, ನಂತರ ಭಾವನಾವಾದಿ ಪಂಥಗಳ ಹಾದಿ ಹಿಡಿದವು ಎಂದೂ ವಿಶ್ಲೇಷಿಸಲಾಗುತ್ತದೆ), ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಏಸುಕ್ರಿಸ್ತ, ಬಸವಣ್ಣ, ಗುರುನಾನಕ್, ಕಬೀರ್, ಸ್ವಾಮಿ ವಿವೇಕಾನಂದ, ನಾರಾಯಣ ಗುರು, ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿ ಇನ್ನೂ ಅನೇಕರು ತಮ್ಮ ಆಧ್ಯಾತ್ಮಿಕ ಚಿಂತನೆಗಳಿಂದ ದೊಡ್ಡ ಸಂಖ್ಯೆಯ ಜನರ ಮೇಲೆ ಗುರುತಿಸುವಂತಹ ಪರಿಣಾಮಗಳನ್ನು ಬೀರಿದ್ದಾರೆ.

ಆದರೆ ಅಧ್ಯಾತ್ಮವನ್ನು ಬಳಸಿ, ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು, ಅನ್ಯಮತ ದ್ವೇಷ, ಕೋಮುವಾದ, ತಮ್ಮ ಮತವೇ ಶ್ರೇಷ್ಠ ಎಂಬ ವ್ಯಸನ ಇತ್ಯಾದಿಗಳನ್ನು ಪಸರಿಸುವ ಆಧ್ಯಾತ್ಮಿಕ ಗುರುಗಳನ್ನು, ಸ್ವಾಮೀಜಿಗಳನ್ನು ನಾವು ನೋಡುತ್ತ ಬಂದಿದ್ದೇವೆ. ಅಂತಹವರಿಗೂ ಬಹುಸಂಖ್ಯೆಯ ಅನುಯಾಯಿಗಳು ಇರುವುದು ನಮಗೆ ತಿಳಿದ ಸಂಗತಿಯೇ ಆಗಿದೆ.
ನಿನ್ನೆ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರು ಅಸುನೀಗಿದರು. ಅವರು ಕಾಷಾಯ ವಸ್ತ್ರವನ್ನು ಧರಿಸುತ್ತಿರಲಿಲ್ಲ. ಬಿಳಿ ಪಂಚೆ ಮತ್ತು ಅಂಗಿಯನ್ನು ತೊಡುತ್ತಿದ್ದರು. ದೊಡ್ಡ ಶಾಲಾ ಕಾಲೇಜುಗಳನ್ನು ಸ್ಥಾಪಿಸಲಿಲ್ಲ. ‘ಧಾಮ್… ಧೂಮ್…’ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಧ್ಯಾತ್ಮದ ಪ್ರಸಾರವನ್ನು ಮಾಡಲಿಲ್ಲ. ಪದ್ಮಶ್ರೀ ಬಿರುದನ್ನು ನಯವಾಗಿ ನಿರಾಕರಿಸಿದರು. ಕರ್ನಾಟಕ ಸರ್ಕಾರ ಅವರ ಆಶ್ರಮಕ್ಕೆ ಬಿಡುಗಡೆ ಮಾಡಿದ 50 ಲಕ್ಷ ರೂ ಅನುದಾನವನ್ನು ವಾಪಸ್ಸು ಮಾಡಿದರು ಎನ್ನಲಾಗಿದೆ. ಅವರು ಪ್ರವಚನಗಳಿಗೆ ಹೆಸರುವಾಸಿಯಾಗಿದ್ದರು. ಕನ್ನಡ, ಮರಾಠಿ, ಆಂಗ್ಲ, ಸಂಸ್ಕೃತ ಮತ್ತು ಉರ್ದು ಭಾಷೆಗಳನ್ನು ಬಲ್ಲವರಾಗಿದ್ದ ಸ್ವಾಮೀಜಿಯವರು ತಮ್ಮ ಭಾಷಣಗಳಲ್ಲಿ ಮುಖ್ಯವಾಗಿ ‘ಕಾಯಕ -ದಾಸೋಹ‘ ಸಿದ್ದಾಂತ (ತತ್ವ)ವನ್ನು ಪ್ರತಿಪಾದಿಸುತ್ತಿದ್ದರು. ಮಾನವ ಬಂಧುತ್ವದ ಬಗೆಗೆ ಒತ್ತನ್ನು ನೀಡುತ್ತಿದ್ದರು. ಜಾತಿ ಮತಗಳಾಚೆ ಮಾನವರ ನಡುವೆ ಪ್ರೀತಿಯನ್ನು ಬೆಸೆಯಲು ಪ್ರಯತ್ನಿಸಿದರು.
ಅವರು 2014ರಲ್ಲಿ ಅಭಿವಂದನಾ ಪತ್ರ (ಉಯಿಲು ಎನ್ನಬಹುದು)ವನ್ನು ಬರೆದು ತಮಗೆ ಶ್ರಾದ್ಧ, ವಿಧಿ-ವಿಧಾನಗಳನ್ನು ಮಾಡಬಾರದು, ಸ್ಮಾರಕಗಳನ್ನು ನಿರ್ಮಿಸಬಾರದು ಎಂದು ತಿಳಿಸಿದ್ದರು! ಅದರಲ್ಲಿ ‘ಸತ್ಯವೂ ಇಲ್ಲ, ಅಸತ್ಯವೂ ಇಲ್ಲ . ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು’.. ಎಂಬ ವಚನವನ್ನು ಬರೆದಿದ್ದರು.
ಸಾಮಾಜಿಕ ಜಾಲತಾಣಗಳ ಕೆಲವು ಬರಹಗಳ ಅನ್ವಯ ಅವರು ಬಲಪಂಥೀಯರಾಗಿದ್ದರು, ತಮ್ಮ ಒಂದು ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ಇವುಗಳಿಂದಾಚೆ ಅವರು ಮಾನವೀಯತೆಯನ್ನು ಎತ್ತಿ ಹಿಡಿದರು. ನಾನು ಒಬ್ಬ ಎಡಪಂಥೀಯನಾಗಿ ಅಧ್ಯಾತ್ಮದಿಂದ ದೂರವಿದ್ದರೂ, ಸಿದ್ದೇಶ್ವರ ಸ್ವಾಮೀಜಿಯವರ ಮಾನವಪ್ರೇಮದ ನಡೆಗಳನ್ನು ಗೌರವಿಸುತ್ತೇನೆ. ಅವರಿಗೆ ಆದರಪೂರ್ವಕ ನಮನಗಳು…






0 Comments