ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ದೇಶ್ವರ ಶ್ರೀಗಳಂತೆ ಸಂತನಾಗುವುದು ಅಷ್ಟು ಸುಲಭವಲ್ಲ…

ಶಿವಾನಂದ ತಗಡೂರು

ಅದೇ ಜೇಬುಗಳಿಲ್ಲದ ಬಿಳಿ ಜುಬ್ಬ, ಬಿಳಿ ಪಂಚೆ ಧರಿಸಿದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಮಾಮೂಲಿ ಚಪ್ಪಲಿ ಮೆಟ್ಟಿಕೊಂಡು ನಡೆದು ಬರುತ್ತಿದ್ದರೆ, ಅವರ ಮುಖದಲ್ಲಿನ ತೇಜಸ್ಸು ಸಂತ ಎಂದೇ ಪ್ರತಿಬಿಂಬಿಸುತಿತ್ತು.

ನಿಜ. ಸಿದ್ದೇಶ್ವರ ಶ್ರೀಗಳ ಪ್ರವಚನಗಳನ್ನು ಕೇಳಿದವರು ಅವರನ್ನು ಸಂತ ಎಂದು ಎದೆಯೊಳಗೆ ಭಕ್ತಿಯ ಅಪ್ಪುಗೆಯಲ್ಲಿ ಧ್ಯಾನಿಸಿದವರು ಕೋಟ್ಯಾನುಕೋಟಿ…

ಘಟನೆ ೧

ದಿನಾಂಕ:13.11.2022.
ವಿಜಯಪುರದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನದ ಸಿದ್ದತಾ ಸಭೆಗೆ ಹೋಗಿದ್ದೆ.

ಸಭೆಯಲ್ಲಿ ಸಮ್ಮೇಳನದ ಸಾನಿಧ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರದ್ದಾಗಬೇಕು ಎಂದು ಸರ್ವಸಮ್ಮತ ಅಭಿಪ್ರಾಯ ಮೂಡಿಬಂತು.
ಸಮ್ಮೇಳನಕ್ಕೆ ಸಾನಿಧ್ಯ ವಹಿಸುವ ಕೋರಿಕೆ ಸಲ್ಲಿಸಿ ಬರೋಣ ಎಂದು ವಿಜಯಪುರ ಜಿಲ್ಲಾ ಪತ್ರಕರ್ತರ ಜತೆಗೆ ಹೊರಟೆ.
ವಿಜಯಪುರದಿಂದ ಮುಕ್ಕಾಲು ಗಂಟೆ ಪಯಣ. ಕಾಖಂಡಕಿ ಗ್ರಾಮದ ಸಮೀಪ ಬೋರೆಯ ಮೇಲೆ ಪ್ರವಚನ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಅಕ್ಷರಶಃ ಒಬ್ಬ ಸಂತ ಹೇಗಿರಬೇಕು ಎನ್ನುವುದನ್ನು ಅಲ್ಲಿ ಸಿದ್ದೇಶ್ವರ ಶ್ರೀ ತೋರಿಸಿಕೊಟ್ಟಿದ್ದರು.

ಅಲ್ಲಿ ಯಾವುದೇ ಹೋಟೆಲ್ ವಗೈರೆ ಏನೂ ಇರಲಿಲ್ಲ. ದೊಡ್ಡ ಆಲದ ಮರದ ಬಳಿ ಚಿಕ್ಕದಾದ ಮನೆ. ಅಲ್ಲಿಯೇ ನೆಲ ಸಮತಟ್ಟು ಮಾಡಲಾಗಿತ್ತು. ಇನ್ನು ಉಳಿದವರಿಗೆ ಗುಡಿಸಲುಗಳನ್ನು ಹಾಕಿ ಅಲ್ಲಿ ನೆಲೆ ಕಲ್ಪಿಸಲಾಗಿತ್ತು. ಒಂದೆಡೆ ಭಜನೆ, ಮತ್ತೊಂದೆಡೆ ಉಪದೇಶ, ಮಾರ್ಗದರ್ಶನ ನಡೆದಿದ್ದವು. ಅಷ್ಟೇ ಅಲ್ಲ, ಬಂದವರಿಗೆ ಊಟೋಪಚಾರ ಎಲ್ಲವೂ ಅಲ್ಲಿತ್ತು.

ಸ್ವಾಮೀಜಿ ಹುಡುಕುತ್ತಾ ಕಾಖಂಡಕಿ ಗ್ರಾಮಕ್ಕೆ ಅಂದು ಹೋದಾಗ ಅಲ್ಲಿ ಆದ ಅನುಭವ ಮರೆಯಲಾಗದು.

ಎರಡು ಗಂಟೆಗಳ ಕಾಲ ಕಾಯ್ದಿದ್ದ ನಮಗೆ ಅಂತೂ ಅವರ ದರ್ಶನ ಭಾಗ್ಯ ಲಭ್ಯವಾಯಿತು. ಎಲ್ಲರೂ ನಮಸ್ಕರಿಸಿದ ಬಳಿಕ ರಾಜ್ಯ ಪತ್ರಕರ್ತರ ಸಮ್ಮೇಳನದ ಬಗ್ಗೆ ಅವರೊಂದಿಗೆ ಮಾತನಾಡಿ, ಸಾನಿಧ್ಯ ವಹಿಸಿಕೊಳ್ಳಲು ಅರಿಕೆ ಮಾಡಿಕೊಂಡವು. ಒಪ್ಪುತ್ತಾರೊ ಇಲ್ಲವೊ ಎನ್ನುವ ಆತಂಕವಿತ್ತು. ಆದರೆ, ಖುಷಿಯಿಂದ ಒಪ್ಪಿದರು.

ಸಮ್ಮೇಳನಕ್ಕೆ ನಿಮ್ಮ ಸಂದೇಶ ಬೇಕಿತ್ತು ಎಂದೆ. ಬರೆದುಕೊಡಿ ಎಂದರು. ನಾನು ಬರೆದ ಪ್ಯಾರದಲ್ಲಿ ಒಂದೆರಡು ಪದ ಬದಲಿಸಲು ಸೂಚಿಸಿದರು. ಬಳಿಕ ಅವರು ಹೇಳಿದ್ದನ್ನು ರೆಕಾರ್ಡ್ ಮಾಡಿದೆವು.

ರಾಜ್ಯ ಪತ್ರಕರ್ತರ ಸಮ್ಮೇಳನ ಬಿಜಾಪುರದಲ್ಲಿಯೇ ಮಾಡಿ. ಈ ಭಾಗದಲ್ಲಿ ನಮ್ಮ ಜನ‌ರು ಎಲ್ಲಾ ರೀತಿಯ ಸಹಕಾರ ಕೊಡ್ತಾರ, ಸಮ್ಮೇಳನ ಚೆಂದವಾಗಿ ನಡೆಯಲಿದೆ ಎಂದು ಹಾರೈಸಿದರು. ಅದ್ಯಾಕೊ ನಮ್ಮನ್ನು ನೋಡುತ್ತಲೇ ಇದ್ದರು. ಪತ್ರಕರ್ತರ ಜವಾಬ್ದಾರಿ ಬಹಳ ದೊಡ್ಡದು ಎಂದರು. ಆ ಮಾತು ಇನ್ನೂ ಎದೆಯಾಳಕ್ಕೆ ಇಳಿಯಿತು. ಒಂದಿಷ್ಟು ಹೊತ್ತು ಲೋಕಾಭಿರಾಮ ಮಾತು. ಪೋಟೋ ಸೆಷನ್ ನಡೆದವು.

ನಾವು ಹೊರಟು ನಿಂತಾಗ, ನಮಗೆಲ್ಲ ಊಟೋಪಚಾರ ಮಾಡಿಸುವ ಸೂಚನೆಯನ್ನು ಅವರ ಶಿಷ್ಯ ಬಳಗಕ್ಕೆ ನೀಡಿದರು.
ಸಿದ್ದೇಶ್ವರ ಸ್ವಾಮೀಜಿ ಆರ್ಶೀವಾದ ಪಡೆದು ಹೊರಟಿದ್ದೆ ಕೊನೆಯ ಭೇಟಿಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ!
ಬಹಳ ಹೊತ್ತು ಅಲ್ಲಿ ಅವರ ಒಡನಾಡುವ ಸಂದರ್ಭ ಅವಿಸ್ಮರಣೀಯ.

ಘಟನೆ ೨

2003 ರಲ್ಲಿ ದೆಹಲಿಯಲ್ಲಿ ಸುತ್ತೂರು ಮಠದ ಎಂಜಿನಿಯರಿಂಗ್ ಕಾಲೇಜು ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ರಾಷ್ಟಪತಿ ಅಬ್ದುಲ್ ಕಲಾಂ ಅವರ ಜೊತೆಗೆ ವೇದಿಕೆಯಲ್ಲಿ ಇದ್ದವರು ಸಿದ್ದೇಶ್ವರ ಸ್ವಾಮೀಜಿ. ಅವರ ಮಾತಿಗೆ, ವಿಚಾರ ಲಹರಿಗೆ ಅನಾಮತ್ತಾಗಿ ಮನಸೋತಿದ್ದೆ. ಅಲ್ಲಿಂದಲೇ ಅವರ ಸುತ್ತಲೂ ಮನಸ್ಸು ಗಿರಕಿ ಹೊಡೆಯುತ್ತಲಿತ್ತು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣ ಕಾದು ಓದುತ್ತಿದ್ದವರಲ್ಲಿ ನಾನು ಒಬ್ಬ.

ಈ ಎರಡೂ ಘಟನೆಗಳ ನಡುವೆ ಸುತ್ತೂರು ಮಠದ ಕಾರ್ಯಕ್ರಮ ಸೇರಿದಂತೆ ಹಲವಾರು ಬಾರಿ ಅವರ ಮಾತಿಗೆ ಕಿವಿಯಾಗಿದ್ದೇನೆ. ಪ್ರವಚನ ಆಲಿಸಿದ್ದೇನೆ. ಒಂದು ಕ್ಷಣವೂ ಕೂಡ ಅವರ ಬಗ್ಗೆ ನನಗಿದ್ದ ಅಖಂಡ ಧನ್ಯತಾ ಭಾವ ಕಡಿಮೆ ಆಗಲೇ ಇಲ್ಲ, ಬದಲಿಗೆ ಹೆಚ್ಚಾಗುತ್ತಲೇ ಹೋಯಿತು.

ಎಲ್ಲವೂ ಬೇಕು ಎನ್ನುವ ಮನಸ್ಸುಗಳ ನಡುವೆ ಪದವಿ ಪುರಸ್ಕಾರ, ಪ್ರಶಸ್ತಿಗಳು ಬೇಡ ಎಂದು ನಿರ್ಲಿಪ್ತವಾಗಿ ಬಯಲ ಆಲಯದ ಕಡೆಗೆ ಮುಖ ಮಾಡಿ, ತನ್ನ ಬದುಕನ್ನು ಆದರ್ಶವಾಗಿಸಿಕೊಂಡ ಇಂತಹ ಸಂತ‌ರು ಅಪರೂಪದಲ್ಲಿ ಅಪರೂಪ. ಅವರೊಂದು ವಿಶ್ವವಿದ್ಯಾಲಯ ಸ್ವರೂಪವೇ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಜ್ಞಾನದ ಒಂದೊಂದೆ ಮೆಟ್ಟಿಲುಗಳನ್ನು ಹತ್ತಿ ಜಗಕೆ ಮೇರು ಪರ್ವತವಾಗಿ ಮೈದಳೆದ ಸರಳ ಸಜ್ಜನಿಕೆಯ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮತ್ತೊಮ್ಮೆ ಹುಟ್ಟಿ ಬರಲಿ.

‍ಲೇಖಕರು Admin

3 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading