ಸಿಜಿಕೆ ಎಂಬ ಮಹಾಚೈತ್ರ

ಸಿಜಿಕೆ ನೆನಪಿನ ರಾಷ್ಟ್ರೀಯ ರಂಗೋತ್ಸವ ನಡೆಯುತ್ತಿದೆ. ಸಿಜಿಕೆ ನೆನಪನ್ನು, ಆತ ನಂಬಿದ ಆಲೋಚನೆಗಳನ್ನು ಜೀವಂತವಾಗಿಡಲು ದೊಡ್ಡ ದಂಡು ಶ್ರಮಿಸುತ್ತಿದೆ. ಈ ಸಂದರ್ಭದಲ್ಲಿ ನಾನು ಈ ಹಿಂದೆ, ಇದೇ ಉತ್ಸವದ ವೇಳೆ ಸಿಜಿಕೆಯನ್ನು ನೆನಸಿಕೊಂಡಿದ್ದು ಇಲ್ಲಿದೆ

 

ಜಿ ಎನ್ ಮೋಹನ್     

ಆ ಇಬ್ಬರೂ ಉದ್ಘಾಟನೆಗಾಗಿಯೇ ಸಜ್ಜಾಗಿದ್ದ ಪರದೆಯನ್ನು ಎಳೆದರು. ಬಹುಷಃ ಒಂದು ವಿಗ್ರಹವನ್ನೋ ಅಥವಾ ಶಿಲಾ ಪಲಕವನ್ನೋ ಅವರು ನಿರೀಕ್ಷಿಸಿರಬೇಕು. ಆದರೆ ಆ ಪರದೆಯಿಂದ ದಿಢೀರನೆ ಎರಡು ಆಕೃತಿಗಳು ಹೊರನೆಗೆದವು. ಕಪ್ಪು ಬಟ್ಟೆ, ಕಪ್ಪು ಮುಖವಾಡ ಹೊತ್ತ ಆ ಎರಡು ಆಕೃತಿಗಳು ಉದ್ಘಾಟಿಸಲು ಬಂದವರ ಮೇಲೆಯೇ ಮುಗಿಬಿದ್ದವು. ಮುಲಾಜೇ ನೋಡದೆ ಅವರ ಜೊತೆ ಕೈ ಮಿಲಾಯಿಸಿದವು. ಕೊರಳ ಪಟ್ಟಿ ಹಿಡಿದವು.

ಉದ್ಘಾಟಿಸಿದವರಿಗೆ ಈಗ ಬೇರೆ ಮಾರ್ಗವೇ ಇರಲಿಲ್ಲ. ತಮ್ಮನ್ನು ತಾವು ಬಚಾವು ಮಾಡಿಕೊಳ್ಳಬೇಕಿತ್ತು. ಹಾಗಾಗಿ ಅದುವರೆಗೂ ಸಂಕೋಚ ಪಟ್ಟು ಹಿಂದೆ ಸರಿಯುತ್ತಿದ್ದವರು ಆ ಎರಡು ಕರಾಳ ಆಕೃತಿಗಳ ಮೇಲೆ ಧಾಳಿ ನಡಿಸಿಯೇ ಬಿಟ್ಟರು. ಗುದ್ದು ನೀಡಿದರು, ಕಪಾಳಕ್ಕೆ ಬಿಗಿದರು. ಸತ್ತೆವೋ, ಕೆಟ್ಟೆವೋ ಎಂದು ಆ ಎರಡು ಆಕೃತಿಗಳು ಅಲ್ಲಿಂದ ಎದ್ದು ಬಿದ್ದು ಪರಾರಿಯಾದವು.

CGK-ranga-Utsava51ಹಾಗೆ ಆ ಅಕೃತಿಗಳ ಜೊತೆ ಗುದ್ದಾಡಿದ್ದು ಇನ್ನಾರೂ ಅಲ್ಲ, ಆಗ ಸಂಸ್ಕೃತಿ ಸಚಿವರಾಗಿದ್ದ ಜೀವರಾಜ ಆಳ್ವ ಹಾಗು ಶಾಸಕ ಉಮರಬ್ಬ. ಇವರ ಗುದ್ದಾಟ, ಹೊಡೆದಾಟವನ್ನು ನೋಡುತ್ತಾ ನಗುತ್ತಾ ನಿಂತಿದ್ದು ಮಾತ್ರ ಸಿಜಿಕೆ.

ಅದು ಸಿಜಿಕೆಯ ಮಹಾನ್ ಕನಸಿನ ಉದ್ಘಾಟನೆ. ಆ ವೇಳೆಗಾಗಲೇ ರಂಗಜಗತ್ತನ್ನು ಒಂದೂವರೆ ಸುತ್ತಾದರೂ ಪೂರೈಸಿದ್ದ ಸಿಜಿಕೆ ಎಂಬ ಭೂಮಂಡಲಕ್ಕೆ ಇನ್ನು ನಾನೊಬ್ಬನೇ ಅಲ್ಲ, ನೂರಾರು ಜನ ಸತತವಾಗಿ ರಂಗಭೂಮಿಯಲ್ಲಿ ಸುತ್ತುತ್ತಲೇ ಇರಬೇಕು ಎನಿಸಿತ್ತೆನೋ, ಒಂದು ರಂಗ ರೆಪರ್ಟರಿ ಕಟ್ಟುವ ಕನಸು ಕಂಡುಬಿಟ್ಟಿದ್ದ. ಹಾಗೆ ಕಂಡ ಮನಸು ಮನಸ್ಸಿನೊಳಗೆ ಮೊಟ್ಟೆ ಇಟ್ಟು, ಕಾವು ಪಡೆದು, ಮರಿಯಾಗಿ ಹೊರಬಂದಿತ್ತು. ಆ ರೆಪರ್ಟರಿಗಾಗಿ ಒಂದು ರಿಹರ್ಸಲ್ ಎನ್ನುವಂತೆ ಸಿಜಿಕೆ ೧೫೦ ದಿನಗಳ ಸತತ ನಾಟಕ ಪ್ರಯೋಗದ ಹುಚ್ಚು ಸಾಹಸಕ್ಕೆ ಕೈ ಹಾಕಿಯೇ ಬಿಟ್ಟಿದ್ದ.

’ಹೋದರೆ ಏನಾದರೂ ಹೋಗಲಿ, ಬಂದರೆ ಬೆಟ್ಟವೇ ಬರಲಿ’ ಎನ್ನುವ ಜಾಯಮಾನ ಸಿಜಿಕೆಯದು. ಹಾಗಾಗಿ ಕಲಾಕ್ಷೇತ್ರದ ಉದ್ಯಾನದ ಬದಿಯಲ್ಲೇ ಇದ್ದ ಖಾಲಿ ಜಾಗವನ್ನೇ ನೂರಿನ್ನೂರು ಜನ ಕುಳಿತುಕೊಳ್ಳುವ ಥಿಯೇಟರ್ ಆಗಿ ರೂಪಿಸಿಬಿಟ್ಟಿದ್ದ. ಆ ಪ್ರಯೋಗದ ಉದ್ಘಾಟನೆಯನ್ನೇ ಜೀವರಾಜ್ ಆಳ್ವ ಮತ್ತು ಉಮರಬ್ಬ ನಡೆಸಿದ್ದು. ತಮ್ಮ ಮೈಮೇಲೆ ಬಿದ್ದವರ ಜೊತೆ ಬಡಿದಾಡಿ ಉದ್ಘಾಟನೆ ಮಾಡಬೇಕಾದ ಭಾಗ್ಯ ಬಹುಷಃ ಯಾವ ರಾಜಕಾರಣಿಗೂ ಸಿಕ್ಕಿರಲಿಕ್ಕಿಲ್ಲ. ಈ ಅನಿರೀಕ್ಷಿತದಿಂದ ಇನ್ನೂ ಸುಧಾರಿಸಿಕೊಳ್ಳುತ್ತಿದ್ದವರನ್ನು ಕಂಡ ಸಿಜಿಕೆ ಮೈಕ್ ಹಿಡಿದು, ’ಇದು ರಂಗಸಂಸ್ಕೃತಿಯನ್ನು ಹೊಸಕಿ ಹಾಕುತ್ತಿರುವ ಕಾಲ. ರಂಗಸಂಸ್ಕೃತಿಯನ್ನು ಹೊಸಕಿ ಹಾಕುವವರ ವಿರುದ್ಧ ಹೀಗೆಯೇ ಹೋರಾಡಿ ಗೆಲ್ಲಬೇಕಾಗಿದೆ’ ಎಂದ.

ಯಾಕೋ ಅಂದು ಆ ರೂಪಕದಲ್ಲಿ ನನಗೆ ಕಂಡದ್ದು ಸಿಜಿಕೆಯೇ. ಯಾವಾಗ ರಂಗಸಂಸ್ಕೃತಿ ನಿಂತ ನೀರಾಗುತ್ತಿತ್ತೋ, ಯಾವ ರಂಗಸಂಸ್ಕೃತಿ ವಿದೇಶಿ ಹಣಕ್ಕೆ ಕೈ ಚಾಚುತ್ತಾ ನಿಂತಿತ್ತೋ, ಯಾವ ರಂಗಸಂಸ್ಕೃತಿ ಶ್ರೇಷ್ಠತೆಯ ವ್ಯಸನದಲ್ಲಿ ಬಿದ್ದಿತ್ತೋ ಅದನ್ನು ಸಿಜಿಕೆ ಥೇಟ್ ಹೀಗೆಯೇ ಹೊಡೆದಾಡಿ ಜಯಿಸಿಕೊಳ್ಳಲು ನಿಂತುಬಿಟ್ಟಿದ್ದರು.

ನನಗೆ ಚೆನ್ನಾಗಿ ನೆನಪಿದೆ. ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್, ’ಫೋರ್ಡ್ V/s ಅಫೋರ್ಡ್’ ಎನ್ನುವ ಲೇಖನ ಬರೆದಿದ್ದರು. ಕನ್ನಡ ಸಾಂಸ್ಕೃತಿಕ ಲೋಕವನ್ನು ಒಂದು ರೀತಿಯಲ್ಲಿ ಬೆಚ್ಚಿ ಬೀಳಿಸಿದ ಲೇಖನ ಅದು. ಹಲವು ರಂಗತಂಡಗಳು, ಸಂಸ್ಥೆಗಳು ಹೇಗೆ ವಿದೇಶಿ ಹಣ ಪಡೆದು ಕಾರ್ಯಾಚರಿಸುತ್ತದೆ ಎನ್ನುವ ಹೂರಣ ಹೊಂದಿತ್ತು. ಆ ವೇಳೆಗೆ ಇಡೀ ದೇಶವನ್ನು ಫಾರಿನ್ ಫಂಡ್ ತ್ರಿವಿಕ್ರಮನಂತೆ ಆವರಿಸಿಕೊಳ್ಳುತಿತ್ತು. ಅದರ ಮುಖ್ಯ ಭಾಗ ಹರಿದುಬರುತ್ತಿದ್ದುದು ಬೆಂಗಳೂರಿನ ಸಂಘಟನೆಗಳಿಗೆ. ಈ ಲೇಖನದ ಕಾರಣಕ್ಕಾಗಿ ಹಾಗು ’ಸಮುದಾಯ’ದ ಜೊತೆಗಿದ್ದ ಒಡನಾಟದ ಕಾರಣದಿಂದಾಗಿ ನಾನು ಸದಾ ಈ ವಿದೇಶಿ ಹಣದ ಒಳಹರಿವಿನ ಬಗ್ಗೆ ಒಂದು ಗಮನವಿಟ್ಟಿದ್ದೆ. ನಾನು ಫೋರ್ಡ್ ಫೌಂಡೇಶನ್ ಮೂಲ ಹುಡುಕಲು ಆರಂಭಿಸಿದೆ. ಆಗ ಕರೆ ಬಂದದ್ದು ಸಿಜಿಕೆಯಿಂದ.

ಕಲಾಕ್ಷೇತ್ರದ ಕ್ಯಾಂಟೀನಿನ ಮೆಟ್ಟಿಲ ಮೇಲೆ ಕುಳಿತಿದ್ದ ಸಿಜಿಕೆ ಅಭಿಮಾನದಿಂದ ಕೈ ಒತ್ತಿದ್ದ. ವಿದೇಶಿ ಹಣ ರಂಗದ ಉಸಿರಾಟಕ್ಕೆ ಹೇಗೆ ಗುದ್ದು ನೀಡಬಹುದು ಎಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ಆತ ಎದ್ದುಬಂದಿದ್ದು ಕಲಾಕ್ಷೇತ್ರದ ನಾಲ್ಕು ಗೋಡೆಗಳ ಒಳಗಿನಿಂದಲ್ಲ. ಬೀದಿ ಬೀದಿಗಳಲ್ಲಿ ತಿಂಗಳುಗಟ್ಟಲೆ ಅಲೆದು, ನೊಂದ ನಿಟ್ಟುಸಿರುಗಳಿಗೆ ಎದುರಾಗಿ, ಇಲ್ಲದವರ ಖಾಲಿ ಹೊಟ್ಟೆಗಳ ಮುಂದೆ, ಬಾಡಿದ ಕಣ್ಣುಗಳಿಗೆ ನಾಟಕ ಪ್ರದರ್ಶಿಸಿದವನು ಈತ. ನಾಟಕ ಎನ್ನುವುದು ಆತನಿಗೆ ಬೆಳಕಿನ ಚಿತ್ತಾರ. ಅದು ಅವನಿಗೆ ಶಬ್ಧ ಹಾಗು ಮೌನದ ನಡುವಿನ ಗಮ್ಮತ್ತಿನ ಆಟವಾಗಿರಲಿಲ್ಲ.

’ಎಲ್ಲಿಂದ ಬಂದಿರೆಂದು ಕೇಳಬಹುದು ನೀವು / ಜನರ ನಡುವಿನಿಂದ ಎಂದು ಹೇಳುತೀವಿ ನಾವು /ಈಗ ಪಯಣ ಎಲ್ಲಿಗೆಂದು ಕೇಳಬಹುದು ನೀವು / ತಿರುಗಿ ಮತ್ತೆ ಜನರ ನಡುವೆ ಹೋಗುತೇವೆ ನಾವು’ ಎನ್ನುವುದು ಯಾವುದೇ ಬೀದಿನಾಟಕಕ್ಕೆ ಮುನ್ನುಡಿ ಬರೆಯುತ್ತಿದ್ದ ಹಾಡು. ಸಿಜಿಕೆ ಥೇಟ್ ಆ ಹಾಡಿನಂತೆಯೇ ಜನರ ನಡುವಿನಿಂದ ಬಂದು, ಜನರ ಒಳಗೇ ನಡೆದು ಹೋಗುತ್ತಿದ್ದಾತ.

CGK ranga Utsava12’ಬೆಲ್ಚಿ’ ಎನ್ನುವ ಒಂದು ಒಡಲ ಸಂಕಟವನ್ನು ಉಣಬಡಿಸಿದ್ದು ಆತನೇ. ಈ ನಾಡ ಮಣ್ಣಿನಲ್ಲಿ ಮಣ್ಣಾಗಿ ಹೋದವರ ಬಗ್ಗೆ ಅದು ಎಲ್ಲೆಲ್ಲಿಂದ ಕಥೆಗಳನ್ನು ಹೆಕ್ಕಿ ತರುತ್ತಿದ್ದನೋ ಗೊತ್ತಿಲ್ಲ. ಅದರೆ ಬೆಲ್ಚಿ, ಒಡಲಾಳ, ಮಹಾಚೈತ್ರ, ನೀಗಿಕೊಂಡ ಸಂಸ, ಅಲ್ಲೇ ಇದ್ದೋರು, ಷೇಕ್ಸ್ ಪಿಯರ್ ನ ಸ್ವಪ್ನ ನೌಕೆ ಎಲ್ಲವೂ ಅದದರದ್ದೇ ಆದ ರೀತಿಯಲ್ಲಿ ಒಡಲ ಸಂಕಟ, ತಳಮಳಗಳಿಗೆ ಮಾತುಕೊಟ್ಟಿತ್ತು. ಈ ನಾಡ ಮಣ್ಣಿನಲ್ಲಿ / ಮಣ್ಣಾದ ಜನಗಳ ಕಥೆಯ / ಕಥೆಯೊಂದ ಹೇಳತೀವಿ / ಸಾರಿ ಸಾರಿ ಹೇಳತೀವಿ / ಕಿವಿಗೊಟ್ಟು ಕೇಳಿರಣ್ಣ / ನೋವಿನ ರಾಗವನ್ನು / ಭಾರತ ದೇಶದ / ಬಿಹಾರ ರಾಜ್ಯದ / ಬೆಲ್ಚಿಯ ಗ್ರಾಮದಲ್ಲಿ / ಹನ್ನೊಂದು ಜನ ದಲಿತರನ್ನು / ನಮ್ಮಣ್ಣ ತಮ್ಮಂದಿರನ್ನು / ಹಾಡ ಹಗಲಿನಲ್ಲೇ / ಸುಟ್ಟು ಬೂದಿ ಮಾಡಿದರಲ್ಲೋ…. ಎನ್ನುವ ರಾಗ ಇನ್ನೂ ಕಿವಿಯಿಂದ ಎದ್ದು ಹೋಗಿಲ್ಲ.

ಕೇವಲ ಹಿಡಿ ಕಾಳು ಕೂಲಿಯನ್ನು ಹೆಚ್ಚು ಕೇಳಿದ್ದಕ್ಕಾಗಿ ೧೧ ಜನ ದಲಿತರನ್ನು ಸಾಧ್ಯವಿತ್ತೇನೋ…? ಅಲ್ಲಿ ರೋಷ ಇತ್ತು, ಸಂಕಟವಿತ್ತು, ಕಣ್ಣೀರಿತ್ತು. ನಾಟಕದೊಳಗೆ ಮಾತ್ರವಲ್ಲ ನಾಟಕ ನೋಡುತ್ತಿದ್ದವರ ಕಣ್ಣಲ್ಲೂ ನೀರಾಡುತ್ತಿತ್ತು. ಕಥೆ ಬಿಹಾರ ರಾಜ್ಯದ್ದು ಎಂದು ಯಾರೂ ಅಂದುಕೊಳ್ಳುತ್ತಿರಲಿಲ್ಲ. ಅದು ನಮ್ಮ ನಿಮ್ಮ ಊರಿನ ಕಥೆಯಾಗಿ ಒಡಲ ಸಂಕಟಕ್ಕೆ ಕಾವು ನೀಡಿಬಿಡುತ್ತಿತ್ತು.

’ಸತ್ತವರ ನೆರಳು’ ನಾಟಕ ನಡೆಯುತ್ತಿದ್ದಾಗ ಕುಂಟುತ್ತಾ ತಂಡದ ಬಳಿಗೆ ಹೋದ ಸಿಜಿಕೆ ’ನನ್ನನ್ನೂ ನಾಟಕಕ್ಕೆ ಸೇರಿಸಿಕೊಳ್ಳಿ’ ಎಂದಿದ್ದ. ’ಅವನು ನನ್ನನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದ. ನನ್ನ ಕಾಲನ್ನು ವಿಶೇಷವಾಗಿ ಗಮನಿಸಿ ’ರಂಗಭೂಮಿಗೆ ನಿನ್ನಂಥವನ ಸೇರ್ಪಡೆ ಸಾಧ್ಯವೇ ಇಲ್ಲ’ ಅಂದುಬಿಟ್ಟ. ಈಗ ನಾನು ಏನು ಹೇಳಬಹುದು’ ಎಂದು ಸಿಜಿಕೆ ಆತ್ಮಕಥನ ಬರೆಯುವಾಗ ಹೇಳಿಕೊಳ್ಳುತ್ತಾರೆ.

ಮೈಸೂರಿನ ಮಿಷನ್ ಆಸ್ಪತ್ರೆಯ ಹೋಪ್ ವಾರ್ಡಿನಲ್ಲಿ ಎರಡು ಊನವಾದ ಕಾಲುಗಳನ್ನು ಒಡ್ಡಿಕೊಂಡು ಡಾ ಟೋವಿಯೆದಿರು ಮಲಗಿದ್ದ ಮಗು ನಿಜಕ್ಕೂ ಬಹುದೂರ ನಡೆದುಕೊಂಡು ಬಂದುಬಿಟ್ಟಿತ್ತು. ಕೇವಲ ಆ ಮಗು ಮಾತ್ರ ನಡೆದು ಬರಲಿಲ್ಲ, ತನ್ನ ಜೊತೆ ನೂರಾರು ಜನರನ್ನು ಕಿಂದರಿ ಜೋಗಿಯ ಹಾಗೆ ನಡೆಸಿಕೊಂಡು ಬಂದುಬಿಟ್ಟಿತು. ಆ ’ಹೋಪ್’ ವಾರ್ಡ್ ನ ಪರಿಣಾಮವೆ ಇರಬೇಕೇನೋ, ಹಳ್ಳಿಖೇಡಾ, ಗಾಣಗೇರಾ, ಕೋಲಾರ, ರಾಯಚೂರು… ಹೀಗೆ ಎಲ್ಲೆಲ್ಲಿ ಒಂದು ಆತ್ಮವಿಶ್ವಾಸದ ಬೆಳಕು ಕಾಣದವರ ಒಳಗೆ ಭರವಸೆಯನ್ನು ಬಿತ್ತುತ್ತಾ ಹೋದರು. ರಂಗಭೂಮಿಯನ್ನು ಜನರ ಬಳಿಗೆ ನಡೆಸಿಕೊಂಡೇ ಹೋಗಿಬಿಟ್ಟರು.

೪೬, ಅಂಗಡಿ ಬೀದಿ, ಬಸವನಗುಡಿಯಲ್ಲಿ ೧೯೮೦ರಲ್ಲಿ ಮೊತ್ತಮೊದಲ ಬಾರಿಗೆ ಉರಿ ಉರಿವ ಮುಖ ಹೊತ್ತ ಸಿಜಿಕೆಯನ್ನು ಕಂಡ ದಿನದಿಂದ ಆತನ ವಿದಾಯದವರೆಗೆ ನನ್ನೊಳಗೆ ಹಚ್ಚಹಸಿರು ನೆನಪುಗಳು ಹರಡಿಕೊಂಡಿವೆ. ದ್ಯಾವನೂರರ ’ಒಡಲಾಳ’ ನಾಟಕ ನೋಡಿ ನಾನು ಬೆಚ್ಚಿ ಬಿದ್ದಿದ್ದೇನೆ. ಆ ನಾಟಕ cgk by sudesh mahanನನ್ನನ್ನು ಕಾಡಿದ ಪರಿಗೆ, ಕನ್ನಡ ಲೋಕವನ್ನು ಕಾಡಿದ ಪರಿಗೆ ಮಾತುಗಳಿಲ್ಲ. ಸಿಜಿಕೆ ಮಹಾಚೈತ್ರವನ್ನು ಕೈಗೆತ್ತಿಕೊಂಡಾಗ ಅದರ ಮೊದಲ ದಿನದಿಂದ ಆತನ ಬೇಗುದಿಯನ್ನು ಹತ್ತಿರದಿಂದ ಕಂಡವನು ನಾನು. ಎಚ್ ಎಸ್ ಶಿವಪ್ರಕಾಶರ ಒಳಗೆ ಕದಲುತ್ತಿದ್ದ ’ಮಹಾಚೈತ್ರ’ಕ್ಕೆ ಇದ್ದ ಮೊದಲ ಕಿವಿಗಳಲ್ಲಿ ನನ್ನವೂ ಎರಡು ಕಿವಿಗಳು. ಆ ನಂತರ ಸಿಜಿಕೆ ಮಹಾಚೈತ್ರವನ್ನು ಕೈಗೆತ್ತಿಕೊಂಡಾಗ ಇದು ಆತನಿಗೂ ಮಹಾಚೈತ್ರವಾಗಿ ಹೋಗುತ್ತದೆ ಎನ್ನುವುದು ನನಗೆ ಗೊತ್ತಾಗಿ ಹೋಗಿತ್ತು. ಆತ ನಿಜಕ್ಕೂ ಮಹಾಚೈತ್ರದ ಒಳಗೆ ಮುಳುಗಿ ಹೋಗಿದ್ದ. ಹಸಿರು ಪಕಳೆಗಳಂತೆ ನನಗೆ ಕಂಡಿದ್ದ.

ಯಾಕೋ ಪ್ರಸನ್ನರನ್ನು ನೆನಸಿಕೊಳ್ಳದೆ, ಆ ಕಾಲಕ್ಕೆ ಇಡೀ ರಾಜ್ಯದಲ್ಲಿ ಹೊರಳುತ್ತಿದ್ದ ಆವೇಶವನ್ನು ನೆನಪಿಸಿಕೊಳ್ಳದೆ ಸಿಜಿಕೆಯನ್ನು ಕಣ್ಣ ಮುಂದೆ ನಿಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ಸಿಜಿಕೆ ಎಂಬ ಮಹಾಸಂಘಟಕ ರೂಪುಗೊಳ್ಳಲು ಪ್ರಸನ್ನ ಒಂದು ಕಣ್ಣೋಟ ಒದಗಿಸಿದ್ದರು.

ಸಿಜಿಕೆ ತನ್ನ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಬರೆದಾಗ ನನಗೆ ಫೋನಾಯಿಸಿದ್ದ. ನಾನು ಏನಂತೀನೋ ಎನ್ನುವ ಒಂದು ಕುತೂಹಲ ಅವನಲ್ಲಿತ್ತು. ಆಗ ನಾನು ಮಂಗಳೂರಿನಲ್ಲಿದ್ದೆ. ಇಲ್ಲೆ ಬಾ. ನನ್ನ ಅಭಿಪ್ರಾಯ ಹೇಳ್ತೀನಿ ಅಂದೆ. ಒಂದು ಮತ್ತೊಂದಾಯ್ತು. ಸಿಜಿಕೆಯ ಆ ಆತ್ಮಕಥನದ ಬಗ್ಗೆ ನಾವು ಗೆಳೆಯರೆಲ್ಲರೂ ಸೇರಿ ಇಡೀ ಒಂದು ದಿನದ ಸಂಕಿರಣವನ್ನೇ ನಡೆಸಿಬಿಟ್ಟೆವು. ಸಿಜಿಕೆ ಅಲ್ಲಿಂದ ಹೊರಡುವ ಮುನ್ನ ನನ್ನ ಕೈ ಹಿಡಿದು, ’ನನ್ನ ಶತ್ರು ಬಂದಿದ್ದರೂ ಈ ಸಂಕಿರಣದಲ್ಲಿ ಕುಳಿತಿದ್ದರೆ ನನ್ನ ಮಿತ್ರನಾಗಿ ಹೋಗುತ್ತಿದ್ದ, ಹಾಗೆ ಮಾಡಿಬಿಟ್ಟೆ’ ಎಂದ. ಆತನ ದನಿ ತೇವಗೊಂಡಿತ್ತು. ಹಾಗೆ ಅಂದದ್ದು ನಿಜವೂ ಆಯಿತು. ಆತ ಶತ್ರುವನ್ನು ಗೆಲ್ಲುತ್ತಾಹೋದ. ಸಿಜಿಕೆಯ ಮೂಸೆಯಲ್ಲಿ ಅರಳಿದ ಹುಡುಗ ಕೃಷ್ಣ ರಾಯಚೂರು ತಮ್ಮ ಕವಿತೆಯಲ್ಲಿ ’ಹುಚ್ಚುಹೊಳೆಯಲ್ಲಿ ನಿಂತ ಸಂತ / ಹರಿವ ಸೆಳೆವು ಕೂಡಾ ಇವನಿದ್ದೆಡೆಗೆ’ ಎನ್ನುತ್ತಾರೆ.

ಹೌದಲ್ಲ, ಇವನಿದ್ದೆಡೆಗೆ ಅಷ್ಟೊಂದು ಜನರು ಹರಿದು ಬಂದಿದ್ದೇಕೆ ಎಂದು ಯೋಚಿಸುತ್ತಾ ಕುಳಿತಿದ್ದೆ. ನನಗೆ ನೆನಪಾಗಿದ್ದು ಸು ರಂ ಎಕ್ಕುಂಡಿಯವರ ’ಬಂಡೆ, ಹುಡುಗ ಮತ್ತು ಬೆಸ್ತ’ ಕವಿತೆ. ಒಬ್ಬ ಹುಡುಗ ಎಷ್ಟು ಹೊತ್ತಾದರೂ ಮನೆಗೆ ಹೋಗಿಲ್ಲ. ತಾಯಿ ಆತಂಕದಿಂದ ಹುಡುಕಿಕೊಂಡು ಓದಿಬಂದಿದ್ದಾಳೆ. ಅಲ್ಲಿದ್ದ ಬೆಸ್ತನ ಬಳಿ ಕೇಳಿದಾಗ, ’ದೂರದ ಬೆಟ್ಟದಲ್ಲಿ ಪ್ರತಿ ಬಂಡೆಗೂ ಆತ ಕಿವಿ ಇಟ್ಟು ಓಡಾಡುತ್ತಿದ್ದಾನೆ… ಬೆಟ್ಟ ಬಂಡೆಗಳು ಎಂದಾದರೂ ಮಾತನಾಡಬಹುದೆ?/ ಕಲ್ಲಿಗೂ ಕೊರಳುಂಟೆ, ಬಂಡೆಗೂ ಬಾಯುಂಟೆ? / ಕಾಡು ಎಲ್ಲಿಯಾದರೂ ಹಾಡಬಹುದೇ’ ಎಂದು ಕೇಳಿದರೆ ’ಆಲಿಸುವ ಕಿವಿಗೆಲ್ಲಿಯೂ / ಹಾದಿಹವು, ಹುಲ್ಲಿನಲಿ, ಹೊಳೆಗಳಲಿ, ಬೆಟ್ಟಗಳ ಮುಂಜಾವಿನಲಿ, ಹನಿ ಮಂಜಿನಲಿ / ಹಾಲುತೆನೆ ತುಂಬಿರುವ ಬೆಳೆಗಳಲಿ’ ಎನ್ನುತ್ತಿದ್ದಾನೆ ಎನ್ನುತ್ತಾನೆ. ಆ ಹುಡುಗನೇ ಜಕಣಾಚಾರಿ.

ಹಾಗೆ ಥೇಟ್ ಹಾಗೆಯೇ ಬೆಟ್ಟ, ಬಂಡೆ, ಕಲ್ಲಿನಲ್ಲೂ ಕೊರಳಿದೆ, ಬಾಯಿದೆ ಎಂದು ಗುರುತಿಸಿದವರು ಸಿಜಿಕೆ. ಮೊನ್ನೆ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ಉತ್ಸವ ಜರುಗಿದಾಗ ನೋದಿದೆ, ಎಷ್ಟೊಂದು ಬಂಡೆಗಳು ಹಾಡುಗಳಾಗಿ ಚಿಮ್ಮಿದ್ದವು.

‍ಲೇಖಕರು admin

April 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vihi wadawadagi

    CGK emba maha vyakti mattu vyaktitva tereditta bage tumba aaptavagide CGK nijavagiyu mahaa chaitrave

    ಪ್ರತಿಕ್ರಿಯೆ
  2. Nasrin

    CGK ರವರಿಗೆ CGK ನೇ ಸಾಟಿ…ತುಂಬಾ ಇಷ್ಟ ಆಯ್ತು ಸರ್ ಲೇಖನ..

    ಪ್ರತಿಕ್ರಿಯೆ
  3. ರೇಣುಕಾ ರಮಾನಂದ

    ಬಹಳ ಇಷ್ಟವಾಯ್ತು ಲೇಖನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: