ಸಿಕ್ಕಿಸಲೆಂದೇ ಕಿರ್ ಎಂದ ಅಲಾರಂ ಪೀಸ್..

manjunath netkalಮಂಜುನಾಥ್ ಸಿ ನೆಟ್ಕಲ್

ನಾನು ಚಿಕ್ಕವನಾಗಿದ್ದಾಗಿಂದಲೂ ಮನೆಯಲ್ಲಿ ಏನಾದರೂ ವಸ್ತುಗಳನ್ನು ಹಾಳು ಮಾಡುವುದರಲ್ಲಿ ಒಂದು ಕೈ ಮುಂದೆ.

ನನಗೆ ಗೊತ್ತಿಲ್ಲದಂತೆ ಅವು ಹಾಳಾಗಿಬಿಡುತ್ತಿದ್ದವು. ಮಲಗಿದ್ದಾಗ ಕಾಲು ಜೋರಾಗಿ ಚಾಚಿದಾಗ ಬೀರು ಕೆಳಗೆ ಇಟ್ಟಿದ್ದ ಒಂದು‌ ಲೀಟರ್ ಕಡಲೆಯಾಯಿ ಎಣ್ಣೆ ಬಾಟಲು ಪುಟ್ ಬಾಲ್ ತರಹ ಒದೆಸಿಕೊಂಡು ಅದರ ಹೊಟ್ಟೆ ಸಿಡಿದು ಎಣ್ಣೆಯೆಲ್ಲಾ
ನೆಲದ ಪಾಲಾಯಿತು. ಅದಕ್ಕೆ ತಕ್ಕ ಹಾಗೆ, ಮಹಾಮಂಗಳಾರತಿಯೂ ಆಯಿತು‌.

clockಮನೆ ಬೀಗದ ಕೈಗಳು ಎಂದಿಗೂ ನನ್ನ ಕೈನಲ್ಲಿ ಜೋಪಾನವಾಗಿ ಇರುತ್ತಿರಲಿಲ್ಲ. ಆಟದ ಭರದಲ್ಲಿ ಎಲ್ಲೋ ಮಾಯವಾಗಿಬಿಡುತ್ತಿದ್ದವು. ನನ್ನಿಂದಾ ಗಿ ಐದಾರು ಬೀಗಗಳು ಸುತ್ತಿಗೆ ಏಟು ತಿಂದಿವೆ. ಪಾಪ.  ನನ್ನ ಈ ಎಲ್ಲ ಎಡವಟ್ಟುಗಳಿಗೆ ಬೈಗುಳಗಳು ಅವತ್ತಿಗೆ ಮಾತ್ರ ನಿಲ್ಲುವುದಿಲ್ಲ. ಪ್ರತಿ ಬಾರಿ ನಾನು ಹೊಸದಾಗಿ ಏನನ್ನಾದರೂ ಹಾಳು ಮಾಡಿದ ಕೂಡಲೆ ಎಲ್ಲವೂ ಮತ್ತೆ ಪುನರಾವರ್ತನೆ ಆಗುತ್ತವೆ.

ಭೀಮ ದುರ್ಯೋಧನ ನನ್ನು ಗದೆಯಿಂದ ಥಳಿಸುವಾಗ ಹೇಳುವ

“ಲಾಕ್ಷಾಗೇಹದಾಹಕ್ಕಿದು
ವಿಷಮ ವಿಷಾನ್ನಕ್ಕಿದು
ನಾಡ ಜೂದಿಂಗಿದು”…

ಎನ್ನುತ್ತಾ ಒಂದೊಂದು ಹೊಡತ ಕೊಡುವ ಹಾಗೆ ನನಗೆ ಒದೆಗಳು ಬೀಳುತ್ತಿದ್ದವು. ಆ ಒದೆ ಮರೆಯುವುದರೊಳಗೆ ಇನ್ನೊಂದು ಎಡವಟ್ಟಾಗುತ್ತಿತ್ತು ಇನ್ನೊಮ್ಮೆ ಸರಿಯಾಗಿ ಒದೆಸಿಕೊಂಡ ಪ್ರಸಂಗ ಇದು.

ನಮ್ಮ ಪುಟ್ಟ ಮನೆಯ ಮೂಲೆಯ ಸ್ಟ್ಯಾಂಡ್ ನಲ್ಲಿ ಒಂದು ಅಲಾರಂ ಗಡಿಯಾರ ಇತ್ತು. ಆ ಕಾಲಕ್ಕೆ ಅದರ ಬೆಲೆ ಒಂದು ನೂರು ರುಪಾಯಿ. ಆಗ ನಮ್ಮ ಮನೆ ಬಾಡಿಗೆಯೇ ನೂರು ರುಪಾಯಿ ಇತ್ತು. ಈ ಆಧಾರದ ಮೇಲೆ ಅದೆಷ್ಟು ದುಬಾರಿ ಗಡಿಯಾರ ಎನ್ನುವುದನ್ನು ಊಹಿಸಿಕೊಳ್ಳಿ.

ಯಾವುದೋ ವಕ್ರ ಗಳಿಗೆಯಲ್ಲಿ ನನ್ನ ಕೈ ಆ ಗಡಿಯಾರಕ್ಕೆ ತಗುಲಿ ಅದು ಠಳಾರೆಂದು ಮಕಾಡೆಯಾಗಿ ಕೆಳಕ್ಕೆ ಬಿತ್ತು. ಬಿದ್ದ ತಕ್ಷಣ ಅದರ ಮುಖ ಒಡೆದು ಗಾಜಿನ ಚೂರುಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಅದುವರೆಗೂ ಆರಾಮವಾಗಿ ಒಂದರ ಹಿಂದೆ ಇನ್ನೊಂದು
ಹರಿದಾಡುತ್ತಿದ್ದ. ಮುಳ್ಳುಗಳು ಸರಕ್ಕನೆ ಮುಷ್ಕರ ಹೂಡಿಬಿಟ್ಟವು. ಅಲ್ಲಿಗೆ ಗಡಿಯಾರಕ್ಕೆ ಒಂದು ಗತಿಯಾಗಿತ್ತು.

ತಕ್ಷಣವೇ ನನಗೆ ಗಾಬರಿಯಾಗಿ ಅಮ್ಮನ ಹೊಡೆತಗಳೆಲ್ಲಾ ನೆನಪಾಗಿ ನಡುಗಿಹೋದೆ. ಹೇಗಾದರೂ ಈ ಗಡಿಯಾರ ಸರಿಪಡಿಸಬೇಕೆಂದು ಯೋಚಿಸತೊಡಗಿದೆ‌. ಹೇಗಪ್ಪಾ ಮಾಡುವುದು ಜೇಬಿನಲ್ಲಿ ಒಂದು ರೂಪಾಯಿ ಸಹ ಇಲ್ಲ.  ತಕ್ಷಣವೇ ನನ್ನ ಸ್ನೇಹಿತ ನೆನಪಾದ. ಅವನಿಗೆ ಸ್ವಲ್ಪ ಮೆಕ್ಯಾನಿಕ್ ವಿದ್ಯೆಗಳು ಗೊತ್ತಿದ್ದವು. ಅವನೇ ರಿಪೇರಿ ಮಾಡಬಹುದು ಅಥವಾ
ಹಣದ ಸಹಾಯವನ್ನಾದರೂ ಮಾಡಬಹುದು ಅಂದುಕೊಂಡು ಹೊರಟೆ.

ಅವನ ಬಳಿ ಯಾವಾಗಲೂ ಹಣ ವಿರುತ್ತಿತ್ತು. ಯಾಕೆಂದರೆ ಅವರ ಮನೆಯಲ್ಲಿ ಇಡ್ಲಿ ದೋಸೆ ರುಬ್ಬುವ ಯಂತ್ರವಿತ್ತು. ಅದರಲ್ಲಿ ಸಂಪಾದನೆಯಾದ ಹಣದಲ್ಲಿ ಸ್ವಲ್ಪ ಉಳಿಸಿಕೊಂಡು ಅವರ ಮನೆಗೆ ಕೊಡುತ್ತಿದ್ದ. ಹೀಗಾಗಿ ಅವನನ್ನು ನಂಬಿ ಒಂದು ತರಕಾರಿ ತರುವ ಬ್ಯಾಗಿನಲ್ಲಿ ಗಡಿಯಾರವನ್ನು ಹಾಕಿಕೊಂಡು ಅವನ ಮನೆಗೆ ಹೊರಟೆ‌.

ಅವನು ತನ್ನ ಬುದ್ದಿವಂತಿಕೆ ಉಪಯೋಗಿಸಿ ಅದನ್ನು ಸರಿಪಡಿಸಲು ನೋಡಿದ . ಅದು ಅವನ ಕೈಲಿ ಆಗಲ್ಲ ಎಂದು ಕೈಚೆಲ್ಲಿದ. ಸರಿ ಅವನಿಗೆ ಗೊತ್ತಿರುವ ರಿಪೇರಿ ಅಂಗಡಿಗೆ ಕರೆದುಕೊಂಡು ಹೋದ.  ನನಗೆ ಗಡಿಯಾರ ಸಂಜೆ ಐದು ಗಂಟೆಯೊಳಗೆ ರಿಪೇರಿ ಆಗಬೇಕಿತ್ತು. ಯಾಕೆಂದರೆ ನನ್ನ ತಾಯಿ ಆಫೀಸ್ ಕೆಲಸಕ್ಕೆ ಹೋಗುತ್ತಿದ್ದರು. ಅವರು ಬರುವ ಸಮಯ ಸಂಜೆ ಐದು ಗಂಟೆ‌ ಅಷ್ಟರೊಳಗೆ ಈ ರಿಪೇರಿ ಕೆಲಸ ಮುಗಿಯಬೇಕಿತ್ತು.

clock-tattooಡಿಯಾರ ಬಿದ್ದಿದ್ದು ಒಂದು ಗಂಟೆ ಸುಮಾರಿಗೆ.  ನಾವು ಅಂಗಡಿಗೆ ಬಂದರೆ ಆತ ಇರಲಿಲ್ಲ. ನನ್ನ ಉದ್ವಿಗ್ನತೆ ಹೆಚ್ಚಾಯಿತು. ಇವತ್ತು ಸಿಕ್ಕಿ ಬೀಳೋದು ಗ್ಯಾರಂಟಿ ಅಂದಕೊಂಡೆ. ನನ್ನ ಪುಣ್ಯಕ್ಕೆ ಆತ ನಾಲ್ಕು ಗಂಟೆ ಸುಮಾರಿಗೆ ಬಂದರು. ಬಂದು ಅದನ್ನು ನೋಡಿ ರಿಪೇರಿ ಗಾಜು ಸೇರಿ ನಲವತ್ತು ರೂಪಾಯಿ ಆಗುತ್ತದೆ ಎಂದರು. ಬರಿ ಗಾಜು ಜೋಡಿಸಲಿಕ್ಕೆ ಇಪ್ಪತ್ತು ರೂಪಾಯಿ ಆಗುತ್ತೆ ಎಂದರು. ನಲವತ್ತು ರೂಪಾಯಿ ಆಗ ದುಬಾರಿ ಅನಿಸಿ ಬರಿ ಗಾಜು ಹಾಕಿಸಲು ನಿರ್ಧರಿಸಿದೆ.

ಆ ಹಣವನ್ನು ಗೆಳೆಯನೇ ಕೊಟ್ಟು ನೆರವಾದ. ಬದುಕಿದೆಯಾ ಬಡ ಜೀವವೇ ಅಂದುಕೊಂಡೆ‌.  ಗಾಜು ಹಾಕಿಸಿಬಿಟ್ಟು ಮನೆಯಲ್ಲಿ ಇಟ್ಟು ಏನೂ ತಿಳಿಯದಂತೆ ಇಟ್ಟು ಬಿಡುವುದು. ಅಮ್ಮ ಗಡಿಯಾರ ತಾನೇ ನಿಂತು ಹೋಗಿದೆ ಅಂದುಕೊಂಡು
ಹೇಗೋ ರಿಪೇರಿ ಮಾಡಿಸಿಕೊಳ್ಳುತ್ತಾರೆ. ಇದು ನನ್ನ ಪ್ಲಾನ್.

ಆದರೆ ವಿಧಿ ಬೇರೆಯದೇ ಸಂಚು ಹೂಡಿತ್ತು.

ನಾನು ಗಡಿಯಾರವನ್ನು ತರಕಾರಿ ಬ್ಯಾಸ್ಕೆಟ್ ನಲ್ಲಿ ಹಾಕಿಕೊಂಡು ಮನೆಯ ಹತ್ತಿರ ಬಂದೆ. ಆಗ ಸಮಯ ಐದು ಗಂಟೆ ಅಮ್ಮ ಮನೆಯ ಬಾಗಿಲಿಗೆ ಬರುವುದಕ್ಕೂ ನಾನು ಮನೆಗೆ ಬರುವುದಕ್ಕೂ ಒಂದೇ ಸಮಯ. ನಾನು ಗಡಿಯಾರ ವನ್ನು ಕಾಣದಂತೆ ಯಾಮಾರಿಸಿ ಒಳಗೆ ಇಡೋಣವೆಂದು ಬಾಗಿಲಬಳಿ ಬರುತ್ತಿದ್ದಂತೆ ಗಡಿಯಾರದ ಅಲಾರಂ ಜೋರಾಗಿ ಬಾರಿಸಲಾರಂಭಿಸಿತು. ಅಯ್ಯೋ ನನ್ನ ಗ್ರಹಚಾರವೇ. ನನ್ನ ಸಿಕ್ಕಿಸಲೆಂದೇ ವಿಧಿ ಅಲಾರಂ ರೂಪದಲ್ಲಿ ಅರಚಿದ ಮೇಲೆ ನನಗೆ ಉಳಿಗಾಲವುಂಟೇ. ಆಗಷ್ಟೇ ಕೆಲಸ ಮುಗಿಸಿ ಬಂದ ಟೆನ್ಷನ್ ನಲ್ಲಿ ರೌದ್ರಾವತಾರ ತಾಳಿದ ಅಮ್ಮ ನನ್ನ ಮೇಲೆ ರುದ್ರತಾಂಡವ ಮಾಡಿದರು.

ಈಗಲೂ ಅಲಾರಂ ಬಾರಿಸುವಾಗೆಲ್ಲಾ ನನಗೆ ಆ ದಿನ, ಹೊಡೆತಗಳು ನೆನಪಾಗುತ್ತವೆ. ತಾನೊಂದು ಬಗೆದರೆ ಮಾನವ ಬೇರೊಂದು ಬಗೆದಿತ್ತು ವಿಧಿ.

 

‍ಲೇಖಕರು Admin

December 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: