-ಎಂ ವಿ ಶಶಿಭೂಷಣ ರಾಜು
ಸಾಹಿತ್ಯ ಸಮ್ಮೇಳನಗಳ ಅಗತ್ಯ ಮತ್ತು ಸ್ವರೂಪ
ಜಗತ್ತಿನಾದ್ಯಂತ ಕನ್ನಡದ ಏಳಿಗೆಗೆ, ಕನ್ನಡದ ಸಾಹಿತ್ಯದ ಏಳಿಗೆಗೆ, ಕನ್ನಡ ಜನರ ಏಳಿಗೆಗೆ ಎಂದು ನೆಪ ಒಡ್ಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳೂ, ಜಾತ್ರೆಗಳೂ, ಸಂವಾದಗಳೂ ನಡೆಯುತ್ತಿವೆ . ಇವುಗಳ ಅವಶ್ಯಕತೆ ಕನ್ನಡಕೆಷ್ಟು, ಇಂತಹ ಸಮ್ಮೇಳನಗಳಿಂದ ಕನ್ನಡದ ಏಳಿಗೆ ಎಷ್ಟರವರೆಗೆ ಆಗುತ್ತದೆ, ಯಾವ ಕನ್ನಡಿಗ ಇಂತಹ ಸಮ್ಮೇಳನಗಳಿಂದ ಏಳಿಗೆ ಕಂಡಿದ್ದಾನೆ ಹೀಗೆ ಅನೇಕ ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಹಾಗಾದರೆ ಇಂತಹ ಸಮ್ಮೇಳನಗಳ ಅಗತ್ಯವೇನು, ಯಾರಿಂದ ಯಾರಿಗೆ ಇವು ನೆರವಾಗುತ್ತಿವೆ, ಇವುಗಳ ಕೊಡುಗೆ ಏನು ಎನ್ನುವ ಪ್ರಶ್ನೆ ಮೂಡುವುದು ಸಹಜ, ಏಕೆಂದರೆ ಇದುವರೆಗೆ ಇವುಗಳ ನೇರ ಉಪಯೋಗ ಕನ್ನಡ ನಾಡಿಗೆ ಆಗಿರುವುದು ಯಾರು ಕಂಡಿಲ್ಲ. ಇದೇ ಸಮಸ್ಯೆ ಇತರ ಭಾರತೀಯ ಭಾಷೆಗಳಿಗೂ ಇದೆ.
ನಾವು ಕನ್ನಡದ ಬಗ್ಗೆ ಚರ್ಚೆ ನಡೆಸೋಣ.
ಹಾಗಾದರೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯ ಇಲ್ಲವೇ, ಇದೆ. ಅದು ಹೇಗೆ ಎಂದು ನೋಡೋಣ.
ಈಗಾಗಲೇ ಇಂಗ್ಲೀಷಿನ ಪ್ರಭಾವದಿಂದ, ಕನ್ನಡ ಎಲ್ಲಿ ಎಂದು ಹುಡುಕುವ ಸ್ಥಿತಿ ತಲುಪುತ್ತಿದ್ದೇವೆ. ಕನ್ನಡದ ಅಗತ್ಯವೇನು ಎಂದು ಸರಿಯಾಗಿ ಮಕ್ಕಳಿಗೆ ತಿಳಿಸುವ ಎಲ್ಲಾ ಬಾಗಿಲುಗಳೂ ಒಂದೊಂದಾಗಿ ಮುಚ್ಚುತ್ತಿವೆ. ಈಗ ಶಿಕ್ಷಣ ಯಾವ ಮಾಧ್ಯಮದಲ್ಲಿ ಇರಬೇಕು ಎನ್ನುವ ಪ್ರಶ್ನೆಯಿಂದ ಬಲುದೂರ ಬಂದು ಬಿಟ್ಟಿದ್ದೇವೆ. ಆಂಗ್ಲಮಾಧ್ಯಮ ಭಾಷೆಯನ್ನು ಅಪ್ಪಿಕೊಂಡಾಗಿದೆ. ಎಷ್ಟೇ ಬರೆದರೂ, ವಾದ ಮಾಡಿದರೂ, ಬಡಿದಾಡಿಕೊಂಡರೂ, ಆಂಗ್ಲಮಾಧ್ಯಮದ ಶಿಕ್ಷಣದಿಂದ ಹೊರಬರಲು ಆಗದಷ್ಟೂ ಆಳವಾಗಿ ಹೂತುಹೋಗಿಯಾಗಿದೆ. ಪ್ರಪಂಚದಲ್ಲಿ ಎಲ್ಲಡೆ ಆಂಗ್ಲಮಾಧ್ಯಮದ ಶಿಕ್ಷಣ ಹರಡಿಕೊಂಡಿದೆ. ಪ್ರಪಂಚ ಹಳ್ಳಿಯಾಗಿದೆ. ಹಿಂದಿನ ದಿನಗಳಂತೆ ಒಂದು ಕಡೆ ಹುಟ್ಟಿ, ಅಲ್ಲೇ ಬೆಳೆದು ಸಾಯುವ ಕಾಲ ಹೋಗಿದೆ. ಎಲ್ಲಾ ದೇಶದವರೊಡನೆ ಮಾತನಾಡಬೇಕಾದ ಪರಿಸ್ಥಿತಿ ಇರುವುದರಿಂದ, ಅಂತಹ ಮಾತುಕತೆಗೆ ಇಂಗ್ಲಿಷ್ ಭಾಷೆ ಬಂದು ಕೂತಿದೆ. ಆಂಗ್ಲ ಭಾಷೆಯ ಶಿಕ್ಷಣಕ್ಕೆ ಅನೇಕ ಉದ್ಯೋಗ ಅವಕಾಶಗಳು ತೆರೆದುಕೊಂಡಿರುವುದರಿಂದ, ಆಂಗ್ಲಭಾಷೆಯಲ್ಲಿ ತಮ್ಮ ಮಕ್ಕಳು ಕಲಿಯುವುದು ಒಂದು ಪ್ರತಿಷ್ಠೆಯಾಗಿದೆ, ಇದಲ್ಲದೆ ಈಗ ಖಾಸಗಿ ಉದ್ಯೋಗಗಳು ಹೆಚ್ಚಿರುವುದರಿಂದ, ಅಂತಹ ಉದ್ಯೋಗಗಳಲ್ಲಿ ಉನ್ನತ ಸ್ಥಾನಗಳು ಇರುವುದರಿಂದ ಅಂತಹ ಸ್ಥಾನಕ್ಕೆ ಸೇರಲು ಆಂಗ್ಲ ಮಾಧ್ಯಮ ಒಂದು ಏಣಿ ಆಗಿರುವುದರಿಂದ, ಹಾಗು ಉನ್ನತ ತಂತ್ರಜ್ಞಾನದ ಶಿಕ್ಷಣ ಆಂಗ್ಲ ಭಾಷೆಯಲ್ಲಿ ಇರುವುದರಿಂದ, ಇಂಗ್ಲಿಷ್ ಬಾರದ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋದಾಗ ಕೀಳಿರುಮೆಯಿಂದ ನರಳಬೇಕಾಗಿಬರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲಭಾಷಾ ಶಿಕ್ಷಣ ಮಾಧ್ಯಮದಲ್ಲಿ ಕಲಿಸಲು ಮುಂದಾಗುತ್ತಾರೆ.
ಹೀಗೆ ಎಲ್ಲ ಕಡೆ ಆಂಗ್ಲ ಭಾಷೆ ಆವರಿಸುತ್ತಿರುವ ಕಾಲದಲ್ಲಿ, ಕನ್ನಡ ಎನ್ನುವ ಭಾಷೆಯ ಸಿಹಿ, ಆತ್ಮಕ್ಕೆ ತಾಕುವ ಆಪ್ಯಾಯತೆ, ಮನಸನು ಉಲ್ಲಸಿತ ಗೊಳಿಸುವ ಸಾಹಿತ್ಯ ಇಂತವುಗಳಿಂದ ಇಂದಿನ ಪೀಳಿಗೆ ಹೇಗೆ ವಂಚಿತರಾಗುತ್ತಿದ್ದಾರೆ ಎನ್ನುವುದನ್ನು ತಿಳಿಸಬೇಕಾಗಿದೆ. ಇದನ್ನು ತಿಳಿಸುವುದು ಹೇಗೆ ಮತ್ತು ಯಾರು ಇದನ್ನು ತಿಳಿಸಬೇಕು. ಆಂಗ್ಲ ಭಾಷೆಯ ಮಾದ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಒಂದು ಪಕ್ಕಕ್ಕೆ ಸರಿಸಿರುವ ಅಷ್ಟೇನೂ ಉಪಯುಕ್ತವಲ್ಲದ ವಸ್ತು. ಕೆಲವು ಕಡೆ ಕನ್ನಡ ಬದಲು ಹಿಂದಿ, ಸಂಸ್ಕೃತ ಹೀಗೆ ಬೇರೆ ಭಾಷೆಗಳು ಬಂದು ಕೂತಿವೆ. ಇಂತಹ ಸಂಧರ್ಭದಲ್ಲಿ ಮಕ್ಕಳಿಗೆ, ಜನರಿಗೆ ಕನ್ನಡದ ಸಿಹಿ ಉಣಿಸುವ ಅಗತ್ಯತೆ ಸೃಷ್ಟಿಯಾಗಬೇಕು. ಅಂತಹ ವಾತಾವರಣ ಸೃಷ್ಟಿಯಾಗುವುದು ಗಂಭೀರ ಸರಳ ಸುಂದರ, ಸಾಹಿತ್ಯ ಸಮ್ಮೇಳನಗಳಿಂದ. ಓದಿರುವ ಅಪ್ಪ, ಅಮ್ಮಂದಿರು ತಮ್ಮ ಮಕ್ಕಳ ಜೊತೆ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.
ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನಗಳೂ , ವಾಣಿಜ್ಯ ಜಾತ್ರೆಗಳಾಗಿವೆ. ಅಲ್ಲಿ ಯಾವುದಾದರೂ ಸಂಘಟನಾಕಾರಿಗೆ ಇಷ್ಟವಾದ, ಹತ್ತಿರದ ಲೇಖಕರ ಜಾಹೀರಾತಿಗೆ ಅನುಕೂಲ ಮಾಡಿಕೊಡಲ್ಪಡುತ್ತದೆ. ಅವರ ಪುಸ್ತಕಗಳ ಮಾರಾಟವಾಗುತ್ತದೆ. ಅಂತಹ ಲೇಖಕರ ಗುಣಗಾನವಾಗುತ್ತದೆ. ಲೇಖಕರು ಪ್ರಸನ್ನ ವದನದಿಂದ ನಮ್ರತೆ ಪ್ರಕಟಿಸುತ್ತಾರೆ. ಅಲ್ಲಿಗೆ ಭಾಷೆಯೊಂದರ ಉದ್ದಾರವಾಯಿತೆಂದು ಸಮಾಧಾನಗೊಳ್ಳುತ್ತಾರೆ.
ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದವರ ಸಂದರ್ಶನ ಪತ್ರಿಕೆಗಳಲ್ಲಿ ಬರುತ್ತದೆ. ಅಲ್ಲಿ ಕನ್ನಡ ಭಾಷೆಯ ಉದ್ದಾರದ ಕೆಲವು ಮಾತುಗಳಾಗುತ್ತವೆ. ಅಲ್ಲಿ ಕನ್ನಡವೇ ವ್ಯವಹಾರ ಭಾಷೆಯಾಗಬೇಕು, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು, ಅದು ಆಡಳಿತ ಭಾಷೆಯಾಗಬೇಕು, ಮಕ್ಕಳಿಗೆ ಕನ್ನಡದಲ್ಲೇ ಶಿಕ್ಷಣವಾಗಬೇಕು ಎನ್ನುವ ಮಾತು ಆಡಲ್ಪಡುತ್ತವೆ. ಸಮ್ಮೇಳನ ಅಧ್ಯಕ್ಶರು ಇದೇ ದಾಟಿಯ ಮಾತುಗಳನ್ನು ಸಮ್ಮೇಳನದ ಭಾಷಣದಲ್ಲಿ ಉದ್ಘೋಷಿಸುತ್ತಾರೆ. ಸಮ್ಮೇಳೆನದಲ್ಲಿ ಹಲವು ನಿರ್ಣಯಗಳಾಗುತ್ತವೆ. ಇದುವೆರೆಗೆ ಆಗಿರುವ ಯಾವ ನಿರ್ಣಯವೂ ಕಾರ್ಯರೂಪಕ್ಕೆ ಬಂದಿಲ್ಲ. ಮುಂದಿನ ಸಮ್ಮೇಳನ ಬರುವಹೊತ್ತಿಗೆ ಎಲ್ಲ ನಿರ್ಣಯಗಳು ಮರೆತುಹೋಗಿರುತ್ತವೆ. ಪದೇ ಪದೇ ಅದೇ ನಿರ್ಣಯಗಳಾಗುತ್ತವೆ, ಮರೆಯಲಾಗುತ್ತದೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳು ವೇದಿಕೆಯ ತುಂಬಾ ತುಂಬಿ ತುಳುಕಾಡುತ್ತಾರೆ. ಎಲ್ಲರಿಗೆ ಹೇಗೆ ತಾವು ಕನ್ನಡದ ಅಭಿಮಾನಿಗಳು ಎಂದು ತೋರಿಸಿಕೊಳ್ಳಬೇಕು ಎಂದು ಹೆಣಗಾಡುತ್ತಿರುತ್ತಾರೆ. ಎಲ್ಲಾ ನಿರ್ಣಯಗಳೂ ಅವರ ಸಮ್ಮುಖದಲ್ಲೇ ನಡೆಯುತ್ತವೆ. ಸರ್ಕಾರದ ಮುಂದೆ ಅಧ್ಯಕ್ಷರು ಕಟುಮಾತನಾಡಿ ತಮ್ಮ ಧೈರ್ಯ ತೋರಿಸಿಕೊಳ್ಳುತ್ತಾರೆ, ಸರ್ಕಾದವರು ಹುಸಿನಗೆಯಿಂದ ಎಲ್ಲವನ್ನು ಕೇಳಿಸಿಕೊಳ್ಳುತ್ತಿರುವಂತೆ ನಟಿಸುತ್ತಾರೆ. ಅಲ್ಲಿಗೆ ಕನ್ನಡಾಂಬೆ ಸಂತುಷ್ಟಳಾಗುತ್ತಾಳೆ.
ಹಾಗಾದರೆ ಸಾಹಿತ್ಯ ಸಮ್ಮೇಳನಗಳು ಬೇಡವೇ. ಖಂಡಿತ ಬೇಕು. ಸಾಹಿತ್ಯ ಸಮ್ಮೇಳನಗಳಿಂದ, ಯುವಬರಹಗಾರರಿಗೆ ಹಿರಿಯ ಬರಗಾರರ ಮಾರ್ಗದರ್ಶನ ಸಿಗುತ್ತದೆ. ಜನರಿಗೆ ಭಾಷೆ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನವಾಗುತ್ತದೆ. ಪುಸ್ತಕ ಮಾರಾಟವಾಗುತ್ತದೆ, ಪ್ರಕಾಶಕರಿಗೆ ಅನುಕೂಲವಾಗುತ್ತದೆ. ಮಕ್ಕಳನ್ನು ಕರೆದೊಯ್ದರೆ ಅವರಿಗೆ ಭಾಷೆಯ ಅರಿವಾಗುತ್ತದೆ, ಅವರಿಗೆ ಪುಸ್ತಕಗಳ ಆಕರ್ಷಣೆ ಸಿಕ್ಕಿ, ಓದಲು ತೊಡಗುತ್ತಾರೆ, ಭಾಷೆ ಉಳಿಯುವ ಭರವಸೆ ಸಿಗುತ್ತದೆ.
ಹಾಗಾದರೆ, ಸಾಹಿತ್ಯ ಸಮ್ಮೇಳನಗಳ ಸ್ವರೂಪ ಹೇಗಿರಬೇಕು?
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು, ವಿದ್ಯಾರ್ಥಿಗಳೂ , ಸಾಹಿತ್ಯಾಸಕ್ತರು ಸೇರಬೇಕು. ರಾಜಕಾರಣಿಗಳು ಸಮ್ಮೇಳನವನ್ನು ತಮ್ಮ ಓಟಿನ ಮಾರ್ಗವಾಗಿ ನೋಡದೆ, ಬರೀ ಸಾಹಿತ್ಯದ ಆಸಕ್ತಿಯಿಂದ ಭಾಗವಹಿಸಿ, ವೇದಿಕೆಯನ್ನು ಏರಲು ತಮ್ಮ ಹಕ್ಕು ಸ್ಥಾಪಿಸದೆ ಬರಹಗಾರರಿಗೆ, ಕನ್ನಡದ ಏಳಿಗೆಗೆ ಒಳ್ಳೆಯ ಮಾರ್ಗದರ್ಶಕರಿಗೆ ಅನುವುಮಾಡಿಕೊಡಬೇಕು. ಮಠಾಧೀಶರು ಭಾಗವಹಿಸಿ ಅಲ್ಲಿ ಭಕ್ತಿ ಪ್ರವಾಹ ಮಾಡದೆ, ಭಾಷೆ ಪ್ರವಾಹವಾಗಬೇಕು. ಇಡೀ ಜನಾಂಗಕ್ಕೆ ಸಾಹಿತ್ಯದ ಗೀಳೆಬ್ಬಿಸಬೇಕು, ಒಳ್ಳೆಯ ಪುಸ್ತಕಗಳ ಪರಿಚಯವಾಗಬೇಕು. ಬರೀ ಹಳೇ ಪುಸ್ತಕಗಳ ಗುಣಗಾನವಾಗದೆ ಹೊಸ ಪುಸ್ತಕಗಳ, ಹೊಸ ಬರಹಗಾರರ ಸದ್ದಾಗಬೇಕು.
ಸಾಹಿತ್ಯ ಸಮ್ಮೇಳನ, ಹೆಚ್ಚು ಹಣ ವ್ಯಯಸದೆ, ಬರೀ ಮನರಂಜನಾತ್ಮಕವಾಗದೆ, ಅತಿ ಅದ್ದೂರಿಯೂ ಆಗದೆ ಸರಳ ಸುಂದರ, ಗೊಂದಲವಿಲ್ಲದ ಆತ್ಮೀಯವಾಗಿ ನಡೆಯಬೇಕು. ಉತ್ತಮ ಸಾಹಿತ್ಯದ ಚರ್ಚೆಯಾಗಬೇಕು, ಪುಸ್ತಕಗಳ ಚರ್ಚೆಯಾಗಬೇಕು, ಭಾಷೆಯ ಮೇಲೆ ಅಭಿಮಾನ ಉಕ್ಕಿ ಹರಿಯುವಂತಾಗಬೇಕು. ಸಮ್ಮೇಳನ ಊಟದ ಪಂಕ್ತಿಯಾಗಬಾರದು. ಕಡಿಮೆ ಹಣದಲ್ಲಿ ಸಮ್ಮೇಳನ ನಡೆದು, ಹಣ ಉಳಿಸಿಕೊಂಡು ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ, ಪ್ರತಿ ತಿಂಗಳೂ ಒಂದೊಂದು ಜಿಲ್ಲೆಯಲ್ಲಿ, ಸ್ಥಳೀಯ ಜನರಿಗೆ, ಬರಹಗಾರರಿಗೆ, ಅವಕಾಶ ಕೊಟ್ಟು ನಡೆಸಬೇಕು. ಕಾರ್ಯಕ್ರಮಗಳನ್ನು ಟಿವಿ ಗಳ ಮೂಲಕ ಕರ್ನಾಟಕದ ಎಲ್ಲೆಡೆ ಬಿತ್ತರಿಸಬೇಕು. ಸರ್ಕಾರ ಕೊಡುವ ಹಣ ಜೇಬಿಗೆ ಹೇಗೆ ಸೇರಿಸಬೇಕು ಎಂದು ಯೋಚಿಸದೆ, ಮುಂದಿನ ಸಮ್ಮೇಳನಕ್ಕೆ ಉಳಿಸುವುದು ಹೇಗೆ ಎಂದು ಯೋಚಿಸಬೇಕು. ಊಟಕ್ಕೆ ಶುಚಿಯಾದ ಸಣ್ಣ ಸಣ್ಣ ಸ್ಥಳಗಳಲ್ಲಿ ಯೋಜಿಸಿ ಜನರೇ ಹಣ ಕೊಟ್ಟು ಊಟ ಮಾಡುವಂತಿರಬೇಕು, ಇದರಿಂದ ಹಣ ಉಳಿತಾಯವಾಗುತ್ತದೆ. ಊಟ ಕಡಿಮೆ ಹಣದಲ್ಲಿ ಸಿಗುವಂತಾಗಬೇಕು. ಏಕೆಂದರೆ ಸಮ್ಮೇಳನಗಳಲ್ಲಿ ಊಟ ಮುಖ್ಯ ವಿಷಯವಾಗಬಾರದು, ಸಾಹಿತ್ಯವೇ ಮುಖ್ಯವಾಗಬೇಕು.
ಹೊರದೇಶಗಳಲ್ಲಿ ಕನ್ನಡ ಜನರ ದೊಡ್ಡ ಸಮ್ಮೇಳನಗಳು ನಡೆಯುತ್ತಿವೆ. ಆದರೆ ಅವು ಬರೀ ಮನರಂಜನಾತ್ಮಕ ಅಥವಾ ವಾಣಿಜ್ಯ ಸಮ್ಮೇಳನಳಾಗಿರುತ್ತವೆ. ಅಲ್ಲಿನ ಹಲವರ ವ್ಯಾಪಾರದ ಅಭಿವೃದ್ಧಿಗೆ ಸಹಾಯ ಆಗುವ ಹಾಗೆ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ. ಏಕೆಂದರೆ ಅವು ನಡೆಯುವುದು ವ್ಯಾಪಾರಿಗಳಿಂದ ಪಡೆದ ದಾನಗಳಿಂದ. ಇತ್ತೀಚಿಗೆ ಅಮೇರಿಕಾದಲ್ಲಿ ನಡೆದ ದೊಡ್ಡ ಸಮ್ಮೇಳನದ ಅಧ್ಯಕ್ಷರ ಜೊತೆ ಮಾತನಾಡುತ್ತಿದ್ದಾಗ, ಸಾಹಿತ್ಯದಿಂದ ಯಾವ ಹಣ ಸಹಾಯವೂ ಆಗುವುದಿಲ್ಲ ಎಂಬಂತಹ ಮಾತನಾಡಿದ್ದರು, ಸಾಹಿತ್ಯ ಕಾರ್ಯಕ್ರಮಗಳಿಗೆ ಜನ ಬರುವುದಿಲ್ಲ, ಅಂತಹ ಕಾರ್ಯಕ್ರಮಗಳಿಗೆ ನಾವು ಹಣ ಏಕೆ ವ್ಯಯಿಸಬೇಕು ಎನ್ನುವುದು ಅವರ ವಾದ. ಪರಿಸ್ಥಿತಿ ಹೀಗಿರುವಾಗ ಸಾಹಿತ್ಯಕ್ಕೆ, ಭಾಷೆಗೆ, ಭಾಷೆಯ ಏಳಿಗೆಗೆ ಇಂತಹ ಸಮ್ಮೇಳನಗಳಿಂದ ಹೇಗೆ ಉಪಯೋಗವಾಗುತ್ತದೆ. ಬಂದ ಜನ ಸಿನೆಮಾ ನಟ, ನಟಿಯರ ಜೊತೆ ಫೋಟೋ ತೆಗೆಸಿಕೊಂಡು, ಊಟ ಮಾಡಿ, ಓಡಾಡಿಕೊಂಡು ಹೋಗುತ್ತಾರೆ. ಕನ್ನಡ ಪುಸ್ತಕಗಳು ಕೊಳ್ಳಲು ಲಭ್ಯವಿದ್ದರೂ ಯಾರೂ ಕೊಳ್ಳುವುದಿಲ್ಲ. ಒಬ್ಬರು ಹೇಳುತ್ತಿದ್ದರು ಸಾವಿರ ಪುಸ್ತಕ ಮಾರಾಟಕ್ಕೆ ಇಟ್ಟರೆ ಐದು ಪುಸ್ತಕ ಮಾರಾಟವಾಗಿತ್ತು ಎಂದು.
ಹಾಗಾದರೆ ಭಾಷಾ ಸಮ್ಮೇಳನಗಳಲ್ಲಿ, ಜನರಿಗೆ, ಮಕ್ಕಳಿಗೆ ಭಾಷಾ ಪ್ರೀತಿ ಉಕ್ಕಿಸುವುದು ಹೇಗೆ?
ಸಾಹಿತ್ಯ ಸಮ್ಮೇಳನ ಎನ್ನುವ ಹೆಸರಿಟ್ಟುಕೊಂಡು ಆಚರಿಸಿಕೊಳ್ಳುವ ಸಮ್ಮೇಳನಗಳಲ್ಲಿ, ಸಾಹಿತ್ಯದ ರುಚಿ, ಓದಿನ ಗೀಳೇಚ್ಚಿಸುವ ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಬರೀ ಒಣ ಭಾಷಣಗಳಿಂದ ಜನರನ್ನು ಬೇಸರಿಸದೆ, ಜನರನ್ನು ಒಳಗೊಳ್ಳುವ, ಜನರೂ ಪಾಲ್ಗೊಳ್ಳುವ ಕಾರ್ಯಕ್ರಮಗಳಾಗಬೇಕು. ಜನರಿಗೆ, ಮಕ್ಕಳಿಗೆ ಮಿನಿ ಕಥಾ ಸ್ಪರ್ಧೆ, ಕವನ ಸ್ಪರ್ಧೆ ಏರ್ಪಡಿಸಿ, ಅಲ್ಲಿಯೇ ಬಹುಮಾನ ಕೊಡುವಂತೆ ರೂಪಿಸಬೇಕು. ಇದರಿಂದ ಹೆಚ್ಚು ಹೆಚ್ಚು ಜನರು ಕಾರ್ಯಕ್ರಮಕ್ಕೆ ಸೇರಲು ಸ್ಫೂರ್ತಿ ಸಿಕ್ಕಂತಾಗುತ್ತದೆ. ಜನರಿಗೆ, ಮಕ್ಕಳಿಗೆ ಪುಸ್ತಕವೊಂದನು ಓದಲು ಕೊಟ್ಟು ಅಲ್ಲಿಯೇ ಪುಸ್ತಕದ ಬಗ್ಗೆ ಕಿರು ಟಿಪ್ಪಣಿ ಮಾಡುವಂತೆ ಹೇಳಬೇಕು ಇದರಿಂದ ಅವರು ಬರಹಗಾರರು ಎನ್ನುವ ಅನಿಸಿಕೆ ಮೂಡುತ್ತದೆ. ಈಗ ಬರೆಯುವವರೇ ಓದುತ್ತಿರುವುದರಿಂದ ಹೆಚ್ಚು ಹೆಚ್ಚು ಬರಹಗಾರರು ಸಿಕ್ಕಷ್ಟೂ ಹೆಚ್ಚು ಓದುಗರೂ ಸಿಗುತ್ತಾರೆ, ಹೆಚ್ಚು ಓದಿದರೆ ಭಾಷೆಯ ಬಗ್ಗೆ ಹೆಚ್ಚು ಹೆಮ್ಮೆ ಮೂಡುತ್ತದೆ. ಜನರ ಒಳ್ಳೆಯವರಾಗಲೂ ಓದು, ಬರಹ ಪ್ರೇರೇಪಿಸುತ್ತದೆ.
ಒಂದು ರಾಜ್ಯದ ಜನ ಹೆಚ್ಚು ತಮ್ಮ ರಾಜ್ಯದ ಭಾಷೆ ಓದಬೇಕೆಂದರೆ ಇರುವುದು ಒಂದೇ ಮಾರ್ಗ. ಪ್ರಾಥಮಿಕ ಶಿಕ್ಷಣದಿಂದ, ಸ್ನಾತಕೋತರ, ಪಿ.ಎಚ್.ಡಿ. ಶಿಕ್ಷಣದವರೆಗೂ ಒಂದು ವಿಷಯ (ಸಬ್ಜೆಕ್ಟ್) ಕನ್ನಡದಲ್ಲಿ ಇರುವುದು. ಹೊರರಾಜ್ಯಗಳಿಂದ ಸ್ನಾತಕೋತ್ತರ, ಪಿ.ಎಚ್.ಡಿ ಮಾಡಬರುವ ವಿದ್ಯಾರ್ಥಿಗಳಿಗೆ ಇದರಿಂದ ವಿನಾಯಿತಿ ನೀಡಬಹದು. ಆದರೆ ಕರ್ನಾಟಕದಲ್ಲಿ ಹುಟ್ಟಿ ಬೆಳೆಯುತ್ತಿರುವರಿಗೆ ಪದವಿ ಪಡೆಯಲು ಕನ್ನಡದ ವಿಷಯದಲ್ಲಿ ತೇರ್ಗಡೆ ಆಗುವುದು ಕಡ್ಡಾಯಗೊಳಿಸುವುದು (ವಿಜ್ಞಾನ, ವಾಣಿಜ್ಯ, ವೈದ್ಯಕೀಯ, ತಂತ್ರಜಾನ ಹೀಗೆ ಎಲ್ಲಾ ವಿಷಯದ ಶಿಕ್ಷಣಕ್ಕೂ). ಇದರಿಂದ ಎಲ್ಲರೂ ಕನ್ನಡ ಓದುತ್ತಾರೆ, ಕನ್ನಡ ಪ್ರೀತಿಯೂ ಇರುತ್ತದೆ. ಕನ್ನಡ ಬಿಟ್ಟರೆ ಹಿಂದಿ, ಸಂಸ್ಕೃತ ಎಂದು ಮತ್ತೆ ಎರಡನೆ ಅವಕಾಶ ಕೊಡಬಾರದು. ಬೇರೆ ಭಾಷೆ ಕಲಿಯಲು ಆಸಕ್ತಿ ಇರುವವರಿಗೆ ಅನೇಕ ಮಾರ್ಗಗಳಿವೆ, ಈಗ ಅದು ಸುಲಭವೂ ಆಗಿದೆ. ಇದು ಎಲ್ಲಾ ರಾಜ್ಯಗಳಲ್ಲೂ ಆಗಬೇಕು, ಆಯಾ ರಾಜ್ಯದ ಭಾಷೆಯ ಒಂದು ವಿಷಯ ಕಲಿಕೆಯ ಎಲ್ಲಾ ಹಂತಗಳಲ್ಲೂ ಇರಬೇಕು.
ಸಾಹಿತ್ಯ ಸಮ್ಮೇಳನಗಳಲ್ಲಿ ಬೇರೆ ಅಂದರೆ ಭ್ರಷ್ಟಾಚಾರ, ರೈತರ ಬವಣೆ, ನೀರಿನ ಸಮಸ್ಯೆ, ಮಹಿಳಾ ಸಮಸ್ಯೆ ಹೀಗೆ ಅನೇಕ ಬಿಕ್ಕಟ್ಟುಗಳನ್ನು ಚರ್ಚಿಸಲು ಸಮಯ ನಿಗಧಿ ಮಾಡಬೇಕೇ ಎನ್ನುವ ಪ್ರಶ್ನೆ ಮೂಡುತ್ತದೆ. ಸ್ವತಂತ್ರ ಬಂದಾಗಲಿಂದಲೂ ಈ ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರ ಸಿಕ್ಕಿಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ಈ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರದ ಗಮನ ಹರಿಸಬೇಕು. ಸಾಹಿತ್ಯವೆಂದರೆ ಬರೀ ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ ಯೊಂದೇ ಅಲ್ಲ, ಜನರ ಸಮಸ್ಯೆಗಳ ಚರ್ಚಿಸುವ, ಅರೋಗ್ಯ ಮಾಹಿತಿ ತಿಳಿಯಪಡಿಸುವ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಹಣಕಾಸಿನ ಮಾಹಿತಿ ನೀಡುವ ಎಲ್ಲವೂ ಸಾಹಿತ್ಯವೇ.
ಕನ್ನಡದ ಎಲ್ಲ ಒಳ್ಳೆಯ ಮನಸುಗಳು, ರಾಜಕೀಯ, ಆಡಳಿತ, ತಂತ್ರಜಾನ, ವೈದ್ಯಕೀಯ, ಉದ್ಯಮ, ಶಿಕ್ಷಣ, ಸಾಹಿತ್ಯ ಹೀಗೆ ಯಾವುದೇ ಕ್ಷೇತ್ರದಲ್ಲರಲಿ, ಒಂದು ಕಡೆ ಸೇರಿ ಕರ್ನಾಟಕದ, ಕನ್ನಡದ ಸಮಸ್ಯೆಗಳ ಬಗ್ಗೆ ಉಪಯುಕ್ತ ಚರ್ಚೆ ನಡೆಸಿದರೆ ಸ್ವಲ್ಪವಾದರೂ ಬದಲಾವಣೆ ಕಾಣಬಹದು.






0 Comments