ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯದ ನಾಲ್ಕನೆಯ ಕೇಂದ್ರವಾಗಿ ವಿಜಾಪುರದ ಹಲಸಂಗಿ

ಧಾರವಾಡ,ಮೈಸೂರು ಮತ್ತು ಮಂಗಳೂರುಗಳೊಂದಿಗೆ ನವೋದಯ

– ಡಾ.ಪ್ರಕಾಶ ಗ.ಖಾಡೆ

ಕನ್ನಡ ನವೋದಯ ಸಾಹಿತ್ಯ”ವನ್ನು ಕುರಿತು ಮಾತನಾಡುವಾಗ, ಸಾಹಿತ್ಯ ಚರಿತ್ರಕಾರರು ಮುಖ್ಯವಾಗಿ ಮೂರು ಕೇಂದ್ರಗಳನ್ನು ಗುರುತಿಸುತ್ತಾರೆ. ಒಂದು ಆಚಾರ್ಯ ಬಿ.ಎಂ.ಶ್ರೀಯವರ ಮೈಸೂರು ಕೇಂದ್ರ, ಮಾಸ್ತಿ, ಡಿ.ವಿ.ಜಿ., ಕುವೆಂಪು, ಪು.ತಿ.ನ., ಕೆ.ಎಸ್.ನ ಇವರು ಈ  ಕೇಂದ್ರದ ಮುಖ್ಯ ಸಾಹಿತಿಗಳು.ಎರಡನೆಯದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೇಂದ್ರ: ಗೋವಿಂದ ಪೈ, ಪಂಜೆ, ಕಡೆಂಗೋಡ್ಲು ಶಂಕರಭಟ್ಟ ಇಂಥವರು ಈ ಕೇಂದ್ರದ ಮುಖ್ಯ ಕವಿಗಳು. ಮೂರನೆಯದು ಬೇಂದ್ರೆಯವರ ಗೆಳೆಯರ ಗುಂಪಿನ ಗೋಕಾಕ, ಮುಗಳಿ, ಆನಂದಕಂದ, ಸಾಲಿ ರಾಮಚಂದ್ರರಾಯರು ಇವರನ್ನೊಳಗೊಂಡ ಧಾರವಾಡ ಕೇಂದ್ರ.

ಇವುಗಳ ಜೊತೆಗೆ ಮಧುರಚೆನ್ನರ ಗೆಳೆಯರ ಬಳಗದ  ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ.ಧೂಲಾ ಇವರನ್ನು ಒಳಗೊಂಡ ಹಲಸಂಗಿಯನ್ನು ನವೋದಯದ ನಾಲ್ಕನೆಯ ಕೇಂದ್ರವೆಂದು ಪರಿಗಣಿಸುವುದು ಅಗತ್ಯವಾಗಿದೆ. ಯಾಕೆಂದರೆ, ಈ ನಾಲ್ಕನೆಯ ಕೇಂದ್ರ ಕನ್ನಡ ನವೋದಯಕ್ಕೆ ‘ಅನುಭಾವ’ ಕಾವ್ಯಧಾರೆ ಯೊಂದನ್ನು ಸೇರಿಸಿದ್ದಲ್ಲದೆ ಜಾನಪದ ಜೀವಸತ್ವವನ್ನು ತುಂಬುವ ಜನಪದ ಸಾಹಿತ್ಯ ಸಂಗ್ರಹ ಹಾಗೂ ಆ ಕುರಿತ ಅಧ್ಯಯನವನ್ನು ಕನ್ನಡದ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಪ್ರಾರಂಬಿಸಿತು. ‘ನವೋದಯ’ವನ್ನು ಕುರಿತು ಈ ಹೊತ್ತು ವಿಚಾರ ಮಾಡುವ ನಾವು ಅದರ ಬಹುಮುಖತ್ವವನ್ನು ಗುರುತಿಸದಿದ್ದರೆ ತಪ್ಪಾಗುತ್ತದೆ.
ಬೇಂದ್ರೆಯವರು ಮಧುರಚೆನ್ನರ ಅತ್ಯಂತ ಆಪ್ತ ಗೆಳೆಯರಾಗಿದ್ದುದರಿಂದಲೋ ಬೇಂದ್ರೆಯವರ ಗೆಳೆಯರ ಗುಂಪಿನ ಒಂದು ವಿಸ್ತರಣೆಯೋ, ಶಾಖೆಯೋ ಆಗಿ ಹಲಸಂಗಿಯ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ ಎಂಬ  ಸ್ಥೂಲವಾದ ಗ್ರಹಿಕೆಯಿಂದ ಈವರೆಗಿನ ಸಾಹಿತ್ಯ ಚರಿತ್ರೆಕಾರರು, ವಿಮರ್ಶಕರು ಮಧುರಚೆನ್ನರ ಕೇಂದ್ರವಾದ ಹಲಸಂಗಿಯ ಸಾಹಿತ್ಯಿಕ ನಿಲುವುಗಳು ಹಾಗೂ ಸಾಧನೆಗಳ ವೈಶಿಷ್ಟ್ಯವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರು ‘ನವೋದಯದ ನಾಲ್ಕನೆಯ ಕೇಂದ್ರವಾಗಿ ಹಲಸಂಗಿ’ಯನ್ನು  ಘೂಷಿಸಿಸಬೇಕೆಂದು ಬಾಗಲಕೋಟೆಯಲ್ಲಿ 2002 ಜುಲೈ 31 ರಂದು ನಡೆದ ‘ಕವಿ ಮಧುರಚೆನ್ನರ ಜನ್ಮಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿದರು.ಈಗ ಬಿಜಾಪುರದಲ್ಲಿ ಅಖಿಲಭಾರತ 79 ನೆಚಿು ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವ ಹೊತ್ತಿನಲ್ಲಿ ಪರಿಷತ್ತು ಈ ಐತಿಹಾಸಿಕ ಘೋಷಣೆಯನ್ನು ಮಾಡುವ ಮೂಲಕ ಕನ್ನಡ ಸಾಹಿತ್ಯದ ಬಹುಮುಖತ್ವವನ್ನು ಮತ್ತು ವ್ಯಾಪಕತೆಯನ್ನು ಪ್ರಚುರಪಡಿಸುವುದು ಬಹುದೊಡ್ಡ  ಬಹುದೊಡ್ಡ ಕಾಣ್ಕೆಯಾಗಿದೆ.
ಹಲಸಂಗಿ ಗೆಳೆಯರ ಗುಂಪು :
ಧಾರವಾಡದ ಗೆಳೆಯರ ಗುಂಪಿನೊಂದಿಗೆ ಹಲಸಂಗಿ ಗೆಳೆಯರ ಗುಂಪನ್ನು ಜೊತೆ ಸೇರಿಸಿ ಈವರೆಗೆ ನಡೆದುಕೊಂಡು ಬಂದ ಅಧ್ಯಯನದ ಸಂಗತಿಗಳನ್ನು ಇಂದು ಹೊಸದಾಗಿ ಮುರಿದು ಕಟ್ಟಬೇಕಾಗಿದೆ. ಈ ಕೆಲಸದಲ್ಲಿ ಪ್ರತ್ಯೇಕತೆಯ ನೋಟವು ಹೀಗೆ ಒಮ್ಮೆಲೆ ನೋಡುವಾಗ ಒಂದು ಬಗೆಯ ಅಸಂತೋಷ ತೋರಬಹುದು. ಆದರೆ ಈ ಕೆಲಸ ನಡೆಯದಿದ್ದರೆ ಪ್ರಧಾನವಾದ ಒಂದು ಕೇಂದ್ರ ಮರೆಯಲ್ಲಿಯೇ ಉಳಿದು ತನ್ನ ಅಸ್ತಿತ್ವದ ಬೇರುಗಳನ್ನು ಸಡಿಲಿಸಿಕೊಳ್ಳಬಹುದು. ಕನ್ನಡದ ನವೋದಯದ ಇತರ ಕೇಂದ್ರಗಳಿಗಿರುವಂತೆ ‘ಹಲಸಂಗಿ ಕೇಂದ್ರ’ಕ್ಕೂ ತನ್ನದೇ ಆದ ಹಿರಿಮೆ, ವೈಶಿಷ್ಟ್ಯತೆ ಇದೆ. ಅದರ ಒಟ್ಟು ವೈಶಿಷ್ಟ್ಯದೊಂದಿಗೆ ಧಾರವಾಡ ಕೇಂದ್ರದಿಂದ ಹೇಗೆ ಹಲಸಂಗಿಯು ಬಿನ್ನವಾಗುತ್ತದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.
1. ಧಾರವಾಡದ ಗೆಳೆಯರ ಗುಂಪಿನಲ್ಲಿಯೇ ಹಲಸಂಗಿ ಗೆಳೆಯರನ್ನೂ ಕರಗಿಸುತ್ತ ಬಂದ ನಮ್ಮ ಲೇಖಕರು ಅವರ ಪ್ರತ್ಯೇಕ ಅಸ್ತಿತ್ವವನ್ನು ಈಗಲಾದರೂ ಗುರುತಿಸಬೇಕಾದ ಅಗತ್ಯವಿದೆ. ಯಾಕೆಂದರೆ, ಬೇಂದ್ರೆಯವರ ಸಂಬಂಧ ಬರುವ ಪೂರ್ವದಲ್ಲಿಯೇ ಮಧುರಚೆನ್ನರು, ಧೂಲಾ ಸಾಹೇಬರು ಗೆಳೆಯರಾಗಿದ್ದರು. ಸಿಂಪಿ ಲಿಂಗಣ್ಣನವರು ಚಡಚಣದವರಾಗಿದ್ದರೂ 1912-13ನೇ ವರ್ಷದಲ್ಲಿಯೇ ಗೆಳೆಯರಾಗಿದ್ದರು. ಸಾಹಿತ್ಯದ ಅಬಿರುಚಿಯುಳ್ಳವರಾಗಿದ್ದರು. ಮೊದಮೊದಲಿಗೆ ಶಾಲೆಯ ಪಠ್ಯ ಪುಸ್ತಕಗಳ ಆಧಾರದಿಂದ ಸಾಹಿತ್ಯದ ಅಧ್ಯಯನವನ್ನು ಪ್ರಾರಂಬಿಸಿದ ಈ ಗೆಳೆಯರು, ಸಾಂಪ್ರದಾಯಿಕ  ಪುರಾಣ ಕಥೆಗಳನ್ನು ಕೇಳುತ್ತ, ಜನಪದ ಹಾಡುಗಳಿಗೆ ಕಿವಿಗೊಡುತ್ತ ಬೆಳೆದರು ಎಂಬುದನ್ನು ಡಾ.ಗುರುಲಿಂಗ ಕಾಪಸೆಯವರು ತಮ್ಮ ‘ಹಲಸಂಗಿ ಗೆಳೆಯರು ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
2. ಮಧುರಚೆನ್ನರು ಸಿರಿಯಾಳನ ಚರಿತ್ರೆಯನ್ನು ಆಧರಿಸಿ ‘ಸತ್ವಪರೀಕ್ಷೆ’ ಎಂಬ ನಾಟಕ ಬರೆದದ್ದು ವಿನೋದ  ಕುಸುಮಾವಳಿ ಎಂಬ ಕಾವ್ಯರೂಪಕ ರಚಿಸಿದ್ದು, ಛಂದೋಬದ್ದವಾದ ಕವಿತೆಗಳನ್ನೂ ಬರೆಯಲು ಪ್ರಾರಂಬಿಸಿದ್ದು ಧಾರವಾಡ ಗೆಳೆಯರ ಗುಂಪಿನ ಸಂಪರ್ಕ ಬರುವ ಪೂರ್ವದಲ್ಲಿಯೇ.
3. ಮಧುರಚೆನ್ನರು ತಾವು ಬರೆಯಲು ತೊಡಗಿದುದಲ್ಲದೆ ತಮ್ಮ ಗೆಳೆಯರಾದ ಸಿಂಪಿ ಲಿಂಗಣ್ಣ,   ಪಿ.ಧೂಲಾ ಸಾಹೇಬ ಇವರಿಗೆ ಬರೆಯಲು ಪ್ರೇರಣೆ ನೀಡಿದ್ದು ಕೂಡ ಆಗಲೇ. ಹಲಸಂಗಿ ಗೆಳೆಯರಲ್ಲಿ ಕಿರಿಯರಾದ ಕಾಪಸೆ ರೇವಪ್ಪನವರೂ ಕೂಡ ‘ಬಾಲಕವಿ’ಯಾಗಿ ಮಧುರಚೆನ್ನರನ್ನು ಅನುಸರಿಸಿದರು. ಹೀಗೆ ಈ ಹಲಸಂಗಿ ಗೆಳೆಯರು ತಮ್ಮ ಹದಿ ವಯಸ್ಸಿನಲ್ಲಿಯೇ ತಮ್ಮದೇ ಆದ ರೀತಿಯಲ್ಲಿ ಸಾಗಿರುವ ಸಂದರ್ಭದಲ್ಲಿಯೇ ದ.ರಾ.ಬೇಂದ್ರೆಯವರ, ಅವರ ಗೆಳೆಯರ ಸಂಪರ್ಕ ಪಡೆದು ತಮ್ಮ ಸಾಹಿತ್ಯಿಕ ಜೀವನವನ್ನು ಬೆಳೆಸಿಕೊಂಡರು.
4. ಗೆಳೆಯರ ಗುಂಪಿನೊಂದಿಗೆ ಅನನ್ಯವಾಗಿ ಬೆರೆತುಕೊಂಡರೂ ತಮ್ಮ ಗ್ರಾಮೀಣ ಬದುಕು, ಜನಪದ ಸಾಹಿತ್ಯ, ಅನುಭಾವದ ಚಿಂತನೆಗಳಲ್ಲಿ ತಮ್ಮ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದರು. ಅಂತೆಯೇ ಇವರನ್ನು ಹಲಸಂಗಿ ಗೆಳೆಯರು ಎಂದು ಗುರುತಿಸಲಾಗುತ್ತಿದೆ.
5. ಹಲಸಂಗಿ ಗೆಳೆಯರು ಸಾಹಿತ್ಯದ ಅಬಿರುಚಿಯನ್ನು ಬೆಳೆಸಿಕೊಂಡರು. ಜನಪದ ಸಾಹಿತ್ಯವನ್ನು  ಸಂಗ್ರಹಿಸಿದರು. ಅನುಭಾವದ ಚಿಂತನೆಯಲ್ಲಿ ನಾಡು ನುಡಿಯ ಸೇವೆಯಲ್ಲಿ, ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ಕಂಡುಕೊಂಡರು. ಇವರು ಅಚಲ ಸ್ನೇಹದಿಂದ ಕೊನೆಯವರೆಗೂ ಒಟ್ಟಾಗಿಯೇ ಕಾರ್ಯ ನಿರ್ವಹಿಸಿದರು. ಈ ದೃಷ್ಟಿಯಿಂದ ನವೋದಯದ ಸಂದರ್ಭದಲ್ಲಿ ಹಲಸಂಗಿ ಗೆಳೆಯರಿಗೆ ಪ್ರತ್ಯೇಕವಾದ ಅಸ್ತಿತ್ವವಿದೆ ಚಿ.ಶ್ರೀನಿವಾಸರಾಜು ಅವರು ‘ಮಧುರ ಚೆನ್ನರ ಬದುಕು ಬರಹ ಚಿಂತನೆ’ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.
6. ಹಲಸಂಗಿ ಗೆಳೆಯರೆಲ್ಲ ಹಲಸಂಗಿಯ ಸುತ್ತಮುತ್ತಲಿನವರು. ಹೆಚ್ಚಾಗಿ ಕೆಳಮಧ್ಯಮ ವರ್ಗದವರು, ಹಿಂದುಳಿದವರು. ಹೆಚ್ಚೆಂದರೆ ಮುಲ್ಕೀ ಪರೀಕ್ಷೆ ಪಾಸಾದವರು. ಕೃಷಿ ಸಮುದಾಯಕ್ಕೆ, ವ್ಯಾಪಾರ ವರ್ಗಕ್ಕೆ, ನೇಕಾರ ಕುಟುಂಬಕ್ಕೆ ಸೇರಿದವರಾದರೂ ಸಮಾನಮನಸ್ಕರಾಗಿ ಸಹಜವಾಗಿ ಹತ್ತಿರವಾದ ಗೆಳೆಯರು. ಆದರೆ ಧಾರವಾಡ ‘ಗೆಳೆಯರ ಗುಂಪಿ’ನವರು ಮುಂದುವರಿದವರು. ನಗರ ಕಡೆ ಆಕಷರ್ಿತರಾದವರು. ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಇಂಗ್ಲಿಷ್ ಬಲ್ಲವರು. ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಬೇಂದ್ರೆಯವರ ಕಣ್ಣು ಕೋರೈಸುವ ಆಕರ್ಷಕ ವ್ಯಕ್ತಿತ್ವದಿಂದ ಹತ್ತಿರವಾದ ಗೆಳೆಯರು.
7. ಹಲಸಂಗಿ ಗೆಳೆಯರ ಗುಂಪು ಧಾರವಾಡದ ಗೆಳೆಯರ ಗುಂಪಿನೊಂದಿಗೆ ಒಂದು ಸ್ಪರ್ಶರೇಖೆಯಾಗಿ ಬಂದು ಹೋಯಿತು. ಧಾರವಾಡದ ಗೆಳೆಯರ ಗುಂಪಿನ ಆಯುಷ್ಯ  ಹತ್ತು ಹದಿನೈದು ವರ್ಷಗಳಾದರೆ, ಹಲಸಂಗಿ ಗೆಳೆಯರ ಗುಂಪಿನ ಆಯುಷ್ಯ ಆ ಗೆಳೆಯರು ಇರುವತನಕ.
8. ಧಾರವಾಡದ ಗೆಳೆಯರ ಗುಂಪಿನ ನೇತೃತ್ವವಹಿಸಿದ  ದ.ರಾ.ಬೇಂದ್ರೆ ಮತ್ತು ಹಲಸಂಗಿ ಗೆಳೆಯರ ಮುಂದಾಳು ಮಧುರಚೆನ್ನರ ಸಂಬಂಧ ವಿಶಿಷ್ಟವಾದದ್ದು. ಧಾರವಾಡಕ್ಕೂ ಹಲಸಂಗಿಗೂ ಇನ್ನೂರು ಮೈಲುಗಳ ಅಂತರವಿದ್ದರೂ ಅವರು ‘ನಲ್’ ಸಿದ್ಧಾಂತದ ಹಿನ್ನೆಲೆಯಲ್ಲಿ ಕೂಡಿದ್ದು ಒಂದು ವಿಸ್ಮಯ. 1923ರಲ್ಲಿ ಬೇಂದ್ರೆಯವರು ಬರೆದ ‘ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ’ ಎಂಬ ಕವನದ ಸಾಲು ಅವರಿಬ್ಬರ ಗೆಳೆತನಕ್ಕೆ ಸಾಕ್ಷಿ. ಆದರೆ ಸಿಂಪಿ ಲಿಂಗಣ್ಣನವರು ‘ದತ್ತ ಸಾಹಿತ್ಯ’ದಲ್ಲಿ, ಬೇಂದ್ರೆಯವರ ಸಂಬಂಧ ಬಹು ವರ್ಷಗಳಿಂದ ಇದ್ದರೂ ಅವರು ನನಗೆ ಗೆಳೆಯರೂ ಆಗಿಲ್ಲ; ಅಣ್ಣನು ಆಗಿಲ್ಲ. ಅವರ ನನ್ನ ಬೆನ್ನ ಬಳಿ ವಿಶಾಲ ವೃಕ್ಷವೂ ಬೆಳೆದಿಲ್ಲವೆಂದು ಮೊದಲು ಸೂಚಿಸಿದ್ದಾರೆ. ಇದು ಹಲಸಂಗಿ ‘ಗೆಳೆಯರ ಗುಂಪೇ’ ಬೇರೆ ಧಾರವಾಡದ ಗೆಳೆಯರ  ಗುಂಪೇ ಬೇರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
9. ಧಾರವಾಡ ಗೆಳೆಯರ ಗುಂಪು ಮುರಿದು ಬಿದ್ದ ರೀತಿಯನ್ನು ಬೇಂದ್ರೆಯವರು ತಮ್ಮ ‘ಭಾವಗೀತೆ’ ಕವನದಲ್ಲಿ ಸೂಚಿಸಿದ್ದಾರೆ. 1933ರ ಶ್ರಾವಣದಲ್ಲಿ ಗೆಳೆಯರ ಗುಂಪಿನ ಶ್ರಾದ್ಧ ಮುಗಿಸಿಕೊಂಡೆ (ಸಾಹಿತ್ಯ ವಿರಾಟ್ ಸ್ವರೂಪ, ದ.ರಾ.ಬೇಂದ್ರೆ, ಪುಟ 90) ಎಂಬ ಬೇಂದ್ರೆ ಉಲ್ಲೇಖ ‘ಭಾವಗೀತ’ ಕವನದ ಶ್ರದ್ಧಾಂಜಲಿ ಅರ್ಥವನ್ನು ಸ್ಪಷ್ಟಪಡಿಸುತ್ತದೆ. ಈ ಒಡೆಯುವ ಆಟ ಹಲಸಂಗಿ ಗೆಳೆಯರಲ್ಲಿ ನಡೆಯಲಿಲ್ಲ.
10. ಬೇಂದ್ರೆಯವರು ಗೆಳೆಯರ ಗುಂಪಿನ ಶ್ರಾದ್ಧದ ಪೂರ್ವದಲ್ಲಿ ಒಚಿ ಚಿಜ ಣಠ ಆಚಿ ಎಂದು ಒಂದು  ಕವನ ಬರೆದಿದ್ದರು. ಅದರಲ್ಲಿ ಗೆಳೆಯರ ಗುಂಪಿನ ವೃಕ್ಷದ ಸ್ವತಂತ್ರ ಶಾಖೆ ಆತ (ಮಧುರಚೆನ್ನ) ಎಂದು ಬರೆಯಲಾಗಿತ್ತು. ಈ ಕವನದಲ್ಲಿ ಒಚಿ ಎಂಬುದು ಒಚಿಣಜಡಿ ಮಾಸ್ತರ ಇದರ ಸಂಕ್ಷಿಪ್ತ ರೂಪ. ಇವರು ಬೇಂದ್ರೆಯವರು. ಆಚಿ ದಾದಾ ಗೋಕಾಕರ ಸಂಕೇತ ನಾಮವಾಗಿದ್ದಂತೆ ಅಜ ಎಂಬುದು ಚೆನ್ನಮಲ್ಲಪ್ಪ-ಹಲಸಂಗಿ-ಮಧುರಚೆನ್ನರ ಸಂಕೇತ ನಾಮವಾಗಿತ್ತು. ಈ ಕವನವನ್ನು ಸಂಬಂಧಪಟ್ಟ ಒಚಿ ಹಾಗೂ ಅಜ ಅವರಿಗೆ ತೋರಿಸಿ, ಕಳೆದುಕೊಂಡು  ಬಿಟ್ಟವರು ಬೇಂದ್ರೆ. ಅದನ್ನು ಜೋಪಾನವಾಗಿ ರಕ್ಷಿಸಿದವರು ಮಧುರಚೆನ್ನರು.ಎಂಬುದನ್ನು ವಾಮನ ಬೇಂದ್ರೆ ಯವರು ‘ಗೆಳಯರ ಗುಂಪು ಕೃತಿಯಲ್ಲಿ ದಾಖಲಿಸಿದ್ದಾರೆ. ಇಲ್ಲಿ ಬೇಂದ್ರೆಯವರು ಸ್ವತಂತ್ರ ಶಾಖೆ ಎಂಬಲ್ಲಿ ಹಲಸಂಗಿ ಗೆಳೆಯರ ಗುಂಪು ಒಂದು ಸ್ವತಂತ್ರ ಅಸ್ತಿತ್ವ ಪಡೆದುಕೊಂಡದ್ದು, ಆ ಗೆಳೆಯರಲ್ಲಿ ತಮ್ಮನ್ನು ಮಧುರಚೆನ್ನರ ‘ಸಖ್ಯ’ ಕಾರಣವಾಗಿ ಬೇಂದ್ರೆಯವರು ಗುರುತಿಸಿಕೊಂಡದ್ದು ಗಮನಿಸಬೇಕು.
11. ಗುಂಪು ಒಂದು ಸಂಘಟನಾಬದ್ಧ ಸಂಘವಲ್ಲ. ಎಲ್ಲ ಗೆಳೆಯರೂ ಅಲ್ಲಲ್ಲಿ ಸಖ್ಯಯೋಗವನ್ನು ತೊಡಗಿ ಕೇಂದ್ರ ಆದ ಧಾರವಾಡಕ್ಕೆ ಸಂಬಂದಿಸಿದಂತೆ ನಡೆಯುತ್ತಿದ್ದರು. ಹಲಸಂಗಿಯಲ್ಲಿ ಚೆನ್ನಮಲ್ಲಪ್ಪನ ಗುಂಪೇ ಒಂದು, ಧಾರವಾಡದಲ್ಲಿ ಬೇಂದ್ರೆಯವರ ಓರಿಗೆಯ ಗುಂಪು ಒಂದು.’ ಎಂದು  ಸಿದ್ದವನಹಳ್ಳಿ ಕೃಷ್ಣಶರ್ಮ ಅವರು ಸಂಯುಕ್ತ ಕನರ್ಾಟಕ 7.3.1970 ರಲ್ಲಿ ಬರೆದ ‘ಹಳೆಯ ನೆನಪುಗಳು ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ.
12. ಧಾರವಾಡ ಗೆಳೆಯರ ಗುಂಪಿನ ಜೊತೆಗೆ ಹಲಸಂಗಿ ಗೆಳೆಯರ ಗುಂಪು ಸಾಹಿತ್ಯದಲ್ಲಿ ತೊಡಗಿತ್ತು. ಈ ಎರಡೂ ಗುಂಪುಗಳ ಸಂಬಂಧ ನಿಕಟವಾಗಿದ್ದರೂ ಅವೆರಡೂ ಪ್ರತ್ಯೇಕವಾಗಿ ಬೆಳೆದು ಬಂದವು. ಬೇಂದ್ರೆ ಮತ್ತು ಮಧುರಚೆನ್ನರ ಸ್ನೇಹಸಂಬಂಧ ಕೊನೆಯವರೆಗೂ ನಡೆದು ಬಂದಿತ್ತು ಎಂದು ಕೀತರ್ಿನಾಥ ಕುರ್ತಕೋಟಿ ಅವರು ‘ನೂರು ಮರ ನೂರು ಸ್ವರ ‘ಕೃತಿಯಲ್ಲಿ ಹೇಳಿದ್ದಾರೆ.
ಹೀಗೆ ಧಾರವಾಡ ಗೆಳೆಯರ ಗುಂಪಿನಿಂದ ಪ್ರತ್ಯೇಕವಾಗಿ ತನ್ನ ಅಸ್ತಿತ್ವವನ್ನು ಹೊಂದಿರುವ ‘ಹಲಸಂಗಿ ಗೆಳೆಯರ ಗುಂಪು’ ನವೋದಯ ಸಾಹಿತ್ಯದ ಒಂದು ಪ್ರತ್ಯೇಕ, ಸ್ವತಂತ್ರ ಕೇಂದ್ರವಾಗಿ ಗುರುತಿಸಿಕೊಳ್ಳಲು ಅರ್ಹವಾದುದು. ಹಲಸಂಗಿ ಗೆಳೆಯರು ಬರೆಯುತ್ತಿದ್ದ ಕಾಲಕ್ಕೆ ರಾಷ್ಟ್ರೀಯ ಆಂದೋಲನ ಅವರನ್ನು ತೀವ್ರವಾಗಿ ತಟ್ಟಿತು. ಹಲಸಂಗಿ ಗೆಳೆಯರನ್ನು ಒಂದುಗೂಡಿಸಿದ ಪ್ರೇರಣೆಗಳು ಹೀಗಿವೆ. ಆಧ್ಯಾತ್ಮದಲ್ಲಿ ಅದಮ್ಯ ಆಸಕ್ತಿಯಿಂದ ಮೂಡಿದ ದೇವ ಭಕ್ತಿ, ನವೋದಯ ಕಾಲದ ಹಿರಿಯ ಸಾಹಿತಿಗಳ ಪ್ರಭಾವದಿಂದ ನಾಡು ನುಡಿ ಪ್ರೇಮ, ಹಳ್ಳಿಯ ಜನ ಜೀವನ ಗಾಢ ಸಂಪರ್ಕದಿಂದ ಜಾನಪದ ಮತ್ತು ಮಾನವ ಪ್ರೇಮ ಈ ಎಲ್ಲದರ ಜೊತೆಗೆ ಅವರಲ್ಲಿನ ಜನ್ಮಜಾತ ಪ್ರತಿಭಾ ಶಕ್ತಿ ಈ ಗೆಳೆಯರನ್ನು ಒಂದು ಮಾಡಿತು ಎಂದು ಹಲಸಂಗಿ ಪರಿಸರದ ವಿದ್ವಾಂಸರಾದ ಎನ್.ಜಿ.ಕರೂರ ‘ಹಲಸಂಗಿ ಗೆಳೆಯರ ಜೀವನ ಸಾಧನೆ’ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಮಧುರ ಚೆನ್ನರೇ ಹಿರಿಯಣ್ಣ :
ಹಲಸಂಗಿ ಗೆಳೆಯರ ಗುಂಪಿಗೆ ಮಧುರಚೆನ್ನರೇ ಹಿರಿಯಣ್ಣ. ಈ ಗುಂಪಿನಲ್ಲಿ ಸಿಂಪಿ ಲಿಂಗಣ್ಣ, ಪಟೇಲ ಧೂಲಾ ಸಾಹೇಬ, ಕಾಪಸೆ ರೇವಪ್ಪ, ಓಲೇಕಾರ ಮಾದಣ್ಣ, ರೇವಣಸಿದ್ದಪ್ಪ ಮದಭಾವಿ, ಚೆನ್ನಮಲ್ಲವ್ವ ಸರಸಂಬಿ, ವಿಜಾಪುರದ ಬಸಣ್ಣ ಅಕ್ಕಿ, ಪದ್ಮರಾಜ ಹುನಗುಂದ, ಚಡಚಣದ ಗುರುಪಾದಪ್ಪ ಜೀರಂಕಲಗಿ, ಅಗರಖೇಡದ ಅಣ್ಣಾರಾವ ಪಾಟೀಲ ಮುಂತಾದವರು ಸೇರಿದ್ದರು. 1921ರಲ್ಲಿಯೇ ಒಟ್ಟಿಗೆ ಮುಲ್ಕೀ ಪರೀಕ್ಷೆ ಬರೆದ ಮಧುರಚೆನ್ನರು ಹಾಗೂ ಪಿ.ಧೂಲಾ ಸಾಹೇಬರು ಗೆಳೆಯರಾಗಿದ್ದರು. 1922ರಲ್ಲಿ ಚಡಚಣದ ಸಿಂಪಿ ಲಿಂಗಣ್ಣನವರು ಮುಲ್ಕೀ ಪರೀಕ್ಷೆ ಬರೆದು ಮಧುರಚೆನ್ನರಂತೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು, ಈ ಗೆಳೆಯರು ಶೈಕ್ಷಣಿಕವಾಗಿ ಹತ್ತಿರವಾದರು. 1922ರಲ್ಲಿ ‘ಶಾರದಾ ವಾಚನಾಲಯ’ ಸ್ಥಾಪಿಸಿ ಹಲಸಂಗಿಯ ಸಾಂಸ್ಕೃತಿಕ ಹಬ್ಬಕ್ಕೆ ಕನ್ನಡ ನುಡಿದೇವಿಯ ತೇರು ಸಜ್ಜು ಮಾಡಿದರು. ಆ ಹೊತ್ತಿಗೆ 1700ರಷ್ಟು ಜನಸಂಖ್ಯೆ ಇದ್ದ ಹಲಸಂಗಿಯ ಶಾರದಾ ವಾಚನಾಲಯದಲ್ಲಿ 591ರಷ್ಟು ಪುಸ್ತಕ ಸಂಗ್ರಹಿಸಿ ಒಂದು ವರ್ಷದಲ್ಲಿ 1759 ಸಲ ಓದಲಿಕ್ಕೆ ಜನರು ಪುಸ್ತಕಗಳನ್ನು ಒಯ್ದಿರುವುದು ಒಂದು ದಾಖಲೆಯೇ ಸರಿ. ಜನಪದ ಹಾಡುಗಳ ಸಂಗ್ರಹ, ಸಂಪಾದನೆ, ಪ್ರಕಟಣೆ ಹಾಗೂ ಉಪನ್ಯಾಸ, ನಾಡಹಬ್ಬ ಆಚರಣೆ, ಗಣೇಶೋತ್ಸವ, ಶ್ರೀ ರಾಮಕೃಷ್ಣ ಪರಮಹಂಸರ ಜನ್ಮ ಶತಸಾವಂತ್ಸರಿಕೋತ್ಸವ, ವಿಜಯನಗರ ಸ್ಮಾರಕೋತ್ಸವ, ಶ್ರೀ ಅರವಿಂದ ಮಂಡಳ ಸ್ಥಾಪನೆ ಮುಂತಾದ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತ್ತು  ಈ ಕಾರ್ಯಕ್ರಮಗಳಿಗೆ ಬೇಂದ್ರೆ, ಕಾರಂತ, ಮಾಳವಾಡ ಮೊದಲಾದವರನ್ನು ಬರಮಾಡಿಕೊಳ್ಳುವ ಮೂಲಕ ಉತ್ತರ ಕನರ್ಾಟಕದ ಬಿರು ಬಿಸಿಲಿನ ಒಂದು ಸಣ್ಣ ಹಳ್ಳಿಯಾಗಿದ್ದ ‘ಹಲಸಂಗಿ’ ಯನ್ನು ಕನರ್ಾಟಕದಲ್ಲಿ ಗುರುತಿಸುವಂತೆ ಮಾಡಿದ್ದು ಸಣ್ಣ ಸಾಧನೆಯೇನಲ್ಲ.
ಒಂದು ಪ್ರತ್ಯೇಕ ಅಸ್ತಿತ್ವವಾಗಿ ಹಲಸಂಗಿ ಗೆಳೆಯರ ಗುಂಪು ಗುರುತಿಸಿಕೊಂಡರೂ ಬೇಂದ್ರೆ ಮತ್ತು ಮಧುರಚೆನ್ನರ ಸಂಬಂಧ ಕೊನೆಯವರೆಗೂ ಉಳಿದಿತ್ತು. ಇದನ್ನು ಗುರುಲಿಂಗ ಕಾಪಸೆಯವರು ‘ಸಖ್ಯಯೋಗ’ ವೆಂದು ಗುರುತಿಸಿದ್ದಾರೆ. ಈ ಸಖ್ಯಯೋಗ ಮಧುರಚೆನ್ನರಿಗೆ ಆಧ್ಯಾತ್ಮದ ಅನುಭಾವದ ದಾರಿ ತೆರೆದರೆ, ಬೇಂದ್ರೆಯವರಿಗೆ ಜಾನಪದದ ನುಡಿ ಔನ್ನತ್ಯದ ಸವಿ ಲಾಲಿಯಾಯಿತು. ಜಾನಪದವನ್ನು ಮೈಗೂಡಿಸಿಕೊಂಡೂ ‘ಅನುಭಾವದ ಹೊತ್ತಿಗೆ’ಯನ್ನು ಮಧುರಚೆನ್ನರು ತುಂಬಿದರೆ, ವೈದಿಕ ಪರಂಪರೆಯಿಂದ ಬಂದ ಬೇಂದ್ರೆಯವರು ‘ಜಾನಪದ ಗಾರುಡಿಗ’ರಾಗಿ ತೋರಿದರು. ಒಂದೆಡೆ ಅನುಭಾವ ಜಾನಪದ ಇರ್ವರಲ್ಲೂ ಚಾಪೆಯ ಹೆಣಿಕೆಯಂತೆ ಬೆಸೆದುಕೊಂಡು ಕನ್ನಡ ನವೋದಯ ಕಾವ್ಯಕ್ಕೆ ‘ಬಿತ್ತಿದರೆ ಬಿತ್ತುವುದು ಮುಕ್ಕುಚಿಕ್ಕೆಯ ಕಾಳು ಮುತ್ತು ರತುನವ ಬಿತ್ತಿ ಮಾಡದಿರು ಹೊಲಹಾಳು, ಜೀವವನು ಚಾಚಿ, ಮುಗಿಲಂಗಳಕೆ ಹಚ್ಚಿ, ದೇವನೊಡ ನುಡಿವಂತೆ ಮಾಡುಮೆಚ್ಚಿ’ ‘ಏಳು ಮಲಗಿದೆಯೇಕೆ ಶರಣ ನಾಡೇ’ ಎಂದು ಸನಾತನ ಕಾವ್ಯದೇವಿಗೆ ಜಾನಪದದ ಪಟ್ಟಗಟ್ಟಿ ನಾಡತುಂಬಾ ನಾದವಾಗಿ ಹಾಡಿನ ಮಳೆಗರೆದರು. ಅವರಿಬ್ಬರೂ,
‘ಅದಯರಿದ್ದವರೆಲ್ಲ ಸದಯರಾಗುವಂತೆ
ವ್ಯೋಮ ಮಂಡಲ ಸುಖಧಾಮವಾಗುವಂತೆ
ಶರಣದ ದಾಸರ ಕರುಣೆ ಕಿರಣಿಸುವಂತೆ
ತನ್ನತನವನ್ನರಿತು ಬಿನ್ನಭಾವವ ಮರೆತು
ಕನ್ನಡ ನಾಡ ಚೆನ್ನರೇಳುವಂತೆ’
ಹಾಡಿನಲ್ಲಿ, ನಡೆಯಲ್ಲಿ, ನುಡಿಯಲ್ಲಿ ತಮ್ಮೊಬ್ಬರ ಮಟ್ಟಿಗಲ್ಲದೆ ಗುಂಪು ಕಟ್ಟಿಕೊಂಡು ತಮ್ಮ ವಾಣಿಯನ್ನು ಗದ್ಯದಲ್ಲಿ, ಪದ್ಯದಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಪಡಿಮೂಡಿಸುತ್ತ ಬಂದರು.
ಹಲಸಂಗಿ ಗೆಳೆಯರ ಜನಪದಗೀತ ಸಂಪಾದನಾ ಕಾರ್ಯ :
ಹಲಸಂಗಿ ಗೆಳೆಯರು ಕನ್ನಡ ಜಾನಪದ ಅಧ್ಯಯನಕ್ಕೆ ಮೊದಲ ನೇಗಿಲಪೂಜೆ ನೆರವೇರಿಸುವುದರೊಂದಿಗೆ ಕನ್ನಡ ಕಾವ್ಯಕ್ಕೆ ದೇಸೀಯತೆಯ ಸತ್ವ ಶಕ್ತಿ ತುಂಬಿದರು. ನವೋದಯ ಸಾಹಿತ್ಯದ ಪ್ರಾರಂಭದ ಘಟ್ಟದಲ್ಲಿಯೇ ಗ್ರಾಮೀಣ ಪರಿಸರದಲ್ಲಿದ್ದು ಇವರು ಸಾಹಿತ್ಯ ಕೃಷಿಗೆ ತೊಡಗಿದ್ದು ವಿಶೇಷವಾಗಿದೆ. ಜನಪದ ಸಾಹಿತ್ಯ ಗಾಂಪರ ಸಾಹಿತ್ಯವೆನ್ನುತ್ತಿದ್ದ ಕಾಲಮಾನದಲ್ಲಿ ಅವರು ಈ ಕಾರ್ಯವನ್ನು ಶ್ರದ್ದೆಯಿಂದ ಮಾಡಿ ಪಂಡಿತ ಮಾನ್ಯರನ್ನು ಬೆರಗುಗೊಳಿಸಿದರಷ್ಟೇ ಅಲ್ಲ ಜನಪದ ಸಾಹಿತ್ಯ ಸಂಶೋಧನೆಯ ಅಧ್ಯಯನದ ವಿಷಯವಾಗಿ ಅದಕ್ಕೊಂದುಸ್ಥಿರವಾದ ನೆಲಗಟ್ಟನ್ನು ಒದಗಿಸಿಕೊಟ್ಟರು. ಹಲಸಂಗಿ ಗೆಳೆಯರ ಜಾನಪದ ಆಸಕ್ತಿಗೆ ಕಾರಣವಾದ ಸಂದರ್ಭವೂ ರೋಚಕವಾದುದು. ಆ ಕಾಲಕ್ಕೆ ಆಧುನಿಕತೆ ನಮ್ಮ ಹಳ್ಳಿಗಳನ್ನು ಇನ್ನೂ ಪ್ರವೇಶಮಾಡದ ಹೊತ್ತಿಗೆ ಜನಸಾಮಾನ್ಯರ ಜ್ಞಾನದ ಭಂಡಾರದ ವಿದ್ಯಾಲಯಗಳಾಗಿ ಜನಪದರ ಹಾಡು ಸಂಸ್ಕೃತಿ ಕೆಲಸ ಮಾಡುತ್ತಿದ್ದವು. ಯಾವುದೇ ಹಬ್ಬ ಹರಿದಿನವಿರಲಿ, ಹುಟ್ಟು, ಬದುಕು, ಸಾವು, ನೋವು, ನಲಿವು ಸಂಭ್ರಮವಿರಲಿ ಅಲ್ಲಿ ಹಾಡುಕಟ್ಟಿ  ಹಾಡುತ್ತಿದ್ದ, ಅಕ್ಷರ ಬಾರದ ಆದರೆ ಅಪಾರ ತಿಳುವಳಿಕೆಯುಳ್ಳ ನಮ್ಮ ಜನಪದ ಕವಿಗಳು ರಚಿಸಿ ಹಾಡಿದ ಈ ಮೌಖಿಕ ಪರಂಪರೆಯ ಅಮೂಲ್ಯ ಸಾರಸ್ವತಕೆ ಅಂತ್ಯವೆಂಬುದೇ ಇಲ್ಲ. ನಿಲುಗಡೆ ಇದ್ದರೂ ಅದು ಮತ್ತೊಂದು ಕಡೆ ಆರಂಭವಾಗಿ ನಿರಂತರತೆಯನ್ನು ಕಾಯ್ದುಕೊಂಡದ್ದು ನಮ್ಮ ಜನಪದ ಗೀತೆಗಳು ಪ್ರಯೋಗಶೀಲತೆಯ ಕಾಣ್ಕೆಗಳು. ಅವು ಬದಲಾಗುತ್ತಿರುವ ಗುಣವನ್ನು ಪಡೆದಿವೆ. ಆದರೆ ಅವು ಸ್ಥಿರವಾಗಿ ನಿಲ್ಲುವ ಪ್ರದರ್ಶನಶೀಲತೆ ಮೈಗೂಡಿಸಿ ಕೊಂಡಿಲ್ಲ. ಅಲ್ಲಿ ಬೀಜವೂ ಇದೆ, ಫಲವೂ ಇದೆ. ಹೀಗಾಗಿ ನಮ್ಮ ಜನಪದರು ನಡೆಸಿದ ಕ್ರಾಂತಿ ವಿಕಸನ ರೂಪ ಪಡದುಕೊಳ್ಳುತ್ತದೆಯೇ ಹೊರತು ಇದ್ದಕ್ಕಿದ್ದ ಹಾಗೆ ಸ್ಪೋಟಗೊಳ್ಳುವ ಆಂದೋಲನ ವಾಗುವುದಿಲ್ಲ. ಈ ಬದಲಾಗುವ, ವಿಕಸನಗೊಳ್ಳುವ ಹಾಗೂ ಬೀಜ ಫಲವಾಗುವ, ಫಲ ಬೀಜವಾಗುವ ಈ ಚಕ್ರೀಯ ಚಲನಶೀಲತೆಯಲ್ಲಿ ಕನ್ನಡ ನವೋದಯ ಕಾವ್ಯ ಹಲಸಂಗಿ ಪರಿಸರದಿಂದ ಪ್ರವೇಶ ಪಡೆಯಿತು.
ಕೃಷಿಕರ ನೆಲೆವೀಡಾದ ಈ ‘ಹಲಸಂಗಿ’ಯು ಅಶಿಕ್ಷಿತ ಜನಸಮುದಾಯದಿಂದ ಕೂಡಿದ್ದರೂ ಲಾವಣಿಕಾರ ಖಾಜಾಸಾಹೇಬನ ಹಾಡುಗಳಿಂದ ದುಮಿದುಮಿಸುತ್ತಿತ್ತು. ಅಲ್ಲಿಯ ತರುಣ ಮನಸ್ಸುಗಳಷ್ಟೇ ಅಲ್ಲ ಆ ಊರಿನ ನವಿಲುಗಳೂ ಖಾಜಾನ ಲಾವಣಿಗಳನ್ನು ಕೇಳಿ ಗರಿಗೆದರಿ ಕುಣಿಯುತ್ತಿದ್ದವು. ಮಧುರಚೆನ್ನರೂ ಅವರ ಗೆಳೆಯರೂ ಆಗ ಹದಿಹರಯದ ತರುಣರೇ.ಹುಟ್ಟು ಪ್ರತಿಭಾವಂತರಾದ ಮಧುರಚೆನ್ನರು ತಮ್ಮ ಬಾಲ್ಯದಲ್ಲಿ ಖಾಜಾ ಸಾಹೇಬನನ್ನೂ ಪ್ರತ್ಯಕ್ಷವಾಗಿ ಕಂಡಿದ್ದರು. ಅವನ ಲಾವಣಿಗಳಿಗೆ ಮಾರು ಹೋಗಿದ್ದರು. ಖಾಜಾ ಬಾಯಿಯ ಲಾವಣಿಗಳ ಕೆಲವು ಸಾಲುಗಳನ್ನು ಮಧುರಚೆನ್ನರು ಉಲ್ಲೇಖಿಸುತ್ತಾರೆ.
… ನಾಗಿಣೀ ನೋಡ ತಿರುಗಿ ||
ಮರಿಗುದರಿ ಕುಣಿಸಿದಂಗ ನಾಜೂಕ ನಿನ ನಡಿಗಿ |
ಹೊಳಿ ನೀರ ಥೆರಿಯ ಹೊಡದಂಗ ಒದುತೆ ನಿಲಗಿ ||
ಗರಾ ಗರಾ ತಿರವತೇಕಣ್ಣ
ಕೆಂಪು ಮೈ ಬಣ್ಣ
ಬೇತಲ ಸಣ್ಣ | ಕತ್ತಿಧಾರಿ ||
ನಿನ ಶಬ್ದ ಕೇಳಿ ಆಯ್ತು ಲುಬ್ದ ||
ಕೋಗಿಲ ನಾಚಿ ಕದ್ದ |
ವನಾ ಬಿಟ್ಟು ಎದ್ದ | ಹೋಯ್ತ ಹಾರಿ ||
ಖಾಜಾಬಾಯಿಯ ಈ ಕವಿತೆಗಳನ್ನು ಹಿಡಿದಿಡುವ ಮೂಲಕ ಮಧುರಚೆನ್ನರು ಅವರೊಬ್ಬ ನಿಜವಾದ ವರಕವಿ ಎಂದು ಸಾರುತ್ತಾರೆ. ಕನ್ನಡ ನವೋದಯಕ್ಕೆ ಇಂಥ ರಚನೆಗಳನ್ನು ಮೊದಲ ಬಾರಿಗೆ ಕೊಡುವ ಮೂಲಕ ನವೋದಯದ ಬಾಗಿಲುಗಳು ಜನಪದರ ಮೂಲಕ ತೆರೆದುಕೊಳ್ಳುತ್ತವೆ.
ಖಾಜಾಬಾಯಿಯ ಲಾವಣಿಗಳಲ್ಲದೆ ಹಲಸಂಗಿ ನಾಡಿನ ಹತ್ತಿರದ ಹದರಿಯ ಬಡೇಶಾ, ಜಾಣ ಕೊಟಗಿ ನಬೀಶಾ, ಕ್ವಾರಳ್ಳಿಯ ರಾಮಚಂದ್ರ, ಸಂಗಣ್ಣ, ಶಿವಲಿಂಗ ಮೊದಲಾದವರ ಲಾವಣಿಗಳನ್ನು ಮಧುರಚೆನ್ನರು ಕೇಳಿದ್ದರು. ಈ ಜನಪದ ಸಾಹಿತ್ಯದ ಸವಿ ಅವರನ್ನು ಆಕಷರ್ಿಸಿತು. ಆಗ ಮರಾಠಿಯಲ್ಲಿ, ಬಂಗಾಲಿಯಲ್ಲಿ ಜನಪದ ಸಾಹಿತ್ಯದ ಕೆಲಸ ನಡೆದುದನ್ನು ತಿಳಿದುಕೊಂಡರು. ಹಲಸಂಗಿಯಲ್ಲಿಯೇ ಲಾವಣಿ, ಗರತಿಯ ಹಾಡು ಇತ್ಯಾದಿ ಗೀತೆಗಳು ಹೇರಳವಾಗಿ ಅವರ ಕಿವಿಗೆ ಬೀಳುತ್ತಿರುವ ಸಂದರ್ಭದಲ್ಲಿ ಅವನ್ನೆಲ್ಲ ಕಲೆ ಹಾಕಬಾರದೇಕೆ ಎಂದು ಯೋಚಿಸತೊಡಗಿದರು. ಅವರೂ ಅವರ ಗೆಳೆಯರಾದ ಪಿ.ಧೂಲ ಸಾಹೇಬರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿದರು.  ಇವರಿಬ್ಬರೂ ಅದೇ ತಾನೇ ಕವಿಗಳಾಗಿ ಬೆಳೆಯಲು ಪ್ರಾರಂಬಿಸಿದ್ದರಿಂದ ಜನಪದ ಹಾಡುಗಳ ಸ್ವಾರಸ್ಯಕ್ಕೆ ತಲೆದೂಗತೊಡಗಿದರು. ಈ ಚಿಂತನೆ ಇಡೀ ಕನ್ನಡ ಕಾವ್ಯದ ಮುಂಬೆಳಕಿನ ತಿರುವು ಜಾನಪದದ ಹಿನ್ನೆಲೆಯಲ್ಲಿ ಹೊರಳುತ್ತಿರುವ ಹೊಳವು ನೀಡಿತು.
ಉತ್ತರ ಕನರ್ಾಟಕದ ಹಳ್ಳಿಗಳಲ್ಲಿ ಹಾಡಿಕೊಂಡು ಬರಲಾಗುತ್ತಿರುವ ಮೌಖಿಕ ಕಾವ್ಯ ಪರಂಪರೆಯ ಹೃದಯಂಗಮ ಪಳೆಯುಳಿಕೆಗಳಾಗಿರುವ ವೈವಿಧ್ಯಪೂರ್ಣ ಜನಪದ ಹಾಡುಗಳಿಗೆ ವ್ಯಾಪಕತೆಯನ್ನು ತರುವ ಕೆಲಸಕ್ಕೆ ಈ ಮಹನೀಯರು ಶ್ರೀಕಾರ ಹಾಕಿದರು. ಆ ಕಾಲಕ್ಕೆ ವಿಜಾಪುರದಲ್ಲಿ 1923ರಲ್ಲಿ 9ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವ ಸುಸಮಯ. ಇದೇ ಹೊತ್ತಿಗೆ ಹಳ್ಳಿಗರ ಸಾಹಿತ್ಯವನ್ನು ವ್ಯಾಪಕಗೊಳಿಸುವ ಹಂಬಲ ಹಲಸಂಗಿ ಗೆಳೆಯರಿಗೆ. ಈ ಕಾರಣವಾಗಿ ವಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ಸಾಹಿತ್ಯ ಕುರಿತು ಪ್ರಬಂಧ ಮಂಡಿಸಲು ಸಿದ್ಧತೆ ಮಾಡಿಕೊಂಡರು. ಮಧುರಚೆನ್ನರು ‘ಹಳ್ಳಿಯ ಹಾಡುಗಳು’ ಎಂಬ ಪ್ರಬಂಧವನ್ನು ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಪ್ರಬಂಧವನ್ನು ಆ ಸಾಹಿತ್ಯ ಸಮ್ಮೇಳನದಲ್ಲಿ ಓದಿದರು. ಕನ್ನಡ ಸಾಹಿತಿಗಳ, ವಿದ್ವಾಂಸರ, ಜನಸಾಮಾನ್ಯರ ಲಕ್ಷ್ಯವನ್ನು ಮೊದಲ ಬಾರಿಗೆ ಜನಪದ ಸಾಹಿತ್ಯದತ್ತ ಸೆಳೆದರು. ‘ಕನ್ನಡದಲ್ಲಿ ಜಾನಪದ ಅಧ್ಯಯನವನ್ನು ಪ್ರಾರಂಬಿಸಿದವರು ಯಾರು ಎಂಬ ಪ್ರಶ್ನೆಗೆ
ಕೆಲವರು ಮಾಸ್ತಿಯವರು ಅನ್ನುತ್ತಾರೆ.
ಆದರೆ ವಿಜಾಪುರದ ಒಂಬತ್ತನೆಯ ಸಾಹಿತ್ಯ ಸಮ್ಮೇಳನದ (1923) ಸಂದರ್ಭದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಬಗ್ಗೆ ಮಧುರಚೆನ್ನರು ಮಂಡಿಸಿದ ಬರಹ 1924ರ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’ಯಲ್ಲಿ ಪ್ರಕಟವಾಗಿದೆ. ಇದರಿಂದಾಗಿ ಜಾನಪದದ ಬಗ್ಗೆ ವಿಚಾರ ಮಾಡಿದ ಮೊದಲಿಗರು ಮಧುರಚೆನ್ನರೇ ಅನ್ನುವುದು ಸ್ಪಷ್ಟವಾಗಿದೆ. 1931ರಲ್ಲಿ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಇವರು ಕೂಡಿ ಪ್ರಕಟಿಸಿದ ‘ಗರತಿಯ ಹಾಡು’ ಕನ್ನಡದ ಮೊಟ್ಟ ಮೊದಲ ಜನಪದ ಹಾಡುಗಳ ಸಂಗ್ರಹ. ಇದರ ಯಶಸ್ಸು ಮುಖ್ಯವಾಗಿ ಮಧುರಚೆನ್ನರಿಗೇ ಸೇರಬೇಕು. ಈ ಜಾನಪದ ಸಂಗ್ರಹ ಕಾರ್ಯ ಬೇಂದ್ರೆಯವರ ಕಾವ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿತ್ತು ಎನ್ನುತ್ತಾರೆ ಡಾ.ಗುರುಲಿಂಗ ಕಾಪಸೆ ಅವರು. ಮಧುರಚೆನ್ನರು ಮತ್ತು ಅವರ ಗೆಳೆಯರು ಪ್ರಾರಂಬಿಸಿದ ಜಾನಪದ ಸಂಗ್ರಹ ಹಾಗೂ ಅಧ್ಯಯನ ಕಾರ್ಯ ಮುಂದೆ ಕನರ್ಾಟಕದಾದ್ಯಂತ ಉತ್ಸಾಹದಿಂದ ನಡೆದು ಈ ಬಗೆಯ ಕೆಲಸಗಳಿಗೆ ಪ್ರೇರಣೆಯಾದದ್ದಲ್ಲದೆ, ಜಾನಪದ ಅಧ್ಯಯನವು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಸೇರ್ಪಡೆಯಾಗುವುದಕ್ಕೂ ಹಿನ್ನೆಲೆಯಾಗಿದ್ದು, ಈಗ ಜಾನಪದ ಅಧ್ಯಯನ ಬಹುಮುಖವಾಗಿ ಬೆಳೆದಿದೆ.ನವೋದಯ ಕಾವ್ಯ ಅದೇ ತಾನೇ ರೂಪುಗೊಳ್ಳುವ ಯತ್ನದಲ್ಲಿತ್ತು. ಇಂಥ ಸಂದರ್ಭದಲ್ಲಿ ಮಧುರಚೆನ್ನರು ಜನಪದ ಗೀತೆಗಳ ಶ್ರೇಷ್ಠತೆಯನ್ನು ಅಬಿವ್ಯಕ್ತಗೊಳಿಸಿ ಆ ಕಾಲದ ಕವಿಗಳ ಆಕರ್ಷಣೆಗೆ ರಾಜಮಾರ್ಗ ಹಾಕಿಕೊಟ್ಟರು. ಜನಪದ ಸಾಹಿತ್ಯದಲ್ಲಿ ಆದ್ಯರಾದ ‘ಹಲಸಂಗಿ ಗೆಳೆಯರು’  ಸಾಂಘಿಕವಾಗಿಯೇ ಜನಪದ ಕಾವ್ಯ ಸಂಗ್ರಹವನ್ನು ಕೈಕೊಂಡರು. ಜನಪದ ತ್ರಿಪದಿಗಳ ಸಂಗ್ರಹ ಗರತಿಯ ಹಾಡು 1931ರಲ್ಲಿ ಪ್ರಕಟವಾಯಿತು. ಲಾವಣಿಗಳ ಸಂಕಲನ ‘ಜೀವನ ಸಂಗೀತ’ 1933ರಲ್ಲಿ ಹಾಗೂ ಹೆಣ್ಣು ಮಕ್ಕಳ ಜನಪದ ಗೀತೆಗಳ ‘ಮಲ್ಲಿಗೆ ದಂಡೆ’ 1935ರಲ್ಲಿ ಪ್ರಕಟವಾದವು.ಜೊತೆಗೆ ಅವರ ವಯಕ್ತಿಕ ಕವನಸಂಕಲನಗಳು ಪ್ರಕಟವಾದವು.ಮಧುರ ಚೆನ್ನರ ‘ನನ್ನ ನಲ್ಲ’,ಸಿಂಪಿ ಲಿಂಗಣ್ಣನವರ ‘ಮಿಲನ,ಮುಗಿಲ ಜೇನು,ಪ್ರಜಾ,ಮಾತೃಭೂಮಿ ಕವನ ಸಂಕಲನಗಳು ,ನವೋದಯ ಕಲದ ಪ್ರಥಮ ಮಹಮ್ಮದೀಯ ಕವಿ ಪಟೇಲ ಧೂಲಾ ಸಾಹೇಬರ ‘ವೀರ ಪಥಿಕ’ ಹೀಗೆ ಅನೇಕ ಕೃತಿಗಳು ಆ ಹೊತ್ತಿಗೆ ಬೆಳಕು ಕಂಡವು. ಒಟ್ಟಾರೆ ಕನ್ನಡ ಸಾಹಿತ್ಯ ಲೋಕಕ್ಕೆ ಅನುಭಾವ ಮತ್ತು ಜಾನಪದ ಬಹುದೊಡ್ಡ ಕೊಡುಗೆ ಕೊಟ್ಟ ‘ಹಲಸಂಗಿ ಕೇಂದ್ರ’ವನ್ನು ಕನ್ನಡ ಸಾಹಿತ್ಯದ ನಾಲ್ಕನೆಯ ಕೇಂದ್ರವಾಗಿ ಘೋಷಿಸಿ  ವ್ಯಾಪಕ ಅಧ್ಯಯನಕ್ಕೆ ಮುಂದಾಗಬೇಕಾಗಿದೆ.

‍ಲೇಖಕರು avadhi-sandhyarani

9 February, 2013

1 Comment

  1. Sunil Rao

    ಹಲಸಂಗಿ ಮಾಹಾನುಭಾವರಿಗೆ ಅನಂತ ಪ್ರಣಾಮಗಳು
    ಈಗಿನ ಕಾಲದ ನಮಗೆ ಇದೆಲ್ಲ ಇತಿಹಾಸವೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading