ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿರ ವರ್ಷಗಳ ಋಣ

ಪ್ರಸಾದ್ ರಕ್ಷಿದಿ

ಅವಧಿಯಲ್ಲಿ ಕೆ ರಾಮಯ್ಯ ಅವರ ಲೇಖನ ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇನೆ , ಇದು ನಮ್ಮುಉರಿನ ಘಟನೆ , ನನ್ನ ‘ಬೆಳ್ಳೇಕೆರೆ ಹಳ್ಳಿ ಥೇಟರ್ ‘ ಒಂದು ಅಧ್ಯಾಯ. ಈಗ ನಡೆಯುತ್ತಿರುವ ಚರ್ಚೆಗೆ ಒಂದು ಪ್ರತಿಕ್ರಿಯೆ ಆದೀತೇನೋ – ಪ್ರಸಾದ್

ನಾವೆಲ್ಲ ಕೆಲಸ ಮಾಡುತ್ತಿದ್ದ ಹಾರ್ಲೆ ತೋಟಗಳ ಮಾಲೀಕರಾದ ಎನ್.ಕೆ.ಗಣಪಯ್ಯ- ಗಾಂಧಿ ಮತ್ತು ರಾಜಾಜಿ ಇಬ್ಬರಿಂದಲೂ ಪ್ರಭಾವಿತರಾಗಿದ್ದರು. ತಮ್ಮನ್ನು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸಕಲೇಶಪುರದಲ್ಲಿ ಒಂದು ಅನಾಥಾಶ್ರಮ ಮತ್ತು ವಿಕಲಾಂಗ ಮಕ್ಕಳ ಶಾಲೆ ಸ್ಥಾಪಿಸಿದ್ದರು. ಅನೇಕ ಸಂಘ ಸಂಸ್ಥೆಗಳಲ್ಲೂ ಕೆಲಸ ಮಾಡುತ್ತಿದ್ದರು.

ಇದಲ್ಲದೆ ಹಾರ್ಲೆ, ಕುಂಬರಡಿ, ನಡಹಳ್ಳಿ, ಗಾಣದಹೊಳೆ, ಹಾರ್ಲೆ ಕೂಡಿಗೆ, ಕೃಷ್ಣಾಪುರ, ಅಗಲಟ್ಟಿ ಇಲ್ಲೆಲ್ಲ ನೂರಾರು ಜನರಿಗೆ ಜನತಾ ಮನೆಗಳನ್ನು ಮಾಡಿಸಿಕೊಟ್ಟಿದ್ದರು. ನಡಹಳ್ಳಿಯಲ್ಲಿ ಕೆಲವು ದಲಿತ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿಸಿ, ತಾವೇ ನಿಂತು ತೋಟ ಮಾಡಿಸಿಕೊಟ್ಟಿದ್ದರು. ಅಗಲಟ್ಟಿ ಗ್ರಾಮದಲ್ಲಿ ನಲವತ್ತು ದಲಿತ ಕುಟುಂಬಗಳಿಗೆ ಒಟ್ಟು ಒಂದು ನೂರು ಎಕರೆ ಜಮೀನು ಮಂಜೂರು ಮಾಡಿಸಿಕೊಟ್ಟಿದ್ದರು. ಅಲ್ಲೀಗ ಅವರೆಲ್ಲ ಕೃಷಿ ಮಾಡಿಕೊಂಡಿದ್ದಾರೆ.

ಚಿತ್ರ: ವೆಂಕಟರಮಣ ಭಟ್

ಈ ಜನತಾ ಮನೆಗಳ ನಿರ್ಮಾಣ ಇತ್ಯಾದಿಗಳ ಉಸ್ತುವಾರಿ ನನ್ನ ಮೇಲೆ ಬಿದ್ದಿತ್ತು. ನಾನು ಪ್ರತಿದಿನ ಡೈರಿ ಕೆಲಸ ಮುಗಿಸಿ ಸೈಕಲ್ ತೆಗೆದುಕೊಂಡು ಮನೆ ಕೆಲಸದ ಸ್ಥಳಗಳು, ತಾಲ್ಲೂಕು ಕಚೇರಿ, ಬಿಡಿಓ ಕಚೇರಿ ಇತ್ಯಾದಿ ಕಡೆಗಳಿಗೆ ಹೋಗಬೇಕಾಗುತ್ತಿತ್ತು.

ಇದಲ್ಲದೆ ಈ ಮನೆಗಳನ್ನು ಕಟ್ಟಿಕೊಂಡವರಿಗೆ ಗಣಪಯ್ಯನವರ ಮಗ ಎನ್. ಜಿ. ರವೀಂದ್ರನಾಥ್ ಬ್ಯಾಂಕಿನಿಂದ ಸಾಲ ಕೊಡಿಸಿದ್ದರು. ಆದರೆ ಬ್ಯಾಂಕಿನಿಂದ ಸಾಲ ತೆಗೆದುಕೊಂಡವರಲ್ಲಿ ಅನೇಕರು ವಾಪಸ್ ಕಟ್ಟಲೇ ಇಲ್ಲ. ಹಾಗಾಗಿ ರವೀಂದ್ರನಾಥ್ ಆ ಕಡೆ ಬಂದಾಗಲೆಲ್ಲ ಈ ಸಾಲಗಾರರಲ್ಲಿಗೆ ಹೋಗಿ ಬ್ಯಾಂಕ್ ಸಾಲ ತೀರಿಸಿ ಎಂದು ಹೇಳುತ್ತಿದ್ದರು. ಅನೇಕ ಸಾರಿ ನಾನು ಅವರೊಂದಿಗೆ ಇರುತ್ತಿದ್ದೆ.

ಒಂದು ಸಾರಿ ಅಗಲಟ್ಟಿ ಗ್ರಾಮದ ಪಕ್ಕದಲ್ಲೇ ಇರುವ ಮಾವಿನಹಳ್ಳಿ ಕಾಲೊನಿಗೆ ಹೋದೆವು. ಅಲ್ಲಿ ಸುಮಾರು ನಲವತ್ತು ಮನೆಗಳನ್ನು ನಾವು ಕಟ್ಟಿಸಿದ್ದೆವು. ಅಲ್ಲಿನವರಲ್ಲಿ ಸ್ವಲ್ಪ ಮುಂದಾಳತ್ವ ವಹಿಸುತ್ತಿದ್ದ ಕಾಳೀಪ್ರಸಾದ್ (ಇವರು ಮುಂದೆ ಜಿಲ್ಲಾ ಪರಿಷತ್ ಸದಸ್ಯರೂ ಆದರು.) ಮತ್ತಿತರರನ್ನು ಒಂದೆಡೆ ಸೇರಿಸಿ ರವೀಂದ್ರನಾಥರು, ನೋಡಿ ನೀವೆಲ್ಲ ತೆಗೆದುಕೊಂಡಿರುವುದು ಬ್ಯಾಂಕ್ ಸಾಲ-ಇದು ಸಾರ್ವಜನಿಕ ಹಣ. ನೀವು ಇದನ್ನು ತೀರಿಸಿದರೆ, ನಿಮಗೆ ಇನ್ನೊಮ್ಮೆ ಸಾಲ ಬೇಕಾದರೆ ಸಿಗುತ್ತದೆ. ನೀವು ಸಾಲ ತೀರಿಸದಿದ್ದರೆ- ನಿಮ್ಮಲ್ಲೇ ಯಾರಿಗಾದರೂ ಅಗತ್ಯ ಬಿದ್ದರೂ ಸಾಲ ಸಿಕ್ಕುವುದಿಲ್ಲ. ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದೆಲ್ಲ ತಿಳಿವಳಿಕೆ ಹೇಳಿ, ನೀವೆಲ್ಲ ತಪ್ಪು ಮಾಡುತ್ತಿದ್ದೀರಿ, ಯೋಚನೆ ಮಾಡಿ, ನಿಮಗೆ ಕೆಲವು ದಿನ ಸಮಯ ಕೊಡುತ್ತೇನೆ. ಆಗಲೂ ನೀವು ಸಾಲ ವಾಪಸ್ ಕಟ್ಟದಿದ್ದರೆ ನಾನು ಇಲ್ಲಿ ಬಂದು ಧರಣಿ ಕೂರುತ್ತೇನೆ ಎಂದರು.

ಆಗಲೇ ಸಂಜೆ ಆರು ಗಂಟೆ ಕಳೆದಿತ್ತು. ಕೆಲವರಾಗಲೇ ಕುಡಿದು ತೇಲಾಡುತ್ತಿದ್ದರು. ಇನ್ನು ಕೆಲವರು ಜಗಳ ಪ್ರಾರಂಭಿಸಿದರು. ಕಾಳೀಪ್ರಸಾದ್ ಮತ್ತಿತರರು ಅವರನ್ನು ಬೇರೆಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದರು.

ಉಳಿದವರು ಇವರು ಈ ಹೊತ್ತಿಗೆ ಇಲ್ಲಿಗ್ಯಾಕೆ ಬಂದರು? ಇವರ ಜೀಪಿಗೆ ಬೆಂಕಿ ಕೊಟ್ಟರೇನು? ಬೇಕಾದರೆ ಸಾಲವನ್ನು ಇವರೇ ಕಟ್ಟಲಿ ಎಂದೆಲ್ಲಾ ತಲೆಗೊಂದು ಮಾತಾಡಿದರು!

ನಾವು ಹೇಗೋ ಅಲ್ಲಿಂದ ಹೊರಟು ಬಂದೆವು. ಇವರ ಹುಚ್ಚಾಟಗಳನ್ನು ನೋಡಿ ನನಗೆ ರೇಗಿಹೋಗಿತ್ತು. ದಾರಿಯಲ್ಲಿ ಬರುವಾಗ ನಾನು ರವೀಂದ್ರನಾಥರೊಡನೆ ಜಗಳ ಪ್ರಾರಂಭಿಸಿದೆ.

ನಿಮಗೆ ಬೇರೆ ಕೆಲಸ ಇಲ್ಲ ಇಂಥವರಿಗೆಲ್ಲಾ ಸಹಾಯ ಮಾಡ್ತೀರಿ, ಇವರಿಗೆ ಅದರ ನೆನಪೇ ಇಲ್ಲ. ಯಾರಾದರೂ ನಮ್ಮಂಥವರಿಗೆ ಸಹಾಯ ಮಾಡಿ, ನೋಡಿದಿರಲ್ಲ ಇವರ ಬುದ್ಧಿ ಎಂದೆ.

ಅವರು ಸ್ವಲ್ಪ ಹೊತ್ತು ಮಾತಾಡಲಿಲ್ಲ. ಆಮೇಲೆ,

ನೋಡು ನಿನ್ನಂಥವರಿಗೆ ಯಾರ ಸಹಾಯವೂ ಅಗತ್ಯ ಇಲ್ಲ: ಆದರೆ ಅವರಿಗೆ ಸಹಾಯದ ಅಗತ್ಯ ಇದೆ ಎಂದರು.

ಹೌದು ಅವರಿಗೆ ಅಗತ್ಯ ಇರಬಹುದು, ಆದರೆ ಅರ್ಹತೆ ಇಲ್ಲ. ಅಸಹನೆಯಿಂದ ಜೋರಾಗಿ ಹೇಳಿದೆ. ನನಗೆ ಸಮಾಧಾನವಾಗಿರಲಿಲ್ಲ.

ಅದು ಬೇರೇ ಮಾತು. ಅರ್ಹತೆ ಇದೆಯೋ ಇಲ್ಲವೋ ಗೊತ್ತಾಗುವುದು ತುಂಬ ನಿಧಾನ. ಆದರೆ ಅವರು ಸಾವಿರ ವರ್ಷಗಳಿಂದ ಮೋಸ ಹೋಗಿದ್ದಾರೆ. ಈಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಅವರಿಲ್ಲ.

ಯಾರೋ ಮೋಸ ಮಾಡಿದ್ದರೆ ಅದಕ್ಕೆ ನಾವೇನು ಮಾಡಬೇಕು. ಅವರು ಹೀಗೆ ಮಾಡಿದರೆ ಅವರಿಗೆ ಯಾರು ಸಹಾಯ ಮಾಡುತ್ತಾರೆ. ಅಯೋಗ್ಯರು ನನ್ನ ಸಿಟ್ಟು ಇಳಿದಿರಲಿಲ್ಲ.

ರವೀಂದ್ರನಾಥ್ ಮತ್ತೆ ಮೌನವಾದರು. ಕೆಲವು ಕ್ಷಣಗಳ ನಂತರ ನೋಡು ಅವರು ಏನು ಹೇಳಿದರು ಎನ್ನುವುದು ಮುಖ್ಯ ಅಲ್ಲ. ನಮ್ಮೆಲ್ಲರಿಗೆ ಅವರ ಸಾವಿರ ವರ್ಷಗಳ ಋಣ ಇದೆ. ಅದರಲ್ಲಿ ಸ್ವಲ್ಪ ತೀರಿತು ಅಂದುಕೊಂಡರಾಯಿತು ಎಂದರು. ಆಗ ನನ್ನ ಸಿಟ್ಟೇನು ತಣಿಯಲಿಲ್ಲ. ಆದರೆ ಅವರು ಹೇಳಿದ ಮಾತು ನನಗೆ ಅರ್ಥವಾಗಲು ಅನೇಕ ವರ್ಷಗಳು ಬೇಕಾದವು.

ರವೀಂದ್ರನಾಥರ ತಂದೆ ಎನ್.ಕೆ. ಗಣಪಯ್ಯ 1958ರಲ್ಲಿ ಕೊಡಗಿನಿಂದ ಸಕಲೇಶಪುರಕ್ಕೆ ಬಂದು ನೆಲೆಸಿದವರು. ಕೃಷಿಯಲ್ಲಿ ಸಾಕಷ್ಟು ಪ್ರಯೋಗಳನ್ನೂ ಮಾಡಿದವರು. ಬ್ರಿಟೀಷರಿಂದ ಕೊಂಡುಕೊಂಡ ಹಾರ್ಲೆ ಎಸ್ಟೇಟನ್ನು ಕರ್ನಾಟಕದ ಪ್ರತಿಷ್ಟಿತ ಕಾಫಿ ಎಸ್ಟೇಟುಗಳಲ್ಲಿ ಒಂದಾಗುವಂತೆ ಬೆಳೆಸಿದರು. ಶಾಲೆಯ ಮೂಲಕ ಹೆಚ್ಚೇನೂ ಓದಿಲ್ಲದಿದ್ದ ಗಣಪಯ್ಯ, ಕೃಷಿ ವಿಶ್ವವಿದ್ಯಾಲಯದ ರೀಜೆಂಟ್ ಕೂಡಾ ಆದರು. 1977ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ರಾಮಕೃಷ್ಣ ಹೆಗಡೆ, ಎಲ್.ಕೆ.ಅಡ್ವಾಣಿ ಅವರೊಂದಿಗೆ ಜೈಲಿನಲ್ಲಿದ್ದುದಲ್ಲದೆ ರಾಜಕೀಯ ವಲಯದಲ್ಲಿಯೂ ಗಣ್ಯರಾಗಿದ್ದರು.

ರವೀಂದ್ರನಾಥ್ ವೈದ್ಯಕೀಯ ಕಲಿತವರು. ಒಳ್ಳೆಯ ಸಂಸ್ಕೃತಾಭ್ಯಾಸಿ ಕೂಡಾ. ಅಥರ್ವವೇದವನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ನಮ್ಮ ರಂಗ ಚಟುವಟಿಕೆಗಳಿಗೆಲ್ಲ ನಿರಂತರ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ

ಇವರು ಈ ರೀತಿ ಭೂರಹಿತರಿಗೆ ಜಮೀನು ಮಾಡಿ ಕೊಡುವುದು, ಮನೆ ಕಟ್ಟಿಸಿ ಕೊಡುವುದು ಇತ್ಯಾದಿಗಳನ್ನೆಲ್ಲ ಮಾಡುತ್ತಿರುವುದನ್ನು ನೋಡಿ ಕೆಲವರು ಗಣಪಯ್ಯ ದಲಿತರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಹಿಂದಿನಿಂದ ದೂರುತ್ತಿದ್ದರಾದರೂ ಗಣಪಯ್ಯನವರನ್ನು ನೇರವಾಗಿ ಎದುರಿಸುವ ಶಕ್ತಿಯಾಗಲೀ, ಸಾಮಥ್ರ್ಯವಾಗಲೀ ಇರಲಿಲ್ಲವಾದ್ದರಿಂದ. ಅವರಾರೂ ಆ ದಲಿತರಿಗೆ ಕಿರುಕುಳ ಕೊಡಲು ಹೋಗಲಿಲ್ಲ.

ಎಲ್ಲಾ ರಾಜಕೀಯ ಪಕ್ಷಗಳೂ ಓಟಿಗಾಗಿ ದಲಿತರಿಗೂ ಇನ್ನಿತರ ಭೂರಹಿತರಿಗೂ ಎರಡು ಗುಂಟೆ ನಿವೇಶನ ಹಂಚಿದ್ದು ಬಿಟ್ಟರೆ, ಕೃಷಿ ಜಮೀನು ಕೊಟ್ಟದ್ದೇ ಇಲ್ಲ. ಅನಂತರವೂ ಕೆಲವು ದಲಿತರಿಗೆ ಕೃಷಿ ಜಮೀನು ಸಿಕ್ಕಿದ್ದರೆ, ಅದು ಅವರ ಸ್ವಂತ ಸಂಘಟಿತ ಶಕ್ತಿಯಿಂದಲೇ ಹೊರತು ಬೇರೆ ಅಲ್ಲ.

ಆದರೆ ಭೂರಹಿತರಿಗೆ ಜಮೀನು ಕೊಡಿಸುವ ಗಣಪಯ್ಯನವರಂಥವರ ಪ್ರಯತ್ನಗಳೆಲ್ಲ ದಲಿತರಿಗೆ ಜಮೀನು ಸಿಗುವುದಕ್ಕಿಂತ ಹೆಚ್ಚಾಗಿ ಇತರ ಭೂಮಾಲಿಕರ ಒತ್ತುವರಿ ಕಾರ್ಯವನ್ನು ಚುರುಕುಗೊಳಿಸಿಬಿಟ್ಟಿತು. ಈ ಜಮೀನು ಒತ್ತುವರಿ ಕೆಲಸದಲ್ಲಿ ಕೆಲವು ದಲಿತ ಅಧಿಕಾರಿಗಳೇ ಭೂಮಾಲೀಕರ ಜೊತೆ ಶಾಮೀಲಾಗಿದ್ದರೆನ್ನುವುದು ಇನ್ನಷ್ಟು ವಿಪರ್ಯಾಸದ ಸಂಗತಿ.

‍ಲೇಖಕರು G

19 July, 2011

1 Comment

  1. A P Bhat

    ಹಾರ್ಲೆ ಎಸ್ಟೇಟ್ ನಲ್ಲಿ ವರ್ಷಕ್ಕೆ ಒಮ್ಮೆ ನಡೆಯುತಿದ್ದ ಉತ್ಸವವನ್ನು ಕಂಡಿದ್ದ್ದೆ. ಕಾರ್ಮಿಕರು ಮಾಲೀಕರು ಸೇರಿ ಸಂತ್ಹೊಶಿಸುತಿದ್ದ ಆಚರಣೆ ಮತ್ತು ಗಣಪಯ್ಯ ಮತ್ತು ಅವ್ರ ಮಗನ ಅತಿಥಿ ಸತ್ಕಾರ ಕಂಡು ಆನಂದ ಮತ್ತು ವಿಸ್ಮಯ ಉಂಟಾಗಿತ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading