ಸಾರ್, ನನ್ನ ಪದ್ಯ…!

-ಎಚ್ ಎಸ್ ವೆಂಕಟೇಶ ಮೂರ್ತಿ ನೀವು ಬರೆದ ಮೊದಲ ಬರೆಹ? ಅಂತ ಯಾರಾದರೂ ಕೇಳಿದರೆ ನಿಜಕ್ಕೂ ನಾನು ಹೌಹಾರಿ ಹೋಗುತ್ತೇನೆ. ಮೊನ್ನೆ ಯಾರೋ ಸಂದರ್ಶನಕ್ಕೆ ಬಂದವರು ಈ ಪ್ರಶ್ನೆ ಕೇಳಿದಾಗ -ಹೌದಲ್ಲಾ…ನಾನು ಈ ಬಗ್ಗೆ ಯೋಚನೇನೇ ಮಾಡಿದ್ದಿಲ್ಲವಲ್ಲಾ ಅಂತ ನನಗೆ ನಾನೇ ರಾಗ ಎಳಕೊಂಡು ನನ್ನ ಮೊದಲ ಬರೆಹ ಯಾವುದಿದ್ದೀತು ಎಂದು ಹಾಗೇ ಧ್ಯಾನಿಸಲಿಕ್ಕೆ ಹತ್ತಿದೆ. ನಾನಿನ್ನೂ ಮಿಡ್ಲ್ ಸ್ಕೂಲ್ ವಿದ್ಯಾಥರ್ಿಯಿದ್ದಾಗ ನಾನೂ ಮತ್ತು ನನ್ನ ಬಾಲ್ಯದ ಗೆಳೆಯ ಈಶ್ವರಚಂದ್ರ ಇಬ್ಬರೂ ಕೂತು ಬರೆದ ಮಾಯವಾದ ಮದುಮಗಳು ಅನ್ನೋ ಪತ್ತೇದಾರಿ ಕಾದಂಬರಿ ಮೊದಲು ನೆನಪಾಯಿತು. ಆದರೆ ಅದು ಒಂದು ಜಾಯಂಟ್ ವೆಂಚರ್. ಅದು ನನ್ನ ಮೊದಲ ಬರೆಹ ಹೆಂಗಾದೀತು? ನಾನು ಅದೇ ಸರಿ ಸುಮಾರಕ್ಕೆ ಬರೆದ ಕೆಲವು ಚುಟುಕು ಮಾದರೀ ಪದ್ಯಗಳು ನೆನಪಾದವು. ಬರೆದದ್ದು ಖರೆ. ಆದರೆ ಈವತ್ತು ಅದರ ಒಂದು ಸಾಲು ಶಿವಾಯ್ ನೆನಪಾಗಲೊಲ್ಲದು. ಹಾಯಿಸ್ಕೂಲ್ ಮೆಟ್ಟಿಲು ಹತ್ತೋ ಮೊದಲು ನಾನು ಮಾಡಿದ ಇನ್ನೊಂದು ಬರವಣಿಗೆ ಸಾಹಸ ಅಂದರೆ ಭಾಮಿನಿ ಷಟ್ಪದೀನಲ್ಲಿ ಬಾಲ ಭಾರತ ಅನ್ನೋ ದೀರ್ಘ ಕವಿತಾ ಬರೆಯಲಿಕ್ಕೆ ಶುರು ಹಚ್ಚಿದ್ದು. ಹತ್ತಾರು ಪದ್ಯ ಬರೆದಿದ್ದೆ. ಒಂದೆರಡು ಈಗಲೂ ನೆನಪಲ್ಲಿ ಇದಾವೆ.

ಬರೆದವನು ಹದಿನಾರು ಮೀರದ ಹರೆಯದವ ಹಾರುವನು ಮತದಲಿ ಪಿರಿದು ಗುರು ವಾಸಿಷ್ಠ ಗೋತ್ರಜ ಹೋದಿಗೆರೆಯವನು|| ಇಷ್ಟು ನೆನಪಿದೆ. ಭಾಮಿನಿಯ ದ್ವಿತೀಯಾರ್ಧ ಮರೆವಲ್ಲಿ ಮುಳುಗಿಹೋಗಿದೆ. ಈ ದೀರ್ಘ ಕವಿತೆಯ ಇನ್ನೊಂದು ಪದ್ಯ ಹೀಗಿತ್ತು.
ಕೆಂಚಿದೇವಿಯು ಪೊರೆಯಲೆಲ್ಲರ ಇಂಚು ಇಂಚಿಗೆ ಜೀವರೆಲ್ಲರ ಹೊಂಚಿ ಹಾಕುವ ಪಾಪಗಳ ಪಾತಾಳತಳಕ್ಕೊತ್ತಿ||
ಮತ್ತೆ ನಂತರದ ಮೂರು ಸಾಲು ನೆನಪಿನಿಂದ ಜಾರಿಹೋಗಿವೆ. ಈ ಬಾಲಭಾರತ ಪೂರ್ಣಗೊಳಿಸುವುದೂ ಆಗಲಿಲ್ಲ. ಹಾಯಿಸ್ಕೂಲಲ್ಲಿ ಓದುವಾಗ ನಮ್ಮ ಕನ್ನಡ ಪಂಡಿತರು ಪಂಜೆಯವರ ತೆಂಕಣಗಾಳಿಯಾಟ ಪಾಠ ಮಾಡುವಾಗ ಎಲಾ..ನಾನೂ ಹೀಗೆ ಬರೀಬಹುದಲ್ಲ ಅನ್ನಿಸಿ ತೆಂಕಣಗಾಳಿಯ ಜಾಗೆಯಲ್ಲಿ ಮುಂಗಾರ ಮಳೆಯನ್ನು ಆವಾಹಿಸಿ ಒಂದು ಪದ್ಯ ಬರೆದೇ ಬಿಟ್ಟೆ!
ಕಂತರಂಗನ ಮಟ್ಟಿಯ ಮೇಲೆ ಕಪ್ಪೋಕಪ್ಪಿನ ಮೋಡದ ಲೀಲೆ ಗುಡು ಗುಡು ಗುಡುಗು, ಚಟ ಚಟ ಸಿಡಿಲು, ಭೋರ್ ಭೋರ್ ಗಾಳಿ ಮಾಡಲು ಧಾಳಿ, ಹಿತ್ತಲ ಮರದಿಂ ತೆಂಗಿನ ಮಡಲು ಧೊಪ್ಪನೆ ನೆಲಕ್ಕೆ ಬೀಳುತಲಿರಲು, ಬಂತೈ ಬಂತೈ ಮುಂಗಾರ್ ಮಳೆಯು! ಧೋ ಧೋ ಸುರಿಯಿತು ಮಳೆ ತಲೆ ಕೆಳಗೆ ರೆಪ್ಪೆಯ ಮುಚ್ಚಿ ತೆರೆಯುವ ಒಳಗೆ ರಸ್ತೆಯಲೆಲ್ಲ ಬಗ್ಗಡ ನೀರು ಮಣ್ಣನು ಕೊರೆಯುತ ಹರಿಯುವ ಜೋರು ಹಾಳೆಯ ದೋಣಿಯ ಮಾಡಿದ ಮಲ್ಲಿ, ತೇಲಿ ಬಿಡುತಿದ್ದ ಚರಂಡಿಯಲ್ಲಿ ತೇಕಾಡುತ್ತಿರೆ ನಮ್ಮೀ ಇಳೆಯು ಬಂತೈ ಬಂತೈ ಮುಂಗಾರ್ ಮಳೆಯು!
ಹಿಂಗೇ ಉದ್ದೂಕೆ ಬರಕೊಂಡು ಹೋಗಿದ್ದೆ. ಪಂಡಿತರು ಪದ್ಯವನ್ನು ಕೋಟಿನ ಜೇಬಲ್ಲಿ ಹಾಕಿಕೊಂಡು, ಸಂಜೆ ನಮ್ಮ ಮನೆ ಕಡೆ ಬಾ…ನಿನ್ನ ಪದ್ಯ ಓದಿತರ್ಿನಿ..ಅಂದರು. ಪದ್ಯ ಹ್ಯಾಗಿದೆಯೋ ಏನೋ..ಪಂಡಿತರು ಪದ್ಯ ಇಷ್ಟ ಪಡತಾರೋ ಇಲ್ಲವೋ ಎಂದು ಯೋಚಿಸುತ್ತಾ ನಾನು ಹಿಂಜರಿಕೆಯಲ್ಲೇ ಸಂಜೆ ಪಂಡಿತರ ಮನೆಗೆ ಹೋದೆ. ಅದೊಳ್ಳೆ ಮಳೆಗಾಲ. ಆಗಷ್ಟೇ ಒಂದು ರೌಂಡು ಮಳೆ ಹೊಡೆದು ನಿಂತಿತ್ತು. ಮಳೆ ನಿಂತಿದ್ದರೂ ಮುಗಿಲಲ್ಲಿ ಮೋಡ ತೂಗಾಡುತಾ ಇದ್ದವು. ಕೋಟೆಯಲ್ಲಿ ಹೊಂಡದ ಪಕ್ಕ ನಮ್ಮ ಪಂಡಿತರ ಮನೆ. ನಾನು ಒಂದು ಚಡ್ಡಿ, ಅಂಗಿಯ ಉಡುಪಲ್ಲಿ ದಾರಿಯಲ್ಲಿ ಅಲ್ಲಲ್ಲಿ ನಿಂತಿದ್ದ ಆಕಾಶದ ಹರುಕು ದಾಟಿಕೊಳ್ಳುತ್ತಾ ಪಂಡಿತರ ಮನೆಯ ಬಾಗಿಲ ಮುಂದೆ ನಿಂತೆ. ಥಂಡಿ ಗಾಳಿ ಅಂತ ಬಾಗಿಲು ಮುಂದೆ ಮಾಡಿದ್ದರು. ಸಾರ್ ಅಂತ ಉಸುರೆತ್ತಿದೆ. ಮೂತರ್ಿನಾ ಅಂತ ಬಾಗಿಲ ಸಂದಿಯಿಂದ ನುಸುಳಿಕೊಂಡು ಬಂತು ಪ್ರಶ್ನೆ. ಅದು ಪಂಡಿತರದ್ದೇ ಧ್ವನಿ. ಬಾಗಿಲು ತೆರೆದಾಗ ಒಂದು ಬಿಳೀ ಬನೀನು, ಮುಂಡು ಪಂಚೆಯಲ್ಲಿ ಪಂಡಿತರು ನಿಂತಿದ್ದರು. ಬೇಡವೆಂದರೂ ಕೇಳದೆ ಅವರ ಬನೀನ ಎದೆಯ ಬಳಿಯ ತೂತು, ಅಲ್ಲಿಂದ ತೂರಿಕೊಂಡು ಬಂದ ಎದೆಗೂದಲು ಕಣ್ಣಿಗೆ ಬಿದ್ದವು. ಅರೆಕಮಾನಿನ ತಲೆ ನಮ್ಮ ಪಂಡಿತರದ್ದು. ಸ್ಕೂಲಿಗೆ ಬರುವಾಗ ಅಚ್ಚುಕಟ್ಟಾಗಿ ಗಂಟು ಹಾಕಿಕೊಂಡು ಕಪ್ಪು ಟೋಪಿಯ ಕೆಳಗೆ ನಿಂಬೆ ಹಣ್ಣಿನ ಗಾತ್ರದ ಗಂಟು ಮೆರೆಸುತ್ತಾ ಪಂಡಿತರು ಬರುತಾ ಇದ್ದರು. ಈಗ ಆ ಗಂಟು ಬಿಚ್ಚಿ ಬೆನ್ನಿಗೆ ಹಾಕಿಕೊಂಡಿರೋದು ನಾನು ಅವರನ್ನು ಒಳಮನೆಗೆ ಹಿಂಬಾಲಿಸಿದಾಗ ಕಾಣಿಸಿತು.ಚಾಪೆಯ ಮೇಲೆ ಕೂತು ಆಡಿಕೋತಾ ಇದ್ದ ಮಕ್ಕಳನ್ನ , ಹೋಗಿ ಒಳಗೆ ಕೂತು ಆಡಿಕೊಳ್ಳಿ ಎಂದು ರೂಮಿಗೆ ಗದುಮಿದ್ದಾದ ಮೇಲೆ , ಪಂಡಿತರು ನನ್ನ ಕಡೆ ನೋಡಿ-ಬಾ..ಚಾಪೆಮೇಲೆ ಕೂತುಕೋ…ಅಂದರು. ಸಾರ್ ನನ್ನ ..ಪದ್ಯಾ..ಎಂದು ಮೆಲ್ಲಗೆ ನಾನು ರಾಗ ಎಳೆದೆ.ಯಾಕಯ್ಯಾ..ಅವಸರ…ಇರು..ಅಂತ ಪಂಡಿತರು ಸ್ವಾಟೆಯ ಮರೆಯಲ್ಲೇ ನಕ್ಕು…ಓ ಇವಳೆ ಈ ಹುಡುಗನಿಗೆ ಹಾಲು ಕೊಡುತೀಯಾ…ಅಂತ…ತಮ್ಮ ಪತ್ನಿಗೆ ಎನ್ನುವಂತೆ ಕೂಗು ಹಾಕಿದರು. ಅದಕ್ಕೆ ಪ್ರತ್ಯುತ್ತರ ಒಳಮನೆಯಿಂದ ಬಳೆಗಳ ಝಣತ್ಕಾರ. ನನ್ನ ಪದ್ಯ ಎಲ್ಲಿ ಇಟ್ಟೆ ಅಂತ ಪಂಡಿತರು ಹುಡುಕುತಾ ಇದ್ದರು. ಮೂಲೆಯಲ್ಲಿದ್ದ ಪುಸ್ತಕಗಳನ್ನ ಬಿಡಿಸಿ ಬಿಡಿಸಿ ನೋಡುತಾ, ಇಲ್ಲೇ ಎಲ್ಲೋ ಇಟ್ಟಿದ್ದೆ ನೋಡು..ಎನ್ನುತ್ತಿದ್ದರು. ನನಗೆ ಜಂಘಾಬಲವೇ ಉಡುಗಿ ಹೋಯಿತು. ದೇವರೇ ಪಂಡಿತರು ನನ್ನ ಪದ್ಯ ಕಳೆದೇ ಬಿಟ್ಟರೋ ಹೇಗೆ? ನಾನು ಕೋಳಿ ಕತ್ತು ಮಾಡಿಕೊಂಡು ಅವರು ತೆರೆದು ಮುಚ್ಚಿ ಮಾಡುತ್ತಿದ್ದ ಪುಸ್ತಕಗಳನ್ನ ನೋಡುತಾ ಇದ್ದೆ. ಆ ವೇಳೆಗೆ ಪಂಡಿತರ ಹೆಂಡತಿ ಹಾಲಿನ ಕಪ್ಪು ಹಿಡಿದುಕೊಂಡು ಬಂದರು. ನನ್ನನ್ನು ನೋಡಿ ಮುಗುಳ್ನಕ್ಕು..ಯಾಕೋ ಮರಿ..? ಈಚೆಗೆ ಬರಲೇ ಇಲ್ಲ…ಎಂದರು. ನಾನು ಹೆಹ್ಹೆ ಅಂತ ಸುಮ್ಮಗೆ ನಕ್ಕೆ. ನನ್ನ ಧ್ಯಾಸವೆಲ್ಲಾ ಕಳೆದು ಹೋದ ಪದ್ಯದ ಕಡೆಗಿತ್ತು. ಏನುರೀ? ಅವನ ಪದ್ಯ ಹುಡುಕುತಾ ಇದ್ದೀರಾ ಎಂದರು ಪಂಡಿತರ ಪತ್ನಿ. ಹೌದು ಹೌದು..ಇಲ್ಲೇ ಎಲ್ಲೋ ಇಟ್ಟಿದ್ದೆ! ಪಂಡಿತರ ಪತ್ನಿ ನಕ್ಕು..ಇರಿ..ನಾನು ಓದೋಣ ಅಂತ ಒಳಗೆ ತಗೊಂಡು ಹೋಗಿದ್ದೆ ಅನ್ನಬೇಕೆ ಆ ಮಹಾತಾಯಿ! ಎಲಾ..ಇವಳ…ನೀನದನ್ನ ನನಗೆ ಹೇಳಬೇಕೋ ಬೇಡವೋ…ಅಂದರು ಪಂಡಿತರು ಹಸನ್ಮುಖಿಯಾಗಿ. ಮೂತರ್ಿ..ಚಂದ ಬದರ್ಿದೀ ಪದ್ಯ..ಅನ್ನುತ್ತಾ ಮುಂಗಾರ್ ಮಳೆ ಹಿಡಕೊಂಡು ಬಂದು ಪಂಡಿತರ ಪತ್ನಿ ಪದ್ಯವನ್ನ ಪಂಡಿತರಿಗೆ ಒಪ್ಪಿಸಿದರು. ಅಷ್ಟರಲ್ಲಿ ಅದಕ್ಕೆ ಅಲ್ಲಲ್ಲಿ ಎಣ್ಣೆ ತಾಗಿ ಹಿಂದಿನ ಪುಟದ ಸಾಲು ಮುಂದಿನ ಪುಟದಲ್ಲಿ ತನ್ನ ಸರೀಕರ ಜೋಡಿ ಹೆಣಿಗೆ ಹಾಕಿಕೊಂಡು ಗೊಂದಲ ಹುಟ್ಟಿಸುತ್ತಾ ಇದ್ದವು. . ಬಾ…ಬಾ…ನನ್ನ ಪಕ್ಕದಲ್ಲಿ ಕೂಡ್ರು ಬಾ..ಎಂದರು ಪಂಡಿತರು. ಹಾಗಂದವರು ಕೂತಿದ್ದ ಹಾಗೇನೆ ಕೊಂಚ ಪಕ್ಕಕ್ಕೆ ಜರುಗಿ ನನಗೆ ಪಕ್ಕದಲ್ಲಿ ಜಾಗ ಮಾಡಿದರು.ಆಮೇಲೆ ತಮ್ಮ ಪೆನ್ಸಿಲ್ಲು ತಕ್ಕೊಂಡು ನನ್ನ ಪದ್ಯದ ಪ್ರತಿ ಸಾಲಿನ ಅಕ್ಷರದ ಮೇಲೆ, ಒಂದು ನಾಮ ಹಾಕೋರು; ಇಲ್ಲಾ ಒಂದು ಅಡ್ಡ ಗೆರೆ ಎಳೆಯೋರು. ಹಿಂಗೆ ಪದ್ಯದ ತುಂಬ ನಾಮ ಮತ್ತು ಅಡ್ಡ ಗೆರೆ ಹಾಕಿದ್ದಾದ ಮೇಲೆ ಒಂದೊಂದೇ ಸಾಲು ಹಿಡಿದು ಏನೋ ಮಣ ಮಣ ಮಾಡಿ, ಈ ಸಾಲಲ್ಲಿ 29 ಬತರ್ಾ ಇದೆ. ಈಸಾಲಲ್ಲೂ 29.ಭೇಷ್ ಭೇಷ್. ಎಲಾ…ಇಲ್ಲಿ ಮೂವತಾಗಿಬಿಡ್ತಲ್ಲೋ…ಇದೂ 29ಏ ಆಗಬೇಕು ನೋಡು…ಗಣಿತಾ ಇದ್ದಹಂಗೇ ಅಪ್ಪಾ ಇದೂನೂ…ಲೆಕ್ಖಾಚಾರ ಕರೆಕ್ಟಾಗಿ ಇರಬೇಕು…ಅಂತ ಏನೋ ತಿದ್ದುಪಡಿ ಮಾಡಿ..ಈಗ ಇದೂ 29 ಆಯ್ತು… ಗುಡ್…ಇಲ್ಲಿ ಮತ್ತೆ 28…! ಅಂತ ಪೆನ್ಸಿಲ್ಲು ಹಣೆಗೆ ಒತ್ತಿಕೊಂಡು ಅರೆಗಣ್ಣು ಮಾಡಿ ಕೂತು ಬಿಟ್ಟರು. ನಾನು ಪೆನ್ಸಿಲ್ ಹಣೆಗೆ ಚುಚ್ಚಿಕೊಂಡು ಕೂತ ಪಂಡಿತರ ವದನಾರವಿಂದವನ್ನೇ ನೋಡುತ್ತಾ ಕೂತೆ. ಎಷ್ಟೋ ಹೊತ್ತಾದ ಮೇಲೆ ಪಂಡಿತರು, ನಾನಿದನ್ನು ಸರಿಮಾಡಿ ಕೊಡ್ತೀನಿ…ನೀನೇನೂ ಕಾಳಜಿ ಮಾಡಬ್ಯಾಡ ಅಂತ ಹೇಳಿ ಪದ್ಯ ತಮ್ಮ ಬನೀನ ಎಡಪಕ್ಕದಲ್ಲಿದ್ದ ಎದೆ ಜೇಬಿಗೆ ಸೇರಿಸಿ ನಿರಾಳ ಕೂತು ನನ್ನ ಮುಖಾನೇ ನೋಡುತಾ ಇದ್ದರು. ನಾನು ಪದ್ಯ ಬರೆಯಬಹುದಾ ಸಾರ್..? ಎಂದೆ ಕಾತರದಿಂದ. ಪಂಡಿತರು ಬೆನ್ನು ತಟ್ಟಿ ಸೊಗಸಾಗಿ ಬರಿತೀ ಕಾಣಯ್ಯಾ…ಸ್ವಲ್ಪ ಛಂದಸ್ಸು ಕುಂಟುತಾ ಇದೆ..ಅಷ್ಟೆ..ಅಂದರು. ನಾನು ಕಿಟಕಿಯ ಆಚೆ ನೋಡಿದೆ. ಮತ್ತೆ ಸಣ್ಣಗೆ ಮಳೆ ಶುರು ಆಗಿತ್ತು. ನಾನು ಬರಲಾ ಸಾರ್? ಅಜ್ಜಿ ಕಾಯುತಾ ಇರತಾರೆ..ಎಂದೆ. ಮಳೆ ಬತರ್ಾ ಇದೆಯಲ್ಲೋ..?ಅಂದರು ಪಂಡಿತರು. ತಡಿ ಸ್ವಲ್ಪು ಅನ್ನುತ್ತಾ ಒಳಗೆ ಹೋಗಿ ಒಂದು ಮಾಸಿದ ಕೊಡೆ ಹಿಡಕೊಂಡು ಬಂದರು. ಇದ ತಗೊಂಡು ಹೋಗು…ನಾಳೆ ಸ್ಕೂಲಿಗೆ ಹೋಗೋವಾಗ ಇದ ಮರೀದೇ ತಗೊಂಡು ಬಾ…ಆತು? ಅಂದರು.ನಾನು ಬೇಡ ಅಂದರೂ ಪಂಡಿತರು ಕೇಳಲಿಲ್ಲ. ಆ ಜಿಬರು ಮಳೆಯಲ್ಲಿ ಪಂಡಿತರ ಕೊಡೆಯಡಿ ನನ್ನ ಸವಾರಿ ಹೊಳಲ್ಕೆರೆಯ ರಥ ಬೀದಿಯಲ್ಲಿ ಹೊರಟೇ ಬಿಟ್ಟಿತು. ಕೈ ಎತ್ತಿದರೆ ಆಕಾಶ ನಿಲುಕುತ್ತೆ ಅನ್ನೋ ಹಾಗೆ ಆಗಿತ್ತು. ಪಂಡಿತರ , ನನ್ನ ಅಚ್ಚುಮೆಚ್ಚಿನ ಪಂಡಿತರ ಕೊಡೆಯಡಿ ನಾನು ನಡೀತಾ ಇದ್ದೆ! ಈ ಮುಂಗಾರು ಮಳೆ ನನ್ನ ಮೊದಲ ಪದ್ಯವೇ? ಹಾಗಂತ ಹೇಳಲಾರೆ. ತೆಂಕಣಗಾಳಿಯಾಟದ ಅನುಕರಣೆಯಾಗಿತ್ತು ಅದು. ನಿಜವಾಗಿಯೂ ನನ್ನ ಪದ್ಯ ಆಗಿದ್ದಿಲ್ಲ. **** ಹಾಯಿಸ್ಕೂಲು ಮುಗಿಸಿ ನಾನು ಪಿಯುಸಿ ಮಾಡಲಿಕ್ಕೆ ಅಂತ ದುರ್ಗಕ್ಕೆ ಬಂದೆ. ನಾನು ಓದಲಿಕ್ಕೆ ಬಂದ ಕಾಲೇಜಿಗೇ ಒಬ್ಬರು ಕವಿ ಓದಿಸಲಿಕ್ಕೆ ಅಂತ ಬಂದರು. ಆಗ ದುರ್ಗದಲ್ಲೆಲ್ಲಾ ಅವರ ಮಾತೇಮಾತು. ಒಬ್ಬರು ಕವಿ ಕಾಲೇಜಿಗೆ ಲೆಕ್ಚರರಾಗಿ ಬಂದಿದಾರೆ…ಅದ್ಭುತವಾಗಿ ಮಾತಾಡ್ತಾರೆ ಅಂತ. ಅವರ ಭಾಷಣ, ಕವಿತಾ ವಾಚನ ಎಲ್ಲೇ ಆಗಲಿ ಅಲ್ಲಿ ನಾನು ಹಾಜರಾಗುತಾ ಇದ್ದೆ! ಅವರೇ ಕೆ.ಎಸ್.ನಿಸಾರ್ ಅಹಮದ್. ಅದೇ ವೇಳೆಗೆ ಬೆಂಗಳೂರಿನ ಯಾವುದೋ ಒಂದು ಸಂಸ್ಥೆಯವರು ಕಾವ್ಯರಚನಾ ಸ್ಪಧರ್ೆ ಏರ್ಪಡಿಸಿದ್ದರು. ನನ್ನ ಕ್ಲಾಸ್ ಮೇಟ್ ಆ ಪೇಪರಿನ ತುಕುಡ ಹಿಡಕೊಂಡು ಮಾರನೇ ದಿನ ಕ್ಲಾಸಿಗೆ ಬಂದ. ಕತೆಗಾರ ವೀರಭದ್ರರ ಕ್ಲಾಸ್ ನಡೀತಾ ಇತ್ತು.ನೋಡೋ ಮೂತರ್ಿ…ನಿನ್ನ ಪದ್ಯ ಯಾಕೆ ಈ ಸ್ಪಧರ್ೆಗೆ ಕಳಿಸ ಬಾರದು? ಪಿಸುಗುಟ್ಟಿದ ಗೆಳೆಯ. ಕಳಿಸಬಹುದು ಅನ್ನಿಸಿತು ನನಗೆ! ಆಗ ಬರೆದದ್ದು ಪರಿವೃತ್ತ ಎಂಬ ನನ್ನ ಪದ್ಯ.
ಪರಿವೃತ್ತ ಸೊನ್ನೆ- ನೀನು ಯಶೋದೆ ಕಣ್ಣು ಹಿಗ್ಗಿಸಿ ಕಂಡ ಕೃಷ್ಣನ ಬಾಯಿ ಎನ್ನೆ ಕಾಡು ನಾಡು ನೆಲ ಜಲ ಫಲವತ್ತಾದದ್ದು ಇಲ್ಲಾ ಬೇಚರಾಕು ಶುದ್ಧವಾದದ್ದು ಇಲ್ಲಾ ಕಚರಾ ಕೊಳಕು ಉಸಿರಿದ್ದದು ಇಲ್ಲಾ ಇಲ್ಲದ್ದು ಸುಖ ದುಃಖ ಅಳು ನಗೆ ಆರಿದ ಬೆಂಕಿ ಹೋದರೂ ಹಿಂದೇ ಉಳಿಸಿ ಹೋದ ಹೊಗೆ -ಎಲ್ಲಾ ಒಂದೇ ನಿನಗೆ! ಸಂಕಟ ಸಂತೋಷ ಎರಡರಲ್ಲೂ ನೆರಳು ಬಿಸಿಲಿನ ನಡುವೆಯ ಕೊಡೆಯ ಹಾಗೆ ಹೊಂದಿ ಇದ್ದರೂ ಇಲ್ಲದಂತೆ ಇದ್ದು ಇಲ್ಲವೆಂದೇ ಅನ್ನಿಸಿದ್ದು ನೀನು! ಎಲ್ಲವನ್ನೂ ಸುತ್ತಿದರೂ ಚೂರೂ ಹತ್ತಿಸಿಕೊಳ್ಳದ ನಿಲರ್ಿಪ್ತ ಗಾಲಿ ನೀನಾದರೆ ನಿನ್ನೊಳಗೇ ಒಂದಾಗಿದ್ದು ಬೇರೆ ನಾನು ಎಂದು ಭ್ರಮೆಗೊಂಡು ಯಾರ ಆಳವನ್ನೋ ಅಳೆಯ ಹೋಗಿ ನನ್ನ ನಾನೇ ಅಳೆದುಕೊಳ್ಳುವ ಸೇರಿಗಿಳಿದ – ದ್ರವ ನಾನು!
ಈ ಪದ್ಯ ರಾತ್ರೋರಾತ್ರಿ ಬರೆದು ಮುಗಿಸಿ ಬೆಂಗಳೂರಿಗೆ ರವಾನಿಸಿಯೇ ಬಿಟ್ಟೆ. ಅದು ವಿದ್ಯಾಥರ್ಿಗಳಿಗಾಗಿ ನಡೆಸಿದ ಸ್ಪಧರ್ೆಯಾಗಿತ್ತು. ಆಗ ನಮ್ಮ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರೊ.ಗುಂಡಣ್ಣನವರ ಸಮರ್ಥನಾ ಪತ್ರದೊಂದಿಗೆ ಕವಿತೆ ಕಳಿಸಿ ತಿಂಗಳೇ ಕಳೆದಿರಬಹುದು. ಒಂದು ದಿನ ನಮ್ಮ ಪ್ರೊಫೆಸರ್ ನನಗೆ ಹೇಳಿ ಕಳುಹಿಸಿದರು. ಹೋಗಿ ನೋಡಿದಾಗ ಪ್ರೊ ಗುಂಡಣ್ಣನವರು ನನ್ನ ಬೆನ್ನು ತಟ್ಟಿ ಕವಿತಾ ಸ್ಪಧರ್ೆಯಲ್ಲಿ ನಿನಗೆ ಬಹುಮಾನ ಬಂದಿದೆ ಕಾಣಯ್ಯಾ…ನೋಡು…ಸಟರ್ಿಫಿಕೇಟು ಕೂಡಾ ಕಳಿಸಿದ್ದಾರೆ…ಮುಂದಿನ ವಾರ ನಿಮ್ಮ ಕ್ಲಾಸ್ ಸೋಷಿಯಲ್ಸ್ ಇರತ್ತಲ್ಲ ಆಗ ನಿಸಾರ್ ಅಹಮದ್ ಅವರ ಕೈಯಿಂದ ಈ ಸಟರ್ಿಫಿಕೇಟ್ ನಿನಗೆ ಕೊಡಿಸ್ತೇನೆ ..ಅಂದರು. ಚಿತ್ರದುರ್ಗದಲ್ಲಿ ಟೌನ್ ಹಾಲ್ ಪಕ್ಕದಲ್ಲಿ ಒಂದು ಸಣ್ಣ ತರಗತಿಯಲ್ಲಿ ನಮ್ಮ ಕ್ಲಾಸ್ ಸೋಷಿಯಲ್ಸ್ ಗ್ಯಾದರಿಂಗ್. ನಿಸಾರ್ ಅಹಮದ್ ಮುಖ್ಯ ಅತಿಥಿ! ಗುಂಡಣ್ಣನವರು ನನ್ನ ಹೆಸರು ಕೂಗಿ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ನನಗೆ ಬಹುಮಾನ ಬಂದಿರೋದು ಅನೌನ್ಸ್ ಮಾಡಿ ನಾನು ವೇದಿಕೆಗೆ ಬಂದು ಸಟರ್ಿಫಿಕೇಟ್ ನಿಸಾರ್ ಅಹಮದ್ ಅವರ ಕೈಯಿಂದ ಪಡೆಯಬೇಕೆಂದು ಅನೌನ್ಸ್ ಮಾಡಿದರು! ನಾನು ಆ ವರೆಗೂ ವೇದಿಕೆ ಹತ್ತಿದವನೇ ಅಲ್ಲ! ಕಾಲೆಲ್ಲಾ ಥರ ಥರ ನಡುಗುತಾ ಇವೆ. ನಾಚುತ್ತಾ ನುಲಿಯುತ್ತಾ ಹೇಗೋ ವೇದಿಕೆಗೆ ಹೋಗಿ ನಿಸಾರ್ ಅಹಮದರ ಮುಂದೆ ನಿಂತೆ. ಅವರು..”ಪರವಾಗಿಲ್ಲಯ್ಯಾ…ನಿನ್ನ ಪದ್ಯಗಳೆನ್ನೆಲ್ಲಾ ನನಗೆ ತಂದು ತೋರಿಸು..ನೋಡ್ತೇನೆ” ಎಂದರು..ಹೀಗೆ ಪರೋಕ್ಷವಾಗಿ ನಿಸಾರ್ ನನ್ನ ಅಧ್ಯಾಪಕರಾದರು! ನನ್ನ ಮೊದಲ ಕವಿತೆ ನನಗೆ ದೊರಕಿಸಿದ ಆ ಸಟರ್ಿಫಿಕೇಟ್ ಈಗಲೂ ನನ್ನ ಬಳಿ ಇದೆ. ವಿಶೇಷವೆಂದರೆ ಅದರಲ್ಲಿ ಪುತಿನ ಅವರ ಸಹಿ ಇದೆ! ಇದಕ್ಕಿಂತ ಭಾಗ್ಯ ಇನ್ನೊಂದುಂಟೆ?
]]>

‍ಲೇಖಕರು avadhi

June 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. CanTHee Rava

    MurthygaLE, neevu nimma kannada panditarondige charchisidda mungaaru maLeya padya nimage bahumaana tandukotta padyakkinta chennagide. adu nijavaada kavithe.
    Innondu viSHaya, neevoo gamanisirabahudu. modalu haLagannadada CHandassige maaru hOgi bAla BHArathavannu baredu, AmEle panjeyavaranthe geetharachane maadi, konege Adhunika kAvya rachaneyalli todagikonda neevu, 20 nE shathamAnada halavAru kavigaLa beLavaNigeyannu prathinidhididdeeri. Adare, nimmoLagina kavige panjeyavara mElina mOhavannu mareyalu AgalE illa. Nimma kavithegaLE heLuttave.

    ಪ್ರತಿಕ್ರಿಯೆ
  2. H S V Murthy

    ಕವಿತೆಗಳೇ ಹಾಗೆ. ಕೆಲವು ಆಕಸ್ಮಿಕ; ಉಳಿದವು ಅನಿರೀಕ್ಷಿತ.
    -ಎಚ್ಚೆಸ್ವಿ

    ಪ್ರತಿಕ್ರಿಯೆ
  3. ವಿನಾಯಕ ಕುರುವೇರಿ

    ಸರ್, ನಿಮ್ಮ ಮೊದಲ ಕವನದ ಬಗೆಗಿನ ಲೇಖನ ಓದಲು ಬಹಳ ಖುಷಿಯಾಯ್ತು. ಮೊದಲ ಸಲ ನಮ್ಮ ರಚನೆಗಳನ್ನು ಇನ್ನೊಬ್ಬರು ಓದಿ ಅವರಿಂದ ಸಿಕ್ಕುವ ಆ ಬೆಂಬಲ, ಪ್ರತಿಕ್ರಿಯೆ ಅತ್ಯಂತ ಪುಳಕ ಕೊಡುವಂಥದ್ದು. ಅದನ್ನು ಅಷ್ಟೇ ಲಾಲಿತ್ಯ ಪೂರ್ಣವಾಗಿ ನಮಗೂ ಉಣಬಡಿಸಿದ್ದೀರ.. ಧನ್ಯವಾದಗಳು..
    (ತಮಾಷೆಗೆ )
    ಎಸ್. ಎಸ್. ಎಲ್.ಸಿ ಯಲ್ಲಿ ಪಂಡಿತರು ಕಲಿಸಿದ ಛಂದಸ್ಸನ್ನು ಪಿ.ಯು.ಸಿ ಗೆ ಬರುವಾಗಲೇ ಬಿಟ್ಟು ಬಿಟ್ಟಿರಾ ? 😉

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: