
ಡಾ ಇಸ್ಮಾಯಿಲ್ ಎನ್
ಕನ್ನಡ ನಾಡಿನ ಖ್ಯಾತ ಲೇಖಕಿ, ಸಾರಾ ಅವರು ತಮ್ಮ86ನೆಯ ವಯಸ್ಸಿನಲ್ಲಿ ನಿಧನರಾದರು.1980-82 ರಲ್ಲಿ ನಾನು ಎಂ.ಎ ಓದುತ್ತಿದ್ದಾಗ, ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಪ್ರಕಟವಾಗುತ್ತಿತ್ತು.ಆಗ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದ್ದ ಕಾದಂಬರಿಯನ್ನು ಓದಿ ಮುಗಿಸಿದಾಗ,ನಮ್ಮ ಸಮುದಾಯದ ತಲ್ಲಣಗಳು, ಕಣ್ಣ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದ ಅನುಭವವಾಗುತ್ತಿತ್ತು.
ಪ್ರೇರಿತನಾದ ನಾನು, ಸಂಶೋಧನೆಗೆ ಮನಸ್ಸು ಮಾಡಿದೆ. ಮುಸ್ಲಿಂ ಜಗತ್ತು, ಮುಸ್ಲಿಂ ಲೇಖಕರ ಸಾಹಿತ್ಯದಲ್ಲಿ ತೆರೆದುಕೊಂಡ ಬಗೆಗೆ, ಎಂ.ಎ ಮುಗಿಸಿದ ಕೂಡಲೇ ಸಾರಾ ಅವರಲ್ಲಿ ಚರ್ಚಿಸಿದೆ. ಬಿಳಿಮಲೆ ಅವರು ಇದಕ್ಕೆ ಪೂರಕವಾಗಿ ಬೊಳುವಾರು ಮತ್ತು ಕಟ್ಪಾಡಿಯವರಲ್ಲಿ ಮಾತಾಡಲು ಸಲಹೆ ನೀಡಿದರು. ಸಾರಾ, ಬೊಳವಾರು, ಕಟ್ಪಾಡಿ ಇವರನ್ನು ಒಳಗೊಂಡಂತೆ ಸುಮಾರು ಹತ್ತಿಪ್ಪತ್ತು ಮುಸ್ಲಿಂ ಲೇಖಕರಲ್ಲಿ ಚರ್ಚಿಸಿದ ಬಳಿಕ ನನ್ನ ಸಂಶೋಧನಾ ಕೆಲಸಕ್ಕೆ ಗಟ್ಟಿಯಾದ ಒಂದು ಚೌಕಟ್ಟು ದೊರಕಿತು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಂತೆ ಅಧ್ಯಯನಕ್ಕೆ ಹೆಚ್ಚು ಸರಕುಗಳು ದೊರೆತುದು ಸಾರಾ ಅವರ ಕೃತಿಗಳಿಂದಲೇ.
ಸಾರಾ ಅವರ ಸಾಹಿತ್ಯ ಕೃತಿಗಳು ನನ್ನ ಪಿ.ಎಚ್ಡಿ ಸಂಶೋಧನೆಗೆ ಬಹು ದೊಡ್ಡ ಅಡಿಪಾಯವನ್ನು ಹಾಕಿ ಕೊಟ್ಟಿತು. ಸಾರಾ ಅವರ ಮೃತ ದೇಹವನ್ನು ನೋಡುತ್ತಲೇ ಒಬ್ಬ ಸಂಶೋಧನಾ ವಿದ್ಯಾರ್ಥಿಯಾಗಿ ನನಗೆ ಅವರು ನೀಡಿದ ಸಲಹೆಗಳು ಮರುಕಳಿಸಿದವು. ಸಮುದಾಯದ ಕಟ್ಟುಪಾಡುಗಳೆಂದು ಕರೆಯಲಾಗುತ್ತಿದ್ದ ಕೆಲವೊಂದು ಮೂಢ ನಂಬಿಕೆಗಳನ್ನು ಬಹಳ ನಿಷ್ಠುರವಾಗಿ ವಿರೋಧಿಸುತ್ತಿದ್ದ ಅವರು, ನನ್ನನ್ನು ಮತ್ತೆ ಮತ್ತೆ ಕಾಡುತ್ತಿದ್ದ ಅನುಭವ. ಅವರೆಂದೂ ನಾಸ್ತಿಕರಾಗಿರಲಿಲ್ಲ. ನಮಾಜು಼, ಉಪವಾಸ, ಜ಼ಕಾತ್ ಮುಂತಾದ ಇಸ್ಲಾಂನ ಮೂಲ ತತ್ತ್ವಗಳಿಗೆ ಸದಾ ಬದ್ಧರಾಗಿದ್ದರು. ಆದಾಗಿಯೂ ಕೆಲವೊಂದು ಕ್ಷುಲ್ಲಕ ಕಾರಣಗಳಿಗೆ ಸಮುದಾಯದ ಕೆಲವು ವ್ಯಕ್ತಿಗಳ, ಸಂಸ್ಥೆಗಳ ವಿರೋಧವನ್ನು ಕಟ್ಟಿಕೊಂಡಿದ್ದರು.

ನನಗೆ ಇವು ಯಾವುವೂ ಮುಖ್ಯವಾಗುವುದಿಲ್ಲ, ಬದಲಾಗಿ ಸಮುದಾಯದ ಕಟ್ಟಕಡೆಯ ಮನುಷ್ಯರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಅವರೊಂದಿಗೆ ಬೆರೆಯುತ್ತಿದ್ದರು. ಸಾಧ್ಯವಾದಷ್ಟು ಸಹಾಯವನ್ನೂ ಮಾಡುತ್ತಿದ್ದರು. ಇವೆಲ್ಲವನ್ನೂ ಗುರುತಿಸಿದ ನಾವು ಅವರ 75ನೆಯ ಹುಟ್ಟು ಹಬ್ಬವನ್ನು ಅರ್ಥವತ್ತಾಗಿ ಮಂಗಳೂರಿನಲ್ಲಿ, ಡಾ.ಸಬಿಹಾ ಅವರ ನೇತೃತ್ವದಲ್ಲಿ ಆಚರಿಸಿದೆವು. “ಚಂದ್ರಗಿರಿ” ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದೆವು. ಅವರ ಹೆಸರಿನಲ್ಲಿ ಶಾಶ್ವತವಾದ ಒಂದು ನಿಧಿಯನ್ನು ಸಂಗ್ರಹಿಸಿ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಹೆಸರಿನಲ್ಲಿ ವರ್ಷದ ಶ್ರೇಷ್ಠ ಕೃತಿಯೊಂದಕ್ಕೆ ಪ್ರಶಸ್ತಿ ನೀಡುವ ವ್ಯವಸ್ಥೆ ಮಾಡಿದ್ದೇವೆ.
ನಾನು ಕಂಡಂತೆ ಸಾರಾ ಅಂಟಿಯವರು ಬಹಳ ಗಟ್ಟಿಗಿತ್ತಿ, ವ್ಯವಹಾರ ಜ್ಞಾನ ಉಳ್ಳವರು, ಇಳಿ ವಯಸ್ಸಿನಲ್ಲೂ ದೊಡ್ಡದೊಂದು ಚೀಲವನ್ನು ಹೆಗಲಿಗೆ ಹಾಕಿಕೊಂಡು ಮಾರುಕಟ್ಟೆಗೆ ಹೋಗಿ ನಿತ್ಯ ಬಳಕೆಯ ತರಕಾರಿ, ಮೀನು, ಮಾಂಸ ಹಾಗೂ ಇತರ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ದಾರಿಯಲ್ಲಿ ಸಿಕ್ಕಾಗ ಕೆಲವೊಂದು ವಿಚಾರಗಳನ್ನು ಚರ್ಚಿಸುತ್ತಿದ್ದರು. ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆಯ ಆಶ್ರಯದಲ್ಲಿ, ದಿವಂಗತ. ಯು. ಶ್ರೀನಿವಾಸ ಮಲ್ಯ ಸ್ಮಾರಕ ಪ್ರಶಸ್ತಿಯನ್ನು ನಾನು, ಚಂದ್ರಕಲಾ ನಂದಾವರ ಮತ್ತು ಉದಯ ಕುಮಾರ್ ಇರ್ವತ್ತೂರು ಸದಸ್ಯರಾಗಿದ್ದ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಾರಾ ಅವರಿಗೆ ನೀಡಲಾಗಿತ್ತು. ಇದು ಅವರ ಜೀವಮಾನದ ಸಾಧನೆಗೆ ಸಂದ ಗೌರವ. ಅವರಿಗೆ ದೊರಕಿದ ಎಲ್ಲಾ ಪ್ರಶಸ್ತಿಗಳಿಗಿಂತ ಮುಖ್ಯವಾಗಿ ನಾಡು ಅವರಿಗೆ ನೀಡಿದ ಪ್ರೀತಿ ಇದೆಯಲ್ಲ ಅದು ಅವರಿಗೆ ಸಂದ ಬಹಳ ದೊಡ್ಡ ಗೌರವ ಎಂದು ನಾನಂತೂ ಭಾವಿಸಿದ್ದೇನೆ. ಇನ್ನು ಸಾರಾ ಅವರು ನಮ್ಮೊಂದಿಗಿಲ್ಲ. ಆದರೆ ಅವರ ನೆನಪು ಸದಾ ನಮ್ಮ ಜೊತೆಯಲ್ಲಿ ಇರುತ್ತದೆ. ನಿಮ್ಮ ಆದರ್ಶಗಳು ನಾಡಿಗೆ ದಾರಿ ದೀಪವಾಗಲಿ ಆಂಟಿ.






Aunty?