
ಎಚ್ ಎಸ್ ರಾಘವೇಂದ್ರರಾವ್
ಎಚ್.ಎಸ್. ರಾಘವೇಂದ್ರರಾವ್ ಕನ್ನಡದ ಖ್ಯಾತ ವಿಮರ್ಶಕರು ಮತ್ತು ಅನುವಾದಕರು. ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಲವು ಸಂಸ್ಥೆಗಳಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ವಿಶ್ಲೇಷಣೆ, ನಿಲುವು, ಪ್ರಗತಿಶೀಲತೆ, ಹಾಡೆ ಹಾದಿಯ ತೋರಿತು, ತರು ತಳೆದ ಪುಷ್ಟ ಮೊದಲಾದವು ವಿಮರ್ಶಾ ಸಂಕಲನಗಳು. ಜನಗಣಮನ – ಪ್ರವಾಸ ಕಥನ, ಬಾಲಮೇಧಾವಿ, ಇರುವೆಗಳು ಮತ್ತು ಇತರ ಕತೆಗಳು, ಪ್ರೀತಿಸುವುದೆಂದರೆ, ಕಪ್ಪು ಕವಿತೆ, ಮಂಜು ಮಣ್ಣು ಮೌನ, ಮಂಜಿನ ಶಿವಾಲಯಕ್ಕೆ ಮೊದಲಾದವು ಅನುವಾದಿತ ಕೃತಿಗಳು. ಶತಮಾನದ ವಿಮರ್ಶೆ, ಇಂದಿನ ಕವಿತೆ, ಪ್ರಾಚೀನ ಕಾವ್ಯಮಾರ್ಗ ಮೊದಲಾದವು ಸಂಪಾದಿತ ಕೃತಿಗಳು.
ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಶಾ. ಬಾಲೂರಾವ್ ಪ್ರಶಸ್ತಿ, ಎಲ್. ಬಸವರಾಜು ಪ್ರಶಸ್ತಿ, ಪ್ರೊ. ತೀ.ನಂ.ಶ್ರೀ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಸಂದಿವೆ.

ಈ ಸಂಚಿಕೆಗಾಗಿ ವಿಲಿಯಂ ಶೇಕ್ಸ್ಪಿಯರ್ನ ಸಾನೆಟ್ ಒಂದನ್ನು ಅನುವಾದಿಸಿದ್ದಾರೆ.
ವಿಲಿಯಂ ಶೇಕ್ಸ್ಪಿಯರ್ ಇಂಗ್ಲಿಷ್ ಕವಿ ಮತ್ತು ನಾಟಕಕಾರ. ಜಗತ್ತಿನ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬನೆಂದು ಗೌರವಿಸಲಾಗುತ್ತದೆ. ಈತನ ಕೃತಿಗಳು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಹ್ಯಾಮ್ಲೆಟ್, ಮ್ಯಾಕ್ಬೆತ್, ಕಿಂಗ್ಲಿಯರ್, ಮಿಡ್ಸಮ್ಮರ್ ನೈಟ್ ಡ್ರೀಮ್ಸ್, ಜೂಲಿಯಸ್ ಸೀಸರ್, ರೋಮಿಯೊ ಜೂಲಿಯೆಟ್ ಮೊದಲಾದವು ಪ್ರಸಿದ್ಧ ನಾಟಕಗಳು. ಸುಮಾರು ೧೫೪ ಸಾನೆಟ್ಗಳನ್ನು ರಚಿದ್ದಾನೆ.
ಚಲಿಸುವಂತೆ ಕಡಲಿನ ಅಲೆ ಕಲ್ಲುಗೋರಿಯ ಕಡೆಗೆ
ಧಾವಿಸುತಿವೆ ಬಾಳನಿಮಿಷ ಅಂತ್ಯದ ಅನಿವಾರ್ಯಕೆ
ಮೊದಲು ಮಡಿದ ತೆರೆಯ ಹಿಂದೆ, ಇನ್ನೊಂದರ ನಡಿಗೆ
ಈ ಕ್ಷಣ ಆ ಕ್ಷಣ ಊ ಕ್ಷಣ ಎಲ್ಲವು ಓಡಿವೆ ಮುಕ್ತಾಯಕೆ
ಕಡಲಂಚಲಿ ಹುಟ್ಟಿಹೊಳೆದ ಬೆಳಕಿನೊಂದು ಹೊನಲು
ತೆವಳಿದೆ ನಡುಹಗಲ ಕಡೆಗೆ, ಸಿದ್ಧಿಯ ಕಿರೀಟ ತಲೆಗೆ
ಶುರುವಾಯಿತು ಅಧಃಪತನ, ಗ್ರಹಣ, ಇರುಳು ಬರಲು
ಕಾಲ ಕೊಟ್ಟ ಕೊಡುಗೆಯೀಗ ಅವನಿಂದಲೆ ಮಣ್ಣಿಗೆ

ಹರೆಯದ ವೈಭವದ ನಡುವೆ, ನಾಟಿದೆ ಕಾಲದ ಸಬಳ
ಚೆಲುವಿನ ಹಣೆಗೆರೆಗಳಲ್ಲಿ ಸೀಳುವ ನೇಗಿಲ ದಾಳಿ
ನೆಲದೊಡಲಿನ ಅತ್ಯಪೂರ್ವ ಸೊಬಗು ಅದರ ಕವಳ
ಇರುವುದೆಲ್ಲ ಕಾಯುತ್ತಿವೆ ಕುಡುಗೋಲಿನ ಪಾಳಿ
ಕಾಲದಳವನು ಮೀರಿ ಈ ನನ್ನ ಕವಿತೆ, ಇಂದಿಗೂ ಎಂದಿಗೂ ಉಳಿಯಬಹುದು,
ನಿನ್ನ ಚೆಲುವಿನ ಸ್ತವನ, ಮಾಡಿಮೆರೆಯುವ ಕವನ ಕ್ರೂರಿಕಾಲನ ಕೂಡ ಮೀರಬಹುದು.






0 Comments