ಸಹೃದಯಿ ‘ಅಜ್ಜಿಮನೆ’ ನೆನೆದು..

ಆರ್ ಜಿ ಹಳ್ಳಿ ನಾಗರಾಜ

ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಹಲವರಿಗೆ ಕೊಂಡಿಯಾಗಿದ್ದ, ಒಂಟಿಯಾಗಿಯೇ ಬದುಕಿ, ಒಂಟಿಯಾಗಿಯೇ ನಮ್ಮಿಂದ ಮರೆಯಾದವನು ಗೆಳೆಯ ನಾಗೇಂದ್ರ.

ಲೆನಿನ್ ಗಡ್ಡದಾರಿಯಾದ ಅವನನ್ನು “ಅಜ್ಜಿಮನೆ” ಎಂದೇ ಕರೆಯುತ್ತಿದ್ದೆವು. ಹಾಗೆ ಕರೆದರಷ್ಟೇ ಅವನು identify ಆಗುತ್ತಿದ್ದುದು.

ಹಿಂದಿನ ವರ್ಷದವರೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ “ಗ್ರಂಥಸರಸ್ವತಿ” ಪುಸ್ತಕ ಮಳಿಗೆಯ ಪುಸ್ತಕ ಮಾರಾಟದ ವಹಿವಾಟು ನೋಡಿಕೊಳ್ಳುತ್ತಿದ್ದ. ಅವನಿಗೆ ಇಬ್ಬರು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರದ ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾಭಾರತಿ, ಇತರೆ ಅಕಾಡೆಮಿಗಳ ಪುಸ್ತಗಳನ್ನೆಲ್ಲ ಮಾರಾಟ ಮಾಡಿ, ಕಂಪ್ಯೂಟರ್ ಲೆಕ್ಕ ಇಡುವುದು, ಅದನ್ನು ಸಂಬಂಧಿಸಿದ ಲೆಕ್ಕಾಧಿಕಾರಿಗೆ ಒಪ್ಪಿಸುವುದು, ಉಸ್ತುವಾರಿಯಲ್ಲಿದ್ದ ಅವನ ಹೊಣೆ ಆಗಿತ್ತು.

ಮಳಿಗೆಗೆ ಹೊಸ ಪುಸ್ತಕ ಬಂದರೆ, ಹಳೆಯ ಪುಸ್ತಕಗಳು ಗೋಡೌನಿನಿಂದ ಬಂದರೆ, ಫೋನ್ ಮಾಡಿ “ಬೇಗ ಬಂದರೆ ಪುಸ್ತಕ ಸಿಕ್ಕುತ್ತೆ. ತಡವಾದರೆ ಇಲ್ಲ, Reserve ಮಾಡಲಾಗುವುದಿಲ್ಲ!” ಎಂದು ಸ್ನೇಹಿತನಾದರೂ ಖಡಕ್ ಸಂದೇಶ ರವಾನಿಸುತ್ತಿದ್ದ. ಮಧ್ಯಾಹ್ನ ಊಟದ ಸಮಯ ಬಂದರೆ ಎದುರಿನ ಕಾರಂತ ಕ್ಯಾಂಟೀನಿಂದ ಅನ್ನ ಸಾಂಬಾರ್ ತಂದು, ಸ್ನೇಹಿತರಿಗೂ ಕೊಡಿಸುತ್ತಿದ್ದ. ಬೇರೆ ಸಮಯದಲ್ಲಿ ಚಹಾ ಸೇವನೆ, ಸಿಗರೇಟು ಸೇವನೆ ಹೆಚ್ಚೇ ಮಾಡುತ್ತಿದ್ದ. ಸಂಜೆ ಯಾವಾಗಲಾದರೊಮ್ಮೆ ಆಪ್ತ ಮಿತ್ರ ಜೊತೆ ಮಾತ್ರ ಸಂತೋಷಕೂಟದಲ್ಲಿ ಭಾಗವಹಿಸುತ್ತಿದ್ದ.

ನಾಗೇಂದ್ರ ಅಪ್ಪಟ ಪ್ರಾಮಾಣಿಕ ವ್ಯಕ್ತಿ. ಸ್ನೇಹದಲ್ಲಿ ಆಯ್ಕೆ ಇತ್ತು. ಸಿಕ್ಕವರನ್ನೆಲ್ಲ ಅವನ ಆಪ್ತ ವಲಯಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಅವನ ಮೊದಲ ಪರಿಚಯ ಖ್ಯಾತ ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ ದೇಸಾಯಿ ಮೂಲಕ‌‌ ಆಗಿತ್ತು. “ನಿಷ್ಕರ್ಷ”, “ನಮ್ಮೂರ ಮಂದಾರ ಹೂವೆ” ಮೊದಲಾದ ಸಿನಿಮಾ ನಿರ್ಮಾಣದಲ್ಲಿ ಜತೆ ಇದ್ದ ಆಪ್ತ.

ನಾನು‌ ಕೆಲವು ವರ್ಷ ಹೊಟ್ಟೆಪಾಡಿಗಾಗಿ ಚಲನಚಿತ್ರ ಪತ್ರಕರ್ತನಾಗಿ ಕಾರ್ಯನಿರ್ವಹಿಸಿದೆ. ಆಗ ಅದೆಷ್ಟು ನಟನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಹೋದ್ಯೋಗಿ ಪತ್ರಕರ್ತರು, ಛಾಯಾಚಿತ್ರಗ್ರಾಹಕರುಗಳ ಪರಿಚಯ ಆಯಿತು.
ದೇಸಾಯಿ ಅವರಿಗೆ ಹಲವು ವಿಚಾರಗಳಲ್ಲಿ ಸಹಾಯಕನಾಗಿ ಸಂಪರ್ಕ ಸೇತುವಾಗಿದ್ದ ನಾಗೇಂದ್ರನಿಗೆ ಚಲನಚಿತ್ರದ ನಿರ್ಮಾಣದ ಹಿಂದಿನ ಪರಿಚಯ ಚೆನ್ನಾಗಿತ್ತು. ಹೆಚ್ಚಾಗಿ ನಮ್ಮ ಉತ್ತಮ ಛಾಯಾಚಿತ್ರಗ್ರಾಹಕ ಡಿ.ಸಿ. ನಾಗೇಶ, ‘ಡಾ. ರಾಜಕುಮಾರ ಸಮಗ್ರ ಜೀವನ ಚರಿತ್ರೆ’ ಬಗ್ಗೆ ಅಪರೂಪದ ಕೃತಿ ರಚಿಸಿದ ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿಗೆ ಕೃತಿ ಮುದ್ರಣದ ಕಷ್ಟಕಾಲದಲ್ಲಿ ಸಾವಿರಾರು ರೂ.ಗಳ ಆರ್ಥಿಕ ಸಹಾಯ ನೀಡಿದ್ದ. ಮತ್ತೊಬ್ಬ ಪತ್ರಕರ್ತ ಬಿ.ಎನ್. ಸುಬ್ರಹ್ಮಣ್ಯ ಅವರೊಡನೆಯೂ ಸಖ್ಯದಿಂದ ಇದ್ದ. ಹಾಗೆ ನೋಡಿದರೆ ಅನೇಕ ಹಿರಿಯ ಸಾಹಿತಿಗಳೂ‌ ಇವನ ಸಹಾಯ ಪಡೆದಿದ್ದರು.

ಮುಂದೆ ಅವನು ಚಲನಚಿತ್ರ ಪಕ್ಕಕ್ಕಿಟ್ಟು, ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಪುಟ್ಟ ಕೆಲಸಕ್ಕೆ ಸೇರಿಕೊಂಡ. ಅವನಿಗೆ ಟೈಪಿಂಗ್ ಕೆಲಸ ಚೆನ್ನಾಗಿ ಗೊತ್ತಿತ್ತು. ಅವಿವಾಹಿತನಾಗಿಯೇ ಉಳಿದ ನಾಗೇಂದ್ರನಿಗೆ, “ಒಂಟಿ ಇರಬೇಡವೋ, ಮದುವೆ ಆಗೋ. ನಿನಗೇನು ಕಡಿಮೆ ಇದೆ” ಎಂದರೆ, “ಏಕೆ ಅದೆಲ್ಲಾ ಗೋಳು ಬಿಡು ಗುರು!” ಎನ್ನುತ್ತಿದ್ದ. ಬಸವನಗುಡಿಯಲ್ಲಿ ಪಿತ್ರಾರ್ಜಿತ ಒಂದು ‌ಮನೆಯಿತ್ತು. ನನಗೆ ಅವನಿದ್ದ ಒಂಟಿ ಮನೆ ಎಷ್ಟೋ ದಿನ ಆಶ್ರಯ ಕೊಟ್ಟಿತ್ತು. ಅವನು ಆ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದೇ ಕಡಿಮೆ. ಹೊರಗಿನ ಪಾರ್ಸಲ್ ಊಟಕ್ಕೇ ಅಂಟಿಕೊಂಡುಬಿಟ್ಟಿದ್ದ. ರಾತ್ರಿ ಅವನ ಮನೆಯಲ್ಲಿ ಠಿಕಾಣಿ ಹೂಡುವ ಮುನ್ನ ಒಂದು ಪಾರ್ಸಲ್ ಇಡ್ಲಿ, ಇಲ್ಲ ಪಲಾವ್ ತೆಗೆದುಕೊಂಡು ಹೋಗುತ್ತಿದ್ದೆ. ಅವನು ಕೆಲವು ತಿಂಗಳ ಹಿಂದೆ ಇಲಾಖೆಯಿಂದ ನಿವೃತ್ತನಾಗಿದ್ದ. ನಂತರ ಆಗೊಮ್ಮೆ ಈಗೊಮ್ಮೆ ಎಂದು ಭೇಟಿ ಆಗುತ್ತಿದ್ದ. ಈಚೆಗೆ ಸಂಪರ್ಕವೂ ಬಿಟ್ಟು ಹೋಗಿತ್ತು.

“ಕರೋನ” ಮಹಾಮಾರಿಯಿಂದ ಲಾಕ್ ಡೌನ್ ಶುರುವಾದ ನಂತರ ಒಂಟಿಯಾದ ಅವನು ಊಟ ಮತ್ತಿತರೆ ಅಗತ್ಯಕ್ಕೆ ಏನು ಮಾಡಿಕೊಂಡನೋ ಗೊತ್ತಿರಲಿಲ್ಲ. ಮೇ 17ರ ಇಡೀ ದಿನ ಅವನ ಮನೆ ಬಾಗಿಲು ತೆರೆಯದೇ ಇದ್ದಾಗ ಪಕ್ಕದ ಮನೆಯವರು ಬಾಗಿಲು ತಟ್ಟಿದರೂ ಸದ್ದಿಲ್ಲದೇ ಇದ್ದಾಗ ಅನುಮಾನ ಬಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಎಲ್ಲರ ಸಮ್ಮುಖದಲ್ಲಿ ಬಾಗಿಲು ಹೊಡೆದು ಒಳ ಹೋದಾಗ ಅವನು ಸತ್ತಿರುವುದು ಖಾತ್ರಿಯಾಗಿದೆ. ರಾತ್ರಿ ಮಲಗಿದ್ದವನು ಬೆಳಗ್ಗೆ ಎದ್ದಿಲ್ಲ ಎಂದರೆ, ಬಹುಶಃ ಹೃದಯಾಘಾತದಿಂದ ಸಾವು ಸಂಭವಿಸಿರಬೇಕು. ಅವನಿಗೆ ಒಬ್ಬ ಸಹೋದರಿ ಇದ್ದರು. ಅವರು ಭದ್ರಾವತಿಯಲ್ಲಿ ಇದ್ದುದರಿಂದ ಅವರಿಗೆ ಮಾಹಿತಿ ರವಾನಿಸಲಾಯಿತು.

ಹಣಕಾಸಿನ ವಿಚಾರದಲ್ಲಿ ಅಜ್ಜಿಮನೆ ಅಪ್ಪಟ ಪ್ರಾಮಾಣಿಕ. ಯಾರಿಗೂ ಅನ್ಯಾಯ ಮಾಡಿದವನಲ್ಲ. ಸ್ನೇಹಿತರಿಗೆ ಏನಾದರೂ ಕಚೇರಿಗಳಿಗೆ ಸಂಬಂಧಿಸಿದ ಕೆಲಸ ಇದ್ದರೆ ತಾನೇ ಓಡಾಡಿ ಕೆಲಸ ಮಾಡಿಸುತ್ತಿದ್ದ.  ಆಪ್ತ ಗೆಳೆಯನ ಅಕಾಲಿಕ ನಿಧನಕ್ಕೆ ನನ್ನ ಸಂತಾಪ.

‍ಲೇಖಕರು avadhi

May 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. H.S. RAGHAVENDRA RAO

    ಪ್ರೀತಿಯ ನಾಗೇಂದ್ರ ಅವರು 1972-77 ರ ಅವಧಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದರು. ಅವರ ಅಣ್ಣ ಕೇಶವಮೂರ್ತಿ ನನ್ನ ಸಹೋದ್ಯೋಗಿ. ಅಂದಿನಿಂದ ಕೊನೆಯೆವರೆಗೆ ನನ್ನ ಬಗ್ಗೆ ಒಂದೇ ಬಗೆಯ ಪ್ರೀತಿ ಗೌರವಗಳನ್ನು ತೋರಿದ ನಾಗೇಂದ್ರ ನಿಜಕ್ಕೂ ಒಳ್ಳೆಯ ಮನುಷ್ಯ. ಪ್ರಾಮಾಣಿಕ ಕೆಲಸಗಾರ. ಗೆಳೆಯ ಆರ್.ಜಿ. ಹಳ್ಳಿಯವರ ಬರಹ ತುಂಬಾ ಆತ್ಮೀಯವಾಗಿದೆ. ಮನಸ್ಸು ಕಲಕುತ್ತದೆ.
    ಎಚ್.ಎಸ್. ರಾಘವೇಂದ್ರ ರಾವ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: