‘ಸಹಯಾನ’ದ ಸುಖ..

ಸುಧಾ ಆಡುಕಳ 

‘ನಾಳೆ ಸಂಜೆ ಲಾಡು ಕಟ್ಟಲಿಕ್ಕೆ ಹಾಜರಿರುವುದು’ ಎಂದು ಭಂಡಾರಿ ಸರ್ ಮೆಸೇಜ್ ಹಾಕಿದಾಗ ‘ಸಹಯಾನ’ ಸಾಹಿತ್ಯೋತ್ಸವ ಆರಂಭಗೊಳ್ಳಲು ಒಂದೇ ದಿನ ಉಳಿದಿತ್ತು. ತವರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಂಥದ್ದೇ ತೊಂದರೆಯಿದ್ದರೂ ಹಾಜರಿರುವ ಹೆಣ್ಣುಗಳಂತೆಯೇ ನಾವೊಂದಿಷ್ಟು ಜನ ಸಹಯಾನ ಸಾಹಿತ್ಯೋತ್ಸವದ ಖಾಯಂ ಸದಸ್ಯರು. ಸಕುಟುಂಬ ಪರಿವಾರ ಸಮೇತರಾಗಿ ಬೆಳಿಗ್ಗೆಯೇ ಹೋಗಿ ರಾತ್ರಿ ಎಲ್ಲ ಮುಗಿಯಿತೆನ್ನುವಾಗ ಹೊರಡುವವರು.

ಆದರೆ ಈ ಸಲ ಸರ್ ಯಾಕೋ ಮೊದಲ ದಿನವೇ ಪ್ರೀತಿಯಿಂದ ಕರೆದಿದ್ದರು. ಅದರೊಂದಿಗೆ ಮೊದಲ ದಿನವೇ ಗೆಳತಿಯರಾದ ಮಮತಾ, ಪ್ರತಿಭಾ, ಮಾಧವಿ, ಯುಮುನಾ ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಸಕಲ ಜೀವರಾಶಿಗಳನ್ನೂ ಪ್ರೀತಿಸುವ ಇನ್ನಕ್ಕ ಇರುತ್ತಾರೆಂಬ ಸೂಚನೆಯೂ ಸಿಕ್ಕಿತ್ತು.

ಮೊದಲ ದಿನವೇ ಹೋಗಲು ಮನಸ್ಸು ತಹತಹಿಸುತ್ತಿದ್ದರೂ ಇನ್ನೊಂದು ಆಮಿಷ ಅಂತರ್ಜಾಲದ ಮೂಲಕವೇ ಮನೆಯೊಳಗೆ ಬಂದಿಳಿದಿತ್ತು. ಕುವೆಂಪು ಅವರ ಜನ್ಮದಿನಾಚರಣೆ ಮತ್ತು ಅವರ ‘ರಾಮಾಯಣದರ್ಶನಂ’ ನಾಟಕಗಳೆರಡೂ ಏಕಕಾಲಕ್ಕೆ ಆಯೋಜಿಸಲ್ಪಟ್ಟು ‘ಬಾ ಮಲೆನಾಡಿಗೆ’ ಎಂದು ಕೈಬೀಸಿ ಕರೆಯುತ್ತಿದ್ದವು. ‘ಇಷ್ಟು ಹತ್ತಿರವಿದ್ದು ಕುಪ್ಪಳ್ಳಿ ನೋಡದ ಬದುಕು ವ್ಯರ್ಥ’ ಎಂದು ಆಣತಿ ಕೊಡಿಸಿದ್ದ ಮಗ. ಹೊಸದಾಗಿ ಡ್ರೈವಿಂಗ್ ಕಲಿತ ಅವನಿಗೋ ಆಗುಂಬೆಯ ದಟ್ಟ ಕಾಡಿನ ನಡುವೆ ಕಾರು ಚಲಾಯಿಸುವ ಹುಕಿ ಬಂದಿತ್ತು. ಸರಿಯೆಂದು ನಮ್ಮ ಕಾರು ನಮ್ಮೆಲ್ಲರನ್ನೂ ತುಂಬಿಸಿಕೊಂಡು ಆಗುಂಬೆಯ ಮಾರ್ಗವಾಗಿ ಕವಿಶೈಲದೆಡೆಗೆ ಹೊರಟಿತು. ಆಗುಂಬೆಯಲ್ಲಿಳಿದು ಒಂದೆರಡು ಮಂಗಗಳ ಜೊತೆಗೆ ಸೆಲ್ಫೀ ತೆಗೆದುಕೊಳ್ಳುತ್ತಿರುವಾಗಲೇ ಮಂಗಳೂರಿನಿಂದ ಆಗಮಿಸಿದ ರಂಗಮಿತ್ರರ ತಂಡವೂ ನಾದರೊಂದಿಗೆ ಅಲ್ಲಿಗೆ ಬಂದಿಳಿಯಿತು.

ಅವರೂ ರಾಮಾಯಣದರ್ಶನಕ್ಕೆ ಹೊರಟವರೆಂದು ತಿಳಿದಾಗ ಇನ್ನಷ್ಟು ಖುಶಿ. ಕವಿಶೈಲದಲ್ಲಿ ಕುವೆಂಪುರವರ ಸಮಾಧಿಯೆದುರು ನಾದ ತಂಬೂರಿಯೊಂದಿಗೆ ಕುವೆಂಪುರವರ ಭಾವಗೀತೆಗಳನ್ನು ಭಾವತುಂಬಿ ಹಾಡಿದಾಗ ನಾವೆಲ್ಲರೂ ತನ್ಮಯರಾಗಿ ಕಿವಿಗೊಟ್ಟೆವು. ಸಂಜೆ ತೀರ್ಥಹಳ್ಳಿಯ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸತತ ನಾಲ್ಕೂವರೆ ಗಂಟೆಗಳ ರಾಮಾಯಣದರ್ಶನವನ್ನು ಮುಗಿಸಿದಾಗಲೇ ಬಹುಶಃ ಸಹಯಾನದಲ್ಲಿಯೂ ಲಾಡು ಕಟ್ಟಿ ಮುಗಿದಿರಬೇಕು. ಬೆಳಗಾಗುವವರೆಗೆ ಅಲ್ಲಿರಬೇಕೆಂಬ ಧಾವಂತದಿಂದಲೇ ವಾಹನವೇರಿ ಹೊರಟೆವಾದರೂ ಮಲೆಮನೆ ಘಾಟಿಯಲ್ಲಿ ನಮ್ಮ ಹೊಸ ಡ್ರೈವರ್ ತನ್ನ ವೇಗವನ್ನು ನಿಯಂತ್ರಣದಲ್ಲಿಟ್ಟುದರಿಂದ ಸಹಯಾನಕ್ಕೆ ತಲುಪುವಾಗ ಗಂಟೆ ಹತ್ತಾಗುತ್ತಲಿತ್ತು.

ಪೂರ್ಣಕುಂಭ ಮೆರವಣಿಗೆಗೆ ಅಸಮ್ಮತಿ ಸೂಚಿಸಲೋ ಎಂಬಂತೆ ಸೀರೆಯಲ್ಲಿ ಪ್ರತ್ಯಕ್ಷರಾಗುವ ನಾವೆಲ್ಲರೂ ಡ್ರೆಸ್‍ನಲ್ಲಿದ್ದರೆ ನಮ್ಮ ಭಂಡಾರಿ ಸರ್ ಅಪ್ಪಟವಾದ ಭಾರತೀಯ ಶೈಲಿಯ ಪಂಚೆಯಲ್ಲಿ ನಮ್ಮನ್ನು ಸ್ವಾಗತಿಸಿದರು. ‘ಏನ್ ಸರ್ ಇದು? ಸುಮಂಗಲರ ಮೆರವಣಿಗೆ ತಯಾರಿಯೋ ಹೇಗೆ?’ ಎಂದು ಕಿಚಾಯಿಸಿದಾಗ ಅವರು ‘ಹೌದೌದು. ನಿಮಗೆ ಸಂಸ್ಕೃತಿ ರಕ್ಷಣೆಯ ಹೊಣೆ ಕೊಟ್ಟರೆ ನೀವೆಲ್ಲಿ ನಿಭಾಯಿಸ್ತೀರಿ? ಎಲ್ಲಾ ಹಾಳು ಮಾಡುವ ಮೊದಲೆ ನಾವೇ ರಕ್ಷಣೆ ಮಾಡುವ ಅಂತ’ ಎಂದು ಸಮಜಾಯಿಸಿ ನೀಡುತ್ತಿರುವಾಗಲೇ ಕಾರ್ಯಕ್ರಮದ ನಿರೂಪಕಿ ದೀಪಾ ಹಿರೇಗುತ್ತಿ ‘ಈಗ ಕಪ್ಪು ಟಾಪ್‍ನಲ್ಲಿ ಬಂದಿದ್ದೀನಿ. ಹಾಂಗೇನಾದ್ರೂ ನೀವು ಹೇಳಿದ್ರೆ ಜೀನ್ಸ್ನಲ್ಲೇ  ಬರೋದು’ ಎಂದು ಉಗ್ರ ಹೋರಾಟದ ಮುನ್ಸೂಚನೆ ನೀಡಿದರು. ಚರ್ಚೆಗೆ ಕಾವೇರುವ ಮೊದಲೇ ಇನ್ನಕ್ಕ ಅವಲಕ್ಕಿ, ಉಪ್ಪಿಟ್ಟು ಹಿಡಿದುಕೊಂಡು ಬಂದು ನಮ್ಮೆಲ್ಲರ ಬಾಯಿಗೆ ಬೀಗ ಹಾಕಿದರು.

ನ್ಯಾಯಮೂರ್ತಿ ನಾಗಮೋಹನದಾಸ್ ಹಾಗೂ ಸಮಾರೋಪ ಭಾಷಣ ಮಾಡಲಿರುವ ಪುರುಷೋತ್ತಮ ಬಿಳಿಮಲೆಯವರು ಅದಾಗಲೇ ಕೈಯ್ಯಲ್ಲೊಂದು ನೋಟ್ಸ್ ಮತ್ತು ಪೆನ್ ಹಿಡಿದು ವಿಧೇಯ ವಿದ್ಯಾರ್ಥಿಗಳಂತೆ ಕುಳಿತಿರುವಾಗ ನಾವಿನ್ನು ಗಲಾಟೆ ಮಾಡುವುದು ಸರಿಯಲ್ಲವೆಂದು ವೇದಿಕೆಯೆದುರು ಆಸೀನರಾದೆವು.

‘ಸಂವಿಧಾನ ಮತ್ತು ಹೊಸತಲೆಮಾರು’ ಎಂಬ ವಿಷಯದ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಕರಾರುವಕ್ಕಾದ ವಿವರಗಳನ್ನು ನೀಡಿದರು. ಸಂವಿಧಾನ ಓದು ಅಭಿಯಾನಕ್ಕಾಗಿ ಅವರು ರಚಿಸಿದ ಕೈಪಿಡಿ ಆರು ಸಾವಿರಕ್ಕೂ ಅಧಿಕ ಮಾರಾಟವಾಗಿದೆಯೆಂದು ತಿಳಿದಾಗ ಸಭಿಕರೆಲ್ಲರೂ ಚಪ್ಪಾಳೆಯ ಸುರಿಮಳೆಗೈದರು.

ನಡುನಡುವೆ ನಾಡಿನ ಪ್ರಸಿದ್ಧ ಕವಿಗಳ ಕವನ ವಾಚನವೂ ನಡೆಯಿತು. ಕಿರಣ ಗಾಜನೂರು ಮತ್ತು ಅರುಣ ಜೋಳದಕೂಡ್ಲಗಿಯವರ ಪ್ರಬಂಧಮಂಡನೆ ಎಷ್ಟು ಮಾಹಿತಿಪೂರ್ಣವಾಗಿತ್ತೆಂದರೆ ಸ್ವತ: ನ್ಯಾಯಮೂರ್ತಿಗಳೇ ಅವರ ಕೈಕುಲುಕಿ ಅಭಿನಂದಿಸಿದರು. ಬಿಳಿಮಲೆಯವರಂತೂ ಅವರಿಬ್ಬರನ್ನು ಹೊಸತಲೆಮಾರಿನ ‘ಅರುಣ ಕಿರಣ’ಗಳು ಎಂದು ಬಣ್ಣಿಸಿದರು. ನಡುವೆ ಲಾಡು ಹಂಚಲು ಬಂದ ಯಮುನಕ್ಕ ‘ಕಟ್ಟೂಕೆ ಬರಲಿಲ್ಲ, ಹಾಂ’ ಎಂದು ಹುಸಿಕೋಪ ತೋರಿಸಿದರು. ಸುರಗಿ ಸೀರೆಯಂಗಡಿಯ ದೀಪಾ ತಮ್ಮದೇ ಅಂಗಡಿಯ ಚೆಂದದ ಕಾಟನ್ ಸೀರೆ ಉಟ್ಟು ನಮ್ಮೆಲ್ಲರ ಹೊಟ್ಟೆಯುರಿಸಿದರು. ಬೆಂಗಳೂರಿಗೆ ಹೋದಾಗ ಭೇಟಿ ನೀಡಲೇಬೇಕಾದ ಹೊಸದೊಂದು ಸ್ಥಳವನ್ನೂ ನಿಗದಿಗೊಳಿಸಿದರು. ಮಧ್ಯಾಹ್ನದ ಊಟದೊಂದಿಗೆ ಪ್ರತಿವರ್ಷದಂತೆ ಸೊಪ್ಪಿನ ತಂಬಳಿ ಮತ್ತು ಮಾವಿನಕಾಯಿಯ ಅಪ್ಪೆಹುಳಿ ಎಲ್ಲರ ನಾಲಿಗೆಯಲ್ಲಿ ನೀರೂರಿಸಿತು.

ಇವೆಲ್ಲದರ ನಡುವೆಯೇ ಸಂಜೆಯ ತಾಳಮದ್ದಲೆಯ ತಯಾರಿಯೂ ವೇದಿಕೆಯ ಬದಿಯಲ್ಲಿ ನಡೆಯುತ್ತಿತ್ತು. ಭಾಗವತರೊಂದಿಗೆ ಅರ್ಥಧಾರಿಗಳಾದ ಬಿಳಿಮಲೆ ಮತ್ತು ಶ್ರೀಪಾದ್ ಭಟ್ ನಡೆಸುತ್ತಿದ್ದ ಚರ್ಚೆಯನ್ನು ನೋಡಿ ‘ಎಷ್ಟು ರಾತ್ರಿಯಾದರೂ ಆಗಲಿ, ಇದನ್ನು ಮುಗಿಸಿಯೇ ಹೋಗುವ’ ಎಂದು ಮನಸ್ಸಾಯಿತು. ಆದರೆ ಮನೆಯಿಂದ ಹೊರಡುವ ಮೊದಲು ಮರುದಿನ ಕಾಲೇಜಿರುವುದರಿಂದ ತಾಳಮದ್ದಲೆಗೆ ನಿಲ್ಲುವಂತಿಲ್ಲವೆಂದು ಮನೆಯವರಿಗೆ ತಾಕೀತು ಮಾಡಿದ್ದರಿಂದ ಅವರು ಕೊನೆಯವರೆಗೂ ‘ನಾಳೆ ಕೆಲಸವಿದೆಯಲ್ಲ, ಹೋಗೋಣವೆ?’ ಎಂದು ಕಿಚಾಯಿಸುತ್ತಲೇ ಇದ್ದರು. ಸಮಾರೋಪ ಕಾರ್ಯಕ್ರಮದ ನಂತರ ತಾಳಮದ್ದಲೆಯಿರುವುದರಿಂದ ಬಿಳಿಮಲೆಯವರು ಭಾಷಣ ಮುಗಿಸಿದವರೇ ಲಗುಬಗೆಯಿಂದ ಪಂಚೆಯನ್ನುಟ್ಟು ಅರ್ಥಗಾರಿಕೆಗೆ ರೆಡಿಯಾದರು. ‘ವಾಲಿವಧೆ’ಯ ವಾಲಿ ಕೇಶವ ಶರ್ಮರು ಶಿವಮೊಗ್ಗದ ಪಂಚೆಯಲ್ಲಿಯೇ ಸಮಯಕ್ಕೆ ಸರಿಯಾಗಿ ಹಾಜರಾದರು.

ಬಿಳಿಮಲೆಯವರು ಆಸುಪಾಸಿನವರಲ್ಲೆಲ್ಲ “ನಾವೆಲ್ಲ ತಾಳಮದ್ಲೆಯೆಂದರೇನೆಂದು ತಿಳಿಯದ ದಿಲ್ಲಿಯಲ್ಲಿ ಲಾಟುಪೂಟು ಅರ್ಥಧಾರಿಗಳು. ಕರಾವಳಿಯಲ್ಲಿ ಕಷ್ಟ” ಎಂದೆಲ್ಲಾ ಹೇಳುವಾಗ ತಪ್ಪಿಯೆಲ್ಲಾದರೂ ಇವರು ಹಿಂದಿ ಅಥವಾ ಇಂಗ್ಲಿಷ್ ಬಳಸಿಬಿಡುವರೇನೋ ಎಂಬ ಆತಂಕ ನಮ್ಮನ್ನು ಆ ಗಳಿಗೆಯಲ್ಲಿ ಕಾಡಿದ್ದು ನಿಜ. ಆದರೆ ಆ ಆತಂಕವನ್ನವರು ರಾಮನ ಅರ್ಥ ಶುರುವಾದ ಕೂಡಲೇ ನಿವಾರಿಸಿಬಿಟ್ಟರು. ಪುರಾಣದ ಕಥಾನಕವೊಂದು ಇಂದಿನ ಕಥೆಯೂ ಆಗಬಹುದಾದ ಮತ್ತು ಅದನ್ನು ಹಾಗೆ ಕಟ್ಟಲೇಬೇಕಾದ ಅಗತ್ಯತೆಯ ಹೊಸದೊಂದು ವೈಚಾರಿಕ ನೆಲೆಯನ್ನು ಶ್ರೀಪಾದ ಭಟ್ ಮತ್ತು ಬಿಳಿಮಲೆಯವರು ಸುಗ್ರೀವ- ರಾಮರಾಗಿ ಆಡಿತೋರಿಸಿದರು. ವಾಲಿ ರಾಮರ ನಡುವೆಯೂ ಸುದೀರ್ಘ ಚರ್ಚೆ ನಡೆದು ಕೇಳುಗರಿಗೆ ಪ್ರಸಂಗದ ಹೊಸದೊಂದು ಆಯಾಮ ದಕ್ಕಿತು. ಮುಗ್ವಾ ಗಣೇಶ ಅವರು ತಾರೆಯಾಗಿ ಸಾಂಪ್ರದಾಯಿಕ ಅರ್ಥಗಾರಿಕೆಯನ್ನು ತೋರಿಸಿದರು. ವಾಲಿಯ ವಧೆಯಾಗುವವರೆಗೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಹಗುರಾದೆವು. ರಾತ್ರಿಯೂಟ ಮುಗಿಸಿ ಮನೆಸೇರುವಾಗ ಮರುದಿನವೇ ಆಗಿಹೋಗಿತ್ತು.

ಆದರೇನಂತೆ? ಸಮಾನಮನಸ್ಕರೊಂದಿಗಿನ ಸಹಯಾನದ ಖುಶಿ ದಕ್ಕಿತು. ಪ್ರಖರ ವೈಚಾರಿಕತೆಯ ಮಾಸ್ತರ್ ಆಗಿದ್ದ ಉತ್ತರಕನ್ನಡದ ಸಾಕ್ಷಿಪ್ರಜ್ಞೆ ದಿವಂಗತ ಆರ್. ವಿ. ಭಂಡಾರಿಯವರ ನೆನಪಿನಲ್ಲಿ ಪಕ್ಕಾ ಹಳ್ಳಿಯಲ್ಲಿರುವ ಅವರ ಮನೆ ಸಹಯಾನದಲ್ಲಿ ಪ್ರತಿವರ್ಷವೂ ಸಹಯಾನ ಸಾಹಿತ್ಯೋತ್ಷವ ನಡೆಯುತ್ತದೆ. ಮನೆಯಂಗಳದಲ್ಲಿ ನಡೆಯುವ ಈ ಆಪ್ತ ಕಾರ್ಯಕ್ರಮಕ್ಕೆ ಮುಂದಿನ ವರ್ಷ ನೀವೆಲ್ಲರೂ ಬರಬಹುದು. ಅಂದಹಾಗೆ ಮುಂದಿನ ವರ್ಷ ಸಾಹಿತ್ಯೋತ್ಸವದ ದಶಮಾನೋತ್ಸವವೂ ಹೌದು.

‍ಲೇಖಕರು Avadhi

January 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sudha Hegde

    ಸಂವಿಧಾನ ಓದು ಪುಸ್ತಕದ ಅರವತ್ತು ಸಾವಿರಕ್ಕೂ ಮಿಕ್ಕಿ ಪ್ರತಿಗಳು ಖಾಲಿಯಾಗಿವೆ. ಆರುಸಾವಿರವಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: