ಸಹನಾ ಹೆಗಡೆ
ದೃಷ್ಟಿ ಬಿದ್ದಲ್ಲೆಲ್ಲ ಸೃಷ್ಟಿ ಸಿರಿ
ತುಳುಕಬೇಕಿತ್ತು
ಮೊಳಕೆಯೊಡೆಯುವ ಮೊದಲು
ವೃಷ್ಟಿಯದು ನೆಲಕೆ
ಸುರಿಯಬೇಕಿತ್ತು
ಕಿಂಕಿಣಿಯು ಕಿವಿದುಂಬಿ
ಮುದವಾಗುವ ಮೊದಲು
ಕಟ್ಟಬೇಕಿತ್ತು ಗೆಜ್ಜೆಯ
ಹೆಜ್ಜೆಗೆ ಕಣ
ಕಾಲಿನ ಬದಲು
ಮಾತನಾಡಿದರೆ ಮುತ್ತು
ಉದುರಬೇಕಿತ್ತು ಇಳೆಗೆ
ಇಳಿಯಬೇಕಿತ್ತು ಮೊದಲು
ಹನಿಯಾಗಿ ಸ್ವಾತಿ
ಮಳೆ ಚಿಪ್ಪಿನೊಳಗೆ
ತಂಬೆಲರು ಬೀಸಿ ಸಂಪಿಗೆ
ಬೀರಬೇಕಿತ್ತು ಕಂಪು
ಹುಟ್ಟಬೇಕಿತ್ತು ಮೊದಲು
ಎದೆಯ ಬದುವಲ್ಲಿ
ಸೊಂಪಾಗಿ ಒಂದು ತಂಪು
ಬಾಳ ಹಾದಿಯ ತುಂಬ
ಸುರಿಯಬೇಕಿತ್ತು ಹಾಲು
ಜೇನು ಬೆಳದಿಂಗಳು
ಬೇಕಿತ್ತು ಚಂದಿರೆಗೂ ಮೊದಲು
ಸೂರ್ಯನ ಬೆಳಕು
ಮೈಯ ನೇವರಿಸಲು
0 ಪ್ರತಿಕ್ರಿಯೆಗಳು