ಸರ್ಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ರಜ ಬೇಕೇ?

ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ರಜೆ ನೀಡಬೇಕೆ ಬೇಡವೇ?

ಶಿವಶಂಕರ ವಿಷ್ಣು ಯಳವತ್ತಿ

ನಾನು ಫೇಸ್ ಬುಕ್ ನಲ್ಲಿ ಒಂದು ಪ್ರಶ್ನೆ ಹಾಕಿದ್ದೆ, ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ವಾರಕ್ಕೆ ಎರಡು ದಿನ (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ರಜೆ ನೀಡಬೇಕೆ, ಬೇಡವೇ? ಎಂಬ ಬಗ್ಗೆ.. ಹಲವರು ಈ ಪ್ರಶ್ನೆಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಶೇ. 80 ರಷ್ಟು ಜನರು ವಾರಕ್ಕೆ ಎರಡು ದಿನ ರಜೆ ಬೇಕು ಎಂದು ಹೇಳಿದರೆ, ಇನ್ನುಳಿದ ಶೇ.20 ರಷ್ಟು ಜನರು ರಜೆ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರಕಾರಿ ನೌಕರರು ಕೂಡ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಎರಡು ದಿನ ರಜೆ ಕೊಡಬೇಕು ಎಂದರು. ಕೆಲವರು ಧ್ರುವ ಸಿನಿಮಾದಲ್ಲಿನ ಸಾಧು ಕೋಕಿಲ ರವರ ಡೈಲಾಗನ್ನು ನೆನಪಿಸಿ, ಈಗ ಇರೋ ರಜೆಗಳೇ ಸಾಕಷ್ಟಿವೆ, ಮತ್ತೆ ಎಕ್ಸ್ಟಾ ರಜೆನಾ? ಅಂತಾ ಮೂದಲಿಸಿದರು. ಈಗ ನಾನು ವಿಷಯಕ್ಕೆ ಬರುತ್ತೇನೆ. ಸರಕಾರಿ ನೌಕರರಿಗೆ ಕೇಂದ್ರ ಸರಕಾರಿ ನೌಕರರಿಗೆ ಇರುವ ರೀತಿಯಲ್ಲಿ ವಾರಕ್ಕೆರಡು ದಿನ (ಶನಿವಾರ ಮತ್ತು ಭಾನುವಾರ) ರಜೆ ಕೊಡಬೇಕೆ ಬೇಡವೇ ? ಎಂಬುದನ್ನು ನನಗೆ ತಿಳಿದಷ್ಟು ಮಟ್ಟಿಗೆ ಸಾಧ್ಯಂತವಾಗಿ ವಿವರಿಸಲು ಪ್ರಯತ್ನಿಸುತ್ತೇನೆ. ನನ್ನ ಪ್ರಕಾರ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರದ ಮಾದರಿಯಲ್ಲಿ ಕಡ್ಡಾಯವಾಗಿ ವಾರಕ್ಕೆ ಎರಡು ದಿನ ರಜೆಯನ್ನು ಕೊಡಲೇಬೇಕು..

ಇದರಿಂದ ಉಪಯೋಗಗಳು ಕೂಡಾ ಇವೆ.. ಮೊದಲು ಸರಕಾರಿ ನೌಕರರಿಗೆ ವಾರಕ್ಕೆ ಐದು ದಿನಗಳ ಕರ್ತವ್ಯ ನಿರ್ವಹಣೆಯು ಹೊಸ ಪದ್ಧತಿಯಲ್ಲ. ಕೇಂದ್ರ ಸರಕಾರದ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ರಜೆ ನೀಡಿ, ಉಳಿದ ಐದು ದಿನ ಕರ್ತವ್ಯದ ದಿನಗಳೆಂದು ಕಾರ್ಯನಿರ್ವಹಿಸಲಾಗುತ್ತಿದೆ. ಅನೇಕ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟಗಳಲ್ಲಿ ಅಲ್ಲದೇ, ಭಾರತದ ಖಾಸಗೀ ಕಂಪನಿಗಳಲ್ಲಿ ಕೂಡಾ ವಾರಕ್ಕೆ ಎರಡು ದಿನ ರಜೆ ನೀಡಲಾಗುತ್ತಿದೆ. ತಮಾಷೆಯೇನೆಂದರೆ, ಅಭಿವೃದ್ಧಿ ಹೊಂದದ ರಾಷ್ಟಗಳಲ್ಲಿ ಹೆಚ್ಚುವರಿ ಸಮಯಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದ್ದರೂ ಕೂಡಾ ಅವು ಅಭಿವೃದ್ಧಿ ಹೊಂದಿರುವುದಿಲ್ಲ. ಕರ್ನಾಟಕ ಸರಕಾರವು ರಚಿಸಿದ ಅರನೇ ವೇತನ ಆಯೋಗದಲ್ಲಿ (ಅಧಿಕಾರಿಗಳ ಸಮಿತಿ) ಕೂಡಾ ವಾರಕ್ಕೆ ಐದು ದಿನಗಳ ಕರ್ತವ್ಯನಿರ್ವಹಣೆ ಹಾಗೂ ಎರಡು ದಿನಗಳ ರಜೆಯು ಸೂಕ್ತವೆಂದು ಶಿಫಾರಸ್ಸು ಮಾಡಿದೆ. ನಾನು ವಿವರಿಸುತ್ತಿರುವ ಅಂಶಗಳು 6ನೇ ವೇತನ ಆಯೋಗದ ಶಿಫಾರಸ್ಸಿನಲ್ಲಿನ ಅಂಶಗಳಾಗಿವೆ. ಈ ಶಿಫಾರಸ್ಸಿಗೆ ಕಾರಣವೇನೆಂದು ತಿಳಿದುಕೊಳ್ಳೋಣ. ಒಂದೇ ಸಮನೆ ವಾರಕ್ಕೆ ಆರು ದಿನ ಕರ್ತವ್ಯ ನಿರ್ವಹಿಸಿ, ಉಳಿದ ಒಂದು ದಿನ ಮಾತ್ರ ರಜೆಯನ್ನು ನೀಡಿದಲ್ಲಿ, ಸಹಜವಾಗಿ ಆಯಾಸ/ದಣಿವು ಹೆಚ್ಚುತ್ತದೆ.

ಇದರಿಂದ ಕೆಲಸದಲ್ಲಿನ ಕಾರ್ಯಕ್ಷಮತೆಯಲ್ಲಿ ಕುಂದುಂಟಾಗಿ, ಗುಣಮಟ್ಟದ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ. ಆಸಕ್ತಿದಾಯಕ ವಿಷಯವೇನೆಂದರೆ, ವಾರದಲ್ಲಿ ಐದು ದಿನಗಳು ಕಾರ್ಯನಿರ್ವಹಿಸುವ ಸಂಸ್ಥೆಗಳು ವಾರಕ್ಕೆ ಆರು ದಿನ ಕೆಲಸ ನಿರ್ವಹಿಸುವ ಸಂಸ್ಥೆಗಳಿಗಿಂತ ಹೆಚ್ಚಿಗೆ ಸಮಯ ಕಾರ್ಯನಿರ್ವಹಿಸುತ್ತವೆ…!! ಹೇಗೆಂದರೆ, ಉದಾಹರಣೆಗೆ, ವಾರದಲ್ಲಿ ಐದು ದಿನಗಳು ಕಾರ್ಯನಿರ್ವಹಿಸುವ ಭಾರತ ಸರ್ಕಾರದ ಕಚೇರಿಗಳು 2011 ರಲ್ಲಿ ಕಾರ್ಯನಿರ್ವಹಿಸಿದ ಅವಧಿ ಒಟ್ಟು 1560 ಘಂಟೆಗಳು. ಇದಕ್ಕೆ ಹೋಲಿಸಿದರೆ, ಕರ್ನಾಟಕ ರಾಜ್ಯ ಸರಕಾರವು ವಾರದಲ್ಲಿ ಆರು ದಿನಗಳ ಕಾರ್ಯವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅವಧಿ ಒಟ್ಟು 1490 ಘಂಟೆಗಳು. ಐದುದಿನಗಳ ವಾರದ ಕಚೇರಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳಾದ ಬಿಹಾರ್, ದೆಹಲಿ, ಗೋವಾ, ರಾಜಸ್ಥಾನ್, ಉತ್ತರ ಪ್ರದೇಶ್ ಮತ್ತು ಉತ್ತರಾಖಂಡ್ ಅಧಿಕ ಘಂಟೆಗಳ ಕಾಲ ಕಾರ್ಯನಿರ್ವಹಿಸಿರುತ್ತವೆ. ಆದ್ದರಿಂದ ಸಂಸ್ಥೆಯು ದಕ್ಷ ಹಾಗೂ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವಿವೇಚನಾಪೂರ್ಣವಾಗಿ ರಜಾ ದಿನಗಳನ್ನು ಕಡಿತಗೊಳಿಸಿ, ಅಂದರೆ ವಾರ್ಷಿಕ ಇರುವ 15 ದಿನಗಳ ಸಾಂಧರ್ಭಿಕ ರಜಾ ದಿನಗಳನ್ನು 10 ಕ್ಕೆ ಇಳಿಸುವುದು. ಎಲ್ಲಾ ಜಯಂತಿಗಳಲ್ಲಿ ರಜಾ ಕೊಡುವುದನ್ನು (ಒಂದೆರಡು ಬಿಟ್ಟು) ನಿಷೇಧಿಸುವುದು. ಕೇಂದ್ರ ಸರಕಾರವು ನೀಡುವ ಕೆಲವು ಹಬ್ಬಗಳಿಗೆ ಮಾತ್ರ ಸಾರ್ವಜನಿಕ ರಜೆಯನ್ನು ನೀಡುವುದು.

ದಿನದ ಕಾರ್ಯಾವಧಿಯನ್ನು ಹೆಚ್ಚಿಸುವುದು ಅಂದರೆ, ದಿನ ಬೆಳಿಗ್ಗೆ 10 ಗಂಟೆಯಿಂದ 05.30 ರವರೆಗೆ (ಮಧ್ಯದಲ್ಲಿ 45 ನಿಮಿಷಗಳ ಊಟದ ಅವಧಿ) ಕೆಲಸದ ವೇಳೆಯ ಬದಲಾಗಿ ಬೆಳಿಗ್ಗೆ 09.30 ರಿಂದ ಸಂಜೆ 06 ರವರೆಗೆ (ಊಟದ ಸಮಯ 30 ನಿಮಿಷಗಳಿಗೆ ನಿಗದಿ)  ನಿರಂತರವಾಗಿ ಐದು ದಿನಗಳ ವಾರದ ಕಚೇರಿ ಕಾರ್ಯನಿರ್ವಹಣೆಯನ್ನು ಜಾರಿಗೆ ತರುವುದು ಸೂಕ್ತವಾಗಿದೆ. ಈ ರೀತಿಯಾಗಿ ಐದು ದಿನಗಳ ಕಾರ್ಯನಿರ್ವಹಣೆಯನ್ನು ಜಾರಿಗೆ ತರುವುದರಿಂದ ಹಲವಾರು ಉಪಯೋಗಗಳು ಸಾರ್ವಜನಿಕರಿಗೆ ಕೂಡಾ ಇವೆ. ಹೇಗೆಂದರೆ, ವಿಶೇಷವಾಗಿ ನಮ್ಮ ಬೆಂಗಳೂರು ನಗರವು ನಮ್ಮ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುವ ನಗರವಾಗಿದ್ದು, ಭಾರತದಲ್ಲಿಯೇ ಅತ್ಯಂತ ಹೆಚ್ಚು ವಾಹನಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ನಗರದ ರಸ್ತೆಗಳು ಅಧಿಕ ವಾಹನ ದಟ್ಟಣೆಯಿಂದಾಗಿ ವಾತಾವರಣವು ಮಾಲಿನ್ಯಗೊಂಡಿದೆ. ಅತ್ಯಧಿಕ ನಗರೀಕರಣ ಹಾಗೂ ಕೈಗಾರಿಕೀಕರಣದಿಂದಾಗಿ ವಿದ್ಯುತ್ ಹಾಗೂ ಇಂಧನದ ಲಭ್ಯತೆಯ ಮಿತಿಯನ್ನು ಬೇಡಿಕೆಯು ಅಗತ್ಯತೆಗೆ ಅನುಗುಣವಾಗಿ ಸರಬರಾಜು ಮಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟುಮಾಡಿದೆ. ಇದೇ ಸಮಯದಲ್ಲಿ ಮಾಹಿತಿ ತಂತ್ರಜ್ಞಾನದ ಕೊಡುಗೆಯಿಂದಾಗಿ ನಾಗರೀಕರು ತಮ್ಮ ವಿದ್ಯುತ್ ಮತ್ತು ನೀರಿನ ಬಿಲ್ಲುಗಳನ್ನು ಪಾವತಿಸಲು ಸರತಿಯ ಸಾಲಿನಲ್ಲಿ ನಿಂತು ಕಾಯಬೇಕಿಲ್ಲ.

ಬಸ್ ಟಿಕೆಟ್ ಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಆನ್ ಲೈನ್ ಮುಖಾಂತರ ಮಾಡಬಹುದಾಗಿದೆ. ಆಸ್ತಿ ತೆರಿಗೆ ಮಾರಾಟ ತೆರಿಗೆ, ಮುಂತಾದುವುಗಳನ್ನು ನಾಗರೀಕರು ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಪಾವತಿಸಬಹುದಾಗಿದ್ದು, ಸರಕಾರ ಮತ್ತು ನಾಗರೀಕರ ನಡುವಿನ ವ್ಯವಹಾರವು ಶೀಘ್ರ, ಸುಲಭ ಹಾಗೂ ಸುಲಲಿತವಾಗಿ ನಡೆಯುವಂತಾಗಿದೆ. ಇತ್ತೀಚಿನ ಅಧಿನಿಯಮ “Guarantee to Service Act”, ಅನ್ವಯ ನಾಗರೀಕರಿಗೆ ಕಾಲಮಿತಿಯಲ್ಲಿ ನಾಗರೀಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ. ಇದು ಪ್ರಮಾಣಾತ್ಮಕತೆಯಿಂದ ಗುಣಾತ್ಮಕತೆಯೆಡೆಗೆ ಹೆಚ್ಚಿನ ಒತ್ತು ನೀಡಿರುವುದನ್ನು ಸೂಚಿಸುತ್ತದೆ. ಆದ್ದರಿಂದ ಸರಕಾರಿ ಕಚೇರಿಗಳು ಸಾರ್ವಜನಿಕರಿಗೆ ವೇಗವಾಗಿ ಸ್ಪಂದಿಸುವುದರ ಜೊತೆಗೆ ಪ್ರಜಾಸ್ನೇಹಿಯಾಗಬೇಕಿದೆ. ಕರ್ನಾಟಕ ಸರಕಾರವು 2012 ರಲ್ಲಿ Indian Institute of Management, Bangalore ಸಂಸ್ಥೆಯಿಂದ ಅಧ್ಯಯನ ಮಾಡಿಸಿದ್ದು, ಈ ಅಧ್ಯಯನದ ವರದಿಯಲ್ಲಿ ವಾರದ ಐದು ದಿನಗಳ ಕಾರ್ಯನಿರ್ವಹಣೆಯಿಂದ ಈ ಕೆಳಕಂಡ ಪ್ರಯೋಜನಗಳನ್ನು ಪಟ್ಟಿ ಮಾಡಲಾಗಿದೆ.

1) ಒಂದು ನೇರವಾದ ಪ್ರಯೋಜನವೆಂದರೆ, ಸರಕಾರಿ ಕಚೇರಿಗಳು ವಾರದ ಐದು ದಿನ ಕಾರ್ಯನಿರ್ವಹಿಸುವುದರಿಂದ ವಿದ್ಯುತ್ ಶಕ್ತಿ, ಸಾರಿಗೆ ವೆಚ್ಚ, ನೀರಿನ ಬಿಲ್, ಇಂಧನ ವೆಚ್ಚದಲ್ಲಿ ಸುಮಾರು 100 ಕೋಟಿಗಳಷ್ಟು ಉಳಿತಾಯ ಮಾಡಬಹುದಾಗಿದೆ.
2) ವಾರದ ಆರು ದಿನಗಳ ಬದಲಾಗಿ ಸಾರ್ವಜನಿಕರು ಐದು ದಿನ ಮಾತ್ರ ಸರಕಾರಿ ಕಚೇರಿಗಳಿಗೆ ಭೇಟಿ ನೀಡುವುದರಿಂದ ನಾಗರೀಕ ಸಾರಿಗೆ ವಾಹನಗಳ ದಟ್ಟಣೆ/ಒತ್ತಡದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಇದರಿಂದಾಗಿ ಇಂಧನ ಹಾಗೂ ಮಾನವ ಶಕ್ತಿಯ ಉಳಿತಾಯವಾಗುತ್ತದೆ.

3) ಕೇವಲ ಬೆಂಗಳೂರು ನಗರದಲ್ಲೇ ಸುಮಾರು 1 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದು, ರಸ್ತೆಗಳಲ್ಲಿ ವಾಹನ ದಟ್ಟನೇ ಹಾಗೂ ಪರಿಸರ ಮಾಲಿನ್ಯದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗುತ್ತದೆ.

4) ಸರಕಾರಿ ರಜಾ ದಿನಗಳಲ್ಲಿ ಹಾಗೂ ನೌಕರರ ಸಾಂದರ್ಭಿಕ ರಜೆಗಳಲ್ಲಿ ಇಳಿಕೆ ಮಾಡುವುದರಿಂದ ಸರಕಾರಿ ಕಚೇರಿಗಳು ಈಗಿರುವಷ್ಟೇ ಗಂಟೆಗಳಿಗಿಂತ ಹೆಚ್ಚುವರಿ ಘಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ವಾರದ ಮಧ್ಯ ಭಾಗದಲ್ಲಿ ಪಡೆಯುವ ರಜೆಗಳು ಕಡಿಮೆಯಾಗುತ್ತವೆ.
5) ಅದಕ್ಕನುಗುಣವಾಗಿ ಸರಕಾರಿ ನೌಕರರು ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಗುಣಮಟ್ಟದ ಕಾಲವನ್ನು ವಿನಿಯೋಗಿಸಲು ಸಾಧ್ಯವಾಗುವುದು. ತಮ್ಮ ಮಕ್ಕಳ ಆಟ-ಪಾಠ ಹಾಗೂ ಇತರೆ ಚಟುವಟಿಕೆಗಳ ಕಡೆಗೆ ಗಮನ ಹರಿಸಬಹುದು.
6) ಸರಕಾರಿ ನೌಕರರಲ್ಲಿ ಶೇ. 30 ರಷ್ಟು ಮಹಿಳೆಯರಾಗಿದ್ದು, ಒಂದು ದಿನ ರಜೆ ಹೆಚ್ಚಾಗಿ ದೊರಕುವುದರಿಂದ ವರು ತಮ್ಮ ಗೃಹಕೃತ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಹಕಾರಿಯಾಗುವುದು.
7) ಶಾಲಾ ಕಾಲೇಜುಗಳಲ್ಲಿ ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸುವುದರಿಂದ ಒಂದು ದಿನ ಹೆಚ್ಚಿನ ರಜೆಯಿಂದಾಗಿ ಅಧ್ಯಾಪಕರಿಗೆ/ಶಿಕ್ಷಕರಿಗೆ ಸಾಪ್ತಾಹಿಕವಾಗಿ ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುವುದು. ರಾಜ್ಯ ಸರಕಾರಿ ಕಾರ್ಯಪಡೆಯಲ್ಲಿ ಶಿಕ್ಷಕ ವೃಂದ ಶೇ. 40 ರಷ್ಟು ಇದ್ದು, ಸುಮಾರು 2.5 ಲಕ್ಷ ಶಿಕ್ಷಕರಿಗೆ ಇದರ ಲಾಭ ದೊರಕಲಿದೆ. ಸುಮಾರು ಐದು ದಶಲಕ್ಷಕ್ಕೂ ಮೀರಿದ ವಿದ್ಯಾರ್ಥಿಗಳಿಗೆ ಆಟ ಪಾಠಕ್ಕೆ ಹೆಚ್ಚಿನ ಸಮಯಾವಕಾಶ ದೊರೆಯಲಿದೆ. ಜೊತೆಗೆ ಸಾರ್ವಜನಿಕ ಸಂಚಾರ ವ್ಯವಸ್ಥೆಯ ಮೇಲಿನಒತ್ತಡ ಕಡಿಮೆಯಾಗುವುದು. ಖಾಸಗಿ ಶಾಲೆಗಳೂ ಸಹಾ ವಾರದಲ್ಲಿ ಐದು ದಿನಗಳ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಪಾಲಿಸುವುದರಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
8) ಸರಕಾರಿ ನೌಕರರಲ್ಲಿ ಶಿಸ್ತು ಸಮಯಪಾಲನೆ ಹಾಗೂ ಕರ್ತವ್ಯನಿಷ್ಠೆಯನ್ನೊಳಗೊಂಡಂತೆ ಉತ್ತಮ ಕಾರ್ಯ ಸಂಸ್ಕೃತಿಯನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಂಡಲ್ಲಿ, ಸೇವೆಯ ಗುಣಮಟ್ಟ ಮತ್ತು ಕಾರ್ಯದಕ್ಷತೆ ಉತ್ತಮಗೊಳ್ಳುವುದು. ಇದರ ಜೊತೆಗೆ ಕೇಂದ್ರ ಸರಕಾರ ಹಾಗೂ ಇತರೆ ರಾಜ್ಯಗಳ ಮಾದರಿಯನ್ನೇ ಅನುಸರಿಸಿದಂತಾಗುವುದು. ಸರಕಾರಿ ನೌಕರರು ತಮ್ಮ ಖಾಸಗೀ ಕಾರ್ಯಕ್ರಮಗಳನ್ನು ಈ ರಜಾ ಅವಧಿಗಳಲ್ಲಿ ನಿರ್ವಹಿಸಿಕೊಳ್ಳಬಹುದು. ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬಹುದು. ನೌಕರರು ತಮ್ಮ ಆರೋಗ್ಯದ ಬಗ್ಗೆ, ಕುಟುಂಬದ ಸದಸ್ಯರ ಬಗ್ಗೆ ಕಾಳಜಿ ವಹಿಸಲು ಇದು ಸಹಕಾರಿಯಾಗುತ್ತದೆ.

ವಾರದಲ್ಲಿ ಐದು ದಿನಗಳ ಕಚೇರಿ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿರುವ ಋಣಾತ್ಮಕ ಪರಿಣಾಮಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.

1)      ಸಾರ್ವತ್ರಿಕ ರಜಾ ದಿನಗಳನ್ನು ಪ್ರಸ್ತುತ ವಾರ್ಷಿಕ 22 ದಿನಗಳಿಂದ 15 ದಿನಗಳಿಗೆ ಇಳಿಸುವುದು (ಹಬ್ಬ ಹರಿದಿನ, ಜಯಂತಿ, ಪುಣ್ಯತಿಥಿ ಇತ್ಯಾದಿ). ಸಾಂಧರ್ಭಿಕ ರಜೆಗಳನ್ನು 15 ರಿಂದ 10 ದಿನಗಳಿಗೆ ಇಳಿಸುವುದು.
2)     ಪರಿಮಿತ ರಜೆಗಳನ್ನು ಪ್ರಸ್ತುತ 14 ದಿನಗಳಿಂದ 38 ದಿನಗಳಿಗೆ ಹೆಚ್ಚಿಸುವುದು ಮತ್ತು ಒಬ್ಬ ನೌಕರನಿಗೆ ಯಾವುದಾದರೂ 02 ಪರಿಮಿತ ರಜೆಗಳನ್ನು ಬಳಸಲು ಅನುಮತಿ ನೀಡುವುದು. (ಅಂದರೆ, ಹೋಳಿ, ಗೌರಿ ಹಬ್ಬಕ್ಕೆ ಸರಕಾರಿ ರಜೆ ಇರುವುದಿಲ್ಲ. ಈ ತರಹದ ಹಬ್ಬಗಳಿಗೆ ವರ್ಷದಲ್ಲಿ 02 ದಿನ ರಜೆ ಪಡೆಯಲು ಅವಕಾಶ ನೀಡುವುದು)
3)      ಪ್ರತಿ ದಿನದ ಕಾರ್ಯಾವಧಿಯನ್ನು ಪ್ರಸ್ತುತ 06 ಗಂಟೆ 45 ನಿಮಿಷಗಳಿಂದ 08 ಘಂಟೆಗಳಿಗೆ ಹೆಚ್ಚಿಸುವುದು. ಅಂದರೆ, ಅಪರಾಹ್ನ 30 ನಿಮಿಷಗಳ ವಿರಾಮದೊಂದಿಗೆ ಬೆಳಿಗ್ಗೆ 09.30 ರಿಂದ ಸಂಜೆ 06 ರವರೆಗೆ ಕರ್ತವ್ಯ ನಿರ್ವಹಣೆ ಮಾಡುವುದು.
4)     ಹಾಜರಾತಿ ಮತ್ತು ಸಮಯಪಾಲನೆಯನ್ನು ಕಟ್ಟುನಿಟ್ಟಿನಿಂದ ನಿರ್ವಹಿಸಬೇಕಾಗುತ್ತದೆ. ಏಕೆಂದರೆ, ಈ ವಿಷಯವೇ ಸಂಪೂರ್ಣವಾಗಿ ವ್ಯವಸ್ಥೆಯನ್ನು ಯಶಸ್ವಿ ಅಥವಾ ವಿಫಲಗೊಳಿಸಬಹುದು. ಬಯೋಮೆಟ್ರಿಕ್ ಹಾಜರಾತಿ, ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡುವುದು, ನಿರಂತರ ತಪಾಸಣೆ, ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಶಿಸ್ತನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಸಾರ್ವಜನಿಕರ ಕುಂದುಕೊರತೆಯನ್ನು ನಿವಾರಿಸಬಹುದು.
5)      ಪೋಲೀಸ್, ಅಗ್ನಿಶಾಮಕದಳ, ಆರೋಗ್ಯ, ನೀರು ಮತ್ತು ವಿದ್ಯುತ್ ಸರಬರಾಜುಗಳಂತಹ ಅಗತ್ಯ ಸೇವೆಗಳ ಇಲಾಖೆ ಮತ್ತು ಸಂಸ್ಥೆಗಳಿಗೆ ರಜಾ ಪರಿಹಾರ ಭತ್ಯೆಗಳು ಹಾಗೂ ಉತ್ತಮ ಸೇವೆ ಸಲ್ಲಿಸುವಲ್ಲಿ ಅವಶ್ಯಕವಾದ ತಾಂತ್ರಿಕತೆಯಲ್ಲಿ ಅಭಿವೃದ್ಧಿ ಅಗತ್ಯವಿರುವ ನೌಕರರ ಸಂಖ್ಯೆಯನ್ನು ಹೆಚ್ಚಿಸುವುದು. ಇಂತಹ ಸಂಸ್ಥೆಗಳಲ್ಲಿ , ಪಾಳಿ ಪ್ರಕಾರ ನೌಕರರ ಕಾರ್ಯನಿರ್ವಹಣೆಯನ್ನು ಬದಲಾಯಿಸಿ, ಅವರಿಗೂ ಸಹ ವಾರದಲ್ಲಿ ಎರಡು ದಿನ ರಜೆ ನೀಡುವಂತೆ ಕ್ರಮ ಕೈಗೊಳ್ಳುವುದು.
6)     ಸರಕಾರದ ಎಲ್ಲಾ ಹಂತಗಳಲ್ಲಿಯೂ ನಾಗರೀಕ ಸೇವಾ ಪೂರೈಕೆಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸುವ ಅವಶ್ಯಕತೆ ಇದೆ. ಇದನ್ನು ಆಡಳಿತದಲ್ಲಿ ಅಗತ್ಯ ತಾಂತ್ರಿಕತೆಯ ಅಳವಡಿಕೆ, ಮಾಹಿತಿ ತಂತ್ರಜ್ಞಾನದ ಉತ್ತಮ ಬಳಕೆಯಿಂದ ಹೆಚ್ಚಾಗಿರುವ ನೌಕರರನ್ನು ಗುರುತಿಸಿ, ನಾಗರೀಕ ಸಂಪರ್ಕವಿರುವ ಕಡೆ ಅಗತ್ಯತೆಗನುಗುಣವಾಗಿ ಮರು ಹಂಚಿಕೆ ಮಾಡುವುದು.
7)      ಸರಕಾರಿ ನೌಕರರ ತಾಂತ್ರಿಕ ಹಾಗೂ ನಿರ್ವಹಣಾ ಕೌಶಲ್ಯವನ್ನು ಹೆಚ್ಚಿಸುವ ತರಬೇತಿ ನೀಡುವುದು ಮತ್ತು ನಾಗರೀಕರಿಗೆ ಜವಾಬ್ದಾರಿಯುತ ಸೇವೆಯನ್ನು ಸಲ್ಲಿಸುವ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ.
ಈ ಹಿನ್ನಲೆಯಲ್ಲಿ ಸರಕಾರಿ ನೌಕರರಿಗೆ ವಾರದಲ್ಲಿ ಆರು ದಿನಗಳ ಬದಲಾಗಿ ಐದು ದಿನಗಳ ಕಾರ್ಯನಿರ್ವಹಣೆಯನ್ನು ಜಾರಿಗೆ ತಂದರೆ, ಉತ್ತಮ ಫಲಿತಾಂಶವನ್ನು ನಾವು ಕಾಣಬಹುದಾಗಿದೆ. ಈ ವರದಿಯು ಸರಕಾರದಿಂದ ಅಂಗೀಕೃತವಾಗಿಲ್ಲ. ಸರಕಾರಿ ನೌಕರರ ಸಂಘದವರೇ ಇದಕ್ಕೆ ವಿರೋಧ ಮಾಡಿ, ಹಿಂದಿನ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಈ ಕಾರಣದಿಂದಾಗಿಯೇ ಇದು ಜಾರಿಯಾಗಿಲ್ಲವೆಂಬುದು ವಾಸ್ತವ. ಸಾಮಾನ್ಯವಾಗಿ ಸಾರ್ವಜನಿಕರಿಗೆ, ಬುದ್ಧಿಜೀವಿಗಳಿಗೆ, ವಿದ್ಯಾವಂತರಿಗೆ (ಸರಕಾರಿ ನೌಕರರನ್ನು ಹೊರತುಪಡಿಸಿ), ಸರಕಾರಿ ನೌಕರರೆಂದರೆ, ಕೆಲಸ ಮಾಡುವುದಿಲ್ಲವೆಂಬ ಪೂರ್ವಾಗ್ರಹ ಪೀಡಿತ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ, ಸರಕಾರಿ ನೌಕರಿಯಲ್ಲಿರುವವರಿಗೆ ಮಾತ್ರ ಇಲ್ಲಿನ ಒತ್ತಡ, ಕಾರ್ಯನಿರ್ವಹಣೆಯ ಬಗ್ಗೆ ಅರಿವು ಇರುತ್ತದೆ. ವಿಧಾನಸೌಧ ವನ್ನು ನಿಧಾನಸೌಧ ಎಂದು ಅಣಕಿಸುವವರು ಒಮ್ಮೆಯಾದರೂ ವಿಧಾನಸೌಧದ ಕಚೇರಿಗೆ ಬಂದು, ಸರಕಾರಿ ನೌಕರರು ಸುಮ್ಮನೆ ಕೂತು ನಿದ್ದೆ ಮಾಡುತ್ತಿದ್ದಾರೆಯೇ ಅಥವಾ ಕೆಲಸ ಮಾಡುತ್ತಿದ್ದಾರೆಯೇ ? ಎಂಬ ಬಗ್ಗೆ ಗಮನಹರಿಸುವುದು ಒಳಿತು. ಸರಕಾರಿ ನೌಕರರೆಂದರೆ, ನಾವೂ ಕೂಡಾ ಸಾಮಾನ್ಯ ಮನುಷ್ಯರೇ ಸ್ವಾಮಿ… ನಾವೇನು ಮೇಲಿಂದ ಇಳಿದು ಬಂದವರಲ್ಲ. ನಮಗೂ ಸಹ ಎಲ್ಲರಂತೆಯೇ ಸಾಮಾಜಿಕ ನ್ಯಾಯ ಬೇಕು ಎನ್ನುವವರು. ಇನ್ನು ನಮಗೆ ಸಿಗುವ ಸೌಲಭ್ಯಗಳೋ.. ಆ ದೇವರಿಗೇ ಪ್ರೀತಿ..  ಅದರ ಬಗ್ಗೆ ಇನ್ನೊಂದು ಲೇಖನದಲ್ಲಿ ಬರೆಯುವೆ. ನಿಮ್ಮ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ.

‍ಲೇಖಕರು avadhi

May 24, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Kiran

    ಶಿವಶಂಕರ್
    ನಿಮ್ಮ “ಥಿಯರಿ” ಚೆನ್ನಾಗಿದೆ. ಆದರೆ “ಪ್ರಾಕ್ಟಿಕಾಲ್” ಆಗಿ ಇದು ಸಾಧ್ಯವಾ? ಇದು ದಿವಸದ ಕೆಲಸದಿಂದ ಆಗುವ ಲಾಭಗಳು ಬಹಳ ಎಂದಾದರೆ, ಅದನ್ನು ನಾಲ್ಕು ದಿವಸಕ್ಕೆ ಇಳಿಸಿದರೆ ಹೇಗೆ?! ನೀವು ಸರ್ಕಾರಿ ನೌಕರರ ದೃಷ್ಟಿಯಿಂದ ವಿವೆಚಿಸಿದ್ದೀರಿ. ಆದರೆ ಸಾಮಾನ್ಯ ಪೌರರ ದೃಷ್ಟಿಯಿಂದ ನೋಡಿ. ಈ “role reversal” ನಿಮಗೆ ಬೇರೆ ದೃಷ್ಟಿಕೋನ ಒದಗಿಸಬಹುದು. ಮಾಡುವ ಕೆಲಸದಲ್ಲಿ ಲಂಚಕೋರತನ ಒಂದು ಇಲ್ಲದಿದ್ದರೆ ಬಹಳ ಉಪಕಾರವಾದೀತು! “ಸರಕಾರಿ ನೌಕರರೆಂದರೆ, ನಾವೂ ಕೂಡಾ ಸಾಮಾನ್ಯ ಮನುಷ್ಯರೇ ಸ್ವಾಮಿ… ನಾವೇನು ಮೇಲಿಂದ ಇಳಿದು ಬಂದವರಲ್ಲ. ನಮಗೂ ಸಹ ಎಲ್ಲರಂತೆಯೇ ಸಾಮಾಜಿಕ ನ್ಯಾಯ ಬೇಕು” OK. ಆದರೆ ಬಹಳಷ್ಟು ಸರ್ಕಾರಿ ನೌಕರರು ಸಾಮಾನ್ಯ ಪ್ರಜೆಗಳನ್ನು ಮನುಷ್ಯರಂತೆ ನೋಡುವುದೇ ಇಲ್ಲ. ನಮ್ಮ ಸಮಯಕ್ಕೆ, ಕಷ್ಟಗಳಿಗೆ, ಅವಶ್ಯಕತೆಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಸ್ಪಂದಿಸಿದರೆ ಸಾಕು. ಇದು ಎರಡೂ ಕಡೆಯ ದೃಷ್ಟಿಯಿಂದ ನೋಡಬೇಕಾದ ವಿಷಯ. ನಿಮ್ಮ ಹೆಜ್ಜೆ ಇಟ್ಟಿದ್ದೀರಿ. ಸಂತೋಷ! ನಮ್ಮ ಅಹವಾಲನ್ನು ಮನ್ನಿಸಿದರೆ ಅದಕ್ಕಿಂತ ಒಳ್ಳೆಯ ಸಂಗತಿ ಏನಿದ್ದೀತು?

    ಪ್ರತಿಕ್ರಿಯೆ
  2. Uday Itagi

    ಹೌದು ಖಂಡಿತ ಎರಡು ದಿವಸ ಬೇಕು. ಆದರೆ ನೀವು ಹೇಳಿದಂತೆ ಸರಕಾರಿ ನೌಕರರಿಗೂ ಖಾಸಗಿ ವಲಯದಲ್ಲಿರುವಂತೆ ಅವರ ಕಾರ್ಯ ದಕ್ಷತೆಗೆ ತಕ್ಕಂತೆ ಭಡ್ತಿ ಮತ್ತು ಸಂಬಳವನ್ನು ಹೆಚ್ಚಿಸಬೇಕು. ಇಲ್ಲವಾದರೆ ಸೋಂಬೇರಿಗಳನ್ನು ಮುಲಾಜಿಲ್ಲದೆ ಕೆಲಸದಿಂದ ಕಿತ್ತೊಗೆಯಬೇಕು. ಈ ಮೌಲ್ಯಮಾಪನ ಕಾಲದಿಂದ ಕಾಲಕ್ಕೆ ನಿರಂತರವಾಗಿ ನದೆಯುತ್ತಿರಬೇಕು. ಈ ಮಾತು ನಮ್ಮ ರಾಜಕಾರಣಿಗಳಿಗೂ ಅನ್ವಯಿಸುತ್ತದೆ. ಒಬ್ಬ ಶಾಸಕ ಆರಿಸಿ ಬಂದ ನಂತರ ಅವನ ಕ್ಷೇತ್ರದಲ್ಲಿ ಎಷ್ಟೆಷ್ಟು ಅಭಿವೃದ್ಧಿ ಕೆಲಸಗಳಾಗಿವೆ? ಆಗದಿದ್ದರೆ ಅದಕ್ಕೆ ಸ್ಪಷ್ಟವಾದ ಕಾರಣಗಳನ್ನು ಸಾಕ್ಷಿ ಸಮೇತ ನೀಡಬೇಕು. ಆತ ತನ್ನ ಕ್ಷೇತ್ರದಲ್ಲಿ ವಾರದಲ್ಲಿ ಎಷ್ಟು ದಿನ ಲಭ್ಯವಾಗಿರುತ್ತಾನೆ? ಮತ್ತು ಎಷ್ಟು ದಿನ ಬೆಂಗಳೂರಿನಲ್ಲಿಯೇ ಒಕ್ಕರಿಸುತ್ತಿರುತ್ತಾನೆ? ಆತ ಜನಾನುರಾಗಿಯೇ ಅಲ್ಲವೇ? ಎಂಬುದನ್ನೆಲ್ಲಾ ಕಾಲಕಾಲಕ್ಕೆ ಮೌಲ್ಯಮಾಪನ ಮಾಡಿ ಅದನ್ನು ಮಾಧ್ಯಮಗಳಲ್ಲಿ ಬಿತ್ತರಿಸಬೇಕು. ಒಂದು ವೇಳೆ ಸರಕಾರಿ ಅಧಿಕಾರಿ ಭೃಷ್ಟನಾಗಿದ್ದರೆ ಆತನನ್ನು ಕೂಡಲೇ ಕೆಲಸದಿಂದ ಕಿತ್ತೊಗೆಯಬೇಕು. ಅಥವಾ ರಾಜಕಾರಿಣಿ ಭೃಷ್ಟನಾಗಿದ್ದರೆ ಆತನನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಿ ಹೊಸಬರನ್ನು ತರಬೇಕು. ಜೊತೆಗೆ ರಾಜಕಾರಿಣಿಗಳಿಗೂ ಒಂದು ನಿವೃತ್ತಿ ವಯಸ್ಸನ್ನು ಘೋಷಿಸಿ ಹೊಸಬರಿಗೆ ಅವಕಾಶ ಕೊಡಬೇಕು. ಜೊತೆಗೆ ಅವರಿಗೆ ಒಂದು ನಿರ್ಧಿಷ್ಟ ವಿದ್ಯಾರ್ಹತೆ (At least PG)ಯನ್ನು ಸಹ ನಿಗದಿಪಡಿಸಬೇಕು. ರಾಜಕಾರಿಣಿಗಳಿಗೆ ಕಾರ್ಪೋರೇಟ್ ವಲಯದಲ್ಲಿನ ಉನ್ನತ ಅಧಿಕಾರಿಗಳಿಗಿರುವಷ್ಟು ಸಂಬಳವನ್ನು ಮಿಕ್ಕೆಲ್ಲಾ ಸೌಲಭ್ಯಗಳ ಜೊತೆಗೆ ಕೊಡಬೇಕು. ಆಗ ಮಾತ್ರ ಸರಕಾರ ಮತ್ತು ಸರಕಾರಿ ಕೆಲಸಗಳು ಚುರುಕಾಗಲು ಮತ್ತು ದಕ್ಷತೆಯಿಂದ ಕೂಡಿರಲು ಸಾಧ್ಯ.

    ಪ್ರತಿಕ್ರಿಯೆ
  3. Shekhar

    ಲೇಖಕರು ಹೇಳಿದಂತೆ ವಾರದಲ್ಲಿ ಎರಡು ದಿನಗಳ ರಜೆಯನ್ನು ನಾನೂ ಒಪ್ಪುತ್ತೇನೆ.ಎರಡು ದಿನಗಳ ರೆಷ್ಟ್ ನಂತರ ಕೆಲಸಕ್ಕೆ ಹುರುಪು-ಹುಮ್ಮಸ್ಸು ಬರುತ್ತದೆ. ಇದರ ಜೊತೆಗೆ ಕೆಲವೇ ಹಬ್ಬಗಳ ( ಉದಾ-ದೀಪಾವಳಿ, ಯುಗಾದಿ, ರಮಜಾನ್, ಕ್ರಿಸ್ಮಸ್..ಅಗಷ್ಟ್ ೧೫, ಗಾಂಧಿ-ಅಂಬೇಡ್ಕರ್ ಜಯಂತಿ ) ಮಾತ್ರ ರಜೆ ಇರಬೇಕು. ಇದರಿಂದ ಪೆಟ್ರೋಲ್-ವಿದ್ಯುತ್, ಉಳಿತಾಯವಾಗುತ್ತದೆ. ಭೃಷ್ಟ ಹಾಗೂ ಅದಕ್ಷರನ್ನು ಮುಲಾಜಿಲ್ಲದೇ ಕಿತ್ತೆಸೆಯಬೇಕು.ರಾಜಕಾರಣಿಗಳಿಗೂ ಇದೇ ಮಾನದಂಡ ಅನ್ವಯಿಸಬೇಕು. ಪೆನ್ಸನ್ ಫಿಕ್ಷ್ ಮಾಡುವಾಗಲೂ ದಕ್ಷತೆಯು ಮಾನದಂಡವಾಗಬೇಕು. ಮಾಡುವ ಕೆಲಸ ಶಿಸ್ತು, ಪ್ರಾಮಾಣಿಕತೆ ಹಾಗೂ ಸಮಯ ಪಾಲನೆಯಿಂದ ಕೂಡಿರಬೇಕಾಗಿದೆ.ಡಾಕ್ಯುಮೆಂಟ್ ಗಳು ಸರಿಯಾಗಿದ್ದರೆ/ ನ್ಯಾಯಯುತವಾಗಿದ್ದರೆ, ಕೆಲಸ ಖಂಡಿತ ಆಗುತ್ತದೆ ಎನ್ನುವ ಭರವಸೆ ತರುವ ಕೆಲಸ ಸರಕಾರೀ ನೌಕರರಿಂದ ಆಗಬೇಕಾಗಿದೆ.
    ಆಡಳಿತದಲ್ಲಿ ಪಾರದರ್ಶಿಕೆಯನ್ನು ತರಬೇಕು. ಇ-ಆಡಳಿತ ವ್ಯವಸ್ಥೆ ಹಾಗೂ ಫೈಲ್ ಗಳ ಟ್ರ್ಯಾಕಿಂಗ್ ವ್ಯವಸ್ಥೆ ಇಡಬೇಕು.
    ಒಮ್ಮೆ ಸರಕಾರೀ ನೌಕರಿ ಸಿಕ್ಕರೆ ಸಾಕು, ಏನು ಮಾಡಿದರೂ ಬಾರಾ-ಖೂನ್ ಮಾಫ್ ಎನ್ನುವ ವಾತಾವರಣ ಬದಲಾಗಬೇಕಾಗಿದೆ. ಅಂದರಷ್ಟೇ ಸರಕಾರೀ ನೌಕರರಿಗೆ ಎದುರುಗಡೆ ಹಾಗೂ ಹಿಂದುಗಡೆ ಒಳ್ಳೆಯ ಮರ್ಯಾದೆ ಸಿಗುವದು. ಇಲ್ಲದಿದ್ದರೆ,ಈಗಿರುವಂತೆ ಎದುರುಗಡೆ “ಸರ್”/ಮೇಡಂ ಅಂತಾ ಸಂಬೋಧಿಸಿ ಆಫೀಸ್ ಬಿಟ್ಟು ಹೊರಗೆ ಬಂದ ಮೇಲೆ (ಕೆಲಸ ಆದ ಮೇಲೆ) ಅದೇ ನೌಕರನಿಗೆ — ಅನ್ನುವ ಬೈಗುಳದ ಶಬ್ದಗಳು ನಿಲ್ಲುತ್ತವೆ.

    ಪ್ರತಿಕ್ರಿಯೆ
  4. Ananda Prasad

    ಸರ್ಕಾರೀ ನೌಕರರಿಗೆ ಮಾತ್ರ ವಾರದಲ್ಲಿ ಎರಡು ದಿನ ರಜೆ ಇದ್ದರೆ ಸಾಕೇ? ಅಂಗಡಿ, ಮಾಲುಗಳು, ಮೆಡಿಕಲ್ ಶಾಪುಗಳು, ವೈದ್ಯರು, ಬಸ್ ಚಾಲಕರು, ನಿರ್ವಾಹಕರು ಹೀಗೆ ಇವರೆಲ್ಲ ವಾರದಲ್ಲಿ ಎರಡು ದಿನ ರಜೆ ಮಾಡಿದರೆ ಹೇಗೆ? ಅವರಿಗೂ ವಿಶ್ರಾಂತಿ ಬೇಡವೇ? ಖಾಸಗಿ ಕಂಪನಿಗಳಲ್ಲಿ ವಾರದಲ್ಲಿ ಎರಡು ದಿನ ರಜೆ ಇರುವುದು ಕೆಲವೇ ಕಂಪನಿಗಳಲ್ಲಿ ಮಾತ್ರ ಮುಖ್ಯವಾಗಿ ಐಟಿ ಕಂಪನಿಗಳಲ್ಲಿ. ಬಹುತೇಕ ಖಾಸಗಿ ವಲಯದ ಕಂಪನಿಗಳಲ್ಲಿ ವಾರಕ್ಕೆ ಒಂದೇ ದಿನ ರಜೆ ಇರುವುದು ಮತ್ತು ಅವರಿಗೆ ಸರ್ಕಾರೀ ನೌಕರರಿಗೆ ಇರುವ ನಿಗದಿತ ಸಂಬಳ ಕೂಡ ಇಲ್ಲ ಎಂಬುದನ್ನು ಕೂಡ ಗಮನಿಸಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: