ಬಿ ಕೆ ಸುಮತಿ
**
“ನಮ್ಮ ಹೃದಯ ತಂತಿ ಮಿಡಿಯುತಿದೆ.. ನೆನಪಿನ ತಾನ..”
ಡಾ ರಾಜೀವ್ ತಾರಾನಾಥ ನೋಡಲು ಗಂಭೀರ. ಹೆಚ್ಚು ಮಾತಾಡಿದರೆ disturb ಆಗಬಹುದು ಅನ್ನಿಸುವ, ರಾಗವೇ ಶರೀರವಾಗಿದೆಯೇನೋ ಎನಿಸುವ ಭಾವದ ಮೂರ್ತಿ. ಅಕಾಶವಾಣಿ ಧ್ವನಿಮುದ್ರಣದಲ್ಲಿ ನೇರಪ್ರಸಾರದ ಕಾರ್ಯಕ್ರಮ ಗಳಿಗೆ ಉದ್ಘೋಷಣೆ ನೀಡಿ ವಿಸ್ಮಯದಿಂದ ಅವರ ಸಂಗೀತ ವಿಸ್ತಾರವನ್ನು ಸವಿದಿದ್ದೇನೆ. ನಾನು ‘ಮೊದಲ ಮಾತು’ ಎಂಬ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡುತ್ತಿದ್ದ ಸಮಯ. ಕಲಾವಿದರು ತಮ್ಮ ವೃತ್ತಿಯ ಮೊದಲ ದಿನದ ಬಗ್ಗೆ ನೆನಪು ಮಾಡಿಕೊಳ್ಳಬೇಕು ಎಂಬುದು ಕಾರ್ಯಕ್ರಮ ಸಾರ. ರಾಜೀವ್ ತಾರಾನಾಥ ಅವರು ಸಂಗೀತದ ಧ್ವನಿಮುದ್ರಣ ಕ್ಕೆ ಬಂದಿದ್ದರು. ನಾನು ನನ್ನ ಮೊದಲ ಮಾತು ಕಾರ್ಯಕ್ರಮ ಕ್ಕೆ ಅವರನ್ನು ಮಾತಾಡಿಸುತ್ತೇನೆ ಎಂದು ಸಂಗೀತದ ಸ್ಟುಡಿಯೋ ಬಳಿ ಹೋದೆ. “ಬೇಡ, ಅವರು ಈಗ ಮಾತನಾಡಲಾರರು, ಸಿಟ್ಟಾದರೆ ಕಷ್ಟ” ಎನ್ನುವ ಮಾತು ಕೇಳಿ ಬಂತು ಸಂಗಡಿಗರಿಂದ. ನಾನು ಪ್ರಯತ್ನ ಮಾಡುತ್ತೇನೆ ಎಂದು ಹೇಳಿ, ಮೆಲ್ಲಗೆ ಅವರ ಮುಂದೆ ಮೊಣಕಾಳೂರಿ ಕುಳಿತೆ. “ನಮಸ್ಕಾರ”ಎಂದೆ. ಪ್ರಶ್ನಾರ್ಥಕ ನೋಟ ಬೀರಿದರು. ನಾನು ನನ್ನ ಕಾರ್ಯಕ್ರಮಕ್ಕೆ ಒಂದು ಬೈಟ್ ಕೊಡುವಿರಾ, ಎಂದು ಕೇಳಿಕೊಂಡೆ. “ಸುಮತಿ” ಗೆ ಇಲ್ಲ ಎನ್ನಲಾರೆ. She is my mother” ಅಂದರು.

ನನಗೆ ಏನೂ ಗೊತ್ತಾಗಲಿಲ್ಲ. ಅವರು ಸುಂದರವಾಗಿ ನಗುತ್ತಾ “ನನ್ನ ತಾಯಿಯ ಹೆಸರು ಸುಮತಿ” ಅಂದರು. ತುಂಬಾ ಒಳ್ಳೆ ಲಹರಿಯಲ್ಲಿ 15 ನಿಮಿಷ ಮಾತಾಡಿದರು. ಅವರು ಮೊದಲು ಗುರುಗಳ ಮುಂದೆ ಸರೋದ್ ನುಡಿಸಿದಾಗ, clip ಹಾಕದೆ ನುಡಿಸಿದ ಕಥೆ, clip ಇದೆ ಎಂದೇ ಅರಿವಿಲ್ಲದೆ ಸರೋದ್ ನುಡಿಸಿದ ದಿನ ನೆನೆಸಿಕೊಂಡರು. ಕೈ ಹರಿದು ಹೋಗಿ ರಕ್ತ ಬಂದಿತ್ತು. ಅಯ್ಯೋ clip ಹಾಕಿಲ್ಲ ಎಂದು ಆಮೇಲೆ ಗುರುಗಳಿಗೆ ತಿಳಿದು ಅವರೂ ನೊಂದುಕೊಂಡರು. ಎಂದು ವಿವರಿಸಿದರು. ಅವರು 9 ನೇ ವಯಸ್ಸಲ್ಲಿ ಮೊದಲು ಹಾಡಿದ್ದು ಎಂದೂ ಹೇಳಿದರು. ಅದು ಪ್ರಸಾರ ವೂ ಆಯಿತು. ಇದಾದ ಮೇಲೆ ಅವರು ಮತ್ತೂ ಮೂರು ನಾಲ್ಕು ಕಾರ್ಯಕ್ರಮಗಳಲ್ಲಿ ಸಿಕ್ಕಾಗಲೂ ನೆನಪಿಟ್ಟು ಕೊಂಡು ಮಾತನಾಡುತ್ತಿದ್ದರು. ಅವರ ಹಲವು ವೇದಿಕೆ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದೇನೆ. ಭಾಷೆ ಬಗ್ಗೆ ಎಷ್ಟೋ ಮಾತಾಡುತ್ತಿದ್ದರು. ಅವರಿಗೆ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್, ಬೆಂಗಾಲಿ, ಉರ್ದು ಭಾಷೆಗಳಲ್ಲಿ ಪ್ರಭುತ್ವ ಇತ್ತು.
ಕನ್ನಡ ಭಾಷೆ ಮಾಧ್ಯಮಗಳಲ್ಲಿ ಎಷ್ಟು ಕೆಟ್ಟದಾಗಿ ಬಳಕೆ ಆಗುತ್ತಿದೆ, ನಮ್ಮ ಭಾಷೆ ಅಂದಗೆಡುತ್ತಿದೆ ಎಂದು ಹೇಳುತ್ತಿದ್ದರು. ಅವರಿಗೆ ಸ್ವರಗಳ ಮೇಲೆ ಇದ್ದ ಮಮತೆ ಭಾಷೆಯ ಮೇಲೂ ಇತ್ತು. ಮತ್ತೊಂದು ಸಂದರ್ಭದಲ್ಲಿ ಸಿನೆಮಾ ಗೀತೆ ಪ್ರಸಾರ ಮಾಡುವಾಗ ಆಕಾಶವಾಣಿಯ ವೈಖರಿಯನ್ನು ಹೊಗಳಿದ್ದರು. ಅವರು ಶಾಸ್ತ್ರೀಯ ಸಂಗೀತ ಕಲಾವಿದ ಆಗುತ್ತೇನೆ ನಾನು ಎಂದುಕೊಂಡಿರಲಿಲ್ಲ. ಸೈಗಲ್ ಮತ್ತು ತಲತ್ ಮೆಹಮೂದ್ ಸಂಗೀತ ಇಷ್ಟ ಪಡುತ್ತಿದ್ದರು. ಸಿನಿಮಾ ಸಂಗೀತಕ್ಕೆ ಬರುತ್ತೇನೆ ಅಂದುಕೊಂಡಿದ್ದರಂತೆ. ಅವರು ಮೊದಲ ಸಲ ಸರೋದ್ ಕೇಳಿದಾಗ ಹೇಗೆ ಹುಚ್ಚು ಹಿಡಿದು ಅದರ ಹಿಂದೆ ಹೋದೆ, ಎಂದು ವಿವರಿಸಿದ್ದರು. ರಸರಂಗ್ ಮತ್ತು meditation album ಗಳು ನನಗಿಷ್ಟ ಎಂದು ಹೇಳಿದಾಗ, ಮುಗುಳುನಗೆ ಬೀರಿದರು. ಅವರು ಕುಳಿತುಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದರು, ಕುಳಿತುಕೊಳ್ಳುವ ಒಂದು ಸರಿಯೆನಿಸುವ ಹಿತವೆನಿಸುವ position ಗೆ ಅವರು ಒಗ್ಗಬೇಕು. ಅಷ್ಟೇ. ಆಮೇಲೆ ಸರೋದ್ , ಸರೋದ್ ಅಷ್ಟೇ. ಬೇರೆ ಪ್ರಪಂಚದ ಅರಿವು ನಮಗಾಗಲಿ ಅವರಿಗಾಗಲಿ ಇರುತ್ತಿರಲಿಲ್ಲ.

ಅವರಿಗೆ 86 ವರ್ಷ. ಪಂಡಿತ್ ರವೀಂದ್ರ ಯಾವಗಲ್ ಅವರ ರಾಮ ಕಲಾವೇದಿಕೆಯ ಕಾರ್ಯಕ್ರಮ ದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ, 2 ತಾಸು ಸುಲಲಿತವಾಗಿ ನುಡಿಸಿದ್ದರು. ನಾನು ಅಂದು ನಿರೂಪಣೆ ಮಾಡುವ ಮುನ್ನ ಅವರ ಜೊತೆ ಸಂಭಾಷಿಸಿದ್ದೆ. ನೆನಪಿದೆ “ಅಮ್ಮ” ಸುಮತಿ ಎಂದೇ ಗುರುತಿಸಿದರು ನನ್ನನ್ನು. ಅವರ ಅಮ್ಮ ತುಂಬಾ ಸೊಗಸಾಗಿ ಇಂಗ್ಲಿಷ್ ಮಾತಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಕಮಲಾದೇವಿ ಚಟ್ಟೋಪಾಧ್ಯಾಯ, ಮುಂತಾದವರ ಒಡನಾಟ ಇದ್ದ ಆಧುನಿಕ ಚಿಂತನೆ ಹೊಂದಿದ ಮಹಿಳೆ ಎಂದು ಹೇಳಿದರು. ಅಂದು ಅವರು ನಗುತ್ತ, “ಶೋಕ ಸಂದರ್ಭದಲ್ಲಿ ನೀವು ಆಕಾಶವಾಣಿಯಲ್ಲಿ ಸರೋದ್ ವಾದನ ಹಾಕುತ್ತೀರಿ, ಈಗ ಹೇಳಿ, ಸರೋದ್ ಎಂಥ ವಾದ್ಯ ಎಂದು” ಎಂದರು. ನಾನು ಸುಮ್ಮನೆ ತಲೆಯಾಡಿಸಿದೆ. ಸರೋದ್ ದುಃಖ ಸೂಚಕ ವಾದ್ಯ ಎಂದೇಕೆ ಹೇಳುವಿರಿ ಅಂತ ಅವರು ಆ ದಿನ ಕೇಳಿದರು, ಈಗ, ಸರೋದ್ ನಿಜವಾಗಿ ಅಳುತ್ತಿದೆ. ಸರೋದ್ ಕೇಳುತ್ತಿದೆ.. ಹೇಳಿ, ಹೇಗೆ ಕೇಳಿಸುತ್ತಿದೆ.. ಘನತೆವೆತ್ತ ಹಿರಿಯ ಕಲಾವಿದ ರಾಜೀವ ತಾರಾನಾಥ ಎಂಬ ಜೀವಕ್ಕೆ ನಮಸ್ಕಾರ..






0 Comments