‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.
ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.
ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.
ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…
4
“ಏಕಾ, ಏಕಾ” ಅಂತ ನಮ್ಮ ಏಕಾನ್ನ ಕೂಗುತ್ತ, ಆಕೀನ್ನ ಹುಡುಕ್ತಾ ಒಳಗ ಬಂದೆ ನಾ. ಆದರೆ ಎಲ್ಲೂ ಆಕೆ ಸುಳಿವೇ ಇಲ್ಲ! ನಮ್ಮವ್ವ “ಯಾಕ, ಏನಾತು” ಅಂದ್ಲು. “ಅವ್ವಾ, ನನ್ನ ಗೆಳತಿ ವಿಜು ಹೂಂ ಅದೆ ವಿಜಿ ಇದ್ದಾಳಲಾ ಆಕೀ ಮದುವೆ ಗೊತ್ತಾತಂತ ಅವ್ವಾ” ಅಂದೆ. “ಇಷ್ಟ ಲಗೂನ !” ಅಂದ್ಲು ಅವ್ವಾ. ನಮ್ಮದು ಆಗಿನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದು ಸೂಟಿ ಸುರು ಆಗಿತ್ತು. ನಾನೂ, ನನ್ನ ಗೆಳತೀರ್ಯಾಲ್ಲಾ ನಿರುಮ್ಮಳಾಗಿ ಆಚೀಚೆ ಓಡಾಡ್ತಿದ್ವಿ. ಆಗಲೇ ವಿಜುನ ಮದ್ವೆ ಸುದ್ದಿ.
ತುಳಸೀ ಕಟ್ಟಿ ಮುಂದ ಏನೋ ಓದುತ್ತ ಕುಳಿತಿದ್ದ ಏಕಾ ಎದ್ದು ಬಂದು,” ಏನ ಅಕ್ಕವ್ವಾ, ಯಾಕ ಕರದೀ ನನ್ನ?” ಅಂದ್ಲು. “ಏಕಾ ವಿಜುನ ಮದವಿ ಠರಾಸ್ತಂತ.” ಅಂತ ಹೇಳ್ದೆ. ಆಕೀನೂ ನಮ್ಮವ್ವನಹಾಂಗ “ಎಷ್ಟ ಲಗೂ ಆತಲ” ಅಂತ ಉದ್ಗಾರ ತೆಗೆದ್ಲು.” ಹೂಂ ಏಕಾ. ಆಕೀ ಛಂದ ರೂಪಾ ನೋಡಿ ತಾವೇ ಮಾಗಣಿ ಹಾಕಿ (ಬೇಡಿಕೆ ಇಟ್ಟು, ಕೇಳಿ) ಮಾಡ್ಕೊಂಡ್ರಂತ. ಭಾರೀ ಶ್ರೀಮಂತ ಮನಿತನ. ನೀವೇನೂ ಕೋಡೊದು ಬ್ಯಾಡ. ನಾವೇ ಎಲ್ಲಾ ನೋಡ್ಕೋತೀವಿ. ಆಕಿ ಸಾಕ ಸಾಕ ಅನೂ ಅಷ್ಟು ವಸ್ತಾ – ವಡವಿ, ಸೀರೆ ಬಟ್ಟೆ ಎಲ್ಲಾ ನಮ್ಮದೇ ಅಂತ ಹೇಳ್ಯಾರಂತ ಏಕಾ” ಅಂದೆ. ಬಡಬಡ ಹೇಳಿ ಖುಷಿಲೇ ಆಕಿ ಮಾರಿ ನೋಡ್ದೆ.
ಏಕಾನ ಮಾರಿ ಮ್ಯಾಲೆ ಅರ್ಥವಾಗದ ಒಂದು ನಗು ! ವಿಷಾದನೋ, ಹುರುಪೋ ತಿಳಿಯದ ಮಿಶ್ರಭಾವ ಮಿಳಿತ ನಗು. ” ಇದು ಅಂದರ ಇನ್ನೂ ಮದವಿ, ಸಂಸಾರ ಅಂಬೂದ್ರ ಬಗ್ಗೆ ಜವಾಬ್ದಾರಿ, ಸ್ಪಷ್ಟತಾ ಬರದೆ ಇರೂ ಮಕ್ಕಳ ಕೊಳ್ಳಿಗೆ ಸಂಸಾರದ ನೊಗಾ ಹೂಡೂದ ನಡದs ಅದಲಾ ಬಾಳಾ! ಮದವಿ ಅಂದ್ರ ಭಾರೀ ಭಾರೀ ಸೀರಿ, ಮಣಗಟ್ಟಲೆ ವಸ್ತಾವಡವಿ, ಪಕ್ವಾನ್ನದೂಟ ಅನೂ ಗುಂಗಿನ್ಯಾಗ ಇರೂ ಮಕ್ಕಳ ಕೊಳ್ಳಿಗೆ ಮಣಾಭಾರದ ಜವಾಬ್ದಾರಿ ಕಟ್ಟಿಬಿಡ್ತಾರ ಅವಕ್ಕ ತಿಳಿಯೂ ಮೊದಲs! ಎಂದ ಮುಗ್ಯೂದ ಈ ಹುಡಗಾಟದ ಹುಚ್ಚಾಟ ಎಲ್ಲಾ ಅಕ್ಕವ್ವಾ? ಹೂಂ , ಎಲ್ಲಾ ನಸೀಬದಾಟ’ ಅಂತ ಉದ್ಗಾರ ತೆಗೆದು ಏಕಾ ಕೈಯಾಗ ಇದ್ದ ಚಶ್ಮಾ, ಪುಸ್ತಕ ಇಡ್ಲಿಕ್ಕ ಹೋದ್ಲು. ನಾ ಆಕೀ ಬೆನ್ನ ಹಿಂದೆಯೇ.” ಯಾಕ ಏಕಾ ಏನಾತು? ಹಿಂಗ ಇದ್ದೀ. ಯಾಕ ? ನೀ ಏನಂದಿ ಗೊತ್ತಾಗಲಿಲ್ಲ ಏಕಾ” ಅಂದೆ.
“ಏನಿಲ್ಲಾ ಅಕ್ಕವ್ವಾ ಹೆಂಗ ತಿಳಿದೀತು ಬಾಳಾ. ಇನ್ನೂ ಆಟಾ ಆಡ್ಕೊಂಡಿರೂ ವಯಸ್ಸು.” ಅಂತ ಹೇಳಿ ಒಂದು ಗಳಿಗೆ ಸುಮ್ಮನಿದ್ಲು ಏಕಾ.
ನನಗ ಅಗ ಗೊತ್ತಾಗಲಿಲ್ಲ ಆದರ ಈಗ ಅನಸ್ತದ ನಮ್ಮ ಏಕಾ ಸಾಮಾನ್ಯ ಅಜ್ಜಿಯಲ್ಲ ಅಂತ. ಜೀವನಾನ ಮಥಿಸಿ ಸೋಸಿ ಕಹಿ ನುಂಗಿ ಸಿಹಿ ಹಂಚಿದ ಜೀವ ಅದು. ಅವಳೊಡಲ ಕಹಿ ಕಡದು ಹೊರಗ ಬಂದು ಹೇಳಿದ ಮಾತಿದು ; ಅಂತೆಯೇ ಅದು ಅಪ್ಪಟ ಸತ್ಯನ ಹೌದು ಅಂತದ ನನ್ನ ಜೀವ. ಏಕಾ ಮತ್ತ ಹೇಳಿದ್ಲು”ನಾ ಸುಮ್ಮನ ಇರ್ತೀನಿ. ಆದ್ರೂ ಒಮ್ಮೊಮ್ಮೆ ಗೊತ್ತs ಆಗಧಾಂಗ ಈ ನೆನಪು ಬೆನ್ನಿಗೆ ಬಿದ್ದು ಬಿಡಧಾಂಗ ಅಂಟಗೊಂಡ ಕಾಡ್ತಾವ ನೋಡ” ಅಂದ್ಲು. ನನಗ ಏನೋ ತಪ್ಪು ಮಾಡಿಧಾಂಗ ತಳಮಳ. ಮತ್ತ ಮತ್ತ ಬೆನ್ನು ಹತ್ತಿ ಕೇಳ್ದೆ. ಏನಾತ ಏಕಾ, ಯಾಕ ಒಮ್ಮೆಲೆ ಸ್ವಲ್ಪ ಸಪ್ಪಗಾದಿ ಅಂದಾಗ “ಹುಚ್ಚಿ, ನಾ ಯಾವಾಗರೇ ಹಂಗ ಗಪ್ಪ ಕೂಡಾಕೇನ? ಸಪ್ಪಗಿಲ್ಲಾ ಏನಿಲ್ಲಾ” ಅಂತ ಹೇಳಿ, ಮತ್ತ,” ಅಕ್ಕವ್ವಾ, ನಿಂದು ಅಭ್ಯಾಸದ ವ್ಯಾಳ್ಯಾ ಏನ ಈಗ” ಅಂದ್ಲು. ‘ಇಲ್ಲ ಏಕಾ. ಹಿಂಗ್ಯಾಕ? ಮರತಿ ಏನ ; ನನಗೆ ಸೂಟಿ ಈಗ “ಅಂದೆ.” ಅಯ್ಯ, ಹೌದಲಾ? ಮರತಿತ್ತ ನೋಡು. ಬಾ ಹಂಗಾರ ನಿನಗ ಈಗ ನನ್ನ ಮದವಿ ಕಥಿ ಹೇಳ್ತೀನಿ” ಅಂದ್ಲು. “ವಿಜುಗ ಎಷ್ಟ ವರ್ಷ ಈಗ” ಅಂತ ಕೇಳಿದ್ಲು. ಹದಿನೈದು ವರ್ಷ ಇರಬೇಕು” ಅಂದೆ. “ನಂದೂ ಮದವಿ ಹೆಚ್ಚು ಕಡಿಮಿ ಇದs ವಯಸ್ಸಿನ್ಯಾಗ ಆಗಿತ್ತ ನೋಡ.” ಅಂದ್ಲು. “ನಾ ಅಂತೂ ತಯಾರೇ! ಏಕಾ ಹೇಳು ನಿನ್ನ ಮದವಿ ಕಥಿ” ಅಂದೆ. ‘ಬಾ ಅಲ್ಲೇ ತುಳಸಿ ಕಟ್ಟೀ ಹತ್ರನ ಕೂಡೂಣು’ ಅಂತ ಹೇಳಿ ಕರಕೊಂಡು ಹೋದ್ಲು.

“ಅಕ್ಕವ್ವಾ ನನ್ನ ಮದವಿನೂ ಹಿಂಗs ಆತ ನೋಡು’ ಅಂದ್ಲು.” ಅಂದ್ರ? ಗೊತ್ತದ ನಂಗ. ನಿಂಗೂ ಮಾಗಣಿ ಹಾಕೇ ಮಾಡ್ಕೊಂಡಾರ ನಮ್ಮಜ್ಜ” ಅಂದೆ. “ಹೂಂ ಅಷ್ಟs ಅಲ್ಲ. ಬಾಳಾ ಇನ್ನೂ ಭಾಳ ಅದ. ಎಲ್ಲಾ ಹೇಳ್ತೀನಿ ಕೇಳು” ಅಂತ ಸುರು ಮಾಡಿದ್ಲು ಏಕಾ.
ನಾ ಹಿಂದೆ ಹೇಳಿದಂತೆ ನಮ್ಮ ಏಕಾನ ಮದುವೆ ಆಗಿನ ದಿನ ಮಾನದ ಪ್ರಮಾಣಲೇ ತಡಾನ ಆಗಿತ್ತು ಅವರ ಅಕ್ಕನ ಮದುವೆ ತಡ ಆಗಿದ್ದಕ್ಕೆ. ಹದಿನೈದನೇ ವರ್ಷ ಸುರು ಆದ್ರೂ ಇನ್ನೂ ಆಗಿರಲಿಲ್ಲ. ಮೈನೆರೆದ ಹುಡುಗಿ; ಹೊರಗೆ ಆದಾಗಲೊಮ್ಮೆ ಆಕೀನ್ನ ಯಾರಿಗೂ ಗೊತ್ತಾಗದಂತೆ ಕಳವಿಲೆ ಒಳಗ ಕೂಡಸೋದು ಏಕಾನ ಅವ್ವ ಗಂಗಾಬಾಯಿಗೆ ದೊಡ್ಡ ಕಷ್ಟದ ಕೆಲಸ ಆಗಿ ಸಾಕಾಗಿ ಹೋಗೋದು. ಇಂಥದೇ ಒಂದ ದಿನಾ – ಮುಟ್ಟಾದ ಏಕಾನ್ನ ಒಳಗೆ ಕತ್ತಲ್ಯಾಗ ಕೂಡಿಸಿ ಅವರವ್ವ ಅಡೀಗಿ ಮನಿ ಕೆಲಸಾ ನಡಸಿದ್ಲು.
ಅಷ್ಪ್ರಾಗ ಏಕಾನ ಅಪ್ಪ ರಾಮಾಚಾರ್ಯರು ಭರ್ತಿ ಖುಷಿಲೆ “ಗಂಗಾಬಾಯರs” ಅಂತ ಕೂಗುತ್ತಾ ಬಂದ್ರಂತ. ಆಕೀಗೆ ಆಶ್ಚರ್ಯ! “ಯಾಕ ಏನಾತು? ಒಳಗ ಸೋನಿ ಇದ್ದಾಳ’! ಅಂತ ಸನ್ನೆ ಮಾಡಿದ್ಲಂತ.
“ಗಂಗಾ ನಮ್ಮ ಸೋನಿ ನಸೀಬು ಭಾರೀ ಅರ್ಭಾಟ ಅದ ನೋಡ. ಮೊದಲ ದೇವರ ಮುಂದೆ ತುಪ್ಪದ ದೀವಿಗಿ ಹಚ್ಚು” ಅಂದ್ರು. ಗಂಗಾಬಾಯಿ ಏನೋ ಕೇಳೂದ್ರಾಗ, “ಹೇಳೂದು ಕೇಳೂದು ಎಲ್ಲಾ ಆಮ್ಯಾಲೆ. ಮೊದಲ ದೇವರ ಮುಂದೆ ತುಪ್ಪದ ದೀಪಾ ಹಚ್ಚಿಟ್ಟು ಬಾ.” ಅಂದ ಕೂಡಲೇ ಕಾಲು ತೊಳೆದುಕೊಂಡು ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟು ಕೈ ಒರೆಸಿಕೋತ ಬಂದ ಗಂಗಾಬಾಯಿಗೆ ಹೇಳಿದ್ರಂತ ರಾಮಾಚಾರ್ಯರು -” ನಂದಿಕುರಳಿ ಮುತಾಲೀಕದೇಸಾಯ್ರು; ಅವರಿಗೆ ರಾವ್ ಸಾಹೇಬ್ರು ಅಂತಾರ. ಸಾಹೇಬ ಅವರ ಮನಿ ತನಕ್ಕೆ ಬಂದ ಉಪಾಧಿ. ಅದಕ್ಕ ಇವರು ರಾವ್ ಸಾಹೇಬ್ರು. ಅವರ ಹೆಸರು ರಾಮಚಂದ್ರ ರಾಯರು. ಅವರು ನಮ್ಮ ಸೋನಿಗೆ ಮಾಗಣಿ ಹಾಕ್ಯಾರ. ನೀವು ಕಾಯಿ- ಕನ್ಯಾ ಕೊಡ್ರಿ ಸಾಕು. ಯಚ್ಛಾವತ್ತ ಖರ್ಚು, ವೆಚ್ಚ, ವ್ಯವಸ್ಥಾ, ವಸ್ತಾ ವಡವಿ ಎಲ್ಲಾ ನಂದು ಅಂತ ಹೇಳ್ಯಾರ ಗಂಗಾ. ನಾ ಹೂಂ ಅಂದು ಒಪ್ಪಿಗಿ ಕೊಟ್ಟ ಬಂದೇನ. ತಿಳೀತ? ಮುಂದಿನ ತಿಂಗಳು ಮದುವೆ.” ಅಂದ್ರು.
ಗಂಗಾಬಾಯಿಗೆ ಏನೂ ಹೊಳಿಲೇ ಇಲ್ಲ. ಕಕ್ಕಾಬಿಕ್ಕಿ ಆಕಿ. ” ಅಲ್ಲಾ ಹೀಂಗ ಬಂದು ಮುಂದಿನ ತಿಂಗಳು ಮದುವೆ ಅಂದ್ರ ಹ್ಯಾಂಗದು ಅಂತೀನಿ. ಹುಡುಗನ ಬಗ್ಗೆ, ಮನಿ ಮನೆತನದ ಬಗ್ಗೆ ಪೂರಾ ವಿಚಾರ ಹೇಳ್ರಿ ಮೊದಲ ” ಅಂದ್ಲು. ” ನೋಡಿಲ್ಲೆ, ವರಾ ಅರ್ಭಾಟ ಅಂದ್ರ ಅಗದೀ ಅರ್ಭಾಟ ಇದ್ದಾರ. ವತನದಾರರು ಅವರು. ಎಲ್ಲಾ ಕಡಿದು ಸೇರಿ ನೂರಾರು ಎಕರೆ ಜಮೀನು, ಅಳತಿಗೆ ಸಿಗದಷ್ಟು ಬೆಳ್ಳಿ ಭಂಗಾರ. ಭಾರೀ ಗಟ್ಟಿ ಕುಳಾ. ನಾ ಅದನ್ನೆಲ್ಲಾ ವಿಚಾರ ಮಾಡಿನೇ ಹೂಂ ಅಂದೀನಿ. ನಮ್ಮ ಸೋನಿ ಭಾಗ್ಯವಾನ ಇದ್ದಾಳ.” ಅಂತ ಹೇಳಿ ಆಕಡೆ ಈಕಡೆ ನೋಡಿ ಸಾವಕಾಶ, ಸಣ್ಣ ಧ್ವನೀಲೆ ಹೇಳಿದ್ರು;” ಒಂದs ಅಂದ್ರ ರಾವಸಾಹೇಬ್ರಿಗೆ ಸೋನಿ ಎರಡನೇ ಹೆಂಡತಿ. ಮೊದಲನೇ ಹೆಂಡತಿ ಆರೋಗ್ಯ ಸರಿ ಇರಲಿಲ್ಲ; ಹಿಂಗಾಗಿ ಮಕ್ಕಳಾಗದೇ ತೀರಿಕೊಂಡಾಳ. ರಾವಸಾಹೇಬ್ರಿಗೆ 34-35 ವರ್ಷ ವಯಸ್ಸಿರಬೇಕು; ಗೊತ್ತೇ ಆಗೂದಿಲ್ಲ ನೋಡ. ಅಂಥಾ ಸ್ಫುರದ್ರೂಪಿ, ಸಧೃಡ ಇದ್ದಾರ ” ಅಂತ ಹೇಳಿ ರಾಮಾಚಾರ್ಯರು ಸುಮ್ಮನಾದ್ರು.
ಗಂಗಾಬಾಯಿ ತಾಯಿ ಕರುಳು; ಇಬ್ಬಂದಿಯೊಳಗ ಸಿಕ್ಕಿ ನಲುಗಿ ಸೋತು ಹೋತು. ಆ ಸೊಗಸಿಲ್ಲದ ಧ್ವನೀಲೆ ಅಂದ್ಲು ಆ ಅವ್ವ ,” ನಮ್ಮ ಸೋನಿ ಕಡ್ಡಿಬತ್ತೀಲೆ ತಿದ್ದಿ ತೀಡಿ ಬರೆಧಾಂಗ ಚಲವಿ. ಗೌರಿ ಆಗ್ಯಾಳ ಗೌರಿ. ಇಮ್ಮನಿ ವರಾ, ಮ್ಯಾಲೆ ವಯಸ್ಸಿಂದೂ ಇಷ್ಟ ಅಂತರಾ. ಹೆಂಗ ಕೊಡೂದು” ಅಂದ್ಲು.
” ಅದನ್ನೆಲ್ಲಾ ವಿಚಾರ ಮಾಡಾಂಗಿಲ್ಲ. ಮನೀ ತನಕಾ ಬಂದ ಲಕ್ಷ್ಮಿನ್ನ ಒಲ್ಲೆ ಅಂತೀಯೇನು ? ನಮ್ಮ ಸೋನವ್ವ ಸಕ್ರಿ ತುಪ್ಪದಾಗ ಕೈ ತೋಳೀತಾಳ” ಅಂದ್ರು ರಾಮಾಚಾರ್ರು. ಗಂಡನ ಆ ಅವತಾರದ ಮುಂದೆ ಧ್ವನಿ ಎತ್ತಲಿಕ್ಕೆ ಅವಕಾಶರೆ ಎಲ್ಲಿತ್ತು? ಅವ್ವಗ ಇಲ್ಲದ ಅವಕಾಶ ಮಗಳಿಗೆಲ್ಲಿಂದ ಸಿಕ್ಕೀತು? ಒಂದೇ ಒಂದು ಮಾತೂ ಏಕಾನ್ನ ಕೇಳದೆ ಆಕೀ ಮದವಿ ಠರಾಸೇ ಹೋತು. ಅಳಬೇಕೋ, ನಗಬೇಕೋ ತಿಳೀದ ಸ್ಥಿತಿಯಲ್ಲಿರುವಾಗಲೇ ಮದುವೆ ಆಗಿಯೇ ಹೋಯ್ತು. ಶ್ರೀಮಂತರ ಹೆಂಡತಿ ಅನ್ನೋ ವಿಚಾರದ ಮ್ಯಾಲೆ ಹೆಚ್ಚು ಜೋರ ಕೊಟ್ಟು ಒಂದು ಕನಸಿನಾಗ ನಡಧಂಗ ಧೂಮಧಾಮಲೆ ನಡೆದ ಆ ಮದುವೆ ಸಂಭ್ರಮದೊಳಗ ಮುಳುಗಿ ಇನ್ನೊಂದು ಕನಸಿನ ಲೋಕದಾಗ ಕಾಲಿಟ್ಲು ಸೋನವ್ವ!
ಯಾಕೋ ಏನೋ ಏಕಾನ ಧ್ವನಿ ಮಂದ ಆಗಿ ಒಂದು ಗಳಿಗೆ ಸುಮ್ಮನೆ ಕೂತ್ಲು. ನನಗ ಆಕೀ ಈ ಪರಧ್ಯಾನದ ಸ್ಥಿತಿ, ಆ ನೋವು ತಿಳೀತಿತ್ತು. ನಾನೂ ಒಂದು ನಿಮಿಷ ಸುಮ್ಮನಿದ್ದು ಕೇಳ್ದೆ – ” ಏಕಾ ನೀ ಮದವಿ ದಿನಾ ಹೆಂಗ ಕಾಣಸ್ತಿದ್ದಿ? ಆಗ ಫೋಟೋ ಇದ್ದಿದ್ದಿಲ್ಲೇನು?” ಅಂತ ಕೇಳಿದೆ.
ಏಕಾ ಗಂಟಲಾ ಸರಿ ಮಾಡ್ಕೊಂಡು ಹೇಳಿದ್ಲು ; ” ಬಂದ ಮಂದಿ ಎಲ್ಲಾ ಸೋನವ್ವ ಥೇಟ್ ಮಹಾಲಕ್ಷ್ಮಿ ಹಾಂಗ ಕಾಣ್ತಾಳ ಅಂತ ಅನ್ನಾವ್ರು ಅಕ್ಕವ್ವಾ” . ಜನಾ ಎಲ್ಲಾ ಸೋನವ್ವನ ವೈಭವ ನೋಡಿ ದಂಗಾಗಿದ್ರು. ಮೊದಲs ರೂಪವಂತಿ. ಮದವಿ ದಿನಾ ಡಾಳಂಬ್ರಿ ಬಣ್ಣದ ಅಸ್ಸಲ ಪೇಶ್ವಾಯಿ ಥಾಟದ ಪೀತಾಂಬರ ಮಾಟಾಗಿ ಕಚ್ಚೆ ಹಾಕಿ ಉಟ್ಟು , ಮೈತುಂಬ ವಸ್ತಾ ವಡವಿ, ನೆಟ್ಟಗಿನ ಮೂಗಿನಲ್ಲಿನ ಮುತ್ತಿನ ನತ್ತು, , ಕಟ್ಟಿದ್ದ ದೊಡ್ಡ ತುರುಬು , ಅದಕ್ಕೊಂದು ಬಂಗಾರದ ಮಗ್ಗಿ ಮಾಲೆ, ನಡುವೆ ಒಂದು ಕೆಂಪು ಹರಳಿನ ರೋಜಾ ಹೂವು; ದೃಷ್ಟಿ ತಾಕೋ ಹಂಗ ಕಾಣ್ತಿದ್ಲಂತ ನಮ್ಮ ಏಕಾ. ( ಈಗ ಇಲ್ಲೊಂದು ಸಣ್ಣ ವಿಷಯ -ನಂದಿಕುರಳಿ ಮುತಾಲೀಕ ದೇಸಾಯರು ಪೇಶ್ವೆ ಯವರಿಂದ ವತನ ಪಡೆದ ವತನದಾರರೇ.ಅವರ ಆಸ್ಥಾನದಲ್ಲಿ, ಪೇಶ್ವೆಗಳ ಸೇವೆಯಲ್ಲಿದ್ದವರು. ನಾವ್ಯಾರೂ ಇನ್ನೂ ವರೆಗೂ ಏಕಾನ ಆ ವೈಭವದ, ಪೇಶ್ವಾಯಿ ಥಾಟಿನ ಫೋಟೋ ನೋಡೋ ಪುಣ್ಯವಂತರಾಗಿಲ್ಲ. ಈಗ ಮೂರು ವರ್ಷಗಳ ಹಿಂದೆ ನಾನು, ನಮ್ಮಣ್ಣ ಇಬ್ಬರೂ ಹೋಗಿ ಚಿಕ್ಕೋಡಿ, ನಂದಿಕುರಳಿ ಕಿತ್ತು ಹಾಕಿ ಬಂದ್ರೂ ಏನೂ ಸಿಗಲಿಲ್ಲ. ಏಕಾ, ಅಣ್ಣಾ ಮೂರು- ನಾಲ್ಕು ಊರು ಬದಲಾಸೋ ಮುಂದೆ ಅಥವಾ ಏಕಾನ ತೌರು ವಾಸದಲ್ಲಿ ಇದ್ದ ಆ ಒಂದೆರಡು ಫೋಟೋ ಹಾಳಾಗಿರಬೇಕು)
ನಮ್ಮಜ್ಜ ಏಕಾನ್ನ ಮದವಿ ಆದಮ್ಯಾಲೆ ಆಕೀನ್ನ ಕರಕೊಂಡು ಚಿಕ್ಕೋಡಿಗೇ ಬಂದ್ರು. ಹಳ್ಳಿ ಒಳಗ ದೊಡ್ಡ ವಾಡೆ ಇದ್ರೂ ಇಂಥಾ ಚೆಲುವೆ, ಸಣ್ಣಾಕಿ ; ಅಂಥಾ ಹೆಂಡತೀನ್ನ ಹಳ್ಳಿಗೆ ಕರಕೊಂಡು ಹೋಗೋ ಧೈರ್ಯ ಆಗಲಿಲ್ಲ ಅವರಿಗೆ. ನಮ್ಮಜ್ಜನ ಅವ್ವಾ ಅಪ್ಪ ತೀರಿಕೊಂಡಿದ್ರು. ಒಬ್ಬ ತಮ್ಮ ಇದ್ರು ಅಪ್ಪಾ ಸಾಹೇಬ ಅಂತ. ಪ್ರಸಿದ್ಧ ವಕೀಲರು ಅವರು; ಚಿಕ್ಕೋಡಿಯಲ್ಲೇ ಇದ್ರು. ಅದ್ಕೇ ನಮ್ಮಜ್ಜ ಚಿಕ್ಕೋಡಿಯೊಳಗ ಇದ್ದ ದೂರದ ಬಳಗದವರು ನಾನಾಸಾಹೇಬ, ಅವರ ಪತ್ನಿ ಯಮುತಾಯಿ ಅವರ ಮನೀ ಬಾಜೂದ್ದ ಮನೀನ ತಗೊಂಡು ಅಲ್ಲೇ ಇರಲಿಕ್ಕೆ ಶುರು ಮಾಡಿದ್ರು. ಅವರ ಕಾಳಜಿಯೊಳಗ ತಮ್ಮ ಸೋನಾ ಇರಲಿ ಅಂತ. ಹೀಂಗ ಸೋನವ್ವ, ನಮ್ಮ ಏಕಾ ತೌರಿನ ಬಡತನದ ಜೀವನದಿಂದ ರಾವ ಸಾಹೇಬರ ವೈಭವದ ಜೀವನದ ಹೊಸಲಾ ದಾಟಿ ಒಳಗೆ ಬಂದ್ಲು ಕಣ್ಣರಳಿಸಿ ನೋಡಕೋತ.
ಏಕಾನ ಹೊಸ ಸಂಸಾರದಾಗ ಕೊರತೆ, ಕಮ್ಮಿ ಅಂಬೋ ಶಬ್ದಗಳಿಗೆ ಜಾಗನೇ ಇರ್ಲಿಲ್ಲಂತ. ರಾವ ಸಾಹೇಬರು ತಮ್ಮ ಜಮೀನೆಲ್ಲಾ ಫಾಳೇದಲೆ ಅಂದ್ರ ಲಾವಣಿಲೇ ಕೊಟ್ಟಿದ್ರು. ವರ್ಷಕ್ಕಿಷ್ಟು ಅಂತ ರೊಕ್ಕ; ಕಾಳು ಕಡಿ ಎಲ್ಲಾ. ಮನೀಯೊಳಗ ಯಾವಾಗಲೂ ತಿಜೋರಿ ತುಂಬಾ ರೊಕ್ಕ; ಮನೀ ತುಂಬ ಕಾಳು ಕಡಿ ನಿಟ್ಲ ಹತ್ತಿದ್ದು!( ಸಾಲು ಸಾಲು ಚೀಲ, ಏರಿಸಿ ಇಟ್ಟಿದ್ದು) ವಾರಕ್ಕೊಮ್ಮೆ ಹಳ್ಳಿಂದ ರೈತ ಬಂದು ಸಾಕ ಅನ್ನೋಷ್ಟು ಕಾಯಿಪಲ್ಲೆ, ತೊಪ್ಪಲು ಪಲ್ಲೆ, ಬೆಣ್ಣೆ ಎಲ್ಲಾ ತಂದು ಕೊಡ್ತಿದ್ದಂತ.
ಏಕಾ ಮೊದ ಮೊದಲು ಇದನ್ನೆಲ್ಲಾ ಬೆರಗುಗಣ್ಣಿನಿಂದ ನೋಡ್ತಿದ್ಲಂತ. ಆ ಮೇಲೆ ಅದಕ್ಕೇ ಹೊಂದಿಕೊಂಡು ಬಿಟ್ಲು. ಆವಾಗ ಮಾವಿನ ಹಣ್ಣಿನ ಸುಗ್ಗಿ ಸುರು ಆಗಿತ್ತು. ಬುಟ್ಟಿ ಬುಟ್ಟಿ ಹಣ್ಣು; ಎಲ್ಲಾರಿಗೂ ಹಂಚಿದ್ರುನೂ ಉಳಿದು ಕೊಳೆತು ಹೋಗೋ ಅಷ್ಟು ಹಣ್ಣು ಮನ್ಯಾಗ! ಏಕಾಗ ತನ್ನ ತೌರು ಮನೆಗೆ, ತನ್ನ ತಂಗಿ ತಮ್ಮಂದಿರಿಗೆ ಕಳಸೋ ಆಸೆ .ಏಕಾ ಅಂಜಕೋತನ ರಾವಸಾಹೇಬ್ರನ್ನ ಕೇಳಿದಾಗ ನಕ್ರಂತ ಅವರು .
” ಕೇಳೂದೇನದ ಬಾಯಿ ಸಾಹೇಬ ಅದರಾಗ? ನಿಮ್ಮದ ಎಲ್ಲಾ. ಜರೂರ್ ಕಳಸ್ರಿ” ಅಂದ ಕೂಡಲೆ ಭಾರೀ ಖುಷಿ ಆತು ಏಕಾಗ. ಆಳುಮಗನ ಕೈಲಿ ಬುಟ್ಟಿ ತುಂಬ ಹಣ್ಣು, ಕಾಯಿಪಲ್ಲೆ, ಬೆಣ್ಣೆ ಎಲ್ಲಾ ಕಳಿಸಿ ಸಂಭ್ರಮ ಪಟ್ಲು ಸೋನವ್ವ.
ನಮ್ಮ ಏಕಾ ಮದವಿ ಆದಾಗ ಸಣ್ಣಾಕಿ ಆದ್ರೂ ಮನಿಗೆಲಸ, ಒಪ್ಪ, ಓರಣದಾಗ ಭಾಳ ಶಾಣ್ಯಾಕಿ. ಮನೀ ಅಗದೀ ಲಕಾ ಲಕಾ ಸ್ವಚ್ಛ; ಕನಡಿಹಾಂಗ ಥೇಟ್. ಮುಂಜಾನೆ ಲಗೂನ ಎದ್ದು ಬಾಗಿಲು, ಅಂಗಳಾ ಸಾರಿಸಿ ದಿನಾ ಒಂದ ಥರದ್ದ ಹೊಸಾ ರಂಗೋಲಿ ಅಂಗಳತುಂಬ! ಅದನ್ನ ನೋಡಿ ಯಮುತಾಯಿ ನಾನಾಸಾಹೇಬ್ರಿಗೆ ಹೇಳಾವ್ರು , ” ರಾವಸಾಹೇಬ ಭಾವಜೀ ಭಾಳ ನಸೀಬವಾನ ಇದ್ದಾರ. ಭಾಳ ಶಾಣ್ಯಾ ಹುಡುಗಿ ಸೋನಾ. ಆಕೀ ಅಂಗಳದ ರಂಗೋಲಿ ಒಂದs ಸಾಕು, ಎಲ್ಲಾ ಹೇಳ್ತದ. ನಮ್ಮ ಬಬೀಗೂ(ಅವರ ಮಗಳು) ಹೇಳಬೇಕು ಸೋನಾನ ಕಡಿಂದ ಕಲೀಯವಾ ಎಲ್ಲಾ ” ಅಂತ ಅನ್ನಾವ್ರು
ಅತ್ತೀ ಮಾವ ಯಾವ ಹಿರಿಯರೂ ಇಲ್ಲದ ಮನಿ. ಸಣ್ಣಾಕಿ ಬ್ಯಾರೆ ಸೋನವ್ವ. ಆದರೂ ಅಡಿಗೆ ಬಲು ರುಚಿ ಆಕೀದು. ರಾವಸಾಹೇಬ್ರಂತೂ ” ಬಾಯಿ ಸಾಹೇಬ, ಹುಳಿ ಮಸ್ತ್ ಆಗೇದ ಹಾಂ! ಇವೇನ ಭಕ್ರೀನೋ ಅಥವಾ ದುಂಡಗೋದಿ ಮಂಡೀಗ್ಯೋ ” ಅನ್ನಾವ್ರು. ಆದರ ಹೊರಗಿನ ಬೇರೆ ಮನಿಂದ ಬಂದಾಕಿ. ಈ ಮನೆತನದ ರೂಢಿ, ಪದ್ಧತಿ ಎಲ್ಲಾ ಕಲ್ತು ತನ್ನದು ಮಾಡ್ಕೋಳ್ಳೋದು ಒಂದು ದೊಡ್ಡ ಜವಾಬ್ದಾರಿ ಹೆಣ್ಣಿಗೆ. ಬಹುಶಃ ಈ ಹೊಂದಾಣಿಕೆ ಭಾರ ಹಗುರ ಆಗಲಿ ಅಂತನ ಹೆಣ್ಣಿನ ವ್ಯಕ್ತಿತ್ವ ಪೂರ್ಣ ಅತ್ತೀಮನೀಯೊಳಗs ಅರಳಿ ಒಂದು ರೂಪ ತಗೊಳ್ಳಲಿ ಅಂತ ಬಾಲ ವಿವಾಹ ರೂಢಿಯೊಳಗ ಇತ್ತೋ ಏನೋ ಅಂತ ಈಗ ನನ್ನ ಮನಸಿನ್ಯಾಗ ಒಮ್ಮೊಮ್ಮೆ ಯೋಚನೆ ಹುಟ್ಟತದ ಹುಟ್ಟಿದ ಕೂಡಲೇ ಹೆಣ್ಣು ಪರರ ಸೊತ್ತಂತನs ಗಟ್ಟಿ ಮಾಡ್ಕೋತಿದ್ರು ಇದೇ ಕಾರಣಕ್ಕೆ ಅನಸ್ತದ.
ಈಗ ಇಲ್ಲೆ ಯಮುತಾಯಿ ಸೋನವ್ವಗ ಅತ್ತಿ, ತಾಯಿ ಎಲ್ಲಾ ಆಗಿ ಮನೆತನದ ಪದ್ಧತಿ, ರೂಢಿ ಎಲ್ಲಾ ಕಲಿಸಿ ಒಂದು ವಳಣ ರೂಢಿಸಿದ್ರಂತ.
ಒಮ್ಮೆ ಏಕಾ ಯಮುತಾಯಿಗೆ ” ಈ ಒಲಿ ಒಂದು ಛಂದಂಗ ಸಾರಸಲಿಕ್ಕೆ ಬರವಲ್ಲತು ವೈನಿ ” ಅಂದಾಗ ಯಮುತಾಯಿ ನಕ್ಕು ,” ಸೋನಾ, ನೀ ಸಣ್ಣಾಕಿ ಇದ್ದೀ. ತೌರು ಮನ್ಯಾಗ ಯಾವ ತಾಯಿ ಮಗಳಿಗೆ ಒಲಿ ಸಾರಸಲಿಕ್ಕೆ ಹಚ್ಚತಾಳ ” ಅಂತ ಹೇಳಿ ಕಲಸಿದ್ರಂತ. ಹಂಗ ಹೂರಣದ ಅಡಿಗಿನೂ ಹೇಳಿ ಕೊಟ್ರು. ಅದನ್ನೆಲ್ಲಾ ಹೇಳಿ ಏಕಾ ” ಅಕ್ಕವ್ವಾ ಸುಖದ ಬಟ್ಟಲು ಪೂರ್ಣ ತುಂಬಿ ಬಂದಿತ್ತು.” ಅಂದ್ಲು.
ನಾ ಆಕಿ ಕಡೆನs ನೋಡ್ದೆ. ತೌರು ಮನ್ಯಾಗ ಮುತ್ತಲೆಲಿ ಒಳಗೆ ಒಂದು ಭಕ್ಕರಿ (ಜೋಳದ ರೊಟ್ಟಿ), ಚಟ್ನೀನ ಪಕ್ವಾನ್ನಧಾಂಗ ರುಚಿ ಮಾಡ್ಕೊಂಡು ತಿನ್ನಾಕಿ ಏಕಾ, ಈಗ ಗಂಡನ ಮನಿ ಒಳಗ ಬೆಳ್ಳಿ ತಾಟು, ಬಟ್ಟಲದಾಗ ರುಚಿ ರುಚಿ ಊಟದ ಮೇಜವಾನಿ. ಖರೇನೋ ಸುಳ್ಳೋ, ಕನಸೊ, ನನಸೊ ಅನಸೂದು ಆಕೀಗೆ. ವಯಸ್ಸೂ ಸಣ್ಣದೇ. ಆದರೆ ಅನುಭವ ಆಕಿನ್ನ ದೊಡ್ಡಾಕಿನ್ನ ಮಾಡಿ ಬಿಟ್ಟಿತ್ತು.ದಿನಾಲೂ ಅಂಬೆ ಮೊಹರಿ (ಮಾವಿನ ಕುಸುಮ ದಂಥ ಸುವಾಸಿತ) ಸಣ್ಣಕ್ಕಿ ಅನ್ನ, ಬೆಣ್ಣೆ ಕಾಸಿದ ತುಪ್ಪ, ಮೆಂಥ್ಯಹಿಟ್ಟು ಕಲಿಸಿ ಉಪ್ಪಿನಕಾಯಿ ಜೊತೆ ತುತ್ತು ಬಾಯಿಗೆ ಇಡೋವಾಗ , ತನ್ನ ತೌರಿನ ಬಡತನ, ತಮ್ಮ ತಂಗಿ ಯರ ನೆನಪು ಬಂದು ಗಂಟಲ ನರಾ ಉಬ್ಬಿ ತುತ್ತು ಗಂಟಲದಾಗ ಇಳೀತಿದ್ದಿಲ್ಲ ಅಂತ. ಹೌದು ಹೆಂಗ ಇಳದೀತು? ಪ್ರತಿ ಹೆಣ್ಣೂ ತಾಯಿನೇ; ಹೆತ್ತವಳಷ್ಟೇ ಅಲ್ಲ. ಆ ಕರುಳು ಕುದ್ದ ಹಾಂಗ ಅನಸೂದು ಆಕೀಗೆ. ಹಂಗs ಸಂಭಾಳಿಸಿಕೊಂಡು ತುತ್ತು ನುಂಗಿ ” ದೇವರ ಹೀಂಗs ನಡಸಪಾ ಕಡೀತನಕಾ” ಅಂತ ಬೇಡಕೋತಿದ್ದೆ ಅಕ್ಕವ್ವಾ ‘ ಅಂದ್ಲು ಏಕಾ.

” ಆದರ ರಾಮೇಶ್ವರಕ್ಕ ಹೋದ್ರೂ ಶನೇಶ್ವರ ಬಿಡಲಿಲ್ಲ” ಅಂತಾರಲಾ ಹಂಗಾತು ನನ್ನ ಜೀವನ.” ಅಂತ ನಿಟ್ಟುಸಿರು ಬಿಟ್ಲು ಏಕಾ. ನನಗೂ ಸಂಕಟ. ಹೊಟ್ಟೆ ಯೊಳಗ ಢಳಮಳಿಸಿ ಕಡಧಾಂಗ ನೋವು. ಕನಸಿನ ಹಾಂಗ ಆ ಎರಡೂವರೆ ಮೂರು ವರ್ಷ ಕಳೆದು ಹೋದ್ರೂ, ಏಕಾನ ವ್ಯಕ್ತಿತ್ವನ ಬದಲಾತು ಆಗ. ಬಡವರ ಮನೆ ಸಣ್ಣ ಹುಡುಗಿ ಸೋನಿ ದೊಡ್ಡ ವತನದಾರರ ಹೆಂಡತಿ ಆಗಿ, ಗಾಂಭೀರ್ಯ, ಖಂಬೀರತನದ ” ಬಾಯೀ ಸಾಹೇಬ” ಆದ್ಲು. ದೇವರು ಆಕೀನ್ನ ಮುಂದಿನ ಜೀವನ ನಿಭಾಯಿಸೊ ಗತ್ತು, ಗಟ್ಟಿತನ, ಜಾಣತನ, ಸೂಕ್ಷ್ಮತೆ ಎಲ್ಲಾ ಮತ್ತಷ್ಟು ಕೊಟ್ಟು ಇನ್ನಷ್ಟು ಭದ್ರ ಮಾಡಿ ತಯಾರ ಮಾಡ್ಲಿಕ್ಕೆ ಈ ಅವಧಿ ಬಳಸಿಕೊಂಡ ಅನಸ್ತದ. ಮನುಷ್ಯ ಜೀವಿಗಳಿಗಿಲ್ಲದ ಕಾಳಜಿ ದೂರ ದರ್ಶಿತ್ವ ಆ ದೇವರಿಗೆ ತಾನೇ ಸೃಷ್ಟಿಸಿದ ಈ ಸೃಷ್ಟಿ, ಅಲ್ಲಿನ ಆ ಜೀವಿಗಳ ಬಗ್ಗೆ. ಅದು ಅಷ್ಟ ಲಗೂ ಅರ್ಥ ಆಗೂ ಅಷ್ಟು ಸರಳ ಅಲ್ಲ.
ಅಷ್ಪ್ರಾಗ ಏಕಾ ಮತ್ತ ಅಂದ್ಲು, ” ಅಕ್ಕವ್ವಾ, ನಸೀಬದಾಟ ಜೀವನಾನ ಬದಲಿ ಮಾಡಿ ಬಿಡ್ತದ ನೋಡು”.
ನಾ ಏನು ಹೇಳಲಿ? ಹೆಂಗ ಭೂಲಭುಲಯ್ಯಾದ ಆಟ ನಡೀತು ನಮ್ಮ ಏಕಾನ ಜೀವನದಾಗ !
ಕಲ್ಪನಾದಾಗೂ ಇಲ್ಲದ ಸುಖಾ ಉಣಿಸಿ, ವೈಭವದಾಗ ಮೆರೆಸಿ, ನೋಡನೋಡೂದ್ರಾಗ ತುಂಬಿದ ಸುಖದ ಬಟ್ಟಲು ಉರುಳಿಸಿ,ಚೆಲ್ಲಿ ಮಜಾ ನೋಡ್ತು ದೈವ, ಇನ್ನೂ ಆಗ ಹೊರಜಗತ್ತಿನತ್ತ ಕಣ್ಣು ಬಿಡ್ತಿದ್ದ ಏಕಾನ ಜೀವನದಾಗ. ಸುಳಿವೂ ಕೊಡದೇ ಆಕೀ ಗಂಡನ್ನ ಬಾರದ ಲೋಕಕ್ಕೆ ಸೆಳೆದುಕೊಂಡು ಹೋಗಿ ಆಕೆಯ ಸರ್ವಸ್ವವನ್ನೂ ಲೂಟಿ ಮಾಡ್ತು. ಆದ್ರೆ ದೈವ ಮಜಾ ನೋಡಿ ಗಹಗಹಿಸಿ ನಕ್ರ, ಆಕಿ ಅದನ್ನ ಸವಾಲಾಗಿ ತಗೊಂಡು, ಅದನ್ನೂ ಮೀರಿ ಬೆಳೆದು ನಿಂತ್ಲು. ಅದೇ ಸೋನಿ, ಸೋನವ್ವ, ನಮ್ಮ ಏಕಾ!
ಹೊಲದಾಗ, ತೋಟದಾಗ ಅಖಂಡ ಆ ಬಿಸಲಾಗ ನಿಂತು, ವ್ಯಾಳ್ಯಾ ಬಂದರ ರೈತರು ಆಳು ಮಕ್ಕಳ ಜೊತೆ ತಾನೂ ಆಳಾಗಿ ದುಡಿದ್ಲು. ಹೊಟ್ಟಿ ನೆತ್ತಿ ಖಬರ ಇಲ್ಲದೇ ಬೆವರು ಸುರಿಸಿದ್ಲು. ತನ್ನ ಮಗನ ಜೀವನದ ದಾರಿ ಸ್ವಚ್ಛ ಹಸಿರು ತುಂಬಿರಲಿ ಅಂತ ತನ್ನ ಜೀವ , ಜೀವನಾ ತೇಯ್ದಳು. ರಾವಸಾಹೇಬರ ಋಣಾ ತೀರಸ್ಲಿಕ್ಹತ್ಯಾಳೋ ಏನೋ ಅನ್ನೋ ಹಾಂಗ ದುಡದ್ಲು ಅವರ ಕುಡಿಯ ಸಲುವಾಗಿ. ಆ ನಿಸ್ವಾರ್ಥದೊಳಗ ತನ್ನ ಕರುಳಿನ ಕುಡಿಯ ಮೇಲಿನ ಕಕ್ಕಲಾತಿಯ ಸಣ್ಣ ಸ್ವಾರ್ಥದೆಳೆ ನೇಯ್ದು ಬಲು ಮಜಬೂತ ಹಂದರ ಹೆಣೆದು ಪೂರ್ಣ ತಣ್ಣೆಳಲು ಹಾಸಿ ಹರಡಿ ಇಟ್ಟಳು ನಮ್ಮ ಏಕಾ ; ಭೂಮಿ ತೂಕದ ಹೆಣ್ಣು!
|ಇನ್ನು ಮುಂದಿನ ವಾರಕ್ಕೆ|






0 Comments