ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರಳ ರೂಪಕಗಳಿಂದ ಸೆಳೆಯುವ “ಜೀರೋ ಬ್ಯಾಲೆನ್ಸ್” ಕವಿತೆಗಳು 

ಗೊರೂರು ಶಿವೇಶ್ 

**

ಡಾ ಶ್ರುತಿ ಬಿ ಆರ್ ಅವರ ಕವನ ಸಂಕಲನ ‘ಜೀರೋ ಬ್ಯಾಲೆನ್ಸ್’.

ಸಾಹಿತಿ ಗೊರೂರು ಶಿವೇಶ್ ಅವರು ಈ ಕವನ ಸಂಕಲನದ ಕುರಿತು ಬರೆದ ಬರಹ ಇಲ್ಲಿದೆ.

**

ಈ ಬಾರಿಯ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಪಾತ್ರರಾಗಿರುವ ಡಾ ಶ್ರುತಿ ಬಿ ಆರ್ ಗಮನಾರ್ಹ ಲೇಖಕಿಯಾಗಿ ಕಾವ್ಯಾಸಕ್ತರನ್ನು ಆಕರ್ಷಿಸಿದ್ದಾರೆ. ಇವರ ಕವಿತೆಗಳ ಸಂಕಲನ “ಜಿರೋ ಬ್ಯಾಲೆನ್ಸ್” ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿ ಸಹೃದಯರ ಮನವನ್ನು ಗೆದ್ದಿದೆ. ಅರ್ಥಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳೊಂದಿಗೆ ಎಂಎ ಮತ್ತು ಪಿ ಎಚ್ ಡಿ ಪಡೆದಿರುವ ವೃತ್ತಿಯಲ್ಲಿ ತಹಶೀಲ್ದಾರ್ ಆಗಿರುವ ಶ್ರುತಿ ಬಿ ಆರ್ ಪ್ರವೃತ್ತಿಯಲ್ಲಿ ಕವಯತ್ರಿ. ಕೂಡಿ ಕಳೆದು ಗುಣಿಸಿ ಭಾಗಿಸಿ ಕೊನೆಯ ಪ್ರತಿಫಲಶೂನ್ಯ ಎಂಬುದೊಂದು ಉಪನಿಷತ್ತಿನ ಜನಪ್ರಿಯ ಸಂದೇಶ. ವಾಣಿಜ್ಯ ಶಾಸ್ತ್ರದಲ್ಲಿ ಎಡ ಮತ್ತು ಬಲಗಳ ಬ್ಯಾಲೆನ್ಸ್ ಸಮನಾಗಿದೆ ಎಂದರೆ ಲೆಕ್ಕ ಚುಕ್ತಾ ಎಂದೇ ಅರ್ಥ. ಬಹುಶಃ ಈ ಕಾರಣಕ್ಕಾಗಿ ಕವನಸಂಕಲನಕ್ಕೆ ಝೀರೋ ಬ್ಯಾಲೆನ್ಸ್ ಕವಿತೆಗಳು ಎಂದು ಹೆಸರಿಸಿದ್ದಾರೆಯೇ?

ಕವನ ಸಂಕಲನದಲ್ಲಿ ಒಟ್ಟು 37 ಕವಿತೆಗಳಿವೆ. ಸರಳ ಹಾಗೂ ಪ್ರತಿದಿನದ ಬಳಕೆಯ ವಸ್ತುಗಳನ್ನು ಉಪಮೆಗಳಾಗಿ ರೂಪಕಗಳಾಗಿ ಬಳಸಿ ಕವಯತ್ರಿ ಗಮನಸೆಳೆಯುತ್ತಾರೆ. ನಿಜವಾದ ಕವಿ ಸದಾ ರೂಪಕಗಳ ಮತ್ತು ಉಪಮೆಗಳ ಹುಡುಕಾಟದಲ್ಲಿ ಇರುತ್ತಾನೆ ಎಂಬುದು ಒಂದು ಮಾತು. ಅನಕ್ಷರಸ್ಥ ಹಳ್ಳಿಗಾಡಿನ ಜನಪದ ಹಾಡುಗಾರ್ತಿಯಿಂದ ಹಿಡಿದು ಮಹಾನ್ ಕವಿಗಳವರೆಗೆ ಕವಿಮನ ರೂಪಕಗಳ ಶೋಧನೆಯಲ್ಲಿ ತೊಡಗಿರುತ್ತದೆ. ಉತ್ತಮ ರೂಪಕಗಳ ಅನ್ವೇಷಣೆಯಲ್ಲಿ ಕವಯತ್ರಿ ಗೆದ್ದಿದ್ದಾರೆ ಎಂದು ಹೇಳಬಹುದು. ಬಿಡಿ ಬಿಡಿಯಾಗಿ ಇದ್ದರೂ ಹಿಡಿಯಾಗಿ ಆಸ್ವಾದಿಸಬಹುದಾದ ಸಹೃದಯರ ಎದೆಯಲ್ಲಿ ಪ್ರತಿಸ್ಪಂದನೆ ಉಂಟುಮಾಡುವ ಕೆಳಗಿನ ಸಾಲುಗಳನ್ನು ಗಮನಿಸಿ. 

 ಮೈತುಂಬಾ ಸೆರಗೊದ್ದಿದರೂ

ಮೆಸೇಜುಗಳಲ್ಲಿ ಮೈಸವರಿ

ಆನ್ಲೈನ್ನಲ್ಲಿ ಸ್ಖಲಿಸಿ

ಸುಖಿಸುವ ಇಂದ್ರರ ಕಂಡ ಅಸಹ್ಯದಿಂದ ಮತ್ತೆ ಕಲ್ಲಾಗಬೇಕಂತೆ ಅಹಲ್ಯೆ 

ಸಮತಟ್ಟಾದ ನೆಲದಲ್ಲೇ ಅರಳಿದ್ದ ನಾವು

ಎಂದು ಕಟ್ಟಿಕೊಂಡೆವು ಹತ್ತಿಳಿಯಲಾಗದ,

ಮೆಟ್ಟಿಲುಗಳೇ ಇಲ್ಲದ,

ಈ ಹತ್ತಾರು ಮಹಡಿಗಳ, ಅಳಿಸಲಾಗದ

ಮೇಲರಿಮೆಗಳ ಮಹಾಸೌಧ?!          

ಇನ್ನಾರದೋ 

ಸ್ವತ್ತಾದ

ಹಳೆಯ ಪ್ರೇಯಸಿಯಂತೆ

ಕೈಜಾರಿದ ಕವಿತೆಗಳು

ಅಹಲ್ಯೆಯನುದ್ಧರಿಸುವ

ರಾಮ ಲಕ್ಷ್ಮಣರೆಲ್ಲ

ಊರು ಬಿಟ್ಟಿರಬೇಕು!

ಮಾಯಾ ಜಿಂಕೆಗಳ ಬೆನ್ನತ್ತಿ,

ಮಹಾ ಸಾಗರಗಳ ಲಂಘಿಸುತ್ತಾ

ಡಾಲರುಗಳ ಬೇಟೆಗಾಗಿ!

ಕಳೆದ ಸೀತೆಯನುಡುಕಲು

ಸಮಯವಿಲ್ಲ!

ಕೆಲವು ಕವಿತೆಗಳು ನೇರ ಎಂದು ಕಂಡರು ಅದು ಹೊಮ್ಮಿಸುವ ಭಾವನೆ ತಟ್ಟನೆ ಹಿಡಿದು ನಿಲ್ಲಿಸುತ್ತದೆ. ಮನೆಯಲ್ಲಿ ಮಕ್ಕಳ ನಡುವೆ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಪ್ರತಿಭೆಯನ್ನು ಪತ್ತೆಹಚ್ಚದೆ ಹೀಗೆಳೆಯುವರನ್ನು ಕುರಿತು ಬರೆದ ಈ ಕವಿತೆ ಮನಮುಟ್ಟುತ್ತದೆ. 

ಅಯ್ಯೋ ಬಿಡಿ, ಯಾವ

ಪುರವಣಿಯಲ್ಲೂ ಜಾಗ ಪಡೆಯದ

ಅದೊಂದು ಮುಟ್ಟಾಳ ಕವಿತೆ!

ಇಗೋ ನೋಡಿ,

ಬಹುಮಾನಗಳನ್ನು ಬಾಚಿಕೊಂಡು

ಬೀಗಿದ ಅದೃಷ್ಟದ ಕವಿತೆ..                    

ಧರಿಸಿರುವ ಮುಖವಾಡಗಳ

ದಯಮಾಡಿ ಕಳಚದಿರಿ,

ಬೆಚ್ಚಿ ಬೆರಗಾಗಿಸಲಾರದು

ಹಿಂದಿರುವ ನಿಜ ಚಹರೆ                      

ಅವಕಾಶ ಸಿಗದ ನಟ, ನಿರ್ದೇಶಕನಾಗುವಂತೆ ಪ್ರೋತ್ಸಾಹ ದೊರೆಯದ ಕವಯತ್ರಿ ವಿಮರ್ಶಕಿಯಾಗಿ ಬದಲಾಗುವ ಪರಿ ಹೀಗಿದೆ 

ಹಿಂದೊಮ್ಮೆ ಮನಸು ಬೆಚ್ಚಗಾಗುವ

ಮುದ್ದು ಪ್ರೀತಿಯ ರೊಮ್ಯಾಂಟಿಕ್

ಕವಿತೆಗಳ ಬರೆದು ಮುದಗೊಳ್ಳುತ್ತಿದ್ದ

ಆ ತುಂಟ ಹುಡುಗಿ, ಈಗ ಅವರಿವರಿಂದ

ಟೀಕೆ, ಸಲಹೆ, ಬುದ್ದಿವಾದಗಳ ಕೇಳಿ ಕೇಳಿ

ಅಭ್ಯಾಸದಿಂದ, ಕವಿತೆ ಗೀಚುವುದ ಬಿಟ್ಟು

ಕಟು ವಿಮರ್ಶಕಿಯಾಗಿ ಬದಲಾದಳು             

ಕೆಲವು ಕವಿತೆಗಳಲ್ಲಿ ಕವಿತೆ ಹೊರತುಪಡಿಸಿ ಸಾಲುಗಳು ಥಟ್ಟನೆ ಮನಸ್ಸಿನಲ್ಲಿ ನಿಲ್ಲುತ್ತವೆ.

ಗಾಯಗಳು ಮಾಯುತ್ತವೆ, ಗೆಳತಿ

ಈ ಕಲೆಗಳಿಗೆ ಕರುಣೆಯಿಲ್ಲ                 

ಯಾವುದೋ ಬಾರದ ಕರೆಗಾಗಿ ಕಾಯುತ್ತಾ ಬೇಸತ್ತು

ಅದು ಬಾರದೇ ಇರಲೆಂದು ಬಯಸುತ್ತೇನೆ

ಯಾರೂ ಎಂದೂ ಕೇಳಿರದ ಪ್ರಶ್ನೆಗಳಿಗೆ ಸುಮ್ಮನೆ

ಉತ್ತರಗಳನ್ನು ತಯಾರಿಸಿಟ್ಟು ಕೊಳ್ಳುತ್ತೇನೆ   

ಇನ್ನು ಗತಕಾಲದ ಚರಿತ್ರೆಯಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ಸಮಾಜವನ್ನು ವಿಮರ್ಶಿಸುವ ಅಕ್ಕನ ಮೊಹೆಂಜೋದಾರೋ ಗಮನ ಸೆಳೆಯುವ ಮತ್ತೊಂದು ಕವಿತೆ 

ಅಡಿಗೆಯೋ ಮನೆಗೆಲಸವೋ ಮಾಡಿರಬೇಕು,

ಮತ್ತೆ ಮುಟ್ಟು, ಬಸಿರು, ಚುಚ್ಚುಮಾತು

ಅದು ಹೆಂಗಸರಿಗೇನೆ ಆಗಲೂ- ಈಗಲೂ,

ಬಿಡು ಅಪ್ಪನೋ, ಗಂಡನೋ ಹೇಳಿದಂತೆ

ಕೇಳಿಕೊಂಡು, ಆ ಒಡವೆಗಳೆಲ್ಲ ಹೇರಿಕೊಂಡು

ಮನೆಯಲ್ಲಿ ಬಿದ್ದಿದ್ದಾಳು ಅವಳೂ ಸಹ..      .

ಹೀಗೆ ತನ್ನದಾಗಿದ್ದ ಎಲ್ಲದರಲ್ಲಿ ಗುರುತನರಸಿ ಬಂದವರು,

ಕಾಣದೆ ಹೊಸಬರಲ್ಲಿ ತನ್ನನ್ನೇ ಹುಡುಕಹೊರಡುತ್ತಾರೆ                            

ಅನುಭವಕ್ಕಿಂತ ಹೆಚ್ಚಾಗಿ ಕವಯತ್ರಿಯ ಪ್ರತಿಭೆಯೇ ಇಡೀ ಕವನಸಂಕಲನದಲ್ಲಿ ಎದ್ದು ಕಾಣುತ್ತದೆ. ಅನುಭವ ಮಾಗಿದಂತೆ ಗಟ್ಟಿಯಾದಂತೆ ಅದರಿಂದ ಹೊಮ್ಮುವ ಪ್ರತಿಭೆಗೆ ಉದಾಹರಣೆಯಾಗಿ ಕವನ ಸಂಕಲನದ ಕಡೆಯ ಕವನ ಋತು ಸಂಕಟ ಉದಾಹರಣೆಯಾಗಿ ನಿಲ್ಲುತ್ತದೆ.

ಉಕ್ಕುಕ್ಕಿ ಹೊರಚೆಲ್ಲುವ

ಅಕಾರಣ ಕೋಪ ತಾಪ

ಬಿಡುವಿಲ್ಲದ ಕಿರಿಕಿರಿ,

ಅಸಹಾಯಕ ದೇಹದ

ಕಣಕಣಕೂ ತಾಗಿ,

ಕದನ ವಿರಾಮವಿಲ್ಲದ

ಆಂತರ್ಯುದ್ಧ

ತಮ್ಮ ಮೊದಲನೇ ಕವನ ಸಂಕಲನದಲ್ಲಿ ಭರವಸೆ ಮೂಡಿಸಿರುವ ಈ ಕವಯತ್ರಿ ಯಿಂದ ಬಹಳಷ್ಟನ್ನು ನಿರೀಕ್ಷಿಸಬಹುದು. 

‍ಲೇಖಕರು Admin MM

23 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading