ಡಾ ಮಹಾಂತೇಶ್ ಚರಂತಿಮಠ್
ಜೀವನ ಸಾಗುತ್ತಲಿರಬೇಕು ಹೀಗೆಯೇ ರೈಲು ಕಂಬಿಯಂತೆ ಎಷ್ಟೇ ಎತ್ತರ ಇಳಿಜಾರು ಗುಡ್ಡಗಾಡಿನ ಸುತ್ತುಗಳಿದ್ದರೂ ಎಲ್ಲವನ್ನು ಲೆಕ್ಕಿಸದೇ ಮುನ್ನಡೆಯುತ್ತಲೇ ಇರಬೇಕು
ರೈಲು ಹಳಿಯಂತೆ …
ಆ ಮುಗ್ದ ಮನಸ್ಸುಗಳ ಆಕಾಶದೆತ್ತರದ ಗಾಳಿಯಲ್ಲಿ ತೇಲಿದಂತಹ ಹಾರಾಟ, ಎಂದಿಗೂ ಮಾಸದ ಆ ನಗು, ನಿಷ್ಕಲ್ಮಶ ಅಂತರಾಳದ ಖುಷಿ, ನಾಳೆಯ ಗೊಡವೆ ಇಲ್ಲದಿರುವ ಸ್ವೇಚ್ಚಾಚಾರದ ಬದುಕು, ಸದಾ ಅನುಕಂಪದ ಮನಸ್ಸಿನಲ್ಲಿ ಮಾತ್ರವೇ ಕಾಣಲು ಸಾಧ್ಯ.
ಇನ್ನೊಬ್ಬರ ಜೊತೆಗೆ ಪೈಪೋಟಿಗೆ ಇಳಿಯಬೇಕೆನ್ನುವ ಹಠವಿಲ್ಲ, ಒಂದೇ ಕಡೆ ಆಸ್ತಿ ಕೂಡಿಟ್ಟು ಉಪವಾಸವಿರಬೇಕೆನ್ನುವ ಬಯಕೆಯಿಲ್ಲ, ಇವತ್ತು ಈ ಊರು ನಾಳೆ ಮತ್ತೊಂದು, ಪಾಲಿಗೆ ಬಂದದ್ದೆ ಪಂಚಾಮೃತ.

ಹುಟ್ಟಿನಿಂದ ಬಂದಂತಹ ಮೈಬಣ್ಣವ ಅವಿತಿಟ್ಟು ಅಲಂಕಾರವ ಮಾಡಿಕೊಂಡು ಜಗತ್ತಿಗೆ ಕರಾಳ ಮುಖವ ತೋರಿಸುವವರಲ್ಲ, ರಾಜಕೀಯ ಲಾಬಿಯ ದೋಬಿಗೆ ಬೆಂಬಲುಬಿದ್ದು ದೋಚುವವರಲ್ಲ, ದುಡ್ಡಿಗಾಗಿ ಮತ್ತೊಬ್ಬರ ಹಂಗಿಸಿ, ಕುಕೃತ್ಯದಲ್ಲಿ ತೊಡಗಿ ಗುಲಾಮಗಿರಿಯಲ್ಲಿ ಮಿಂದವರಲ್ಲ…
ನಮಗೆ ಯಾವುದೆ ರಾಜ್ಯ, ಗಡಿ ಭಾಷೆಯ ಮಿತಿಗಳಿಲ್ಲ, ಎಲ್ಲಿರುತ್ತೆವೆಯೋ ಅದೇ ನಮ್ಮ ನಾಡು. ಭಾಷೆಯ ವಿಚಾರವನ್ನು ತಂದಿಟ್ಟು ಪರಿಸ್ಥಿತಿಯ ಲಾಭ ಪಡೆಯುವ ನಕಲಿ ಹೋರಾಟಗಾರರಲ್ಲ, ಭಾರತದ ಎಲ್ಲ ಭಾಷೆಯ ಗೌರವಿಸುವ ಭಾರತೀಯರು ನಾವು.
ಮೇಲು ಕೀಳೆಂಬ ಅಹಮ್ಮಿನ ದೊಡ್ಡ ಮನುಷ್ಯರಲ್ಲ, ಸಮಾನರೆಂಬ ಸಮ ಮನಸ್ಸಿನ ಸಣ್ಣವರು ನಾವು. ವೇಷ ಹಾಕಿ ಮೋಸವ ಮಾಡುವವರಲ್ಲ, ರಾಷ್ಟ್ರೀಯ ವಿಚಾರಧಾರೆಗಳಿಗೆ ಸುಣ್ಣ ಬಳಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಅಘೋಷಿತ ನಕಲಿ ರಾಷ್ಟ್ರೀಯವಾದಿಗಳೂ ಅಲ್ಲ , ನಕಲಿ ವಿಚಾರವಾದಿಗಳೂ ಅಲ್ಲ, ಭಯೋತ್ಪಾದಕರಂತು ಅಲ್ಲವೇ ಅಲ್ಲ, ದೇಶ ವಿರೋಧಿ ಕೂಗು ಎಂದಿಗೂ ಕೂಗಿದವರಲ್ಲ, ನಮಗೆ ರಾಷ್ಟ್ರಭಕ್ತಿ ಕಡಿಮೆ ಇದೆ ಎಂದೇನಿಲ್ಲ , ಅದನ್ನು ಯಾರಿಗೇನು ತೋರಿಸಬೇಕೆಂದೆನಿಲ್ಲ. ನಾವು ಅಲೆಮಾರಿಗಳು, ನಾವು ಭಾರತೀಯರು, ಭಾರತ ನಮ್ಮ ಹೆಮ್ಮೆ , ನಮ್ಮ ದೇಶ .






0 Comments