ಪಾಯಿಂಟ್ 5
-ಬುಕ್ ವರ್ಮ್
ಲಾಠಿ ಮಾತಾಡಿತು
ವಿಜಾಪುರಕ್ಕೆ ಸಮ್ಮೇಳನ ನಡೆಸುವ ಅಭ್ಯಾಸ ಮರೆತು ಹೋಗಿದೆ ಅನ್ನುವುದಕ್ಕೆ ಸಾಕ್ಷಿಯೆಂಬಂತೆ, ಗೊಂದಲದೊಂದಿಗೇ ಕನ್ನಡ ಸಮ್ಮೇಳನ ಶುರುಗೊಂಡಿತು. ವಿಜಾಪುರದ ಎಲ್ಲ ರಸ್ತೆಗಳನ್ನೂ ವನ್‌ವೇ ಮಾಡಿಬಿಟ್ಟಿದ್ದರಿಂದ, ಒಂದು ಕಿಲೋಮೀಟರ್ ದೂರ ಕ್ರಮಿಸುವುದಕ್ಕೆ ಹತ್ತು ಕಿಲೋಮೀಟರ್ ಓಡಾಡಬೇಕಿತ್ತು. ಸಮ್ಮೇಳನ ಎಂದರೆ ಏನು ಅನ್ನೋದೇ ಗೊತ್ತಿಲ್ಲದ ಪೊಲೀಸ್ ಅಧಿಕಾರಿಗಳು, ಅಕ್ಕಪಕ್ಕ ಸುಳಿಯುವ ಸಾಹಿತಿಗಳನ್ನೆಲ್ಲ ಭಯೋತ್ಪಾದಕರ ಥರ ನೋಡುತ್ತಿದ್ದರು. ಲಾಠಿ ಹಿಡಿದುಕೊಂಡು ಥೇಟ್ ಸಾಹಿತ್ಯಜಗತ್ತಿನ ಭಯೋತ್ಪಾದಕರಿಗಿಂತ ಭೀಕರವಾಗಿ ಕಾಣಿಸುತ್ತಿದ್ದರು.
ಜಗದೀಶ ಶೆಟ್ಟರ್
ಶೆಟ್ಟರ್ ಹತ್ತೇ ನಿಮಿಷಕ್ಕೆ ಭಾಷಣ ಮುಗಿಸಿದರು. ಅವರು ಸಮಾರಂಭಕ್ಕೆ ಒಂದು ಗಂಟೆ ತಡವಾಗಿ ಬಂದರು. ಎಲ್ಲರಿಗೂ ಒಳ್ಳೆಯದು ಮಾಡುವುದಾಗಿ ಘೋಷಿಸಿ, ಕನ್ನಡ ಶಾಲೆಗಳನ್ನು ಮುಚ್ಚಲ್ಲ ಅಂದರು. ಷ. ಶೆಟ್ಟರ್ ಇಲ್ಲದೇ ಇದ್ದರೂ ಜಗದೀಷ ಶೆಟ್ಟರ್ ಇದ್ದಾರಲ್ಲ ಅಂತ ಸಮ್ಮೇಳನಾಸಕ್ತರು ಸಮಾಧಾನ ಮಾಡಿಕೊಂಡರು.
ವಸುಧೈವ ಕುಟುಂಬಂ
ವಸುಧೇಂದ್ರ ಕತ್ತಿಗೊಂದು ಪತ್ರಕರ್ತನ ಬ್ಯಾಜ್ ಹಾಕಿಕೊಂಡು ಓಡಾಡುತ್ತಿದ್ದರು. ಅವರ ಸ್ಟಾಲ್ ನಂಬರ್ 142. ಮಾರಾಟ ಸ್ಟಾಲ್ ಆಗಿದೆ ಅಂತ ಅವರಿಗೇನೂ ದುಃಖ ಇರಲಿಲ್ಲ. ಜನಜಂಗುಳಿಯನ್ನು ಅವರು ಸವಿಯುತ್ತಿದ್ದಂತೆ ಪುಟಿಪುಟಿ.ತ್ತಾ ಓಡಾಡುತ್ತಿದ್ದರೆ, ಅವರ ವಯಸ್ಸೂ ಮರೆತು ಹೋಗುವಂತಿತ್ತು. ಮಾಧ್ಯಮ ಕೇಂದ್ರಕ್ಕೆ ಬಂದು ಇಡ್ಲಿ ತಿಂದು ಮತ್ತೆ ಪುಸ್ತಕ ಮಳಿಗೆಗೆ ಹಾರಲು ಸಿದ್ಧರಾಗಿದ್ದರು.
ಬರಗೂರು ಕಿವಿಯಾದರು
ಯಾವತ್ತೂ ಬೇರೆಯವರನ್ನೇ ಭಾಷಣದಲ್ಲಿ ಬಲಿ ಹಾಕುತ್ತಿದ್ದ ಬರಗೂರು, ವಿಜಾಪೂರದಲ್ಲಿ ಭರಪೂರ ಭಾಷಣ ಕೇಳಬೇಕಾಯಿತು. ಮುಖ್ಯಮಂತ್ರಿ, ಸಮ್ಮೇಳನಾಧ್ಯಕ್ಷರು, ನಿಕಟಪೂರ್ವ ಸಮ್ಮೇಳನಾಧ್ಯಕ್ಷರು, ಹಾಲಂಬಿ –ಹೀಗೆ ಬರಗೂರರನ್ನು ಬಾಧಿಸುವುದಕ್ಕೆ ಹಲವಾರು ಕಾರಣಗಳಿದ್ದವು. ಅವರು ಭಾಷಣ ಶುರು ಮಾಡುವ ಹೊತ್ತಿಗೆ ಜನ ಊಟಕ್ಕೆ ಹೊರಟು ನಿಂತಿದ್ದರು.
ಸರ್ಕಾರಿ ಸಮ್ಮೇಳನ
ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬರುತ್ತಾರೆ, ಅದರಲ್ಲೂ ಬಜೆಟ್ ಮಂಡಿಸಿದ ಮಾರನೇ ದಿನವೇ ಬರುತ್ತಾರೆ ಅಂತ ಗೊತ್ತಾಗಿ ಕೇವಲ ಹಿಂದಿ ಮಾತ್ರ ಮಾತಾಡುವ ಅಧಿಕಾರಿಗಳು ಇದೊಂದು ಉನ್ನತ ಮಟ್ಟದ ರಾಜಕೀಯ ಸಮ್ಮೇಳನ ಎಂದೇ ಭಾವಿಸಿದಂತಿತ್ತು. ಹೀಗಾಗಿ ಸಾಹಿತಿಗಳನ್ನೂ ಪತ್ರಕರ್ತರನ್ನೂ ಹುಲುಮಾನವರಂತೆ ಕಂಡರು. ಊಟದ ಮನೆಯಲ್ಲಿ ಮಜ್ಜಿಗೆ ಕೇಳಿದ ಪತ್ರಕರ್ತೆಗೆ, ಅದೆಲ್ಲ ಸಿಎಂ ಜೊತೆಗೆ ಬಂದೋರಿಗೆ ಮಾತ್ರ ಅಂತ ಹೇಳಿದರಂತೆ.







0 Comments