– ಜಿ ಎನ್ ಮೋಹನ್
ಫೋಟೋ : ಪಿ ಎಸ್ ಮಂಜಪ್ಪ
ನಿಂತ ನೀರಾಗಿಲ್ಲ ಕನ್ನಡ ಸಾಹಿತ್ಯ, ಅದು ಸದಾ ಜುಳು ಜುಳು ಹರಿಯುತ್ತಾ ತನ್ನ ಸಂಭ್ರಮವನ್ನು ಎಲ್ಲಾ ಕಡೆ ಹರಡಿದೆ. ಕನ್ನಡ ಸಾಹಿತ್ಯದ ಒಳಗೆ ಈ ನೀರು ಸಂತಸವನ್ನು ಹುಟ್ಟುಹಾಕಿದೆ, ಸಂಭ್ರಮವನ್ನು ಹುಟ್ಟು ಹಾಕಿದೆ. ಅಷ್ಟೇ ಅಲ್ಲ ಹಲವು ವಸಂತಗಳನ್ನು ಮೂಡಿಸಿದೆ. ಹೊಸ ಹೊಸ ಮೊಳಕೆಗಳಿಗೆ ಕಾರಣವಾಗಿದೆ. ಎಷ್ಟೋ ಸಲ ನಮ್ಮ ಕಣ್ಣಿಗೆ ಈ ನೀರು ಕಂಡಿದೆ. ಆದರೆ ಹಲವಾರು ಬಾರಿ ಅದು ಗುಪ್ತಗಾಮಿನಿ ಶಾಲ್ಮಲೆಯ೦ತೆ ಹರಿದಿದೆ. ನಮ್ಮ ಕಣ್ಣಿಗೆ ಕಾಣದೆ ಸಾಕಷ್ಟು ಕಥೆಗಳನ್ನ ಅದು ಕನ್ನಡ ಸಾಹಿತ್ಯಕ್ಕೆ ಬೆಸುಗೆ ಹಾಕಿದೆ. ನಾವೆಲ್ಲರೂ ಕೂಡ ಎಷ್ಟೋ ಕಥೆಗಳನ್ನು ಓದಿದ್ದೇವೆ, ಕಾದಂಬರಿಗಳನ್ನು ಓದಿದ್ದೇವೆ. ಅದರ ಒಳಗಡೆ ಈ ನೀರಿನ ಸಂಭ್ರಮವನ್ನು ಮಾತ್ರ ಕಂಡಿದ್ದೇವೆ . ಆದರೆ ಅವರೊಬ್ಬರಿದ್ದಾರೆ, ಈ ನೀರಿನ ಎದೆಯ ಬಿಕ್ಕುಗಳನ್ನು ಹರಡಿದವರು. ಈ ನೀರಿನ ನೋವುಗಳನ್ನ ನಮ್ಮ ಹತ್ತಿರ ತಂದವರು, ಈ ನೀರು ಕಂಡು೦ಡುಂತಹ ಎಲ್ಲಾ ರೀತಿಯ ಏರಿಳತಗಳನ್ನ ನಮ್ಮ ಜೊತೆಗೆ ಬೆಸುಗೆ ಹಾಕಿದವರು. ಅವರು ಯಾರು ಅಂತಂದ್ರೆ ಕನ್ನಡ ಸಾಹಿತ್ಯದ ಜೀವ’ನಾಡಿ’ ಎಂದೇ ಹೆಸರಾದ ನಾ. ಡಿಸೋಜ ಅವರು. ನಾ ಡಿಸೋಜ ಯಾಕೆ ಈ ನೀರನ್ನು ನಮ್ಮ ಹತ್ತಿರ ತಂದರು. ಈ ನೀರಿನ ಮೂಲಕ ಕೇವಲ ನೀರಿನಲ್ಲಿ ಇಡೀ ಸಮಾಜವನ್ನ ನಮ್ಮ ಜೊತೆಗೆ ಬೆಸುಗೆ ಹಾಕುತ್ತಾ ಹೋದರು.

’ಸಾರ್ ಹೀಗೆ ಬನ್ನಿ…’ ಅಂತ ನಾನು ಆಸರೆಯ ಕೈ ಚಾಚಿದೆ. ಹಾಗೆ ನಾನು ಕೈ ಚಾಚಿದ್ದು ಇನ್ಯಾರಿಗೂ ಅಲ್ಲ. ಕನ್ನಡದ ಮನಸ್ಸಿಗೆ ಸಮಾಜದ ಸಂಕಟಗಳನ್ನು ಮೊಗೆದುಕೊಟ್ಟ ನಾ ಡಿಸೋಜ ಅವರಿಗೆ. ಹಾಗೆ ನಾನು ಅವರ ಕೈ ಹಿಡಿದು ನಡೆಸಿಕೊಂಡು ಹೋದದ್ದು ನೀರಿನಲ್ಲಿ ತೇಲುತ್ತಿದ್ದ ತೆಪ್ಪದತ್ತ. ಇಬ್ಬರು ಮಾತ್ರವೇ ಕುಳಿತುಕೊಳ್ಳಲು ಸಾಧ್ಯವಿದ್ದ ತೆಪ್ಪದಲ್ಲಿ ನಾವು ಇನ್ನೂ ಹರಿದಾರಿ ಸಹಾ ಹೋಗಿರಲಿಲ್ಲ, ನಾ ಡಿಸೋಜ ಅವರ ಮುಖದಲ್ಲಿ ನೋವಿನ ಗೆರೆಗಳು ಮೂಡಲು ಆರಂಭವಾಯ್ತು. ’ಮೋಹನ್, ಈ ನೀರಿದೆಯಲ್ಲಾ, ಜುಳು ಜುಳು ಸದ್ದು ಮಾಡುತ್ತಾ, ನಮ್ಮ ಎದೆಯೊಳಗೆ ಸಂಭ್ರಮ ಉಂಟುಮಾಡುತ್ತಿರುವ ಈ ನೀರಿನ ಒಳಗೆ ಹತ್ತು ಹಲವು ಗ್ರಾಮಗಳು ಸತ್ತು ಬಿದ್ದಿವೆ. ನನಗೆ ಆ ನೋವು, ಆಕ್ರಂದನ ಕೇಳಿಬರುತ್ತಿದೆ. ಇದು ಸಂಕಟದ ಪಯಣ. ಈ ನೀರಿನೊಳಗಣ ನೋವೇ ನನ್ನ ಬರವಣಿಗೆಗೆ ಕಾರಣವಾಗಿ ಹೋಯಿತು’ ಎಂದರು.
೮೦ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಜಿನ ನಗರಿ ಮಡಿಕೇರಿ ಸಂಭ್ರಮದಿಂದ ಸಜ್ಜಾಗುತ್ತಿರುವಾಗ ಇಲ್ಲಿ ನನ್ನ ಮುಂದೆ ’ಮಂಜಿನ ಕಾನು’ ಕಾದಂಬರಿ ಬರೆದ ನಾ ಡಿಸೋಜ ಅವರು ತಲ್ಲಣಗಳನ್ನು ಅನುಭವಿಸುತ್ತಾ ಕುಳಿತಿದ್ದರು. ಶರಾವತಿಯ ನೀರಿನಲ್ಲಿ ತೆಪ್ಪದೊಳಗೆ ತೇಲುತ್ತಾ ಇದ್ದ ನನಗೆ ಗೊತ್ತಿಲ್ಲದಂತೆಯೇ ಸಂದರ್ಶನ ಆರಂಭವಾಗಿ ಹೋಗಿತ್ತು.
ನಿಮ್ಮ ಕಥೆ, ಕಾದಂಬರಿ, ನಾಟಕಗಳನ್ನ ಓದಿಕೊಂಡು ಬೆಳೆದವನು ನಾನು. ನೀವು ಸಾಕಷ್ಟು ಬರೆದಿದ್ದೀರಿ. ೪೦ಕ್ಕೂ ಹೆಚ್ಚು ಕಾದಂಬರಿ, ನೂರಕ್ಕೂ ಹೆಚ್ಚು ಕಥೆ, ನಾಟಕಗಳನ್ನ ಬರೆದಿದ್ದೀರಿ . ಇದನ್ನೆಲ್ಲಾ ಬರೆಯುವಾಗ ನನ್ನ ಪ್ರೀತಿಯ ಕವಿ ಸು. ರಂ ಎಕ್ಕುಂಡಿ ಅವರು ಹೇಳುತ್ತಿದ್ದ ಒಂದು ಮಾತು ನೆನಪಿಗೆ ಬರುತ್ತದೆ. “ನನ್ನ ತಾಯಿ ಅಕಸ್ಮಾತ್ತಾಗಿ ಹಾಡಿದ ಒಂದು ಹಾಡಿನಿಂದ ನಾನು ಜಗತ್ತನ್ನು ನೋಡುವ ಕಿಟಕಿಯನ್ನು ಮಾಡಿಸಿಕೊಂಡೆ” ಅಂತ. ನನ್ನ ಪ್ರಶ್ನೆ ಇಷ್ಟೇ . ನೀವು ಜಗತ್ತನ್ನ ನೋಡುವುದಕ್ಕೆ ಮಾಡಿಸಿಕೊಂಡ ಕಿಟಕಿ ಯಾವುದು?
ನನ್ನ ತಂದೆಯವರು ಪ್ರೈಮರಿ ಶಾಲೆ ಉಪಾಧ್ಯಾಯರಾಗಿದ್ದರು. ಅವರು ಮಕ್ಕಳಿಗೆ ಕಲಿಸಲಿಕ್ಕೆ ಅಂತ ಹೇಳಿ ಒಂದು ಸಣ್ಣ ಪುಸ್ತಕದಲ್ಲಿ ಸುಮಾರು ಕವಿತೆಗಳನ್ನ ಬರೆದಿಟ್ಟು ಕೊಂಡಿದ್ದರು. ಪುಟ್ಟಪ್ಪ, ರಾಜರತ್ನಂ, ಹೊಯ್ಸಳ, ನಾ. ಕಸ್ತೂರಿ ಅವರ ಕವಿತೆ. ಸುಮಾರು ೫ ಅಥವಾ ೬ನೇ ವಯಸ್ಸಿನಲ್ಲಿ ನಾನು ಮೊಟ್ಟ ಮೊದಲು ಓದಿದ ಪುಸ್ತಕ ಅದು. ಅದರಲ್ಲಿರುವ ಎಷ್ಟೋ ಹಾಡುಗಳನ್ನ ನಾನು ಹೇಳುತ್ತಾ ಇದ್ದೆ ಕೂಡಾ. “ತೆಂಗಿನ ಮರಗಳು ಕುಳ್ಳಾಗಿದ್ದು ಕಾಯ್ಗಳು ಕೈಗೆ ಸಿಗುವ೦ತಿದ್ದು , ಎಳೆ ನೀರಿನ ಮುಚ್ಚಳ ತೆಗೆದಿರಲು, ಕೊಬ್ಬರಿಯಲ್ಲಾ ಮೇಲ್ಗಡೆ ಇರಲು , ಎಷ್ಟೋ ಚೆನ್ನಾಗಿರುತಿತ್ತು. ಇನ್ನೂ ಚೆನ್ನಾಗಿರುತಿತ್ತು” ಆ ಪದ್ಫ್ಯದ ಲಯ, ಅಲ್ಲಿಯ ಭಾಷೆ, ಅಲ್ಲಿಯ ಸರಳತೆ ಮತ್ತು ಅದು ಹೇಳುವಂತಹ ವಿಷಯ ಆಗಿನ ಕಾಲದಲ್ಲಿ ನೂರಾರು ಎತ್ತರದ ತೆಂಗಿನ ಮರಗಳಿತ್ತು. ಕವಿಯ ಕಲ್ಪನೆಯ ಮೋಡಿ ಆ ಕಲ್ಪನೆ ಎಲ್ಲೋ ಒಂದು ಕಡೆಗೆ ಎಳೆದುಕೊಂಡು ಬಂತು. ನೀವು ಹೇಳಿದ ಕಿಂಡಿ ಅಲ್ಲಿದೆ.
ಆ ಪುಸ್ತಕವೇ ನಿಮಗೆ ಕಿಂಡಿಯಾಯಿತು. ಸರಿ ನಿಮ್ಮ ತ೦ದೆ ಮುಖ್ಯೋಪಾಧ್ಯಾಯರಾಗಿದ್ದಾಗ ಯಾವ ರೀತಿ ಕವಿತೆಗಳನ್ನ ಬರೆದುಕೊಂಡಿದ್ರು ಅದರಿಂದ ಹೇಗೆ ಸ್ಫೂರ್ತಿ ಬಂತು ಅಂತ ಹೇಳಿದ್ರಿ. ನಾನೂ ಕೇಳಿದ್ದೇನೆ. ನಿಮ್ಮ ತಾಯಿ ಹಾಡುತ್ತಾ ಇದ್ದಂತಹ ಜಾನಪದ ಗೀತೆಗಳಿಂದ ಅಥವಾ ನಿಮ್ಮ ಕಿವಿಯಲ್ಲಿ ಹೇಳಿದಂತಹ ಕಥೆಗಳಿಂದ ನಿಮ್ಮ ಸಾಹಿತ್ಯ ಚೆನ್ನಾಗಿ ಉಕ್ಕಿ ಮೇಲೆ ಬ೦ತು. ನಿಮ್ಮ ತಾಯಿ ನಿಮಗೆ ಯಾವ ರೀತಿ ಪ್ರೇರಣೆಯಾದರು?
ಅವರು ತುಂಬಾ ಕಥೆಗಳನ್ನ ಹೇಳ್ತಾ ಇದ್ದರು. ಗೀತೆಗಳನ್ನ ಹೇಳ್ತಾ ಇದ್ರು. ಅವರು ವಾರವಿಡೀ ಕಥೆ ಹೇಳ್ತಾ ಇದ್ರು . ನಾನು ‘ಮೀನುಗಾರ ದೊರೆ’ ಅಂತ ನಮ್ಮ ತಾಯಿ ಹೇಳಿದ ಒಂದು ಕಥೆಯನ್ನ ಇತ್ತೀಚಿಗೆ ಪುಸ್ತಕ ರೂಪದಲ್ಲಿ ತಂದೆ. ತುಂಬಾ ಸ್ವಾರಸ್ಯವಾದ ಕಥೆಗಳು. ಜಾನಪದ ಕಥೆಗಳಲ್ಲಿ ಮೊದಲೇ ಸ್ವಾರಸ್ಯ ತುಂಬಿರುತ್ತೆ. ಅದನ್ನ ಬಹಳ ಆತ್ಮೀಯವಾಗಿ ನಾವೆಲ್ಲಾ ಮಲಗಿದಾಗ ಅವರು ಆ ಕಥೆಯನ್ನ ಹೇಳ್ತಾ ಇದ್ರು. ಹೀಗೆ ಸುಮಾರು ಕಥೆಗಳನ್ನ ಅವರು ನನಗೆ ಹೇಳಿದ್ದರು. ಕಥೆಗಳಿಗೆ ಪ್ರವೇಶ ಕೊಟ್ಟಿದ್ದು ನಮ್ಮ ತಾಯಿಯವರೇ.
ನಿಮ್ಮ ಬಗ್ಗೆ ನನಗೆ ಕುತೂಹಲ ಯಾಕೆ ಅಂದ್ರೆ ನೀವು ಇನ್ನೂ ನಾಲ್ಕನೇ ಕ್ಲಾಸಿನಲ್ಲಿರುವಾಗಲೇ ಶಿವರಾಮ ಕಾರಂತರ ಕಥೆಗಳನ್ನ, ಮಾಸ್ತಿ ಕಥೆಗಳನ್ನ ಓದಿದಿರಿ. ಆ ಲೋಕ, ಅಂದ್ರೆ ಕಾರಂತರು, ಮಾಸ್ತಿ ಕಟ್ಟಿಕೊಟ್ಟ ಲೋಕಕ್ಕೂ ಕೇವಲ ನಾಲ್ಕನೇ ಕ್ಲಾಸಿನಲ್ಲಿದ್ದ ಹುಡುಗನಿಗೆ ಏನು ಸಂಬಂದ ಹಾಗೂ ಆ ಭಾವಲೋಕದ ಜೊತೆಗೆ ಸೇತುವೆ ಹೇಗೆ ನಿರ್ಮಿಸಿಕೊಂಡಿರಿ ?
ನನಗೆ ಹತ್ತು ವರ್ಷ ಆದಾಗ ನಮ್ಮ ತಂದೆ ತೀರಿಕೊಂಡ್ರು. ನಮ್ಮ ಮನೆಯಲ್ಲಿ ನಮ್ಮ ತಾಯಿ ಒಂಟಿ ಆಗಿ ಹೋದರು. ಆಗ ನನ್ನ ಅಣ್ಣಾ ಅಕ್ಕಂದಿರು ಶಾಲಾ ಲೈಬ್ರರಿಯಿಂದ ಎಲ್ಲಾ ಪುಸ್ತಕಗಳನ್ನ ತಂದು ನನ್ನ ಮುಂದೆ ರಾಶಿ ಹಾಕುತ್ತಿದ್ದರು. ಇದನ್ನ ಓದಿ ಹೇಳಬೇಕು ಅಮ್ಮನಿಗೆ ಅ೦ತ . ನಾನು ಆ ಕಥೆ, ಕಾದಂಬರಿಗಳನ್ನ ತಾಯಿಗೆ ಓದಿ ಹೇಳ್ತಾ ಹೇಳ್ತಾ ತಾಯಿಯವರು ಒಂದು ಕಡೆ ಕಣ್ಣೀರು ಒರೆಸಿಕೊಳ್ತಿದ್ರು . ನಾನು ಒಂದು ಕಡೆ ಕಣ್ಣು ಒರೆಸಿ ಕೊಳ್ತಿದ್ದೆ . ಹೀಗಾಗಿ ನನಗೆ ಕಾರಂತರು, ಇನಾಂದಾರರ, ಎಸ್ ಅನಂತ ನಾರಾಯಣರ ಪರಿಚಯ ಆ ವಯಸ್ಸಿನಲ್ಲಿಯೇ ಆಗಿ ಹೋಯ್ತು.
ನಿಮ್ಮ ಸಾಹಿತ್ಯದ ಒಳಗೆ ಕೂಡಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಕಣ್ಣೀರು ಒಂದು ರೀತಿ ಹರೀತಾ ಇದೆ ಅನಿಸುತ್ತದೆ. ಅದಕ್ಕೆ ಬಹುಷಃ ಮೂಲ ಇಲ್ಲಿರಬಹುದಾ?
ಇರಬಹುದು. ನನಗೆ ಮನುಷ್ಯ ದೊಡ್ಡಸ್ತಿಕೆ, ಆತನ ವ್ಯಕ್ತಿತ್ವದಲ್ಲಿರುವ ಒಂದು ದೊಡ್ಡಸ್ತಿಕೆಯ ಬಗ್ಗೆ ನನಗೆ ಬಹಳ ಗೌರವವಿದೆ. ಎ೦ತಹದ್ದೇ ಸಂದರ್ಭ ಬರಲಿ ಮನುಷ್ಯ ಕೊನೆ ಹಂತದಲ್ಲಿ ಆತ್ಮಹತ್ಯೆಗೆ ಹೋಗುತ್ತಾನೆಯೇ ಹೊರತು ಆರಂಭದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವುದಿಲ್ಲ. ಅಲ್ಲಿಯವರೆಗೂ ಆತ ಹೋರಾಡು ತ್ತಾನೆ. ಆ ಹೋರಾಟಗಳು ನನಗೆ ಬಹಳ ಮೆಚ್ಚುಗೆಯಾದದ್ದು. ಇಂತಹ ಹೋರಾಟಗಳು ಮತ್ತು ದಿನ ನಿತ್ಯದ ಜಂಜಡದ ನಡುವೆ ಸಿಲುಕಿ ಕೊಂಡ ಮನುಷ್ಯ ಆ ಜಂಜಡಗಳಿಂದ ಹೊರಗೆ ಬರಲು ಮಾಡುವ ಪ್ರಯತ್ನ ಇದು ನನಗೆ ಬಹಳ ಆಸಕ್ತಿಯನ್ನ ಉಂಟು ಮಾಡುತ್ತದೆ.
ನೀವು ಒಂದು ಲೇಖನ ಬರೆದಿದ್ದೀರಿ ‘ಕಥೆ ಹೇಳುವ ಅಜ್ಜಿ ಎಲ್ಲಿದ್ದೀಯಾ’? ಅಂತ. ಅಂದ್ರೆ ನೀವು ಹಾಗೆ ಹೇಳುವಾಗ ನನ್ನ ಬಾಲ್ಯದ ಬಗ್ಗೆ ಯೋಚಿಸಿದೆ. ಹೌದು ನನಗೂ ಕಥೆ ಹೇಳುವ ಅಜ್ಜಿ ಸಿಗಲಿಲ್ಲ. ಇವತ್ತು ಆ ಅಜ್ಜಿ ಎಲ್ಲಿ ಹೋದಳು?
ಟಿವಿ ಎದುರು ಕುಳಿತಿದ್ದಾಳೆ . ಈ ಅಧುನಿಕ ಸೌಲಭ್ಯಗಳು ಬಂದು ಅವು ನಮ್ಮ ಎಲ್ಲಾ ಸುಖವನ್ನು ಕಸಿದುಕೊಂಡಿವೆ. ಹಿಂದೆ ಅಜ್ಜಿ ಕಥೆ ಹೇಳುವಾಗ ಮಗುವಿಗೆ ಒಂದು ಚಕ್ಕುಲಿ ಕೊಟ್ಟು ತೊಡೆ ಮೇಲೆ
ಕೂರಿಸಿಕೊಂಡು, ಚಳಿಯಾಗದಂತೆ ಸೀರೆಯ ಸೆರಗು ಹೊದಿಸಿ ಬಹಳ ಮಮತೆ, ಪ್ರೀತಿಯಿಂದ ಮಗುವಿನ ಮನಸ್ಸನ್ನು ಗೆದ್ದು ಅಜ್ಜಿ ಕಥೆ ಹೇಳುತ್ತಾ ಇದ್ದಳು. ನಮ್ಮ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಥೆಗಳ ಹಾಗೆ . ಆದರೆ ಇವತ್ತು ನಮ್ಮ ಅಜ್ಜಿಯಂದಿರಿಗೆ ಪುರುಸೊತ್ತೇ ಇಲ್ಲ. ಕಥೆ ಹೇಳಬೇಕು ಎನ್ನುವ ಉತ್ಸಾಹವೂ ಇಲ್ಲ. ಕಥೆಗಳೂ ಗೊತ್ತಿಲ್ಲ.
ಅಥವಾ ಅದನ್ನ ಹೀಗೂ ನೋಡಬಹುದೇನೋ ನಾವು ಕೂಡಾ ಅಜ್ಜಿ ಕಥೆಗಳನ್ನು ಹೇಳಲಾಗದ ಸ್ಥಿತಿಯನ್ನು ನಿರ್ಮಾಣ ಮಾಡಿರಬಹುದು ಆಲ್ವಾ….. ?
ಹೌದು ಅದೂ ಇರಬಹುದು. ನಾವು ಆಕೆಯ ಬಾಯಿ ಕಟ್ಟಿ ಹಾಕಿದ್ದೇವೆ.
ನಿಮಗೆ ಕಥೆ, ಕಾದಂಬರಿ, ನಾಟಕ ಬರೆಯಲು ಏನು ಪ್ರೇರೇಪಣೆ ಆಯ್ತು ಅಂತ ಗೊತ್ತಾಯ್ತು. ಆದರೆ ನಿಮ್ಮ ಕಥೆಯ ಒಳಗಡೆ ನೀವು ಹೇಗಿದ್ದೀರಿ? ಯಾಕೆ ಅದೇ ಕಥೆಗಳನ್ನ, ಕಾದಂಬರಿ ಬರೆದಿರಿ ಅನ್ನುವುದು ನನ್ನ ಕುತೂಹಲ. ನೀವು ತುಂಬಾ ನೀರಿನ ಬಗ್ಗೆ ಬರೆದಿರಿ. ಆ ನೀರು ನಿಮ್ಮೊಳಗೆ ಜುಳು ಜುಳು ಹರೀತಾನೇ ಇದೆ ಅನ್ನಿಸುತ್ತ. ನಿಮ್ಮ ಇಡೀ ಸಾಹಿತ್ಯದಲ್ಲಿ ನೀರು ತುಂಬಾ ಪ್ರಧಾನ ಪಾತ್ರವನ್ನ ವಹಿಸುತ್ತೆ. ಈ ನೀರಿನ ಜುಳು ಜುಳು ಸಂಭ್ರಮವನ್ನ ಮೀರಿ ಎಲ್ಲೋ ಒಂದು ಕಡೆ ಅದು ಕಣ್ಣೀರು ಮಂಡಿತ ಆಗುತ್ತಾ ಹೋಗಿದೆ. ಅದು ಯಾಕೆ ನೀರು ನಿಮ್ಮೊಳಗೆ ಕಣ್ಣೀರಾಗಿ ಬದಲಾಯ್ತು?
ನನ್ನ ಸಾಹಿತ್ಯವನ್ನ ಮಾತ್ರ ಅಲ್ಲ ನಮ್ಮ ಬದುಕನ್ನೇ ನೀರು ಆವರಿಸಿಕೊ೦ಡಿದೆ. ನಮ್ಮ ದಿನನಿತ್ಯದ ಬಳಕೆಗೆ ನೀರು ಬೇಕು, ಉಳಿದ ಪದಾರ್ಥಗಳ ತಯಾರಿಗೆ ನೀರು ಬೇಕೇ ಬೇಕು. ನನಗೆ ಬಹಳ ಕಾಡಿದ್ದು ಅಂದರೆ ಜೋಗ ಜಲಪಾತ. ಆ ಜಲಪಾತದಲ್ಲಿ ನೀರು ತನ್ನ ಎಲ್ಲಾ ಲಕ್ಷಣಗಳನ್ನ ಕಳೆದುಕೊಂಡು ಬಿಡುತ್ತೆ. ಅಲ್ಲಿಂದ ಧುಮುಕುವಾಗ ಅದು ಗಾಜಿನ ಮಣಿಯಾಗುತ್ತೆ. ಹಾಲಾಗುತ್ತೆ, ನೋರೆಯಾಗುತ್ತೆ ಕ್ರಮೇಣ ನಾನು ಶರಾವತಿ ಯೋಜನೆಗೆ ಬಂದ ಮೇಲೆ ಈ ನೀರು ಮತ್ತೊಂದು ರೀತಿಯಲ್ಲಿ ಕಾಡಲು ಶುರುಮಾಡಿತು. ಇಲ್ಲಿ ಅಣೆಕಟ್ಟುಗಳು ನಿರ್ಮಾಣ ಮಾಡಿದರು. ಹರಿಯುವ ನದಿಗೆ ಆಣೆಕಟ್ಟು ಕಟ್ಟಿದರೂ ಕೂಡಾ ಹಿಡಿದಿಟ್ಟ ನೀರನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೊನೆಗೆ ನೀರಿನಿಂದ ಸುಲಭವಾಗಿ ವಿದ್ಯುತ್ತನ್ನ ತಯಾರಿಸಬಹುದು ಅಂತ ಕಂಡು ಕೊಂಡ ಮನುಷ್ಯ ಬೇರೆ ಯಾವುದೇ ದಿಕ್ಕಿನಲ್ಲಿ ಯೋಚನೆ ಮಾಡಲೇ ಇಲ್ಲ. ಈಗ ನೀರಿನಿಂದ ತಯಾರಾದ ವಿದ್ಯುತ್ತು ೮೦ ಪೈಸೆಗೆ ಸಿಗುತ್ತೆ. ಮನೆಗೆ ಬಂದು ಸೇರುವಾಗ ಮೂರು ರೂಪಾಯಿಯಷ್ಟುಗುತ್ತದೆ. ಇದು ನೀರು ನಮಗೆ ಕೂಟ್ಟ ವರ. ನಮ್ಮ ಮಲೆನಾಡಿನಲ್ಲಿ ಬೆಟ್ಟದ ತುದಿಯಲ್ಲಿ ಹುಟ್ಟುವ ಝರಿ ನಮ್ಮ ಬಚ್ಚಲು ಮನೆಯ ಹ೦ಡೆಯ ತನಕ ಬಂದು ಬಿಡುತ್ತದೆ. ಹೀಗೆ ನಾನು ‘ ಹರಿಯುವ ನದಿ’ ಅಂತ ಒಂದು ಕಾದಂಬರಿ ಬರೆದಿದ್ದೀನಿ. ಮೀನುಗಾರರಿಗೂ ನದಿಗೂ ಇರುವ ಸಂಬಂಧ ಅದು ಹೇಗಿರುತ್ತೆ ಎನ್ನುವುದುರ ಬಗ್ಗೆ. ಹೀಗೆ ಬಹುಷಃ ನೀರು ನನ್ನನ್ನು ಯಾವಾಗಲೂ ಕಾಡಿದೆ.
ಆ ನೀರನ್ನ ನೀವು ಎಷ್ಟು ವೈವಿಧ್ಯಮಯವಾಗಿ ಹೇಳುತ್ತಾ ಹೋಗುತ್ತೀರಿ ಅಂದರೆ ಆ ನೀರಿನ ಒಳಗಡೆ ಜೀವವನ್ನ ಕಾಣುತ್ತೀರಿ. ಹಾಗಿರುವಾಗ ಅಣೆಕಟ್ಟಿನ ಮೂಲಕ ನೀರಿಗೆ ಅಡ್ಡವಾಗುತ್ತಿದ್ದಾರೆ ಅಭಿವೃದ್ಧಿ ಹೆಸರಿನಲ್ಲಿ ಅನ್ನುವಾಗ ನಿಮಗೆ ಏನು ಅನಿಸಿತು?
ಬಾಕ್ರಾ ನಂಗಲ್ ಅಣೆಕಟ್ಟೆಗಳನ್ನು ಕಟ್ಟುವಾಗ ನೆಹರೂ ಅವರು, ’ಈ ಅಣೆಕಟ್ಟೆಗಳು ಆಧುನಿಕ ಭಾರತದ ದೇವಾಲಯಗಳು ಅಂತ’ ಹೇಳುತ್ತಿದ್ದರು. ಆದರೆ ಇವತ್ತು ಏನಾಗಿದೆ ಎಂದರೆ ಈ ಅಧುನಿಕ ದೇವಾಲಯಗಳು ಭಾರತದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ವಿದೇಶಗಳಲ್ಲಿ ಅಣೆಕಟ್ಟೆಗಳನ್ನ ಇವತ್ತು ಒಡೀತಿದ್ದಾರೆ. ನಮ್ಮಲ್ಲೂ ಕೂಡಾ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸುಮಾರು %೪೫ ಹೂಳಿದೆ. ಹೂಳು ತೆಗೆಯಲು ಆಗುವುದಿಲ್ಲ. ಅದನ್ನು ವಿಲೇವಾರಿ ಮಾಡಲು ಆಗುವುದಿಲ್ಲ. ಅಭಿವೃದ್ದಿ ಹೆಸರಲ್ಲಿ ಎಲ್ಲೋ ಅಡ್ಡದಾರಿ ಹಿಡಿದು ಬಿಟ್ಟಿದ್ದೇವೆ ಅಂತ ನನಗೆ ಅನಿಸುತ್ತೆ. ನಮ್ಮ ರಾಜಕಾರಣಿಗಳಿಗೆ ಅಣೆಕಟ್ಟೆಯನ್ನು ಕಟ್ಟುವುದೇ ಒಂದು ಅಭಿವೃದ್ಧಿ. ಆದರೆ ನನಗೆ ಹಾಗನಿಸುವುದಿಲ್ಲ. ನೀರನ್ನ ಮಿತವಾಗಿ ಬಳಸಿಕೊಂಡು ಸಣ್ಣ ಸಣ್ಣ ಅಣೆಕಟ್ಟೆಗಳ ಮೂಲಕ ನೀರಿನ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಿದೆ. ಈ ಕೆಲಸವನ್ನ ಆಫ್ರಿಕಾದಂತಹ ದೇಶಗಳು ಮಾಡ್ತಾ ಇವೆ. ಆ ಕೆಲಸ ನಮ್ಮಲ್ಲೂ ಆಗಬೇಕು. ಬೃಹತ್ತಾದ ಅಣೆಕಟ್ಟುಗಳನ್ನ ಕಟ್ಟುವುದನ್ನ ಕೈ ಬಿಡಬೇಕು.
ನಿಮ್ಮ ಸಾಹಿತ್ಯ ಶರಾವತಿ ನದಿಯ ಮೇಲೆ ನಿಂತಿದೆ. ಈ ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟೆಯನ್ನು ಕಟ್ಟುವುದಕ್ಕೆ ಹೊರಟಾಗಲಿಂದಲೂ ಮುಳುಗಡೆಯ ಬಗ್ಗೆ ತುಂಬಾ ಬರೆದಿದ್ದೀರಿ. ಈ ಮುಳುಗಡೆ ಯಾಕೆ ನಿಮ್ಮನ್ನು ಕಾಡಿತು?
ಇಲ್ಲಿ ಬಹಳ ತೊಂದರೆಗಳಿವೆ. ನಮ್ಮ ದೇಶ ವಿಭಜನೆಯಾದಾಗ ನಿರಾಶ್ರಿತರಾದವರಿಗಿಂತ ಮೂರು ಪಟ್ಟು ಹೆಚ್ಚು ಜನ ಅಣೆಕಟ್ಟೆಗಳ ನಿರ್ಮಾಣದಿಂದ ನಿರಾಶ್ರಿತರಾಗಿದ್ದಾರೆ. ಇದು ನನ್ನನ್ನ ಕಾಡುತ್ತಾ ಇರುವ ಒಂದು ದೊಡ್ಡ ದುರಂತ. ಒಂದು ಪ್ರದೇಶವನ್ನ ಬಿಟ್ಟು ಹೋಗುವುದು ಮನುಷ್ಯನಿಗೆ ಅಷ್ಟು ಸುಲಭ ಅಲ್ಲ. ಅವನು ಹುಟ್ಟಿ ಬೆಳೆದಂತಹ ಪ್ರದೇಶವನ್ನ ಬಿಟ್ಟು ಹೋಗುವುದು, ಜಮೀನು ಮಾಡಿದಂತಹ ಪ್ರದೇಶವನ್ನು ಬಿಟ್ಟು ಹೋಗುವುದು ಬಹಳ ಕಷ್ಟದ ಕೆಲಸ. ಶರಾವತಿಯಲ್ಲಿ ಮುಳುಗಡೆಯಾದಾಗ ಜನ ತಮ್ಮ ಹಸುಕರುಗಳನ್ನ ದೂರದ ಶಿವಮೊಗ್ಗದಲ್ಲಿ ಹೊಸದಾಗಿ ಕೊಟ್ಟ ಜಮೀನಿನಲ್ಲಿ ಬಿಟ್ಟು ಬಂದರು. ಎರಡು ಮೂರು ದಿವಸಗಳ ನಂತರ ನೋಡಿದರೆ ಅಷ್ಟೂ ಹಸು ಕರು ಇಲ್ಲಿಗೇ ವಾಪಸು ಬಂದಿತು. ಎಂತಹ ದುರಂತ. ೮೫ ಕಿಮಿ ದೂರದಿಂದ ಆ ದಾರಿಯನ್ನ ನೆನಪಿಟ್ಟು ಕೊಂದು ಆ ಹಸು ಕರುಗಳು ವಾಪಸು ಬಂದಿದೆ ಅಂದ್ರೆ ಒಂದು ಪ್ರಾಣಿಗೆ ಅಷ್ಟೊಂದು ವ್ಯಾಮೋಹ ಇರಬೇಕಾದರೆ ಮನುಷ್ಯನಿಗೆ ಎಂತಹ ಮೋಹ ಇರಲಿಕ್ಕಿಲ್ಲ ? ಈ ನೋವನ್ನ ಸರ್ಕಾರ ಅರ್ಥ ಮಾಡಿಕೊಳ್ಳಲಿಲ್ಲ ಅನ್ನುವುದು ನನ್ನ ಸಂಕಟ. ಸರ್ಕಾರ ಪರಿಹಾರ ಕೊಟ್ಟು ಬಿಡ್ತು. ಆದರೆ ಪರಿಹಾರವೇ ಎಲ್ಲಾ ಅಲ್ಲ. ಅವರನ್ನ ಮಾನವೀಯವಾಗಿ ನಡಿಸಿಕೊಳ್ಳಬೇಕಿತ್ತು. ಪೋಲಿಸರನ್ನ ಬಿಟ್ಟು ಅವರನ್ನ ಮನೆಗಳಿಂದ ಹೊರ ಹಾಕಿಸಿದರು. ಕಚೇರಿಯಲ್ಲಿ ಕಿರುಕುಳ ಕೊಟ್ಟರು. ಯಾವ ತಪ್ಪಿಗೋಸ್ಕರ?
ನಿಮ್ಮನ್ನು ಅಷ್ಟು ಆಳವಾಗಿ ಕಲುಕಿದ್ದು, ಸಾಹಿತ್ಯ ರಚನೆಗೆ ಕೈ ಹಾಕುವಂತೆ ಮಾಡಿದ್ದು ಯಾವುದು?
ಮನುಷ್ಯರ ನೋವು, ಬಹುಶಃ ಅದೇ ನನ್ನನ್ನ ಅಲುಗಾಡಿಸಿತು. ನಾನು ಯಾವ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ ಆ ಕಚೇರಿಗೆ ಈ ಮುಳುಗಡೆ ಪ್ರವೇಶದ ಎಲ್ಲರೂ ಬರ್ತಾ ಇದ್ದರು. ಬಂದಾಗ ಅವರ ನೋವನ್ನ ನನ್ನ ಮುಂದೆ ತೋಡಿಕೊಳ್ತಾ ಇದ್ದರು. ಇಲ್ಲಿ ಕೂಡ್ಲಿ ಅಂತ ದೇವಸ್ಥಾನ ಇತ್ತು ಅದೂ ಮುಳುಗಡೆಯಾಯ್ತು. ಪೂಜಾರಿಗಳು ಹೋಗಿ ದೇವರಿಗೆ ಕೇಳಿದರು, “ನೀನು ಬರ್ತೀಯಾ ಅಥವಾ ಇಲ್ಲೇ ಇರ್ತೀಯಾ?” ಅಂತ. ನಾನು ದೇವರು, ನಾನು ಇಲ್ಲೇ ಇರ್ತೀನಿ” ಅಂತು. ಇಂತಹ ನೂರಾರು ಘಟನೆಗಳನ್ನು ನಾನು ಕೇಳಿದವನು. ಇದನ್ನ ಎಲ್ಲೋ ಒಂದು ಕಡೆ ಬೇರೆಯವರ ಗಮನಕ್ಕೆ ತರಬೇಕು, ಆ ಜನಕ್ಕೆ ಒಂದು ಸಾಂತ್ವನ ಕೊಡಬೇಕು ಅಂತ ಬರೆಯಲು ಶುರು ಮಾಡಿದೆ. ಮುಳುಗಡೆ ಬಗ್ಗೆ ಬರೆದವನು ನಾನೊಬ್ಬನೆ. ಬಾಗಲಕೋಟೆ ಬಗ್ಗೆ ರೇಖಾ ಕಾಖಂಡಕಿ ಬರೆದಿದ್ದಾರೆ. ನಾನು ಬರವಣಿಗೆ ಮಾಡಿದ ಮೇಲೆ ಮುಳುಗಡೆ ಪ್ರದೇಶದ ಬಹಳ ಜನ ನಮ್ಮನೆಗೆ ಬರ್ತಾ ಇದ್ದರು.
ನಿಮ್ಮ ಕಥೆಯ ಪಾತ್ರಗಳೇ ಬಂದು ನಿಮ್ಮ ಮನೆಯ ಬಾಗಿಲು ತಟ್ಟುತ್ತಾ ಇದ್ದವು…?
ಏನು ಬಂದಿರಿ ಅಂದರೆ ನಮ್ಮ ನೋವನ್ನು ಅರ್ಥ ಮಾಡಿಕೊಂಡವರು ನೀವೊಬ್ಬರೇ, ನಿಮ್ಮನ್ನು ನೋಡಲು ಬಂದೆವು ಅಂತಿದ್ರು. ಮುಳುಗಡೆ ಸಮಸ್ಯೆ ಪರಿಹಾರವಾಗಿದೆ ಅಂತ ನಾನು ಹೇಳ್ತಾ ಇಲ್ಲ. ಆದರೆ ಆ ಸಮಸ್ಯೆಯ ಹಿಂದಿನ ಮಾನವೀಯತೆ ಎಲ್ಲರ ಗಮನಕ್ಕೂ ಬಂತು. ಅದು ನನಗೆ ಬೇಕಾಗಿದ್ದಿದ್ದು.
ಅಂದ್ರೆ ಒಂದು ರೀತಿಯಲ್ಲಿ ಯಶವಂತ ಚಿತ್ತಾಲರ ಕಥೆ ಒಂದಿದೆ, ’ಕಥೆಯಲ್ಲಿ ಬಂದಾತ ಮನೆಗೂ ಬಂದು ಬಾಗಿಲು ತಟ್ಟಿದ’ ಅಂತ, ಹಾಗೆ ನಿಮ್ಮ ಕಥೆಯ ಪಾತ್ರಗಳೆಲ್ಲವೂ ಬಂದು ನಿಮ್ಮ ಮನೆಯ ಬಾಗಿಲು ತಟ್ಟಿದೆ. ಬಹುಷಃ ಬರಹಗಾರನಿಗೆ ಇದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ ಅನ್ನಿಸುತ್ತೆ.
ನೀವು ನಾರ್ಬರ್ಟ್ ಡಿಸೋಜ. ಮೈಸೂರಿನ ಭಾಗದಲ್ಲಿ ಇದ್ದಂತಹ ನಾರ್ಬರ್ಟ್ ಡಿಸೋಜಾ ಅವರು ಆ ನಂತರದಲ್ಲಿ ಈ ನೀರಿನ ಪ್ರದೇಶಕ್ಕೆ ಬಂದು ನೀರಿನ ಜೊತೆ ಮಿಳಿತವಾಗಿ ನೀರಿನ ಕಥೆಗಳನ್ನು ಬರೀತಾ ಹೋದರು. ಯಾವುದು ನಿಮ್ಮನ್ನು ಇಲ್ಲಿಗೆ ಬರುವ ಹಾಗೆ ಮಾಡಿತು?
೧೯೫೯ ರಲ್ಲ ಶರಾವತಿ ಯೋಜನೆ ಪ್ರಾರಂಭ ಆದಾಗ ನಾನು ಆಗ ತಾನೆ ಎಸ್ ಎಸ್ ಎಲ್ ಸಿ ಮುಗಿಸಿ ಟೈಪ್ ರೈಟಿಂಗ್, ಶಾರ್ಟ್ ಹ್ಯಾಂಡ್ ಕಲಿತಿದ್ದೆ. ಇಲ್ಲಿ ಅರ್ಜಿ ಹಾಕಿದೆ. ಕೂಡಲೇ ಕೆಲಸ ಸಿಕ್ಕಿತು. ಸೀದಾ ಶರಾವತಿಗೆ ಬಂದೆ.

ಇಲ್ಲಿ ಬಂದ ಮೇಲೆ ನಿಮ್ಮ ಅನುಭವ ಏನು?
ಪ್ರಾರಂಭದಲ್ಲಿ ನನಗೆ ಬಹಳ ಹೆಮ್ಮೆ ಇತ್ತು, ಶರಾವತಿ ಯೋಜನೆಗಳ ಬಗ್ಗೆ. ನಂತರದ ದಿನಗಳಲ್ಲಿ ನನಗೆ ಬಹಳ ನಿರಾಶೆ ಆಯಿತು. ಬಹಳ ಭ್ರಷ್ಟಾಚಾರ ನಡೀತು. ಜನಕ್ಕೆ ತುಂಬಾ ತೊಂದರೆ ಆಯಿತು. ರೈತರು ಗುಳೆ ಎದ್ದು ಹೋಗಬೇಕಾಯಿತು. ಈ ರೀತಿಯ ಬೇರೆ ಬೇರೆ ಕಿರುಕುಳಗಳು. ಇವತ್ತು ಏನು ಹುಲಿಗಳು, ಆನೆಗಳು ಪಟ್ಟಣಕ್ಕೆ ನುಗ್ತಾ ಇದೆ, ಅದು ಆವತ್ತೇ ಆರಂಭವಾಯಿತು. ಎಲ್ಲಿ ಹೋಗಬೇಕು ಅವು? ಈ ಪ್ರದೇಶದಲ್ಲಿದ್ದ ಹುಲಿ, ಪ್ರಾಣಿ, ಹಕ್ಕಿಗಳು ಎಲ್ಲಿ ಹೋಗಬೇಕು? ಅವು ಬಂದು ಜನರ ಮೇಲೆ ಆಕ್ರಮಣ ಮಾಡುತ್ತಾ ಇದ್ದವು. ಈ ಥರದ ಹಲವಾರು ಸಮಸ್ಯೆಗಳನ್ನು ಆಣೆಕಟ್ಟು ಹುಟ್ಟು ಹಾಕಿತು.
ಹುಲಿ ಬಗ್ಗೆ, ಆನೆ ಬಗ್ಗೆ ಮಕ್ಕಳೊಂದಿಗೆ ಸಂವಾದ ಮಾಡುತ್ತಾ ಇತ್ತೀಚಿಗೆ ಹೇಳಿದ್ದು ನೆನಪಾಯಿತು. ’ಹುಲಿಗಳು ಮೈಸೂರು ನೋಡಬೇಕು ಅಂತ ಪೇಟೆಗೆ ಬರೋದಿಲ್ಲ’ ಅಂದಿದ್ರಿ.
ಹೌದು, ಅಣೆಕಟ್ಟು ಕಟ್ಟಿದ ನಂತರ ಕೆಲವೇ ತಿಂಗಳಲ್ಲಿ ಲಿಂಗನಮಕ್ಕಿಗೆ ಒಂದು ಚಿರತೆ ಬಂತು ಮೊಟ್ಟ ಮೊದಲ ಬಾರಿಗೆ. ಅಣೆಕಟ್ತಿನಲ್ಲಿ ನೀರು ನಿಲ್ತಾ ನಿಲ್ತಾ ನಿಲ್ತಾ ಮೊಲಗಳು ಮೇಲೆ ಹೋದವು. ಹೀಗೆ ಹೋದ ಮೊಲಗಳು ಒಂದು ದೊಡ್ಡ ಗುಡ್ಡದ ನೆತ್ತಿಯ ಮೇಲೆ ನಿಂತವು. ಅಲ್ಲಿ ಸಾವಿರಾರು ಮೊಲಗಳು ಸೇರಿದ್ದರಿಂದ ಗುಡ್ಡದ ನೆತ್ತಿ ಬೆಳ್ಳಗೆ ಕಾಣತ್ತಾ ಇತ್ತು. ನಮ್ಮ ಜನರೌ ಮೊಲಗಳ ಭೇಟೆಯಾಡಿ ಬಂದರು. ಈ ಥರ ಸರ್ಕಾರದ ಗಮನಕ್ಕೆ ಬಾರದ, ಸಾಮಾನ್ಯ ಜನರಿಗೆ ನೋವುಂಟು ಮಾಡಿದ ಸಾವಿರಾರು ಘಟನೆಗಳಿವೆ.
ನಿಮ್ಮ ಒಂದು ಕಥೆಯಲ್ಲಿ ಮೊತ್ತಮೊದಲ ಬಾರಿಗೆ ಗ್ರಾಮವೊಂದನ್ನ ಬಸ್ಸೊಂದು ಪ್ರವೇಶಿಸುತ್ತದೆ. ಆ ಬಸು ಬಂದ ನಂತರ ಗ್ರಾಮ ಪಲ್ಲಟವಾಗುತ್ತಾ ಹೋಗತ್ತದೆ. ಅಂಡ್ರೆ, ಒಂದು ಬಸ್ ಬಂದ ಕಾರಣಕ್ಕಾಗಿಯೇ ಇಡೀ ಗ್ರಾಮ ಬದಲಾಗುತ್ತಾ ಹೋಗುತ್ತದೆ. ಆ ಕಥೆಯನ್ನು ಓದಿದಾಗ ಹಾಗು ಅದೇ ರತಿ ಅಣೆಕಟ್ತಿನ ಬಗ್ಗೆ ಬರೆದಾಗ, ಆ ಮುಳುಗಡೆಯ ಬಗ್ಗೆ ಬರೆದಾಗ ನನ್ನ ಮುಂದಿರುವ ಪ್ರಶ್ನೆ ನೀವು ಅಭಿವೃದ್ಧಿ ವಿರೋಧಿಯೇ?
ಖಂಡಿತಾ ಅಲ್ಲ. ಅಭಿವೃದ್ಧಿ ವಿರೋಧಿ ಅಲ್ಲ. ಆದರೆ ಮನುಷ್ಯ ತನ್ನತನವನ್ನು ಕಳೆದುಕೊಳ್ಳಬಾರದು ಅನ್ನುವುದು ನನ್ನ ಉದ್ದೇಶ. ಇವನು ಅದರ ಜೊತೆಯಲ್ಲಿ ಹೋಗಬಾರದು. ಬಸ್ಸೇ ಬರಲಿ, ಏನೇ ಬರಲಿ ನಾನು ನಾನಾಗಿರಬೇಕು. ನನ್ನ ವಿಚಾರಗಳು, ಆಚರಣೆಗಳು, ನನ್ನ ದಿನನಿತ್ಯದ ನಡವಳಿಕೆ ಇದು ಮಾನವೀಯವಾಗಿರಬೇಕು. ಅದು ಆಗ್ತಾ ಇಲ್ಲ ಅನ್ನೋದು ನನ್ನ ಭೀತಿ. ನಾವು ಯಂತ್ರಗಳಿಗೆ ಗುಲಾಮರಾಗಿಬಿಟ್ಟಿದ್ದೇವೆ.
ನೀವು ಬರೆದಂತಹ ಕಾದಂಬರಿಗಳಲ್ಲಿ ’ದ್ವೀಪ’ ಭಿನ್ನವಾಗಿ ನಿಂತಿತು. ಈ ’ದ್ವೀಪ’ಕ್ಕೆ ಕುಮ್ಮಕ್ಕು ಕೊಟ್ಟ ಕಥೆಗಳು ಏನು? ಅದು ನಿಮ್ಮೊಳಗೆ ಉಂಟು ಮಾಡಿದ ತುಮುಲಗಳೇನು?
ನಾನು ಮುಳುಗಡೆ ಬಗ್ಗೆ ಬರೆದ ಕಾದಂಬರಿಗಳಲ್ಲಿ ’ದ್ವೀಪ’ ಮೊದಲನೆಯದು. ಇದಕ್ಕಿಂತ ಮುಂಚೆ ನಾನು ಕೆಲವು ಸಣ್ಣಕಥೆಗಳನ್ನು ಬರೆದಿದ್ದೆ. ’ದ್ವೀಪ’ ಬರೆಯಲು ಏನು ಕಾರಣ ಅಂದ್ರೆ, ಶರಾವತಿ ಅಣೆಕಟ್ಟೆ ಮಗಿದು ನೀರು ನಿಧಾನವಾಗಿ ನಿಲ್ಲಲು ಆರಂಭವಾಗಿತ್ತು. ಸುಮಾರು ೫-೧೦ ಅಡಿ ಎತ್ತರಕ್ಕೆ ಡ್ಯಾಂ ನಿಂತಿತ್ತು. ಅದಕ್ಕೆ ತಾಗಿಕೊಂಡಂತೆ ನೀರು ನಿಂತಿತ್ತು. ಹಾಗೆ ನಿಂತ ನೀರಿನಲ್ಲಿ ಒಂದು ಕುಟುಂಬ ಮುಳುಗಿದ್ದನ್ನು ನಾನು ನೋಡಿದೆ. ಆ ಕುಟುಂಬದ ಪರಿಹಾರದ ರೆಕಾರ್ಡುಗಳ ತೀರ್ಮಾನವಾಗಿರಲಿಲ್ಲ. ಬರಬೇಕಿದ್ದ ಪರಿಹಾರ ಸಿಕ್ಕಿರಲಿಲ್ಲ. ಆದರೆ ನೀರು ಬಂದು ಮನೆಬಾಗಿಲಿಗೆ ನಿಂತಿತ್ತು. ಅ ದಂಪತಿಗಳು ಬಹಳ ಕಷ್ಟದಲ್ಲಿದ್ದರು. ಬಹಳ ನೋವಿನಲ್ಲಿದ್ದರು. ಎಲ್ಲಿಗೆ ಹೋಗಬೇಕು ಅಂತ ಗೊತ್ತಿರಲಿಲ್ಲ. ನಾನು ಅದನ್ನ ನೋಡಿ ’ದ್ವೀಪ’ ಕಾದಂಬರಿ ಬರೆದೆ. ’ದ್ವೀಪ’ ಇಷ್ಟು ದೊಡ್ಡ ಇತಿಹಾಸ ಮಾಡುತ್ತೆ ಅನ್ನುವ ಕಲ್ಪನೆ ನನಗಿರಲಿಲ್ಲ.
”ದ್ವೀಪ’ ಕಾದಂಬರಿಯಾಗಿ ಎಷ್ಟು ಸಕ್ಸೆಸ್ ಆಯಿತೋ, ಸಿನಿಮಾ ಆಗಿ ಸಹಾ ಅದು ಭಿನ್ನವಾಗಿ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆದುಕೊಂಡಿತು. ’ದ್ವೀಪ’ ಸಿನಿಮಾ ಆಗಿದ್ದು ಹೇಗೆ ಮತ್ತು ನಿಮ್ಮ್ ಕಾದಂಬರಿ ಮತ್ತು ಸಿನಿಮಾ ಎಷ್ಟು ಬಾಂಧವ್ಯಹೊಂದಿತ್ತು?”
“ದ್ವೀಪ” ಸಿನಿಮಾ ಮಾಡಬೇಕು ಅಂತ ತುಂಬಾ ಜನ ಬಂದ್ರು. ನಾನು ಕೊಟ್ಟಿರಲಿಲ್ಲ. ಮೊದಲು ಕೆ ವಿ ಸುಬ್ಬಣ್ಣ ಅವರು ಅದನ್ನು ಸಿನಿಮಾ ಮಾಡ್ತೀನಿ ಅಂದ್ರು. ಸ್ಕ್ರಿಪ್ಟ್ ರೆಡಿ ಮಾಡಿ, ಈ ಪ್ರದೇಶಕ್ಕೆ ಬಂದು ನೋಡಿಕೊಂಡು ಹೋದೆವು. ನಂತರ ಸುಬ್ಬಣ್ಣನವರು ’ಇದು ಸ್ವಲ್ಪ ಕಷ್ಟದ ಕೆಲಸ, ಇದನ್ನು ಕಾಸರವಳ್ಳಿಯವರಿಗೆ ಕೊಡ್ತೀನಿ’ ಅಂದ್ರು. ಕಾಸರವಳ್ಳಿಯವರು ಸುಮಾರು ೧೨ ವರ್ಷ ಆ ಕಾದಂಬರಿಯನ್ನು ಇಟ್ಟುಕೊಂಡಿದ್ದರು. ಕೊನೆಗೆ ಸೌಂದರ್ಯ ಅವರು ಸಿನಿಮಾ ಮಾಡೋಣ ಅಂದಮೇಲೆ ಇದು ಜಾರಿಗೆ ಬಂತು. ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಾಗ, ಶಶಿಧರ ಆಡಪ್ಪ ಹಾಕಿದ ಮನೆಯ ಸೆಟ್ ನಲ್ಲಿ ಒಂದ ಕೋಣ ಬಂದು ಮಲಗಲು ಶುರು ಮಾಡಿತು. ನಂತರ ಚಿತ್ರೀಕರಣ ಶುರುವಾಯಿತು.
’ದ್ವೀಪ’ ಯಾಕೆ ಅಷ್ಟು ವ್ಯಾಪಕವಾಗಿ ಎಲ್ಲ ಮನಸ್ಸನ್ನೂ ಕಾಡಲು ಶುರು ಮಾಡಿತು? ಈ ಸಿನಿಮಾ ಎಷ್ಟೋ ದೇಶಗಳಿಗೆ ಹೋಯಿತು.
ಮುಳುಗಡೆ ಅನುವುದು ಅಭಿವೃದ್ಧಿಯ ಸಂಕೇತ ಎನ್ನುವ ಒಂದು ತಪ್ಪು ಕಲ್ಪನೆ ನಮ್ಮಲ್ಲಿದೆ. ಇದರಿಂದ ಆಗುವ ತೊಂದರೆ ಏನು ಅನ್ನುವುದು ಡ್ಯಾಂ ಕಟ್ಟಿದ ಮೇಲೆ ಗೊತ್ತಾಯಿತು. ಆವತ್ತಿನಿಂದ ಮೇಧಾ ಪಾಟ್ಕರ್ ಇರಬಹುದು,ಯಾರೇ ಇರಬಹುದು ಆಣೆಕಟ್ಟುಗಳ ವಿರುದ್ಧ ಮಾತಾಡ್ತಾ ಇದ್ದಾರೆ. ನಾನು ಅಣೆಕಟ್ಟು ಕುರಿತ ’ದ್ವೀಪ’ ಬರೆದ ಮೇಲೆ ಅದನ್ನು ಸುಶೀಲ ಪುನೀತ್ ಅನ್ನುವವರು ಇಂಗ್ಲಿಷಿಗೆ ಅನುವಾದಿಸಿದರು. ಚಲನಚಿತ್ರವಾದ ಮೇಲೆ ಹೆಚ್ಚು ವಾಡಿಕೆ ಬಂತು. ಆಸ್ಟ್ರೇಲಿಯಾದಲ್ಲಿ ಕೆಲವು ವರ್ಷಗಳ ಹಿಂದೆ ಚಿತ್ರೋತ್ಸವ ನಡೆದಾಗ ಅವರು ಕೇಳಿದ್ದು ’ದ್ವೀಪ’ವನ್ನೇ. ’ಯಾಕೆ ’ದ್ವೀಪ”ನೇ ಬೇಕು’ ಅಂತ ಪ್ರಶ್ನಿಸಿದಾಗ ’ನಮ್ಮ ಜನ ಅಣೆಕಟ್ಟಗಳಿಂದ ತುಂಬಾ ತೊಂದರೆಗೊಳಗಾಗಿದ್ದಾರೆ. ಅವರು ಅದನ್ನು ನೋಡಲಿ’ ಅನ್ನುವ ಉತ್ತರ ಬಂತು. ಹಾಗೆಯೇ ರಾಜಾಸ್ಥಾನದ ಚಿತ್ರೋತ್ಸವದಕ್ಕೂ ಈ ಸಿನಿಮಾ ಹೋಯಿತು. ಆ ಜನರಿಗೂ ಈ ಕಥೆಯ ನೋವು ನಾಟಿದೆ. ಈ ಕಾರಣದಿಂದಾಗಿ ಇದು ಎಲ್ಲರ ಸಮಸ್ಯೆ. ಅಭಿವೃದ್ಧಿ ಜೊತೆ ಬೇರೆ ಬೇರೆ ರೀತಿಯ ಸಮಸ್ಯೆಯನ್ನ ಜನ ಎದುರಿಸುತ್ತಾ ಇರೋದರಿಂದ ’ದ್ವೀಪ’ ಈಗ ಸಾರ್ವಜನಿಕ ಸಮಸ್ಯೆಯಾಗಿ ಕೂತಿದೆ.
ನಿಮಗೆ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ಹುಡುಕಿಕೊಂಡು ಬಂದಿತು. ಅದೂ ಕೂಡ ಮುಳುಗಡೆ ಕುರಿತು ನೀವು ಬರೆದ ಮಕ್ಕಳ ಕಾದಂಬರಿ ’ಮುಳುಗಡೆಯ ಊರಿಗೆ ಬಂದವರು’ಗೆ ಬಂತು. ಮಕ್ಕಳಿಗೂ ಕೂಡ ಮುಳಗಡೆಯನ್ನು ತೆಗೆದಕೊಂಡು ಹೋದಿರಿ.
ನನಗೆ ಮಕ್ಕಳಿಗೆ, ಅದರಲ್ಲೂ ಬೆಂಗಳೂರಿನಲ್ಲಿರುವ ಮಕ್ಕಳಿಗೆ, ಯಾವ ಶರಾವತಿ ವಿದ್ಯತ್ತನ್ನ ಬಳಸಿಕೊಂಡು ಬದುಕಿದ್ದಾರೋ ಆ ಮಕ್ಕಳಿಗೆ, ಶರಾವತಿ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆ ಆಗುವಾಗ ಏನೆಲ್ಲಾ ಸಂಕಟಗಳು, ಎಷ್ಟೆಲ್ಲಾ ಜನ ಕಷ್ಟಕ್ಕೆ ಒಳಗಾದರು ಅನ್ನುವುದನ್ನು ತಿಳಿಸಬೇಕಾಗಿತ್ತು. ಹಾಗಾಗಿ ಬೆಂಗಳೂರಿನ ೫ ಜನ ಮಕ್ಕಳನ್ನು ಇಲ್ಲಿಯ ಮುಳುಗಡೆ ಪ್ರದೇಶಕ್ಕೆ ಕರೆದುಕೊಂಡು ಬಂದು ಇಲ್ಲಿಯ ಪರಿಸ್ಥಿತಿಯನ್ನು ಅವರಿಗೆ ತೋರಿಸುತ್ತೇನೆ ನಾನು. ಅವರ ಮನಸ್ಸಿನಲ್ಲಿ ಬಹಳ ಬದಲಾವಣೆಯಾಗುತ್ತದೆ. ನಾವು ಮನೆ ಬಿಟ್ಟು ಹೋಗೋದಿಲ್ಲ ಎಂದು ನಿರ್ಧಾರ ಮಾಡುತ್ತಾರೆ, ಆ ಊರಿನಲ್ಲಿ ಮಕ್ಕಳೆಲ್ಲಾ ಮನೆ ಬಿಟ್ಟು ಹೋಗಿರುತ್ತಾರೆ. ಆದರೆ ಮೊಮ್ಮಗ, ’ನಾನು ಆ ಮನೆ ಬಿಟ್ಟು ಹೋಗಲ್ಲ, ನನ್ನ ವಿದ್ಯಾಭ್ಯಾಸ ಮುಗಿಸಿ ಇಲ್ಲಿಗೇ ಬರ್ತೀನಿ ಅಜ್ಜ’ ಅನ್ನುತ್ತದೆ. ಅದು ನನ್ನ ಆಶಯ. ಈಗ ತುಮರಿಗೆ ಹೋಗಿ ನೋಡಿ, ಅಲ್ಲಿ ಯಾವ ಮನೆಗಳಲ್ಲೂ ಯುವಕರಿಲ್ಲ, ಯುವತಿಯರಿಲ್ಲ, ಬರೀ ಮುದುಕ ಮುದುಕಿಯರಷ್ಟೇ ಇದ್ದಾರೆ. ಈ ಪರಿಸ್ಥಿತಿ ಬದಲಾವಣೆ ಆಗಬೇಕು, ನಮ್ಮ ಜನ ಮತ್ತೆ ಹಳ್ಳಿಗೆ ಬರಬೇಕು ಅನ್ನುವುದು ನನ್ನ ಆಶಯ.
ನೀವು ಇಲ್ಲಿಗೆ ಬರದೇ ಹೋಗಿದ್ದಿದ್ದರೆ ನೀವು ಏನಾಗಿರ್ತಿದ್ರಿ. –
ಬಹುಷಃ ನಾನೊಬ್ಬ ಟೈಪಿಸ್ಟ್ ಆಗಿರುತ್ತಿದ್ದೆ.
ಬರವಣಿಗೆಯನ್ನು ಕುರಿತು ಮಾತಾಡ್ತಾ ನೀವು ಬರವಣಿಗೆ ಅನ್ನುವುದು ಕೋಳಿ ಮೊಟ್ಟೆ ಇಟ್ಟ ಹಾಗೆ ಅಂತ ಹೇಳಿದ್ರಿ
ಕೋಳಿ ಹೊಟ್ಟೆಯಲ್ಲಿ ಒಂದು ಮೊಟ್ಟೆ ಮೂಡಬೇಕಾದರೆ ಬಹಳ ಪ್ರಕ್ರಿಯೆ ನಡೆಯುತ್ತೆ. ಆ ಕೋಳಿ ತನ್ನದೆಲ್ಲವನ್ನೂ ಆ ಮೊಟ್ಟೆಗೆ ಕೊಟ್ಟು ಅದನ್ನ ಗಟ್ಟಿಯಾಗಿ ಬೆಳೆಸಬೇಕಾಗುತ್ತದೆ. ಮೊಟ್ಟೆ ಗಟ್ಟಿಯಾಗಿದೆ ಅಂತ ಖಾತರಿಯಾದರೆ ಮಾತ್ರ ಕೋಳಿ ಮೊಟ್ಟೆ ಇಡುತ್ತೆ. ಇಲ್ಲದಿದ್ದರೆ ಮೊಟ್ಟೆ ಇಡುವುದಿಲ್ಲ. ಅದರಲ್ಲಿ ಮೊಟ್ಟೆ ಗಳದ್ದೇ ಒಂದು ದೊಡ್ಡ ಗೊಂಚಲು ಇರುತ್ತೆ. ಆ ಗೊಂಚಲಿನಲ್ಲಿ ದೊಡ್ಡ ಮೊಟ್ಟೆ ಮಾತ್ರ ಹೊರಗೆ ಬರುತ್ತೆ. ನನ್ನ ಕಲ್ಪನೆ, ನನ್ನ ಅನುಭವ, ನನ್ನ ಜೀವನ ದೃಷ್ಟಿ ಎಲ್ಲಕ್ಕೂ ಕಾವು ಕೊಟ್ಟು ಒಂದು ಮೊಟ್ಟೆಗೆ ಜನ್ಮ ನೀಡುತ್ತೇನೆ.
ನಿಮ್ಮ ಬರಹಗಳ ಹೆಸರುಗಳೇ ನೀವು ಏನು ಎನ್ನುವುದನ್ನ ಸೂಚಿಸುತ್ತೆ. ನಿಮ್ಮ ಒಳಗಡೆ ಈ ರೀತಿಯ ಬಂಡಾಯ ಬರಲು ಏನು ಕಾರಣ?
ಬಹುಷಃ ವಸ್ತುವೇ ಬಂಡಾಯ ಏಳಲು ಪ್ರೇರೇಪಿಸಿದೆ ಅನಿಸುತ್ತೆ. ‘ ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ’ ಇದೆಯಲ್ಲಾ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿಲ್ಲ. ಯಾಕೆ ಭಾಗವಹಿಸಲಿಲ್ಲ ಎಂದರೆ ಅವರು ಚರ್ಚು ಕಾಂಪಾ೦ಡುಗಳಿಂದ ಹೊರಗೆ ಬರಲಿಲ್ಲ. ಈ ಥರದವು ನನ್ನ ಮನಸ್ಸಿಗೆ ಸರಿ ಅಲ್ಲ ಎನಿಸಿದಾಗ ಈ ಕಥೆಗಳನ್ನ ಬರೆದಿದ್ದೇನೆ.
ಈ ಭಾಗ ಒಂದು ದೊಡ್ಡ ಚಳುವಳಿಯನ್ನು ಕಂಡ ಜಾಗ. ಕಾಗೋಡು ಸತ್ಯಾಗ್ರಹ ಅನೇಕ ತಲೆಮಾರುಗಳ ಮೇಲೆ ಪ್ರಭಾವ ಬೀರಿದೆ. ಆ ಸತ್ಯಾಗ್ರಹ ನಿಮ್ಮ ಮೇಲೆ ಬೀರಿದ ಪ್ರಭಾವ ಏನು ?
೧೯೫೨ ರಲ್ಲಿ ಕಾಗೋಡು ಸತ್ಯಾಗ್ರಹ ಆರಂಭವಾದಂದಿನಿಂದಲೂ ನೋಡುತ್ತಾ ಬಂದಿದ್ದೇನೆ. ಅದರ ಫಲಿತಾಂಶಗಳನ್ನೂ ಕ೦ಡಿದ್ದೇನೆ. ಆ ಹೋರಾಟದಲ್ಲಿ ಭಾಗವಹಿಸಿದ ಎಲ್ಲರನ್ನೂ ಭೇಟಿ ಮಾಡಿದ್ದೇನೆ ನಾನು ಆಗ ಹೈಸ್ಕೂಲ್ ನಲ್ಲಿದ್ದೆ. ಆ ಚಳವಳಿ ನಮ್ಮ ದೀವರು ಜನಾಂಗದಲ್ಲಿ ಅದು ರಾಜಕೀಯ, ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿತು. ಹೀಗಾಗಿ ನಾನು ಅದನ್ನೇ ಕೇಂದ್ರವಾಗಿಟ್ಟು ಕೊಂಡು ‘ಕೊಳಗ’ ಎನ್ನುವ ಕಾದಂಬರಿ ಬರೆದೆ ಸಾಕಷ್ಟು ಕಥೆಗಳನ್ನೂ ಬರೆದೆ.
ಧರ್ಮ ನಾನಾ ಕ್ಷೇತ್ರಗಳಲ್ಲಿ ಪ್ರವೇಶ ಮಾಡ್ತಾ ವಿಭಿನ್ನ ರೀತಿಯ ಪರಿಣಾಮ ಬಿರ್ತ್ತಾ ಇದೆ. ಕೋಮು ಕೋಮುಗಳ ನಡುವೆ ಕಂದರವನ್ನು ಹೆಚ್ಚಿಸ್ತಾ ಇದೆ. ಜಿ ಎಸ್ಎಸ್ ಹೇಳುವ ಹಾಗೆ ‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ .. ‘ ನಿಮಗೆ ಏನನ್ನಿಸುತ್ತೆ?
ಎಲ್ಲಾ ಧರ್ಮಗಳ ಉದ್ದೇಶ ಜನ ನೆಮ್ಮದಿ ಶಾಂತಿಯಿಂದ ಬದುಕಬೇಕು ಎನ್ನುವುದು. ಯಾವ ಧರ್ಮವೂ ಇನ್ನೊಬ್ಬರನ್ನ ದ್ವೇಷಿಸು ಅಂತ ಹೇಳುವುದಿಲ್ಲ. ಮನೆಗೆ ಬೆಂಕಿ ಹಚ್ಚು ಅಂತ ಹೇಳೋದಿಲ್ಲ. ಭಯೋತ್ಪಾದನೆಯನ್ನು ಯಾವ ಧರ್ಮವೂ ಪ್ರೋತ್ಸಾಹಿಸುವುದಿಲ್ಲ. ಆದರೆ ಧರ್ಮವನ್ನು ಅಪಾರ್ಥ ಮಾಡಿಕೊಂಡ ಜನ ಧರ್ಮದ ಹೊರಕವಚವನ್ನಷ್ಟೆ ನಂಬಿರುವ ಜನ ಧರ್ಮವನ್ನು ಒಂದು ಆಚರಣೆ ಯನ್ನಾಗಿ ಮಾತ್ರ ಮಾಡಿ ಕೊಂಡಿರುವ ಜನ ಈ ರೀತಿಯ ಕೋಮುಗಲಭೆ, ರಕ್ತ ಪಾತಕ್ಕೆ ಭಯೋತ್ಪಾದನೆಗೆ ಕಾರಣರಾಗುತ್ತಿದ್ದಾರೆ.
ಹೀಗೆ ಎದೆ ಎದೆಗಳ ಸೇತುವೆಯನ್ನು ಬೆಸೆಯುವ ಮಾತನಾಡುತ್ತಿರುವಾಗಲೇ ನನಗೆ ಹಸಲರ ಗೋಡೆ ಚಿತ್ತಾರ ನೆನಪಿಗೆ ಬಂತು. ನಾ ಡಿಸೋಜ ಅವರು ಖಂಡಿತಾ ಒಂದು ಗೋಡೆ ಚಿತ್ತಾರದ ಹಾಗೆ. ನೋಡಲೂ ಸುಂದರ. ಅಷ್ಟೇ ಅಲ್ಲ ದೀರ್ಘ ಕಾಲ ಬದುಕಿ ಉಳಿಯುತ್ತದೆ. ದ್ವೀಪಗಳ ಬಗ್ಗೆ ಮಾತನಾಡುತ್ತಲೇ ನಾವು ತೆಪ್ಪದಲ್ಲಿ ತೇಲುತ್ತಾ ದಡಕ್ಕೆ ಬಂದಿಳಿದೆವು. ಹೌದಲ್ಲಾ… ದ್ವೀಪಗಳ ಬಗ್ಗೆ ಬರೆಯುತ್ತಲೇ ಇವರು ಸೇತುವೆಗಳನ್ನು ನಿರ್ಮಿಸಿಕೊಟ್ಟುಬಿಟ್ಟರು..
ನಾ. ಡಿಸೋಜ ಅಂದ ತಕ್ಷಣ ನನಗೆ ಮಲೆನಾಡು ನೆನಪಿಗೆ ಬರುತ್ತದೆ. ಮಲೆನಾಡು ಅಂದ ತಕ್ಷಣ ಹಸಲರು ನೆನಪಿಗೆ ಬರುತ್ತಾರೆ. ಅವರ ಗೋಡೆ ಚಿತ್ತಾರ ನೆನಪಿಗೆ ಬರುತ್ತದೆ. ನಾ ಡಿಸೋಜ ಅವರು ಹಸಲರು ಒಂದು ಗೋಡೆ ಚಿತ್ತಾರ ಇದ್ದ ಹಾಗೆ. ಅದು ನೋಡೋದಿಕ್ಕೂ ಸುಂದರ. ದೀರ್ಘ ಕಾಲ ಬಾಳುತ್ತೆ. ಅಂತಹ ಒಂದು ಚಿತ್ತಾರ ನಾ. ಡಿಸೋಜ. ಆ ಚಿತ್ತಾರಕ್ಕೆ ನಮಸ್ಕಾರ.








Howdu sir. Thanks for the interview.
ಈ ಸಂದರ್ಶನ ನೋಡಿದೆ. ತುಂಬಾ ಚೆನ್ನಾಗಿತ್ತು.
ಮೆಲುದನಿಯ ಸಾಹಿತಿಯ ಮಾತುಗಳು ಕೇಳಬೇಕಾದವರಿಗೆ ಕೇಳಲಿ
Im inspired!! 🙂
ಬಹಳ ಚ೦ದದ, ಮನಕಲಕುವ, ಕಣ್ ತೆರೆಸುವ ಸ೦ದರ್ಶನ!
ಇ೦ತಹ ಸ೦ದರ್ಶನ ತ೦ದ ಅವಧಿಗೆ ಸಾವಿರ ವ೦ದನೆಗಳು
sir ನಾನು ಈ ಸಂದರ್ಶನ ಕಾರ್ಯಕ್ರಮವನ್ನ ಚಂದನ tv ಯಲ್ಲಿ ನೋಡಿದೆ ನಾ ಡಿಸೋಜಾ ಸರ್ ರ ಮಾತು ದ್ವನಿ ಹರಿಯುವ ನೀರಿನಂತೆ ಶುದ್ದ ಸರಳ ಮನಸ್ಸಿನಲ್ಲಿ ಹೆಚ್ಚು ಸಮಯ ನಿಲ್ಲುವಂತ ಹಾಗೂ ಯೋಚಿಸಲು ಹಚ್ಚಿಸುವ ವಿಚಾರಗಳ ಗೊಂಚಲು.
ಸಂದರ್ಶನಕ್ಕೆ ನೀಡಿದ ತಲೆಬರಹವೇ ಆಕರ್ಷಕವಾಗಿದೆ.ಅತ್ಯುತ್ತಮ ಸಂದರ್ಶನ.
ಸಂದರ್ಶನ ಇಷ್ಟವಾಯಿತು. ನಾಡಿ ಮಾತುಗಳು ಗೊತ್ತಿಲ್ಲದೆಯೇ ಒಂದು ವಿಶಿಷ್ಟ ಲೋಕಕ್ಕೆ ಕರೆದುಕೊಂಡು ಹೋಗಿಬಿಡುತ್ತವೆ. ಕೊನೆಯಲ್ಲಿ ಒಂದು ಸಣ್ಣ ಮಿಸ್ಟೇಕ್. ಮಲೆನಾಡಿನಲ್ಲಿ ಗೋಡೆ ಚಿತ್ತಾರವನ್ನು ಹಸಲರು ಬಿಡಿಸುವುದಿಲ್ಲ.
ತುಂಬ ಇಷ್ಟವಾಯಿತು ಮಾತುಕತೆ.
ತುಂಬುಹೃದಯದಿಂದ ಮನಸುಬಿಚ್ಚಿ ಮಾತನಾಡಿದ್ದಾರೆ ನಾ ಡಿಸೋಜಾ.
ಅವರ ಮುಳುಗಡೆ ಕಾದಂಬರಿ ಎಂದೂ ಮರೆಯದ ಓದಿನ ನೆನಪಾಗಿ ಉಳಿದುಕೊಂಡಿದೆ.
ಸಂದರ್ಶನದ ಸ್ಥಳಗಳು…ದ್ವೀಪ, ಸಮುದ್ರ ಇದ್ದಂತಿವೆ. ಕುತೂಹಲ ಮೂಡಿಸಿದವು.
ಒಟ್ಟಾರೆ ಬರವಣಿಗೆ ಮರುಓದಿಗಾಗಿ ಒತ್ತಾಯಿಸುವಂತಿದೆ.