ಸಮ್ಮೇಳನದ ಗುಂಗಲ್ಲಿ ನನ್ನ ಹಾಡಿನ ಹಳ್ಳ

ನಿಸ್ಸೀಮವೆನಿಸುವ ಹಾಡಿನ ಸೀಮೆ….

-ಎಚ್.ಎಸ್.ವೆಂಕಟೇಶಮೂರ್ತಿ

ಸಾಹಿತ್ಯ ಸಮ್ಮೇಳನಕ್ಕೆ ನೀವು ಯಾವಾಗ ಭೆಟ್ಟಿಕೊಡುತ್ತೀರಿ? ಎಂದು ಪತ್ರಿಕಾ ಮಿತ್ರರು ಫೋನ್ ಮಾಡಿದಾಗ, ಎರಡನೇ ದಿನ ಮಧ್ಯಾಹ್ನ ಎಂದೆ. ಆವತ್ತು ನಮ್ಮ ಕವಿಗಳು ಕವಿತೆಯನ್ನು ವಾಚಿಸುವ ಅವನ್ನು ನಮ್ಮ ಸುಗಮ ಸಂಗೀತ ಗಾಯಕರು ಹಾಡುವ ಕಾರ್ಯಕ್ರಮವಿತ್ತು. ಗೋಷ್ಠಿಯನ್ನು ಡಾ ಸಾ ಶಿ ಮರುಳಯ್ಯ ಉದ್ಘಾಟಿಸುವವರಿದ್ದರು. ಡಾ ಅನಂತಮೂರ್ತಿಗಳ ಅಧ್ಯಕ್ಷತೆ. ಜಿ.ಎಸ್.ಸಿದ್ಧಲಿಂಗಯ್ಯ, ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯಚೊಕ್ಕಾಡಿ, ಜಯಂತಕಾಯ್ಕಿಣಿ,ಎಂ.ಎನ್.ವ್ಯಾಸರಾವ್, ಪ್ರತಿಭಾನಂದಕುಮಾರ ಮೊದಲಾದ ನನಗೆ ಪ್ರಿಯರಾದ ಅನೇಕ ಆಪ್ತರು ಗೋಷ್ಠಿಯಲ್ಲಿ ಪದ್ಯ ಓದುವವರಿದ್ದರು. ಅವರನ್ನು ಭೆಟ್ಟಿಮಾಡುವ ಇರಾದೆಯಿಂದ ನಾನಲ್ಲಿಗೆ ಹೋಗಿದ್ದು.

ನಾನು ಸಮ್ಮೇಳನ ನಡೆಯುವ ಜಾಗಕ್ಕೆ ಹೋದಾಗ ಅಲ್ಲಿ ಸೇರಿದ್ದ ಜನಸಂದಣಿ ಬೆರಗುಹುಟ್ಟಿಸುವಂತಿತ್ತು. ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯುತ್ತಾ ಇತ್ತು. ಕವಿಗೋಷ್ಠಿ ಪ್ರಾರಂಭವಾಗುವಷ್ಟರಲ್ಲಿ ಪುಸ್ತಕ ಮಳಿಗೆಗೆ ಭೆಟ್ಟಿಕೊಟ್ಟು ಬರೋಣವೆಂದುಕೊಂಡು ಆ ಕಡೆ ನಾನು ಮತ್ತು ನನ್ನ ಮಗ(ಸುಹಾಸ) ಹೋದರೆ, ಅಲ್ಲಿ ಪ್ರವೇಶಿಸಲಾರದಷ್ಟು ಜನಸಂದಣೆ. ಅಲ್ಲಿ ಹೋದರೆ ಉಸಿರುಕಟ್ಟಿ ಕೆಮ್ಮು ಶುರುವಾಗುವುದು ಗ್ಯಾರಂಟಿ ಎನ್ನಿಸಿ, ಸಭೆ ನಡೆಯುತ್ತಿದ್ದ ಬೃಹದ್ ಮಂಟಪದ ಕಡೆ ಹೊರಟೆವು. ಮಂಟಪದ ಹೊರಗೆ ಜ್ಯೋತಿಮಹದೇವ, ಜಿ.ಕೆ.ರವೀಂದ್ರಕುಮಾರ್, ಬಸು ಬೇವಿನಗಿಡ ……., ಹೀಗೆ ಅನೇಕ ಗೆಳೆಯರ ಅನಿರೀಕ್ಷಿತ ಭೆಟ್ಟಿಯಾಗಿ ಖುಷಿಯಾಯಿತು. ಜೊತೆಗೆ ನಾನು ನೋಡೇ ಇರದ ನನ್ನ ಅನೇಕ ಓದುಗರ ಜತೆ ಮುಖಾಮುಖಿ. ಅವರ ಅಭಿಮಾನ ತುಂಬಿದ ಕಣ್ಣುಗಳಲ್ಲಿ ನನ್ನ ಬರವಣಿಗೆಯ ಅನೇಕ ಹಾಳೆಗಳು ತೆರೆಯುತ್ತಾ ಇದ್ದವು.

ದಾವಣಗೆರೆಯ ಜಿಲ್ಲಾ ಕನ್ನಡಪರಿಷತ್ತಿನ ಅಧ್ಯಕ್ಷರೂ ನನ್ನ ಹಳೆಯ ಮಿತ್ರರೂ ಆದ ಸದಾಶಿವಪ್ಪ ಶಾಗಲೆ ಸಿಕ್ಕಿ, ಇಲ್ಲೇಕೆ ನಿಂತಿದ್ದೀರಿ, ವಿ ಐ ಪಿ ಗೇಟ್ ಮೂಲಕ ನೀವು ಒಳಗೆ ಹೋಗಿ, ಹತ್ತಿರದಿಂದ ಕಾರ್ಯಕ್ರಮ ನೋಡಬಹುದು ಎಂದು ಆಸೆ ಹುಟ್ಟಿಸಿದರು. ಪ್ರಯತ್ನಿಸೋಣ ಎಂದು ಅಲ್ಲಿಗೆ ಹೋದಾಗ ಪುಲೀಸ್ ಮಂದಿ ಗೇಟನ್ನು ಮುಚ್ಚಿ ಒಳಗೆ ಸ್ಥಳವಿಲ್ಲ ಎಂದು ಕೈ ಆಡಿಸಿದರು. ಸದಾಶಿವಪ್ಪ ನನ್ನನ್ನೊಬ್ಬನನ್ನಾದರೂ ಒಳಗೆ ಬಿಡುವಂತೆ ಕೋರಿ, ನನಗೆ ಪ್ರವೇಶ ದೊರಕಿಸಿದರು! ಸಾಹಿತ್ಯಸಮ್ಮೇಳನದಲ್ಲಿ ಸಾಹಿತಿಗಳಿಗೆ ಪ್ರವೇಶ ಇಷ್ಟು ಕಷ್ಟಸಾಧ್ಯ ಎನ್ನುವುದು ಅರಿವಿಗೆ ಬಂದಾಗ ಸಣ್ಣ ಮುಗುಳ್ನಗೆ ನನ್ನ ಅರಿವಿಲ್ಲದೆಯೇ ಬಾಯಿಂದ ಹೊರಕ್ಕಿಣುಕಿತು. ಅಂತೂ ನಾನು ನನ್ನ ಪೂರ್ವಜನ್ಮ ಪುಣ್ಯವಿಶೇಷದಿಂದ ಪ್ರವೇಶಗಿಟ್ಟಿಸಿ ಒಳಕ್ಕೆ ಹೋದ ಮೇಲೆ ಕುಳಿತುಕೊಳ್ಳುವುದಕ್ಕೆ ಕುರ್ಚಿಯೇನಾದರೂ ಸಿಕ್ಕುತ್ತದೋ ಎಂದು ಸುತ್ತೂ ಕಣ್ಣಾದಿಸತೊಡಗಿದೆ. ಕೆಲವರು ಬನ್ನಿ..ಇಲ್ಲಿ ಕುಳಿತುಕೊಳ್ಳಿ ಎನ್ನುತ್ತಾ ತಮ್ಮ ಆಸನಗಳನ್ನು ತೆರವು ಮಾಡಲು ನೋಡಿದರು.

ನಾನು ಸಂಕೋಚದಿಂದ ಇಲ್ಲ ಇಲ್ಲ ನೀವು ಕೂತುಕೊಳ್ಳಿ ಎಂದು ನನ್ನ ತಡಕಾಟ ಮುಂದುವರೆಸುವಾಗ …ಸರ್…ಬನ್ನಿ ಇಲ್ಲಿ…ನಿಮಗೆ ಸೀಟು ಹಿಡಿದಿಟ್ಟುಕೊಂಡಿದೇನೆ ಎಂಬ ಅಶರೀರವಾಣಿಯೊಂದು ಕಿವಿಗೆಬಿತ್ತು. ಆ ಧ್ವನಿ ಬಂದ ದಿಕ್ಕಿನ ಕಡೆ ಕಣ್ಣು ಹಾಯಿಸಿದಾಗ ದೂರದಲ್ಲಿ ಗೆಳೆಯರೊಂದಿಗೆ ಆಸೀನ ರಾಗಿದ್ದ ರುದ್ರೇಶ್ವರಸ್ವಾಮಿ ಕಣ್ಣಿಗೆ ಬಿದ್ದರು. ಅಲ್ಲಿ ಕೂತು ನಿಟ್ಟುಸಿರು ಬಿಡುವ ವೇಳೆಗೆ ಮುಂದಿನ ಸಾಲಲ್ಲಿ ಕೂತಿದ್ದ ಡುಂಡಿರಾಜ್, ಪ್ರಾಶಾಂತ್ ಇಲ್ಲಿ ಬನ್ನಿ ಎಂದು ಕೂಗಿದರು.

ಕವಿಗೋಷ್ಠಿ ಪ್ರಾರಂಭವಾಯಿತು. ನಿರೂಪಕರು ಅರಳು ಹುರಿದ ಹಾಗೆ ಮಾತಾಡುತ್ತಿದ್ದರು. ಗುಣವಾಚಕಗಳು ಅವರ ಬಾಯಿಂದ ಪುಂಖಾನುಪುಂಖವಾಗಿ ಹೊರನುಗ್ಗುತ್ತಾ ಇದ್ದವು. ಆ ದುಬಾರಿ ಹೊಗಳಿಕೆಗಳು ಸಂಬಂಧಪಟ್ಟವರಿಗೆ ಎಷ್ಟು ಮುಜುಗರ ಮಾಡಬಹುದೆಂದು ನಾನು ಯೋಚಿಸುತ್ತಾ ಇದ್ದೆ. ಮಧ್ಯೆ ಮಧ್ಯೆ ಅವರ ನಿರೂಪಣೆ ಹರಿಗಡಿಯುತ್ತಾ ಇತ್ತು. ಅದಕ್ಕೆ ಕಾರಣ ಯಾರೋ ಮಂತ್ರಿಗಳು, ಜನ ಪ್ರತಿನಿಧಿಗಳು, ಅಧಿಕಾರಸ್ಥರು ಸಭೆಗೆ ಆಗಮಿಸಿ ಅವರಿಗೆ ಸ್ವಾಗತ ಹೇಳುವ ದರ್ದು ನಿರೂಪಕರಿಗೆ ಉಂಟಾಗುತ್ತಾ ಇತ್ತು. ಅಂತೂ ಸಾಶಿಮ ಅವರ ಉದ್ಘಾಟನ ಭಾಷಣ ಶುರುವಾಯಿತು. ಅದು ಪಂಪನಿಂದ ಮೊದಲ್ಗೊಂಡಿದ್ದರಿಂದ ಇದು ಬಡಪಟ್ಟಿಗೆ ಮುಗಿಯುವ ಭಾಷಣವಲ್ಲ ಎಂಬುದು ನನಗೆ ಗ್ಯಾರಂಟಿಯಾಯಿತು. ಕ್ಲಾಸು ನಡೆಯುತ್ತಿರುವಾಗಲೇ ವ್ಯವಸ್ಥಾಪಕರು ಮಧ್ಯೆ ನುಸುಳಿ ಏನೋ ಪಿಸುಗುಟ್ಟಿದ್ದು ಯಾತಕ್ಕಾಗಿ ಎಂದು ಯಾರೂ ಊಹಿಸಬಹುದಾಗಿತ್ತು.

ಉದ್ಘಾಟನಾ ಭಾಷಣ ಮುಗಿದು, ಉದ್ಘಾಟಕರು ತಮ್ಮ ಕವಿತೆಯನ್ನೂ ಓದಿ, ಅದು ಹೇಗೆ ಜಯದೇವ ಕವಿಯಿಂದ ಸ್ಫೂರ್ತಗೊಂಡಿದೆ ಎಂಬುದನ್ನು ವಿವರಿಸಿದರು. ಲಲಿತ ಲವಂಗ ಮೊದಲಾದ ಸಾಲುಗಳು ಇದ್ದ ಕವಿತೆ ತನ್ನ ಶಬ್ದರತಿಯಿಂದ ಬೆಚ್ಚುಬೀಳಿಸುವಂತಿತ್ತು. ಬಿ.ವಿ.ಶ್ರೀನಿವಾಸರ ಸಂಗೀತ ಸಂಯೋಜನೆ. ನಿತಿನ್ ಅದನ್ನು ಚೆನ್ನಾಗಿಯೇ ಹಾಡಿದರು. ಭರ್ಡಂಡು ಚಪ್ಪಾಳೆಯೂ ಗಿಟ್ಟಿತು. ಆಮೇಲೆ ಮಾಲತಿಪಟ್ಟಣಶೆಟ್ಟಿ, ಜಿ.ಎಸ್.ಸಿದ್ಧಲಿಂಗಯ್ಯ, ಬಿ.ಎ.ಸನದಿ ಮೊದಲಾದವರು ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಸಿದ್ಧಲಿಂಗಯ್ಯ ಮತ್ತು ಮಾಲತಿಯವರ ಪದ್ಯಗಳು ಹಾಡಿಗೆ ಒಗ್ಗುವಂತಿದ್ದವು. ಆದರೆ ಅವುಗಳ ಹಾಡುಗಾರಿಕೆ ಯಾಕೋ ಮನಸ್ಸಿಗೆ ತಟ್ಟಲಿಲ್ಲ.

ಅನಂತಮೂರ್ತಿಗಳು , ಬೇರೆ ಯಾವುದೋ ತುರ್ತು ಕೆಲಸವಿರುವುದರಿಂದ ಈಗ ತಮ್ಮ ಅಧ್ಯಕ್ಷ ನುಡಿಗಳನ್ನು ಆಡುತ್ತಾರೆ ಎಂದು ನಿರೂಪಕರು ಸೂಚಿಸಿದರು. ಅನಂತಮೂರ್ತಿ ನಿಧಾನಗತಿಯಲ್ಲಿ ಪೋಡಿಯಮ್ ಸಮೀಪಿಸಿ ” ನನಗೆ ಅಂಥ ತುರ್ತುಕೆಲಸ ಎಂಥದೂ ಇಲ್ಲ. ಕನ್ನಡದ ಕೆಲಸದ ಮುಂದೆ ಬೇರೆ ಯಾವ ಕೆಲಸವೂ ನನಗೆ ತುರ್ತಿನದಲ್ಲ. ನಾನು ಬೇಗ ಹೋಗಬೇಕಾಗಿರುವುದು ನನ್ನ ಅನಾರೋಗ್ಯದಿಂದ….” ಎನ್ನುತ್ತಾ ತಮ್ಮ ಮಾತು ಶುರು ಮಾಡಿದರು.

ಕವಿತೆಯನ್ನು ಹಾಡುವ ಬಗ್ಗೆ ಅವರಿಗೆ ಅಂತಹ ಉತ್ಸಾಹವಿಲ್ಲವೆನ್ನುವುದು ಅವರ ಮಾತಿನ ಧಾಟಿಯಿಂದ ಸ್ಪಷ್ಟವಾಗುವಂತಿತ್ತು.ಅಮೆರಿಕಾದಂಥ ಕಡೆ ಹಾಡಿನಿಂದ ಕನ್ನಡ ಉಳಿದಿದೆ. ಆದುದರಿಂದ ಹಾಡಿಗೆ ಅದರದೇ ಆದ ಮಹತ್ವ ಇದೆ ಎಂದರು. ನನಗೆ ಸ್ಪಷ್ಟ ಗೊತ್ತಿದೆ. ಅಮೆರಿಕಾದ ಮಾತು ಇರಲಿ. ಕರ್ನಾಟಕದಲ್ಲೂ ಕನ್ನಡ ಓದದ ಬರೆಯದ ಅನೇಕರು, ಭಾವಗೀತೆಗಳನ್ನು ಹಾಡುತ್ತಾ, ಕೇಳುತ್ತಾ ಕಿಂಚಿತ್ಪ್ರಮಾಣದಲ್ಲಿಯಾದರೂ ಕನ್ನಡಕಾವ್ಯದ ಸಂಪರ್ಕ ಉಳಿಸಿಕೊಂಡಿದ್ದಾರೆ ಎನ್ನುವುದು ಕಟು ವಾಸ್ತವದ ಮಾತು. ಅನಂತಮೂರ್ತಿ ಹೇಳಿದ ಒಂದು ಸೂಕ್ಷ್ಮ ಸಂಗತಿ ಕಡೆ ನಿಮ್ಮ ಗಮನ ಸೆಳೆಯಬೇಕಾಗಿದೆ. ಕವಿತೆಯ ಭಾಷೆಯಲ್ಲೇ ಅದರ ಸಂಗೀತವೊಂದು ಇರುತ್ತದೆ. ಹಾಗಾಗಿ ಹೊರಗಿನಿಂದ ಅದಕ್ಕೆ ಸಂಗೀತದ ಆರೋಪ ಮಾಡಿದ್ದಾದರೆ, ಅದರ ಒಳ ಸಂಗೀತ ನಮ್ಮ ಕಿವಿತಪ್ಪಬಹುದು.

ಸುಮಾರಾದ ಹಾಡೂ ಹಾಡುಗರ ಸಾಮರ್ಥ್ಯದಿಂದ ಕೇಳುಗರಿಗೆ ಇಷ್ಟವಾಗಿಬಿಡಬಹುದು! ಇದು ಹಾಡಿದಾಗ ಮಾತ್ರ ಆಗುವ ಅಪಾಯವಲ್ಲ. ಓದುವಾಗ ಕೂಡ. ಚೆನ್ನಾಗಿ ಓದಬಲ್ಲವನು ಸುಮಾರದ ಕವಿತೆಯನ್ನು ತನ್ನ ಓದಿನ ಚಾತುರಿಯಿಂದ ಒಳ್ಳೆಯ ಕವಿತೆಯೆಂಬ ಭ್ರಮೆ ಮೂಡುವಂತೆ ನಿಭಾಯಿಸಿಬಿಡಬಹುದು. ಆದುದರಿಂದ ಭಾವನೆಯನ್ನು ಅತಿಮಾಡದೆ ಒಂದು ಮಧ್ಯಮ ಹದದಲ್ಲಿ ಕವಿತೆ ವಾಚಿಸುವ ಉಪಕ್ರಮ ನಮ್ಮಲ್ಲಿ ಪ್ರಾರಂಭವಾಗಬೇಕು. ಬೇಂದ್ರೆ ತೀರ ಹಾಡಾಗದಂತೆ, ಬರೀ ಓದೂ ಆಗದಂತೆ ಒಂದು ವಿಶಿಷ್ಟ ಹದದಲ್ಲಿ ಕಾವ್ಯ ವಾಚನ ಮಾಡುತ್ತಿದ್ದರು. ಹಾಗೇ ಕೆ.ಎಸ್.ನ. ಕೂಡ ಅತಿಮಾಡದಂತೆ ಕವಿತೆಯ ಓದನ್ನು ನಿಭಾಯಿಸುತ್ತಾ ಇದ್ದರು…..

ಅನಂತಮೂರ್ತಿ ಯಾವಾಗಲೂ ತಮ್ಮ ಮಾತಿನಿಂದ ನಮ್ಮ ಮನಸ್ಸು ಯೋಚನೆಯಲ್ಲಿ ಅದ್ದುವಂತೆ ಮಾತಾಡುತ್ತಾರೆ. ಇಷ್ಟು ಸಂಗತಿ ಅವರು ಹೇಳುವ ವೇಳೆಗೆ ನಾನು ನನ್ನ ಏಕಾಂತಕ್ಕೆ ಮುಳುಗಲಿಕ್ಕೆ ಪ್ರಾರಂಭಿಸಿದ್ದೆ. ಹಾಡು ನನ್ನ ಮನಸ್ಸನ್ನು ಬಹಳ ಹಿಂದೆಯೇ ಹೊಕ್ಕಿತ್ತು. ನಾನಿನ್ನೂ ಮಗುವಾಗಿದ್ದಾಗಲೇ ನನ್ನ ಅಮ್ಮ ದಾಸರ ಪದಗಳನ್ನು ಹಾಡಿ ನನ್ನನ್ನು ತೂಗಿ ಮಲಗಿಸುತ್ತಾ ಇದ್ದರು. ಅದರಲ್ಲೂ ಅಮ್ಮಾ ನಿಮ್ಮಾ ಮನೆಗಳಲ್ಲಿ ನಮ್ಮ ಕೃಷ್ಣನ ಕಂಡಿರೇನಮ್ಮಾ…ಎಂಬ ಪುರಂದರರ ಹಾಡು ನನಗೆ ತುಂಬಾ ಪ್ರಿಯವಾಗಿತ್ತಂತೆ. ಆ ಹಾಡು ಹೇಳದೆ ನಾನು ಮಲಗುತ್ತಲೇ ಇರಲಿಲ್ಲವಂತೆ.  ನಾನು ಹುಡುಗನಿದ್ದಾಗ ಪ್ರತಿ ಶನಿವಾರ ನಮ್ಮ ಮನೆಗೆ ಒಬ್ಬ ದಾಸರು ಬರುತ್ತಾ ಇದ್ದರು. ಅವರು ಬಾಗಿಲಿಗೆ ಬಂದವರೇ ಮಂತ್ರಹೇಳಿದಂತೆ ದೇವರುಗಳ ಹೆಸರನ್ನೂ ಅವರವರ ಕ್ಷೇತ್ರಗಳ ಹೆಸರುಗಳನ್ನೂ ಜೋಡಿಸಿ ರಾಗವಾಗಿ ಹೇಳುತ್ತಾ ಇದ್ದರು. ತಿರುಪತಿ ತಿಮ್ಮಪ್ಪ, ಬೇಲೂರು ಚೆನ್ನ ಕೇಶವ, ಮೇಲುಕೋಟೆ ಚೆಲುವ ನಾರಾಯಣ, ಹಂಪೀ ವಿರುಪಾಕ್ಷ, ಕಾಶೀ ವಿಶ್ವನಾಥ, ಕಂಚೀ ಕಾಮಾಕ್ಶಿ, ಮಧುರೆ ಮೀನಾಕ್ಷಿ, ಕೊಲ್ಲಾಪುರದ ಮಹಾಲಕ್ಷ್ಮೀ…ಹೀಗೆ. ನಾವು ಹುಡುಗರು ಈ ಪಟ್ಟಿಯನ್ನು ಬಾಯಿ ಪಾಠ ಮಾಡಿದ್ದೆವು! ಹೀಗೆ ಅನೇಕ ದೇವಾನುದೇವತೆಗಳ ನಾಮಸ್ಮರಣೆ ಮಾಡಿದ್ದಾದ ಮೇಲೆ, ತಮ್ಮ ಭವನಾಶಿಯನ್ನು ಕೆಳಕ್ಕಿಳಿಸಿ, ದೀಪದ ಕಂಭವನ್ನು ಜಗಲಿಯ ಮೇಲಿಟ್ಟು, ಭೋಂ ಭೋಂ ಎಂದು ಶಂಖ ಪೂರೈಸಿ, ಹೊಸ್ತಿಲು ದಾಟಿ ಒಳಕ್ಕೆ ಬರುತ್ತಾ ಇದ್ದರು.

ಅವರು ಶಂಖ ಊದುವಾಗ ಅವರ ಕಣ್ಣು ನೆತ್ತಿಯಲ್ಲಿ ಸಿಕ್ಕಿಕೊಳ್ಳುತ್ತಾ ಇದ್ದವು. ಗಂಟಲ ನರಗಳು ಇಷ್ಟು ದಪ್ಪಕ್ಕೆ ಉಬ್ಬುತ್ತಾ ಇದ್ದವು. ತಲೆ ಹಿಂದಕ್ಕೆ ತುಸು ಬಾಗಿ, ಮುಖ ಆಕಾಶಕ್ಕೆ ಎತ್ತಿಕೊಳ್ಳುತ್ತಾ ಇತ್ತು. ನಾನು ದಾಸರ ಶಂಖವಾದನವನ್ನು ಕೇಳುತ್ತಾ ಮೈಮರೆಯುತ್ತಾ ಇದ್ದೆ. ನಮ್ಮ ದೇವರ ಮನೆಯಲ್ಲೂ ಒಂದು ಶಂಖವಿತ್ತು. ತೀರ್ಥ ಹಾಕುವುದಕ್ಕೆ ನಮ್ಮ ಅಜ್ಜ ಅದನ್ನ ಉಪಯೋಗಿಸುತ್ತಾ ಇದ್ದರು. ಅದನ್ನು ನಾನು ಅಜ್ಜನ ಪೂಜೆಯ ವೇಲೆ, ಒದ್ದೆ ಲಂಗೋಟಿಯಲ್ಲಿ ಬಂದು ಊದಲು ಯತ್ನಿಸುತ್ತಿದ್ದೆ. ಒಮ್ಮೆ ಕೂಡ ಅದು ಭೋಂ ಭೋಂ ಎಂದು ಸದ್ದು ಮಾಡಲಿಲ್ಲ. ಗಂಟೆ ಅಲ್ಲಾಡಿಸಬಹುದು. (ಮೊದಮೊದಲು ಎಡಗೈ ಗಂಟೆ ಬಡಿಯುತ್ತಾ ಇದ್ದರೆ ಬಲಗೈಕೂಡಾ ಅಟೋಮ್ಯಾಟಿಕ್ ಆಗಿ ತಾನೂ ಅಲ್ಲಾಡುತ್ತಾ ಇತ್ತು!). ಜಾಂಗಟೆ ಭಜಾಯಿಸಬಹುದು. ಆದರೆ ಈ ಶಂಖ ಊದುವುದಿದೆ ನೋಡಿ , ಅದು ಬಲು ಕಷ್ಟದ ಕೆಲಸ!(ನಿಸಾರ್ ಅವರ ಪದ್ಯದ ಶೈಲಿಯಲ್ಲಿ ಹೇಳುವುದಾದರೆ!). ನಮ್ಮ ಅಜ್ಜನಿಗೆ ಊದುವುದಾಗುತ್ತೆ, ನನಗ್ಯಾಕೆ ಆಗೋದಿಲ್ಲ ಎಂದು ನಾನು ಆಶ್ಚರ್ಯಪಡುತ್ತಿದ್ದೆ.

ದಾಸರು ಶಂಖ ಪೂರೈಸಿದ್ದಾದಮೇಲೆ, ಪದವೊಂದನ್ನು ಹಾಡುತ್ತಾ ಇದ್ದರು. ಅಜ್ಜಿ ಬಂದು ಅವರ ದೀಪದ ಕಂಭಕ್ಕೆ ಎಣ್ಣೆ ಹಾಕಿ, ಆ ಕಂಭಕ್ಕೆ ಲಗತ್ತಿಸಿದ್ದ ಹಿತ್ತಾಳೆ ಆಂಜನೇಯನಿಗೆ ಅರಿಸಿನ ಕುಂಕುಮ ಅಂಟಿಸುತ್ತಾ ಇದ್ದಳು. ಜೊತೆಗೆ ಒಂದು ಮೊರದಲ್ಲಿ ಎರಡು ಹಿಡಿ ಅಕ್ಕಿ, ಮತ್ತು ನಾಕಾಣೆ ದಕ್ಷಿಣೆ ಎಲೆ ಅಡಕೆ ಸಮೇತ ಕೊಡುತ್ತಾ ಇದ್ದಳು.( ದಾಸರು, ಜೋಗಿಗಳು, ಹಗಲು ವೇಷದವರು,  ಜುಂಜಪ್ಪ, ಊರುಮಾರಿಯವರು ಬಂದಾಗ ಅವರಿಗೆ ಕೊಡುವುದಕ್ಕೆಂದೇ ಅಕ್ಕಿ ಮಾಡಿ ಉಳಿದಿದ್ದ ನುಚ್ಚಕ್ಕಿಯನ್ನು ನಮ್ಮ ಅಜ್ಜಿ ಬೇರೆ ಡಬ್ಬವೊಂದರಲ್ಲಿ ಇಟ್ಟಿರುತ್ತಾ ಇದ್ದಳು!). ಕಾಳ ಬೆಳದಿಂಗಳೂ -ಈ ಸಂಸಾರ- ಬೆಳದಿಂಗಳು ಕತ್ತಲು…ಈ ಹಾಡನ್ನು ನಮ್ಮ ದಾಸರ ಬಾಯಲ್ಲಿ ಕೇಳಬೇಕು! ಅದೆಲ್ಲಾ ನನಗೆ ಬಾಯಿಪಾಠವಾಗಿಹೋಗಿತ್ತು. ನಾನು ಸ್ಕೂಲಲ್ಲಿ ಆ ಹಾಡುಗಳನ್ನು ಹೇಳಿ ನನ್ನ ಮೇಷ್ಟ್ರಿಂದ (ನಾಗಪ್ಪ ಮೇಷ್ಟ್ರು…ಅವರ ತಲೆಗೂದಲು ಮೆಟ್ಟಿಲು ಮೆಟ್ಟಿಲಾಗಿ ಇಳಿದಿತ್ತು. ಕೆಂಪಗೆ ಎತ್ತರಕ್ಕೆ ಇದ್ದರು. ನಾವು ಅವರನ್ನು ಕುವೆಂಪು ಕುವೆಂಪು ಅಂತ ಕರೆಯುತ್ತಾ ಇದ್ದೆವು)ಭೇಷ್ ಎನ್ನಿಸಿಕೊಳ್ಳುತ್ತಿದ್ದೆ. ಉಪ್ಪಾರ ಕೇರಿಯಲ್ಲಿ ವೀರಶೈವರ ಭಜನಾಮಂಡಲಿ ಇತ್ತು. ನಾನು ರಾತ್ರಿ ಭಜನೆ ಮನೆಗೆ ಅಜ್ಜನ ಜತೆ ಹೋಗುತಾ ಇದ್ದೆ. ಅವರು ತತ್ವಪದಗಳನ್ನು ಹಾಡುತಾ ಇದ್ದರು. ಪಕ್ಕವಾದ್ಯ ಒಂದು ಹಾರ್ಮೋನಿಯಮ್; ಒಂದು ಮೃದಂಗ, ಒಂದು ದಮಡಿ; ಇನ್ನೊಂದು ಝಕ್ ಝಕ್ ಎಂದು ಕೈಯಲ್ಲಿ ಹಿಡಿದು ತಾಳ ಝಲ್ ಝಲ್ ಸದ್ದು ಮಾಡುವ ಒಂದು ಬಗೆಯ ವಿಚಿತ್ರ ವಾದನ.

ಜೋಗಪ್ಪ ಬಂದಾಗ ಅವನ ಬಳಿ ಒಂದು ಕಿಂದರಿ ಇರುತ್ತಾ ಇತ್ತು. ಒಂದು ಕೋಲಿನ ಒಂದು ತುದಿಯಲ್ಲಿ ಚರ್ಮದ ಸೇರಿನಂಥ ಆಕೃತಿ. ಇನ್ನೊಂದು ತುದಿಯಲ್ಲಿ ತಂತಿ ಬಿಗಿಮಾಡುವ ಮರದ ತಿರುಪು. ಚರ್ಮದಿಂದ ತಂತಿ ಎಳೆದು ತಿರುಪಿಗೆ ಸುತ್ತಿ ಬಿಗಿಮಾಡಿಕೊಳ್ಳುತ್ತಾ ಇದ್ದರು. ಟಿಂಗ್ ಟಿಂಗ್ ಎಂದು ತಂತಿಯನ್ನು ಬೆಂಕಿಕಡ್ಡಿಯಲ್ಲಿ ಮೀಟಿ ಸದ್ದು ಮಾಡುತ್ತಾ ಅವನು ಅರ್ಜುನ ಜೋಗಿ ಕಥೆ ಹೇಳುತಾ ಇದ್ದನು.  ನಾನು ನನಗೂ ಅಂಥದೊಂದು ಕಿಂದರಿ ಬೇಕು ಅಂತ ನಮ್ಮ ಅಜ್ಜನಿಗೆ ಗಂಟು ಬೀಳುತಾ ಇದ್ದೆ. ನನ್ನ ಕಾಟ ತಡೆಯಲಾರದೆ ಅಜ್ಜ ಕಪ್ಪೆಯ ಚರ್ಮವನ್ನು ತುರಿದ ತೆಂಗಿನ ಚಿಪ್ಪಿಗೆ ದಮಡಿಯಂತೆ ಅಂಟಿಸಿ. ಚಿಪ್ಪಲ್ಲಿ ಒಂದಿ ಬಿದುರಿ ತೂರಿಸಿ, ತಂತಿಕಟ್ಟಿ ಒಂದಿ ಕಿಂದರಿ ಮಾಡಿಕೊಟ್ಟಿದ್ದರು. ನಾವು ಹುಡುಗರೆಲ್ಲಾ ಸೇರಿ ಹಿತ್ತಲ ಜಗಲಿಯಮೇಲೆ ನಾವೇ ಕಟ್ಟಿಕೊಂಡಿದ್ದ ಹನುಮಂತನ ಗುಡಿಯ ಮುಂದೆ ಕೂತು ಭಜನೆ ಕುಟ್ಟುತ್ತಾ ಇದ್ದೆವು!

ಸುಗ್ಗಿ ಮುಗಿದ ಮೇಲೆ ನಮ್ಮೂರಲ್ಲಿ ಬಯಲಾಟದ ಪ್ರಾಕ್ಟೀಸು ಪ್ರಾರಂಭವಾಗುತ್ತಿತ್ತು. ಗಂಗೂರಿಂದ ಶ್ರೀನಿವಾಸಯ್ಯ ನಾಟಕ ಕಲಿಸೋಕೆ ಬರತಾ ಇದ್ದರು. ಅವರನ್ನು ಮೇಷ್ಟ್ರು ಮೇಷ್ಟ್ರು ಅಂತ ಕರೀತಿದ್ದರು. ನಮ್ಮ ಅಜ ನನ್ನನ್ನು ಹತ್ತು ಗಂಟೆ ಮೇಲೆ ಪ್ರಾಕ್ಟೀಸ್ ಮನೆಗೆ ಕರಕೊಂಡು ಹೋಗುತಾ ಇದ್ದರು. ಕರ್ಣಾರ್ಜುನ ಕಾಳಗದ ಪ್ರಾಕ್ಟೀಸು. ಕಬ್ಬ್ಯಾರ ಶಂಕರಣ್ಣ ಕರ್ಣನ ಪಾತ್ರ ಮಾಡಿದ್ದ. ಅವನು ಮೃದಂಗದ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಗತ್ತು ನನ್ನನ್ನು ಮೋಡಿ ಮಾಡುತಾ ಇತ್ತು. ಮನೆಗೆ ಬಂದು ನಾನೂ ಹಾಗೇ ಹೆಜ್ಜೆ ಹಾಕುತಾ ಇದ್ದೆ.

ನಮ್ಮ ಭೀಮಜ್ಜಿಯಂತೂ ಕಥೆಯ ಗಣಿಯಾಗಿದ್ದಳು. ಅವಳ ಹಾಡಿನ ಪುಸ್ತಕದಲ್ಲಿ ಗಂಟೆಗಟ್ಟಲೆ ಹಾಡಬಹುದಾದ ಹಾಡುಗಳು ಇದ್ದವು. ಸುಭದ್ರಾಕಲ್ಯಾಣ, ಕೃಷ್ಣ ಪಾರಿಜಾತ ಅವಳಿಗೆ ಬಾಯಿಗೇ ಬರುತಾ ಇತ್ತು. ನಮ್ಮ ಕೇರಿಯಲ್ಲಿ ಯಾರ ಮನೆಯಲ್ಲಿ ಹಪ್ಪಳ ಲಟ್ಟಿಸಬೇಕಾದರೂ ಕೇರಿಯ ಹೆಂಗಸರೆಲ್ಲಾ ಅಲ್ಲಿ ಹಪ್ಪಳ ಒತ್ತುವುದಕ್ಕೆ ಸೇರುತಾ ಇದ್ದರು. ಇದೊಂದು ಸಹಕಾರ ಪದ್ಧತಿ. ಅವರ ಮನೆಗೆ ಹಪ್ಪಳ ಒತ್ತೋದಕ್ಕೆ ಇವರು ಹೋಗುತಾ ಇದ್ದರು. ಹಾಗೇ ಇವರ ಮನೆಗೆ ಅವರು. ಮಧ್ಯಾಹ್ನ ಊಟವಾದ ಮೇಲೆ ಹಪ್ಪಳ ಒತ್ತುವುದಕ್ಕೆ ಶುರು ಹಚ್ಚಿದರೆ ಬಿಸಿಲು ಇಳಿಯುವ ತನಕ ಈ ಗೃಹ ಕೈಗಾರಿಕೆ ನಡೆಯುತಾ ಇತ್ತು. ಆಗೆಲ್ಲಾ ನಮ್ಮ ದೊಡ್ಡಜ್ಜಿ ಸುಭದ್ರಾಕಲ್ಯಾಣದ ಹಾಡು ಹೇಳುತಾ ಇದ್ದಳು. ನಾನು ಅಜ್ಜಿಗೆ ಹೇಳಿದೆ. ನೀನು ಯಾವಾಗಲೂ ಹಾಡಿದ್ದೇ ಹಾಡುತಿ. ಬೇರೆ ಹಾಡು ಯಾಕೆ ಹಾಡೋದಿಲ್ಲ? ದೊಡ್ಡಜ್ಜಿ ನಗುತ್ತಾ ನನ್ನ ಮೂತಿ ತಿವಿದು, ನೀನು ಬರಕೊಡು…ಹಾಡ್ತೀನಿ…!ನನಗೆ ಅದೊಂದು ಸವಾಲು. ಮಾಯವಾದ ಮದುಮಗಳು ಬರೆದು ಕೈ ಸ್ವಲ್ಪ ಪಳಗಿತ್ತಲ್ಲ! ನೋಡೋಣ ಒಂದು ಕೈ ಅಂದುಕೊಂಡು ನಾನು ದ್ರೌಪದಿ ಕಲ್ಯಾಣ ಬರೆದೆ. ಅದನ್ನು ನಮ್ಮಜ್ಜಿ ಒಮ್ಮೆ ಹಾಡಿಯೂ ಬಿಟ್ಟಳು ಎನ್ನಿ! ಆದರೆ ಯಾಕೋ, ಉಳಿದ ಹೆಣ್ಣೂ ಮಕ್ಕಳು ನನ್ನ ರಚನೆಯನ್ನು ಇಷ್ಟ ಪಡದೆ , ಮತ್ತೆ ಸುಭದ್ರಾ ಕಲ್ಯಾಣಕ್ಕೇ ಅಂಟಿಕೊಂಡರು!

ನನಗೆ ಹಾಡು ಒಂದು ಬಹಿರಂಗದ ಫ್ಯಾಶನ್ನಲ್ಲ. ಅಂತರಂಗದ ಚಡಪಡಿಕೆ. ನಾನು ಬರೆದ ಹಾಡುಗಳಲ್ಲಿ ಕಾವ್ಯತ್ವ ಇದೆಯೋ ಇಲ್ಲವೋ ನನಗೆ ತಿಳಿಯದು! ನನ್ನ ಕವಿತೆಯನ್ನು ಓದುವವರು, ಮೆಚ್ಚುವವರು ನನ್ನ ಹಾಡನ್ನೂ ಕೇಳಿದ್ದಾರೆಯೇ, ಮೆಚ್ಚಿದ್ದಾರೆಯೇ ನನಗೆ ತಿಳಿಯದು. ನನ್ನ ಹಾಡುಗಳಲ್ಲಿ ಅದರದ್ದೇ ಭಾಷಾ ಸಂಗೀತ ಇದೆಯೇ? ನಾನು ಯೋಚಿಸಿಲ್ಲ. ಇಷ್ಟುಕಾಲ, ಲೋಕದ ಕಣ್ಣಿಗೆ, ಹುಚ್ಚು ಖೋಡಿ ಮನಸು- ಇಂಥ ನೂರಾರು ಹಾಡುಗಳನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡು ಬರೆದಿದ್ದೇನೆ. ಹಾಗೇ ನನ್ನ ಮಕ್ಕಳ ಹಾಡುಗಳು. ನನ್ನ ಹಾಡುಗಳನ್ನು ಅನಂತಸ್ವಾಮಿ, ಅಶ್ವಥ್, ರತ್ನಮಾಲಪ್ರಕಾಶ್, ನರಸಿಂಹನಾಯಕ್, ಪಲ್ಲವಿ, ಅರ್ಚನ, ಸಂಗೀತಾಕಟ್ಟಿ ಮೊದಲಾದವರು ಹಾಡಿದಾಗ ನನ್ನ ಅರಿವಿಲ್ಲದೇ ನನ್ನ ಕಣ್ಣಂಚು ಒದ್ದೆಯಾದದ್ದಿದೆ. ಏಕಾಂತದಲ್ಲಿ ಬೇಂದ್ರೆ, ಕುವೆಂಪು, ಕೆ ಎಸ್ ನ, ಜಿ ಎಸ್ ಎಸ್ ಮೊದಲಾದವರ ಹಾಡುಗಳನ್ನು ಅದೆಷ್ಟು ಬಾರಿ ಕೇಳಿ ತನ್ಮಯಗೊಂಡಿದ್ದೇನೋ. ಇದು ಯಾರನ್ನೂ ಮೆಚ್ಚಿಸುವುದಕ್ಕಲ್ಲ. ಜನಪ್ರೀತಿಯ ಹುಚ್ಚಿಗಾಗಿಯಲ್ಲ. ಏಕಾಂತದಲ್ಲಿ ಮೈ ಮರೆಯುವ ಕ್ಷಣಗಳು ನಿಜಕ್ಕೂ ಪವಿತ್ರವಾಗಿರುತ್ತವೆ; ಪ್ರಾಮಾಣಿಕವಾಗಿರುತ್ತವೆ….

 

‍ಲೇಖಕರು avadhi

February 8, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Sushrutha

    ಗದ್ದಲದ ಸಾಹಿತ್ಯ ಸಮ್ಮೇಳನದಲ್ಲೂ ನಿಮ್ಮನ್ನಾವರಿಸಿದ ಏಕಾಂತ, ಅದರಲ್ಲಿ ಮೂಡಿದ ನೆನಪುಗಳು -ತುಂಬ ಚೆನ್ನಾಗಿವೆ ಸರ್.. ನಮ್ಮನ್ನೂ ಮೈಮರೆಸಿತು.

    ಪ್ರತಿಕ್ರಿಯೆ
  2. Panduranga

    ಮೂರ್ತಿಗಳೇ, ಸೊಗಸಾಗಿ ಬರೆದಿದ್ದೀರಿ, ಸಾಹಿತ್ಯ ಮತ್ತು ಸಂಗೀತ ಬಲು ಹಿತವಾದ ಜೋಡಿ. ಸಾಹಿತ್ಯವನ್ನು ತಲುಪಿಸುವ ಶಕ್ತಿ ಸಂಗೀತ.

    ಪ್ರತಿಕ್ರಿಯೆ
  3. Tejaswini Hegde

    ಬರಹ ತುಂಬಾ ಮೆಚ್ಚುಗೆಯಾಯಿತು. ಒಂದು ಕ್ಷಣ ನಾನೂ ಆ ಏಕಾಂತದೊಳಗೆ ಕಳೆದುಹೋದೆ!

    ಪ್ರತಿಕ್ರಿಯೆ
  4. ಆತ್ರಾಡಿ ಸುರೇಶ ಹೆಗ್ಡೆ

    ಆತ್ಮೀಯರೇ,
    “ಏಕಾಂತದಲ್ಲಿ ಮೈ ಮರೆಯುವ ಕ್ಷಣಗಳು ನಿಜಕ್ಕೂ ಪವಿತ್ರವಾಗಿರುತ್ತವೆ; ಪ್ರಾಮಾಣಿಕವಾಗಿರುತ್ತವೆ”.

    ತಮ್ಮ ಈ ಮಾತು ನೂರಕ್ಕೆ ನೂರು ನಿಜ.

    ಆ ಏಕಾಂತ ಜನನಿಬಿಡ ಜಾತ್ರೆಯ ನಡುವೆಯೂ ಆಗಿರಬಹುದು. ಮೇಳ ಸಮ್ಮೇಳನಗಳ ನಡುವೆಯೂ ಆಗಿರಬಹುದು. ಯಾವುದೋ ಪ್ರಯಾಣದ ನಡುವೆಯೂ ಆಗಿರಬಹುದು.

    ಅಂಥಹದೇ ಆದ ಯಾವುದೋ ಕ್ಷಣಗಳಲ್ಲಿ, ಸೃಜನಶೀಲ ಒಳ ಮನಸ್ಸು ಹೊಸದೊಂದು ಕವಿತೆ, ಹೊಸದೊಂದು ಬರಹವನ್ನು ತನ್ನೊಳಗೆ ರೂಪಗೊಳಿಸಲು ಆರಂಭಿಸುತ್ತದೆ.

    ಪ್ರತಿಕ್ರಿಯೆ
  5. ರಾಮಚಂದ್ರ ನಾಡಿಗ್

    ಸಮ್ಮೇಳನದಲ್ಲಿ ನೀವೆಲ್ಲಾದ್ರೂ ಕಾಣ್ತೀರಾ ಅಂತಾ ನೋಡ್ದೆ… ನಾನ್ ಹೋದಾಗ್ಲಂತೂ ನೀವು ಕಾಣ್ಲಿಲ್ಲ… ಇನ್ನು ಸಮ್ಮೇಳನದ ಅನುಭವದ ಮಾತಿನ ನಂತರ ನೀವು ಮತ್ತೆ ಎಂದಿನಂತೆ ಬಾಲ್ಯದ ನೆನಪುಗಳನ್ನು ನಮ್ಮ ಮುಂದಿಟ್ಟಿರೋದು ಬಾಳಾ ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: