
ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯ ಭೋರ್ಗರೆತ.
ದಿಕ್ಕೇ ಬದಲಾಯಿಸಿ, ಇತಿಹಾಸ, ಭೂಪಟ, ನಂಬಿಕೆಯ ಸೆಲೆಯನ್ನೇ ಮತ್ತೊಮ್ಮೆ ಸೃಷ್ಟಿಸುತ್ತೇನೆ ಎನ್ನುವ ವಿಶ್ವಾಮಿತ್ರ ಛಲ.
ಹಾಗಾದರೆ ಇದು “ತ್ರಿಶಂಕು ಭಾರತದ” ಸೃಷ್ಟಿಯೇ?
ಹೀಗೆ ಇದ್ದಕ್ಕಿದ್ದಂತೆ ಅನ್ನಿಸತೊಡಗಿದೆ. ನೇರವಾಗಿ ವಿಷಯಕ್ಕೆ ಬರೋಣ.
ಎಲ್ಲ ಹಂತದಲ್ಲೂ ಅಧಿಕಾರದ ಅಮಲು, ಘಮಲು ಎಲ್ಲವನ್ನೂ ಒಟ್ಟಿಗೆ ಏರಿಸಿಕೊಂಡು ದಾಪುಗಾಲು ಹಾಕುತ್ತಿರುವ ಕೇಸರಿ ಪಕ್ಷದ, ಸರಕಾರದ, ಪ್ರತಿ ನಡೆಯು ಮುಂದೇನು ಎನ್ನುವ ಕುತೂಹಲ ಸೃಷ್ಟಿಸುತ್ತಿದೆ.
ಈ ಕುತೂಹಲದಲ್ಲಿ ಒಂದು ವರ್ಗದ ವಿಜೃಂಭಣೆ ಇದ್ದರೆ, ಮತ್ತೊಂದು ವರ್ಗದ ಆತಂಕ.
ಕಾಶ್ಮೀರದಲ್ಲಿ ೩೭೦ ವಿಧಿ ರದ್ದಾಯಿತು.
ಪ್ರಣಾಳಿಕೆಯಲ್ಲಿ ಕೊಟ್ಟ ಮಾತು ಈಡೇರಿತು.
ದಶಕಗಳ ಕಾಲದ “ಕನಸು ನನಸಾಯಿತು ”
ಆಯೋಧ್ಯೆ ರಾಮಜನ್ಮಭೂಮಿ ದೇಗುಲ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ್ದಾಯಿತು.
ದೇಗುಲ ಕಟ್ಟುವ ಭರವಸೆ ಈಡೇರಲು ಅಖಾಡ ಸಜ್ಜಾಯಿತು.
“ಕೊಟ್ಟ ಮಾತು” ಜಾರಿಯಾಯಿತು.

ಇನ್ನೇನು ಬೇಕು? ಭವ್ಯ ಭಾರತ ನಿರ್ಮಾಣಕ್ಕೆ ಇವೆಲ್ಲ ಸೋಪಾನವಲ್ಲವೆ?
ಸ್ವರ್ಗಕ್ಕೆ ಎರಡು ಗೇಣು ಆಯ್ತು.. ಇನ್ನು ಒಂದು ಗೇಣು ಬಾಕಿ ಅಲ್ಲವೇ?
ಇದು ಬದಲಾದ ಚಿತ್ರಣದ ಒಂದು ಸ್ಯಾಂಪಲ್ ಅಷ್ಟೇ.
ಇಲ್ಲಿ ಸರಿ ತಪ್ಪು ಅನ್ನುವುದಕ್ಕಿಂತ ಹೆಚ್ಚಾಗಿ ಎಲ್ಲವೂ ನಾಜೂಕಾಗಿ, ಕಾನೂನಿನ ವ್ಯಾಪ್ತಿಯಲ್ಲೇ ಆಗುತ್ತಿದೆ.
ಗೆಳೆಯರೊಬ್ಬರು ಮಾರ್ಟಿನ್ ಲೂಥರ್ ರನ್ನು ಉಲ್ಲೇಖಿಸಿ ಬರೆದದ್ದು ನೆನಪಾಯಿತು.
“ಕೆಲವೊಮ್ಮೆ ನ್ಯಾಯಕ್ಕಿಂತ… ಶಾಂತಿ ಮುಖ್ಯ.. ”
ಭಾರತದಲ್ಲೂ ಹಾಗೆ ಆಗಿರುವುದು. ಭಾರತ ನೆಮ್ಮದಿಯ ಹುಡುಕಾಟದಲ್ಲಿದೆ. ಇಲ್ಲಿ ಶಾಂತಿ ಬೇಕಾಗಿದೆ.
ಒಂದು ವರ್ಗ ಕಾನೂನಿನ ಹಗ್ಗ ಹೊಸೆಯುತ್ತಿದ್ದರೆ, ಮತ್ತೊಂದು ವರ್ಗ ಶಾಂತಿಯ ಹುಡುಕಾಟದಲ್ಲಿ ಇದೆ.
ಇಂಥ ಸತತ ಹುಡುಕಾಟದ ಮಧ್ಯೆ ಇದೀಗ ಮತ್ತೊಂದು ಆಟ.
ಇದೇ.. ಮೂರನೇ ಆಟ…
ಹೊಸ ತಂತ್ರ
ಹೊಸ ಮಂತ್ರ ದೊಂದಿಗೆ ಭಾರತದ ಗಮನ (ಬೇರೆಡೆ) ಸೆಳೆಯಲು
ಸಿದ್ದವಾಗಿದೆ..
ಅದುವೇ “ಒಂದೇ ಭಾರತ” ಅರ್ಥಾತ್ “one India”.
ಭಾರತವನ್ನು ಒಂದೇ ಕಾನೂನಿನ ಮೂಲಕ ಬೆಸೆಯುವ, ಮುಸ್ಲಿಂ ವೈಯಕ್ತಿಕ ಕಾನೂನು ರದ್ದು ಮಾಡುವ, ಮತ್ತೊಮ್ಮೆ ಸುಪ್ರೀಂ ಆದೇಶ ಪರಿಪಾಲನೆಯ ಘೋಷವಾಕ್ಯ ಹೊರಡಿಸುವ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನುವ ತಾರತಮ್ಯ ತೊಡೆದು ಹಾಕುತ್ತಾ.. “ನಾವೆಲ್ಲ ಒಂದೇ’ ಎಂದು ಭಾರತದ ಉದ್ದಗಲಕ್ಕೂ ಸಾರುವ “ಮಹಾತಂತ್ರ” ವೆ ಒಂದೇ ಭಾರತ.
ಏನಿದು ಒಂದೇ ಭಾರತ ?
ಭಾರತ ಒಂದೇ.. ಅದರಲ್ಲೇನು ವಿಶೇಷ ? ಎನ್ನುವಿರಾ…
ಅದುವೇ ಆಪರೇಶನ್ ಯು.ಸಿ.ಸಿ.
ಆಪರೇಶನ್ ಯೂನಿಫಾರ್ಮ್ ಸಿವಿಲ್ ಕೋಡ್.
ಕಾಶ್ಮೀರ, ಅಯೋಧ್ಯಾ ಆದಮೇಲೆ ಇದೀಗ ಮತ್ತೊಂದು ಅತಿ ದೊಡ್ಡ legal surgical strike within India.
ಪ್ರತಿ ಹಂತದಲ್ಲೂ ನಂಬಿಕೆಯ ಬುನಾದಿ ಕೈ ಹಾಕಿ ಭಾವನಾತ್ಮಕ ವಿಚಾರಗಳನ್ನೇ ಅಲುಗಾಡಿಸುತ್ತಿರುವ ಈ ಸರ್ಕಾರ ಇದೀಗ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತೆರೆಮರೆಯಲ್ಲಿ ರಂಗ ಸಜ್ಜುಗೊಳಿಸಿದ್ದು, legal surgery ಮಾದರಿಯಲ್ಲಿ ಯಾವುದೇ ಹಂತದಲ್ಲೂ ಪಾರ್ಲಿಮೆಂಟ್ ಮುಂದೆ ಹೊಸ ಮಸೂದೆ ದಿಢೀರನೆ ಪ್ರತ್ಯಕ್ಷ ಆಗುವ ಸಾಧ್ಯತೆ ಬಹುತೇಕ ನಿಶ್ಚಿತವಾಗಿದೆ.

ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಮರನ್ನು ಸಾಮಾನ್ಯ ಕಾನೂನಿನ ಚೌಕಟ್ಟಿಗೆ ತಂದು ಮತ್ತೊಮ್ಮೆ ರಾಷ್ಟ್ರೀಯವಾದ ಹೆಸರಲ್ಲಿ ಸುಭದ್ರ ಹಿಂದೂ ವೋಟ್ ಬ್ಯಾಂಕ್ ಕಟ್ಟಿಕೊಳ್ಳುವ ಈ ಹುನ್ನಾರ ಬಹುತೇಕ ಅಂತಿಮ ವಾಗಿದೆ.
ಲೋಕಸಭೆಯಲ್ಲಿ ಪ್ರಚಂಡ ಬಹುಮತ ಇದ್ದು, ರಾಜ್ಯಸಭೆಯಲ್ಲಿ ಸಂಪೂರ್ಣ ಬಹುಮತಕ್ಕಾಗಿಯೆ ನಡೆದಿರುವ ಆಪರೇಶನ್ ನೋಡಿದರೆ ಕಾಯಿದೆ ತಿದ್ದುಪಡಿಗೆ ರಾಜ್ಯಸಭೆಯಲ್ಲೂ ಬಹುಮತ ಪಡೆದು, ಮತ್ತೊಮ್ಮೆ ಇತಿಹಾಸ ಮರುಸೃಷ್ಟಿಸಲು ಎಲ್ಲವೂ ಸಜ್ಜುಗೊಳಿಸಿಟ್ಟಿರುವುದು ಸ್ಪಷ್ಟ.
ಕೇಂದ್ರದ ಉನ್ನತ ಮೂಲಗಳು ಹೇಳುವ ಪ್ರಕಾರ ಈಗಾಗಲೇ ಏಕರೂಪ ನಾಗರೀಕ ಸಂಹಿತೆಯ ಮಸೂದೆ ರಹಸ್ಯವಾಗಿ ಸಿದ್ದವಾಗುತ್ತಿದೆ.
ಮುಸ್ಲಿಂ ವೈಯಕ್ತಿಕ ಕಾನೂನನ್ನೂ ರದ್ದು ಮಾಡಿ, ಈ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಘೋಷಣೆಯಲ್ಲಿ ಸಾಮಾನ್ಯ ಕಾನೂನಿನ ವ್ಯಾಪ್ತಿಗೆ ತಂದು ಒಪ್ಪಿಸುವುದು ಇಲ್ಲಿಯ ತಂತ್ರ. ಇದಕ್ಕಾಗಿ ಸುಪ್ರೀಂಕೋರ್ಟ್ ನ ರಕ್ಷಣೆ ಪಡೆಯುತ್ತಿರುವುದು ವಿಶೇಷ.
ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಹಲವಾರು ಬಾರಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪಾರ್ಲಿಮೆಂಟಿನಲ್ಲಿ ಕಾಯಿದೆಗೆ ತಿದ್ದುಪಡಿ ತರುವಂತೆ ಬೇರೆ ಬೇರೆ ಪ್ರತ್ಯೇಕ ಪ್ರಕರಣದ ತೀರ್ಪಿನ ವೇಳೆ ತಿಳಿಸಿದೆ.
ಇದನ್ನು ಜಾರಿಗೆ ತಂದು, ಸುಪ್ರೀಂ ಆದೇಶದ ಪರಿಪಾಲನೆ ಮಾಡಿ, ಎಲ್ಲಾ ನಾಗರಿಕರಿಗೂ ಒಂದೇ ಕಾಯಿದೆ. ಎಲ್ಲರೂ ಸಮಾನರು ಎಂಬ ಭಾವನಾತ್ಮಕ ಘೋಷಣೆಯ ರಾಷ್ಟ್ರೀಯವಾದದ ಸರ್ಜರಿಯೆ ಈ ಹೊಸ ತಂತ್ರ. ಹೊಸ ಮಂತ್ರ.
ಹಾಗೆ ನೋಡಿದ್ರೆ, ಎಲ್ಲರಿಗೂ ಒಂದೇ ಕಾಯಿದೆ ಎನ್ನುವುದು ಪ್ರಜಾಸತ್ತೆಯ ಮೂಲ. ಇದರಲ್ಲೂ ಎರಡು ಮಾತಿಲ್ಲ. ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸುವ ಸುಂದರ ಭಾರತದಲ್ಲೂ ವಿವಿಧ ಧಾರ್ಮಿಕ ಸೆಲೆಗಳಿವೆ. ನೆಲೆಗಳಿಗೆ. ಯಾವುದೇ ಹೊಸ ಕಾನೂನು ಬೇರೊಂದು ಧರ್ಮದ ಭಾವನಾತ್ಮಕ ನಂಬಿಕೆಗೆ ಧಕ್ಕೆ ಆಗಬಾರದು. ಸಂವಿಧಾನದ ಪರಿಚ್ಛೇದ ೨೫ ರಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಧರ್ಮದ ನಂಬಿಕೆಯ ನೆಲೆಯಲ್ಲಿ ಹಸ್ತಕ್ಷೇಪವನ್ನು ಮಾಡಬಾರದು.
ಹಾಗೆಯೇ ವಿಧಿ ೪೪ ರಲ್ಲಿ ಸಮಾನತೆ, ಏಕರೂಪ ಕಾನೂನನ್ನು ಪ್ರತಿಪಾದಿಸಲಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡಾ ಸಾಮಾನ ಕಾನೂನನ್ನೇ ಪ್ರತಿಪಾದಿಸಿದ್ದರು. ಆದರೆ ಆಯಾ ಧರ್ಮದ ಜನ ವ್ಯವಸ್ಥೆಯ ಬಗ್ಗೆ ವಿಶ್ವಾಸ ಪಡೆದು ಏಕರೂಪ ಕಾಯ್ದೆ ಜಾರಿಗೆ ಸ್ವಯಂ ಪ್ರೇರಿತರಾಗಿ ಹೇಳುವವರೆಗೂ ಪ್ರತ್ಯೇಕ ವೈಯಕ್ತಿಕ ಕಾಯಿದೆ ಇರಲಿ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ಅಲ್ಪಸಂಖ್ಯಾತರನ್ನು ಉದ್ದೇಶಿಸಿಯೆ ಹೇಳಿದ್ದು.
ಹಾಗೆ ನೋಡಿದ್ರೆ ದಶಕಗಳ ಕಾಲ ಸಮರ್ಪಕ ತಿದ್ದುಪಡಿ ಕಾಣದೆ ಅಲ್ಪಸಂಖ್ಯಾತರನ್ನು ಅಂಧಕಾರದಲ್ಲಿ ಇಟ್ಟ ಕಂದಾಚಾರಿಗಳ, ರಾಜಕೀಯ ಪಕ್ಷಗಳ ಕಪಿಮುಷ್ಟಿಗೆ ಸಿಲುಕಿದ ಮುಸ್ಲಿಂ ವೈಯಕ್ತಿಕ ಕಾಯಿದೆ ಕೆಲವು ವಿಚಾರಗಳಲ್ಲಿ ಗೊಡ್ಡು ಹಿಡಿದಿದ್ದು, ಯಾವುದೇ ಕಾರಣಕ್ಕೂ ಬದಲಾವಣೆ ಆಗಬಾರದು ಎನ್ನುವುದು ಸರಿಯಲ್ಲ. ಆದರೆ ಗೊಡ್ಡು ಅಂಶಗಳನ್ನು ರದ್ದು ಮಾಡುವ ಭರಾಟೆಯಲ್ಲಿ ಒಂದು ಸಮುದಾಯದ ನಂಬಿಕೆಗೆ ಧಕ್ಕೆ ತಂದು, ಇಡೀ ಕಾನೂನೇ ರದ್ದು ಮಾಡಿದರೆ ಹೇಗೆ ಎನ್ನುವುದು ಇಲ್ಲಿಯ ಪ್ರಶ್ನೆ.
ಅಷ್ಟೇ ಅಲ್ಲ , ಏಕರೂಪ ನಾಗರೀಕ ಕಾಯ್ದೆ ಹೊರತುಪಡಿಸಿ ಬೇರೊಂದು ರೀತಿಯಲ್ಲೂ ಸಮಾನತೆ ತರಲು ಅವಕಾಶ ಇರುವಾಗ, ಇಂಥ ಪರ್ಯಾಯ ಕ್ರಮವನ್ನೇಕೆ ಪರಿಶೀಲಿಸಲಾಗುತ್ತಿಲ್ಲ ಎನ್ನುವ ಮಾತಿಗೆ ಇಲ್ಲಿ ಉತ್ತರವಿಲ್ಲ.
ಈ ಕುರಿತು ರಾಷ್ಟ್ರೀಯ ಕಾನೂನು ಆಯೋಗ ಭಿನ್ನಮತದ ವರದಿಯನ್ನು ಸರಕಾರಕ್ಕೆ ಕೊಟ್ಟಿದ್ದು, ಇದರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿಲ್ಲ.
ಈ ವರದಿಯನ್ನು ಪಕ್ಕಕ್ಕೆ ಸರಿಸಿ, “ಒಂದೇ ಭಾರತ” ಎನ್ನುವ ಭಾವನಾತ್ಮಕ ಘೋಷಣೆಯೊಂದಿಗೆ ರಾಜಕೀಯ ಲಾಭ ಪಡೆಯಲು ತಂತ್ರ ರೂಪಿಸಲಾಗಿದೆ.
“ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು, ಮುಸ್ಲಿಂ ವೈಯಕ್ತಿಕ ಕಾನೂನು ರದ್ದು ಮಾಡಲು ಕಾಲ ಪಕ್ವವಲ್ಲ. ಬದಲಿಗೆ ಮುಸ್ಲಿಂ ವೈಯಕ್ತಿಕ ಕಾನೂನಿಗೇ ತಿದ್ದುಪಡಿ ತಂದು ಅದರಲ್ಲಿನ ದೋಷ ನಿವಾರಣೆ ಮಾಡುವುದು ಸೂಕ್ತ ” ಎನ್ನುವುದು ಕಾನೂನು ಆಯೋಗದ ಅಭಿಪ್ರಾಯ.
“ವಿಧವಾ ವಿವಾಹ, ಮಹಿಳೆಯರಿಗೆ ಆಸ್ತಿ ಹಕ್ಕು, ವಿಚ್ಛೇದನದ ಹಕ್ಕುಗಳನ್ನು ಬಹಳ ಮೊದಲೇ ಈ ಮುಸ್ಲಿಂ ವೈಯಕ್ತಿಕ ಕಾಯಿದೆಯಲ್ಲಿ ನೀಡಲಾಗಿದೆ. ಇಂಥ ಉತ್ತಮ ಅಂಶಗಳನ್ನು ಉಳಿಸಿಕೊಂಡು ಬಹುಪತ್ನಿತ್ವದ ಅಂಶವನ್ನು ಕಾನೂನಿನಿಂದ ಕಿತ್ತುಹಾಕಿ” ಎನ್ನುವ ವಿಶ್ಲೇಷಣೆ.
ಅಲ್ಪಸಂಖ್ಯಾತರನ್ನು ಅಂಧಕಾರದಲ್ಲಿ ಇಟ್ಟು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದ ಕಾಂಗ್ರೆಸ್ ಪಕ್ಷ ಇವತ್ತಿನ ಈ ದುಸ್ಥಿತಿಯ ಹೊಣೆ ಹೊರಬೇಕು.

೧೮೪೦ ರಲ್ಲಿ ಆಂಗ್ಲರು ಎಲ್ಲರಿಗೂ ಅನ್ವಯ ಆಗುವಂತೆ ಸಮಾನ ಕ್ರಿಮಿನಲ್ ಕಾಯಿದೆ ರೂಪಿಸಿದರೂ, ಮದುವೆ, ಆಸ್ತಿ ಹಕ್ಕು, ವಿಚ್ಛೇದನ, ಉತ್ತರದಾಯಿತ್ವ, ವಂಶ ಪಾರಂಪರ್ಯ ಆಚರಣೆ, ದತ್ತು ಸ್ವೀಕಾರ ವಿಚಾರದಲ್ಲಿ ಮುಸ್ಲಿಂ ಧಾರ್ಮಿಕ ಆಚರಣೆಗೆ ಮಾನ್ಯತೆ ನೀಡಿ ಪ್ರತ್ಯೇಕ ಕಾನೂನಿಗೆ ಅವಕಾಶ ಕೊಟ್ಟರು. ಅದರಂತೆ ಹಿಂದೂ ಕಾಯಿದೆ ಕೂಡಾ ಇತ್ತು.
೧೯೫೫ – ೫೬ ರ ನಂತರ ಹಿಂದೂ ಕಾಯಿದೆ ಸುದೀರ್ಘ ತಿದ್ದುಪಡಿ ಆಯ್ತು. ಸುಧಾರಣೆಯು ಆಯಿತು. ಇದನ್ನು ಹಿಂದು ಕೋಡ್ ಎನ್ನಲಾಗುತ್ತದೆ. ಆದರೆ ಬಹುತೇಕ ಅನಕ್ಷರಸ್ಥರು ಹೆಚ್ಚಿರುವ ಅಲ್ಪ ಸಂಖ್ಯಾತರನ್ನು ರಕ್ಷಿಸುವ ಹುಸಿ ನಾಟಕ ಮಾಡಿದ ಕಾಂಗ್ರೆಸ್ ತಲ್ಲಾಕ್ ದುರುಪಯೋಗ, ಬಹುಪತ್ನಿತ್ವ ಪ್ರತಿಪಾದಿಸುವ ಮುಸ್ಲಿಂ ವೈಯಕ್ತಿಕ ಕಾನೂನಿಗೆ ತಿದ್ದುಪಡಿ ಆಗದಂತೆ ನೋಡಿಕೊಂಡಿದ್ದೇ ಈಗಿನ ಪರಿಸ್ಥಿತಿಗೆ ಕಾರಣ.
ದೇಶದಲ್ಲೇ ವಿವಾದದ ಬಿರುಗಾಳಿ ಎಬ್ಬಿಸಿದ ಶಾ ಬಾನು ತಲ್ಲಾಕ್ ಪ್ರಕರಣದಲ್ಲಿ ಕ್ರಿಮಿನಲ್ ಕೋಡ್ ೧೨೫ ರ ಪ್ರಕಾರ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು, ಅವತ್ತೇ ಎಚ್ಚೆತ್ತು ಮುಸ್ಲಿಂ ವೈಯಕ್ತಿಕ ಕಾನೂನಿಗೆ ತಿದ್ದುಪಡಿ ತಂದು ಬಾನುಗೆ ಅಷ್ಟೇ ಅಲ್ಲ, ತಲ್ಲಾಕ್ ದುರುಪಯೋಗದಿಂದ ವಂಚನೆಗೆ ಒಳಗಾದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಟ್ಟಿದ್ದಿದ್ದರೆ ಇವತ್ತು ಏಕ ರೂಪ ನಾಗರೀಕ ಕಾಯಿದೆ ವಿಷಯವೇ ಇರುತ್ತಿರಲಿಲ್ಲ.
ಇದನ್ನು ಮಾಡುವ ಬದಲಾಗಿ ಕಾಯಿದೆಗೆ ತಿದ್ದುಪಡಿ ತಂದು ಸುಪ್ರೀಂ ಆದೇಶವನ್ನೇ ನಿರ್ಲಿಪ್ತಗೊಳಿಸಿ, ಮುಸ್ಲಿಂ ಹೆಣ್ಣಿನ ಹಕ್ಕುಗಳನ್ನು ದಮನ ಮಾಡುವವರ ಪರ ಕಾಂಗ್ರೆಸ್ ನಿಂತದ್ದೆ ಇವತ್ತಿನ ದುಸ್ಥಿತಿಗೆ ಕಾರಣ.
ಇಂಥ ತಲ್ಲಾಕ್ ಕಾಯಿದೆಗೆ ತಿದ್ದುಪಡಿ ತರಲು ಮೋದಿ ಅಧಿಕಾರಕ್ಕೆ ಬರುವ ತನಕ ಕಾಯಬೇಕಾಗಿದೆ ಬಂತು.
ಹೀಗಾಗಿ ಏಕರೂಪ ನಾಗರಿಕ ಕಾಯಿದೆಯ ಪ್ರಬಲ ಅಸ್ತ್ರವನ್ನು ಬಿಜೆಪಿ ಕೈಗೆ ಕೊಟ್ಟಿದ್ದೆ ಕಾಂಗ್ರೆಸ್ ಮತ್ತು ಮುಸ್ಲಿಂ ಧರ್ಮಾಂಧರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇಂಥ ಗೊಂದಲದಿಂದಾಗಿಯೆ ಇವತ್ತು ಏನಾಗಿದೆ ಎಂದರೆ ೧೬೮೫ ರಲ್ಲಿ ಶಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್, ಎರಡನೇ ಮದುವೆ ಆದ ಹಿಂದೂ ಒಬ್ಬ ನ್ಯಾಯಾಂಗದ ಶಿಕ್ಷೆ ತಪ್ಪಿಸಿಕೊಳ್ಳಲು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿ ಬಹು ಪತ್ನಿತ್ವದ ರಕ್ಷಣೆ ಪಡೆದ ಸರಳಾ ಮುದ್ಗಲ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎನ್.ಎಮ್. ಸಹಾಯ್ ಇರಬಹುದು, ತೀರ ಇತ್ತೀಚೆಗೆ ಗೋವಾ ರಾಜ್ಯದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಇಲ್ಲದೆ ಇರುವುದನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಗಳಾದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಇರಬಹುದು ಅವರೆಲ್ಲ ಏಕರೂಪ ನಾಗರೀಕ ಕಾಯಿದೆ ಜಾರಿಯನ್ನು ಬಲವಾಗಿ ಆಗ್ರಹಿಸಿದ್ದಾರೆ. ಈ ಬಗ್ಗೆ ಪಾರ್ಲಿಮೆಂಟ್ ತಿದ್ದುಪಡಿ ಮಾಡಬೇಕೆಂದೂ ಹೇಳಿದ್ದಾರೆ. ಇಂಥ ಹೇಳಿಕೆಗಳನ್ನು ಬಿಜೆಪಿ ತಮ್ಮ ಪರ ಜನಾಭಿಪ್ರಾಯ ಮೂಡಿಸಲು ಬಳಸಿಕೊಳ್ಳುವುದು ಖಂಡಿತ.
ಕೇಸರಿ ನಾಯಕರು ಪದೇ ಪದೆ ಗೋವಾ ಮಾದರಿಯ ಪ್ರಸ್ತಾಪ ಮಾಡುತ್ತಿದ್ದಾರೆ. ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಗೋವಾದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಇಲ್ಲ. ಅಲ್ಲಿ ೧೮೬೭ ರಲ್ಲಿ ಪೋರ್ಚುಗೀಸರು ಜಾರಿಗೆ ತಂದ ಕಾಯಿದೆ ಇದೆ. ಅಲ್ಲಿ ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆ ಆದರೆ ಶಿಕ್ಷೆಗೆ ಗುರಿಮಾಡಲಾಗುತ್ತದೆ. ಮೌಖಿಕ ಇಲ್ಲವೇ ಒಮ್ಮೆಗೇ ಮೂರು ಬಾರಿ ತಲಾಕ್ ಹೇಳುವ ಪದ್ಧತಿ ಮೊದಲಿಂದಲೂ ಶಿಕ್ಷಾರ್ಹ.
ಕಡೆಯದಾಗಿ ನೇರವಾಗಿ ವಿಚಾರಕ್ಕೆ ಬರೋಣ.
ವಿವಿಧತೆಯಲ್ಲಿ ಏಕತೆ ಇರುವ ಬಹುತ್ವದ ದೇಶದಲ್ಲಿ ಇಂಥ ಯತ್ನಕ್ಕೆ ಕಾಲ ಪಕ್ವ ವಾಗಿದೆಯೆ? ಏಕತೆ ರೂಪಿಸಲು ಪರ್ಯಾಯ ಮಾರ್ಗಗಳ ಸಾಧ್ಯತೆಗಳನ್ನು ಏಕೆ ಪರಿಶೀಲಿಸಲಾಗುತ್ತಿಲ್ಲ?
ರಾಷ್ಟ್ರೀಯ ಭಾವೈಕ್ಯತೆಗೆ ಇದು ಕಾರಣವಾಗುತ್ತದೆಯೇ?
ಏಕರೂಪ ನಾಗರೀಕ ಕಾಯಿದೆಯ ಪ್ರತಿಪಾದಕರು ಹೇಳುವಂತೆ ಶೇಕಡಾ ೫೫ ರಷ್ಟಿರುವ ೨೫ ರ ವಯೋಮಾನದ ಹೊಸ ತಲೆಮಾರಿನ ಯುವ ಸಮುದಾಯಕ್ಕೆ ಜಾಗತಿಕ ಮಟ್ಟದಲ್ಲಿ ಸಮಾನತೆ ಸಾರಲು ಈ ಕಾಯಿದೆ ಹೇಗೆ ಅನುಕೂಲ ಆದೀತು?
ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತೇ?
ಅಥವಾ ಈ ಪ್ರಕರಣ ಕೂಡಾ ಕೆಲವು ಮೂರ್ಖ ಮುಸ್ಲಿಂ ನಾಯಕರ ಹುಂಬತನದಿಂದ ನ್ಯಾಯಾಲಯದ ಮೆಟ್ಟಿಲು ಏರಿದಲ್ಲಿ, ರಾಷ್ಟ್ರೀಯವಾದಿಗಳ ನಿಲುವೇ ಗೆಲ್ಲುವುದು ನಿಶ್ಚಿತವಾಗಿದ್ದು, ಈ ಅಂಕಣದ ಆರಂಭದಲ್ಲೇ ಹೇಳಿರುವಂತೆ ಮತ್ತೊಮ್ಮೆ “ನ್ಯಾಯ ಏನಾದ್ರೂ ಆಗಲಿ.ಶಾಂತಿ ಸಿಕ್ಕರೆ ಸಾಕಪ್ಪಾ ” ಎಂಬಂತೆ ಆದೀತೆ…






After reading this lengthy article one simple question lingering in the mind is, what is wrong with having a uniform civil code in the country? Why is that projected as a huge disaster and evil?!?! Aren’t the 85% Hindus in the country already under it and living without any big problems with it?
The author just keeps using words like ‘ತಂತ್ರ’, ‘ಹುನ್ನಾರ’ etc as if there is a big conspiracy happening to demolish the Muslims of India!
But why should they be different and how are they special? All states, including Goa and Kashmir should have same constitution, why is this a bad thing!!???
ವಿಚಾರಪೂರ್ಣ ಲೇಖನ