ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮೀಕ್ಷೆಗೆ ಕನ್ನಡಕ ಒಯ್ಯಬೇಕು..

-ಉದಯ ಗಾಂವಕಾರ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತೆಲ್ಲ ಮನೆಗಳ ಮುಂದೆ ಹೋಗಿ ಹೇಳಿದರೆ ಏನೂ ಪ್ರಯೋಜನವಿಲ್ಲ. ಅವರಿಗೆ ಅರ್ಥವಾಗುವಂತೆ ʻಗಣತಿʼ ಎನ್ನಬೇಕು. ಅವರೇ ʻಜಾತಿ ಗಣತಿಯಾ?ʻ ಎಂದು ಕೇಳುತ್ತಾರೆ. ಗಣತಿಯ ಆರಂಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲು ಕಷ್ಟಪಡುತ್ತಿದ್ದೆ. ಮಾತೃ ಪ್ರಧಾನ ಕುಟುಂಬಗಳಿರುವ ಉಡುಪಿ ಜಿಲ್ಲೆಯ ರೇಷನ್‌ ಕಾರ್ಡಿನಲ್ಲಿ ಮದುವೆಯಾದ ಹೆಣ್ಣುಮಕ್ಕಳ ಹೆಸರಿರುತ್ತದೆ. ಗಂಡನದು ಅವರ ತಾಯಿಯ ಮನೆಯಲ್ಲಿರುವುದೇ ಹೆಚ್ಚು. ಕಾರ್ಡಿನಲ್ಲಿ ಮೂವತ್ತೈದು ದಾಟಿದ ಹೆಣ್ಣು ಮಕ್ಕಳ ಹೆಸರಿದ್ದರೆ ಮಾಹಿತಿ ನೀಡುವವರಲ್ಲಿ ʻಅವರಿಗೆ ಮದುವೆಯಾಗಿದೆಯೇ?ʻ ಎಂದು ಕೇಳುವಾಗ ಸ್ವಲ್ಪ ಹಿಂಜರಿಕೆ.

ನಲವತ್ತು ದಾಟಿದ ಗಂಡು ಮಕ್ಕಳ ಹೆಸರು ರೇಷನ್‌ ಕಾರ್ಡಲ್ಲಿದ್ದಾಗಲೂ ಇದೇ ಅನುಭವ. ಹೆಚ್ಚಿನ ಸಂದರ್ಭದಲ್ಲಿ ಮದುವೆ ಆಗಿರುತ್ತದಾದರೂ ಅಗಿರದಿದ್ದಲ್ಲಿ ಅವರಿಗೆ ನಾನು ಕಸಿವಿಸಿ ಮಾಡುತ್ತಿರುವನೇ ಎಂಬ ಅನುಮಾನ ಬರುತ್ತಿತ್ತು. ಅಪ್ಪನ ಮಾತೃಭಾಷೆ ಕೇಳಿ ಅಮ್ಮನದೂ ಕೇಳಿ ತಿಳಿದುಕೊಳ್ಳಬೇಕು ಎಂಬ ಅನುಭವ ಆದ ನಂತರ ಪ್ರತಿ ಪ್ರಶ್ನೆಯೂ ಮುಖ್ಯ ಎನಿಸಿತ್ತು. ಬಹಳ ಹಿಂದೆ ಕೇರಳದ ಪಠ್ಯಪುಸ್ತಕದಲ್ಲಿ ʻಮತವಿಲ್ಲದ ನವೀನʼ ಎಂಬ ಪಾಠವೊಂದಿತ್ತು. ಅದರಲ್ಲಿ, ಗಣತಿಗೆ ಬಂದ ಮೇಷ್ಟ್ರು ಅಪ್ಪನ ವಿವರ ಕೇಳಿ ತಿಳಿದ ಮೇಲೆ ಅವರ ಮಗನ ಬಗ್ಗೆ ಕೇಳುತ್ತಾರೆ-

ʻಹೆಸರು?ʼ
ʻನವೀನʼ
ʻವಯಸ್ಸುʼ
ʻಹನ್ನೊಂದುʼ
ʻತರಗತಿ?ʼ
ʻಐದುʼ
ʻಮತ?ʼ
ʻಗೊತ್ತಿಲ್ಲʼ

ಈಗ ಮೇಷ್ಟ್ರು ತಲೆ ಎತ್ತಿ ನೋಡುತ್ತಾರೆ.

ʻಅಲ್ಲ, ಈಗಷ್ಟೇ ನಿಮ್ಮ ಮತ ಹೇಳಿದ್ದೀರಿ. ನವೀನದು ಗೊತ್ತಿಲ್ಲ ಅಂತೀರಲ್ಲ?!”

ʻಹೌದು, ನನ್ನ ಮತ ಗೊತ್ತಿದೆ, ನವೀನದು ಗೊತ್ತಿಲ್ಲʼ

ʻನಾನು ಏನು ಬರೆಯಲಿ?ʼ

ʻಹಾಗೇ ಬರೆಯಿರಿʼ

ಈ ಪಾಠವನ್ನು ತೆಗೆಯಬೇಕೆಂದು ಬಹಳ ಗಲಾಟೆಯೂ ಆದ ನೆನಪು.

ನಾನು ಹೋದ ಮನೆಯಲ್ಲಿ ಪ್ರತಿಯೊಬ್ಬರ ಬಗ್ಗೆ ಕೇಳುವಾಗಲೂ ʻಅವರು ವಿಕಲ ಚೇತನರೇ?ʼ ಎಂಬ ಪ್ರಶ್ನೆ ಕೇಳುವ ಬದಲು ಮೊದಲೇ ʻನಿಮ್ಮ ಮನೆಯಲ್ಲಿ ದೈಹಿಕ ನ್ಯೂನ್ಯತೆ ಇರುವವರು ಯಾರಾದರೂ ಇದ್ದಾರಾ?ʼ ಎಂದು ಕೇಳುತ್ತಿದ್ದೆ. ಒಂದು ಮನೆಯಲ್ಲಿ ಇಬ್ಬರೇ ಸದಸ್ಯರು- ಗಂಡ ಮತ್ತು ಹೆಂಡತಿ. ಇಬ್ಬರೂ ನನ್ನೆದುರೇ ಇದ್ದರು. ಆದ್ದರಿಂದ ಈ ಪ್ರಶ್ನೆ ಕೇಳಲಿಲ್ಲ. ಸಮೀಕ್ಷೆ ಮುಗಿದು ಪ್ರಿವ್ಯೂ ನೋಡುವ ಹಂತದಲ್ಲಿ ಗಂಡ ʻನನಗೆ ಒಂದು ಕಾಲಿಲ್ಲʼ ಎಂದರು. ನನಗೆ ಆಶ್ಚರ್ಯವಾಯ್ತು. ಮನೆಯಲ್ಲೂ ಪ್ಯಾಂಟ್‌ ಧರಿಸಿರುವ ಅವರನ್ನು ನೋಡಿ ಎಲ್ಲಿಗೋ ಹೋಗುವರಿದ್ದಾರೆ ಎಂದುಕೊಂಡಿದ್ದೆ. ಅವರು ಪ್ಯಾಂಟ್‌ ಎತ್ತಿ ತಮ್ಮ ಕೃತಕ ಕಾಲು ತೋರಿಸಿದರು. ತನ್ನ ಇಪ್ಪತ್ತೈದನೇ ವರ್ಷದಲ್ಲಿ ದೇವಸ್ಥಾನದ ಕಟ್ಟಡ ನಿರ್ಮಿಸುವಾಗ ಗೋಡೆ ಬಿದ್ದು ಕಾಲು ತುಂಡಾದ ವಿಚಾರ ತಿಳಿಸಿದರು. ಬದುಕೇ ಬೇಡ ಎಂದುಕೊಂಡ ಅವರಿಗೆ ಕೃತಕ ಕಾಲು ಸಿಕ್ಕಿದ್ದು, ಈ ಕೃತಕ ಕಾಲು ಭರವಸೆ ಮೂಡಿಸಿದ್ದು, ನಂತರ ಮದುವೆಯಾದದ್ದು, ಮದುವೆಯಾದ ಮೇಲೆ ಹೆಂಡತಿ ಮತ್ತಿಷ್ಟು ಭರವಸೆ ಕೊಟ್ಟಿದ್ದು ಎಲ್ಲ ಹೇಳ್ತಾ ಹೋದರು.

—–

ನಾನು ಒಟ್ಟು ನೂರಾ ಹದಿನಾರು ಮನೆಗಳ ಸಮೀಕ್ಷೆ ಮಾಡಬೇಕು. ಇನ್ನೂ ಐವತ್ತನ್ನು ತಲುಪಿಲ್ಲ. ಸಮೀಕ್ಷೆಗೆ ಹೋಗುವಾಗ ಕನ್ನಡಕ ಒಯ್ಯಬೇಕು, ಸೂಕ್ಷ್ಮದರ್ಶಕವನ್ನಲ್ಲ ಎಂದು ಮೇಲಾಧಿಕಾರಿಗಳು ಬುದ್ಧಿ ಹೇಳಬಹುದು.

‍ಲೇಖಕರು Admin

3 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading