
ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬೇಕು ಅಂತೀರಾ..ಮತ್ಠೆ ನೋಡಿದರೆ ಒಕ್ಕಲಿಗರು, ಕುರುಬರು ಅಂಥ ಕಿತ್ಠಾಡ್ತೀರ…”
ಗೆಳೆಯ ಎಲ್ಸಿ ನಾಗರಾಜ್ ಕೆಲ ದಿನಗಳ ಮೊದಲು ಫೇಸ್ಬುಕ್ನಲ್ಲಿ ಹಾಕ್ಕಿದ್ದ ಸ್ಟೇಟಸ್ ಇದು.
ದೇಶದ ರಾಜಕೀಯ ಏನೇ ಇರಲಿ. ರಾಜ್ಯ ರಾಜಕೀಯದ ಬಗ್ಗೆ ಹೇಳೋದಾದ್ರೆ ಇದು ನಿಜಕ್ಕೂ ಪ್ರಸ್ತುತ.
ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬರಬೇಕಾದರೆ ಹೇಳಿದ್ದೇನು? ಪುಂಖಾನುಪುಂಖವಾಗಿ ಘೋಷಣೆಗಳನ್ನು ಉದುರಿಸಿದ್ದೇನು? ಸೈದ್ದಾಂತಿಕ ರಾಜಕೀಯದ ಮಾತುಗಳೇನು? ಬಿಜೆಪಿ ವಿರುದ್ಧ ವಾಗ್ದಾಳಿಗೆ ಬಳಸಿದ ಪದ ಪುಂಜಗಳೇನು?
ಈಗ ಲೋಕಸಭಾ ಚುನಾವಣೆಯ ಅಖಾಡದಲ್ಲಿ ನಿಂತು, ನೀತಿ ನಿಯತ್ತು ಎಲ್ಲಕ್ಕೂ ಎಳ್ಳು ನೀರು ಬಿಟ್ಟು ಹಾಕುತ್ತಿರುವ ಜಾತಿ ಲೆಕ್ಕಗಳು ಏನು? ವಂಶವೃಕ್ಷ ದ ಪೋಷಣೆಯೇನು?
ನಿಜಕ್ಕೂ” ಛೆ “ ಎನ್ನಿಸುತ್ತೆ.
ಸಂದರ್ಭ, ಪರಿಸ್ಥಿತಿ, ಅಧಿಕಾರ ಸೂತ್ರ, ಅನುಸಂಧಾನ ಇವೆಲ್ಲ ರಾಜಕೀಯ ಭಾಷೆಗೆ ಹೊಸ ಹೊಸ ಅರ್ಥ ವ್ಯಾಖ್ಯಾನವನ್ನು ತಂದುಕೊಡುತ್ತವೆ.
ಹೀಗಾಗಿಯೆ ಇಲ್ಲಿ ಶಬ್ದದ ಸ್ವರೂಪವು ಭಿನ್ನ. ಅದರ ಅರ್ಥವೂ ವಿಭಿನ್ನ.
ಮೋಸಕ್ಕೆ ತಂತ್ರವೆನ್ನುತ್ಠೇವೆ. ಪಿತೂರಿಗೆ ಪ್ರತಿತಂತ್ರವೆನ್ನುತ್ಠೇವೆ.

ತಮ್ಮ ನೆಂಟರಿಷ್ಟರು, ರಕ್ತ ಸಂಬಂಧಿಗಳು ಕೈಯಲ್ಲಿ ಎಲ್ಲ ಅಧಿಕಾರ, ದೌಲತ್ತು ಇರಬೇಕೆಂಬ ಬಯಕೆಯನ್ನು ಬಲಿಷ್ಟ ಅಥವಾ ಶಕ್ತಿಶಾಲಿ ರಾಜಕೀಯ ಎಂದು ನಾಚಿಕೆಯಿಲ್ಲದೆ ಹೇಳುತ್ತೇವೆ. ಎಲ್ಲವೂ ತಮ್ಮ ಕಪಿಮುಷ್ಟಿಯಲ್ಲಿ ಇರಬೇಕೆಂಬ ಆಧುನಿಕ ಅಧಿಕಾರ ದಾಹಿ, ಸಾಮ್ರಾಜ್ಯಶಾಹಿ ರಾಜಕೀಯವನ್ನು ನಾವು ಮರ್ಯಾದೆ ಇಲ್ಲದೆ “ಭದ್ರ ಕೋಟೆ “ಎಂದು ಮತ್ತೊಮ್ಮೆ ಅವರವರ ಶಕ್ತಿಯನ್ನು ವ್ಯಾಖ್ಯಾನಿಸುವ ರೀತಿಯಲ್ಲೇ ವಿಶ್ಲೇಷಿಸುತ್ತೇವೆ.
ಅನುಸಂಧಾನ ರಾಜಕೀಯವನ್ನು “ಮೈತ್ರಿ “ಎನ್ನುತ್ತೇವೆ.
ತುಂಬಾ ಜನರಿಗೆ ಇಂತಹ ವಿಶ್ಲೇಷಣೆ ಕಹಿ ಏನಿಸಿದರೂ ಹೇಳಲೇ ಬೇಕಾಗಿದೆ.
ಜಾತಿವಾದಿ, ಕೋಮುವಾದಿ, ವಿಚಿದ್ರಕಾರಿ ಶಕ್ತಿಗಳನ್ನು ಮಣಿಸಬೇಕೆಂಬ ಘೋಷಣೆಗೆ ಬೇಕಾದ ದಿಟ್ಟತನ, ಸೈದ್ದಾಂತಿಕ ಸ್ಪಷ್ಟತೆ ಇಲ್ಲದೆ ಅಧಿಕಾರ ಸಿಕ್ಕಾಕ್ಷಣ ಎಲ್ಲವೂ ಬಾಚಿಕೊಳ್ಳಬೇಕೆಂಬ ಧಾವಂತದ ರಾಜಕಾರಣ ಇಲ್ಲಿ ಕಾಣುತ್ತಿದೆ.
ಮೊನ್ನೆ ಮೊನ್ನೆ ತಾನೆ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳು ಉರುಳಿದ ನಂತರ ಖುದ್ದು ಸಿ.ಎಂ. ಕುಮಾರಸ್ವಾಮಿ ತಮ್ಮ ವಿರುದ್ದ ಪಿತೂರಿ ಎಂದು ಸಿದ್ರಾಮಯ್ಯ ವಿರುದ್ದ ಎಗರಿ ಬಿದ್ದು ಅಬ್ಬರಿಸಿದರು.
ಮಾಜಿ ಪ್ರಧಾನಿ ಗೌಡರು ಕೂಡಾ ಸಿಟ್ಟಿಗೆದ್ದು ಟೀಕಿಸಿದರು.
ಆದರೆ ಒಂದೇ ತಿಂಗಳಲ್ಲಿ ಈಗ ರಾಜಕೀಯದ ಪರಿಭಾಷೆಯ ಬದಲಾಗಿದೇ. ಮೈತ್ರಿಯ ಹೆಸರಲ್ಲಿ ನಡೆಯುತ್ತಿರುವ ಸೀಟು ಹಂಚಿಕೆಯಲ್ಲಿ ಎಲ್ಲಾದರೂ ಫ್ಯಾಸಿಸ್ಟ್ ಶಕ್ತಿಗಳನ್ನು ಬಗ್ಗು ಬಡಿಯುವ ಛಲ ಕಾಣುತ್ಠಿದೆಯೋ? ಇಲ್ಲವೇ ಸಿಕ್ಕಿದ್ದೇ ಛಾನ್ಸು ತಮ್ಮ ಮಕ್ಕಳು ಮರಿಗಳನ್ನು, ಬಂಧುಗಳನ್ನು, ಬೆಂಬಲಿಗರನ್ನು ಗೆಲ್ಲಿಸ್ಕೊಂಡರೆ ಸಾಕು ಎಂಬ ಸ್ವಾರ್ಥ, ಸ್ವಜನ ಪಕ್ಷಪಾತ ಕಾಣುತ್ಠಿದೆಯೋ?
ಇವೆಲ್ಲದಕ್ಕೂ ಇಂದು ಉತ್ತರ ಕೊಡುವವರು ಯಾರು?
ಲೋಕಸಭೆ ಸೀಟು ಹೊಂದಾಣಿಕೆ ರಾಜಕೀಯದ ಇನ್ನಷ್ಟು ವಿಚಾರಗಳಿಗೆ ಬರೋಣ.
ರಾಜ್ಯ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. ಹೀಗಾಗಿ ಇದರ ಫಲಿತಾಂಶ ರಾಜ್ಯದ ಭವಿಷ್ಯದ ರಾಜಕೀಯದ ಮೇಲೆ ಪರಿಣಾಮ ಬೀರುವುದಂತೂ ನಿಶ್ಚಿತ. ಆದ್ದರಿಂದಲೇ ಈ ಮೈತ್ರಿ ಮುಖ್ಯವಾಗಿದೆ. ಫಲಿತಾಂಶವೂ ಅಷ್ಟೆ ಮುಖ್ಯವಾಗಿದೆ.
ಆದ್ರೆ ಈಗ ಆಗುತ್ತಿರುವುದು ನೋಡಿದರೆ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಒಗ್ಗಟ್ಟಿನ ಪ್ರದರ್ಶನಕ್ಕೋ ? ಇಲ್ಲವೇ ಇನ್ನಷ್ಟು ಒಡಕಿಗೋ? ಎನ್ನುವುದೇ ಈ ಹೊತ್ತಿನ ವಿಶೇಷ.
ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳನ್ನು ತೆಗೆದುಕೊಳ್ಳಿ.
ಮಂಡ್ಯದಲ್ಲಿ ಸುಮಲತಾ ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿ ಪುತ್ರನಿಗೆ ದೊಡ್ಡ ತಲೇಬೇನೆ ತಂದಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ಬಿಜೆಪಿ ಅದರ ಲಾಭ ಪಡೆಯಲು ತಂತ್ರ ಹೆಣೆದಿದೆ. ಜೆಡಿಎಸ್ ನ ಭದ್ರ ಕೋಟೆ ಎಂದೇ ಬಿಂಬಿಸಲಾಗುತ್ತಿದ್ದ ಮಂಡ್ಯ ಜನರ ಮುಗ್ದತೆ, ಪ್ರೀತಿ, ವಿಶ್ವಾಸವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅಲ್ಲಿ ಮಗನನ್ನು ಹೇರಲು ಹೋದ ಪರಿಣಾಮ ಮೈತ್ರಿ ಅರ್ಥವನ್ನೇ ಕಳೆದುಕೊಂಡಿದೆ.
ಇವೆಲ್ಲಕ್ಕಿಂತ ಹೆಚ್ಚಾಗಿ ಸುಮಲತಾ ಬೆಂಬಲ ಘೋಷಿಸಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಮೂಲಕ ಬಿಜೆಪಿ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ನೆಲೆಯನ್ನು ಛಿದ್ರಗೊಳಿಸಲು ಹವಣಿಸಿದೆ.
ಇನ್ನು ಹಾಸನಕ್ಕೆ ಬಂದರೂ ಇದೇ ಗೋಳು. ಕಳೆದ ಆರು ದಶಕಗಳ ಕಾಲ ತನ್ನ ಜೀವನಾಡಿಯಾಗಿದ್ದ ಈ ಕ್ಷೇತ್ರವನ್ನು ದೇವೇಗೌಡರು ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟ ನಂತರ ಇಲ್ಲಿ ಮತ್ತೆ ಕಾಂಗ್ರೆಸ್ ಬಂಡಾಯದ ಕಹಳೆ ಊದಿ ಮೈತ್ರಿ ಅರ್ಥರಹಿತವಾಗಿದೆ. ಕಾಂಗ್ರೆಸ್ ನ ಎ. ಮಂಜು ಬಿಜೆಪಿ ಸೇರಿ ಪ್ರಜ್ವಲ್ ವಿರುದ್ದ ತೊಡೆ ತಟ್ಟಿ ದಂಗುಬಡಿಸಿದ್ದಾರೆ.
ಇನ್ನು ತುಮಕೂರು ಕೂಡಾ ಅಷ್ಟೆ. ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕೆ ಧುಮುಕಿದ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ನ ಹಾಲಿ ಸಂಸದ ಮುದ್ದು ಹನುಮೇಗೌಡ ಬಂಡಾಯ ಘೋಷಿಸಿ ಮೈತ್ರಿ ಅರ್ಥವಿಲ್ಲ ಎಂದು ಸಾರಿದ್ದಾರೆ. ಬಿಜೆಪಿ ಅಭ್ಯರ್ಥಿ ಮುಗುಳ್ನಗುತ್ತಿದ್ದಾರೆ.
ಎಲ್ಲ ವಿವಾದ, ಇತಿಮಿತಿಗಳ ನಡುವೆಯೂ ಕರ್ನಾಟಕದ ಹಿರಿಮೆಯ ನಾಯಕ ದೇವೇಗೌಡರು ಅತ್ಯಂತ ಗೌರವಯುತವಾಗಿ ಗೆದ್ದು ಬರಬೇಕೆಂಬ ಬಯಸುವ ಎಲ್ಲರಿಗೂ ಈ ವಿದ್ಯಮಾನ ಆತಂಕಕ್ಕೆ ಕಾರಣವಾಗಿದೆ.
ಇವೆಲ್ಲದರ ನಡುವೆ ಕೋಮುವಾದಿಗಳನ್ನು ಮಣಿಸಬೇಕೆಂಬ ಲೆಕ್ಕಾಚಾರವೇ ಮಾಯವಾಗಿದೆ. ಅಂಥ ಯತ್ನಕ್ಕೆ ವಿರಾಮ ಬಿದ್ದಿದೆ.
‘ಫ್ಯಾಸಿಸ್ಟ್ ಶಕ್ತಿಗಳ ದಮನ’ದ ಮಾತಿಗೆ ತಿಲಾಂಜಲಿ ಹೇಳಿ ಆಗಲೇ ‘ಎಲ್ಸೀ’ ಹೇಳಿದಂತೆ, ಲಿಂಗಾಯತರು ಹೀಗೆ ಮಾಡಬಹುದು…ಒಕ್ಕಲಿಗರು ಬಿಟ್ಟು ಬಿಡ್ತಾರಾ…ಕುರುಬರು ಸಿಟ್ಟಿಗೆದ್ದರೆ.. ಎನ್ನುವ ಜಾತಿ ಸಮೀಕರಣದ ಹೇಳಿಕೆಗಳು ಎಲ್ಲೆಲ್ಲೂ ಕಂಡು ಬಂದಿವೆ.
ಇದರ ನಡುವೆ ಇನ್ನಷ್ಟು ಗೊಂದಲ. ಕಾಂಗ್ರೆಸ್ ನಾಯಕರ ಬಳಿ ಹೋಗಿ ಬೆಂಬಲದ ಭಿಕ್ಷೆ ಕೇಳಲ್ಲ ಎನ್ನುವ ಮುಖ್ಯಮಂತ್ರಿ ಹೇಳಿಕೆ, ಉಡುಪಿ ಚಿಕ್ಕಮಗಳೂರು, ಬೆಂಗಳೂರು ಉತ್ತರ ಇಲ್ಲಿ ಅಭ್ಯರ್ಥಿಯೇ ಇಲ್ಲದೆ ಪರದಾಟ, ಕಾಂಗ್ರೆಸ್ನಿಂದಲೆ ಅಭ್ಯರ್ಥಿಯನ್ನು ಜೆಡಿಎಸ್ ಗೆ ತಂದು ಟಿಕೆಟ್ ಕೊಟ್ಟು ಅಖಾಡಕ್ಕೆ ಇಳಿಸುವ ಮಾತುಕತೆ , ಈ ಪುರುಷಾರ್ಥಕ್ಕೆ ಹೆಚ್ಚು ಸೀಟುಗಳನ್ನು ಜೆಡಿಎಸ್ ಏಕೆ ಪಡೆದುಕೊಳ್ಳಬೇಕಿತ್ತು? ಎನ್ನುವ ಟೀಕೆ…..ಇವೆಲ್ಲ ಮೈತ್ರಿಯ ಗಂಭೀರತೆಯನ್ನು ಕಡಿಮೆ ಮಾಡಿವೆ.
ಮತ್ತೊಂದೆದೆ ಅತ್ಠ ಹಾಸನದಲ್ಲಿ ಕಾಂಗ್ರೆಸ್ ನಾಯಕನನ್ನು ಬಿಜೆಪಿ ಅಭ್ಯರ್ಥಿ ಮಾಡಿದೆ. ಇತ್ತ ಸುಮಲತಾ ಬಂಡಾಯಕ್ಕೆ ಬೆಂಬಲ ನೀಡಿದೆ. ಅತ್ತ ಬಳ್ಳಾರಿಯಲ್ಲಿ ಮತ್ತೊಬ್ಬ ಸ್ಥಳೀಯ ಕಾಂಗ್ರೆಸ್ ನಾಯಕ ದೇವೇಂದ್ರಪ್ಪ ಈಗ ಬಿಜೆಪಿ ಹುರಿಯಾಳು. ಇನ್ನು ಖರ್ಗೆ ವಿರುದ್ದ ಬಿಜೆಪಿಯಿಂದ ಅಖಾಡಕ್ಕೆ ಧುಮುಕಿರುವ ಉಮೇಶ್ ಜಾಧವ ಕೂಡಾ ಕಾಂಗ್ರೆಸ್ ನವರೆ.
ಅಷ್ಟೆ ಯಾಕೆ..ದಶಕಗಳ ಕಾಲ ಕಾಂಗ್ರೆಸ್ ರಾಜಕಾರಣ ಮಾಡಿ, ಸಿದ್ದರಾಮಯ್ಯ ಸಂಪುಟದಲ್ಲಿ ರೆವೆನ್ಯೂ ಮಂತ್ರಿಯಾಗಿದ್ದ ಶ್ರೀನಿವಾಸ ಪ್ರಸಾದ್ ಈಗ ಚಾಮರಾಜನಗರದಿಂದ ಬಿಜೆಪಿ ಕ್ಯಾಂಡಿಡೇಟ್.
ಬಿಜೆಪಿ ಗೆಲ್ಲುವುದು ಬಿಡುವುದು ಮತದಾರರಿಗೆ ಬಿಟ್ಟ ವಿಚಾರ. ಆದರೆ ಮೈತ್ರಿ ಯ ಒಡಕನ್ನೆ ಲಾಭ ಮಾಡಿಕೊಳ್ಳುವ ಜಾಣ ನಡೆ ಇಲ್ಲಿ ಎದ್ದು ಕಂಡಿದೆ. ಅಂತಹ ಜಾಣತನ ಇಲ್ಲಿ ಈ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟದಲ್ಲಿ ಕಾಣುತ್ತಿಲ್ಲ.
ಮಂಡ್ಯ, ತುಮಕೂರು, ಹಾಸನ ಮೂರು ಕಡೆ ಮೈತ್ರಿ ಇಲ್ಲದೆ ತೆರೆಮರೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿಗಳೇ ಗೆದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ಠಿದ್ದದ್ದು ಅಷ್ಟೆ ಸತ್ಯ.
ಆದರೆ ಮೈತ್ರಿ ರಾಜಕೀಯ ಮಾಡಿಕೊಳ್ಳಲು ಹೋಗಿ ಗೊಂದಲ ಸೃಷ್ಟಿಸಿಕೊಂಡ ಪರಿಣಾಮ ಈ ಮೂರೂ ಜಿಲ್ಲೆಗಳಲ್ಲಿ , ಮೊದಲ ಬಾರಿಗೆ ಹಳೆಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿ ಹೊರ ಹೊಮ್ಮುವಂತಾಗಿದೆ.
ಇವೆಲ್ಲವನ್ನೂ ನಿಭಾಯಿಸುವ, ಎಲ್ಲಕ್ಕಿಂತ ಹೆಚ್ಚಾಗಿ ಇಳಿವಯಸ್ಸಿನಲ್ಲಿರುವ ದೇವೇಗೌಡರನ್ನು ಗೆಲ್ಲಿಸುವ ಹೊಣೆಗಾರಿಕೆ ಸಿದ್ದರಾಮಯ್ಯ ಹೆಗಲಿಗೆ ಬಿದ್ದಿದೆ.
ಏನಾಗುತ್ತೋ ಕಾದು ನೋಡೋಣ..






0 Comments