-ಚಿನ್ನಸ್ವಾಮಿ ವಡ್ಡಗೆರೆ
ಪಾಂಡವಪುರದಲ್ಲಿ ತೇಜಸ್ವಿ ಬಳಗದಿಂದ ಶನಿವಾರ ನಡೆದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಇಲ್ಲಿವೆ.
90 ರ ದಶಕದ ಕರ್ನಾಟಕ ಸಾಹಿತಿಕವಾಗಿ,ಸಾಂಸ್ಕೃತಿಕವಾಗಿ ಮತ್ತು ವೈಚಾರಿಕವಾಗಿ ಗಟ್ಟಿಯಾಗಿದ್ದ ಕಾಲ.ಮಾಧ್ಯಮಗಳು,ಚಳವಳಿಗಳು ಕ್ರೀಯಾಶೀಲವಾಗಿ ನೈತಿಕ ನೆಲೆಗಟ್ಟಿನಲ್ಲಿ ಆತ್ಮಸಾಕ್ಷಿಗೆ ಬದ್ಧವಾಗಿ ಭ್ರಷ್ಟಚಾರ,ಸಾಮಾಜಿಕ ಅಸಮಾನತೆ, ಜಾತೀಯತೆ ವಿರುದ್ಧ ಹೋರಾಟ ನಡೆಸುತ್ತಿದ್ದ ಕಾಲ.
ಇಂತಹ ಸುವರ್ಣಯುಗದಲ್ಲಿ ನಮ್ಮ ತಲೆಮಾರಿನ ಹುಡುಗರು ಕಾಲೇಜು ವಿಧ್ಯಾಥರ್ಿಗಳಾಗಿ ಆದರ್ಶದ ಬೆನ್ನುಹತ್ತಿ ಸಮಸಮಾಜ ನಿರ್ಮಾಣದ ಕನಸು ಕಾಣುತ್ತಾ ಭ್ರಷ್ಟಚಾರದ ವಿರುದ್ಧ ಹೋರಾಡಲು ಕೈಯಲ್ಲಿ ಲಂಕೇಶ್ ಪತ್ರಿಕೆ ಹಿಡಿದು ಸಭೆಸಮಾರಂಭ ಸೆಮಿನಾರು, ನಾಟಕ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಾಜರಾಗುತ್ತಿದ್ದೆವು.
ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ನಮಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಆದರ್ಶವಾಗಿ ಕಾಣುತ್ತಿದ್ದರು.
ರೈತ ಚಳವಳಿ,ದಲಿತ ಸಂಘರ್ಷ ಸಮಿತಿ(ದಸಂಸ) ಆಡಳಿತಶಾಯಿಗೆ ನಡುಕ ಹುಟ್ಟಿಸಿತ್ತು.ಇದಕ್ಕೆ ಕಾರಣ ಆ ಚಳುವಳಿಯ ಬೆನ್ನಿಗೆ ಇದ್ದ ದೈತ್ಯ ಶಕ್ತಿಗಳು.
ಪ್ರೊ.ನಂಜುಂಡಸ್ವಾಮಿ,ಪುಟ್ಟಣ್ಣಯ್ಯ,ಸುಂದರೇಶ್ ಮುಂತಾದ ದಿಗ್ಗಜರು ರೈತ ಚಳವಳಿಯನ್ನು ಮುನ್ನಡೆಸಿದರೆ,ಪ್ರೊ.ಕೃಷ್ಣಪ್ಪ,ದೇವನೂರು ಮಹಾದೇವ,ಮುನಿಯಪ್ಪ,ಸಿದ್ದಲಿಂಗಯ್ಯ ಮುಂತಾದವರು ದಸಂಸ ಶಕ್ತಿಯಾಗಿದ್ದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ,ಪಿ.ಲಂಕೇಶ್,ಕೆ.ರಾಮದಾಸ್,ಕೆ.ಟಿ.ಶಿವಪ್ರಸಾದ್ ಮತ್ತಿತರರು ಈ ಚಳವಳಿಗಳಿಗೆ ಒತ್ತಾಸೆಯಾಗಿ ನಿಂತರು. ಲಹರಿ,ಲಂಕೇಶ್ ಪತ್ರಿಕೆ,ಸಂಕ್ರಮಣ,ರುಜುವಾತು ಜೊತೆಗೆ ಪ್ರಜಾವಾಣಿಯಂತಹ ಪತ್ರಿಕೆಗಳು ಸಮಾಜದ ಸಾಕ್ಷಿ ಪ್ರಜ್ಙೆಯಂತೆ ಕೆಲಸ ಮಾಡುತ್ತಿದ್ದವು.
ಮನಸ್ಸು ಮಾಡಿದ್ದರೆ ಯಾವುದಾದರೂ ವಿಶ್ವ ವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ಮತ್ತು ಕುಲಪತಿಗಳಾಗುವ ಅವಕಾಶವಿದ್ದ ತೇಜಸ್ವಿಯವರು ಅದೆಲ್ಲವನ್ನೂ ನಿರಾಕರಿಸಿ ಕಾಡಿನ ದಿಕ್ಕಿಗೆ ನಡೆದು ಬಿಟ್ಟರು. ಅಧಿಕಾರ, ಅಂತಸ್ತು,ಪ್ರಚಾರ,ಸೆಮಿನಾರು ಎಲ್ಲದ್ದರಿಂದ ದೂರವಾಗಿ ಮೂಡಿಗೆರೆಯ ಕಾಡಿನ ನಡುವೆ ತೋಟ ಮಾಡಿಕೊಂಡು ಏಕಾಂತವನ್ನು ಸುಖಿಸುತ್ತಾ ವರ್ತಮಾನಕ್ಕೆ ಸ್ಪಂದಿಸುತ್ತಿದ್ದ ತೇಜಸ್ವಿ ಮಾದರಿ’ ಆಗ ನಮಗೆಲ್ಲ ಆದರ್ಶದ ರೀತಿಯಲ್ಲಿ ಕಾಣತೊಡಗಿತು. ಮೊದಲಿಗೆ ಜನ್ನಾಪುರದ ಬಳಿ ಚಿತ್ರಕೂಟ’ ಎಂಬ ತೋಟ ಕಟ್ಟಿದ ತೇಜಸ್ವಿ ಅಲ್ಲಿ ಮಳೆ ಸರಿಯಾಗಿ ಬಾರದ ಕಾರಣ ನೀರಿನ ತೊಂದರೆಯಿಂದಾಗಿ ಆ ತೋಟವನ್ನು ಮಾರಾಟಮಾಡಿ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಸಮೀಪ ನಿರುತ್ತರ’ ಎಂಬ ಇನ್ನೊಂದು ತೋಟ ಮಾಡಿದರು. ಅಲ್ಲಿಂದ ವಿಸ್ಮಯ’ ಗಳ ಬೆನ್ನುಹತ್ತಿ ಆನೆ ನಡೆದದ್ದೆ ದಾರಿ ಎನ್ನುವಂತೆ ನಡೆದ ತೇಜಸ್ವಿ ನಮ್ಮ ಆಳಕ್ಕೆ ಇಳಿಯತೊಡಗಿದರು.
ಅವರ ಪರಿಸರದ ಕತೆಗಳ ಮೂಲಕ ನಮಗೆ ಪರಿಚಿತರಾದ ಮಂದಣ್ಣ,ಪ್ರಭಾಕರ,ಪ್ಯಾರ,ಬಿರಿಯಾನಿ ಕರಿಯಪ್ಪ,ಕೊಬ್ರಾ ಕಾಳಪ್ಪ, ಕವರ್ಾಲೊ ಮುಂತಾದವರ ಪ್ರತಿಬಿಂಬ ನಮ್ಮೂರಿನ ನಮ್ಮ ನಡುವಿನ ಜನರಲ್ಲೂ ಕಂಡು ನಮಗೆಲ್ಲಾ ಅಚ್ಚರಿಯಾಗುತ್ತಿತ್ತು.

ಅಪ್ಪಟ ಗ್ರಾಮೀಣ ಪ್ರದೇಶದ ನೆಲಮೂಲದಿಂದ ಎದ್ದುಬಂದ ಜೀವಂತ ವ್ಯಕ್ತಿಗಳು ಕತೆ,ಕಾದಂಬರಿ,ಪರಿಸರದ ಕತೆಗಳಲ್ಲಿ ಪಾತ್ರಗಳಾಗಿ ನಮ್ಮನ್ನು ಕೆಣಕುತ್ತಿದ್ದರು.ಮೂಡಿಗೆರೆಯ ಹ್ಯಾಂಡ್ಪೋಸ್ಟು, ಅಂಚೆ ಕಚೇರಿ,ಜೇನು ಉತ್ಪಾದನಾ ಸೊಸೈಟಿ,ಹಿಂದಿನ ಸೀಟೇ ಇಲ್ಲದ ವೆಸ್ಬಾ ಸ್ಕೂಟರು,ಓಪನ್ ಜೀಪು, ಮೊನಕಾಲಿನ ಬಳಿ ಮಡಿಕೆ ಹಾಕಿದ ನೀಲಿ ಜೀನ್ಸ್ ಪ್ಯಾಂಟ್ ಧರಿಸಿ ಅರ್ಧ ತೋಳಿನ ಚೌಕಳಿ ಶಟರ್್ ತೊಟ್ಟು ಹೆಗಲ ಮೇಲೆ ಕೋವಿ ಏರಿಸಿ ಕತ್ತಿಗೆ ಕ್ಯಾಮರ ನೇತು ಹಾಕಿಕೊಂಡು ತಲೆಯ ಮೇಲೆ ಟೋಪಿ ಹಾಕಿಕೊಂಡು ತಮ್ಮ ಪ್ರೀತಿಯ ಕಿವಿ’ ಯೊಂದಿಗೆ ಕಾಡಿಗೆ ಹೊರಟ ತೇಜಸ್ವಿಯ ಚಿತ್ರ ನೋಡಿ ನಾವೆಲ್ಲ ಮರುಳಾಗಿದ್ದೆವು. ನಾವು ಕೂಡಾ ಹೀಗೆ ಅವರ ಹಾಗೆ ಯಾರ ಹಂಗು ಇಲ್ಲದೆ ಜೀವಿಸುವ ಸ್ವಾತಂತ್ರ್ಯ ಗಳಿಸಿಕೊಂಡರೆ ನಮ್ಮ ಜೀವನವೂ ಸಾರ್ಥಕ ಎಂದೇ ಭಾವಿಸಿದ್ದೆವು.ಆಮೇಲೆ ಇದು ಎಷ್ಟು ಕಷ್ಟ ಅಂತ ನಮಗೆ ತಿಳಿಯಿತು. ಅವರೆ ಹೇಳಿದಂತೆ ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೆ ಹೊರತು ಸುಲಭವಲ್ಲ’ ಎನ್ನುವುದು ನಮ್ಮ ಅರಿವಿಗೂ ಬಂತು.ಅನುಭವ ಪಾಠ ಕಲಿಸಿತು.
ತೇಜಸ್ವಿ ಗ್ರಾಮ ಭಾರತದಲ್ಲಿ ನಿಂತು ಅಲ್ಲಿಯ ಬದುಕನ್ನು ಗ್ರಹಿಸುತ್ತಾ ಅದನ್ನು ನೇರವಾಗಿ ಸರಳವಾಗಿ ಹಾಸ್ಯದ ದಾಟಿಯಲ್ಲಿ ಹೇಳುತ್ತಾ ಹೋದರು. ಸಾಹಿತ್ಯದ ವಿದ್ಯಾಥರ್ಿಗಳಾದ ನಾವು ಓದುತ್ತಿದ್ದ ನಮ್ಮ ಮೆಚ್ಚಿನ ಲೇಖಕರೆಲ್ಲರು ಕತೆ,ಕಾವ್ಯ,ಕಾದಂಬರಿ ಬರೆಯುವುದರಲ್ಲಿ ನಿರತರಾಗಿದ್ದರು.ಆದರೆ ತೇಜಸ್ವಿ ಮಾತ್ರ ಭಿನ್ನ ದಾರಿ ಹಿಡಿದಿದ್ದರು.
ಕತೆ ಕಾದಂಬರಿ ಜೊತೆಗೆ ವಿಜ್ಞಾನ,ಪರಿಸರ,ಕೀಟಿ ಪ್ರಾಣಿ ಪ್ರಪಂಚದ ಬಗ್ಗೆ ಬರೆಯುತ್ತಾ ಎಲ್ಲಾ ವಯಸ್ಸಿನ ಓದುಗರಿಗೆ ಅದರಲ್ಲೂ ಸಾಹಿತ್ಯ ವಲಯವನ್ನು ಮೀರಿ ಜನಪ್ರಿಯರಾದರು.
ಇದನ್ನೇ ಜಯಂತ್ ಕಾಯ್ಕಿಣಿ ಅವರು ವಿಜ್ಙಾನದಲ್ಲಿ ರಾಮನ್ ಎಫೆಕ್ಟ್’ ಇದ್ದಂತೆ ಕನ್ನಡ ಸಾಹಿತ್ಯದಲ್ಲಿ ತೇಜಸ್ವಿ ಎಫೆಕ್ಟ್’ ಇದೆ ಎಂದು ಹೇಳಿದರು. ವಿಸ್ಮಯ ಸರಣಿಯ ಮೂಲಕ ಪ್ರದೀಪ್ ಕೆಂಜಿಗೆ ಅವರೊಂದಿಗೆ ತೇಜಸ್ವಿ ಬರೆದ ಸರಣಿ ಪುಸ್ತಕಗಳು ವಿಜ್ಞಾನವನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಇವೆ.ಲಕ್ಷಾಂತರ ಓದುಗರನ್ನು ತಲುಪಿವೆ.
ತೇಜಸ್ವಿ ಅವರ ಬರಹಗಳಲ್ಲಿ ಗ್ರಾಮೀಣ ಜಗತ್ತು ಸಹಜವಾಗಿ ಮೂಡಿಬಂದಿದೆ.ಹಾಸ್ಯದ ಮೂಲಕ ಗಂಭಿರವಾದ ವಿಚಾರವನ್ನು ತೇಜಸ್ವಿ ಹೇಳುವ ರೀತಿ ಹೊಸತನದಿಂದ ಕೂಡಿದೆ.ನಾನು ಇಲ್ಲಿ ತೇಜಸ್ವಿ ಅವರ ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಅವರ ವ್ಯಕತ್ತಿತ್ವ ಮತ್ತು ಜೀವನ ಶೈಲಿಯ ಬಗ್ಗೆ ಒಂದೆರಡು ನುಡಿಗಳನ್ನು ಆಡುವೆ.
ನಾವೆಲ್ಲರು ತೇಜಸ್ವಿ ಮೂಡಿಗೆರೆ ಕಾಡಿಗೆ ದೊಡ್ಡ ಆದರ್ಶ ಇಟ್ಟುಕೊಂಡು ಕೃಷಿ ಮಾಡಲು ಹೋಗಿ ನೆಲೆಸಿದ್ದಾರೆ ಎಂದುಕೊಂಡಿದ್ದೆವು.ಆದರೆ ಮಲೆನಾಡಿನ ಮೂಡಿಗೆರೆಯಲ್ಲಿ ಕಾಡು ತೆಗೆದುಕೊಂಡು ಕಾಫಿ ತೋಟ ಮಾಡಲು ನಿರ್ಧರಿಸಿದ್ದು,ಕಾಫಿ ತೋಟದ ಲಾಭಕ್ಕಾಗಲಿ,ಹಳ್ಳಿಗೆ ಹಿಂತಿರುಗುವ ಆದರ್ಶಕ್ಕಾಗಲಿ,ವ್ಯವಸಾಯದ ಮೇಲಿನ ಪ್ರೀತಿಯಿಂದಾಗಲಿ ಖಂಡಿತಾ ಅಲ್ಲ.ಯಾರ ಹಂಗು ಭಯ ಬೈಗುಳಗಳ ಕಾಟವಿಲ್ಲದೆ ಕಾಡು ಮೇಡು ಅಲೆದುಕೊಂಡು ಇರಬೇಕು ಎನ್ನುವುದೊಂದೆ ಮುಖ್ಯಕಾರಣ’ ಎಂದು ಹೇಳುವ ಮೂಲಕ ತೇಜಸ್ವಿ ನಮ್ಮಲ್ಲಿ ಅಚ್ಚರಿ ಮೂಡಿಸಿದ್ದರು. ಯಾರಿಗೆ ತಾವು ಇರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳು ಇರುವುದಿಲ್ಲವೊ ಅಂತಹವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ’ ಎನ್ನುವ ಮೂಲಕ ನಾವು ಇರುವಲ್ಲೆ ಸಂತೋಷವಾಗಿರುವ ಹೊಸ ಬಗೆಯನ್ನು ಕಲಿಸಿಕೊಟ್ಟರು.
ಈಟಿವಿಗೆ ಕುವೆಂಪು ಕುರಿತು ಜಯಂತ ಕಾಯ್ಕಿಣಿ ನಡೆಸಿದ ಸರಣಿ ಸಂದರ್ಶನದಲ್ಲಿ ತೇಜಸ್ವಿ ಹೇಳಿದ ಮಾತುಗಳು ನಮ್ಮನ್ನು ಸದಾ ಕಾಡುವಂತಿವೆ.
ಶಿವರಾಮ ಕಾರಂತರ ಬೆಟ್ಟದ ಜೀವ, ಕುಡಿಯರ ಕೂಸು ಕಾದಂಬರಿ ಓದುವಾಗ ಕಾಡು ಮನುಷ್ಯನಿಗೆ ಹೇಗೆ ದೊಡ್ಡ ಸವಾಲಾಗಿ ಕಂಡಿದೆ ಅಂತ ಗೊತ್ತಾಗುತ್ತದೆ.ಅಲ್ಲಿಂದ ಮುಂದೆ ಬಂದರೆ ಕುವೆಂಪು ಕಾದಂಬರಿಗಳಲ್ಲಿ ಕಾಡು ತಾಯಿಯ ಹಾಗೆ ನಮ್ಮನ್ನು ಪೊರೆಯುವ ಕಾಪಾಡುವ ರೀತಿಯಲ್ಲಿ ಕಾಣುತ್ತೆ. ನಮ್ಮ ಕಾಲಕ್ಕೆ ಬರುವಷ್ಟರಲ್ಲಿ ವಿನಾಶವಾಗುತ್ತಿರುವ ಕಾಡನ್ನು ನಾವೆ ಸಂರಕ್ಷಿಸಬೇಕಾದ, ಬಜೆಟ್ನಲ್ಲಿ ಹಣ ಮೀಸಲಿರಿಸಿ ಕಾಡು ವನ್ಯಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳುವ ಮೂಲಕ ಹೇಗೆ ನಾಗರಿಕತೆ ಪರಿಸರವನ್ನು ಹಾಳುಮಾಡಿ ವಾತಾವರಣವನ್ನು ಏರುಪೇರು ಮಾಡಿದೆ.ಜಗತ್ತು ವಿನಾಶದ ಕಡೆಗೆ ಮುಖಮಾಡಿದೆ ಎಂದು ಎಚ್ಚರಿಸುತ್ತಾರೆ. ಇಂದಿನ ಯುವ ಜನಾಂಗವನ್ನು ನೋಡಿದರೆ ನಿಮಗೆ ಏನ್ ಅನಿಸುತ್ತೆ ಎಂಬ ಪ್ರಶ್ನೆಗೆ ಗ್ರೇಟ್ ಫ್ಯೂಚರ್ ಇದೆ ಅನ್ಸುತ್ತೆ.ಆದರೂ ಒಂದೊಂದು ಸಾರಿ ಇವರು ಮತೀಯವಾದ ಕೋಮುವಾದವನ್ನು ತಲೆಯಲ್ಲಿ ತುಂಬಿಕೊಂಡು ಓಡಾಡುವುದನ್ನು ನೋಡಿದರೆ ಇವರಿಗೆ ಭವಿಷ್ಯ ಇದೀಯಾ ಅನಿಸುತ್ತೆ.ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದೀಯಾ’ ಎಂಬ ಆತಂಕದಲ್ಲಿ ಮಾತು ಮುಗಿಯುತ್ತದೆ.
ಕೊಂದವರು ಉಳಿದರೆ ಎಂಬ ಬಸವಣ್ಣನ ವಚನ ಇದನ್ನೆ ಹೇಳುತ್ತದೆ.ಇದು ಈ ಕಾಲಮಾನದಲ್ಲಿ ಎಲ್ಲರೂ ಯೋಚಿಸಬೇಕಾದ ವಿಚಾರ.






0 Comments