ಸಮತಾ ಆರ್ ಹೇಳಿದ ಸೂಪರ್ ಕಾರ್ ಕಥೆ

ಸೆಕೆಂಡ್ ಹ್ಯಾಂಡ್ ಕಾರುಗಳ ಲೋಭ

ಸಮತಾ ಆರ್

“ಅಕ್ಕಾ , ಇವಳ್ ಕಾಟ ತಡಿಯೋಕಾಗೋಲ್ಲ, ಒಂಚೂರು ಒತ್ತಿ ಕೊಳ್ಳೆ ಅಂದ್ರೆ ಕಚ್ಚಕೇ ಬರ್ತಾಳೆ, ನಾನು ಅ ಮರದ ಕೆಳಗೆ ಬೇಕಾದ್ರೂ ಇರ್ತೀನಿ.ಇವಳ ಪಕ್ಕ ಮಾತ್ರ ಬೇಡ”ಎಂದು ಬೆಳ ಬೆಳಗ್ಗೆಯೇ ಲಿಯೋನ ರೋಧನೆ ಶುರುವಾಯಿತು.

“ದಿನ ಇವರ ಜಗಳ ಬಿಡಿಸಿ ಬಿಡಿಸಿ ನನ್ನ ಜೀವನವೇ ಕಳೆದು ಹೋಗುತ್ತೆ” ಅಂತ ವಿಪರೀತ ರೇಗಿ ಹೋಯಿತು. “ಲೋ ಅದ್ಯಕ್ರೋ ಹಿಂಗಾಡ್ತಿರ,ಒಂದ್ ಕಡೆ ಸುಮ್ನೆ ಇರೋಕೂ ಕಷ್ಟ ಅಂದ್ರೆ, ತಗದು ಮನೆಯಿಂದ ಎಸೆದು ಬಿಡ್ತೀನಿ ನೋಡಿ” ಅಂತ ಕೂಗಿಕೊಂಡು ಧಡಾರನೆ ಬಾಗಿಲು ತೆಗೆದು ಅಂಗಳಕ್ಕೆ ಹೋಗಿ ನೋಡಿದರೆ ಲಿಯೋ ಬೆಟ್ಟಿಗೆ ವರಗಿಕೊಂಡು ಇನ್ನೇನು ಬಿದ್ದೇ ಹೋಗುವವನಂತೆ ನಿಂತಿದ್ದಾನೆ. ನನ್ನ ಕಂಡ ತಕ್ಷಣವೇ ಬೆಟ್ಟಿ”ಲುಕ್ ಸಿಸ್ ಇವ್ನೆ ನನ್ ಮೇಲೆ ಬಿದ್ದಿರೋದು,ಒಂಚೂರು ಮ್ಯನರ್ಸ್ ಇಲ್ಲದ ಕಂಟ್ರಿ ಬ್ರುಟ್, ನಾನೇನು ಮಾಡಿಲಪ್ಪ, ಛೇ ಈ ಮನೆಗೆ ಯಾಕಾದರೂ ಬಂದೆನೋ ಅಂತ ಆಗ್ಬಿಟ್ಟಿದೆ,” ಎಂದು ಕುದಿದಳು.

“ಎಲಾ ಇವಳ, ಸೆಕೆಂಡ್ ಹ್ಯಾಂಡ್ ಆದ್ರೂ ಪೊಗರು ನೋಡು, ಎಲ್ಲಾ ನನ್ನ ಗಂಡನ ಕಿತಾಪತಿ, ತಲೆ ಮೇಲೆ ಕೂರಿಸಿಕೊಂಡು ಇದ್ದಾನೆ, ಇರ್ಲಿ ಕಾಲ ಬಂದಾಗ ಇವಳಿಗೆ ನಾನ್ಯಾರು ಅಂತ ತೋರಿಸ್ತೀನಿ” ಅಂತ ಹಲ್ಲು ಕಡಿಯುತ್ತ, “ಲೋ ನೀನು ಬಾರೋ ಇಲ್ಲಿ” ಅಂತ ಲಿಯೋನನ್ನು ಹಿಡಿದು ಸರಿಯಾಗಿ ನಿಲ್ಲಿಸಿ “ನೀನು ಅವಳ ತಂಟೆಗೆ ಹೋಗಬೇಡ ಅಂತ ಎಷ್ಟು ಸರಿ ಹೇಳಿಲ್ಲ, ನಿಂಗೂ ತಲೆ ಸರಿಯಿಲ್ಲ” ಅಂತ ಬೈದು ಒಳಹೋದೆ.

ಇದೇನಪ್ಪಾ ವಿಚಿತ್ರ ಅಂದು ಕೊಂಡಿರ! ಅಯ್ಯೋ ಇದು ನಮ್ಮನೇಲಿ ದಿನ ನಡೆಯೋ ಕಥೆ. ನನ್ನ ಸ್ಕೂಟಿ ಲಿಯೋ ಮತ್ತು ನನ್ನ ಗಂಡನ ಕಾರು ಬೆಟ್ಟಿ ಇಬ್ಬರನ್ನು ನಿಲ್ಲಿಸಲು ಆಗುವಷ್ಟು ಜಾಗ ನಮ್ಮನೆ   ಅಂಗಳದಲ್ಲಿಲ್ಲ. ಇರೋ ಮೂವತ್ತು ನಲವತ್ತು ಸೈಟಿನಲ್ಲಿ ಮನೇ ಜನಕ್ಕೆಲ್ಲ ಆಗೋಷ್ಟು ರೂಮುಗಳು, ಬಚ್ಚಲು ಮನೆ, ಹಾಲ್, ಅಡಿಗೆ ಮನೆ, ಡೈನಿಂಗ್, ಅದರ ಮಧ್ಯೆ ದೇವರುಗಳಿಗೆ ಕೂಡ ಅಂತ ಒಂದು ಮನೆ ಅಂತೆಲ್ಲಾ ದುರಾಸೆ ಪಟ್ರೆ ಎಲ್ಲದೂ ಕಿಷ್ಕಿಂಧೆ ಆಗದೆ ಇನ್ನೇನಾಗತ್ತೆ ಹೇಳಿ. ಅದಕ್ಕೆ ಅಂಗಳ ಚಿಕ್ಕದಾಗಿ ದಿನಾ ಲಿಯೋ ಬೆಟ್ಟಿ ಜಗಳ ಬಿಡಿಸೋದೆ ಆಗಿದೆ.

ಇವರಿಬ್ಬರ ಸಹವಾಸವೇ ಬೇಡ ಅಂತ ನನ್ನ ಗಂಡನ ಬೈಕು ಹೀರೋ ಕಾಂಪೌಂಡ್ ಆಚೆ ನಿಂತುಕೊಳ್ತನೆ. ಇನ್ನು ಮಕ್ಕಳ ಬೈಸಿಕಲ್ ಗಳು ಯಾವುದೋ ಸಂದಿಯಲ್ಲಿ ತುರುಕಿಸಿ ಕೊಂಡು ತೆಪ್ಪಗಿವೆ.

ಇದೇನು ಮನೆಯೋ ಇಲ್ಲ ಗುಜರಿ ಅಂಗಡಿಯೋ ಅಂದುಕೊಂಡಿರಾ? ಏನ್ಮಾಡೋದು, ಆಧುನಿಕ ಕಾಲ, ಗಂಡ ಹೆಂಡತಿ ಇಬ್ರೂ ದುಡಿದ್ರೆ ತಾನೇ ಈ ಕಾಲದ ಖರ್ಚು ವೆಚ್ಚ ಎಲ್ಲಾ ಸರಿದೂಗಿಸಿ, ಇರೋ ಇಬ್ರು ಮಕ್ಕಳ ಚೆನ್ನಾಗಿ ಓದಿಸಿ ನಾಲ್ಕು ಜನರಂಗೆ ಬದುಕೋಕ್ಕೇ ಆಗೋದು.

ಮತ್ತೆ ಇನ್ನೂ ಕಷ್ಟ ಏನು ಅಂದ್ರೆ ಗಂಡ ಹೆಂಡತಿ ಇಬ್ಬರಿಗೂ ಒಂದೇ ಕಡೆ ಕೆಲಸ ಇರೋದು ಸಣ್ಣ ಸಣ್ಣ ಪಟ್ಟಣಗಳಲ್ಲಿ  ಅತೀ ಪುಣ್ಯವಂತರು ಮಾತ್ರ ಪಡೆದುಕೊಂಡು ಬಂದಿರೋ ಭಾಗ್ಯ. ನಾವಷ್ಟು ಭಾಗ್ಯವಂತರಲ್ಲದ ಕಾರಣ ನನ್ನ ಕೆಲಸ ಉತ್ತರ ದಿಕ್ಕಲ್ಲಾದರೆ, ನನ್ನ ಗಂಡ ದಿನವೂ ದಕ್ಷಿಣ ದಿಕ್ಕಿಗೆ ಪಯಾಣಿಸಬೇಕು. ಅದಕ್ಕೆ ನಾನು ಲಿಯೋ ಬೆನ್ನೇರಿ ಹೋದರೆ ಅವರಿಗೆ ಅವರ ಹೀರೋನೆ ದಿಕ್ಕು.
ಮತ್ತೆಲ್ಲಾದರು ಕಾರ್ಯ, ಸಮಾರಂಭ, ಊರೂ ಕೇರಿ, ನೆಂಟರ ಮನೆಗೆ ಅಂತ ಹೋಗಬೇಕಾದ ಸಂದರ್ಭಗಳಿಗೆ ಬೆಟ್ಟಿ ಇದ್ದಾಳಲ್ಲ. ಅದಲ್ಲದೆ ಮಕ್ಕಳಿಗೆ ಬೈಸಿಕಲ್ ಕೊಡಿಸದಿದ್ದರೆ ಅವರ ಕಾಟ ತಡೆಯೋಕೆ ಆದೀತೇ?ಇಷ್ಟೆಲ್ಲಾ ವಾಹನಗಳನ್ನು ಮನೆಯಲ್ಲಿ ಇರೋ ಬರೋ ಜಾಗದಲ್ಲೆಲ್ಲ ತುರುಕಿದರೆ ಮನೆ ಗುಜರಿ ಅಂಗಡಿ ಥರ ಕಾಣದೇ ಇರತ್ತಾ ಹೇಳಿ.

ಇವಿಷ್ಟು ವಾಹನಗಳಲ್ಲಿ ಬೆಟ್ಟಿಗೇ ಗಂಡ ಮಕ್ಕಳ ಮೊದಲ ಮುದ್ದು. ಬೆಟ್ಟಿ ಒಂದು ಸೆಕೆಂಡ್ ಹ್ಯಾಂಡ್ ಕಾರು. ಮನೆ ಕಟ್ಟಿ ಹಣಕಾಸಿನ ವಿಷಯದಲ್ಲಿ ನಿಂತು ಹೋಗಿದ್ದ ನಾವು ಹೊಸ ಕಾರ್ ತೋಗೊಳ್ಳೋ ಸ್ಥಿತಿಲೇನು ಇರ್ಲಿಲ್ಲ. ಆದ್ರೆ ನಾವಿರೋ ಮನೆ ಊರಾಚೆಯ ಒಂದು ಬಡಾವಣೆಯಾಗಿದ್ದು ಎಲ್ಲಿಗೂ ನಾವು ನಾಲ್ವರೂ ಒಟ್ಟಿಗೆ ಹೋಗಲಾಗದೆ ಸೆಕೆಂಡ್ ಹ್ಯಾಂಡ್ ಆದ್ರೂ ಸರಿ ಕಾರ್ ಬೇಕು ಅನ್ನಿಸಿ ಬೆಟ್ಟಿಯನ್ನ ಮನೆಗೆ ಕರೆ ತಂದೋ.

ಮುಕ್ತ ಮಾರುಕಟ್ಟೆ ಆದ ಮೇಲೆ ಭಾರತದಲ್ಲಿ ವಿವಿಧ ಬ್ರಾಂಡ್ ಗಳ, ದೇಶ ವಿದೇಶಗಳ ಕಾರ್ ಗಳಿಗೆನು ಬರವೇ. ವರ್ಷಕ್ಕೊಂದು ಕಾರ್ ಬದಲಾಯಿಸಿ ಶೋಕಿ ಮಾಡೋ ಜನಕ್ಕೂ ಏನೂ ನಮ್ಮ ದೇಶದಲ್ಲಿ ಕಮ್ಮಿ ಇಲ್ಲ. ಬೆಂಗಳೂರು, ಮುಂಬೈ, ದೆಹಲಿ, ಹೈದ್ರಾಬಾದ್, ಚೆನ್ನೈ ಅಂತ ಎಲ್ಲಾ ನಗರಗಳಿಗೆ ಹೋಗಿ ನೋಡಿ ಕಾರುಗಳ ಸಾಗರದಲ್ಲಿ ಜನ ಮುಳುಗಿ ಹೋಗಿರುತ್ತಾರೆ. ಅವರು ಬಳಸಿ ಬೇಜಾರಾಗಿ ಬಿಟ್ಟ ಕಾರ್ ಗಳು ಅಗ್ಗಕ್ಕೆ ಸಿಗೋದಿಂದ್ರಾಗಿ ನಮ್ಮಂಥ ಮಧ್ಯಮ ವರ್ಗದವರಿಗೆ ಕೂಡ ಲಕ್ಸುರಿ ಕಾರ್ ಏರೋ ಭಾಗ್ಯ ಬಂದಿದೆ ನೋಡಿ.

ಅದೇನೋ ನವಿಲು ನೋಡಿ ಕೆಂಬೂತ ಪುಕ್ಕ ತೆರೆದುಕೊಳ್ತು ಅನ್ನೋ ಹಾಗೇ ಸಿರಿವಂತ್ರು  ಹೊಸ ಲಕ್ಸುರಿ ಕಾರು ತೋಗೊಳ್ಳೊದ ನೋಡಿ ಮಧ್ಯಮದೋರು ಸೆಕೆಂಡ್ ಹ್ಯಾಂಡ್ ಲಕ್ಸುರಿ ಕಾರ್ ತೋಗೊಂಡ್ರು ಅನ್ನಬಹುದೇನೋ.

ಬೆಟ್ಟಿ ನೋಡಿದ್ರೆ ಯಾರೂ ಸೆಕೆಂಡ್ ಹ್ಯಾಂಡ್ ಅನ್ನೋ ಹಾಗೇ ಇಲ್ಲ, ಅಷ್ಟು ತಣ ತಣಾ ಅಂತ ಹೊಳಿತಾಳೆ. ಅವಳ ಮೊದಲ ಮಾಲೀಕ ಒಂದು ವರ್ಷ ಓಡಿಸಿ ಆಮೇಲೆ ಬೇಜಾರಾಗಿ ಇವಳನ್ನು ಬಿಟ್ಟು ಇನ್ನೂ ಒಂದು ಬೆಲೆಬಾಳುವ ಕಾರಿಗೆ ಮರುಳಾದನಂತೆ. ಅವನಿಗೇನು ಬಿಡಿ ಸಾಫ್ಟ್ ವೇರ್ ಕುಳ, ವರ್ಷಕ್ಕೆ ಒಂದೇನು ಎರಡು ಕಾರ್ ಬೇಕಾದ್ರೂ ಬದಲಾಯಿಸಬಹುದು.

ಆಧುನಿಕ ವಿದ್ಯಾಭ್ಯಾಸ, ಜಾಗತೀಕರಣದಿಂದ ತೆರೆದು ಕೊಂಡ ಸಾಫ್ಟ್ ವೇರ್ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಉದ್ಯೋಗಾವಕಾಶಗಳು ದೇಶದ ಮಧ್ಯಮ ವರ್ಗದ ಜನರ ಕೈಯಲ್ಲಿ ಸಾಕಷ್ಟು ಹಣ ಹರಿಯುವಂತೆ ಮಾಡಿವೆ. ಹಣ ಹೆಚ್ಚಾದ ಹಾಗೆ ಖರ್ಚು ಮಾಡುವ ಬೇರೆ ಬೇರೆ ದಾರಿಗಳನ್ನೂ ಹುಡುಕಿ ಕೊಂಡಿದ್ದಾರೆ. ಹಾಗೆಯೇ ಈ ಕಾರ್ ಅನ್ನೋದು ಸುಲಭವಾಗಿ ಅವರ ಜೀವನಾವಶ್ಯಕತೆಗಳಲ್ಲಿ ಸೇರಿ ಹೋಗಿಬಿಟ್ಟಿದೆ. ಎಷ್ಟು ಕಾರ್ ನ ಬೆಲೆ ಹೆಚ್ಚೋ, ಬ್ರಾಂಡ್ ನೇಮ್ ಎಷ್ಟು ಪ್ರಸಿದ್ದವೋ ಅಷ್ಟು ಅದರ ಮಾಲೀಕರ ಪ್ರತಿಷ್ಟೆಯೂ ಹೆಚ್ಚು.

ನಾವೆಲ್ಲಾ ಶಾಲೆ ಕಾಲೇಜುಗಳಿಗೆ ಹೋಗುತ್ತಿದ್ದಾಗ ಅಂದರೆ ಎಂಬತ್ತು ತೊಂಬತ್ತರ ದಶಕದಲ್ಲಿ ಕಾರ್ ಇಟ್ಕೊಳ್ಳೋರು ಅಂದ್ರೆ ಆಗರ್ಭ ಶ್ರೀಮಂತರು ಮಾತ್ರ ಅನ್ನೋ ಭಾವನೆ ಚಾಲ್ತಿಯಲ್ಲಿತ್ತು. ಇನ್ನು ರಸ್ತೆಯಲ್ಲಿ ಕಾಣುತ್ತಾ ಇದ್ದ ಕಾರ್ ಗಳದ್ರೂ  ಅಂಬಾಸಿಡರ್, ಫಿಯಟ್, ಅಲ್ಲೊಂದು ಇಲ್ಲೊಂದು ಮಾರುತಿಗಳು ಮಾತ್ರ. ವಿದೇಶಿ ಕಾರ್ ಗಳನ್ನಂತು ಬರಿ ಪಿಚ್ಚರ್ ಗಳಲ್ಲಿ ಮಾತ್ರ ನೋಡ್ಕೋಬೇಕಿತ್ತು. ಸ್ಕೂಟರ್ ಬೈಕ್ ಕೂಡ ಅಂತಾ ಏನೂ ಯಾರೂ ಇಡ್ತಾ ಇರ್ಲಿಲ್ಲ. ಸೈಕಲ್ ಮಾತ್ರ ತುಂಬಾ ಜನ ಬಳಸೋರು. ಈಗಿನಂತೆ  ವೀಕೆಂಡ್ ಟ್ರಿಪ್ಪು, ಸಮ್ಮರ್ ವೆಕೇಶನ್ ಅಂತ ಸುಮ್ಮ ಸುಮ್ಮನೆ ಸುತ್ತೋದೇನು ಇರ್ಲಿಲ್ಲ. ಇನ್ನು ಹತ್ತಿರದ ಅಂಗಡಿ, ಆಸ್ಪತ್ರೆ, ಸ್ಕೂಲ್ ಗೆಲ್ಲ ನಮ್ಮಮ್ಮ ಹೇಳುತ್ತಿದ್ದಂತೆ ನಡೆರಾಜ ಸರ್ವಿಸೇ.

ವರ್ಷಕ್ಕೆರಡು ರಜಗಳಾದ ಬೇಸಿಗೆ, ದಸರಾಕ್ಕೆ ನಮ್ಮೂರು ಸಾಲಿಗ್ರಾಮಕ್ಕೇ ಕೆಂಪು ಬಸ್ ಏರಿ ಹೋದರಾಯಿತು. ಅದೇ ದೊಡ್ಡ ಸಂಭ್ರಮ. ಇನ್ನು ಊರಲ್ಲಿ ಹತ್ತಿರದ ಹಳ್ಳಿಗಳ ನೆಂಟರ ಮನೆಗೆ ಹೋಗೊದಾದ್ರೆ ಎತ್ತಿನ ಗಾಡಿ ಹತ್ತಿ ಹೋಗುವ ಖುಷಿ. ನನಗೆ ನೆನಪಿರುವಂತೆ ನಮ್ಮಪ್ಪ ತಾವು ಕೆಲಸದಲ್ಲಿದ್ದ ಕಂಪನಿಗೆ ಸುಮಾರು ವರ್ಷ ಸೈಕಲ್ ಹೊಡೆದು, ನಂತರ ಯಾವುದೋ ಒಂದು ಅನುದಾನದಲ್ಲಿ ಸ್ಕೂಟರಿಗೆ ಬಡ್ತಿ ಪಡೆದಿದ್ದೇ ನಮ್ಮ ಬಳಗದಲ್ಲಿ ದೊಡ್ಡ ಸಂಗತಿಯಾಗಿಬಿಟ್ಟಿತ್ತು.

ನಮ್ಮಪ್ಪನ  ಕಂಪನಿ ಪೆಟ್ರೋಲ್ ಖರ್ಚಿಗೆ ಅಂತ ಕಾರ್ ಇರುವವರಿಗೆ ಪೆಟ್ರೋಲ್ ಅನುದಾನ ಅಂತ ತಿಂಗಳಿಗೆ ಎರಡು ಸಾವಿರ ರೂಪಾಯಿ ಕೊಡುತ್ತಿತ್ತು. ಆ ಕಾಲಕ್ಕೆ ಎರಡುಸಾವಿರ ಅಂದರೆ ದೊಡ್ಡ ಮೊತ್ತವೇ,ಅಷ್ಟು ಹಣಕ್ಕೆ ಐದು ಗ್ರಾಂ ಚಿನ್ನ ಬರುತಿತ್ತು ಅಂದ್ರೆ ಯೋಚನೆ ಮಾಡಿ.ಅಲ್ಲದೆ ಕಾರ್ ಇದೆ ಅಂತ ಕಂಪನಿಗೆ ತಿಳಿಸಿದ್ದರೆ ಸಾಕಿತ್ತು,ದಿನ ತೊಗೊಂಡು ಹೋಗಬೇಕು ಅಂತ ಏನೂ ಇರ್ಲಿಲ್ಲ.ಆದರೆ ವರ್ಷದಲ್ಲಿ ಒಂದುಸಾರಿ ಆಫೀಸ್ ಗೆ ತೊಗೊಂಡು ಹೋಗಿ ಕಾರ್ ಇರುವುದರ ಬಗ್ಗೆ ನವೀಕರಣ ಮಾಡಿ ಬರಬೇಕಿತ್ತು.ಇಷ್ಟಾದರೆ ಸಾಕು ತಿಂಗಳಿಗೆ ಎರಡು ಸಾವಿರ ಕುಳಿತ ಹತ್ರ ಬರ್ತಿತ್ತು.

“ಹಂಗೇ ಸಿಗೋದಾದ್ರೆ ನಂಗೂ ಒಂದು ನಮ್ಮಪ್ಪಂಗೂ ಒಂದು” ಅನ್ನೋ ಹಂಗೆ, ಇಷ್ಟು ಲಾಭದಾಯಕ ಕೊಡುಗೆ ಸುಮ್ಮನೆ ಬಿಡಲಾದೀತೆ! ಆದ್ರೆ ಹೊಸ ಕಾರ್ ತೋಗೊಳ್ಳೋ ಅಷ್ಟು ದುಡ್ಡು ಇರದಿದ್ದಲ್ಲಿ ಏನ್ ಮಾಡೋದು? ಆಗ ಸಹಾಯಕ್ಕೆ ಬಂದದ್ದು ಸೆಕೆಂಡ್ ಹ್ಯಾಂಡ್ ಕಾರುಗಳು.

ಸುಮಾರು ಜನ ಹಾಗೆ ಇಪ್ಪತ್ತು ಮೂವತ್ತು ಸಾವಿರಗಳಿಗೆಲ್ಲ ಒಂದೊಂದು ಡಬ್ಬಾ ಕಾರ್ ಗೆ ಖರ್ಚು ಮಾಡಿದ್ದರೂ, ಒಂದು ವರ್ಷಕ್ಕೆಲ್ಲಾ ಆ ಕಾರು ತನ್ನ ದುಡ್ಡು ತಾನು ದುಡಿದುಕೊಳ್ಳುತ್ತಿತ್ತೂ. ಇಡೀ ವರ್ಷ ಸುಮ್ಮನೆ ಕಾರ್ ಶೆಡ್ ನಲ್ಲಿ ನಿಂತಿರುತ್ತಿದ್ದ ಕಾರ್ ಗೆ ಕಂಪೆನಿಗೆ ಅನುದಾನ ನವೀಕರಣಕ್ಕಾಗಿ ಹೋಗೋ ದಿನ ಬಂದರೆ ಸರ್ವೀಸ್ ಮಾಡಿಸೋ ತಲೆಬಿಸಿ ಅದರ ಮಾಲೀಕರಿಗೆ.

ಅಂತಹ ಒಂದು ಸಮಯದಲ್ಲಿ ಅಪ್ಪನ ಅದೃಷ್ಟಕ್ಕೆ ಯಾವುದೋ ಒಂದು ಫಿಯಟ್ ಬರಿ ಇಪ್ಪತ್ಸಾವಿರಕ್ಕೆ ಸಿಕ್ಕಿಬಿಟ್ಟು ಖರೀದಿಸಿಯೂ ಆಯಿತು. ತಂದ ಮೊದಲನೇ ವರ್ಷ ಚೆನ್ನಾಗಿಯೇ ಓಡಿತು. ಅಪ್ಪ, ತಮ್ಮ ಇಬ್ಬರೂ ಚೆನ್ನಾಗಿ ಓಡಿಸಲು ಕಲಿತೂ ಆಯಿತು. ಒಂದೇ ವರ್ಷದಲ್ಲಿ ಅದಕ್ಕೆ ಹಾಕಿದ ದುಡ್ಡು ಮರಳಿ ಬಂದೂ ಬಿಟ್ಟಿತು.

ಮಾರನೇ ವರ್ಷ ಕಾರ್ ನವೀಕರಣಕ್ಕೆ ಇನ್ನೆರಡು ದಿನ ಇರುವಾಗ, ಅಪ್ಪ ಸರ್ವೀಸ್ ಗೆ ತೊಗೊಂಡು ಹೋಗೋಣ ಅಂತ ಹೋದ್ರೆ ಜಪ್ಪಯ್ಯ ಅಂದ್ರೂ ಅದು ಸ್ಟಾರ್ಟ್ ಆಗಬಾರದ! ಅಪ್ಪನ ಬಿಪಿ ಏರಲು ಶುರುವಾಗಿ ಬಿಟ್ಟಿತು. ಅಷ್ಟರಲ್ಲಿ ನನ್ನ ತಮ್ಮ ಒಬ್ಬ ಮೆಕ್ಯಾನಿಕ್ ಕರೆತಂದು ಇಬ್ಬರೂ ಸೇರಿ ಗರಾಜ್ ವರೆಗೆ ಕಾರ್ ತಳ್ಳಿ “ಹೆಂಗೋ ಒಂದು ದಿನದ ಮಟ್ಟಿಗೆ ಓಡೋ ಹಂಗೇ ಮಾಡಪ್ಪ”ಅಂತ ಆ ಮೆಕ್ಯಾನಿಕ್ ಗೆ ದಮ್ಮಯ್ಯ ಗುಡ್ಡಯ್ಯ ಹಾಕಿ ವಾಪಸ್ ಬಂದರು.

ಸರಿ ಮಾರನೇ ದಿನ ಬೆಳ ಬೆಳಗ್ಗೆಯೇ  ಆ ಮೆಕ್ಯಾನಿಕ್ ನಮ್ಮ ಮನೆಗೆ ಅವತರಿಸಿ “ಅದೂ, ಸಾರ್, ನಿಮ್ ಕಾರೂ,” ಅಂತ ತಲೆ ಕೆರೆಯುತ್ತ ನಿಂತಾಗಲೆ ಅಪ್ಪ,ತಮ್ಮನಿಗೆ ಗೊತ್ತಾಯಿತು. “ಓಹ್, ಇನ್ನ ಇದು ರಿಪೇರಿಯಾಗೋ ಬಾಬಲ್ಲಾ” ಅಂತ. ಇನ್ನೇನು ಮಾಡೋದು ಅಂತ ಇಬ್ಬರೂ  ತಲೆ ಕೆರೆಯುತ್ತ ನಿಂತಿದ್ದಾಗ ನನ್ನತಮ್ಮ ಹೇಳಿದ “ನೋಡೋ ಹೆಂಗಾದರೂ ಕಾರ್  ಹತ್ತು ನಿಮಿಷ  ಓಡೋ ಹಾಗೆ ಮಾಡು. ಕಂಪನಿ ಗೇಟ್ ತನಕ ನಾನು ನೀನು ಸೇರಿ ತಳ್ಳಿ ಕೊಡೋಣ, ಆಮೇಲೆ ಅಣ್ಣ ಒಳಗಡೆ ಆಫೀಸ್ ವರೆಗೆ ಓಡಿಸಿಕೊಂಡು ಹೋಗಿ ರಿಜಿಸ್ಟರ್ ಮಾಡಿಸಿ ವಾಪಸ್ ಗೇಟ್ ಹತ್ರ ಬರೋ ಹಂಗೇ ಮಾಡು ಸಾಕು, ಮತ್ತೆ ಮನೆ ತಂಕ ತಳ್ಳಿದರಾಯಿತು” ಅಂತ ಪ್ಲಾನ್ ಹೇಳಿಕೊಟ್ಟ.

ಅದರಂತೆ ಮಾರನೇ ದಿನ ಕಾರ್ ಪರೀಕ್ಷೆಗೆ ಹಾಜರಾಗಿ ಪಾಸಾಗಿ ಬಿಟ್ಟು ಒಂದು ವರ್ಷದ ಪೆಟ್ರೋಲ್ ಅನುದಾನ ಗಿಟ್ಟಿಸಿಯೇ ಬಿಡ್ತು. ಮನೆಗೆ ಬಂದ ನನ್ನ ತಮ್ಮ ಬಿದ್ದೂ ಬಿದ್ದೂ ನಗುತ್ತ “ನಮ್ಮೊಬ್ಬರದೆ ಅಲ್ಲ ಕಣೇ, ಎಷ್ಟೊಂದು ಜನ ಹಂಗೇ ತಳ್ಳು ನೂಕು ಐಸಾ ಮಾಡ್ತಿದಾರೆ” ಎಂದಾಗ ನಮ್ಮ ಫಿಯಟ್ “ಹೆಂಗೋ ಕೂತ ಹತ್ರನೆ ಸಾವಿರಾರು ರೂಪಾಯಿ ವರ್ಷಕ್ಕೆ ದುಡಿತಿಲ್ವ” ಅಂತ ಜಂಬ ಕೊಚ್ಚಿಕೊಂಡ.

ಹೀಗೆ ತನ್ನ ಖರೀದಿಗೆ ಮಾಡಿದ ಹಣಕ್ಕಿಂತ ಎರಡು ಪಟ್ಟು ಹೆಚ್ಚು ಪೆಟ್ರೋಲ್ ಅನುದಾನ ದುಡಿದ ಫಿಯಟ್ ಅಪ್ಪ ನಿವೃತ್ತಿ ಹೊಂದಿದ ವರ್ಷವೇ ಕೊನೆಯುಸಿರೆಳೆದು ಗುಜರಿ ಶಾಪ್ ಸೇರಿ ಬಿಟ್ಟ. ಈಗಲೂ ನನ್ನ ತಮ್ಮನಿಗೆ ಅವನನ್ನು ನೆನೆದರೆ ಪಾಪ ಅನ್ನಿಸುತ್ತಂತೆ.

ಅದಾದ ಬಳಿಕ, ನನ್ನ ಮದುವೆಯಾಗಿ ಗಂಡನ ಹತ್ತಿರ ಇದ್ದ ಬೈಕೇ ನಮ್ಮ ವಾಹನ. ಇಬ್ಬರು ಮಕ್ಕಳಾದ ಮೇಲೆ ನಾಲ್ವರೂ ಬೈಕೇರಿ ಹೋಗುವುದು ಕಷ್ಟವಾಗಿ ಹೊಸ ಕಾರ್ ತೊಗೊಳ್ಳೋಣ ಅಂತ ಆದಾಗ ಮಾರುತಿ ಮನೆಗೆ ಬಂದ. ತುಂಬಾ ಪಾಪ ಅಂದ್ರೆ ಪಾಪದವನು. ಮಾತೇ ಅಡ್ತಿರಲಿಲ್ಲ. ಆಗ ನಮ್ಮ ಮನೆಯಲ್ಲಿ ದಿನಾ ಒಂದು ಸಾಮಾನ್ಯ ದೃಶ್ಯ ಅಂದ್ರೆ, ನಾನು ದಿನಾ ಶಾಲೆಯಿಂದ ಹಿಂದಿರುಗಿ ಬಂದಾಗ ನನ್ನ ಗಂಡ ಕಾರ್ ವರೆಸುತ್ತ ನಿಂತಿರುತ್ತಿದ್ದರು. ಎಷ್ಟು ವರೆಸುತ್ತಿದ್ದರು ಅಂದ್ರೇ, ಅದೂ ಪ್ರತಿದಿನ ಅಂದರೆ, ಮಾರುತಿ ಆಗಾಗ ಕರುಣಾಜನಕ ನೋಟ ನನ್ನತ್ತ ಬೀರಿ “ಅಕ್ಕ ನನ್ನನ್ನ ಈ ನಿನ್ನ ಗಂಡನಿಂದ ಕಾಪಾಡಕ್ಕ” ಅಂತ ಗೋಳುಗರೆದಾಗ ನನಗೂ ಪಾಪ ಅನ್ನಿಸಿ “ಹೋಗ್ಲಿ ಬಿಡಿ, ದಿನಾ ಏಕೆ ವರೆಸ್ತಿರ, ವಾರಕ್ಕೊಂದು ದಿನ ವರೆಸಿದರೆ ಸಾಲದೆ” ಅಂದ್ರೂ ಕೇಳ್ತಾ ಇರ್ಲಿಲ್ಲ.ಆದರೆ ಅದೇನೂ ಹೆಚ್ಚು ದಿನ ನಡೆಯಲಿಲ್ಲ.

ಆಗ  ನಾವು ಹೊಸ ಮನೆ ಕಟ್ಟುತ್ತಿದ್ದ ಸಮಯ ಬೇರೆ, ಹಣದ ಮುಗ್ಗಟ್ಟಿನಿಂದ ಮಾರುತಿಯನ್ನು ಮಾರಬೇಕಾಗಿ ಬಂತು. ಅವನಂತೂ “ಅಂತೂ ನಿಮ್ಮ ಕಾಟ ತಪ್ತಲ್ಲ” ಅಂದುಕೊಂಡು ಹೋದ.
ಮಾರುತಿ ಕೊಂಡವರು ಇವರ ಒಬ್ಬ ಗೆಳೆಯರೇ. ಅವರು ದಿನಾ ಆಫೀಸ್ ಗೆ ಮಾರುತಿಯಲ್ಲೆ ಹೋಗಿ, ಆಫೀಸ್ ಹೊರಗೆ ಒಂದು ಮರದ ಕೆಳಗೆ ನಿಲ್ಲಿಸುತ್ತಿದ್ದರು. ಒಂದು ದಿನ ಅವರು ನಮ್ಮ ಮನೆಗೆ ಮಾರುತಿಯೊಂದಿಗೆ ಬಂದಾಗ ನೋಡಿದರೆ ಮೈ ಕೈ ಎಲ್ಲಾ ಕೊಳೆಯಾಗಿ, ತಲೆ ಮೇಲೆಲ್ಲಾ ಹಕ್ಕಿ ಪಕ್ಷಿಗಳ ಹಿಕ್ಕೆ ಬಿದ್ದು ಅವನ ರೂಪವೇ ಬದಲಾಗಿ ಹೋಗಿತ್ತು. ನಮ್ಮಿಬ್ಬರನ್ನು ನೋಡಿ ಅವನು ಅಳುವುದೊಂದೆ ಬಾಕಿ. ಅಂತೂ ನನ್ನ ಗಂಡನಿಗೆ ಮನಸ್ಸು ತಾಳದೆ ಅಲ್ಪ ಸ್ವಲ್ಪ ವರೆಸಿ ಕಳಿಸಿಕೊಟ್ಟರು.

ನಂತರ ಬಂದವಳೇ ಸೆಕೆಂಡ್ ಹ್ಯಾಂಡ್ ಸುಂದರಿ ಬೆಟ್ಟಿ. ನನ್ನ ಗಂಡ ಯಾಕೋ ಅವಳಿಗೆ ಬೆಟ್ಟಮ್ಮ ಅಂತ ಅವರಜ್ಜಿ  ಹೆಸರಿಟ್ಟುಕೊಂಡರು. ಮಕ್ಕಳು ಮಾತ್ರ ಅದನ್ನು ಒಪ್ಪದೆ “ಅಪ್ಪಾ ಬೆಟ್ಟಮ್ಮ ಚೆನ್ನಾಗಿಲ್ಲ,ವಸಿ ಮಾಡ್ರನ್ ಆಗಪ್ಪ” ಅಂತ ಹೇಳಿ ಅವಳನ್ನು ಬೆಟ್ಟಿ ಮಾಡಿ ಬಿಟ್ಟರು. ಅವಳ ಅಂದವೇನು, ಚಂದವೇನು, ಬಿಂಕ ಬಡಿವಾರಗಳೇನು. ನನ್ನ ಗಂಡನನ್ನು ಮರುಳು ಮಾಡಿರುವ ಮಾಯಕಾತಿ. ಅವರು ಓಡಿಸಿದರೆ ಮಾತ್ರ ಚೆನ್ನಾಗಿ ಓಡುತ್ತಾಳೆ, ನಾನು ಮಾತ್ರ ಓಡಿಸಲು ನೋಡಿದರೆ ಅಂಕೆಗೆ ಸಿಗೋಲ್ಲ.

ನನ್ನ ಗಂಡ ಮುಸಿ ಮುಸಿ ನಗುತ್ತಾ” ನಿಂಗೆ ನಿನ್ನ ಲಿಯೋನೆ ಸಾಕು ಬಿಡು, ಕಾರ್ ಗೀರ್ ಎಲ್ಲಾ ನಿನ್ನ ಕೈಲಿ ಆಗೋಲ್ಲ” ಅಂದಾಗ  “ನನಗೂ  ಒಂದು ಕಾಲ ಬರುತ್ತೇ “ಅಂದುಕೊಂಡು, ಹಲ್ಲು ಮಸೆದುಕೊಂಡು ಸುಮ್ಮನಾಗುತ್ತೇನೆ. ಈಗೇನು ಬಿಡಿ ಕೃತಕ ಬುದ್ಧಿಮತ್ತೆ  ಕಾರ್ ಬಂದಿದೆಯಂತೆ, ಕೂತ್ರೆ ಸಾಕಂತೆ ಅದೇ ಓಡಿಸಿಕೊಂಡು ಎಲ್ಲಿಗೆ ಬೇಕೋ ಅಲ್ಲಿಗೆ ಕರೆದುಕೊಂಡು ಹೋಗುತ್ತಂತೆ. ಒಂದೆರಡು ವರ್ಷ ಕಾಯ್ದರೆ ಸಾಕು ಸೆಕೆಂಡ್ ಹ್ಯಾಂಡ್ ಮಾರ್ಕೆಟ್ ಗೆ ಬಂದೇ ಬರ್ತವೆ. ಆಗ ನಾನೂ ಒಂದು ಕೊಂಡು ಕೊಂಡು ಈ ಬೆಟ್ಟಿ ಜಂಬ ಮುರಿಲಿಲ್ಲ ಅಂದ್ರೆ ನೋಡಿ.

‍ಲೇಖಕರು avadhi

July 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: