ಮುತ್ತು ಹೆಚ್. ಬನ್ನಿಕೊಪ್ಪ
ನಾವು ಸತ್ತ ದನವ ಹೊತ್ತವರು. ಊರ ಕಸವ ಬಳಿದವರು. ಮನೆಮನೆಗೂ ಮಕ್ಕಳಾದವರು. ಚರಂಡಿಯನ್ನ ಸ್ವಚ್ಛಗೊಳಿಸಿದವರು. ಬೂಟು ಮೆಟ್ಟು ಹೊಲೆದೋರು. ಅಷ್ಟೇ ಅಲ್ಲ ಊರವರು ಸತ್ತಾಗ ಅವರನ್ನ ಸುಡಲು ಕಟ್ಟಿಗೆ ಹೊತ್ತವರು. ಒಟ್ಟಾರೆ ನಾವು ಮುಟ್ಟದವರು, ಮುಟ್ಟಿಸಿಕೊಳ್ಳದವರು, “ಊರ ಹೊರಗಿನವರು”. ಇಷ್ಟೆಲ್ಲ ಯಾಕೆ ಹೇಳ್ತಿದೀನಿ ಅಂದ್ರೆ ನಾವು ನಮ್ಮ ಮುತ್ತಾತರ ಮತ್ತು ಅವರ ತಾತರ ಕಾಲದಿಂದಲೂ ನೋವುಂಡವರು. ಅಸ್ಪೃಶ್ಯತೆಯ ಅಗ್ನಿಯಲ್ಲಿ ಬೆಂದವರು. ಈಗಲೂ ಅದೇ ನೋವಲ್ಲಿ ನರಳಾಡುತ್ತಿರುವವರು. ಅದಕ್ಕಾಗಿನೇ ನನ್ನ ಒಡಲಾಳದ ನೋವು ಈ ರೀತಿ ಹೊರಹೊಮ್ಮಿದೆ ಅಷ್ಟೆ……
ಬಂಧುಗಳೇ ಕರ್ನಾಟಕದ ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ “ಮಾದಿಗ” ಜಾತಿ ತಲ-ತಲಾಂತರದಿಂದ ಶೋಷಣೆಗೊಳಗಾಗುತ್ತಾ ಬಂದಿದೆ. ಹಸಿದವನು ಅನ್ನಕ್ಕೆ, ಬಾಯಾರಿದವನು ನೀರಿಗೆ ಬೊಗಸೆಯೊಡ್ಡುವಂತೆ ಮಾದಿಗ
ಜಾತಿ “ಸಾಮಾಜಿಕ ನ್ಯಾಯ”ಕ್ಕಾಗಿ ಎದ್ದು ನಿಂತಿದೆ. ಹಕ್ಕಿಗಾಗಿ ಹಲಗೆ ಹೊಡೆದಿದೆ……
ಆದಿಯಿಂದಲೂ “ಮಾದಿಗ” ಜಾತಿಯ ಜನರು ಸತ್ತ ದನ ಹೊರುವುದು, ಅದರ ಚರ್ಮ ಸುಲಿಯುವುದು, ಮಾಂಸ ತಿನ್ನುವುದಲ್ಲದೇ ಪ್ರಮುಖವಾಗಿ ಚಮ್ಮಾರಿಕೆ ಕಾಯಕವನ್ನು ನಂಬಿ ಬದುಕುತ್ತಿದ್ದರು. ವೈದಿಕ ಚಹರೆಗಳ ಸೋಂಕಿಲ್ಲದ ಕಾಯಕ
ಇದಾಗಿತ್ತು. ಇದು ಅತ್ಯಂತ ಕೀಳು ವೃತ್ತಿ ಎಂಬ “ಸಾಮಾಜಿಕ ನಿಲುವು” ಮಾದಿಗ ಜಾತಿಯನ್ನು ಮಾನವ ಘನತೆಯಿಂದ ವಂಚಿಸಿತ್ತು. ಇದು ಜಾತಿ ವ್ಯವಸ್ಥೆಯ ಚರಿತ್ರೆಯ ಭಾಗ. ವರ್ತಮಾನದಲ್ಲಿ ಮಾದಿಗ ಜಾತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿನ ಬದುಕು ಮತ್ತು ಸ್ಥಾನಮಾನದಲ್ಲಿ ಅಂತಹ ಗಮನಾರ್ಹ ಬದಲಾವಣೆ ಏನೂ ಆಗಿಲ್ಲವೆಂಬುದು ಒಳಮೀಸಲಾತಿ ಹೋರಾಟಕ್ಕೆ ಹಿಡಿದಕನ್ನಡಿ……
ಯಾವುದೇ ಸಮುದಾಯಕ್ಕೆ ಸಂವಿಧಾನಬದ್ಧವಾದ ಮೀಸಲಾತಿ ಆ ಸಮುದಾಯದ ಜನಸಂಖ್ಯೆ ಮತ್ತು ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಆಧಾರದ ಮೇಲೆ ಸಿಗಬೇಕು. ಇದು ಸಂವಿಧಾನದ ಆಶಯವೂ ಕೂಡ ಆಗಿದೆ. ಆದ್ದರಿಂದಲೇ ಜಾತಿವಾರು ಜನಗಣತಿಯಾಗಬೇಕು. ಶೇ 15% ರಷ್ಟು ಪ್ರಮಾಣದ ಮೀಸಲಾತಿ ಎರಡು ಜಾತಿಗಳ ನಡುವೆ ಸಮನಾಗಿ ಹಂಚಿಕೆಯಾಗಬೇಕು. ಮಾತ್ರವಲ್ಲದೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ನೂರೊಂದು ಜಾತಿಗಳಿಗೂ ಸಮಪಾಲು ಸಿಗಬೇಕೆಂದು ಎರಡು-ಮೂರು ದಶಕಗಳಿಂದಲೂ ಮಾದಿಗ ಜಾತಿ ಸಂಘಟನೆಗಳು ನಡೆಸಿದ ಒಳಮೀಸಲಾತಿ ಹೋರಾಟದ ಫಲವೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ.
ನ್ಯಾ. ಎ.ಜೆ.ಸದಾಶಿವರವರು ಬಹಳ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿಯನ್ನ ತಯಾರಿಸಿ 2012 ರಲ್ಲಿಯೇ ಸರ್ಕಾರಕ್ಕೆ ನೀಡಿದ್ದಾರೆ. ದುರ್ದೈವ ಅಂದ್ರೆ ಆಯೋಗ ವರದಿ ನೀಡಿ ಬರೋಬ್ಬರಿ ಆರು ವರ್ಷಗಳು ಕಳೆದರೂ ವರದಿ ಜಾರಿಯಾಗದಿರುವುದು ಘೋರ ದುರಂತ. ಈವರೆಗೆ ಬಂದ ಎಲ್ಲ ಸರ್ಕಾರಗಳೂ ಸಹ ಸದಾಶಿವ ವರದಿಯ ಹೆಸರಿನಲ್ಲಿ ಮಾದಿಗರನ್ನ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಾ ಬಂದಿವೆ. ಆದರೆ ಯಾರೊಬ್ಬರೂ ವರದಿಯನ್ನ ಅನುಷ್ಠಾನಗೊಳಿಸುವ ಗೋಜಿಗೆ ಹೋಗಿಲ್ಲ……
ಈ ಮೀಸಲಾತಿಗೆ ಮೇಲ್ಜಾತಿಯ ವಿರೋಧ ಒಂದು ಕಡೆಯಾದರೆ, ಕೆಳಜಾತಿಯವರದು ಮತ್ತೊಂದು ರೀತಿಯದು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅಸ್ಪೃಶ್ಯರ ಒಂದು ಜಾತಿಯಾದ ಹೊಲೆಯ ಮತ್ತು ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳೆಂದು (ಕೊಲಂಭೋ) ಗುರುತಿಸಿರುವ ಇತರೆ ಜಾತಿಗಳು ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವುದು ಅಲ್ಲಲ್ಲಿ ಕೇಳಿಬರುತ್ತಿದೆ. ಈ ನಿಲುವು ಸಂವಿಧಾನ ವಿರೋಧಿಯಾದುದು. ಅಷ್ಟೇ ಅಲ್ಲ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡುವ ಅಪಚಾರ ಎಂಬುದನ್ನ ಅವರು ಮನಗಾಣಬೇಕು……
1976 ರ ಎಲ್.ಜಿ.ಹಾವನೂರ್ ವರದಿಯಲ್ಲಿ ಉಲ್ಲೇಖವಾಗಿರುವಂತೆ, ಮಾದಿಗ ಜಾತಿ ಜನಸಂಖ್ಯೆ ರಾಜ್ಯದ ಒಟ್ಟಾರೆ ಪರಿಶಿಷ್ಟರಲ್ಲಿ ಶೇ 57.3% ರಷ್ಟಿತ್ತು. ಶೇ 15% ರಷ್ಟು ಮೀಸಲಾತಿಯಲ್ಲಿ ಮಾದಿಗರಿಗೆ ಸಿಗಬೇಕಾದ ಪಾಲು ಶೇ 8%. ಆದರೆ ಸಿಕ್ಕಿರುವುದು ಶೇ2% ರಷ್ಟು ಮಾತ್ರ. ಹಾಗಾದರೆ ಇನ್ನುಳಿದ ಶೇ6% ರಷ್ಟನ್ನು ಯಾರು ದೋಚಿದರು…..? ಒಂದು ವೇಳೆ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾದರೆ ಕಳೆದುಕೊಂಡಿರುವ ಶೇ 6%ರ ಅವಕಾಶಗಳನ್ನು ಶಿಕ್ಷಣ, ಉದ್ಯೋಗ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ವಾಪಸ್ ಪಡೆಯಬಹುದೆಂಬ ಆಸೆಗಣ್ಣಿನಿಂದ ನಮ್ಮ ಮಾದಿಗ ಜಾತಿ ಸಮುದಾಯವು “ಸದಾಶಿವ ವರದಿ” ಜಾರಿಗೆ ಹಟ ಹಿಡಿದು ಕುಳಿತಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದ ಉದ್ದಗಲಕ್ಕೂ ಧರಣಿ, ಜನಶಕ್ತಿ ಸಮಾವೇಶ, ವಿಚಾರ ಸಂಕಿರಣಗಳನ್ನು ಸಂಘಟಿಸುತ್ತಿದೆ……
ಈ ಹಿನ್ನೆಲೆಯಲ್ಲಿ ಡಿಸೆಂಬರ್ 11, 2016 ರಂದು ಹುಬ್ಬಳ್ಳಿಯಲ್ಲಿ ನಡೆದ “ಮಾದಿಗರ ಮಹಾಸಮಾವೇಶ”ದಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಿ ಪರಿಶಿಷ್ಟರಲ್ಲಿ ಒಳಮೀಸಲಾತಿಯನ್ನು ಹಂಚಿಕೆ ಮಾಡಬೇಕೆಂಬ ಆಗ್ರಹಕ್ಕೆ ಬಲವಾದ “ಧ್ವನಿ” ಬಂದಿತ್ತು. ಅಂದು ಹುಬ್ಬಳ್ಳಿಯಷ್ಟೇ ಅಲ್ಲ ಕರ್ನಾಟಕವೇ ನಿಬ್ಬೆರಗಾಗಿ ನೋಡುವಂತೆ ಮಾದಿಗರು ಒಂದುಗೂಡಿದ್ದರು. ಸರ್ಕಾರಕ್ಕೆ ಸರ್ಕಾರವೇ ನಡುಗಿ ಹೋಗಿತ್ತು. ಪೂರಕವೆಂಬಂತೆ ಎಲ್ಲ ಪಕ್ಷದ ಪ್ರತಿನಿಧಿಗಳು ಸದಾಶಿವ ವರದಿಯನ್ನ ಬೆಂಬಲಿಸುವ ಭರವಸೆ ನೀಡಿದ್ದರು……

ಅಷ್ಟೇ ಅಲ್ಲದೇ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಕರುನಾಡ ಮಾದಿಗರು ಕಾಲ್ನಡಿಗೆ ಮೂಲಕ ಬಂದು ಸದಾಶಿವ ವರದಿ ಜಾರಿಯ ಹೋರಾಟಕ್ಕೆ ಶಕ್ತಿ ತುಂಬಿದ್ದರು. ಆಗ ಜಾರಿ ಮಾಡುವ ಭರವಸೆ ನೀಡಿದ್ದ ಸಿದ್ದರಾಮಯ್ಯ ಉಪಸಮಿತಿ ರಚನೆ ಮಾಡಿ ನುನುಚಿಕೊಂಡಿದ್ದರ ಫಲವಾಗಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳುವಂತಾಗಿದ್ದು ಈಗ ಇತಿಹಾಸ. ಅದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೇ……
ಕೊನೆಹನಿ:
ಸದಾಶಿವ ಆಯೋಗದ ವರದಿ ಮಾದಿಗರ ಪಾಲಿನ ಸಂವಿಧಾನವಿದ್ದಂತೆ. ಸದಾಶಿವ ವರದಿ ಜಾರಿಯಾದರೆ ಮಾದಿಗರ ಎದೆಯಲ್ಲಿ ಸ್ವಾಭಿಮಾನದ ಹಣತೆ ಮೂಡುವ ಭರವಸೆ ಮೂಡುವುದರಲ್ಲಿ ಸಂಶಯವಿಲ್ಲ. ಮಾನವೀಯತೆ ಇರುವ ಯಾರೇ ಆಗಲಿ ಸದಾಶಿವ ವರದಿಯನ್ನ ವಿರೋಧಿಸಲಾರರು. ಈ ನಿಟ್ಟಿನಲ್ಲಿ ಯಾವುದೇ ಪಕ್ಷವಾಗಲಿ ಮಾದಿಗರನ್ನ ಕಡೆಗಣಿಸಬಾರದು. ಈ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಾದಿಗರ ನೋವನ್ನ ಸೂಕ್ಷ್ಮವಾಗಿ ಅರಿಯಬೇಕು. ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸದಾಶಿವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬಿಜೆಪಿಯವರು ವಿರೋಧ ಪಕ್ಷವಾಗಿ ಸದಾಶಿವ ವರದಿಗೆ ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷ ಕಳೆದ ಬಾರಿಯಂತೆ ಮಾದಿಗರನ್ನ ಕಡೆಗಣಿಸಬಾರದು. ಒಂದು ವೇಳೆ ಹಾಗೇನಾದರೂ ಕಡೆಗಣಿಸಿದ್ದೇ ಆದರೆ ನಿಮ್ಮ ಅಸ್ತಿತ್ವಕ್ಕೆ ದಕ್ಕೆಯಾಗುವುದಂತೂ ನಿಜ……






0 Comments