
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
39
ಅನೂಪ್ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದು ಮನೆಗೆ ಹೊಸ ಕಳೆ ಮೆತ್ತಿಕೊಂಡತ್ತಾಗಿತ್ತು.
ಸರಿಯಾದ ಟೈಮಿಗೆ ಮದುವೆಯಾಗದೆ ಈಗಿನ ಕಾಲದ ಹುಡುಗ್ರು ಹುಡುಗಿಯರು ಅದೇನ್ ಸಾಧಿಸ್ತಾರೊ ಏನೊ ಅಂತ ಸದಾ ಗೊಣಗುಡುತ್ತಿದ್ದ ಅಜ್ಜಿಗೂ ಅನೂಪ್ನ ಈ ಘೋಷಣೆಯಿಂದ ತುಸು ಸಮಾಧಾನವಾಗಿತ್ತು.
ಅನೂಪ್ ಮದುವೆ ಬೇಡವೇ ಬೇಡ ಅನ್ನುತ್ತಿದ್ದವನು ಕೆಲವು ವರ್ಷಗಳ ಹಿಂದೆ ತನ್ನ ಮಾತು ಬದಲಿಸಿ ನೋಡೋಣ ತಡವಾಗಿಯಾದರೂ ಆದರೆ ಆದೀತು ಎಂದು ಹೇಳಿಕೊಳ್ಳತೊಡಗಿದ್ದ. ಈಗಷ್ಟೇ ತಾನು ಮದುವೆ ಮಾಡಿಕೊಳ್ಳಲು ಸಿದ್ದ ಅನ್ನುವ ತನ್ನ ಇಷ್ಟವನ್ನು ಹೊರಹಾಕಿದ್ದ. ಬದುಕು ಎಂತವರನ್ನೂ ಕೂಡ ಬಡಿದು ಬಡಿದು ಸರಿ ಮಾಡುತ್ತದೆ. ಹೀಗೆ ಬಡಿಸಿ ಬಡಿಸಿಕೊಂಡೆ ಅನೂಪ್ ಈಗ ಮದುವೆಯಾಗಲು ಒಪ್ಪಿಕೊಂಡಿದ್ದ.
“ನೋಡು ಅನೂಫ್ ಯಾರದೊ ಜೊತೆ ಸುತ್ತಾಡಿ.. ಮತ್ತ್ಯಾರದೊ ಜೊತೆ ಮಲಗಿ ಎದ್ದು.. ಸ್ನೇಹ, ಕಾಮಗಳ ಆಚೆಯೂ ಸಂಜೆ ಡ್ಯೂಟಿ ಮುಗಿಸಿ ಮನೆಗೆ ಹೊರಟಾಗ ಒಂದು ಜೀವ ನನಗಾಗಿ ಕಾಯ್ತಾ ಇದೆ ಅನ್ನುವ ಭಾವವನ್ನು ಮದುವೆಯಿಂದ ಜೊತೆಗೂಡಿದ ಪಾತ್ರವೊಂದು ಮಾತ್ರ ಕೊಡಲು ಸಾಧ್ಯ. ಮದುವೆ ಬರೀ ಕಾಮಕ್ಕೆ ಅಂತ ಅಲ್ಲ, ರುಚಿ ರುಚಿ ಅಡುಗೆ ಮಾಡಲು, ಬಟ್ಟೆ ತೊಳೆಯಲು ಒಬ್ಳು ಬರ್ತಾಳೆ ಅಂತಲ್ಲ.. ಆ ಬಂಧ ಇದೆಯಲ್ಲಾ.. ಅದು ಅದ್ಬುತ. ಬದುಕು ಅನ್ನೋದು ಎರಡು ಮನಸುಗಳ ಮಧ್ಯೆ ಹೆಣೆದುಕೊಂಡ ಕಸೂತಿ. ಅದನ್ನು ವಿವರಿಸಲಾಗುವುದಿಲ್ಲ. ಜಸ್ಟ್ ಅನುಭವಿಸಬೇಕು…” ಎಂದು ಅವನ ಗೆಳತಿ ನೀಶಾ ಅನೂಪ್ಗೆ ಸದಾ ಹೇಳುತ್ತಿದ್ದಳು. ಅವನು ಅವಳ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಈಗ ಮದುವೆಗೆ ಒಪ್ಪಿದ ಅಂತಲ್ಲ.. ಆದರೆ ಏಕಾಏಕಿ ಮದುವೆ ಆಗಿಬಿಡಬೇಕು ಅಂತ ಯಾವುದೇ ನಿರೀಕ್ಷೆಗಳಿಲ್ಲದೆ ಸಿದ್ದನಾಗಿದ್ದ.
ಅನೂಪ್ಗೆ ಮದುವೆಯ ಬಗ್ಗೆ ಒಂದು ಮೂಲ ಪ್ರಶ್ನೆ ಇತ್ತು. ಅವನ ಅಮ್ಮ ಮದುವೆಯ ಮಾತು ಎತ್ತಿದಾಗಲೆಲ್ಲಾ ತನ್ನ ಈ ಪ್ರಶ್ನೆಯನ್ನು ಮುಂದಿಡುತ್ತಿದ್ದ.
‘ಅಲ್ಲಾ ಅಮ್ಮ.. ಮದುವೆ ಆಗಲು ಹೊರಟವರು ಎಷ್ಟೊ ಜನ ತಾನೇಕೆ ಮದುವೆ ಆಗಬೇಕು ಅಂತ ಕೇಳಿಕೊಳ್ಳೊದೆ ಇಲ್ಲ. ವಯಸ್ಸು ಆಗ್ತಿದೆ ಮದುವೆ ಆಗು ಅಂತಾರೆ, ಕೆಲಸ ಸಿಕ್ತು ಮದುವೆ ಆಗು ಅಂತಾರೆ, ಲೈಫ್ನಲ್ಲಿ ಸೆಟ್ಲು ಆಗಿದೀಯ ಮದುವೆ ಆಗು ಅಂತಾರೆ, ಒಳ್ಳೆ ಹುಡುಗಿ ಸಿಕ್ಕಿದ್ದಾಳೆ ಮದುವೆ ಅಗು ಅಂತಾರೆ.. ಅಷ್ಟಕ್ಕೂ ಬದುಕಿನ ಅತೀ ದೊಡ್ಡ ತೀರ್ಮಾನವನ್ನು ಜಸ್ಟ್ ಈ ಕಾರಣಕ್ಕೆ ತೆಗೆದುಕೊಳ್ಳಬೇಕಾ?
ಎಷ್ಟೊ ಜನ ಹುಡುಗ ಸಿಕ್ಕ ಅಂತ ಮದುವೆ ಆಗ್ತಾರೆ. ಹುಡುಗಿ ಸಿಕ್ಕಿದ್ಲು ಅಂತ ಆಗ್ತಾರೆ. ಮನೆಯಲ್ಲಿ ಹುಡುಗಿ ನೋಡಿದ್ರು ಅಂತ ಆಗ್ತಾರೆ.. ಮದುವೆ ಆಗುವವರಿಗೆ ನಿಜಕ್ಕೂ ತಾನೇಕೆ ಆಗ್ತಿದೀನಿ ಅಂತ ಗೊತ್ತೆ ಇರಲ್ಲ ಅಲ್ವ ಅಮ್ಮಾ..’

ಇವನ ಮದುವೆಯ ಫಿಲಾಸಫಿಗೆ ಮೆಚ್ಚಿದ ಅಮ್ಮ ‘ನೋಡು ಮಗಾ ಬದುಕು ಬರೀ ಮಾತಿನ ಮೇಲೆ, ಯಾವುದೊ ಪುಸ್ತಕದ ಥಿಯರಿ ಮೇಲೆ ನಡೆಯಲ್ಲ.. ನೋಡು, ನಾನು ಕೂಡ ಏಕೆ ಮದುವೆ ಆಗ್ಬೇಕು ಅನ್ನೋದು ಗೊತ್ತಿಲ್ಲದೆ ಆದೆ.. ಎಲ್ಲವೂ ಚೆನ್ನಾಗಿದೆ.. ಬದುಕೂ ಚೆನ್ನಾಗಿದೆ.. ಜಾಸ್ತಿ ಯೋಚಿಸುತ್ತಾ ಕೂತ್ರೆ ಬದುಕೋಕೆ ಆಗಲ್ಲ ಮಗಾ..’ ಅಂದಿದ್ದಳು..
ಇಂತಹ ನೂರೂರು ಚರ್ಚೆಯ ನಂತರವೂ ಅವನು ಮದುವೆಗೆ ಮನಸು ಮಾಡಿರಲಿಲ್ಲ..
ಆದರೆ ಒಂದಿನ ಏಕಾಏಕಿ ತಾನು ಮದುವೆ ಮಾಡಿಕೊಳ್ಳಲು ಸಿದ್ದ ಅಂತ ಘೋಷಿಸಿದಾಗ ಮನೆ ಕಳೆಗಟ್ಟಿತ್ತು..
ಇನ್ನೇನು ನಲವತ್ತನೆ ವಯಸ್ಸಿನ ಬಾಗಿಲು ಬಡಿಯಲಿರುವ ಅನೂಪ್ಗೆ ಒಳ್ಳೆಯ ಕೆಲಸ ಇತ್ತು. ಮನೆ ಕಡೆ ಆಸ್ತಿಯೂ ಇತ್ತು. ಹುಡುಗನೂ ಚೆನ್ನಾಗಿದ್ದ. ಹುಡುಗಿ ಒಪ್ಪಲು ಇನ್ನೇನು ಬೇಕು ಎಂದು ಮನೆಯವರು ಮಾತಾಡುತ್ತಿದ್ದರು. ಆದರೆ ಇದೆಲ್ಲವನ್ನೂ ಜೀವನ ಪೂರ್ತಿ ನನ್ನೊಂದಿಗೆ ಇರ್ತೀನಿ ಅಂತ ಬರುವ ಹುಡುಗಿ ಮುಂದೆ ಇಡಲು ಇವು ಅರ್ಹತೆಗಳು ಅಂತ ಅವನಿಗೆ ಅನಿಸಿರಲಿಲ್ಲ.
ಆದರೂ ಅವನ ಅಮ್ಮ ಗೊತ್ತಿದ್ದವರಿಗೆಲ್ಲಾ ವಿಚಾರ ಮುಟ್ಟಿಸಿ ಹುಡುಗಿ ಇದ್ದರೆ ತಿಳಿಸಿ ಎಂದು ದುಂಬಾಲು ಬಿದ್ದರು. ಅದರಲ್ಲಿ ಕೆಲವರು ಹುಡುಗಿ ಇರುವ ಬಗ್ಗೆ ತಿಳಿಸಿ, ಬಂದು ಹೋಗಲು ಹೇಳಿದರು.
ಅನೂಪ್ ಅಮ್ಮನ ಜೊತೆ ಅನೇಕ ಹುಡುಗಿಯರನ್ನು ನೋಡಲು ಹೋಗಿ ಬಂದ. ಅದೇಕೊ ಅವನಿಗೆ ಹುಡುಗಿಯರು ಇಷ್ಟ ಆಗ್ತಿರಲಿಲ್ಲ. ಅವಳನ್ನು ನೋಡುವುದಂತೆ, ಕಾಫಿ ಕುಡಿಯುವುದಂತೆ, ಮಾತಾಡುವುದಂತೆ ಇಷ್ಟಕ್ಕೆ ಒಂದು ಹುಡುಗಿ ಹೇಗೆ ಓಕೆ ಆಗಲು ಸಾಧ್ಯ? ಅವನು ‘ನನಗೇ ಇವಳೆ ಬೇಕು’ ಅನಿಸುವಂತಹ ಹುಡುಗಿಗಾಗಿ ಹುಡುಕಾಡುತ್ತಿದ್ದ.
ಅದು ಹುಡುಗಿ ಮಾಡಿಕೊಂಡ ಮೇಕಪ್ನಲ್ಲಿ, ಅವಳು ಕೊಡುವ ಕಾಫಿಯಲ್ಲಿ, ಅವಳ ಚೆಂದದಲ್ಲಿ.. ಇವಳು ಬೇಕೆ ಬೇಕು ಅನಿಸುವುದು ಹೇಗೆ? ಇದು ಅವನ ಪ್ರಶ್ನೆ..
ಹುಡುಗಾಗಿ ಹುಡುಕಲು ಅಲೆದು ಅಲೆದು ಮನೆಯವರು ಹೈರಾಣಾದರು. ನೀನೆ ಅದ್ಯಾವ ಹುಡುಗಿ ಬೇಕೊ ಕರೆದುಕೊಂಡ ಬಾರಪ್ಪ ಮದುವೆ ಮಾಡ್ತೀವಿ ಅಂದು ಬಿಟ್ಟರು. ಇವನದೊಂದು ಹೇಳಿಕೊಳ್ಳಲಾಗದ ಪ್ರೀತಿ ಇರಬಹುದು. ಅವಳನ್ನಾದರೂ ಕರೆದುಕೊಂಡು ಬಂದು ಮದುವೆ ಆಗಲಿ ಎಂಬ ಯೋಚನೆ ಮನೆಯವರದು. ಅನೂಪ್ ಒಮ್ಮೆ ನಕ್ಕು ಸುಮ್ಮನಾಗಿದ್ದ.
ಕೆಲವು ದಿನ ನೋಡಿದರು. ಅವನು ಯಾವ ಹುಡುಗಿಯನ್ನು ಕರೆತರಲಿಲ್ಲ..
ನಂತರ ಮದುವೆಯ ಬ್ರೋಕರ್ ಮೊರೆ ಹೋದರು. ಅವರಿಗೆ ಅನೂಪ್ನ ಎಲ್ಲಾ ಬಯೋಡೇಟಾ ನೀಡಿ ಆದಷ್ಟು ಬೇಗ ವಧು ಹುಡುಕಿಕೊಡಿ ಎಂದು ವಿನಂತಿಸಿದರು. ಬ್ರೋಕರ್ ಗಳು ನಿಮ್ಮ ಬೇಡಿಕೆಗಳೇನು ಎಂದು ಕೇಳಿಕೊಂಡು ಗುರುತು ಮಾಡಿಕೊಂಡರು. ಮೊಬೈಲ್ ನಂಬರ್ ಪಡೆದು ಸೇವ್ ಮಾಡಿಕೊಂಡರು. ಬರಬೇಕಾದ ಪೀಸು ವಸೂಲಿ ಮಾಡಿದರು. ಆಗಾಗ್ಗೆ ನಾವು ನಿಮ್ಮ ಮೊಬೈಲಿಗೆ ಹುಡುಗಿಯ ಪೋಟೊ ಸಹಿತ ಬಯೋಡೇಟಾ ಕಳ್ಸತೀವಿ.. ಅದರಲ್ಲಿ ಯಾವುದಾದರೂ ಓಕೆ ಅನಿಸಿದರೆ ತಿಳಿಸಿ. ನಂತರ ಮುಂದುವರೆಯಲು ಅನುಕೂಲವಾಗುತ್ತದೆ ಎಂದು ಹೇಳಿ ಹೋಗಿದ್ದರು.
ನಾಲ್ಕೈದು ದಿನಗಳಾದ ಮೇಲೆ ಮೊಬೈಲ್ಗೆ ಹುಡುಗಿಯರ ಬಯೋಡೇಟಾಗಳು ಬರಲು ಶುರುವಾದವು. ಕೆಲವೊಮ್ಮೆ ದಿನಕ್ಕೆ ಒಂದು. ಕೆಲವೊಮ್ಮೆ ಎರಡು ಮೂರು.. ಕೆಲವೊಮ್ಮೆ ಏಳೆಂಟು ಪ್ರಪೋಸಲ್ ಗಳು ಬರುತ್ತಿದ್ದವು..
ಹುಡುಗಿಯರ ಬಯೋಡೇಟಾಗಳಿಗಾಗಿ ಅಮ್ಮನ ವಾಟ್ಸಪ್ ನಂಬರ್ ಕೊಟ್ಟಿದ್ದರಿಂದ ಪ್ರಪೋಸಲ್ ಗಳು ಅಲ್ಲಿಗೆ ಬರುತ್ತಿದ್ದವು. ಪ್ರತಿದಿನ ಸಂಜೆ ಅನೂಪ್ ಬಂದ ತಕ್ಷಣ ಅವನ ಅಮ್ಮ ಅವನ ಪಕ್ಕ ಕೂತು ಪೋಟೊ, ಬಯೋಡೇಟಾ ತೋರಿಸಿ, ವಿವರಿಸಿ ಅವನು ಓಕೆ ಹೇಳುವುದಕ್ಕೆ ಕಾಯುತ್ತಿದ್ದಳು. ಅವನು ಜಸ್ಟ್ ಒಮ್ಮೆ ನೋಡಿ ‘ನೋ..’ ಅಂದು ಬಿಡುತ್ತಿದ್ದ.
ಕ್ರಮೇಣ ಅವನ ಅಮ್ಮ ಅವನಿಗೆ ವಿವರಿಸಿ ಹೇಳಿ ಹೇಳಿ ಸಾಕಾಗಿ ಅದರ ಬದಲು ನೀನೇ ನೋಡ್ಕೊ ಎಂದು ಮೊಬೈಲ್ ಕೊಟ್ಟು ಹೋಗುತ್ತಿದ್ದಳು. ಇವನು ಒಂದೇ ನಿಮಿಷಕ್ಕೆ ನೋಡಿ ನೋ ಅಮ್ಮ ಯಾವುದೂ ಇಷ್ಟ ಆಗಲಿಲ್ಲ ಅಂದು ಬಿಡುತ್ತಿದ್ದ. ಮಗ ಎಲ್ಲಾ ಪ್ರಪೋಸಲ್ ಗಳನ್ನು ತಿರಸ್ಕರಿಸುವುದನ್ನು ಕಂಡು ಅಮ್ಮನಿಗೆ ಬೇಸರವಾಗಿತ್ತು. ಇವನಿಗೆ ಎಂತಹ ಹುಡುಗಿ ಬೇಕಾಗಿರಬಹುದು ಅಂತ ಯೋಚಿಸಿ ಯೋಚಿಸಿ ಸೋಲುತ್ತಿದ್ದಳು.
ಬಹುಶಃ ಇವನಿಗೆ ಮದುವೆಯೇ ಬೇಡದಿರಬಹುದು. ಮದುವೆಯೇ ಆಗಲ್ಲ ಅಂತ ಅಂದುಬಿಟ್ಟರೆ ಏನೆಂದುಕೊಂಡಾರು ಅಂತ ಒಪ್ಪಿಕೊಂಡು ಸುಮ್ಮನೆ ಹುಡುಗಿಯರನ್ನು ತಿರಸ್ಕರಿಸುವ ಆಟ ಶುರು ಮಾಡಿಕೊಂಡಿದ್ದಾನೆ ಅನ್ನುವ ಗುಮಾನಿಯೂ ಅವರಿಗೆ ಬಂದಿತ್ತು…
ಹೀಗೆಯೇ ತಿಂಗಳುಗಟ್ಟಲೆ ಕಳೆದು ಹೋದವು. ಅವನ ಅಮ್ಮ ಮದುವೆಯ ಆಸೆ ಬಿಟ್ಟಿದ್ದಳು.
ಒಂದು ಸಂಜೆ.. ವಾಟ್ಸಪ್ನಲ್ಲಿ ಹುಡುಗಿಯರ ಬಯೋಡೇಟಾ ನೋಡುತ್ತಾ ಕೂತಿದ್ದ ಅನೂಪ್ ‘ಅಮ್ಮಾ ನನಗೆ ಈ ಹುಡುಗಿ ಆಗಬಹುದು.. ಬ್ರೋಕರ್ ಗೆ ಹೇಳು. ನಾನು ಆ ಹುಡುಗಿ ಹತ್ರ ಮೊದಲು ಮಾತಾಡಬೇಕು’ ಅಂದು ಬಿಟ್ಟ.

ಅವರ ಅಮ್ಮನಿಗೆ ಅಚ್ಚರಿಯೂ ಗಾಬರಿಯೂ ಒಟ್ಟೊಟ್ಟಿಗೆ ಆಯಿತು. ಇದೇನು ಕನಸೊ ನನಸೊ ಒಂದೂ ತಿಳಿಯಲಿಲ್ಲ ಅವರಿಗೆ. ಗಬಕ್ಕನೆ ಮೊಬೈಲ್ ಕಿತ್ತುಕೊಂಡು ಆ ಹುಡುಗಿ ಪೋಟೊ ಮತ್ತು ಬಯೋಡೇಟಾ ನೋಡಿದಳು. ಹುಡುಗಿ ಪರವಾಗಿಲ್ಲ.. ಅವಳ ಬಯೋಡೇಟಾವೂ ಕೂಡ ತುಂಬಾ ಅದ್ಬುತವೇನು ಆಗಿಲ್ಲ ಅನಿಸಿತು ಅವರಿಗೆ. ಇದಕ್ಕಿಂತ ಹತ್ತು ಪಟ್ಟು ಚೆಂದ ಇರುವ ಹುಡುಗಿಯರನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದ. ಇವಳ ಬಗ್ಗೆ ಯಾಕೆ ಇವನಿಗೆ ಆಸಕ್ತಿ ಮೂಡಿತು? ಎಂಬ ಪ್ರಶ್ನೆಯೂ ಎದ್ದಿತು.. ಹೇಗೊ ಬಿಡು ಕೊನೆಗೂ ಒಪ್ಪಿದ್ನಲ್ಲ ಅನ್ನುವ ಖುಷಿಯೂ ಆಯಿತು..
‘ಖುಷಿಯಾಯ್ತು ಕಣೋ ಅನೂಪ್.. ನೀನು ಯಾರನ್ನೂ ಒಪ್ಪದೆ ಇಲ್ವೇನೊ ಅನ್ಕೊಂಡಿದ್ದೆ. ಕೊನೆಗೂ ಒಪ್ಪಿದ್ಯಲ್ಲ.. ಹೌದು.. ಯಾಕೆ ಈ ಹುಡುಗಿನೇ ಇಷ್ಟ ಆದ್ಲು..’ ಕುತೂಹಲ ತಡೆದುಕೊಳ್ಳಲಾಗದ ಕೇಳಿದಳು..
‘ನೋ ಅಮ್ಮ.. ಹಾಗೇನಿಲ್ಲ.. ಮೊದಲು ಅವರ ಹತ್ರ ಮಾತಾಡಬೇಕು.. ಅಮೇಲೆ ಏನು ಎಂತು ಅಂತ ಹೇಳ್ತೀನಿ. ಬ್ರೋಕರ್ ಗೆ ಕೇಳು ಅವಳನ್ನು ಮಾತಾಡಿಸಲು ಸಾಧ್ಯವಾ ಅಂತ? ಅಮೇಲೆ ಮುಂದಿನದ್ದು ಅಂದ..
ಅವನ ಅಮ್ಮ ಅಲ್ಲಿಯೇ ಬ್ರೋಕರ್ ಗೆ ಪೋನ್ ಮಾಡಿ ಮಗ ಓಕೆ ಮಾಡಿದ ಪ್ರೊಫೈಲ್ ಬಗ್ಗೆ ಹೇಳಿದಳು.. ಬ್ರೋಕರ್ ಗೆ ಕೂಡ ಅಚ್ಚರಿ ಆಗಿತ್ತು..
‘ಒಂದ್ನಿಮಿಷ.. ನಿಮ್ಮ ಮಗನಿಗೆ ಪೋನ್ ಕೊಡಿ..’ ಅಂದ ಬ್ರೋಕರ್..
ಅವರು ಅನೂಪ್ ಗೆ ಪೋನ್ ಕೊಟ್ಟಳು..
ಅನೂಪ್ ಬ್ರೋಕರ್ ಜೊತೆ ಮಾತಾಡುತ್ತಾ ಆಚೆ ಎದ್ದು ಹೋದ..
ಅತ್ತ ಕಡೆಯಿಂದ ಮಾತು..
‘ನಿಮಗೆ ಆ ಹುಡುಗಿ ಪ್ರೋಫೈಲ್ ಇಷ್ಟ ಆಯ್ತು ಅಂತ ಗೊತ್ತಾಯ್ತು.. ಇನ್ನೊಂದು ನಿಮಗೆ ಹೇಳಲೇಬೇಕಾದ ವಿಚಾರ ಎಂದರೆ ಆ ಹುಡುಗಿ ಕೂಡ ಈ ಮೊದಲು ನಿಮ್ಮಷ್ಟೆ ಪ್ರೊಫೈಲ್ಗಳನ್ನು ರಿಜೆಕ್ಟ್ ಮಾಡಿದ್ಲು.. ಈಗ ನಿಮ್ಮ ಪ್ರೊಫೈಲ್ ಗೆ ಓಕೆ ಮಾಡಿದ್ದಾಳೆ.. ಇಷ್ಟು ದಿನ ನೀವೂ ಕೂಡ ಎಷ್ಟೊಂದು ಹುಡುಗಿಯರನ್ನು ನೋಡಿ ಬೇಡ ಅಂದು ಈಗ ಈ ಹುಡುಗಿ ಬಯೋಡೇಟಾ ನೋಡಿ ಇಷ್ಟಪಟ್ಟಿದ್ದೀರಿ.. ನನಗೆ ಬಹಳ ಸೋಜಿಗ ಎನಿಸಿತಿದೆ..” ಎಂದರು.
ಅನೂಪ್ ಇದೆಲ್ಲಾ ಬ್ರೋಕರ್ ಗಳ ವರಸೆ ಇರಬಹುದು ಎಂದುಕೊಂಡ. ಆದರೂ ತನ್ನ ಪ್ರೊಫೈಲ್ ಬಗ್ಗೆ ಕುತೂಹಲ ವ್ಯಕ್ತಿಪಡಿಸಿದ ಅವಳ ಬಗ್ಗೆ ಖುಷಿಯಾಯಿತು..
“ನಾನು ಅವರ ಬಳಿ ಮಾತಾಡಬಹುದಾ? ನಂಬರ್ ಸಿಗುತ್ತಾ?”
“ಓಹ್ ಖಂಡಿತ.. ಅವರೂ ಕೂಡ ನಿಮ್ಮ ನಂಬರ್ ಕೇಳಿದ್ದಾರೆ.. ಅವರಿಗೆ ಈಗಾಗಲೇ ನಿಮ್ಮ ನಂಬರ್ ಕೊಟ್ಟಿದ್ದೀನಿ.. ನಿಮಗೆ ಅವರ ನಂಬರ್ ವಾಟ್ಸಪ್ ಮಾಡ್ತೀನಿ.. ನೀವು ಮಾತಾಡಿ, ನಂತರ ನನಗೆ ತಿಳಿಸಿ.. ಒಳ್ಳೆಯದಾಗಲಿ” ಎಂದು ಹೇಳಿ ಪೋನಿಟ್ಟರು.
ಅದಿತಿ ಅನ್ನುವ ಹೆಸರಿಗೆ ಡಯಲ್ ಮಾಡಿ ಕಿವಿಗಿಟ್ಟುಕೊಂಡ.. ಮೂರೆ ರಿಂಗಿಗೆ ಪೋನ್ ರಿಸಿವ್ ಆಯ್ತು..
“ಇಸ್ ದಿಸ್ ಅನೂಪ್.. ನಾನು ಅದಿತಿ. ಈಗಷ್ಟೇ ನಿಮಗೆ ಒಂದು ಮೆಸೇಜ್ ವಾಟ್ಸಪ್ ಮಾಡಿದೆ. ಬಹುಶಃ ನೀವು ಕಾಲ್ ಮಾಡುವುದಕ್ಕೂ ನನ್ನ ಮೆಸೇಜ್ ನಿಮ್ಮ ಇನ್ಬಾಕ್ಷ್ ತಲುಪುವುದಕ್ಕೂ ಸರಿ ಹೋಗಿರಬಹುದು” ಅತ್ತ ಕಡೆಯ ದನಿ
ಯೆಸ್ ನಾನು ಅನೂಪ್.. ಓಹ್ ನೋಡಿ ನಮ್ಮದು ಎಂತಹ ಟೈಮಿಂಗ್.. ಅಂದು ನಕ್ಕ
ನಿಮ್ ನಂಬರ್ ನನ್ನ ಬಳಿ ಸೇವ್ ಆಗಿತ್ತು.. ಬ್ರೋಕರ್ ಕೊಟ್ಟಿದ್ದ..
ಓಹ್ ದಟ್ಸ್ ಗುಡ್.. ಖುಷಿಯಾಯ್ತು..
ಥ್ಯಾಂಕ್ಸ್.. ಬಹುಶಃ ನಾನು ಕಳುಹಿಸಿದ ಮೆಸೇಜ್ ನೀವು ಓದಿಲ್ಲ ಅನಿಸುತ್ತೆ..
ಇಲ್ಲ ಇನ್ನೂ ನೋಡಿಲ್ಲ.. ನಂತರ ನೋಡ್ತೀನಿ, ಮಾತಾಡಿ..
ನೀವೇ ಹೇಳಿ.. ಏನೊ ಹೇಳುವ ಕಾತರದಲ್ಲಿದ್ದೀರಿ
ನಿಮ್ಮ ಪ್ರೊಫೈಲ್ ನನಗೆ ಇಷ್ಟ ಆಯಿತು.. ನೀವು ಕಾರಣ ಕೇಳಿದರೆ ಬಹುಶಃ ನಗುತ್ತೀರಿ..
ಓಹ್ ಹೌದಾ.. ಪರವಾಗಿಲ್ಲ ಹೇಳಿ..
ನಾನು ತುಂಬಾ ಹುಡುಗಿಯರನ್ನು ನೋಡಿದೆ.. ಇವರೇ ಬೇಕು ಅಂತ ಯಾರನ್ನು ನೋಡಿದರೂ ಅನಿಸಲಿಲ್ಲ..
ಓಹೋ.. ಅಮೇಲೆ..
ನಿಮ್ಮ ಪ್ರೊಫೈಲ್ ವಾಟ್ಸಪ್ಗೆ ಬಂದಾಗ.. ಅಲ್ಲಿ ಬ್ರೋಕರ್ ಕಳುಹಿಸಿದ ಮೆಸೇಜಿನ ಮೇಲ್ ತುದಿಯಲ್ಲಿ ಪಾರ್ವಡ್ ಮೆನಿ ಟೈಮ್ಸ್ ಅಂತ ಇತ್ತು. ಅಂದರೆ ನಿಮ್ಮ ಪ್ರೊಫೈಲ್ ತುಂಬಾ ಕಡೆ ಹಂಚಿದೆ.. ಇಷ್ಟೆ! ನನಗೆ ನೀವು ಇಷ್ಟ ಆದ್ರಿ
ಅತ್ತ ಕಡೆಯಿಂದ ಅವಳು ಜೋರಾಗಿ ನಕ್ಕ ಸದ್ದು
ಯಾಕೆ ನಗ್ತಾ ಇದೀರಿ.. ಎನಿ ಥಿಂಗ್ ರಾಂಗ್?
ನೋ ನೋ ಹಾಗೇನಿಲ್ಲ.. ಯಾವಾಗ ಆಗ್ತೀರಿ ಮದುವೆ ತುಸು ನಕ್ಕು ಕೇಳಿದಳು..
ಆಕ್ಚುಲಿ ನಾನು ನಿಮ್ಮ ಒಪ್ಪಿಗೆಗಾಗಿ ಕರೆ ಮಾಡಿದ್ದು..
ಓಹ್ ಹೌದಾ.. ವಾಟ್ಸಪ್ನಲ್ಲಿ ನೀವಿನ್ನೂ ಓದಿರದ ನನ್ನ ಮೆಸೇಜ್ ಇದೆಯಲ್ಲಾ ಅದನ್ನು ಓದಿ.. ಅಲ್ಲಿ ನನ್ನ ನಿರ್ಧಾರ ಇದೆ.. ನಿಮಗೆ ಓಕೆ ಅನಿಸಿದರೆ ಮತ್ತೆ ಕರೆ ಮಾಡಿ.. ಆಯ್ತಾ?
ಓಹ್ ಸರಿ ಸರಿ.. ನೋಡಿ ನಂತರ ಕರೆ ಮಾಡ್ತೀನಿ.. ಎಂದು ಕರೆ ಕಟ್ ಮಾಡಿದ..
ವಾಟ್ಸಪ್ ತೆಗೆದು ಅವಳ ಮೆಸೇಜ್ ಓದತೊಡಗಿದ..
ಅನೂಪ್ ಅವರೆ.. ನಿಮ್ಮ ಪ್ರೊಫೈಲ್ ನನ್ನ ಇನ್ಬಾಕ್ಷಿಗೆ ಬಂದಾಗ ಅದು ಪಾರ್ವಡ್ ಮೆನಿ ಟೈಮ್ಸ್ ಮೆಸೇಜ್ ಆಗಿತ್ತು. ಈ ಪ್ರೋಫೈಲ್ ಹಲವು ಮನೆಯ ಬಾಗಿಲು ತಟ್ಟಿದೆ ಅಂತ ಗೊತ್ತಾಯ್ತು.. ಅಷ್ಟೆ! ನೀವು ಇಷ್ಟ ಆದ್ರಿ.. ನಿಮ್ಮ ಉತ್ತರ ತಿಳಿಸಿ..
ಮೆಸೇಜ್ ಓದಿದ ಅವನ ಮುಖದಲ್ಲಿ ಹೊಳಪು. ಖುಷಿಯಿಂದ ಅವಳಿಗೆ ಕರೆ ಮಾಡಲು ಪೋನ್ ಎತ್ತಿಕೊಂಡ.
ಅತ್ತ ರಿಂಗಾಗತೊಡಗಿತು..
| ಇನ್ನು ಮುಂದಿನ ವಾರಕ್ಕೆ |






0 Comments